ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಶಾಲೆಗಳ ಪುನರುಜ್ಜೀವನವೊಂದೇ ಉತ್ತರ!

ಡಿ.ಎಸ್.ನಾಗಭೂಷಣ

ಮೊನ್ನೆ ಬೇಂದ್ರೆ ಕುರಿತ ವಿಚಾರ ಸಂಕಿರಣವೊಂದರಲ್ಲಿ ಕೂತಿದ್ದೆ. ಭಾಷಣಕಾರರೊಬ್ಬರು ಕನ್ನಡದ ಹಿರಿಯ ಚಿಂತಕರೊಬ್ಬರನ್ನು ಉಲ್ಲೇಖಿಸುತ್ತಾ, ಬೇಂದ್ರೆ ಕನ್ನಡದ ಶ್ರೇಷ್ಠ ಕವಿ ಮಾತ್ರವಲ್ಲ;ಜಗತ್ತಿನ ಶ್ರೇಷ್ಠ ಕವಿ ಎಂದು ಬಹು ಬಿಂಕದಿಂದ ಘೋಷಿಸಿದರು. ಅವರನ್ನು ಅನೇಕ ಪಾಶ್ಚಿಮಾತ್ಯ ಕವಿಗಳಿಗೆ ಹೋಲಿಸಿ, ಇವರಿಗಿಂತ ನಮ್ಮ ಬೇಂದ್ರೆ ಹಗೆ ಕಮ್ಮಿ ಎಂದು ಪ್ರಶ್ನಿಸಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಜಾಗತೀಕರಣ Wಖಿಔನಿಂದ ಆರಂಭವಾಯಿತೆಂದು ನಾವು ನಂಬಿದ್ದೇವೆ. ಆದರೆ ಅದು ತಪ್ಪು ಕಲ್ಪನೆ. ಜಾಗತೀಕರಣ, ಬೇಂದ್ರೆ ಕುರಿತ ಮೇಲಿನ ಅಭಾಸಕರ ಹೆಮ್ಮೆಯ ಮಾತುಗಳಲ್ಲೇ ಇದೆ. ಹಾಗೇ ಇಂತಹ ಅನೇಕ ಜಗತ್ತಿನ ಶ್ರೇಷ್ಠಗಳ ಕಲ್ಪನೆಯ ಮಾತುಗಳಲ್ಲೂ ಇದೆ. ಏಕೆಂದರೆ, ಬೇಂದ್ರೆ ಕನ್ನಡದ ಶ್ರೇಷ್ಠ ಕವಿ ಆಗಿರುವಲ್ಲೇ ಜಗತ್ತಿನ ಶ್ರೇಷ್ಠ ಕವಿ ಕೂಡಾ ಆಗಿರುತ್ತಾರೆ ಎಂದು ಭಾವಿಸಲಾಗದ ಮನಸ್ಸು ನಿಜವಾದ ಮತ್ತು ಕನ್ನಡದ ಮನಸ್ಸೇ ಅಲ್ಲ. ಅದು ತನ್ನ ನೆಲದಿಂದ ಜೀವ ಸತ್ವ ಪಡೆಯುವುದನ್ನು ನಿಲ್ಲಿಸಿರುವ, ಬೇರಿಲ್ಲದ ಜಾಗತಿಕ ಮನಸ್ಸು. ಆ ಕಾರಣದಿಂದಾಗಿ ಅದು ಬೇಂದ್ರೆಯವರನ್ನು ಅವರೆಲ್ಲ ಆಳಗಳಲ್ಲಿ, ಸೂಕ್ಷ್ಮಗಳಲ್ಲಿ ಗ್ರಹಿಸಲಾಗದ ಭೋಳೆ ಮನಸ್ಸು ಕೂಡ.

ಕನ್ನಡ ಜಗತ್ತು ಎಂಬುದು ಒಂದು ಸ್ವಯಂಪೂರ್ಣವಾದ ಮತ್ತು ಸ್ವಾಯತ್ತವಾದ ಜಗತ್ತು ಎಂದು ಅರಿಯಲಾಗದ;ಆದುದರಿಂದ ಕನ್ನಡ ಜಗತ್ತು ಎಂದರೆ ವಸಾಹತುಶಾಹಿ ಮನಸ್ಸಿನ ರಚನೆಯಾದ-ತನ್ನಾಚೆಗೂ ಭೌತಿಕವಾಗಿ ಹರಡಿಕೊಂಡು ನಮ್ಮ ಮನಸ್ಸಿನ ಮೇಲೆ ಕವುಚಿಕೊಡು ನಮ್ಮನ್ನು ಭಾವ ವಿಚಲಿತಗೊಳೊಸಿರುವ-ಬಹು ದೊಡ್ಡ ಜಗತ್ತಿನ ಒಂದು ಉಪ ಘಟಕ ಮಾತ್ರ; ಕನ್ನಡ ಭಾವ ಜಗತ್ತೆಂಬುದು ಈ ವಿಶಾಲ ಜಗತ್ತಿನ ಅಳತೆಯಲ್ಲಿ ಒಂದು ಕಿರಿದಾದ ಮತ್ತು ಹಾಗಾಗಿ ಆನುಷಂಗಿಕವಾದ ಜಗತ್ತು ಮಾತ್ರ ಎಂದು ಭಾವಿಸುವ ಗಾತ್ರ ಪ್ರಧಾನವಾದ ಬಾಹ್ಯಾಂತರ ದೃಷ್ಟಿಕೋನದ ಪರಿಣಾಮವಿದು. ಕವಿರಾಜಮಾರ್ಗಕಾರನೇ, ಜಗತ್ತಿನಲ್ಲಿ ಕನ್ನಡವಿದ್ದಂತೆ;ಕನ್ನಡದಲ್ಲಿ ಜಗತ್ತೇ ಇದೆ ಎಂದು ಹೇಳಿರುವನಾದರೂ, ಜಾಗತೀಕರಣದ ಭರಾಟೆಯಲ್ಲಿ ಅದು ನಮಗೆ ಕೇಳಿಸದೇ ಹೋಗಿದೆ! ತಾನು ಜಗತ್ತನ್ನು ಗುರುತಿಸಲು, ಗ್ರಹಿಸಲು ಮತ್ತು ಅಭಿವ್ಯಕ್ತಿಸಲು ಸಾಧ್ಯ ಮಾಡಿದ ತನ್ನ ಮಣ್ಣಿನ-ಮಾತೃ-ಭಾಷೆಯನ್ನು ಆನಂತರ ಕಲಿತುಕೊಂಡ ಜಗತ್ತಿನ ಗಾತ್ರದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಅಪ್ರಯೋಜಕ ಮತ್ತು ಅಪ್ರಧಾನವಾದುದು ಎಂದು ಭಾವಿಸತೊಡಗುವ ಜನ ಸಮುದಾಯ ಆಂತರಿಕವಾಗಿ ಕುಬ್ಜಗೊಂಡಿದೆ ಎಂದೇ ಅರ್ಥ. ಈ ಕುಬ್ಜೀಕರಣವೇ ಇಂದು ಜಾಗತೀಕರಣವೆನಿಸಿಕೊಂಡಿದೆ. ಇದನ್ನು ತಿಳಿಯಬಲ್ಲವರು ಮಾತ್ರ ಜಾಗತೀಕರಣದ ಪ್ರಭಾವ-ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬಲ್ಲರು.

ಆದರೆ ಈವರೆಗೆ ಜಾಗತೀಕರಣವನ್ನು ಸಮಾಜದ ಯಜಮಾನರುಗಳು ಅವಕಾಶಗಳ ವಿಸ್ತರಣೆ ಎಂದೇ ಆರ್ಥೈಸುತ್ತಾ, ಅದನ್ನು ವಂಚಿತರ ಉನ್ನತೀಕರಣಕ್ಕಾಗಿ ಮತ್ತು ಎಲ್ಲರ ಬದುಕಿನ ಸುಖಕ್ಕಾಗಿ ಬಳಸಿಕೊಳ್ಳುವ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಲೇ ಕೇಳಿಬರತೊಡಗಿರುವುದು, ಭಾರತೀಯ ಭಾಷೆಗಳಲ್ಲಿ ಜಾತಿ ಶ್ರೇಣೀಕರಣ-ಅವಮಾನಗಳ ನೆನಪುಗಳಿವೆ;ಹಾಗಾಗಿ ಅವು ದಲಿತರ ಮತ್ತು ಹಿಂದುಳಿದ ಜಾತಿಗಳವರ ವಿಮೋಚನೆಯನ್ನು ಮತ್ತು ಆ ಮೂಲಕ ಇಡೀ ಸಮಾಜದ ವಿಮೋಚನೆಯನ್ನು ಸಾಧ್ಯ ಮಾಡುವುದಿಲ್ಲ ಎಂಬ ವಾದ ಸರಣಿ. ಆದರೆ ಈ ಭಾಷೆಗಳು ಜಾತಿ-ಶ್ರೇಣೀಕರಣ ಮತ್ತು ಅವಮಾನಗಳ ನೆನಪುಗಳನ್ನಷ್ಟೇ ಅಲ್ಲ, ಅದರ ವಿರುದ್ಧ ನಡೆದ ಹೋರಾಟಗಳ ನೆನಪುಗಳನ್ನೂ ಒಳಗೊಂಡಿವೆ. ಈ ಎರಡೂ ನೆನಪುಗಳನ್ನು ಹೊತ್ತುಕೊಂಡಿರುವುದರಿಂದಾಗಿಯೇ ಅದು ಬಹುಮುಖಿ ಜನಭಾಷೆಯಾಗಿ ಈವರೆಗೆ ಬೆಳೆದು ಬಂದಿದ್ದು, ನಾವಿಂದು ಈ ವಿಮೋಚನೆಯ ಮಾತನಾಡಲು ಸಾಧ್ಯವಾಗಿದೆ ಎಂಬ ತಿಳುವಳಿಕೆಯೇ ಇಲ್ಲಿ ಸಾಧ್ಯವಾಗದೇ ಹೋಗಿದೆ. ಒಂದು ಸಮುದಾಯದ ಭಾಷಾ ಚರಿತ್ರೆ ಕುರಿತ ಈ ಒಂದು ಅಖಂಡ ಅರಿವೇ ಈ ವಾದ ಸರಣಿಯಲ್ಲಿ ಕಾಣೆಯಾಗಿದ್ದು, ಇಂತಹ ವಾದಸರಣಿಯನ್ನು ಮಂಡಿಸುತ್ತಿರುವವರಲ್ಲಿ ತಮ್ಮನ್ನು ಭಾಷಾ ತಜ್ಞರೆಂದು ಕರೆದುಕೊಳ್ಳುವ ಕೆಲವರೂ ಇದ್ದಾರೆ ಎಂದರೆ ಏನು ಹೇಳುವುದು?

ಕನ್ನಡ ಆಧುನಿಕ ಜ್ಞಾನವನ್ನು ಹೊರಬಲ್ಲ ಭಾಷೆಯಾಗಿಲ್ಲ ಎಂಬ ದೂರೂ ಇಂತಹುದೇ ವಿಮೋಚನೆಯ ಅಪಕಲ್ಪನೆಯಿಂದ ಉದ್ಭವವಾಗಿದ್ದು, ಇದು ಮತ್ತೆ ಜಾಗತೀಕರಣ ಹೇಗೆ ನಮ್ಮೆಲ್ಲರ ಮಾನಸಿಕ ಕುಬ್ಜೀಕರಣಕ್ಕೂ, ಆ ಮೂಲಕ ಕೆಲವರ ಸಮಯಸಾಧಕ ರಾಜಕಾರಣಕ್ಕೂ ಕಾರಣವಾಗಿದೆ ಎಂಬುದರ ಒಂದು ಉದಾಹರಣೆಯಾಗಿದೆ. ಏಕೆಂದರೆ ಕನ್ನಡದಲ್ಲಿ ಅಭಿವ್ಯಕ್ತಿಗೊಳ್ಳಲು ಸಾಧ್ಯವಾಗದ ಯಾವುದೇ ಜ್ಞಾನ(ಆ ಅಭಿವ್ಯಕ್ತಿ ಸಾಧ್ಯವಾಗುವವರೆಗಾದರೂ) ಕನ್ನಡ ಸಮಾಜಕ್ಕೂ ಬೇಡವಾದ(ಅಂದರೆ ಅದನ್ನು ವಿನಾಶಕಾರಿಯಾಗಿ ಶಿಥಿಲಗೊಳಿಸುವಂತಹ) ಜ್ಞಾನವೇ ಆಗಿರುತ್ತದೆ ಎಂಬ ಮೂಲ ಸಾಮಾಜಿಕ-ಸಾಂಸ್ಕೃತಿಕ ವಿವೇಕ ಇಲ್ಲಿ ಕಾಣೆಯಾಗಿರುತ್ತದೆ.

ಹಾಗಾಗಿ ಇಂದು ಕನ್ನಡದ ಪ್ರಶ್ನೆ ಎಂದರೆ ಮನಸ್ಸಿನ ಕುಬ್ಜೀಕರಣ ಮತ್ತು ಸಮಯಸಾಧಕತನ ಹಾಗೂ ಅವುಗಳಿಂದುಂಟಾಗುವ ಸಾಮಾಜಿಕ ಶಿಥಿಲೀಕರಣದೊಂದಿಗೆ ಸೆಣೆಸಬೇಕಾದ ಬಹು ದೊಡ್ಡ ಪ್ರಶ್ನೆಯೂ ಆಗಿದೆ. ಇದು ಯಾವುದೇ ಜನಸಮದಾಯದ ಸಾಂಸ್ಕೃತಿಕ ತಳಪಾಯವನ್ನೇ ಅಲ್ಲಾಡಿಸುವಂತಹ ವಿನಾಶಕಾರಿ ಸಂದರ್ಭವೇ ಆಗಿದೆ. ಈ ಅರ್ಥದಲ್ಲಿ ಇದು ಕನ್ನಡ ಜನಸಮುದಾಯದ ಆಂತರಿಕ ಸತ್ವದ ನಿರ್ನಾಮದ ಆರಂಭ ಕೂಡ. ಇದೀಗ ಅದು ಕರ್ನಾಟಕದಲ್ಲಿ ಕನ್ನಡ ಶಾಲೆಗಳ ನಿರ್ನಾಮದ ರೂಪದಲ್ಲಿ ಕಾಣತೊಡಗಿದೆ. ಈ ನಿರ್ನಾಮ ಪರಸ್ಪರ ಪೂರಕವೆಂಬಂತೆ ಸಂಖ್ಯೆ ಮತ್ತು ಗುಣಮಟ್ಟ ಈ ಎರಡೂ ನೆಲೆಗಳಲ್ಲಿ ಆಗುತ್ತಿದೆ. ಹಾಗಾಗಿ ಜಾಗತೀಕರಣದ ಸಂದರ್ಭದಲ್ಲಿ ಕನ್ನಡದ ಪರ ಹೋರಾಟವೆಂದರೆ, ಕನ್ನಡ ಶಾಲೆಗಳ ಪುನರುಜ್ಜೀವನದ ಹೋರಾಟವೇ ಆಗಿದೆ.

ಈ ಹೋರಾಟ ಅಥವಾ ಆಂದೋಲನ ಮುಂದೆ ಏಕ ರೂಪದ ಶಿಕ್ಷಣಕ್ಕಾಗಿನ ಚಳುವಳಿಯಾಗಿ ವಿಸ್ತಾರಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಆ ಮೂಲಕ; ಜಾಗತೀಕರಣವು ಮನುಷ್ಯನಲ್ಲಿ ಇಷ್ಟು ಬೇಕು ಮತ್ತು ಇಷ್ಟು ಸಾಕು ಎಂಬ ಇಲ್ಲಿನ ಮಣ್ಣಿನ ಗುಣದಿಂದ ಮೂಡಿದ್ದ ಸ್ಥಳೀಯ ಸ್ವಯಂಪೂರ್ಣತೆ ಮತ್ತು ಸ್ವಾಯತ್ತ ಬದುಕಿನ ಅರಿವನ್ನು ನಾಶಮಾಡಿ, ಇಂದು ಸಮಾಜದಲ್ಲಿ ಸುಖದ ಹೆಸರಿನಲ್ಲಿ ಯಾವ ಹಪಾಹಪಿಯನ್ನು ಸೃಷ್ಟಿಸಿ ವೈವಿಧ್ಯಮಯ ಮಾನಸಿಕ ಅಸ್ವಸ್ಥತೆಯನ್ನುಂಟು ಮಾಡಿದೆಯೋ ಆ ಅಸ್ವಸ್ಥತೆಗಳನ್ನು ಇಲ್ಲವಾಗಿಸುವ ಕಡೆ ದೊಡ್ಡ ಹೆಜ್ಜೆಯನ್ನಿಟ್ಟಂತಾಗುತ್ತದೆ. ಅದು ಸದ್ಯದ ಎಲ್ಲ ಸಾಮಾಜಿಕ ಗೊಂದಲ ಮತ್ತು ಅಶಾಂತಿಗಳನ್ನು ಒಂದು ಸ್ಥಿಮಿತಕ್ಕೆ ತರಬಲ್ಲುದಾಗಿದೆ. ಕನ್ನಡ ಶಿಕ್ಷಣ ಎಂದರೆ ಕನ್ನಡದ ಅರಿವಿನಲ್ಲಿ ಮೂಡಿದ ಬದುಕಿನ ಗೊತ್ತುಗುರಿಗಳು ಮತ್ತು ಕನಸುಗಳ ಸಾಕ್ಷಾತ್ಕಾರ. ಒಂದು ಸಮುದಾಯಕ್ಕೆ ಇದಕ್ಕಿಂತ ಹೆಚ್ಚು ಅರ್ಥಪೂರ್ಣವೆನಿಸುವ, ಸಾರ್ಥಕವೆನಿಸುವ ಬದುಕು ಇನ್ನೊಂದು ಇರಲಾರದು.

ಆದುದರಿಂದ ಸರ್ಕಾರದ ಪ್ರಾಥಮಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ರಾಜ್ಯದ ಎಲ್ಲ ಅಕಾಡೆಮಿಗಳು, ಎಲ್ಲ ಕನ್ನಡ ಸಂಘಟನೆಗಳು ಮತ್ತು ಲೇಖಕ-ಬುದ್ಧಿಜೀವಿಗಳು ತಮ್ಮೆಲ್ಲ ಮಾತಿನ ಆಟಗಳನ್ನೂ, ವ್ಯವಹಾರಗಳನ್ನೂ ನಿಲ್ಲಿಸಿ ತಮ್ಮ ಏಕೈಕ ಕಾರ್ಯಕ್ರಮವಾಗಿ ಕನ್ನಡ ಶಾಲೆಗಳ ಪುನರುಜ್ಜೀವನದ ಕಡೆ ಗಮನ ಹರಿಸುವ ಮನಸ್ಸು ಮಾಡಿದರೆ ಮತ್ತು ಇವೆಲ್ಲ ಒಟ್ಟಿಗೆ ಸೇರಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರತಿ ಊರಿನಲ್ಲಿ ಕನ್ನಡ ಶಾಲೆಗಳಿಗೆ ಪ್ರವೇಶಾತಿ ಆಂದೋಲನವನ್ನು ಒಂದು ಸಾಂಸ್ಕೃತಿಕ ಆಂದೋಲನವನ್ನಾಗಿ ಹಮ್ಮಿಕೊಳ್ಳಲು ಸಾಧ್ಯವಾದರೆ, ಜಾಗತೀಕರಣದ ಎದುರಿನಲ್ಲಿ ಕನ್ನಡವನ್ನು ಅದರ ಮೂಲ ಸತ್ವ ಮತ್ತು ಸೌಂದರ್ಯಗಳೊಂದಿಗೆ ಉಳಿಸಿಕೊಂಡು ಕನ್ನಡ ಜನಸಮುದಾಯ ಒಂದು ಸ್ಪಂದನಶೀಲ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಬಹುದಾಗಿದೆ. ಇದೆಲ್ಲ ಆಗಿ ಹೋಗುವುದಲ್ಲ ಎಂದು ಭಾವಿಸುವವರು, ಇಂದಿನ ಸಂದರ್ಭದಲ್ಲಿ ಕನ್ನಡದ ಅಳಿವು-ಉಳಿವಿನ ಬಗ್ಗೆ ಮಾತನಾಡದಿರುವುದೇ ಲೇಸು.

 

‍ಲೇಖಕರು G

6 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading