ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಜೋಗಿ ಬಹಿರಂಗ ಪತ್ರ


ಜೋಗಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ,
ಕಳೆದ ಮೂರು ವರ್ಷಗಳಿಂದ ತಾವು ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದನ್ನು ನೋಡಿದ್ದೇನೆ. ಕಳೆದ ಸುಮಾರು 25 ವರ್ಷಗಳಿಂದ ಪ್ರತಿವರ್ಷವೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿರುವ ನನಗೆ ನಿಮ್ಮ ಶ್ರಮದ ಅರಿವೂ ಇದೆ. ಮೂಡುಬಿದರೆಯ ಅತ್ಯಂತ ಅಚ್ಚುಕಟ್ಟು ಸಮ್ಮೇಳನವನ್ನೂ ಗಂಗಾವತಿಯ ಪ್ರಖರ ಸಮ್ಮೇಳನವನ್ನೂ ಕನಕಪುರದ ಜನಪ್ರಿಯ ಸಮ್ಮೇಳನವನ್ನೂ ಬೆಂಗಳೂರಿನಲ್ಲಿ ನಡೆದ ಸಪ್ಪೆ ಸಮ್ಮೇಳನವನ್ನೂ ತುಮಕೂರಿನ ಸೊಗಸಾದ ಸಾಹಿತ್ಯ ಸಮ್ಮೇಳನ, ಶ್ರವಣ ಬೆಳಗೊಳ, ಮೈಸೂರು, ಬೀದರ್, ಮಡಿಕೇರಿಯ ಸಮ್ಮೇಳನಗಳನ್ನೆಲ್ಲ ನೋಡಿದ ನಂತರ ಪರಿಷತ್ತಿನ ಅಧ್ಯಕ್ಷರುಗಳಿಗೆ ಸಮ್ಮೇಳನ ನಡೆಸುವುದು ಹೆಮ್ಮೆಯ, ಗೌರವದ, ಜನಪ್ರೀತಿಯ, ಜವಾಬ್ದಾರಿಯ ಮತ್ತು ಕನ್ನಡಕ್ಕೆ ಕೊಡುಗೆ ನೀಡುವ ಕೆಲಸವೂ ಹೌದೆಂದು ಭಾವಿಸಿದ್ದೇನೆ.
ಸಮ್ಮೇಳನಗಳಿಗೆ ಯಾರು ಬರುತ್ತಾರೆ? ಆನ್ ಅಫಿಷಿಯಲ್ ಡ್ಯೂಟಿ- ಎಂಬ ಚೀಟಿಗೆ ರಬ್ಬರು ಸ್ಟಾಂಪು ಹಾಕಿಸಿಕೊಂಡು ಬರುವ ಸರಕಾರಿ ಅಧಿಕಾರಿಗಳು ಎಂದೇನಾದರೂ ಯಾರಾದರೂ ಉತ್ತರಿಸಿದರೆ ಅದು ಸರಿಯಲ್ಲ. ಅವರೂ ಬರುತ್ತಾರೆ, ನಿಜ. ಅವರಲ್ಲೂ ಆಸಕ್ತರು ಇರುತ್ತಾರೆ ನಿಜ. ಆದರೆ ಓಓಡಿ ಚೀಟಿಗೆ ಜಗಳ ಆಗುವುದು, ಮೊದಲ ದಿನವೇ ಚೀಟಿ ಪಡೆದುಕೊಂಡು ನಾಪತ್ತೆಯಾಗುವುದು ಎಲ್ಲವನ್ನೂ ನೀವೂ ನೋಡಿದ್ದೀರಿ, ಚಂದ್ರಶೇಖರ ಪಾಟೀಲರೂ ನೋಡಿದ್ದಾರೆ. ಅವರಿಂದ ಸಮ್ಮೇಳನದ ಅಂಗಳ ತುಂಬಬಹುದು.
ಆದರೆ, ನಿಜವಾಗಿಯೂ ಸಮ್ಮೇಳನ ಕಳೆಕಟ್ಟುವಂತೆ ಮಾಡುವವರು ಆಯಾ ಊರಿನ ಸಾಹಿತ್ಯ ಆಸಕ್ತರು, ಜಿಲ್ಲೆಯ ಮೂಲೆ ಮೂಲೆಗಳಿಂದ ಸ್ವಂತ ಖರ್ಚಲ್ಲಿ ಬರುವವರು, ಅಲ್ಲಿಯ ಭಾಷಣಗಳನ್ನು ಕೇಳುವವರು, ಪುಸ್ತಕ ಕೊಳ್ಳುವವರು, ಸಾಹಿತಿಗಳ ಜೊತೆ ಮಾತಾಡಿ ಸೆಲ್ಫೀ ತೆಗೆದುಕೊಳ್ಳುವವರು. ಅಂಥವರೇ ಸಮ್ಮೇಳನದ ನಿಜವಾದ ಶಕ್ತಿ. ಪರಿಷತ್ತಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸಮ್ಮೇಳನ ಡ್ಯೂಟಿಯಾದರೆ ಇಂಥ ಸಾಹಿತ್ಯ ಪ್ರೇಮಿಗಳಿಗೆ ಅದು ಅಕ್ಕರೆ.

ಅಂಥವರು ಸಾಮಾನ್ಯವಾಗಿ ಬರುವುದು ಶನಿವಾರ ಮತ್ತು ಭಾನುವಾರಗಳಂದು. ಬೆಂಗಳೂರಿನಿಂದಲೂ ಶುಕ್ರವಾರ ರಾತ್ರಿ ಬಸ್ಸು ಹತ್ತಿ, ಭಾನುವಾರ ವಾಪಸ್ಸು ಹೋಗುವ ನನ್ನ ನೂರಾರು ಮಿತ್ರರಿದ್ದಾರೆ. ಎಲ್ಲಾ ಪುಸ್ತಕದ ಅಂಗಡಿಗೂ ಸುತ್ತಾಡಲಾರದ ಅವರು ಸಮ್ಮೇಳನಕ್ಕೆ ಪುಸ್ತಕ ಕೊಳ್ಳಲಿಕ್ಕೆಂದೇ ಬರುತ್ತಾರೆ. ಭಾಷಣ ಕೇಳುತ್ತಾರೆ. ಚರ್ಚಿಸುತ್ತಾರೆ. ಪತ್ರಿಕೆ, ಟೆಲಿವಿಷನ್, ಐಟಿ, ಬ್ಯಾಂಕು, ಖಾಸಗಿ ವಲಯಗಳಿಂದ ಹೀಗೆ ಬರುವ ತರುಣ ತರುಣಿಯರಿಗೂ ಈ ಸಮ್ಮೇಳನ ಬೇಕಾಗಿರುವುದು ಅನ್ನುವುದನ್ನು ನೀವು ಅಲ್ಲಗಳೆಯಲಾರಿರಿ ಎಂದು ಭಾವಿಸುತ್ತೇನೆ.
ಇದುವರೆಗೆ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ವಾರದ ನಡುವಿನ ದಿನಗಳಲ್ಲಿ, ಅದೂ ಬುಧವಾರ, ಗುರುವಾರ ಮತ್ತು ಶುಕ್ರವಾರ ಸಮ್ಮೇಳನ ನಡೆದಿದ್ದೇ ಇಲ್ಲ. ಕಳೆದ 25 ಸಮ್ಮೇಳನಗಳಲ್ಲಂತೂ ಹೀಗಾಗಿಲ್ಲ. ಆದರೂ ನೀವು ಪಟ್ಟು ಹಿಡಿದು ವಾರದ ಮಧ್ಯದಲ್ಲೇ ಸಮ್ಮೇಳನ ನಡೆಸಲು ಹೊರಟಿದ್ದೀರಿ. ಸಾಹಿತ್ಯ ಸಮ್ಮೇಳನವನ್ನು ಮತ್ತಷ್ಟು ಯುವ ಓದುಗರಿಂದ ಬರಹಗಾರರಿಂದ ದೂರ ಇರಿಸುತ್ತಿದ್ದೀರಿ.
ಇಂಥ ಮೂರ್ಖ ನಿರ್ಣಯ ಯಾರದ್ದೇ ಆಗಿರಲಿ, ನೀವು, ಸಾಹಿತ್ಯಪ್ರಿಯರೂ ಆಗಿರುವ ನೀವು, ಅದಕ್ಕೆ ಬಲಿಯಾಗದಿರಿ ಎಂಬುದು ನನ್ನ ಮತ್ತು ನನ್ನಂತೆ ಸಮ್ಮೇಳನಗಳಿಗೆ ಬರುತ್ತಿರುವ ಎಲ್ಲರ ಪ್ರಾರ್ಥನೆ.  ಈಗಾಗಲೇ ಪುಸ್ತಕ ಪ್ರಕಾಶಕರು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಮೂರು ಕಾಸಿನ ವ್ಯಾಪಾರವೂ ಆಗದೇ ಬಳಲಿದ್ದಾರೆ. ವಾರಮಧ್ಯದಲ್ಲಿ ಭಾಷಣ ಕೇಳಲು, ಗೋಷ್ಠಿಯಲ್ಲಿ ಭಾಗವಹಿಸಲು, ಪುಸ್ತಕ ಕೊಳ್ಳಲು ಯಾರಾದರೂ ಬರುತ್ತಾರೆಂಬ ನಂಬಿಕೆ ನಿಮಗಾದರೂ ಇರಲಿಕ್ಕಿಲ್ಲ ಎಂದುಕೊಳ್ಳುವೆ.
ಪ್ರತಿವರ್ಷವೂ ಇಂಥ ದಿನಗಳಲ್ಲಿ ಸಮ್ಮೇಳನ ನಡೆಯುತ್ತದೆ ಎಂದು ಅದಕ್ಕೊಂದು ನಿಗದಿಯಾದ ದಿನಾಂಕವನ್ನು ಗೊತ್ತು ಮಾಡುವ ಕೆಲಸವನ್ನಂತೂ ಇಷ್ಟು ವರ್ಷಗಳಲ್ಲಿ ಮಾಡಲಿಲ್ಲ. ಸರ್ಕಾರದ ಮರ್ಜಿಗೆ ಬಿದ್ದು, ಅವರ ಹುಚ್ಚಾಟಗಳಿಗೆ ಸಮ್ಮೇಳನವನ್ನು ಬಲಿಕೊಡುವುದು ನಿಮ್ಮ ಉದ್ದೇಶವಾಗಿದ್ದರೆ, ಮತ್ತೇನೂ ಮಾತಿಲ್ಲ.
ಸಾಹಿತ್ಯಕ್ಕೆ ಒಳ್ಳೆಯದಾಗಲಿ, ಸಾಹಿತ್ಯಾಸಕ್ತರಿಗೂ ಸಮ್ಮೇಳನದ ದಕ್ಕಲಿ.
ವಿಶ್ವಾಸದಿಂದ
ಜೋಗಿ

‍ಲೇಖಕರು avadhi

November 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: