ಹಸುರು ಕಡ್ಡಿಯ ಸೀರಿ ಟೋಪು ಮುಸುಕು ಮೇಲು ಮಾಡಿ
ಬಿಸಲಿಗೆ ಬೆನ್ನು ಮಾಡಿ ನಡಿಯಂಗಾಗೈತ್ರಿ
ಎನ್ನ ಬಾಲನ್ನ ಬವಿಕ್ಯಾಗ ಬಗಸಂಗಾಗೈತ್ರಿ
ಬಿಳಿಯ ಜೋಳದ ರೊಟ್ಟಿ ಎಣ್ಣೆ ಬದನೆಕಾಯಿ
ಕರದ ಮುರದ ಹಪ್ಪಳ ಸಂಡಿಗೆ ನಂಜಿಕೊಳ್ಳೋ ಉಪ್ಪಿನ ಕಾಯಿ
ಹಳ್ಳಾದ ದಂಡ್ಯಾಗ ಕುಂತ್ಕಂಡು ತಿನ್ನಂಗಾಗೈತ್ರಿ
ಎನ್ನ ಬಾಲನ್ನ ಬಾವಿಕ್ಯಾಗ ಬಗಸಂಗಾಗೈತ್ರಿ
ಅಂತ ಮೈಲವ್ವ ಬೇವಿನ ಕಟ್ಟಿಗೆ ಕೂತ್ಕಂಡು ಕಟ್ಟಿ ಹರಿಗೆ ಅಕಿ ತೋರು ಬೆಳ್ಳಲ್ಲಿ ಗೀಟಾಕ್ತಾ ಇದ್ದಾಗ್ಲೇ ಅಲ್ಲಿಗೆ ಬಂದ ಬುಡೇನಜ್ಜ ‘ಏನ್ಬೇ ಮೈಲವ್ವಾ ಬಸರಿ ಪದ ಹೊಗಿಯಾಕತ್ತೀ ? ಈ ವಯಸ್ಸಿಗೆ ಯಾಕಬೇ ಅವೆಲ್ಲಾ ? ಅಂತ ನಕ್ಕದ್ದಕ್ಕ ಚೊಚ್ಚಲು ಬಸಿರಿದು ನೆಪ್ಪಾತು ಬುಡೋ ಯಪ್ಪಾ. ಅಂತ ತಂಬ್ಲ ಉಗುದ್ಳು.
‘ ನೋಂಬು ಅದೀವಿ ಅಂತಂದು ಬೆಳಗಾ ಮುಂಜಾಲೆ ಗಟ್ಟಿ ಊಟ ಹೊಡದು ಬಂದೀಪಾ, ಮಾತಾಡ್ದ ಇನ್ನೇನು ಮಾಡೀ ?’ ಹಿಂಗ ಕೊಂಕು ಆಡತಿದ್ದಂಗನೇ ದೂರದಲ್ಲಿ ದೊಡ್ಡ ಹೆಜ್ಜೆಯಲ್ಲಿ ಬರ್ತಿದ್ದ ರಾಮಣ್ಣನ್ನ ನೋಡಿ ‘ಅಗೋ ಔನೊಬ್ಬನು ಬಂದ ನೋಡು ಮೂರ್ನು ಬಿಟ್ಟೋನು.’ ಅಂದ್ಳು ಮೈಲವ್ವ.
ಸೀದಾ ಕಟ್ಟಿಗೆ ಬಂದು ಕುಂತ್ಗಂಡ ರಾಮಣ್ಣ, ಏನಬೇ ಮೈಲವ್ವ ರಾತ್ರಿ ನಿಮ್ಮನ್ಯಾಗ ‘ತತ್ತಿ ಸಾರು ಮಾಡಿದ್ರಂತ್ಯ, ನನಿಗೆ ಕೊಡದಂಗ ತಿಂದಿಯಲ್ಲಬೇ ನಿನ್ನ ಹೊಡ್ಲಗಿಷ್ಟು ಪಡ್ಲಿಗಿ ಹಿಡಿಲಿ’ ಎನ್ನುತ್ತಲೇ ‘ಅರ್ಧ ಡಜನ್ ತತ್ತಿ ತಂದಿದ್ವಿ. ಉಣ್ಣಾ ಹೊತ್ತಿನಾಗ ನೀನು ಮನ್ಯಾಗ ಅದಾನೇನೋ ನೋಡ್ಕಂಬಾ ಅಂತ ನಮ್ಮ ಮೊಮ್ಮಗನ್ನ ಕಳಿಸಿದ್ಯ, ನೀನಲೆ ಕಟ್ಟಿ ಮ್ಯಾಲ ಮಕ್ಕಂಡಿದ್ದೆಂತೆ ಅದ್ಕ ಸುಮ್ಮನಾದೆ ಬೇಕಾರ ರಾತ್ರಿಗೆ ತರ್ಸಿ ಮಾಡಸಾನು ಬುಡು ಅದೇನು ದೊಡ್ಡದು’. ಅಂದಳು.
ಮೈಲವ್ವನ ಮಾತು ಕೇಳಿದ ರಾಮಣ್ಣ ‘ನಸುಪುಡಿ ಇದ್ರ ತಿಕ್ಕಳಬೇ ನಿನ್ನಾಪ್ನ ನಾನೊಂದು ಚುಟ್ಟ ಎಳಿತೀನಿ’ ಎಂದು ಬೀಡಿ ಸುಡುತ್ತಲೇ ಓಡಿ ಬಂದ ಮೈಲವ್ವನ ಮನಿಯ ಮಗ್ಗಲು ಮನಿಯ ಜುಮ್ಮಣ್ಣರ ಮಂಜ ‘ಯಮ್ಮಾ ಯಮ್ಮಾ, ನಿಮ್ ಮನಿಯಾಕ ಕಾಗಿ ಒಕ್ಕೈಂಡು ಬುಡ್ತಮೋ, ಮಗ್ಗಲು ಮನಿಯಾರು, ಮನಿ ಹೊಕ್ಕ ಕಾಗಿನ ಹೊರಗ ಬಿಡಬ್ಯಾಡಲೋ ತಮ್ಮಾ ಕದ ಮುಚ್ಚಿ ಅಲ್ಲಿ ಕರಿಯವ್ವನ ಗುಡಿತಾವ ಆ ಬೇವಿನ ಕಟ್ಟಿಗೆ ಆ ಮುದುಕಿ ಮೈಲವ್ವ ಕುಂತಿರತೈತಿ ಕರಕಂಡು ಬಾ ಅಕಿಗೆಲ್ಲಾ ಗೊತ್ತಾಕ್ಕೈತಿ ಅಂದ್ರು ಅದ್ಕಾ ಕಾಗಿನ ಒಳಗಾ ಬಿಟ್ಟು ಕದ ಮುಚ್ಚಿ ಬಂದೀನಿ ಬಾ’ ಅಂತ ಜೋರು ಕೂಗಿದ.
ಮಂಜನ ಮಾತು ಕೇಳಿದ ಮೈಲವ್ವ ‘ಬಂದ್ನೆಡಿಯಲೋ’ ಅಂತೇಳಿ ರಾಮಣ್ಣನ ಕಡಿಗೆ ತಿರುಗಿ ‘ರಾಮಣ್ಣಾ, ರಾತ್ರಿಗೆ ತತ್ತಿ ಸಾರು ಬೇಕು ಅಂದಿದ್ದೆಲ್ಲಾ, ಚಿಕನ್ ಮಾಡ್ಲೇನು ?’ ಅಂದ್ಳು. ಮೈಲವ್ವನ ಮಾತು ಕೇಳಿದ ಬುಡೇನಜ್ಜ ‘ ಉಪಾಸ ಇದ್ದೋರ ಮುಂದ ಎಂಥಾ ಮಾತಾಡ್ತಿಬೇ ಇದನ್ನ ನಮ್ ಅಲ್ಲಾ ಒಪ್ಪಲ್ಲ ಬಿಡಬೇ’ ಅಂದ. ಬುಡೇನಜ್ಜನ ಮಾತು ಕೇಳಿದ ಮೈಲವ್ವ ‘ಪಾಪದ ಪಕ್ಷಿ ಮ್ಯಾಲ ಯಾಕ ನಮ್ ಕೆಟ್ ಕಣ್ಣು ?, ಬರ್ರೆಪ್ಪೋ ನೋಡ್ಕಂಡು ಬರಾನು ಅದೇನಾಗೈತೋ’ ಅಂತೇಳಿ ಮೂರೂ ಜನ ಕಟ್ಟಿಯಿಂದ ಎದ್ದು ಬಂದು ಮೈಲವ್ವನ ಮನಿಮುಂದ ನಿಂದ್ರಷ್ಟತ್ತಿಗೆ ಅಕಿ ಮನಿ ಮುಂದ ಬಾಳ ಜನ ಸೇರಿದ್ರು.
ಅಂಗಳದ ತುಂಬ ಸೇರಿದ ಮಂದಿಯೊಳಗ ಒಬ್ಬಾಕಿ ‘ ಬೇ ಮುದುಕಿ, ನಿಮ್ಮನಿಗೆ ಏನಾ ಅನಿಷ್ಟ ಕಾದೈತಬೇ ಕರ್ರನ ಕಾಗಿ ಹೊಕ್ಕು ಕಾ…ಕಾ ಅನ್ನಾಕತೈತಿ. ಅದನ್ನ ಹಂಗ ಗಪ್ ಅಂತ ಹಿಡುದು ನಡೋ ಮನಿಯಾಗ ಹುಗುದು ಮನಿ ದೇವ್ರಿಗೆ ಹೋಗಿ ಬರ್ರೆಬೇ. ಹೇಳು ನಿಮ್ಮ ಮಕ್ಳೂ, ಸೊಸ್ತ್ರಿಗೆ’ ಅಂದಳು. ಆಯಮ್ಮನ ಮಾತು ಕೇಳಿದ ಮೈಲವ್ವ ‘ಹೇಸಿಗಿ ತಿನ್ನೋ ಎಮ್ಮಿ ಹಾಲಾಗ ಚಾ ಮಾಡಾಲೇನು ನೀವು ? ನಿಮ್ಮ ಪಿಂಡಾನ ಸುಡುಗಾಡಾಗ ನೌಲು ಬಂದು ತಿಂದು ಮುಕುತಿ ಕೊಡ್ತೈತೇನು ? ಏನೋ ಮುಂಜಾಲೆ ಬಾಗಲ ಮುಂದ ಕುಂತ್ಕಂಡು ಉಂಡೆದ್ದು ಹೋಗಕರ ಮೈ ಮರತು ಚೆಲ್ಲಿದ ಅನ್ನದ ಅಗಳನ್ನ ವಾಣಾ ಮಾಡದ ಹಂಗಾ ಕರಿಯವ್ವನ ಗುಡಿತಾವ ಕದ ಮುಂದುಕ್ಕ ಮಾಡಿ ಹೋಗಿದ್ದೆ. ಬಿದ್ದಿರೋ ಅನ್ನದ ಅಗಳು ಈ ಕಾಗಿಗೆ ಕಂಡೈತಿ ಅದಕ್ಕಾ ಒಳಕ ಹೋಗೈತಿ. ಯಾದು ಒಳ್ಳೇದು ಯಾದು ಕೆಟ್ಟದ್ದು ಅಂತ ನಮ್ ಮನಿದೇವ್ರಿಗೆ ಗೊತ್ತೈತಿ ಜಾಗ ಕಾಲಿ ಮಾಡು ಮೊದ್ಲು ಇಲ್ಲಿಂದ’ ಅಂತ ಸಿಟ್ಟಿಲೆ ಬೈಯುತ್ತಲೇ ಎಲ್ಲರೂ ‘ತಿಳಿಗೇಡಿ ಮುದುಕಿ ಸುಮ್ನ ವಯಸ್ಸು ಗಳಿಸೈತಿ ಕತ್ತಿ ಗಳಿಸಿದಂಗ, ಬಂದದ್ದು ಅನುಭವಿಸ್ಲಿ ಬುಡು ನಮಿಗ್ಯಾಕ?’ ಅಂದ್ಕೊಂಡು ಎಲ್ಲರೂ ಚದುರಿದ್ರು.
ಮೆಲ್ಲಕ ಮನಿ ಕದ ತೆಗದ ಮೈಲವ್ವ ಮನಿಯೆಲ್ಲಾ ಹುಡುಕಿದ್ರೂ ಕಾಗಿನಾ ಕಾಣದ್ದು ಕಂಡು ‘ಏ ರಾಮಣ್ಣ ಲೈಟ್ ಹಾಕ್ತಿನಿ ಕಾಗಿ ಎಲೈತಿ ನೋಡು ಬಾರೋ ನಿನ್ನಾಪ್ನ’ ಅನ್ನುತ್ತಲೇ ‘ಹೊಗ್ಗಾ ಇವ್ನ’ ಅಂದ್ಕೋತ ರಾಮಣ್ಣ, ಬುಡೇನಜ್ಜ ಮೈಲವ್ವನ ಮನಿಯೊಳಕ ಬಂದು ಹುಡುಕಿದ್ರ, ಆ ಕಾಗಿ ಮೈಲವ್ವನ ಮನಿಯ ಜಗಲಿ ಮ್ಯಾಗಿದ್ದ ದೊಡ್ಡ ದೇವರ ಫೋಟೋದಿಂದೆ ಅವುತು ಕುಂತಿತ್ತು. ಕಾಗಿಯ ಪುಕ್ಕ ನೋಡಿದ ಬುಡೇನಜ್ಜ ‘ಏ ರಾಮಣ್ಣ ಅಗೋ ಆ ಫೋಟೋದಿಂದೆ ಐತಿ ನೋಡು’ ಅನ್ನುತ್ತಲೇ ಮೆಲ್ಲಗೆ ಆ ಕಾಗೆನ್ನ ಹಿಡದ ರಾಮಣ್ಣ ಮನಿಯಿಂದ ಹೊರ ಬಂದ.
ರಾಮಣ್ಣನ ಹಿಂದೆನೇ ಮೈಲವ್ವ, ಬುಡೇನಜ್ಜನೂ ಬಂದ್ರು. ಹಂಗ ಅಂಗಳಕ್ಕ ಬಂದ ಮೂರೂ ಜನರ ನಡುವಿದ್ದ ರಾಮಣ್ಣ ಮುಗಿಲಿಗೆ ಮುಖ ಎತ್ತಿ ಕೈಲಿದ್ದ ಕಾಗೆನ ಮುಗಿಲಿಗೆ ತೂರಿ ಹಾರಿ ಹೋದ ಕಾಗಿನ ನೋಡ್ತಾ ‘ನಿಮ್ಮನ್ಯಾಗಿದ್ದ ಎಲ್ಲಾ ಅನಿಷ್ಟಾನೂ ಮುಗಿಲಿಗೆ ಹೋತು ಬಿಡಬೇ ಮೈಲವ್ವ’ ಅಂದ. ರಾಮಣ್ಣನ ಮಾತು ಕೇಳಿದ ಮೈಲವ್ವ ‘ಅಯ್ಯ ಹಾಳಾದನೇ, ನನ್ನ ಮನಿ ಅನಿಷ್ಟ ಕಷ್ಟ ಪಟ್ಟು ದುಡುದು, ಇಷ್ಟ ಪಟ್ಟು ಉಳಿಸಿದ್ರ ತಾನಾ ಹೊಕ್ಕೈತಿ ನಮ್ ಎಡವಟ್ಟನ್ನ ಪಾಪ ಆ ಕಾಗಿ ಮ್ಯಾಲ ಯಾಕ ಹೊರಸ್ತಿ, ಕಟ್ಟಿಗೆ ಹೋಗನೆಡ್ರಿ ಬೇವರ್ಸಿನ ತಂದೊಯ್ದು.’ ಎನ್ನುತ್ತಾ ಮತ್ತೆ ತಮ್ಮ ಮಾಮೂಲಿ ಪ್ಲೇಸಿಗೆ ಬಂದು ಕುಂತಾಗ…

ತಲಿ ಕೆರಕೋತ ಬುಡೇನಜ್ಜ ‘ಅಲ್ಲಬೇ ಮೈಲವ್ವ ಮನ್ನೆ ನಮ್ಮ ಸಿಎಂ ಕಾರ್ ಮ್ಯಾಲ ಕಾಗಿ ಕುಂತದ್ಕ ಕಾರಾ ಚೇಂಜ್ ಮಾಡಿದ್ರಂತಲ್ಲಬೇ?’ ಅಂತ ಕೇಳುತ್ತಲೇ ನಡುವೆ ಬಾಯಿ ಹಾಕಿದ ರಾಮಣ್ಣ. ‘ಕಾಗಿ ಕುಂದ್ರಾಕು, ಕಾರ್ ಚೇಂಜ್ ಮಾಡಾಕು ಸಂಬಂದನಾ ಇಲ್ಲ ಅಂತ ಔರಾ ಹೇಳಾರಲ್ಲ ಮಾರಾಯಾ ಪೇಪರ್ ನೋಡಿಲ್ಲೇನು ನೀನು’ ಅನ್ನುತ್ತಲೇ ಹುಲ್ಲಿನ ಹೊರಿ ಹೊತ್ಕಂಡು ಹೊಲದಿಂದ ಹೊಳ್ಳಿ ಮನಿಕಡಿಗೆ ಬರ್ತಿದ್ದ ಗದ್ದಿಕೇರಿ ಹನುಮವ್ವನ ಹೊರಿ ಕಳಚಿ ಬಿತ್ತು. ಹುಲ್ಲೆಲ್ಲ ಚೆಲ್ಲಾಪಿಲ್ಲಿ ಆಯ್ತು. ಇದನ್ನ ನೋಡಿದ ಮೈಲವ್ವ ಅಲ್ಲೇ ಹೋಗ್ತಿದ್ದ ಗೌರಮ್ಮನೋರ ದೇವಪ್ಪನ ಕೂಗಿ ‘ಲೋ ತಮ್ಮಾ ಬಾರಪೋ ಇಲ್ಲಿ ಆ ಹನುಮವನ್ನ ಹುಲ್ಲಿನ ಹೊರಿ ಕಟ್ಟಿ ಕೊಡು ಪುಣ್ಯ ಬರತೈತಿ ನಿನಗೀಟು’ ಅಂದ್ಳು.
ಮುದ್ಕಿಯ ಮಾತು ಕೇಳಿದ ದೇವಪ್ಪ ಬಂದು ಚೆಲ್ಲಾಪಿಲ್ಲಿಯಾಗಿದ್ದ ಹುಲ್ಲನ್ನೆಲ್ಲಾ ಜೋಡಿಸಿ ಮದ್ಲಾ ಕಟ್ಟಿದ್ದ ದಾಗಡಿ ಬಳ್ಳಿಯಿಂದನಾ ಹೊಳ್ಳಿ ಹೊರಿ ಕಟ್ಟಿ ಹನುಮವ್ವನ ತಲಿ ಮ್ಯಾಕಿಟ್ಟು ಮುಂದಕ್ಕೋದ. ಅದೇನು ನೆನಪಾತೋ ನಮ್ ರಾಮಣ್ಣಗ ‘ಸಾಬಣ್ಣ, ಮನ್ನೆ ಜೆಡಿಎಸ್ ನಿಂದ ಎಂಟು ಮಂದಿ ಸೆಟಗಂಡಿದ್ರಂತ, ಅದ್ಕ ಸಿಟ್ ಬಂದು, ನೀವು ನಮ್ ಪಕ್ಷಕ್ಕಾ ಬರಬ್ಯಾಡ್ರಿನ್ನು ಅಂತ ದೊಡ್ಡ ಧಣಿ ಎಂಟು ಮಂದಿನ ಹೊರಗ ಹಾಕಿದ್ಕ, ನಿಮ್ಮದೊಂದಾ ಪಕ್ಷ ಇಲ್ಲೋಗ್ರೀ ಜಗತ್ತಿನಾಗ ಅಂತ ಔರೂ ಸೆಡ್ಡು ಹೊಡದಾರಲ್ಲ ಗೊತ್ತೇನು ನಿನಿಗೆ ?’ ಅಂತ ಕೇಳುತ್ತಲೇ ನಡುಕ ಬಾಯಿ ಹಾಕಿದ ಮೈಲವ್ವ ‘ಯಪ್ಪಾ ಹೋಗೋರು ಹೋಗ್ಲಿ ಇರೋರು ಇರ್ಲಿ, ಔರು ಹೋಗಿದ್ಕ ನಮ್ ಹೊರಿ ಕಮ್ಮಿ ಆತು’ ಅಂತ ಎಷ್ಟು ಜನ ಅಂದ್ಕಂಡಾರೇನೋ ಬುಡು, ಅದಿರ್ಲಿ, ಈಯಪ್ಪ ವಿಜಯ್ ಮಲ್ಯನ ಸಾಲದ ಗತಿ ಏನಾತು ?’ ಅಂತ ಕೇಳಿದ್ಳು.
ಮೈಲವ್ವನ ಮಾತಿಗೆ ‘ಈ ಬ್ಯಾಂಕಿನೋರು ಬಡವ್ರು, ರೈರ್ತ ಹತ್ರಾ ಅಷ್ಟಾಬೇ ಪೌರುಷ ತೋರಸೋದು. ದೊಡ್ಡೋರ ಮುಂದ ಏನೂ ನಡಿಯಲ್ಲ. ಸಾಲಕ್ಕ ಆಸ್ತಿ ಜಪ್ತಿ ಮಾಡ್ತೀವಿ ಅಂತ ಒಂದೈದು ಪೈಸೆಯಷ್ಟು ಮುಟ್ಟುಗೋಲು ಹಾಕ್ಕಂತಿದ್ದಂಗನಾ, ಉಳದ ಆಸ್ತಿನಾ ಫಾರಿನ್ನಾಗಿದ್ಕಂಡಾ ಮಾರಿ ಮಜಾ ಮಾಡಕತ್ತಾನ. ಹೆಂಗದಾನ ಭೂಪ. ಸುಮ್ನ ಜುಜುಬಿ ಲಕ್ಷಗಟ್ಲೆ ಸಾಲ ಕಟ್ಟಕ್ಕಾಗ್ದ ಮರ್ಯಾದಿಗಂಜಿ ನಮ್ ಸ್ವಲ್ಪ ರೈತ್ರು ಮಣ್ಣಾಗಿ ಹೋದ್ರು. ಈ ಯಪ್ಪನ್ನ ನೋಡ್ಯಾರ ಧೈರ್ಯ ತಗಾಣಾದು ಬ್ಯಾಡೇನು. ಅದ್ಯಾವಾಗ ಬುದ್ದಿ ಕಲಿತಾವೋ ನಮ್ ದಡ್ಡ ಜನಗಳು’. ಅಂತನ್ನುತ್ತಲೇ ‘ಮನಿಗೆ ಬೀಗ್ರು ಬಂದಾರ ಬಾ’ ಅಂತ ರಾಮಣ್ಣಗ ಕರೆ ಬಂತು. ತಡ್ರೆಪೋ ಹಿಂಗ ಹೋಗಿ ಹಂಗ ಬರ್ತೀನಿ ಅಂತ ರಾಮಣ್ಣ ಹೋದ.
‘ನೀನಂತೂ ಉಪಾಸ ಅದೀಪಾ ರಾಮಣ್ಣ ಬರೋದ್ರಾಗ ನಾನೀಟು ಏನರಾ ಹೊಟ್ಟಿಗೆ ಹಾಕ್ಕಂಡು ಬರ್ತೀನಿರು’ ಅಂತ ಮೈಲವ್ವ ಹೋದ್ಳು. ಹೆಂಗೂ ನಮ್ಹಾಜ್ ಟೈಂ ಆತು ಇಬ್ಬರೂ ಬರೋದ್ರಾಗ ಮಸೀದಿಕಡೆ ಹೋಗಿ ಬರೋನು ಅಂತ ಬುಡೇನಜ್ಜ ಹೋದ.





Mailavva,ramanna konedagi budenajja bhari chenda hesara ittiri nodri Sierra neevu bhala chalo baritiri hinga sagalri nimma baravanigi doni
ವಿಷಯದ ಜೊತೆಯಲ್ಲಿ ಭರ್ಜರಿ ಆಡುಭಾಷೆ ಹೊಸ ಅನುಭವ ಕೊಡುತ್ತಿದೆ. ಮೊದಲ ಕಂತಿನಲ್ಲಿ ಎರಡು ಕಾಗೆ ಕೂತಿವೆ ! ಶುಭವಾಗಲಿ !!