ಕಬ್ಬನ್ ಪಾರ್ಕ್ ನ ಸೆಳೆತ ನನಗೆ ಪ್ರತಿರೋಧಿಸುವುದಕ್ಕೆ ಆಗದ ಹಾಗಾಗಿದೆ. ಸ್ವಲ್ಪ ಬಿಡುವು ದೊರೆತರೆ ಸಾಕು ಮನಸ್ಸು ಅಲ್ಲಿಗೆ ಎಳೆಯುತ್ತದೆ. ಈ ದಿನ ಬೆಳಿಗ್ಗೆ ಇದ್ದ ಒಂದೆರಡು ಸಣ್ಣಪುಟ್ಟ ಕೆಲಸಗಳನ್ನು ಮುಂದಕ್ಕೆ ಹಾಕಿ ಹೋಗಿಬಿಡಬೇಕೆಂದುಕೊಂಡರೆ ಮೋಡ ಮುಸುಕಿಕೊಂಡಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಸೂರ್ಯ ಕಾಣಿಸಿಕೊಂಡ. ಹೊರಟೆ. ಮಹಾತ್ಮ ಗಾಂಧಿ ರಸ್ತೆ ಕಡೆಯಿಂದ ಪ್ರವೇಶಿಸಿದರೆ ಬಾಲಭವನದ ಹೊರದ್ವಾರ ಆದ ನಂತರ ಬಲಕ್ಕೆ ಒಂದು ಕೊಳವಿದೆ. ಅಲ್ಲಿ ಹಲವಾರು ನೀರಹಕ್ಕಿಗಳಲ್ಲದೆ ಅಲ್ಲಿರುವ ಬೊಂಬು ಮೆಳೆಗಳಲ್ಲಿ ಇತರ ಪ್ರಾಣಿ ಪಕ್ಷಿಗಳು ಕಾಣಿಸಿಕೊಳ್ಳುತ್ತವೆ.

ಈ cormorant ಅಥವ ನೀರು ಕಾಗೆ ಅನ್ನೊ ಕಪ್ಪು ಬಣ್ಣದ ಪಕ್ಷಿ, ನೀವು ತಾಳ್ಮೆಯಿಂದ ಸ್ವಲ್ಪ ಹೊತ್ತು ಗಮನಿಸಿದರೆ ಅಲ್ಲಿನ ಯಾವುದಾದರೂ ಮರದ ಟೊಂಗೆಯ ಮೇಲೋ ನೀರಿನ ಮೇಲೆ ಚಾಚಿಕೊಂಡಿರುವ ಬಿದಿರಿನ ಮೇಲೋ ತುಂಡಾಗಿ ನೀರಿಗೆ ಬಿದ್ದು ಅರ್ಧ ಮುಳುಗಿ ಅರ್ಧ ತಲೆಯೆತ್ತಿರುವ ಬೊಂಬಿನ ಮೇಲೋ ಈ ನಮ್ಮ ಬೆಂಗಳೂರಿನ ಎಲ್ಲಿಗೆ ಕರೆದರೂ ಬರುವುದಿಲ್ಲ ಎನ್ನುವ ಸೋಂಬೇರಿ ಆಟೋ ಡ್ರೈವರ್ ತರ ಕುಳಿತಿರುತ್ತದೆ. ಬೀಡಿ ಸಿಗರೇಟಿಗೋ ಟೀಗೋ ಹೋಗಿ ಬಂದಂತೆ ಹಾಗೆ ಹೋಗಿ ಹೀಗೆ ಬಂದು ಪುನಃ ಅಲ್ಲೇ ಠಿಕಾಣಿ ಹಾಕುತ್ತದೆ. ಇವರು ಅಲ್ಲಿಗೆ ಹೋದಾಗಲೆಲ್ಲ ಕಾಣಿಸಿಕೊಳ್ಳುವವರು. (ನಾ ಹೋದಾಗೆಲ್ಲ ಕಾಣಸಿಗುವ ಇದು ಒಂದೇ ಪಕ್ಷಿಯೋ ಅಥವಾ ಬೇರೆ ಬೇರೆ ಇರಬಹೋದೊ ನನಗೆ ತೀಳಿದಿಲ್ಲ)

ಈವತ್ತು ಅಂದರೆ ಭಾನುವಾರ ನಾನು ಎಂದಿನ ಸ್ಪಾಟ್ ಗೆ ಹೊಗದೇ ಬಾಲಭವನ ದಾಟಿದ ತಕ್ಷಣ ಬಲಕ್ಕೆ ಇರುವ ಮಂಟಪಕ್ಕೆ ಹೋದೆ. ಅಲ್ಲಿ ಇಬ್ಬರು ಹುಡುಗರು ನೀರಿನೊಳಗೆ ಇರಬಹುದಾದ ಏನನ್ನೋ ನಿರುಕಿಸುತ್ತ “ಅಂಗೆ ಪಾರು. ಅಂಗೆ” ಎಂದು ಅರಚಾಡುತ್ತಿದ್ದರು. ಹೋಗಿ ಅವರು ನಿರುಕಿಸುತ್ತಿದ್ದ ಕಡೆ ನಾನೂ ನಿರುಕಿಸಿ, ಏನೂ ಕಾಣದೆ, “ಏನ್ರೋ ಅದು” ಎಂದೆ. “ಸ್ನೇಕ್ ಅಂಕಲ್. ಅಲ್ಲಿ ನೀರಲ್ಲಿ yellow snake ಇದೆ. ನೋಡಿ ಅಲ್ಲಿ… ಅಲ್ಲಿ” ಎಂದರು. ಅವರು ತೋರಿಸಿದ ಕಡೆ ನಿರುಕಿಸಿದೆ. ಏನೂ ಕಾಣಲಿಲ್ಲ. ನಮ್ಮ ಆಟೋ ಡ್ರೈವರ್ ಅಲ್ಲೆಲ್ಲಾದರೂ ಕಾಣ ಬಹುದಾ ಅಂತ ಹುಡುಕಾಡಿದರೆ, ಎಡಗಡೆ ದಂಡೆಯಲ್ಲಿ ಒಂದು ಪಕ್ಷಿ ಕಾಣಿಸಿತು. (ಕೆಬ್ಬೆ ಕೊಕ್ಕರೆ?) ಗಲಾಟೆ ಮಾಡ ಬೇಡಿ ಅಂತ ಅವರಿಗೆ ತಾಕಿತು ಮಾಡಿ ಕ್ಯಾಮೆರಾ ಹೊರತೆಗೆದೆ. ಅವರು ಮಕ್ಕಳು. ನನ್ನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಗಲಾಟೆ ಮಾಡುತ್ತಲೇ ಇದ್ದರು. ಆ ಪಕ್ಷಿಯೂ ಕ್ಯಾರೇ ಅನ್ನದೆ ಹುಳು ಹಿಡಿಯುವ ತನ್ನ ಕಾಯಕದಲ್ಲಿ ಮಗ್ನವಾಗಿತ್ತು. ಒಂದಷ್ಟು ಕ್ಲಿಕ್ಕಿಸಿದೆ.

ಅಷ್ಡರಲ್ಲಿ ಆ ಹುಡುಗರು ಮಂಟಪದಿಂದ ಇಳಿದು ನೀರಿನಲ್ಲಿ ಆಟ ಆಟ ಆಡ ತೊಡಗಿದ್ದರು.
ಮೊದಲ ಚಿತ್ರದಲ್ಲಿ ಕಾರುಗಳಿವೆಯಲ್ಲ. ಆ ಕಡೆ ಇರುವುದೇ ನಾನು ಹೇಳುತ್ತಿರುವ ಕೊಳ. ಎಡಗಡೆಯಿರುವ ಬೊಂಬು ಮೆಳೆಯ ಬಳಿ ಅಸಂಖ್ಯ ಬಿಲಗಳಿರುವ ಪುಟ್ಟ ದಿಬ್ಬದಂಥ ಜಾಗವಿದೆ. ತಂತಿ ಬೇಲಿಯ ಈ ಕಡೆ ನಾವು, ಆ ಕಡೆ ಡಝನ್ ಗಟ್ಟಲೆ ಅಳಿಲುಗಳು ಬಿಲದಿಂದ ಹುಳುಗಳನ್ನೊ ಅಥವಾ ಪ್ರವಾಸಿಗರು ಎರಚಿರುವ ತಿಂಡಿಗಳನ್ನೋ ಮುಂಗಾಲುಗಳಲ್ಲಿ ಹಿಡಿದು ಬಾಯಿಯ ಬಳಿಕೊಂಡೊಯ್ದು ಕರಕರಕರ ಅಂತ ಮೆಲ್ಲುತ್ತಿರುತ್ತವೆ.

ನಿಂತಲ್ಲಿ ನಿಲ್ಲುವುದಿಲ್ಲ. ಯಾರಾದರೂ ಬೇಲಿಯ ಈಚೆಯ ಫುಟ್ ಪಾತಿಲ್ಲಿ ಹಾದರೆ ಸಾಕು ಪುಸುಕ್ ಅಂತ ಬೊಂಬು ಮೆಳೆಯ ಕಡೆ ಓಡುತ್ತವೆ. ಹಾಗೆ ಓಡಿ ಮೆಳೆಯಲ್ಲಿ ಓಡಾಡುತ್ತಿದ್ದ ಒಂದು ಅಳಿಲೇ ಈ ಚಿತ್ರದಲ್ಲಿದೆ.

ಈ ಅಳಿಲಿನ ಚಿತ್ರ ತೆಗೆಯುತ್ತಿದ್ದಾಗ ಅದೇ ಮೆಳೆಯಲ್ಲಿ ಕಂಡ ಪಕ್ಷಿ ಚಿತ್ರ ಇರಲ್ಲಿದೆ.
ಸ್ವಲ್ಪ ಸಮಯ ಸಿಗರೇಟು ಸೇದದಿದ್ದರೆ ನನಗೆ ಏನೂ ಮಾಡಲಾಗುವುದಿಲ್ಲ.(ಸಿಗರೇಟು/ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಲೇಖಕ ಇಲ್ಲಿ ಅಂಥ ಚಟವನ್ನು ಯಾವುದೇ ರೀತಿ ವೈಭವೀಕರಿಸುತ್ತಿಲ್ಲ ಮತ್ತು ಪ್ರಚಾರ ಮಾಡುತ್ತಿಲ್ಲ.) ಹೀಗಾಗಿ ಪ್ರೆಸ್ ಕ್ಲಬ್ ಕಡೆ ಹೋಗಿ BSNL ಬಳಿ ಮೆಟ್ರೊ ಸುರಂಗ ಕಾರ್ಯ ನಡೆಯುತ್ತಿರುವ ಕಡೆ ಬೇರೆಯವರ ಆರೋಗ್ಯಕ್ಕೆ, ಮನಸ್ಸಿಗೆ ತಂದರೆಯಾಗುವುದಿಲ್ಲ ಎನ್ನ ಬಹುದಾದ ತಾವೊಂದರಲ್ಲಿ ಸೇದುತ್ತಿದ್ದೆ. ಎದುರುಗಡೆ ಲೈಟ್ ಕಂಬದ ತುದಿಯಲ್ಲಿ ಒಂದು ಹದ್ದು ಕುಳಿತಿತ್ತು. ಸಿಗರೇಟು ಬಿಸಾಕಿ ಅದಕ್ಕೆ disturb ಮಾಡಬಾರದು ನನಗೆ ಫೋಟೋ ತೆಗೆಯಲು ಸರಿಯಾದ ಕೋನ ಹಾಗು ಹತ್ತಿರವೂ ಆಗುವಂಥ ಜಾಗಕ್ಕೆ ಹೋಗಿ ಕ್ಯಾಮೆರಾ ತೆಗೆಯುತ್ತಿದ್ದಂತೆ ಅದು ಪಾರ್ಕಿನ ಕಡೆ ಹಾರಿ ಹೋಯಿತು. ನಿಂತಲ್ಲೆ ಕತ್ತು ತಿರುಗಿಸುತ್ತಾ ನೋಟದಲ್ಲೇ ಅದನ್ನು ಹಿಂಬಾಲಿಸಿದೆ.

ಅಲ್ಲೊಂದು ಕೊಂಬೆಯ ಮೇಲೆ ಕುಳಿತಿತು. ಅದರ ದಿಕ್ಕಿಗೆ ಸಾಗಿ ಸಾಕಷ್ಟು ಹತ್ತಿರ ಬಂದೆ ಎಂದು ತಯಾರಾಗುವುದರಲ್ಲಿ ಪುನಃ ಅಲ್ಲಿಂದ ಹಾರಿ ಇನ್ನೊಂದು ಮರದ ಮೇಲೆ ಕುಳಿತಿತು. ಬೇರೆ ಕಡೆ ಹೋಗುವವನಂತೆ ಬಳಸಿ ನಿಧಾನಕ್ಕೆ ಹತ್ತಿರ ಹೋದೆ. ಚಿಕ್ಕ ಮಕ್ಕಳನ್ನು ದೊಡ್ಡವರು ಉದಾಸೀನ ಮಾಡುವ ಭಂಗಿಯಲ್ಲಿ ಏಳೆಂಟು ಫೋಟೋಗಳನ್ನು ತೆಗೆದುಕೊಳ್ಳಲು ಅವಕಾಶ ಕೊಟ್ಟಿತು.

ಪುನಃ ವಾಪಾಸುಕೊಳದ ಬಳಿ ಬಂದಾಗ ಬೊಂಬಿನ ಮೆಳೆಯಲ್ಲಿ ಸಿಕ್ಕಿದ್ದು ಈ ಚಿತ್ರದಲ್ಲಿದೆ.

ಈ ಚಿತ್ರದರಲ್ಲಿರುವ ಪಕ್ಷಿ ಕಳ್ಳ ಹೆಜ್ಜೆ ಇಡುತ್ತ ನೀರಿನಲ್ಲಿ ಡುಬುಕ್ ಅಂತ ಮುಳುಗಿ, ಎದ್ದು, ಅಕ್ಕ ಪಕ್ಕ ಓಡಾಡಿ ಒಳ್ಳೆ ಶೋ ಕೊಟ್ಟತು. ಇದರ ತಲೆಯ ಹಿಂದೆ antennaದಂಥ ಎರಡು ಕಡ್ಡಿಗಳಿವೆ.

ಎರಡನೆಯ ಸಾರಿ BSNL ಕಡೆ ಹೋದಾಗ ಕಾಂಪೌಂಡಿನ ಮೇಲೆ ಚೆಲ್ಲಿದ್ದ ಅನ್ನವನ್ನು ಭಕ್ಷಿಸುತ್ತಿರುವ ಎರಡು ಗಿಣಿಗಳು ಸಿಕ್ಕವು.

ವಾಪಾಸ್ಸು ಕೋಳದ ಬಳಿಯ ಮೆಳೆಯಲ್ಲಿ ಸಿಕ್ಕವರು ಈ ಚಿತ್ರದಲ್ಲಿದ್ದಾರೆ.
ಇನ್ನೂ ಪಕ್ಷಿಗಳನ್ನು ಗುರುತಿಸುವ ಕಲಿಕೆ ನಡೆಸಿದ್ದೇನೆ. ಗೊತ್ತಿರುವವರು ಗುರುತಿಸಿದರೆ ಉಪಯೋಗವಾಗುತ್ತದೆ.

ಕೊನೆಯ ಚಿತ್ರ ಕೊಳದ ಇನ್ನೊಂದು ಕಡೆಯಿಂದ ತೆಗೆದಿರುವುದು
ಕಬ್ಬನ್‌ಪಾರ್ಕಿನಲ್ಲಿ ಪರಮೇಶ್ವರ್ ಕ್ಯಾಮೆರಾಗೆ ಕಂಡ ಮುಖಗಳು
ನಿಮಗೆ ಇವೂ ಇಷ್ಟವಾಗಬಹುದು…





super
kabban parkalli eneno nodidavarige nimma photogalu innu munde namma noduva anglennu change madive..nice sir