ದೀಪಾ ಗೋನಾಳರ ಕವನ ಸಂಕಲನ ‘ನಿನ್ನ ನೆನಪ ಕುಡಿದವಳು’
‘ಹರಿವು ಬುಕ್ಸ್’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ.
-ರಾಜಕುಮಾರ ಮಡಿವಾಳರ
ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ “ನಿನ್ನ ನೆನಪ ಕುಡಿದವಳು” ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ ಹೊದಿಸಬೇಕಾದಂತಹ ಅಪೂರ್ವ ಚಳಿ. ಹಾಗಾಗಿ ಈ “ಕುಡಿತ”.. ಸಕಾಲಿಕ!
ದೀಪಳ ಸ್ನೇಹ, ಅವರ ಮೊದಲ ಸಂಕಲನ “ತಂತಿ ತಂತಿಗೆ ತಾಗಿ” ತಂತು ತಾಗಿಸಿಕೊಂಡ , ಅವರ ಹಲವಾರು ಅಪ್ರಕಟಿತ ಕವಿತೆ ಕೂಡ ಆಗಾಗ ಸವಿದ ನನಗೆ, ಈ ನೆನಪು ಕುಡಿದವಳು ಆಶ್ಚರ್ಯವೇನು ತಂದಿಲ್ಲ, ಬದಲಿಗೆ ಅವರ ಕವಿತೆಗಳು ಒಟ್ಟಾಗಿ, ಹೀಗೆ ಬಟ್ಟಲಲ್ಲಿ ಸಿಕ್ಕ ಸಂಭ್ರಮ ನನ್ನದು.

ಬಿರಿದ ಹೆಂಟೆಯ ಮೇಲೆ
ಸಣ್ಣಗೆ ಸುರಿದ ಸೋನೆ ಮಳೆ
ತುಂಬೆಲ್ಲ ಮಣ್ಣ ಹೂ ಬೀರಿದ ಪರಿಮಳ.
ಹೀಗೆ ಹೊಮ್ಮುವ ಗಂಧ…
ಸರಸ ಮುಗಿಸಿದಾಗ
ವಿರಮಿಸುವಳು ತೋಳಲ್ಲಿ
ತಲೆಯಿಟ್ಟು,
ನನ್ನ ಹಲ್ಲಿನ ಗುರುತಿದೆ
ಎಡತೋಳ ಮಡಚಿಬಿಡು.
ಏನಾಕೇನಾ ಪ್ರಕರಣೇನ ಅನುಭವಿಸಿದ ಅನನುಭವದ ಕಂತನ್ನು, ಪದ್ಯವಾಗಿಸಿ, ಎದೆಯಿಂದ ಎದೆಯ ಮೂಲಕ ಅವಡುಗಚ್ಚು, ತೋಳು ಕಚ್ಚಿ! ದಾಟಿಸುವ ಈ ಬಿಡಿಬೀಸು ಅಕ್ಷರ ಹರವಿ ಕೂರುವುದಿದೆಯಲ್ಲ, ಅದು ದೀಪಳ ಒಳಗವಿಯ ತಾಕತ್ತು, ತೇಜಸ್ಸು, ಪ್ರಖರತೆ, ಪ್ರಾವಿಣ್ಯತೆ, ತೀವ್ರತೆ, ತುಂದಿಲತೆಯೂ…
ರಾತ್ರಿ ಹೊತ್ತು
ಎಚ್ಚರಿರಬೇಕು ಗೊತ್ತು
ಮತ್ತು ಮುತ್ತು-
-ನೀ ಕೇಳುತ್ತಿರಬೇಕು
ನಾನು ದೂಡುತ್ತಿರಬೇಕು.
ಕಣ್ಣಿಗೂ, ಕನಸಿಗೂ, ಪ್ರಾಯಶಃ ಇದಕ್ಕಿಂತ ಚೆಂದ, ಸೊಗಸಾದ, ಸಡಗರದ ಕೂಡಿಕೆ ( ಕ್ಷಮಿಸಿ ಮಿಲನ) ಇನ್ನೊಂದಿರಲಿಕ್ಕಿಲ್ಲ, ಈ ಹಿಡಿ, ತಗೋ ಅನ್ನುವುದಿದೆಯಲ್ಲ ಇಟ್ ಸೆಲ್ಫ್ ಇಟ್ಸ್ ಎಂಡ್, ನಿಜವಾದ ಶುರುವಾತಿರುವುದೇ ದೂಡುವುದರಲ್ಲಿ! she need it ಅನ್ನು she did it ಎಂದು ತೆಳುಗಾಳಿಗೆ ಮೈದೂಗುವ ತಂಬೆಲರ ಲಯದಲ್ಲಿ ಹಿತವಾಗಿ, ಕರೆಕ್ಟು ತೆಕ್ಕೆಗೆ ಸಿಗುವ ಹಾಗೆ ದೂಡು ಬಿಡುತ್ತಾರೆ ಈ ಕವಿ.
ಅವಳಿಗೆ ನಿದ್ದೆ
ಸಣ್ಣಗೆ ಸುಳಿತಿದ್ದ ಹಾಗೆ
ಮೆಲ್ಲಗೆ ಸುಳಿವೇ
ನೀಡದೆ
ಫೋನಿನಲ್ಲಿ
ಏನೋ…
ಅವಳು ಮಲಗಿದರೆ
ಅರ್ಧ ಜಗತ್ತು
ಮಲಗಿದಂತೆ ಅವನಿಗೆ.
ನಿನ್ನೆ ರಾತ್ರಿ, ಹೀಗೆ ಅರ್ಧ ಜಗತ್ತು ಮಲಗಿದ್ದಾಗಲೇ ಕಾಡಿದ, ದೀಪ ಅವರ ಕುಡಿದ ನೆನಪುಗಳ ಕಲರವ.
ಅದದನೇ ಬಯಸಿಯೂ, ಅದದನೇ ಆಡದ, ಹಾಡದ, ಅದದನೇ ಬೇಡದ, ಬಯಕೆ ಬಸಿರಲ್ಲೇ ಕತ್ತು ಹಿಸುಕಿ, ಅಬಾರ್ಶನ್ ಒಳಗಾಗುವ ಮಡಿವಂತ ಮನಸುಖರಾಯರ ನಡುವೆ, ಅತ್ಯಂತ ಸ್ವಾಭಾವಿಕವಾದುದನ್ನ, ಅದೇ ಉತ್ಕಟತೆಯಲ್ಲಿ ಜೈವಿಕತೆಗೆ ಭಾವಕ್ಕಿಂತ ಇಟ್ಸ್ ಕಾಮನ್ ಅನ್ನುವ ನೈಜತೆ ತುಂಬಿ, ಕವಿತೆಗಳ ದೋಣಿಯಲಿ ತೇಲಿ ಬರುವ, ಈ ನೆನಪುಗಳು ಎಲ್ಲರ ಕುಡಿತಕ್ಕೂ ಸಿಗಲಿ, ಲೆಟ್ಸ್ ಹ್ಯಾವ್ ಅ ಡ್ರಿಂಕ್, ಚೀಯರ್ಸ್…
ಶುಭಾಶಯ ಮೇಡಮ್, ಎಂದೂ ಖಾಲಿಯಾಗದ ಒಲವಿನ ಜಲಪಾತ, ಎಂದಿಗೂ ತಮ್ಮ ಬೊಗಸೆ ತುಂಬ ಸುರಿಯುತ್ತಿರಲಿ.






0 Comments