
ಜಿ ಎನ್ ನಾಗರಾಜ್
‘ದಕ್ಷಿಣಾಯನ ‘ ಎಂದು ಹೆಸರಿಡಲಾದ ಮಹಾಯಾತ್ರೆ ಇದು. ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ ಈ ನಾಲ್ಕು ರಾಜ್ಯಗಳ ಸಾಹಿತಿಗಳು, ಭಾಷಾ ಶಾಸ್ತ್ರಜ್ಞರು, ಚಿತ್ರ ಕಲಾವಿದರು, ಚಲನ ಚಿತ್ರ ಕಲಾವಿದರು ಸೇರಿದಂತಹ ಯಾತ್ರೆ ಇದು. ದೇಶದ ಮಹತ್ವದ ಭಾಷಾ ಶಾಸ್ತ್ರಜ್ಞರಲ್ಲೊಬ್ಬರಾದ ಸಾಹಿತಿ ಮತ್ತು ವಿಶ್ಲೆಷಕರಾದ ಡಾ .ಗಣೇಶ್ ದೇವಿ ಯವರು ಈ ಯಾತ್ರೆಯ ಮುಖ್ಯಸ್ಥರು.

ಈ ಎಲ್ಲ ರಾಜ್ಯಗಳ ಸಾಹಿತಿ-ಕಲಾವಿದರನ್ನೂ ಒಗ್ಗೂಡಿಸಿ ಒಂದು ಅಭಿಯಾನ ಕೈಗೊಂಡವರು. ತಮ್ಮ ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಿದವರು. ಇದಕ್ಕಾಗಿಯೇ ಈಗ ಬ್ರಿಟನ್ನಿನಲ್ಲಿದ್ದ ಗುಜರಾತಿ ಕವಿ ಅನಿಲ್ ಜೋಷಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿದವರು, ಮತ್ತೊಬ್ಬರು ಗಿರಿಜನರ ನಡುವೆ ಕೆಲಸ ಮಾಡುವ ಕವಿ ಮತ್ತು ಕಥೆಗಾರ, ಮಹಾರಾಷ್ಟ್ರದಿಂದ ಚಲನ ಚಿತ್ರ ಮತ್ತು ವರ್ಣ ಚಿತ್ರ ಕಲಾವಿದರು ಹೆಚ್ಚಾಗಿದ್ದರು.
ಗೋವಾದಿಂದ ಕೊಂಕಣಿ ಸಾಹಿತ್ಯಕ್ಕೆ ಪಡೆದ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದ ಬೋರ್ಕರ್ , ಕಲಬುರ್ಗಿಯವರೊಡನೆ ವಚನ ಸಾಹಿತ್ಯವನ್ನು ಕೊಂಕಣಿಗೆ ಅನುವಾದ ಮಾಡಲು ಶ್ರಮಿಸಿದವರು, ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ಸು ಮಾಡಿದ ರಹಮತ್ ತರೀಕೆರೆ, ಇತರ ಯುವ ಸಾಹಿತಿಗಳು, ರಾಜ್ಯ ಸಾಹಿತ್ಯ ಅಕಾಡೆಮಿಯ ಯುವ ಬರಹಗಾರ ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಅತ್ಯಂತ ಕಿರಿಯ ಬರಹಗಾರ್ತಿ ಮುದ್ದು ತೀರ್ಥ ಹಳ್ಳಿ ಇವರು.
ಮಹಾರಾಷ್ಟ್ರದ ಧಾಬೋಲ್ಕರ್ ಮತ್ತು ಗೋವಿಂದ ಪಾನ್ಸಾರೆಯವರ ಕುಟುಂಬಗಳನ್ನು ಭೇಟಿ ಮಾಡಿ, ಅವರ ಹುಟ್ಟು ಹಬ್ಬದ ದಿನ ತಮ್ಮ ಸಂತಾಪವನ್ನು ಆಚರಿಸಿ ನಂತರ ಪ್ರೊ. ಕಲಬುರ್ಗಿಯವರ ಹುಟ್ಟು ಹಬ್ಬದ ಹಿಂದಿನ ದಿನ ಧಾರವಾಢಕ್ಕೆ ಬಂದು ಕಲಬುರ್ಗಿಯವರ ಮನೆಗೆ ಭೇಟಿ ಮಾಡಿದರು. ಮುಂದೆ ತಮಿಳುನಾಡು, ಕೇರಳ , ಆಂಧ್ರ ಪ್ರದೇಶ, ತೆಲಂಗಾಣಗಳಿಗೂ ಈ ದಕ್ಷಿಣಾಯನವನ್ನು ಕೊಂಡೊಯ್ಯಲಿದ್ದಾರೆ.
ಇವರು ಪತ್ರಿಕಾ ಗೋಷ್ಠಿಯಲ್ಲಿ ಮತ್ತು ನಂತರ ನಡೆದ ಸಮ್ಮಿಲನದಲ್ಲಿ ಆಡಿದ ಮಾತುಗಳು ಒಂದು ಪುಸ್ತಕ ರೂಪದಲ್ಲಿ ಕನ್ನಡ ಬಲ್ಲ ಎಲ್ಲರಿಗೂ ತಲುಪಬೇಕಾಗಿದೆ. ಇಂದಿನ ಸಂದರ್ಭದಲ್ಲಿ ದೇಶದ ಜನರ ಮುಂದಿರುವ ಕರ್ತವ್ಯಗಳ ಬಗ್ಗೆ ಮನ ಮುಟ್ಟವಂತಹ ಮಾತನಾಡಿದರು.
ಆ ವಿವರಗಳಿಗೆ ಈಗ ಹೋಗದೆ ಅವರು ಮುಂದಿನ ಹೆಜ್ಜೆಯಾಗಿ ಘೋಷಿಸಿದ ಜ. 30ರಂದು ಗಾಂಧಿ ಹುತಾತ್ಮರಾದ ದಿನ ದಾಂಡಿಯಲ್ಲಿ ನಡೆಸಲಿರುವ ಅಸಹನೆಯ ವಿರುದ್ಧ ದೇಶದೆಲ್ಲಾ ರಾಜ್ಯಗಳ ಸಾಹಿತಿಗಳು, ಕಲಾವಿದರು, ಚಲನ ಚಿತ್ರರಂಗದವರು ಹೀಗೆ ಹಲವು ರಂಗದ ಪ್ರಜ್ಞಾವಂತರು ಸೇರಿ ಚಿಂತನ-ಮಂಥನ ನಡೆಸಲಿದ್ದಾರೆ. ದೇಶದೆಲ್ಲ ಕಡೆಗಳಿಂದ ” ದಾಂಡಿ ಚಲೋ” ನಡೆಯಲಿದೆ. ಕರ್ನಾಟಕದ ನಾವೆಲ್ಲರೂ ಇಂದಿನಿಂದಲೇ ದಾಂಡಿಯ ಕಡೆ ನಡೆಯಲು ಸಿದ್ಧರಾಗಬೇಕಾಗಿದೆ.





0 Comments