ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಾಡುತ್ತಿದ್ದವು ಕಣ್ಣುಗಳು…’ – ಶ್ರೀದೇವಿ ಕೆರೆಮನೆ

ಆ ಕಣ್ಣು

ಶ್ರೀದೇವಿ ಕೆರೆಮನೆ

ಅದೆಂತಹ ನೋಟ? ನನ್ನೊಳಗನ್ನೆಲ್ಲ ಒಮ್ಮೆಲೆ ಬಗೆದು ನೋಡಿದ ಹಾಗೆ…. ಏನೋ ಸಾವಿರ ಮಾತುಗಳು ಭಾವನೆಗಳು ಒಮ್ಮೆಲೆ ಮನದೊಳಗೆ ನುಗ್ಗಿ ಪ್ರವಾಹ ಸೃಷ್ಟಿಸಿದ ಹಾಗೆ…. ಹೇಳಬೇಕಾದುದನ್ನೆಲ್ಲ ಕಣ್ಣಂಚಿನ ಹರಿತ ನೋಟದಲ್ಲೇ ಬಿತ್ತರಿಸಿದ ಹಾಗೆ… ಹೇಳದೇ ಉಳಿದ ಸಾವಿರ ಮಾತುಗಳನ್ನು ಒಂದೇ ನೋಟದಲ್ಲಿ ಹೇಳಿದ ಹಾಗೆ…ಎಷ್ಟೋ ವರ್ಷಗಳಿಂದ ಬಾಕಿ ಇದ್ದ ಮಾತುಗಳೆಲ್ಲ ಮೌನದ ಚಿಪ್ಪೊಡೆದು ಮರಿಯಾದ ಹಾಗೆ…. ನಾನು ನಿಜಕ್ಕೂ ಬೆಚ್ಚಿ ಬಿದ್ದಿದ್ದೆ. ಅದೆಷ್ಟೋ ದಿನಗಳಾದರೂ ಆ ನೋಟ, ಆ ಕಣ್ಣು ನನ್ನ ಕಣ್ಣೆದುರು. ..
ನಿನಗೆ ಈ ಚಿಕ್ಕ ಗಾಡಿ ಆಗಲ್ಲ ಬಿಡು. ಪಲ್ಸರ್ ಕೊಡಸ್ತೀನಿ. 100 ಕಿ.ಮಿ. ಫಾಸ್ಟ ಹೊಡಿಬೇಕು ಆಯ್ತಾ? ನನ್ನವನು ದಿನಕ್ಕೆ ಕನಿಷ್ಟ ನಾಲ್ಕು ಸಲ ಹೇಳುವ ಮಾತಿದು. ನಾನೋ ಅದು ನನಗೆ ಹೇಳಿದ್ದಲ್ಲ ಎನ್ನುವಂತೆ ನನ್ನದೇ ವೇಗ ಕಾಪಾಡಿಕೊಂಡಿರುತ್ತೇನೆ. ಅಂತಹುದ್ದೇ ಒಂದು ವೇಗದ ದಿನದಲ್ಲಿಯೇ ಆ ಕಣ್ಣು ನನ್ನನ್ನು ದೃಷ್ಟಿಸಿದ್ದು. ಏನಿತ್ತು ಆ ಕಣ್ಣೊಳಗೆ? ಅದೆಂತಹ ಆದೃತೆಯಿತ್ತು? ಅದೆಂತಹ ಸೂಜಿಗಲ್ಲಿನ ಸೆಳೆತವಿತ್ತು…. ನಿಜ ಹೇಳಬೇಕೆಂದರೆ ಅಷ್ಟು ವೇಗದಲ್ಲಿ ನಾನು ಅಕ್ಕ ಪಕ್ಕ ಗಮನಿಸುವುದೇ ತುಂಬಾ ಕಡಿಮೆ. ಅಂತಹ ಸಮಯದಲ್ಲೂ ಆ ಕಣ್ಣು ನನ್ನ ಸೆಳೆಯಿತೆಂದರೆ…..

ಖಂಡಿತಾ ಅದ್ಯಾವುದೋ ಸುಂದರವಾದ ಹುಡುಗ ಅಂತೇನಾದ್ರೂ ನೀವು ತಪ್ಪು ತಿಳಿದುಕೊಂಡರೆ ಅದಕ್ಕೆ ನಾನು ಹೊಣೆಯಲ್ಲ…. ಹಾಗಂತ ಆ ಚೂಪು ಕಣ್ಣಿನ ಒಡತಿ ಸುಂದರವಾದ ಹುಡುಗಿಯೂ ಅಲ್ಲ. ಆದರೆ ಒಂದು ಕಾಲದಲ್ಲಿ ಸಾಕಷ್ಟು ಸುಂದರವೇ ಆಗಿದ್ದಿರಬಹುದಾದ ಒಂದು ನಡುವಯಸ್ಕ ಮಹಿಳೆಯದು….. ಕೂದಲು ಕೆದರಿ ಕೈಯ್ಯಲ್ಲೊಂದು ದೊಡ್ಡ ಗಂಟು ಹೊತ್ತುಕೊಂಡು ಅಲ್ಲೇ ರಸ್ತೆ ಪಕ್ಕದ ಮರದ ಕೆಳಗೋ, ಸಮೀಪದ ಹೊಟೇಲ್ನ ಹತ್ತಿರವೋ ಕುಳಿತುಕೊಳ್ಳುತ್ತಿದ್ದ ಮಹಿಳೆ ಆಕೆ. ಒಂದಿಷ್ಟು ಮಾನಸಿಕ ಅಸ್ವಸ್ಥತೆ ಇದ್ದಿರಬಹುದು. ತನ್ನಷ್ಟಕ್ಕೇ ತಾನು ನಗುತ್ತ, ಗೊಣಗುಟ್ಟುತ್ತ ಇರುವ ಆಕೆಯ ಮಾತನ್ನು ಕೆಲವೊಮ್ಮೆ ಕೇಳಿದ್ದೇನೆ. ಆಗಾಗ ಕೊಂಕಣಿಯಲ್ಲಿ ಏನನ್ನೋ ಹೇಳುತ್ತ ಒಮ್ಮೆಲೆ ಬೋರೆಂದು ಅಳುವ ಆಕೆಯ ಮನದೊಳಗೆ ಅದೇನು ದುಗುಡವಿದೆಯೋ? ಅಲ್ಲೇ ಎಲ್ಲೋ ಅಕ್ಕ ಪಕ್ಕದ ಹಳ್ಳಿಯ ಹೆಂಗಸಿರಬಹುದೇ? ಮನೆ ಬಿಟ್ಟು ಬೀದಿಯಲ್ಲಿ ಬಂದಿರಬೇಕಾದ ಆಕೆಯ ಅನಿವಾರ್ಯತೆಯಾದರೂ ಏನು? ಅದು ಹೋಗಲಿ, ಆಕೆಯ ಮನೆಯವರಾದರೂ ಆಕೆಯನ್ನು ಅದು ಹೇಗೆ ಬೀದಿಯಲ್ಲಿರಲು ಒಪ್ಪಿದರು? ನಾನು ಯಾವತ್ತೂ ಯೋಚಿಸುತ್ತಲೇ ಇರುವ ಆ ಪ್ರಶ್ನೆ ಅಂದು ತೀವೃವಾಗಿ ಕಾಡತೊಡಗಿತು. ಮನೆಯೊಳಗೆ ಕುಳಿತಿದ್ದೂ, ಎಲ್ಲಾ ಆಧುನಿಕ ಸೌಲಭ್ಯಗಳನ್ನು ಇಟ್ಟುಕೊಂಡಿದ್ದೂ ನಾವು ನಮ್ಮ ಸುರಕ್ಷಿತತೆಯ ಬಗ್ಗೆ ಇಲ್ಲದ ಆತಂಕ ಪಡುತ್ತಿರುವಾಗ ಸುರಕ್ಷಿತತೆಯ ಲವಲೇಶವೂ ಇಲ್ಲದೇ ಯಾವ ಅಂಜಿಕೆಯೂ ಇಲ್ಲದೇ ಬೀದಿ ಬದಿಯ ಮರದ ನೆರಳಲ್ಲೇ ವಾಸಿಸುವ ಆಕೆಯ ಸ್ಥಿತಿ ನಿಜಕ್ಕೂ ನಾಗರೀಕ ಸಮಾಜ,ಅತೀ ಸುಸಂಸ್ಕೃತ ಸಮಾಜ ಎಂದು ಹೆಮ್ಮೆ ಪಡುತ್ತಿರುವವರೆಲ್ಲರೂ ನಾಚಿಕೆ ಪಡಬೇಕಾದ ದುಸ್ಥಿತಿಯನ್ನು ಎದುರಿಗೆ ತಂದಿಟ್ಟಿದೆ.
ಯಾಕೋ ಆಕೆ ಎರಡು ದಿನಗಳಿಂದ ಕಾಣುತ್ತಿಲ್ಲ. ಹೆದ್ದಾರಿಯ ಅಗಲೀಕರಣದ ನೆಪದಲ್ಲಿ ರಸ್ತೆ ಪಕ್ಕದ ಮರಗಳ ಮಾರಣ ಹೋಮ ನಡೆಯುತ್ತಿದೆ. ಎಲ್ಲಾದರೂ ಆ ಮರದ ಕೆಳಗೆ ಸಿಕ್ಕಿ ಹಾಕಿಕೊಂಡು ಬಿಟ್ಟಳಾ? ಒಮ್ಮೆ ಗಾಡಿ ನಿಲ್ಲಿಸಿ ಫೋನ್ ಮಾಡುವ ನೆಪದಲ್ಲಿ ಇಳಿದು ಅಲ್ಲೆಲ್ಲ ಕಣ್ಣಾಡಿಸಿದೆ. ದೊಡ್ಡ ದೊಡ್ಡ ಕರೆಂಟಿನ ಗರಗಸದ ಕುಯ್ಯೋ ಮರ್ರೋ ಸದ್ದಿಗೆ ಮರಗಳೆಲ್ಲ ಬಿಕ್ಕಳಿಸಿ ಅಳುತ್ತಿರುವಂತೆನಿಸಿತು. ಆ ಗರಗಸದ ಹಾಗೂ ಜೆಸಿಬಿ ಸದ್ದಲ್ಲಿ ಒಂದು ವೇಳೆ ಆ ಮರದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರೂ ಆಕೆಯ ನರಳುವಿಕೆ ಕೇಳಿಸಲಾರದು ಎನ್ನಿಸಿ ಸುಮ್ಮನೆ ಗಾಡಿ ಹತ್ತಿದೆ.
ಅರೆ….!!!! ಇಂದು ಆಕೆ ಅಲ್ಲೇ ಕುಳಿತಿದ್ದಾಳೆ. ಯಾವುದೋ ದಾರಿಬದಿಯ ಫಲಕದ ಕೆಳಗೆ. ಹೆದ್ದಾರಿಯಗುಂಟ ಉರುಳಿ ಬಿದ್ದ ಮರಗಳು ಮತ್ತು ಹೆಣ್ಣು ಇಬ್ಬರಿಗೂ ಒಂದೆ ಮೂಲವೇನೋ ಎನ್ನಿಸಿ ಒಲಗೊಳಗೇ ನಡುಕ ಪ್ರಾರಂಭವಾಗಿದೆ. ಆಕೆಯ ಕಡೆ ನೋಡಿದರೆ ಮತ್ತೆ ಆಕೆಯ ಕಣ್ಣೊಳಗೆ ಇಣುಕಬೇಕಾದೀತೇನೋ… ಇಣುಕಿದರೆ ಮತ್ತೆಲ್ಲಿ ಆ ಕಣ್ಣು ಹೇಳುವ ಸಾವಿರ ಕಥೆಯ ಸುಳಿಯೊಳಗೆ ಹೂತು ಹೋಗಬೇಕಾದೀತೋ ಅನ್ನಿಸ ತೊಡಗಿದೆ. ಆಕೆಯನ್ನು ಇರುವ ಮನೆಯಿಂದ ಹೊರದೂಡಿದ ಪಾಪಿಗಳಾರೆಂದೂ ಗುರುತಿಸಲಾಗದ ನನಗೆ; ಆಶ್ರಯ ಕೊಟ್ಟ ಮರವನ್ನು ಕತ್ತರಿ ಬಿಸಾಕಿದವರ ಬಗ್ಗೆ ಕೇಳಿದರೆ ಏನೆಂದು ಉತ್ತರಿಸಲಿ? ಆಕೆಗಲ್ಲ… ನನ್ನದೇ ಮನಸಾಕ್ಷಿಗಾದರೂ ಒಂದು ಉತ್ತರ ಬೇಕಲ್ಲ? ನಾನು ಅತ್ತ ನೋಡುವುದಕ್ಕೂ ಮುಜುಗರವೆನಿಸಿ ನನ್ನ ಗಾಡಿಯ ವೇಗ ಹೆಚ್ಚಿಸಿದ್ದೇನೆ.
 

‍ಲೇಖಕರು G

18 March, 2015

1 Comment

  1. shridhar

    ಈಗ ಅವಳು ಹೆದ್ದಾರಿಯನ್ನು ಬಿಟ್ಟು ಊರೊಳಗಿದ್ದಾಳೆ.ಯಾರ ಮನೆಯನ್ನೂ ಸೇರಿಲ್ಲ.ಅಲ್ಲಲ್ಲಿ ಇರುವ ಮರಗಳ ನೆರಳಿನಡಿಯಲ್ಲಿ ಉರುಳಿಕೊಂಡಿರುತ್ತಾಳೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading