ನರೇಂದ್ರ ರೈ ದೇರ್ಲ
ಪರವ ಪಂಬದ ನಲಿಕೆಯವರನ್ನು ಬಿಟ್ಟರೆ ಬೇರೆ ಯಾರೂ ಭೂತ -ದೈವಕ್ಕೆ ಕಟ್ಟುವ ಹಾಗಿಲ್ಲ. ನೀನು ಮಾಡಿದ ತಪ್ಪಿಗೆ ಖಂಡಿತಾ ಶಿಕ್ಷೆ ಆಗಿಯೇ ಆಗುತ್ತೆ. ಹೀಗೆ ನನಗೆ ನಾಲ್ಕು ಬಡಿದು ಬುದ್ಧಿ ಹೇಳಿದ ನನ್ನಮ್ಮನ ಮಾತು ಮೊನ್ನೆ ಮೊನ್ನೆಯವರೆಗೆ ನನ್ನೊಳಗಡೆಯೇ ಹುದುಗಿತ್ತು. ಮೊನ್ನೆ ಕಾಂತಾರ’ದಲ್ಲಿ ರಿಷಬ್ ಶೆಟ್ಟಿ ಕಟ್ಟಿದ ದೈವವನ್ನು ನೋಡಿ ಬಾಲ್ಯದ ನನ್ನ ಆ ಭೂತ ನೆನಪಿಗೆ ಬಂತು. ಆ ಪ್ರಸಂಗ ನನ್ನ’ ಹಳ್ಳಿಯ ಆತ್ಮಕಥೆ’ ಕೃತಿಯಲ್ಲಿ ದಾಖಲಾಗಿದೆ. ಸುಮ್ಮಗೆ ನಿಮ್ಮ ಗಮನಕ್ಕೆ…..
ನನ್ನ ತೀರಿಹೋದ ದೊಡ್ಡಣ್ಣ ಬಾಲಕೃಷ್ಣನಿಗೆ ಓದುವ, ಬರೆಯುವ ಆಸಕ್ತಿ ತುಂಬಾ ಇತ್ತು. ಅವನು ಆವಾಗಲೇ ತುಷಾರ, ಮಯೂರಗಳನ್ನು ಮನೆಗೆ ತರುತ್ತಿದ್ದ. ಓದಿನಲ್ಲೂ ಚುರುಕು. ಕವನ ಬರೆಯುತ್ತಿದ್ದ. ಅವನು ಮಾರಣಾತಿಕ ಕಾಯಿಲೆಗೆ ಬಿದ್ದು ಮನೆಯಲ್ಲೇ ಒಂದೆರಡು ತಿಂಗಳು ಮಲಗುವ ಪರಿಸ್ಥಿತಿ ಬಂತು. ತೀವ್ರ ಬಡತನದ ಆ ದಿನಮಾನದಲ್ಲಿ ಅವನಿಗೆ ಮಂಗಳೂರಿನ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಯಾವ ಶಕ್ತಿಯೂ ಅಪ್ಪ-ಅಮ್ಮನಿಗೆ ಆಗ ಇರಲಿಲ್ಲ. ಪುತ್ತೂರಿನ ಡಾಕ್ಟರ್, ಬೋನಂತಾಯಿ ಆಸ್ಪತ್ರೆಯಿಂದ “ಈಗ ಮನೆಗೆ ಒಯ್ದಿರಿ, ಎರಡು ದಿನಕ್ಕೊಮ್ಮೆ ಬಂದು ಇಂಜಕ್ಷನ್ ಕೊಡಿಸಿ” ಎಂದಿದ್ದರಂತೆ. ವಾರಕ್ಕೆ ಮೂರು ಬಾರಿ ಪುತ್ತೂರಿಗೆ ಒಯ್ಯುವನ್ನು ಆರ್ಥಿಕ ಶಕ್ತಿಯಾಗಲಿ, ರಸ್ತೆ-ವಾಹನಗಳ ಸೌಕರ್ಯವಾಗಲೀ ಆಗ ಇರಲಿಲ್ಲ. ಅದಕ್ಕಾಗಿ ನಮ್ಮನೆಯಿಂದ ಮೂರು ಮೈಲು ದೂರದ ಅಪ್ಪಯ್ಯ ಪೈ ಡಾಕ್ಟ್ರು ಎರಡು ದಿನಕ್ಕೊಮ್ಮೆ ಮನೆಗೆ ನಡೆದೇ ಬಂದು ಇಂಜಕ್ಷನ್ ಕೊಡಲು ಒಪ್ಪಿಕೊಂಡು ತಿಂಗಳಿಡೀ ಆ ಕೆಲಸವನ್ನು ನಿಷ್ಠೆಯಿಂದಲೇ ಮಾಡುತ್ತಿದ್ದರು.

ಒಂದು ಬಾರಿ ಸಂಜೆ ಹೊತ್ತು ಅವರು ಆಚಾರಿಮೂಲೆಯಿಂದ ಅಜ್ಜಿಕಲ್ಲು ಗುಡ್ಡ ಹತ್ತಿ ಕಣಿವೆ ಇಳಿದು ಕಾಡುದಾರಿ ಬಳಸಿ ಅಂಗಳಕ್ಕೆ ಬರುವಾಗ ನಮ್ಮನೆಯಲ್ಲಿ ಭೂತ ಕುಣಿಯುತ್ತಿತ್ತು. ಅಂಗಳದ ಕೆಳಗಡೆ ತೋಟದ ಹತ್ತಿರದ ಹಲಸಿನ ಮರದಡಿಯಲ್ಲಿ ಆ ನೇಮ. ಸೀದಾ ಬಂದ ಡಾಕ್ಟರ್, “ನೀವು ಹೋಗಿ ಹೋಗಿ ಭೂತದ ನೇಮದ ದಿನವೇ ನನ್ನನ್ನು ಬರಹೇಳಿದ್ದು ಯಾಕೆ? ಮಲಗಿದ ಬಾಲಕೃಷ್ಣ ಹುಷಾರಾಗುತ್ತಾನೆ. ಈ ನೇಮ ಹರಕೆಯಾ?” ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಮ್ಮ ಕಕ್ಕಾಬಿಕ್ಕಿ. ಪೈ ಡಾಕ್ಟರ್ ನೇಮದ ಮನೆಯಲ್ಲಿ ಹೆಚ್ಚು ಹೊತ್ತು ನಿಲ್ಲುವುದು ಬೇಡ ಎಂದೇ ಬೇಗ ಬೇಗ ಇಂಜಕ್ಷನ್ ಕೊಟ್ಟು ಹೋದ್ರು,
ಅಮ್ಮ ಹಲಸಿನ ಮರದಡಿಗೆ ಹೇಗೆ ಬಂದರೋ ಗೊತ್ತಿಲ್ಲ. ನನ್ನ ಬೆನ್ನಿಗೆ ಸಾಕ್ಷಾತ್ ಊರಿನ ಧರ್ಮದೈವಕ್ಕೆ ತಾರಾಮಾರ ಪೆಟ್ಟು ಬಿತ್ತು.ನಾನು ಅಡಿಕೆ ಹಾಳೆಯ ಮೊಗ ತೊಟ್ಟಿದ್ದೆ. ತೆಂಗಿನಗರಿಯ ಒಲಿಯನ್ನು ಸಿಗುರಿ ಸಿರಿ ಮಾಡಿ ಸುತ್ತಿಕೊಂಡಿದ್ದೆ. ಧರ್ಮದೈವ ಎಂದ್ರೆ ಗೊತ್ತಲ್ಲ. ಊರಿನ ಬಹುದೊಡ್ಡ ದೈವ ಅದು.ಭೂತದ ಪೂಜಾರಿಯಾಗಿ ನನ್ನೆದುರು ನಿಂತಿದ್ದ ಶಾಂತಣ್ಣ ರಣಚಂಡಿಯಾಗಿದ್ದ ಅಮ್ಮನನ್ನು ನೋಡಿ ಕಾಲು ಕಿತ್ತಿದ್ದ. ನನಗೆ ಅವನೇ ಕಟ್ಟಿದ ಮೊಗ, ಕಣ್ಣಭಾಗದ ಚಿಕ್ಕ ತೂತಿನಲ್ಲಿ ಸ್ವಲ್ಪವೇ ಕಾಣಿಸುತ್ತಿತ್ತು. ಸ್ವರ ಬೈಗಳ ಮತ್ತು ಪೆಟ್ಟಿನ ವೇಗದಲ್ಲಿ ಬಡಿಯುತ್ತಿರುವವರು ಅಮ್ಮನೇ ಎಂದು ಖಾತ್ರಿ ಆಗಿತ್ತು. ಗಟ್ಟಿಯಾಗಿ ಕಟ್ಟಿದ ಕಾರಣಕ್ಕೆ ಆ ಕ್ಷಣಕ್ಕೆ ಮೊಗವನ್ನು ಕಿತ್ತು ಎಸೆಯಲು ಸಾಧ್ಯವಾಗಲೇ ಇಲ್ಲ. ಓಡಿ ತಪ್ಪಿಸಿಕೊಳ್ಳಲು ದಿಕ್ಕು ಕಾಣಿಸಲಿಲ್ಲ. ಹಲಸಿನ ಮರಕ್ಕೆ ಹತ್ತಲು ಪ್ರಯತ್ನಪಟ್ಟೆ .ಮರ ಹತ್ತುತ್ತಿದ್ದ ಧರ್ಮದೈವದ ಬೆನ್ನಿಗೆ ಮತ್ತೆ ಮತ್ತೆ ಬಿತ್ತು. ಅಲ್ಲಿಂದ ತಪ್ಪಿಸಿಕೊಂಡು ತೋಟದ ನಡುವೆ ಓಡಿದೆ. ಹಾಳೆಯ ಮೊಗ ಓಡುವ ರಭಸಕ್ಕೆ ಓರೆಯಾಗಿ ದಾರಿ ಸರಿಯಾಗಿ ಗೋಚರಿಸಿತು. ಹಾಗೆ ಓಡಿದ ಧರ್ಮದೈವ ನಿಂತದ್ದು ಇಳಂತಾಜೆಯ ದೊಡ್ಡ ಗೇರುಮರದಡಿಯಲ್ಲಿ .ಕಟ್ಟಿದ ಸಿರಿಯನ್ನು ಬಿಚ್ಚಿ ತಲೆಗೆ ಕಟ್ಟಿದ ಹಾಳೆಯ ಆಭರಣಗಳನ್ನೆಲ್ಲಾ ಬಿಚ್ಚಿ ನೆಲಕ್ಕೆ ತಾಗಿದ ಗೆಲ್ಲಲ್ಲಿ ಕೂತು ಜೀಕತೊಡಗಿದೆ. “ಹೇಗಾಯಿತು ಭೂತ?” ಶಾಂತಣ್ಣ ಮರದ ಮೇಲಿಂದ ನಗುತ್ತಿದ್ದ…
ದೇರ್ಲದ ತರವಾಡು ಕೂಡು ಮಹಾಮನೆಯಲ್ಲಿ ಆಗ ಮೂರು ದಿನದ ವಾರ್ಷಿಕ ಭೂತಾರಾಧನೆ ನಡೆಯುತ್ತಿತ್ತು. ಅದರಲ್ಲಿ ಮೂರು ದಿನವೂ ಸಕ್ರಿಯವಾಗಿ ಭಾಗವಹಿಸಿ ಕುಟಂಬದ ನೆಲೆಯಲ್ಲಿ ಸಂಭ್ರಮಿಸುತ್ತಿದ್ದವರು ನಾವು. ಅಲ್ಲಿ ನೇಮ ಮುಗಿದ ಮರುದಿವಸ ನಮ್ಮ ಮನೆಯಲ್ಲಿ ಅದೇ ದೈವಗಳಿಗೆ ನಾವೇ ಕಟ್ಟುತ್ತಿದ್ದೆವು. ಎಲ್ಲಾ ಭೂತಗಳನ್ನು ಶಾಂತಣ್ಣನೇ ಕಟ್ಟದೆ ಕೆಲವೊಂದನ್ನು ನಾನೂ ಕಟ್ಟುತ್ತಿದ್ದೆ. ಇಲ್ಲಿ ವಾದ್ಯದವರು, ದೈವ ಕಟ್ಟುವವರು, ಪೂಜಾರಿ, ಮಡಿವಾಳ, ಸಂದೀ ಪಾರಿ ಹೇಳುವವರು, ಭಕ್ತರು,ಊರವರು – ಎಲ್ಲರೂ ನಾವೇ. ಒಂದು ರೀತಿ ಏಕಪಾತ್ರಾಭಿನಯ, ನಮ್ಮ ಪುಣ್ಯಕ್ಕೆ ದೈವ ಮೈಮೇಲೆ ಬಂದು ಆವೇಶ-ದರ್ಶನ ಬರುತ್ತಿರಲಿಲ್ಲ.






0 Comments