ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಾಂತಾರ’ವೆಂಬ ಮಿಸಳ ಬಾಜಿ…

ಕೆ ಪಿ ಸುರೇಶ್

ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾದ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ.

ಪ್ರೇಕ್ಷಕನೊಬ್ಬ ಹಂಬಲಿಸುವ ಭಾವ ಮತ್ತು ಆಂಗಿಕ ಸಾಧ್ಯತೆಗಳನ್ನು ರಂಗಭೂಮಿ ಮುಂದಿಡುತ್ತಾ ಹೋದರೆ, ಸಿನೆಮಾಕ್ಕೆ ಟೇಕ್ ಗಳ ಮತ್ತು ಎಡಿಟಿಂಗ್ ನ ಲಾಭವಿದೆ ಎಂಬುದನ್ನು ನಾವು ಮರೆಯಬಾರದು. ಸಿಸಿಲ್ ಡಿಮೆಲೋನಿಂದ ಈ ಮಾದ್ಯಮದ ಶಕ್ತಿ ನಮಗೆ ಅರಿವಿಗೆ ಬಂದಿದೆ. ಇರಲಿ.

ಈಗ ಈ ಕಾಂತಾರ ಸಿನೆಮಾ ದ ಬಗ್ಗೆ ಈ ಸಿನೆಮಾದಲ್ಲಿ ಗರುಡ ಗಮನ.. ಪುಶ್ಪಾ, ಪುಲಿ ಮುರುಗನ್ ಸಿನೆಮಾಗಳ ಅಂಶಗಳೆಲ್ಲಾ ಬರೆತಿದೆ. ಅಷ್ಟೇ ಅಲ್ಲ, ನಮ್ಮ ಈ ಹಿಂದಿನಸಿನೆಮಾಗಳ ಅಷ್ಟಿಷ್ಟು ಅಂಶಗಳೂ ಢಾಳಾಗಿವೆ.
ಊರಿನ ಅನಾಮಿಕ ನೈತಿಕ ಲಂಗರು ಇಲ್ಲದ ಒಬ್ಬನನ್ನು ಹೀರೋ ಮಾಡುವ ಸಿನೆಮಾಗಳು ನಮ್ಮಲ್ಲಿ ಯಥೇಚ್ಛವಾಗಿವೆ. ಮದರ್ ಇಂಡಿಯಾದ ಹೀರೋನಿಂದ ದಿಲೀಪ್ ಕುಮಾರ್ ಅಮಿತಾಬ್ ಬಚ್ಚನ್ ವರೆಗೆ ಇದು ಕಾಲಕಾಲಕ್ಕೆ ಪುನರ್ಜನ್ಮ ಎತ್ತಿದೆ. ಹೊಸತೇನೂ ಇಲ್ಲ.ಇರುವುದು ಟ್ರೀಟ್ ಮೆಂಟಲ್ಲಿ ಮಾತ್ರಾ. ಅದಕ್ಕೇ ಮಾರ್ಕ್ ಟ್ವೈನ್ ಹೇಳಿದ್ದು. “ ಜಗತ್ತಿನಲ್ಲಿ ಒಟ್ಟು ನೂರಾ ಎಂಟು ಕತೆಗಳಷ್ಟೇ ಇರೋದು. “ ಅಂತ. ಅದನ್ನೇ ಮತ್ತೆ ಮತ್ತೆ ಬರೆಸಿ ಹೊಸೆಯೋದಷ್ಟೇ ಕತೆಗಾರರ ಪ್ರತಿಭೆ.

ಈ ಕಾಂತಾರ ನೋಡಿ-
ನಮ್ಮ ಯಾವ ಹಳ್ಳಿಯಲ್ಲೂ ನಯವಂಚಕ ವಿಲನ್ ಒಬ್ಬ ಸರಕಾರಿ ಅಧಿಕಾರಿ ಇರುವಾಗ ಬೆಟಾಲಿಯನ್ ನ ಕಟ್ಟಿಕೊಂಡು ಹಿಂಸೆಗಿಳಿಯುವುದಿಲ್ಲ. ಅಷ್ಟೇಕೆ, ನಮ್ಮ ಮರಗಳ್ಳರು ಸರಕಾರಿ ಅಧಿಕಾರಿ ಎದುರು ಸವಾಲಿನ ಮಾತೇ ಆಡುವುದಿಲ್ಲ.

ಇನ್ನೂ ವಾಸ್ತವ ಬೇಕೇ,
ಯಾವ ಮರಗಳ್ಳನೂ ಮರ ಇದ್ದಂತೆ ಅದಕ್ಕೆ ಕೊಡಲಿ ಗರಗಸ ಹಾಕುವುದಿಲ್ಲ. ಮೊದಲು ಅದರ ರೆಂಬೆ –ಕೊಂಬೆ ಕಡಿದು ಅದನ್ನು ನಗ್ನವಾಗಿಸಿ ಆಮೇಲೆ ಅದನ್ನು ಉರುಳಿಸುತ್ತಾರೆ. ನಮ್ಮೂರಿನ ಫಟಿಂಗರು ಹತ್ತಡಿ ಉದ್ದದ ಮೋಪು ಕತ್ತರಿಸಿ ಹಗ್ಗದಲ್ಲಿ ಅದನ್ನು ಬೀಳಿಸುತ್ತಿದ್ದರು!

ಅರ್ಥಾತ್ ಈ ಸಿನೆಮಾ ಮಾಮೂಲಿ ಸಿನೆಮಾಗಳ ವ್ಯಾಕರಣವನ್ನೇ ಢಾಳಾಗಿ ಉಪಯೋಗಿಸಿದೆ. ನಮ್ಮನ್ನು ಕೂರಿಸುವುದು script ನ ಸೂಕ್ಷ್ಮಗಳಲ್ಲ! Visual detailಗಳ ಸೂಕ್ಷ್ಮ. ಅದರಲ್ಲೂ ಸನ್ನಿವೇಶವನ್ನು ವ್ಯಂಗ್ಯದ ಮಾತಿನ ಕಮೆಂಟುಗಳ ಮೂಲಕ ನಿಭಾಯಿಸುವುದರಲ್ಲಿ.

ಚಿತ್ರಕಥೆಯಲ್ಲಿ ಸೂಕ್ಷ್ಮತೆ ಇದ್ದಿದ್ದರೆ ನಿರ್ದೇಶಕನಿಗೆ ಇದನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು. ಧಣಿಯ ತಲೆ ಹಾರಿಸುವುದೂ ಕಷ್ಟವಾಗುತ್ತಿತ್ತು.

ಅಂದರೆ,
ಚಿತ್ರಕಥೆ ಕ್ರೂಡ್ ಆಗಿ ತನ್ನ ಗುರಿಯತ್ತ ಸಾಗುತ್ತದೆ. ಅದಕ್ಕೆ ಒಬ್ಬ ಅಸಡ್ಡಾಳ ಒರಟ ಹೀರೋ ಬೇಕು. ವಿಲನ್ ಎಂದು ಭ್ರಮೆ ಹುಟ್ಟಿಸುವ ಕೊನೆಗೆ ಸಜ್ಜನನೆಂದು ಅರಿವಾಗುವ ಒಂದು ಪಾತ್ರ ಬೇಕು. ಜಂಜೀರ್ ಸಿನೆಮಾದಲ್ಲಿ ಪ್ರಾಣ್ ಈ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದು. ದ್ವಂದ್ವದಲ್ಲಿರುವ ನಾಯಕಿ ಇರಬೇಕು. ನಾಜೂಕಿನ ವಿಲನ್ ಒಬ್ಬ ಇರಬೇಕು. (ಅಶ್ವಥ್ ಇಂಥಾ ಒಂದೆರಡು ಪಾತ್ರ ಮಾಡಿದ್ದರು!)
ಇದೇ ಕಾಂತಾರದ ಶಕ್ತಿ ಮತ್ತು ಆಳ ವಿಶ್ಲೇಷಣೆಯಲ್ಲಿ ಅದರ ವೀಕ್ ನೆಸ್.

ಸಿನೆಮಾ ಎಂದರೆ ಇಷ್ಟೇ.
ನಮ್ಮ ಪ್ರೇಕ್ಷಕರ aesthetic ಅನುಭವದ ಪ್ರೌಢಿಮೆ ಹೇಗಿದೆಯೆಂದರೆ ಅವರು ಇದನ್ನು ಸಿನೆಮಾ ಎಂದಷ್ಟೇ ನೋಡಬಲ್ಲರು. ಪದ್ಮಾವತ್ ಸಿನೆಮಾ ಬಂದಾಗ , ಅಲ್ಲಾವುದ್ದೀನ್ ಪಾತ್ರಧಾರಿ ಮಾತಾಡಿದಾಗಲೆಲ್ಲಾ ಶಿಳ್ಳು, ಚಿಲ್ಲರೆ ನಾಣ್ಯಗಳ ಸುರಿಮಳೆ ಆಗಿದ್ದನ್ನು ನಾನು ಕಂಡಿದ್ದೇನೆ.

ನಿತ್ಯದಲ್ಲಿ ಅಲ್ಲಾವುದ್ದೀನ್ ಒಬ್ಬ ಕೇಡಿ.. ಅದು ಜನರಿಗೂ ಗೊತ್ತು. ಆದರೆ ಸಿನೆಮಾದಲ್ಲಿ ಅದೇಕೆ ಈ ಅಲ್ಲಾವುದ್ದೀನನನ್ನು ಮೆಚ್ಚುತ್ತಾರೆ? ಈ ಅರಿವು ಸಿನೆಮಾದವರಿಗೆ ಇರುವ ಕಾರಣವೇ ರಾಜ್ ಕುಮಾರ್ ರಾವಣನ ಪಾತ್ರ ಮಾಡಬಲ್ಲರು. ದರ್ಶನ್ ದುರ್ಯೋಧನನ ಪಾತ್ರ ಮಾಡಬಲ್ಲರು.

ಈ ವಿಚಿತ್ರ , ವಿರೋಧಾಭಾಸವೇ ಅಲ್ಲ. ಇದು ನಾವು ಪಾತ್ರವೊಂದನ್ನು ನೋಡುವ ರೀತಿ. ಕಾಂತಾರದಲ್ಲಿ ಹೀರೋ ತನ್ನ ಬೇಜವಾಬ್ದಾರಿ ಬದುಕಿನಿಂದ ಬದಲಾಗುವ purposeful transformation ಕೂಡಾ ಹೊಸದೇನಲ್ಲ. ಅದಕ್ಕೊಂದು ಬಲವಾದ ಕಾರಣ ನೀಡುವುದೇ script ನ ಸವಾಲು. ಇಲ್ಲಿ ಹೀರೋನ ಸಜ್ಜನ ತಮ್ಮನೊಬ್ಬನಿದ್ದಾನೆ. ಅವನನ್ನು ವಂಚನೆಯಲ್ಲಿ ಸಾಯಿಸಿದರೆ ಕತೆ ಮುಂದೆ ಓಡುತ್ತದೆ.

ಈ ಕ್ರೂಡ್ script ಕಾರಣಕ್ಕೇ ಈ ಸಿನೆಮಾ ಪೇಲವವಾಗಿ ಮುಗಿಯುವುದು. ಇಲ್ಲೂ ಆಧುನಿಕ ಸಿನೆಮಾದ ಬಲಹೀನತೆ ಇದೆ. State̲ = ಸರಕಾರವನ್ನು ಆದರ್ಶೀಕರಿಸುವುದು ಸುಲಭ. ಭೂಮಾಲೀಕನೊಬ್ಬನನ್ನು ಕೇಡಿಯಾಗಿಸುವುದು ಇನ್ನೂ ಸುಲಭ. ಸರಕಾರವನ್ನು ಕೇಡಿಯಾಗಿ ಚಿತ್ರಿಸಿ ನಿರ್ಮಾಪಕ/ ನಿರ್ದೇಶಕ ರಗಳೆ ಮಾಡಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ಮಹಾ ಮಹತ್ವಾಕಾಂಕ್ಷಿ ನಿರ್ದೇಶಕರೂ ಕೂಡಾ ಈ end game ನಲ್ಲಿ ಶರಣಾಗಿದ್ದಾರೆ.
ಇಡೀ ಸಿನೆಮಾ ಸಿನೆಮಾದ ಸಿದ್ಧ ಸೂತ್ರವಾದ larger than Life ತಂತ್ರದ ಮೂಲಕ ಪ್ರೇಕ್ಷಕನನ್ನು ಯಾಮಾರಿಸಿ ಗೆದ್ದಿದೆ.

ಇನ್ನು ಆರು ತಿಂಗಳ ಬಳಿಕ ಇನ್ನೊಂದು ಸಿನೆಮಾ ಬಂದರೆ ಅದಕ್ಕೂ ರೋಮಾಂಚನಗೊಳ್ಳಲು ಪ್ರೇಕ್ಷಕ ಸಿದ್ಧನಿದ್ದಾನೆ. Treatment ನ ಹೊಸತನ ಅಷ್ಟೇ ಅದರ ಮಾನದಂಡ.

ನಮ್ಮಬೌದ್ಧಿಕ ವಲಯ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಅದರಲ್ಲಿ ದೈವ/ ಸರಕಾರ/ ಭೂಮಾಲೀಕ/ ಬಡವರು ಅಂತೆಲ್ಲಾ ಚರ್ಚೆ ಮಾಡುವುದು ನೋಡಿ ಪ್ರಾಯಶಃ ಕಾಂತಾರದ ತಂಡ ನಿಜಕ್ಕೂ ಚಕಿತಗೊಂಡಿದೆ ಎಂದು ನನಗೆ ಅನ್ನಿಸಿದೆ.

‍ಲೇಖಕರು Admin

6 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading