ಹೇಮಲತಾ
ಆ ನಗುವಲ್ಲಿ ಅಂತ ಶಕ್ತಿಯಿತ್ತು,ಮನಸಿನ ಸೌಂದರ್ಯವಿತ್ತು, ನಾನು ಮಾರುಹೋಗುತ್ತಿದ್ದೆ . ಅನು-ಅನುಸೂಯ ಇಂದು ನಗುತ್ತಿದ್ದಳು, ಆದರೆ ಅತಿ ಪ್ರಯಾಸದಲ್ಲಿ ತನ್ನ ಇಚ್ಚಾಶಕ್ತಿಯನ್ನೆಲ್ಲಾ ಒಂದುಗೂಡಿಸಿ ನಗುವ ಪ್ರಯತ್ನ ಮಾಡುತ್ತಿದ್ದಳು . ಮೊಣಕೈ ಊದಿ ಪೂರಿಯಾಗಿತ್ತು. ಹೆಚ್ಚೇನಿಲ್ಲ ,ವರ್ಷಕ್ಕೊಂದು ಉಗಾದಿ. ಕರಿಗಡುಬು ಮಾಡಿ ಉಣ್ಣಲು ಎಬ್ಬಿಸಲು ಹೋಗಿ ನಿದ್ರೆಭಂಗಗೊಳಿಸಿದ ಶಿಕ್ಷೆಗೆ ಬೆರಳು ಮುರಿಯುವ ಹಾಗೆ ತಿರುಪಿ , ನಾಲ್ಕು ಜಪ್ಪಿದ್ದ ಪತಿದೇವ.ಪ್ರಾಣಕಳೆದುಬಿಡುತ್ತಾನೆ ಎಂದು ಗಾಬರಿಗೊಂಡ ಅತ್ತೆಮಾವ ಓಡಿಬಂದು ಬಿಡಿಸಿದ್ದರು,ಹೆತ್ತ ಮಗನ ಕೋಪಶೌರ್ಯಗಳು ಬಗ್ಗೆ ಗೊತ್ತಿದ್ದ ಅವರಿಗೆ ಅರ್ಧಹಗಲು ಕಳೆದಿದ್ದರೂ ಎದೆನಡುಗು ನಿಂತಿರಲಿಲ್ಲ.ನಾವುಗಳು ಆಹ್ವಾನ ಹಿಡಿದು ಆಚರಿಸಲು ಹೋಗುವಷ್ಟರಲ್ಲಿ ಹಬ್ಬದ ಕಳೆಕಳೆದು ಸೂತಕದವಾಸನೆ ಬಡಿಯುತ್ತಿತ್ತು.ದಾರಿಗೆ ಅಡ್ಡಬಂದ ಅನುಸೂಯಳ ಚಿಕ್ಕಮಗ ಅಪ್ಪಯ್ಯ ಅಮ್ಮನ ಕೈ ಮುರಿಯಿತು ಎಂಬ ಸುದ್ದಿ ತಲುಪಿಸಿದ್ದ.ಮನೆತಲುಪಿದಾಗ ವಿಷಯ ತಿಳಿದಿದ್ದರೂ ಔಪಾಚಾರಕ್ಕೆ ಕೇಳಿದಾಗ ಆ ಹುಡುಗಿ ಎಲ್ಲಾ ಪಿಕ್ಚರಿನ ಒಳ್ಳೆನಾಯಕಿಯರಂತೆ ನಕ್ಕು ,ಜಾರಿಬಿದ್ದು ಉಳುಕಿಸಿಕೊಂಡೆ ಎಂದಳು. ನಂಬಿದಂತೆ ನಟಿಸಿ ಸುಮ್ಮನಾದೆವು. ಇದೇನು ಹೊಸತೂ ಅಲ್ಲಾ ಮುಗಿಯೋದೂ ಇಲ್ಲಾ ಅನ್ನೋದು ಎಲ್ಲರಿಗೂ ಚೆನ್ನಾಗೆ ಗೊತ್ತು.
ನಿಜ ಹೇಳಬೇಕೆಂದರೆ ಅಂತಹ ಒಳ್ಳೆ ಹುಡುಗಿ, ಅವಳ ಗಂಡನನ್ನು ಹೊರತುಪಡಿಸಿ ನಮ್ಮ ದೇಶದ ಗಂಡಸರುಗಳೆಲ್ಲರು ಹೆಣ್ಣೆಂದರೆ ಹೀಗಿರಬೇಕೆಂದು ಮಾದರಿಮಾಡಿ ಶ್ಲಾಘಿಸುವಷ್ಟು ಒಳ್ಳೆಯವಳು. ಮನೆಗೆ ಎಡಬಿಡದೆ ಬರುವ ಜನಸಂದಣಿಗೆ ಒಲೆಮೇಲಿನ ಕಾಫಿಬಟ್ಟಲು ಎಂದೂ ಆರೋದಿಲ್ಲ , ಮಾವನಿಗೆ ಮಾತ್ರೆತಿಂಡಿತೀರ್ಥಗಳ ಸರಬರಾಜಿಗೆ ಅವಳ ಹೆಸರೆ ಜಪ, ಓಗುಡದಾಗ ಬೈದರು ಎದುರು ನುಡಿಯದೆ ‘ಬಂದೇ ಮಾವ’ ಅಂತ ನಗುತ್ತಾ ಉಪಚರಿಸುವ,ಅಷ್ಟು ದೊಡ್ಡ ಮನೆ ಒಪ್ಪಓರಣಗಳನ್ನು ಉಸ್ಸೆನ್ನದೆ ಮಾಡುವ, ವಾರಗಿತ್ತಿಯರ ಮೇಲೆ ಎಂದೂ ಕರುಬದ,ಅತ್ತೆ ಮೇಲೆ ಮುನಿಸಿಕೊಂಡು ಚಾಡಿಹೇಳದ , ಎಲ್ಲರಮಕ್ಕಳನ್ನು ಹೊಟ್ಟೆಯಲ್ಲಿ ಹುಟ್ಟಿದಂತೆ ಮುದ್ದಿಸಿ ಉಣಿಸುವ,ಎಲ್ಲದಕ್ಕಿಂತ ಹೆಚ್ಚಗೆ ಧ್ವನಿ ಎತ್ತರಿಸದೆ ನಗುನಗುತ್ತಲೇ ಓಡಾಡುವ ಆದರ್ಶ ಹಿಂದು ಗೃಹಿಣಿ. ನನಗೆ ಹೆಚ್ಚೇ ಅಚ್ಚುಮೆಚ್ಚೆಂದರೆ ಅವಳ ಬಗೆಬಗೆಯ ತಿಂಡಿ,ಉತ್ಪ್ರೇಕ್ಷೆಯಿರದ, ಹೊಟ್ಟೆಕಿಚ್ಚಿರದ ಸರಳ ಸೂಕ್ಷ್ಮ ಮಾತು …
ಸಮಾಧಾನಿಸೋಕೆ ನನಗಿಂತ ಒಂದು ಮೂರು ವರ್ಷಕ್ಕೆ ದೊಡ್ಡವಳಷ್ಟೆ. ಇಲ್ಲಿನ ವಾಸ್ತವಗಳು ನನಗೆ ಗೊತ್ತು . ಏನು ಮಾಡೋಕೆ ಆಗಲ್ಲ ,ಅನುಭವಿಸಿಕೊಂಡು ಹೋಗಬೇಕಷ್ಟೆ ಅಂದೆ.
ಕುಡಿಯೋದು ಬಿಡೋಕೆ ಔಷಧಿಕೊಡಿಸಿದ ಮೇಲೆ ಮತ್ತಷ್ಟು ವ್ಯಗ್ರರಾಗಿದ್ದಾರೆ , ಮನಶಾಷ್ತ್ರದ ಡಾಕ್ಟರ್ ಬಳಿ ಹೇಗಾದರು ಮಾಡಿ ಕರೆದೊಯ್ಯಬೇಕೆಂದಿರುವೆ ಸರಿಹೋಗ್ತಾರಲ್ವಾ ಕೇಳಿದಳು.
ಅಂದು ಇದೇ ಭರವಸೆಯಲ್ಲಿ ಡಾಕ್ಟರ್ ರಾಘವೇಂದ್ರರವರನ್ನ ಇಂಥದ್ದೆ ಪ್ರಶ್ನೆ ಕೇಳಿದ್ದೆ.ವಿವರಿಸಿದ್ದರು . . ಮಾತ್ರೆ ಅಥವ ಔಷಧಿ ವ್ಯಕ್ತಿತ್ವವನ್ನ ಸರಿಪಡಿಸೋಕೆ ಆಗೋಲ್ಲ.ಕೂಡಿಸಿಕೊಂಡು ಮಾತಾಡಿ ಅವರ ಸ್ವಭಾವದ ಕಾರಣ ತಿಳಿದುಕೊಂಡು ಕೌನ್ಸಿಲಿಂಗ್ ತರಹ ಬುದ್ದಿಹೇಳಬಹುದು.ಅದಕ್ಕೆ ಅವರು ಕೂಡ ಸಹಕರಿಸುವ ಮನಸ್ಥಿತಿಯಲ್ಲಿರಬೇಕು.ಮುಗ್ದತೆ ಅಥವ ಹುಂಬತನವಿದ್ದರೆ ಇಲ್ಲಿಗೆ ಬಂದಮೇಲೆ ಪ್ರಯೋಜನವಾಗಬಹುದು,ಆದರೆ ಗೊತ್ತಿದ್ದು ಗೊತ್ತಿದ್ದು ಲಾಭಕ್ಕಾಗಿ ಮಾಡುವ ಬುದ್ದಿವಂತಿಕೆಯಾದರೆ ಏನು ಮಾಡಲಾಗುವುದಿಲ್ಲ. ಬಹಳಷ್ಟು ವೇಳೆ ವಯಸ್ಕರು, ಅದರಲ್ಲೂ ಹೆಂಡತಿಯ ಜೊತೆ ಬರಬೇಕಾದ ಗಂಡ ಮನೋವೈದ್ಯರನ್ನು ನೋಡಲು ಒಪ್ಪುವುದೇ ಕಷ್ಟ.ಅವರನ್ನು ತಿದ್ದುವ ಮಾರ್ಗವಿಲ್ಲವಾದರೆ ಮನೆಯವರು ಸನ್ನಿವೇಶ ಅರ್ಥಮಾಡಿಕೊಂಡು handle ಮಾಡಿಕೊಳ್ಳೋ ವಿಧಾನಗಳನ್ನ ಹುಡುಕಿಕೊಳ್ಳಬೇಕು.ಅದಕ್ಕೆಲ್ಲಾ ಮನೆಮಂದಿಯ ಮದ್ಯೆ ಒಳ್ಳೆಯ ಅನುಸರಣೆ ಇರಬೇಕು.
ಕಾರಣ ಏನು ಡಾಕ್ಟರ್ ಈ ತರಹ ಆಗೋದಕ್ಕೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಲವಾರು ರೀತಿಯಿಂದ ನಿರ್ಮಾಣವಾಗಿರುತ್ತೆ; ಯಾಕೆ ವಿಕೃತವಾಗಿ ನಡೆದುಕೊಳ್ತಾರೆ, ಹಿಂಸೆಯ ದಾರಿ ತುಳಿತಾರೆ, ಜಗಳಗಂಟರಾಗ್ತಾರೆ, ಕೆಟ್ಟದಾಗೆ ಮಾತಾಡೋದು, ಚಟಗಳ ಕೈಸೆರೆಯಾಗೋದು ಮಾಡ್ತಾರೆ ಅನ್ನೋದಕ್ಕೆ ಬೆಳೆದುಬಂದ ವಾತಾವರಣ,ಮನೆ ,ಕಹಿ ಬಾಲ್ಯ,ಸುತ್ತಲಿನ ಪರಿಸರ , ಒಡಕು ಸಂಬಂಧಗಳು,ಕೀಳರಿಮೆ ಮೇಲರಿಮೆ ಹಲವು ಕಾರಣವಿರಬಹುದು..
ಡಾಕ್ಟರ ಮನೆಮನೆಯ ಸಂಕೀರ್ಣ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಹೇಳಿದರು .
ನನಗೆ ಯಯಾತಿಪುರು ಕಥೆ ನೆನಪಾಯಿತು . ನಾನದನ್ನೇ customise ಮಾಡಿ ಅನುಗೆ ವಿವರಿಸಿದೆ . ಬಹುಷ್ಯ ಅವನಲ್ಲಿ ಕೀಳರಿಮೆಯಿರಬಹುದು . ಒಬ್ಬ ಗಂಡಸಿಗೆ ಮುಖ್ಯವಾಗಿ ಒಂದು ದುಡಿಮೆ ಕೆಲಸ ಮತ್ತು ಅದು ಶ್ರೇಷ್ಟ ಅನ್ನುವ ಅಹಂ ತೃಪ್ತಿ ಜೊತೆಗೆ ತಾನು ಸರಿಯಾಗಿ ನಿರ್ವಹಿಸುತ್ತಿದ್ದೇನೆ ಎನ್ನುವ ಧೈರ್ಯ ಮುಖ್ಯ . ಗಂಡಸುತನದ ಆಧಾರವಾಗಿ ಜನಮನ ಒಪ್ಪಿಕೊಂಡ ವಿಷಯ ಇದು . ಇಲ್ಲೇನಾಗಿದೆ ಅಂದರೆ ಅವನ ಅಪ್ಪ ಅಂದರೆ ನಿನ್ನ ಮಾವ , ಹತ್ತೂರಿಗೆ ದೊಡ್ಡವರಾಗಿ ಬದುಕಿಬಾಳಿದ ಪ್ರಭಾವಿ ಹಿರಿಮನುಷ್ಯ.ಮಾಡಿಟ್ಟಿರುವ ಆಸ್ತಿ ಕೂತರು ಕರಗದಷ್ಟು . ಆದರೆ ಬೆಳೆಸುವಾಗ ಮುದ್ದು ಮಾಡಿ, ಕೇಳಕೇಳಿದಾಗೆಲ್ಲ ದುಡ್ಡು ಕೊಟ್ಟು , ಮಾಡಿದ್ದನೆಲ್ಲ ಸಮರ್ಥಿಸಿಕೊಂಡು ಬೆಳೆಸಿದ್ದಾರೆ . ಓದೋವಾಗ ಶಿಸ್ತಿರದೆ , ಕೆಲಸ ಹುಡುಕಬೇಕಾದ್ದಾಗ ಪೋಲಿತಿರುಗಿ ಅಪ್ಪನದು ಇದ್ಯಲ್ಲ ಅನ್ನೋ ಜಂಭದಲ್ಲಿ , ಒಂದು ಅಸ್ತಿತ್ವ ಗಳಿಸಿಕೊಳ್ಳಲಾಗದೆ ಕಾಲಕ್ರಮೇಣ ಸೋಮಾರಿಯಾಗಿದ್ದಾನೆ . ಎಲ್ಲಾ ಕಡೆ ನಡೆಯುವಂತೆ ಮದುವೆ ಮಾಡಿದರೆ ಸರಿ ಹೋಗ್ತಾನೆ ಅಂತ ಮದುವೆ ಮಾಡಿಸಿದ್ದಾರೆ, ಮಕ್ಕಳಾದ ಮೇಲೆ ಜವಾಬ್ದಾರಿ ಬರುತ್ತೆ ಅಂತ ಅದು ಆಗಿವೆ…
ಒಡಹುಟ್ಟಿದವರು, ಸ್ನೇಹಿತರು ಓದಿ ಪಟ್ಟಣಸೇರಿ ಒಳ್ಳೆಜೀವನ ನಡೆಸುತ್ತಿದ್ದಾರೆ ; ತನ್ನ ಬೇಜವಾಬ್ದಾರಿ, ಸೋಮಾರಿತನ, ಜನರ ಹೀಗಳಿಯುವಿಕೆಗೆ ತುತ್ತಾದಾಗ , ಚಟಗಳ ಅಮಲು ಏರಿದಾಗ , ಮನೆಯವರ ತಿರಸ್ಕಾರ ತಿಳಿದಾಗ ಇಂತ ವಿಭುದ್ದಿಗೆ ಕಾರಣವಾಗುತ್ತೆ… ಆದರೆ ಹೆಂಡತಿ ಎದುರಿಗೆ, ಊರವರು ಮನೆಯವರ ಎದುರಿಗೆ ತನ್ನ ಸೋಲು ಅರಿವಾದರು ಒಪ್ಪಿಕೊಳ್ಳಲಾಗದೆ ಯಜಮಾನಿಕೆ ಪ್ರತಿಷ್ಟಾಪಿಸಿಕೊಂಡು ತನ್ನೆ ತಾನು ಸಮಾಧಾನ ಮಾಡಿಕೊಳ್ಳೋಕೆ,ಗಂಡಸಾಗಿ ಗೆದ್ದಿದ್ದೀನಿ ಅಂತ ನಂಬಿಸಿಕೊಳ್ಳೋಕೆ ,ನಡೆಸೋ ಪ್ರತಿ ಪ್ರಯತ್ನವೇ ಅವನ ನಡವಳಿಕೆ . ಅದಕೆಲ್ಲಾ ಸುಲಭವಾಗಿ ಸಿಗೋದು, ಸಾಧ್ಯವಿರೋದು ನೀನೆ ;
ಸಮಸ್ಯೆಯ ಆಳಅಗಲ ಇರೋದು ಈ ಹಂತದಲ್ಲೇ ….. ಹೆಣ್ಣುಮಕ್ಕಳು ಬುದ್ಧಿವಂತರಾಗಬೇಕು, ತಾಳ್ಮೆ ಸಹನೆವಹಿಸಬೇಕು , ಒಳಗಿಂದ ಗೆಲ್ಲಬೇಕು ಅಂತ ದೊಡ್ಡವರು ಹೇಳೋದು ಇಲ್ಲೇ . ಅವನ ಅಹಂನ ನೀನು ತೃಪ್ತಿಪಡಿಸಬೇಕು . ಏನೆಲ್ಲಾ ಸತ್ಯ ಗೊತ್ತಿದ್ದರು ಅವನನ್ನು ನಂಬಿದಂಗೆ ನಟಿಸುತ್ತ, ವಿಶ್ವಾಸಕ್ಕೆ ತಗೆದುಕೊಂಡು, ತಾಳ್ಮೆಯಿಂದ ಸ್ನೇಹಗಳಿಸಿ ತಿದ್ದಿಕೊಳ್ಳಬೇಕು . ಕಡೆಪಕ್ಷ ನಿನಗೆ ಅತ್ತೆ ಮಾವನ ಸಪೋರ್ಟ್ ಇದೆ . ಎಷ್ಟೋ ಕಥೆಗಳಲ್ಲಿ ಗಂಡನಿಗೆ ಹೆಂಡತಿಯಿಂದಲೇ ಕೀಳರಿಮೆ ಉಂಟಾಗುತ್ತೆ , ಯಾವ ಮೂಲದಿಂದಲೂ ದುಡ್ಡು ಹುಟ್ಟಿಸಲಾಗದ ಬಡತನವಿರುತ್ತೆ , ಅತ್ತೆ ಮಾವ ನಾದಿನಿಯರ ಮತ್ತೊಂದು ರೌಂಡ್ torchure ಇರುತ್ತವೆ.. . ನಿನ್ನ ಕೇಸ್ ಎಷ್ಟೋ ವಾಸಿ ..
ನನ್ನ ಮಾತನ್ನು ತಡೆದ ಅನು ತಾನೇ ಮುಂದುವರಿಸಿದಳು –
ಇದೆಲ್ಲ ನನಗೆ 5 ವರ್ಷಗಳ ಹಿಂದೆಯೇ ಅರ್ಥವಾಗಿತ್ತು..ಸಂಸಾರದ ಗುಟ್ಟು, ಒಳಸುಳಿ, ಪಗಡೆ ಎಲ್ಲ ತಿಳಿಯಿತು . ಜೊತೆಗೆ ನನ್ನ ಅಸಹಾಯಕತೆ ಕೂಡ ಅರಿವಿತ್ತು .
ಅವರ ಹಾದಿಗೆಹೋಗಿ ಎಲ್ಲ ದಿಕ್ಕುಗಳಿಂದಲೂ ಪ್ರಯತ್ನಿಸಿ ಬಿಟ್ಟಿದ್ದೀನಿ , ನೀನೆ ರಾಜ, ನೀನೆ ಬುದ್ದಿವಂತ, ಎಲ್ಲರಿಗಿಂತ ನೀನೆ ಒಳ್ಳೆಯವನು ಅಂತ ಉಬ್ಬಿಸಿ , ಮಗುವನ್ನ ಓಲೈಸುವ ತರಹ ನೈಸ್ ಮಾಡಿದ್ದೀನೆ , ನಿನಗೆ ಎಂತದ್ದುಬೇಕು ಹೇಳು ಮಾಡಿಹಾಕ್ತೀನಿ ಅಂತ ಪುಸಲಾಯಿಸಿದ್ದೀನೆ , ಅತ್ತೆ ಮಾವನಿಗೂ ಒಳ್ಳೆ ಮಾತಲ್ಲಿ ಹೊಗಳಿಕೊಂಡು . ಪ್ರೋತ್ಸಾಹಿಸುತ್ತ ಧೈರ್ಯಹೇಳಿ ಅಂತ ಕೇಳಿಕೊಂಡು ಇದ್ದೇನೆ .. ಆದರೆ ಎಲ್ಲವು ತಾತ್ಕಾಲಿಕ … ತನ್ನ ಯೋಗ್ಯತೆ ಏನಂತ ಅವನಿಗೆ ಗೊತ್ತಿದೇ , ಮೆಚ್ಚಿಸೋಕೆ ಹೇಳ್ತಿರೋ ಸುಳ್ಳು ಅವೆಲ್ಲ ಅಂತಾನು ಗೊತ್ತಿದೆ, ಆದರೆ ಒಪ್ಪಿಕೊಳ್ಳೋಕೆ ಆಗಲ್ಲ … ಜೊತೆಗೊಂದಿಷ್ಟು ತಲೆತುಂಬೋಕೆ ಸೋಮಾರಿ ಗೆಳೆಯರ ಗುಂಪು, ಹೆಂಡತಿಯರು ಕೈಗಾಕಿಕೊಂಡು ಕುಣಿಸುತ್ತಾರೆ ಅಂತೆಲ್ಲ ಹೆದರಿಸೋ ಮಂದಿ..
ಇವನ ಕೆಲಸದ ರೀತಿಗೆ ,ಮಾಡುವ ಖರ್ಚಿಗೆ ಸಂಪಾಧಿಸಿದನ್ನು ಉಳಿಸಿಕೊಂಡು ಹೋಗೋಕೆ ಆಗದ ಅಯೋಗ್ಯ ಅನ್ನೋತರಹ ಮಾವ ಕೂಗಾಡಿಬಿಡುತ್ತಾರೆ , ಆಮೇಲೆ ಆ ಕೋಪನ ಬಂದು ತೀರಿಸಿಕೊಳ್ಳೋದು ನನ್ನ ಮೇಲೆ ಎಂದಳು .
ಪ್ರೀತಿಯಿಂದ ಬಾಳಬೇಕು, ಸುಂದರವಾಗಿ ಬದುಕಬೇಕು ಅನ್ನೋ ಆಸೆ ಇತ್ತು ಕಣೆ ನನಗೆ. ಮಾಡಬೇಕಾದ ಬೇರೆ ಕೆಲಸಾನು ಏನು ನನಗಿರಲಿಲ್ಲ . ಅವನ ಒಂದೇಒಂದು ಪ್ರೀತಿಮಾತಿಗೆ ಏನ್ಬೇಕಾದ್ರು ಮಾಡ್ತೀನಿ.
ಸಾರುಬೇಕು ಹಾಕು ಅಂದ್ರೆ ಸಾರು ಬಡಿಸ್ತೀನಿ, ಮೊಸರು ಬಡಿಸು ಅಂದ್ರೆ ಅದನ್ನೆ ಹಾಕ್ತೀನಿ.ಅವನ ಮನಸ್ಸಲ್ಲಿ ಇರೋದು ನನಗೇಗೆ ತಿಳಿಬೇಕು.ಕೇಳಿದರು ತುಟಿಬಿಚ್ಚದೆ ಅನ್ನ ಮಿದಿಯುತ್ತಾ ಕೂತಿರ್ತಾನೆ,ಹೆಚ್ಚಗೆ ಕೇಳುದ್ರೆ ಕಲಗಚ್ಚು ಕೊಡು ಅಂತಾನೆ. ಏನು ಬಡಿಸಿದರು ತಟ್ಟೆಕಿತ್ತು ಎಸಿತಾನೆ. ತಾಯಿತರಹ ನೋಡಿಕೊಂಡ್ರು,ಸೂಳೆ ತರಹ ಪ್ರೀತಿ ಮಾಡುದ್ರು,ಕೆಲಸದವಳ ತರಹ ಸೇವೆ ಮಾಡುದ್ರು ಕುಡಿಯೋದು ಬಡಿಯೋದು ಬಾಯಿಗೆ ಬಂದಂಗೆ ಆಡೋದು ಬಿಡಲ್ಲ.
ಹೊತ್ತಂದ್ರೆ ಹೊತ್ತಿಲ್ಲ , ಹಗಲು ರಾತ್ರಿ ಹಾಸಿಗೆಗೆ ಬೇಕು, ಎಳೆದುಕೊಂಡು ಹೋಗ್ತಾನೆ , ರೇಪ್ ಮಾಡಿದಂಗೆ ಮಾಡ್ತಾನೆ … ನರಕ ಆಗಿದೆ …ನಿಂಗೆ ಆಗಲ್ಲ ಅಂದ್ರೆ ನಿಮ್ಮಕ್ಕನ್ನ ಕರೆಸು ಅಂತಾನೆ, ಅಸಹ್ಯ ಅಂದ್ರೆ ಹಂಗಿಂಗಲ್ಲ , ಸಿಟ್ಟೆ ಬರುತ್ತೆ . ಕುಡಿಯೋ ಮತ್ತು ದಿನಪೂರ್ತಿ ಇಳಿಯೋದೇ ಇಲ್ಲಾ … ಕುಡಿದೆ ಇಲ್ಲ ಅಂತ ಆಣೆಮಾಡಿ ಸುಳ್ಳುಹೇಳ್ತಾನೆ
ಇಲ್ಲಿನ ವಾತಾವರಣದಿಂದ ಬಿಡಿಸಿಕೊಂಡು ಹೋಗಿ ಹೊಸದಾಗಿ ಬಾಳಿಸುವ ಪ್ರಯತ್ನ ಮಾಡೋಣ ಅಂದರೆ ಇಲ್ಲಿನ ಜೀವನ ನನ್ನ ಬಿಟ್ಟು ನಡೆಯೋಲ್ಲ, ಅತ್ತೆಮಾವ ಬಿಡಲ್ಲ …
ಪ್ರೀತಿ, ಗೌರವದಿಂದ ಹೆಂಡತಿನ ನಡೆಸಿಕೊಳ್ಳಬೇಕು ಅನ್ನೋ ಇಚ್ಚೇನ ಯಾವಾಗಲೋ ಬಿಟ್ಟುಬಿಟ್ಟಿದ್ದೀನಿ, ಹೆಚ್ಚಿಗೇನು ಆಸೆಗಳಿಲ್ಲ , ಹಿಂಸೆನಾದರೂ ನಿಲ್ಲಿಸಲಿ ಅನ್ನೋದು ಒಂದೇ ಈಗ….
ಅನು ಮಾತು ಮುಂದುವರಿಸಿದಳು .
ಇವನು ದುಡಿತೀನಿ ಅಂತ ಹೋಗಿ ಹಾಳುಮಾಡೋದು ನೋಡೋಕೆ ಆಗದೆ, ಮಾವನನ್ನ ಪ್ರತಿಯೊಂದಕ್ಕು ದುಡ್ಡುಕೇಳಲು ಆಗದೆ ನಾನೇ ನಿಂತು ಜಮೀನು , ಬೆಳೆ ಅಂತ ಹೊರಗೂ ಒಳಗೂ ದುಡಿತೀನಿ , … ಮುಂಚೆ ಸುಮ್ಮನಿರ್ತಿದ್ದ ಈಗ ಹೊಲದ ಕಡೆಗೆ ಹೋಗಿಬಂದರೆ ಸಾಕು ಯಾವನನ್ನ ನೋಡೋಕೆ ಹೋಗಿದ್ದೆ, ಯಾರ ಹತ್ತಿರ ಹೋಗಿಬಂದೆ ಅಂತೆಲ್ಲ ಎಲ್ಲರೆದುರು ಹೊಡೆದು ಬಡಿತಾನೆ
“ತನ್ನ ಸೋಲು ಮತ್ತು ಹೆಣ್ಣಿನ ಗೆಲುವು ಸಹಿಸಿಕೊಳ್ಳೋಕೆ ಆಗದ ಗಂಡಸು ಕಡೆಯದಾಗಿ ಉಪಯೋಗಿಸೋದು ಯಾವನ ಜೊತೆ ಹೋಗಿದ್ದೆ ಅಸ್ತ್ರ , ಎಂತಾ ಗಟ್ಟಿಗಿತ್ತಿಯು ಇಂತಾ ಮಾತಿಗೆ ಕುಸಿತಾಳೆ ಅಂತಾ ಗೊತ್ತು,ನಾಯಿ ಜನ್ಮ !! ” ಮಾತು ಸರಾಗವಾಗಿ ಹೊಮ್ಮಿತು …
ಊರುಕೇರಿ ತುಂಬಾ ಹೆಸರಿರುವ ಅನುಕೂಲಸ್ತರ ಮನೆ, ಸುಖವಾಗಿರ್ತಾಳೆ ಅನ್ಕೊಂಡು ಹೆಣ್ಮಕ್ಕಳ ಮನೆಯಲ್ಲಿ ಸಂಬಂಧ ಒಪ್ಪುತ್ತಾರೆ . ಮರ್ಯಾದೆಗೆ ಅಂಜುವವರು ದಾರಿ ತಪ್ಪಲ್ಲ,ಏನೇ ಆದರು ಬಡವರ ಮನೆಯ ಹೆಣ್ಣುಮಕ್ಕಳು ಅಸಹಾಯಕತೆಗೆ ಬಿಟ್ಟು ಹೋಗಲ್ಲ ಅಂತ ಬಡ ಕುಟುಂಬದಿಂದ ಬಂದವಳನ್ನ ಸೊಸೆ ಮಾಡಿಕೊಳ್ಳೋಕೆ ಗಂಡಿನ ಕಡೆಯವರು ಆಸೆಪಡ್ತಾರೆ . ಆಮೇಲೆ ಅನುಭವಿಸಬೇಕಾದವರು ಹೆಣ್ಣು ಮಕ್ಕಳಷ್ಟೇ .12 ವರ್ಷದಿಂದ ನೋಡಿದ ಊರ ಜನರೂ ಇಲ್ಲಿಂದ ತಪ್ಪಿಸಿಕೊಂಡು ಎಲ್ಲಿಗಾದ್ರೂ ಹೋಗಿ ನೆಮ್ಮದಿಯಾಗಿ ಬಾಳು ಅಂತಾರೆ .. ದೂರದಿಂದ ನೋಡೋರು ದೊಡ್ಡಮನೆ , ದೊಡ್ಡ ಆಸ್ತಿ ಪುಣ್ಯವಂತೆ ಅಂತಾರೆ …ಅಪ್ಪ ಅಮ್ಮಂಗೆ ಅವರವರೆ ಭಾರ,ಅಂತ ಮನೇಲಿ ಬಾಳಕ್ಕಾಗ್ದಿರ ವಾಪಸ್ ಬಂದು ಮಾನಕಳಿಬೇಡ ಮಗಳೆ ಅಂತಾರೆ.ಹತ್ತನೆ ಕ್ಲಾಸಿಗೆ ಲಾಗಹಾಕಿದವನಿಗೆ ಇನ್ನೂ ಓದುತ್ತಿದ್ದ , ಕ್ಲಾಸಿಗೆ ಮೊದಲುನಿಲ್ಲುತ್ತಿದ್ದವಳನ್ನ ಗಂಟು ಹಾಕಿದರು. ಕಾಲುಮುರಕೊಂಡು ಅವರ ಮನೆಯಲ್ಲಿ ಲಕ್ಷ್ಮಿ ಅವಳೇ,ಅಂತ ಮನೆಬಿಟ್ಟು ಓದಿ ದುಡಿದು ದಣಿಬೇಕ ಅಂದ್ರು.ಕರೆಂಟು ನೀರೆ ಸರಿಯಿರದ ಊರಲ್ಲಿ ಕಾರ್ಖಾನೆ ಕೆಲಸಗಳು ಇಲ್ಲಾ. 28ನೇ ವಯಸಿಗೇ ಮಿಡಲ್ ಸ್ಕೂಲ್ ಓದುವ ಎರಡೆರಡು ಮಕ್ಕಳು.
ಇದು ಇತ್ತ ದರಿ ಅತ್ತ ಪುಲಿ ಕಥೆ.
ನಿಜಾ ಇಲ್ಲಿ ಸುಖವಾಗಿರಲಿ ಅನ್ನೋದಕ್ಕಿಂತ ಸರಿಹೋಗಲಿ ಅಂತಾನೆ ಮದುವೆಗಳು ಹೆಚ್ಚು ನಡೆಯೋದು . ಹೆಂಡತಿ ನಗುನಗುತ್ತ ಇರಬೇಕು ಅನ್ನೋದಕ್ಕಿಂತ ತನ್ನ ನೋಡಿದರೆ ನಡುಗುತ್ತಾ ಇರಬೇಕು ಅಂತಾನೆ ಗಂಡಂದಿರು ಬಯಸೋದು ,ಹೆಂಡತಿ ಸಂತುಷ್ಟಿಯಿಂದ ಇರಬೇಕು ಅನ್ನೋದಕ್ಕಿಂತ ಅಸಹಾಯಕಳಾಗಿ ಇರಬೇಕು ಅಂತಾನೆ ಇಚ್ಚಿಸೋದು , ಸಾಂಗತ್ಯಕ್ಕಿಂತ ಸೇವೆಗೆ ಹೆಂಡತಿ ಬೇಕು; ಎದೆಯಲ್ಲಿ ಪ್ರೀತಿಯ ಬಟ್ಟಲು ಹಿಡಿದುಕೊಂಡು ಸೋಲುತ್ತಾ,ಸಹಿಸಿಕೊಳ್ಳುತ್ತಾ , ಎಲ್ಲ ಪ್ರಯತ್ನ ಮಾಡಿನೋಡೋಕೆ ತನ್ನ ತಾನೇ ಒಡ್ಡಿಕೊಂಡು ಒಂದೇ ಒಂದು ಪ್ರೀತಿ ಅಗುಳಿಗೆ ಬೊಗಸೆ ಒಡ್ಡುತ್ತಾಳೆ …. ಅದನ್ನ , ಅವಳ ಸ್ತಿತಿಯನ್ನ ತನ್ನ ಅಹಂ ತೃಪ್ತಿಗೆ ಬೇಕೆಂದಂಗೆ ಬಳಸಿಕೊಳ್ಳುತ್ತಾ ಅಟ್ಟಹಾಸ ಮಾಡ್ತಾನೆ ಇರ್ತಾನೆ ಅವನು … ಸಂಸಾರ ಅಂದರೆ ಅದೇ , ಗಂಡಹೆಂಡತಿ ಹಾಗೆ ಬದುಕಿ ಬಾಳಬೇಕು, ಕಡೆಗೆ ಎಂದೋ ಒಂದುದಿನ ಅರಿವು ಮಾಡಿಕೊಂಡು ಸರಿಹೋಗ್ತಾನೆ ಅನ್ನೋ ತರಹ ಸಮಾಜ ಕೂಡ ನಿಲುವು ತಳೆಯುತ್ತೆ .
ಅನು ಕಣ್ಣಲ್ಲಿ ನೀರು ನಿಂತಿತ್ತು , ಆತ್ಮ ಗೌರವ ಅನ್ನೋದು ಪೆಟ್ಟು ತಿನ್ನದೇ ಇರುತ್ತಾ ?
ನಾನು ನಾನಾಗಿ ಯಾವ ರೀತಿಲೂ ಉಳಿದಿಲ್ಲ, ಎಲ್ಲಾ ತಿಳಿದರು, ಅರ್ಥವಾದರೂ ಏನು ಮಾಡಲಾಗದ ಪರಿಸ್ತಿತಿ ; ಮಾನಸಿಕ ಆಸ್ಪತ್ರೆಗೆ ಅಂದ ತಕ್ಷಣ ಅತ್ತೆ ಮಾವನಿಗೂ ಕೋಪ ಬಂದಿದೆ, ಅವನೇನು ಹುಚ್ಚನಲ್ಲ ಅಂತಾರೆ …
ಈ ಜನ್ಮಕ್ಕೆ ಕಲ್ಲಾಗಿ ಹೋಗಿದ್ದೀನಿ ಅಂದಳು …
ಕಲ್ಲನ್ನು ಹೂವು ಮಾಡಲು ಬೇಲಿ ಒಳಗೆ ಯಾರು ಬರುವಹಾಗಿಲ್ಲ.ಮೈ ಚಾಯ್ಸ್ ಅಂತ ದೀಪಿಕಾ ಹೇಳೋಹಾಗೆ ಹೇಳುವುದಕ್ಕೆ ಯಾವ ವಿಶ್ವಾಸ, ಧೈರ್ಯ, ಆಯ್ಕೆಗಳು ಮಾಮೂಲಿ ಹೆಣ್ಣುಮಕ್ಕಳ ಎದುರಿಗಿರೋಲ್ಲ ….
ಸರಿ ಹೋಗುತ್ತೆ ಅನ್ನೋಕು ಗಂಟಲೊಳಗಿನ ವಿಶ್ವಾಸ ಮುಂದೆ ಬರಲಿಲ್ಲ ….







ಗೆಳತಿಯರು ವಿಶ್ವಾಸದಿಂದ ಮುಂದೆ ಕಳುಹಿಸಬಹುದು
nimma barahad ashaya pptini adre kevala hennu matra asahayakalu anno nimma vadavannu purnavagi oppo kala idalla. gandasu kooda bali agtidane. adru olleya baraha.
nimma barahada aashaya optidini. adre kevala hennu makkalu matra asahayakaru anno nimma vaadavannu poornavagi oppo kalla idalla madam. nirupisida reeti matra super.
mallikarjun: nija elrugu novu idde irutte …. aadare kelavondu asahaayakathe hennumakkalige.. dhanyavaada