ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಜೋಗಿ ಬಹಿರಂಗ ಪತ್ರ

ಜೋಗಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ,

ಕಳೆದ ಮೂರು ವರ್ಷಗಳಿಂದ ತಾವು ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದನ್ನು ನೋಡಿದ್ದೇನೆ. ಕಳೆದ ಸುಮಾರು 25 ವರ್ಷಗಳಿಂದ ಪ್ರತಿವರ್ಷವೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿರುವ ನನಗೆ ನಿಮ್ಮ ಶ್ರಮದ ಅರಿವೂ ಇದೆ. ಮೂಡುಬಿದರೆಯ ಅತ್ಯಂತ ಅಚ್ಚುಕಟ್ಟು ಸಮ್ಮೇಳನವನ್ನೂ ಗಂಗಾವತಿಯ ಪ್ರಖರ ಸಮ್ಮೇಳನವನ್ನೂ ಕನಕಪುರದ ಜನಪ್ರಿಯ ಸಮ್ಮೇಳನವನ್ನೂ ಬೆಂಗಳೂರಿನಲ್ಲಿ ನಡೆದ ಸಪ್ಪೆ ಸಮ್ಮೇಳನವನ್ನೂ ತುಮಕೂರಿನ ಸೊಗಸಾದ ಸಾಹಿತ್ಯ ಸಮ್ಮೇಳನ, ಶ್ರವಣ ಬೆಳಗೊಳ, ಮೈಸೂರು, ಬೀದರ್, ಮಡಿಕೇರಿಯ ಸಮ್ಮೇಳನಗಳನ್ನೆಲ್ಲ ನೋಡಿದ ನಂತರ ಪರಿಷತ್ತಿನ ಅಧ್ಯಕ್ಷರುಗಳಿಗೆ ಸಮ್ಮೇಳನ ನಡೆಸುವುದು ಹೆಮ್ಮೆಯ, ಗೌರವದ, ಜನಪ್ರೀತಿಯ, ಜವಾಬ್ದಾರಿಯ ಮತ್ತು ಕನ್ನಡಕ್ಕೆ ಕೊಡುಗೆ ನೀಡುವ ಕೆಲಸವೂ ಹೌದೆಂದು ಭಾವಿಸಿದ್ದೇನೆ.

ಸಮ್ಮೇಳನಗಳಿಗೆ ಯಾರು ಬರುತ್ತಾರೆ? ಆನ್ ಅಫಿಷಿಯಲ್ ಡ್ಯೂಟಿ- ಎಂಬ ಚೀಟಿಗೆ ರಬ್ಬರು ಸ್ಟಾಂಪು ಹಾಕಿಸಿಕೊಂಡು ಬರುವ ಸರಕಾರಿ ಅಧಿಕಾರಿಗಳು ಎಂದೇನಾದರೂ ಯಾರಾದರೂ ಉತ್ತರಿಸಿದರೆ ಅದು ಸರಿಯಲ್ಲ. ಅವರೂ ಬರುತ್ತಾರೆ, ನಿಜ. ಅವರಲ್ಲೂ ಆಸಕ್ತರು ಇರುತ್ತಾರೆ ನಿಜ. ಆದರೆ ಓಓಡಿ ಚೀಟಿಗೆ ಜಗಳ ಆಗುವುದು, ಮೊದಲ ದಿನವೇ ಚೀಟಿ ಪಡೆದುಕೊಂಡು ನಾಪತ್ತೆಯಾಗುವುದು ಎಲ್ಲವನ್ನೂ ನೀವೂ ನೋಡಿದ್ದೀರಿ, ಚಂದ್ರಶೇಖರ ಪಾಟೀಲರೂ ನೋಡಿದ್ದಾರೆ. ಅವರಿಂದ ಸಮ್ಮೇಳನದ ಅಂಗಳ ತುಂಬಬಹುದು.

ಆದರೆ, ನಿಜವಾಗಿಯೂ ಸಮ್ಮೇಳನ ಕಳೆಕಟ್ಟುವಂತೆ ಮಾಡುವವರು ಆಯಾ ಊರಿನ ಸಾಹಿತ್ಯ ಆಸಕ್ತರು, ಜಿಲ್ಲೆಯ ಮೂಲೆ ಮೂಲೆಗಳಿಂದ ಸ್ವಂತ ಖರ್ಚಲ್ಲಿ ಬರುವವರು, ಅಲ್ಲಿಯ ಭಾಷಣಗಳನ್ನು ಕೇಳುವವರು, ಪುಸ್ತಕ ಕೊಳ್ಳುವವರು, ಸಾಹಿತಿಗಳ ಜೊತೆ ಮಾತಾಡಿ ಸೆಲ್ಫೀ ತೆಗೆದುಕೊಳ್ಳುವವರು. ಅಂಥವರೇ ಸಮ್ಮೇಳನದ ನಿಜವಾದ ಶಕ್ತಿ. ಪರಿಷತ್ತಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸಮ್ಮೇಳನ ಡ್ಯೂಟಿಯಾದರೆ ಇಂಥ ಸಾಹಿತ್ಯ ಪ್ರೇಮಿಗಳಿಗೆ ಅದು ಅಕ್ಕರೆ.

ಅಂಥವರು ಸಾಮಾನ್ಯವಾಗಿ ಬರುವುದು ಶನಿವಾರ ಮತ್ತು ಭಾನುವಾರಗಳಂದು. ಬೆಂಗಳೂರಿನಿಂದಲೂ ಶುಕ್ರವಾರ ರಾತ್ರಿ ಬಸ್ಸು ಹತ್ತಿ, ಭಾನುವಾರ ವಾಪಸ್ಸು ಹೋಗುವ ನನ್ನ ನೂರಾರು ಮಿತ್ರರಿದ್ದಾರೆ. ಎಲ್ಲಾ ಪುಸ್ತಕದ ಅಂಗಡಿಗೂ ಸುತ್ತಾಡಲಾರದ ಅವರು ಸಮ್ಮೇಳನಕ್ಕೆ ಪುಸ್ತಕ ಕೊಳ್ಳಲಿಕ್ಕೆಂದೇ ಬರುತ್ತಾರೆ. ಭಾಷಣ ಕೇಳುತ್ತಾರೆ. ಚರ್ಚಿಸುತ್ತಾರೆ. ಪತ್ರಿಕೆ, ಟೆಲಿವಿಷನ್, ಐಟಿ, ಬ್ಯಾಂಕು, ಖಾಸಗಿ ವಲಯಗಳಿಂದ ಹೀಗೆ ಬರುವ ತರುಣ ತರುಣಿಯರಿಗೂ ಈ ಸಮ್ಮೇಳನ ಬೇಕಾಗಿರುವುದು ಅನ್ನುವುದನ್ನು ನೀವು ಅಲ್ಲಗಳೆಯಲಾರಿರಿ ಎಂದು ಭಾವಿಸುತ್ತೇನೆ.

ಇದುವರೆಗೆ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ವಾರದ ನಡುವಿನ ದಿನಗಳಲ್ಲಿ, ಅದೂ ಬುಧವಾರ, ಗುರುವಾರ ಮತ್ತು ಶುಕ್ರವಾರ ಸಮ್ಮೇಳನ ನಡೆದಿದ್ದೇ ಇಲ್ಲ. ಕಳೆದ 25 ಸಮ್ಮೇಳನಗಳಲ್ಲಂತೂ ಹೀಗಾಗಿಲ್ಲ. ಆದರೂ ನೀವು ಪಟ್ಟು ಹಿಡಿದು ವಾರದ ಮಧ್ಯದಲ್ಲೇ ಸಮ್ಮೇಳನ ನಡೆಸಲು ಹೊರಟಿದ್ದೀರಿ. ಸಾಹಿತ್ಯ ಸಮ್ಮೇಳನವನ್ನು ಮತ್ತಷ್ಟು ಯುವ ಓದುಗರಿಂದ ಬರಹಗಾರರಿಂದ ದೂರ ಇರಿಸುತ್ತಿದ್ದೀರಿ.

ಇಂಥ ಮೂರ್ಖ ನಿರ್ಣಯ ಯಾರದ್ದೇ ಆಗಿರಲಿ, ನೀವು, ಸಾಹಿತ್ಯಪ್ರಿಯರೂ ಆಗಿರುವ ನೀವು, ಅದಕ್ಕೆ ಬಲಿಯಾಗದಿರಿ ಎಂಬುದು ನನ್ನ ಮತ್ತು ನನ್ನಂತೆ ಸಮ್ಮೇಳನಗಳಿಗೆ ಬರುತ್ತಿರುವ ಎಲ್ಲರ ಪ್ರಾರ್ಥನೆ.  ಈಗಾಗಲೇ ಪುಸ್ತಕ ಪ್ರಕಾಶಕರು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಮೂರು ಕಾಸಿನ ವ್ಯಾಪಾರವೂ ಆಗದೇ ಬಳಲಿದ್ದಾರೆ. ವಾರಮಧ್ಯದಲ್ಲಿ ಭಾಷಣ ಕೇಳಲು, ಗೋಷ್ಠಿಯಲ್ಲಿ ಭಾಗವಹಿಸಲು, ಪುಸ್ತಕ ಕೊಳ್ಳಲು ಯಾರಾದರೂ ಬರುತ್ತಾರೆಂಬ ನಂಬಿಕೆ ನಿಮಗಾದರೂ ಇರಲಿಕ್ಕಿಲ್ಲ ಎಂದುಕೊಳ್ಳುವೆ.

ಪ್ರತಿವರ್ಷವೂ ಇಂಥ ದಿನಗಳಲ್ಲಿ ಸಮ್ಮೇಳನ ನಡೆಯುತ್ತದೆ ಎಂದು ಅದಕ್ಕೊಂದು ನಿಗದಿಯಾದ ದಿನಾಂಕವನ್ನು ಗೊತ್ತು ಮಾಡುವ ಕೆಲಸವನ್ನಂತೂ ಇಷ್ಟು ವರ್ಷಗಳಲ್ಲಿ ಮಾಡಲಿಲ್ಲ. ಸರ್ಕಾರದ ಮರ್ಜಿಗೆ ಬಿದ್ದು, ಅವರ ಹುಚ್ಚಾಟಗಳಿಗೆ ಸಮ್ಮೇಳನವನ್ನು ಬಲಿಕೊಡುವುದು ನಿಮ್ಮ ಉದ್ದೇಶವಾಗಿದ್ದರೆ, ಮತ್ತೇನೂ ಮಾತಿಲ್ಲ.

ಸಾಹಿತ್ಯಕ್ಕೆ ಒಳ್ಳೆಯದಾಗಲಿ, ಸಾಹಿತ್ಯಾಸಕ್ತರಿಗೂ ಸಮ್ಮೇಳನದ ದಕ್ಕಲಿ.

ವಿಶ್ವಾಸದಿಂದ

ಜೋಗಿ

‍ಲೇಖಕರು avadhi

13 November, 2019

13 Comments

  1. Raju haggad

    ಹೌದು ಸರ್. ನಾವು ಕೂಡ ನಿನ್ನೆ ದಿನಾಂಕವನ್ನು ನೋಡಿ ಈ ವರುಷ ಹೋಗಲ್ಲ ಎಂದು ಮನದಲ್ಲೆ ಅಂದುಕೊಂಡೆವು ಕಾರಣ ನಾವು ಸರಕಾರಿ ನೌಕರರು ವಾರದ ಮಧ್ಯದಲ್ಲಿ ರಜೆ ಕೊಡುವುದಿಲ್ಲ. ಕಾರ್ಯದೊತ್ತಡದಲ್ಲಿ ಆ ದಿನಗಳಲ್ಲಿ ರಜೆ ಕೇಳಲು ಆಗುವುದಿಲ್ಲ. ದಯಮಾಡಿ ದಿನಾಂಕ ಬದಲಿಸಿದರೆ ಒಳಿತು. ನಮ್ಮ ಒತ್ತಡದ ಬದುಕಿನ ಮಧ್ಯದಲ್ಲೂ ಸಾಹಿತ್ಯವನ್ನು ನೆಚ್ಚಿಕೊಂಡಿರುವವರು ನಾವು. ನಮಗೂ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಗಲಿ ಎಂಬು ನಮ್ಮ ಅಭಿಪ್ರಾಯ

  2. Vasundhara k m

    ಸಮಯೋಚಿತ ಸಲಹೆ ನೀಡಿದ್ದೀರಿ. ಕನ್ನಡ ಸಾಹಿತ್ಯ ಪರಿಷತ್ತು ಖಂಡಿತವಾಗಿ ಮಾನ್ಯ ಮಾಡಬೇಕೆಂದು ನನ್ನ ಒತ್ತಾಸೆಯನ್ನೂ ಸೇರಿಸುತ್ತೇನೆ.

  3. Kiran Vati

    ಪ್ರಪ್ರಥಮಬಾರಿಗೆ ಶ್ರೀ ಜೋಗಿ ಅವರು ಕೋಪಗೊಂಡಿರುವಂತೆ ಕಾಣುತ್ತಿದೆ. ಅವರ ಈ ವಿಚಾರದ ಆಕ್ರೋಷಕ್ಕೆ ನಮ್ಮದೂ ಸಹಮತವಿದೆ. ಜೋಗಿಯವರು ಅಂದುಕೊಂಡಂತೆ ವಾರಾಂತ್ಯದಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ”ವನ್ನು ಮಾಡುವುದರಿಂದ ದೂರದ ಊರುಗಳಿಂದ ಬರುವವರಿಗೆ ಅನುಕೂಲ ಆಗುತ್ತದೆ.
    ನನಗೆ ನೆನಪಿರುವಂತೆ, ಮಂಗಳೂರಿನ (೧೯೯೭)ರ ಸಮ್ಮೇಳನಕ್ಕೆ ಹೋಗಿದ್ದಾಗ, ಹೊಸದಾಗಿ ಪರಿಚಯವಾದ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದೆ. ಯಾವುದೋ ಊರಿನಿಂದ ಬಂದ ಸ್ನೇಹಿತರನ್ನು ಕನ್ನಡಿಗರು ಮನೆಯವರಂತೆ ಭಾವಿಸಿ ನೋಡಿಕೊಳ್ಳುವ ಸದ್ಗುಣ ಇರುವವರು. ವಾರಾಂತ್ಯದಲ್ಲೇ ಕಾರ್ಯಕ್ರಮ ನಡೆದರೆ, ಇಂತಹ ಹೊಸ ಸಮಮನಸ್ಕ ಸ್ನೇಹ ಬಂಧಗಳು ಹೆಚ್ಚೂ ಆಗುತ್ತದೆ,

  4. ಆಶಾವಿಶ್ವನಾಥ್

    ಸತ್ಯವಾದ ಮಾತು. ವಾರಾಂತ್ಯದಲ್ಲಿ ಬರುವವರ ಸಂಖ್ಯೆಯೇ ಇಳಿಮುಖವಾಗುತ್ತಿರುವ ಸಮಯದಲ್ಲಿ ವಾರ ಮಧ್ಯದಲ್ಲಿ ಯಾರಿಗಾಗಿ ಈ ಸಮ್ಮೇಳನ?!

  5. Anand Rugvedi

    ಸಮಯೋಚಿತ ಸಲಹೆ. ಸಾಹಿತಿಯೂ ನಿವೃತ್ತ ಸರ್ಕಾರಿ ಅಧಿಕಾರಿಯೂ ಆಗಿರುವ ಅಧ್ಯಕ್ಷರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಯಾರು.‌ಇಲ್ಲವಾದರೆ ತಮ್ಮ ಮೂಗಿನ ಕೆಳಗೇ ನಡೆಯುತ್ತಿರುವ ಈ ಹುಚ್ಚಾಟಗಳಿಗೆ ಅವರು ಬಲಿಯಾದಾರು. ಹಾಗಾಗದಿರಲಿ ಎಂದು ಆಶಿಸುವೆ

  6. ashok

    Correct sir

  7. Kotresh T A M

    ನಿಜ ಸರ್.
    ನನ್ನಂತಹ ಸ್ವ ಉದ್ಯೋಗ(self employee)ಮಾಡಿಕೊಂಡಿರುವ ಸಾಹಿತ್ಯಾಸಕ್ತರು ವಾರದ ಈ ದಿನಗಳಲ್ಲಿ ಬರಲು ಸಾಧ್ಯವಿಲ್ಲ.
    ವಾರದ ಕೊನೆ ದಿನಗಳೇ ಸರಿಯಾದದ್ದು.

  8. Ravi shivaraygol

    Correct sir.

  9. ಎಚ್ ಎಸ್ ಸತ್ಯನಾರಾಯಣ

    ಜೋಗಿಯವರ ಪ್ರಸ್ತಾಪ ಸಕಾರಣವಾಗಿದೆ. ಪುಸ್ತಕೋದ್ಯಮಕ್ಕೆ ಆಗುವ ಹಾನಿ ಅಷ್ಟಿಷ್ಟಲ್ಲ. ವಾರದ ಮಧ್ಯೆ ಸಮ್ಮೇಳನ ನಡೆಸುವ ಬದಲು ಹಿಂದೆ ಬರುವ ವಾರಾಂತ್ಯವನ್ನಾದರು ಜೊತೆಗೆ ಹೊಂದಿಸಿಕೊಳ್ಳಬಹುದಲ್ಲ. ದಿನಾಂಕವನ್ನು ಅನೌನ್ಸ್ ಮಾಡುವುದರ ಜೊತೆಯಲ್ಲೇ ಅಧ್ಯಕ್ಷರ ಹೆಸರನ್ನೂ ಪ್ರಕಟಿಸಿದರೆ ಅವರ ಭಾಷಣದ ತಯಾರಿಗಾದರೂ ಸಮಯ ಸಿಕ್ಕುತ್ತದೆ.
    ಅಲ್ಲದೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪರಿಷತ್ತಿನ ಅಧ್ಯಕ್ಷರೂ ಸಾಗುವ ಕೆಟ್ಟ ಸಂಪ್ರದಾಯವನ್ನೂ ಬಿಡಬೇಕಲ್ಲವೆ?

  10. ರವಿ

    ಜೊತಗೆ ಪುಸ್ತಕ ಮಳಿಗೆ ಗಳು ಸಮ್ಮೇಳನದ ಸುತ್ತ ಕುದುರೆ ಲಾಳಾಕಾರ ಅಂದ್ರೆ Uಅಕಾರ ದಲ್ಲಿ ಹಾಕಿ ಜಾಗ ವಿಲ್ಲ ಅದಿಲ್ಲ ಇದಿಲ್ಲ ಅನ್ನೋ ದು ಹೇಳಬೇಡಿ ಪುಸ್ತಕ ಮಳಿಗೆ ಗಳು ಈ ರೀತಿ ಹಾಕುವುದು ಪುಸ್ತಕಾಸ್ಕಾ ರಿಗೆ ಮತ್ತು ಪುಸ್ತಕ ಮಾರಾಟ ಗಾರರು ಪ್ರಕಾಶಕ ರಿಗೆ ಒಳ್ಳೇದೇ ಆಗುತ್ತೇ
    ಗೋಷ್ಠಿ ಬೋರದರೆ ಪುಸ್ತಕ ಮಳಿಗೆ ಗೆ ಭೇಟಿ ಕೊಡುವರು ಮತ್ತೇ ಸಭಾo ಗಣ ಕ್ಕೆ ನಾನಾ ದಿಕ್ಕು ಗಳಿಂದ ಬರುವ ಜನ ಗಳಿಗೆ ಅನುಕೂಲ ವಾಗುತ್ತೆ

  11. Lakshmana rao H

    yes sir we are also coming only on holidays

  12. Vidya

    ಒಪ್ಪಲೇಬೇಕು.

  13. T S SHRAVANA KUMARI

    ಒಳ್ಳೆಯ ಮಾತುಗಳು; ಸರಿಯಾಗಿ ಹೇಳಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading