(ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅದಕ್ಕಿರುವ ಎಲ್ಲಾ ಸಾಂಸ್ಕೃತಿಕ ಮಗ್ಗುಲುಗಳನ್ನೂ ತೆರೆದಿಡುವ ವಿಚಾರಪೂರ್ಣ ಲೇಖನ)
ಕನ್ನಡ ಭುವನೇಶ್ವರಿ – ಕರ್ನಾಟಕತ್ವದ ಮತೀಯ ಹಾಗು ನಿರ್ಮತೀಯ ನೆಲೆಗಳು
ಎಂ ಡಿ ವಕ್ಕುಂದ
1
ಪ್ರತಿಮೀಕರಣ ಹಾಗೂ ಪ್ರತಿನಿಧೀಕರಣ

ಭಾರತದೊಳಗೊಂದು ಮಿನಿವಿಶ್ವವನ್ನು ಕರ್ನಾಟಕದೊಳಗೊಂದು ಮಿನಿಭಾರತವನ್ನು ಅಷ್ಟೇ ಏಕೆ ಒಂದೊಂದು ಊರುಗಳಲ್ಲೂ ಮಿನಿ ಕರ್ನಾಟಕ-ಭಾರತ-ವಿಶ್ವಗಳನ್ನೇ ಕಾಣಬಹುದಾದ ಸಾಂಸ್ಕೃತಿಕ ಶಕ್ತಿವಂತಿಕೆ ಈ ನೆಲಕ್ಕಿದೆ. ಸಾವಿರಾರು ವರುಷಗಳ ಜನಾಂಗಿಕ, ಧಾರ್ಮಿಕ, ದಾರ್ಶನಿಕ, ಭಾಷಿಕ ಸಮಾಜೋ- ಆರ್ಥಿಕ, ರಾಜಕೀಯ ‘ಸಂಕರಶೀಲತೆ’ಯ ಮೂಲಕ ಈ ಫಲವಂತಿಕೆ ಸಾಧ್ಯವಾಗಿದೆ. ಇದು ಏಕಭಾಷೆ, ಏಕಧರ್ಮ, ಏಕಜನಾಂಗ ಅಥವಾ ಏಕಬುಡಕಟ್ಟುಗಳು ಬಹುಸಂಖ್ಯಾತವಾಗಿರುವ ಪಶ್ಚಿಮದ ಕೆಲರಾಷ್ಟ್ರಗಳ ಸಾಂಸ್ಕೃತಿಕ ವಾಸ್ತವಗಳಿಗಿಂತ ತೀರ ಭಿನ್ನವಾದದ್ದು. ಭಗವತ್ ಶರಣ ಉಪಾಧ್ಯಾಯ ಅವರು ವಿವರಿಸುವಂತೆ ಸಂಸ್ಕೃತಿಯು ಎಲ್ಲರಿಂದ ದೊರೆತ ಕೊಡುಗೆ. ಅದು ಸಂಯುಕ್ತವಾದುದು. ಅದರ ಒಂದೊಂದು ಘಟಕವು ನೀರಿನ ಕಣಗಳಂತೆ ಒಂದಕ್ಕೊಂದು ಅಂಟಿಕೊಂಡು ಸ್ರಾವ ಕರೂಪ ತಳೆಯುತ್ತವೆ. ಆವರೆಗೂ ಪರಕೀಯವೆಂದು ಪರಿಗಣಿತವಾಗಿದ್ದ ಪ್ರವಾಹಗಳು ಅದರೊಳಕ್ಕೆ ಹರಿದು ಅದರ ನೀರಿನಲ್ಲಿ ಗುರುತು ಸಿಗದಂತೆ ಮರೆಯಾಗುತ್ತವೆ. ಹಾಗೆಯೇ ಸಂಸ್ಕೃತಿ ಸ್ಥಳೀಯವೂ ಹೌದು ಆಕ್ರಮಣಕಾರಿ ಪರಕೀಯ ಸಂಸ್ಕೃತಿಗೆ ಚುರುಕಿನಿಂದ ಸ್ಫಂದಿಸಿ ಅದು ಬೇಗನೇ ಕರಗುವ ಸ್ಥಿತಿ ತಲುಪಿ ಸ್ವಂತ ಪ್ರತಿಭೆಯ ಜೊತೆಗೆ ಸ್ವೀಕರಿಸುವ ಗುಣಗಳನ್ನು ಸೇರಿಸಿಕೊಂಡು ವಿಶಿಷ್ಟತೆಯ ಜತೆಗೆ ಸೇರ್ಪಡೆಯಾದ ಸಾಂದ್ರೀಕೃತ ಘಟಕದ ಗುಣಗಳನ್ನೊಳಗೊಂಡು ಸಂಯುಕ್ತ ಆಕಾರಪಡೆಯುತ್ತದೆ. ಇಂಥಲ್ಲಿ ರಾಷ್ಟ್ರವನ್ನೋ ರಾಜ್ಯವನ್ನೋ ಪ್ರತಿನಿಧಿಸುವ ಪ್ರತಿಮೆ ರೂಪಕಗಳನ್ನು ರೂಪಿಸುವುದು ಅತ್ಯಂತ ಬಿಕ್ಕಟ್ಟಿನ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.
ದೇಶ ಭಾಷೆ ಸಂಸ್ಕೃತಿ ಸಮುದಾಯಗಳು ತಂತಮ್ಮ ಚಾರಿತ್ರಿಕ ಅಗತ್ಯಗಳಿಗನುಗುಣವಾಗಿ ಸ್ವಂತಿಕೆ ಅನನ್ಯತೆಗಳ ಅಭಿವ್ಯಕ್ತಿಗಾಗಿ ಪ್ರತಿಮೆಗಳನ್ನು ಕಟ್ಟಿಕೊಳ್ಳುವದು ತಪ್ಪೇನಲ್ಲ. ಅನಿವಾರ್ಯ ಕೂಡ. ಆದರೆ ಆ ಪ್ರತಿಮೀಕರಣ ಸಂಕರಶೀಲ ನಾಡು ಒಳಗೊಂಡ ಧಾರ್ಮಿಕ, ಭಾಷಿಕ, ಜನಾಂಗಿಕ ದಾರ್ಶನಿಕ ಇತ್ಯಾದಿ ಬಹುತ್ವಗಳನ್ನೂ, ಶ್ರೇಣೀಕರಣಗಳನ್ನೂ ಪ್ರತಿನಿಧೀಕರಿಸದೇ ಹೋದರೆ ಹಲವಾರು ಅಪಾಯಗಳು ತಲೆದೋರುತ್ತವೆ. ಬಹುತ್ವಗಳ ನಾಡಿನಲ್ಲಿ ಯಾವುದೋ ಒಂದು ಗುಂಪಿನ ಸಾಂಸ್ಕೃತಿಕ ಆಕರ ಪರಿಕರ ಚಹರೆಗಳನ್ನು ಪ್ರತಿಮೆಯಾಗಿಸಿದರೆ ಅದರ ಹಿಂದೆ ಆ ಸಮುದಾಯದ ಹಿತವನ್ನು ಮಾತ್ರ ಕಾಪಾಡುವ ಇತರರ ಹಿತವನ್ನು ಕಡೆಗಣಿಸುವ ಗುಪ್ತಕಾರ್ಯ ಸೂಚಿ ಕೆಲಸ ಮಾಡುತ್ತಿರುತ್ತದೆ. ಚರಿತ್ರೆಯುದ್ದಕ್ಕೂ ಉತ್ತರದ ಪ್ರತಿಮೆಗಳು ದಕ್ಷಿಣವನ್ನೂ ಪ್ರಭುತ್ವದ ಪ್ರತಿಮೆಗಳು ತಳಸಮುದಾಯಯಗಳನ್ನೂ ಪುರುಷ ಪ್ರತಿಮೆಗಳು ಹೆಣ್ಣನ್ನೂ ಬಹುಸಂಖ್ಯಾತರ ಧಾರ್ಮಿಕ ಹಾಗೂ ಭಾಷಿಕ ಪ್ರತಿಮೆಗಳು ಅಲ್ಪಸಂಖ್ಯಾತರನ್ನೂ ನಿಯಂತ್ರಿಸುವ, ನಿರ್ದೇಶಿಸುವ ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಲೇ ಬಂದಿವೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದ ಬಸವಣ್ಣ. ಅದು ಎಲ್ಲ ಹೋರಾಟಗಾರರ ಸದಾಶಯ. ಸ್ಥಾವರ ಪ್ರತಿಮಾ ರಾಜಕಾರಣವನ್ನು ಭಗ್ನಗೊಳಿಸಲು ಇಷ್ಟಲಿಂಗದಂಥ ಚಲನಶೀಲ ಪ್ರತಿಮೆಯನ್ನು ಬಳಸಿಕೊಂಡ. ಆದರೆ ಚರಿತ್ರೆಯಲ್ಲಿ ಸ್ಥಾವರ ಪ್ರತಿಮೆಗಳು ಅಳಿಯುವುದಿಲ್ಲ. ಮತ್ತೆ ಮತ್ತೆ ಎದ್ದು ನಿಂತು ಅಧಿಕಾರ ಕೇಂದ್ರಗಳನ್ನು ಒಂದು ನಿಶ್ಚಿತ ವರ್ಗಕ್ಕೆ ಹಸ್ತಾಂತರಿಸುವ ರಾಜಕಾರಣವನ್ನು ಮಾಡುತ್ತಲೇ ಬಂದಿವೆ. ಬುದ್ಧ, ಬಸವರ ಮೇಲೆ ಹಲ್ಲೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಕನರ್ಾಟಕತ್ವವನ್ನು ಪ್ರತಿನಿಧಿಸಲು ಇಂದು ಚಾಲ್ತಿಯಲ್ಲಿರುವ ‘ಕನ್ನಡ ಭುವನೇಶ್ವರಿ’ ರೂಪಕವನ್ನು ಕುರಿತು ಚರ್ಚಿಸಲಾಗಿದೆ.
2
ಕರ್ನಾಟಕ ಭುವನೇಶ್ವರಿ – ತಾತ್ವಿಕ ಪ್ರಶ್ನೆಗಳು

ಮೈಸೂರು ದಸರಾ ಹಾಗೂ ಕರ್ನಾಟಕ ರಾಜ್ಯೋತ್ಸವಗಳನ್ನು ಈಗತಾನೇ ವೈಭವದಿಂದ ಆಚರಿಸಲಾಯಿತು. ನಾಡಹಬ್ಬ ಎಂದು ಬಣ್ಣಿಸಲ್ಪಡುವ ಮೈಸೂರು ದಸರಾ ಕರ್ನಾಟಕ ಸರಕಾರದ ನೇತೃತ್ವದಲ್ಲಿಯೇ ವಿಜೃಂಭಣೆಯಿಂದ ಜರುಗಿತು. ಜಂಬೂಸವಾರಿಯಲ್ಲಿ ಆನೆಯಂಥ ಬಲಿಷ್ಠ ಆದರೆ ಮೂಕ ಪ್ರಾಣಿಯ ದುಬ್ಬದ ಮೇಲೆ ಅದರ ಶಕ್ತಿಗಿಂತಲೂ ಬಲಿಷ್ಠವಾದ ಚಾಮುಂಡೇಶ್ವರಿಯ ವಿಗ್ರಹವನ್ನು ಹೇರಿ ಮೆರೆಸಲಾಯಿತು. ರಾಜರಾಜೇಶ್ವರಿ ಅಥವಾ ಚಾಮುಂಡೇಶ್ವರಿ ಮೈಸೂರು ಅಸರ ಮನೆದೇವತೆಯೊ ಹೌದು. ಹಾಗೆಯೇ ನವೆಂಬರ್ 1 ರಂದು ಕನ್ನಡ ಭುವನೇಶ್ವರಿಯ ಪ್ರತಿಮೆಯ ಮೆರವಣಿಗೆ ಹಾಗೂ ಪೂಜೆಗೆಳು ವಿಧಾನಸೌಧದಿಂದ ಆರಂಭವಾಗಿ ಗ್ರಾಮಮಟ್ಟದ ಸರಕಾರಿ ಕಛೇರಿಗಳವರೆಗೂ ವ್ಯಾಪಿಸಿದ್ದವು. ಕನ್ನಡ ಪರ ಸಂಘಟನೆಗಳು ಕನ್ನಡ ಭುವನೇಶ್ವರಿಯ ರಂಗುರಂಗಿನ ಬೃಹತ್ ಟ್ಯಾಬ್ಲೈಡ್ ನಾಡಿನ ಹಾದಿಬೀದಿಯ ತುಂಬ ರಾರಾಜಿಸುವಂತೆ ಮಾಡಿದವು. ‘ಸರ್ವಜನಾಂಗದ ಶಾಂತಿಯ ತೋಟ’ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಎಂಬ ಜಾತ್ಯಾತೀತ ನಾಡಗೀತೆಯನ್ನು ಅದೇ ಸಂದರ್ಭದಲ್ಲಿ ಹಾಡಿಸಲಾಯಿತು. ಕರ್ನಾಟಕದಲ್ಲಿ ಕನ್ನಡ ಭಾಷೆ ಹಾಗೂ ನಾಡ ಹಬ್ಬದ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಭ್ರಮದ ಚಟುವಟಿಕೆಗಳು ಭಾರತದ ಸಂವಿಧಾನದ ಜಾತ್ಯಾತೀತ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯವೆಂಬ ಅಡಿಪಾಯವನ್ನೇ ಅಲುಗಾಡಿಸುತ್ತಿವೆ.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕನ್ನಡ ಭುವನೇಶ್ವರಿಯ ಹಲವಾರು ಚಿತ್ರಗಳು ಸೃಷ್ಟಿಯಾದವು. ಪರಾಶಕ್ತಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಮಹೇಶ್ವರಿ, ಮಹಾಕಾಳಿ, ಮೂಕಾಂಬಿಕಾ, ರತ್ನಗರ್ಭಾ, ಶ್ರೀದುರ್ಗಾ, ಇಂದ್ರಾಣಿ, ವಾರಾಹಿ, ಅದಿತಿ, ಕೌಮಾರಿ, ಕುಂಡಿಲಿನೀ, ತ್ರಿಪುರಸುಂದರಿ, ಸಾವಿತ್ರಿ ಮೊದಲಾದ ಹೆಸರುಗಳಿಂದ ಕರ್ನಾಟಕ ಭುವನೇಶ್ವರಿಯ ಚಿತ್ರಗಳನ್ನು ದೊಡ್ಡಮೇಟಿ ಅಂದಾನಪ್ಪನವರು ಕಲಾವಿದರಿಂದ ಬಿಡಿಸಿ ಹೋರಾಟಕ್ಕೆ ಚಾಲನೆ ನೀಡಿದ್ದರು. ಅವುಗಳಲ್ಲಿ ಮೂರ್ನಾಲ್ಕು ಚಿತ್ರಗಳು ಮಾತ್ರ ಹೆಚ್ಚು ಪ್ರಚಲಿತವಾಗಿವೆ. ಕನ್ನಡ ಭುವನೇಶ್ವರಿ, ಚಾಮುಂಡೇಶ್ವರಿ ಇತ್ಯಾದಿ ರೂಪಕಗಳನ್ನೂ ವಿರೋಧಿಸಲು ಹಲವಾರು ತಾತ್ವಿಕ ಕಾರಣಗಳಿವೆ. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಗಳು, ಪ್ರದೇಶ, ಭಾಷೆ, ಲಿಂಗ, ಜಾತಿ, ಧರ್ಮಗಳಾಚೆ ವಿಕಾಸಗೊಂಡ ಪ್ರಜಾಸತ್ತಾತ್ಮಕ ಪರಿಕಲ್ಪನೆಗಳಾಗಿದ್ದು ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಭಾರತದಂಥ ಜಾತ್ಯಾತೀತ ಗಣರಾಜ್ಯದ ಒಂದು ಅಂಗವಾದ ಕರ್ನಾಟಕ ಹಲವು ಮತ ಧರ್ಮಗಳ ಪಂಥಗಳ ಅನುಯಾಯಿಗಳು ಬಾಳಿಬದಕುತ್ತಿರುವ ನಾಡು. ಈ ನಾಡನ್ನು ಒಂದು ಧರ್ಮದ ಚಹರೆಗಳ ಮೂಲಕ ಗುರುತಿಸುವುದು ಪ್ರಜಾತಾಂತ್ರಿಕವಾಗಿ ಆರಿಸಿಬಂದ ಸರಕಾರಗಳು ಆ ಚಹರೆಗಳ ಸಾಮೂಹಿಕ ಆರಾಧನೆಯ ನೇತೃತ್ವ ವಹಿಸುವದು ಇತರ ಧರ್ಮಗಳ ಸಮುದಾಯಗಳಿಗೆ ನೋವನ್ನೂ ಅನಾಥತೆಯನ್ನು ಉಂಟುಮಾಡುವಂಥದ್ದು. ಸಂವಿಧಾನ ವಿರೋಧಿಯಾದದ್ದು.
ಭುವನೇಶ್ವರಿಯ ಪ್ರತಿಮೆ ರಾಣಿಯರೂಪದಲ್ಲಿದೆ. ಆಳುವರ್ಗದ ಅದೂ ಅರಸೊತ್ತಿಗೆಯ ನಿಲುವುಗಳನ್ನು ಪ್ರತಿನಿಧಿಸುತ್ತದೆ. ಶೂದ್ರ ಹಾಗು ದಲಿತ ಸಮುದಾಯಗಳು ಹಾಗೂ ದುಡಿಯುವ ವರ್ಗಗಳ ಆಶೋತ್ತರಗಳಿಗೆ ಇಲ್ಲಿ ಸ್ಥಾನವೇ ಇಲ್ಲ. ನಾಡನ್ನು ಸ್ತ್ರೀ ರೂಪಕವಾಗಿಸುವದು ಏಕಲಿಂಗೀಕರಿಸುವ ಅಪಾಯವನ್ನು ಒಳಗೊಂಡಿದೆ ಜತೆಗೆ ಹೆಣ್ಣನ್ನು ದೇವಿ ಇಲ್ಲವೇ ದಾಸಿ, ಸೌಮ್ಯ ಇಲ್ಲವೇ ರೌದ್ರರೂಪಿ ಎಂದು ಪರಿಭಾವಿಸುವ ಪುರುಷ ಸಂಕಥನವನ್ನು ಒಳಗೊಂಡಿದೆ. ಚಾಮುಂಡಿಯ ಕತೆ ಜನಜನಿತವಾದುದು. ತಾನು ಕೂಡಿದವ ದಲಿತ ಎಂದು ಗೊತ್ತಾದಾಗ ಅವನನ್ನು ಸಂಹಾರ ಮಾಡಲು ರೌದ್ರಾವತಾರ ತಾಳಿದ ಚಾಮುಂಡಿಯ ಕಥನ ದಲಿತ ವಿರೋಧಿ, ವರ್ಣಸಂಕರ ವಿರೋಧಿ, ಬ್ರಾಹ್ಮಣ್ಯದ ಪರವಾಗಿರುವಂಥದ್ದು.
ಈ ಅವೈಚಾರಿಕತೆಯನ್ನು ಪ್ರತಿಭಟಿಸಿ ಜಿ.ಎಚ್. ನಾಯಕ್ ಅವರು ದಸರಾ ಹಬ್ಬದಲ್ಲಿ ಪಂಪ ಪ್ರಶಸ್ತಿಯನ್ನು ಸ್ವೀಕರಿಸುವದನ್ನು ನಿರಾಕರಿಸಿ ಚರ್ಚೆಗೆ ಅವಕಾಶ ಕಲ್ಪಿಸಿದ್ದರು. ಆದರೆ ಕರ್ನಾಟಕದಲ್ಲಿ ತಮ್ಮ ಅಸ್ಮಿತೆಯನ್ನು ಪ್ರತಿನಿಧಿಸದ ಅಥವಾ ಮರೆಮಾಚುವ ಸಾಂಸ್ಕೃತಿಕ ರಾಜಕಾರಣದ ಅಪಾಯಕಾರಿ ನಡೆಯನ್ನು ಕುರಿತಂತೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ್ಗ, ರೈತ , ಕೂಲಿಕಾರ ವರ್ಗಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ದೇಶದಲ್ಲಿ ಮತೀಯ, ದಲಿತ ವಿರೋಧಿ, ಮಹಿಳಾ ವಿರೋಧಿ ಚಟುವಟಿಕೆಗಳು ಕಂಡುಬಂದಾಗ ದನಿಯೆತ್ತುವ ಪ್ರಬುದ್ಧತೆಯನ್ನು ಸದಾ ಕಾಪಾಡಿಕೊಂಡು ಬಂದಿರುವ ಕರ್ನಾಟಕದ ಪ್ರಗತಿಪರ ಮನಸ್ಸುಗಳು ಕರ್ನಾಟಕತ್ವವನ್ನು ಜಾತ್ಯಾತೀತಗೊಳಿಸುವ ಸರ್ವ ಪ್ರತಿನಿಧೀಕರಿಸುವ ಹೋರಾಟದಲ್ಲಿ ಯಾಕೆ ಕ್ರಿಯಾಶೀಲವಾಗುತ್ತಿಲ್ಲ? ಧಾರ್ಮಿಕ ಹಾಗೂ ಭಾಷಿಕ ಮೂಲಭೂತವಾದಿತನ ಪರಾಕಾಷ್ಠೆ ಮುಟ್ಟಿ ಸರ್ವಾಧಿಕಾರಿ ಸಾಮಾಜಿಕ ಪರಿಸರ ನಿರ್ಮಾಣವಾಗಿದೆಯೇ? ಕರ್ನಾಟಕತ್ವದಿಂದ ಭುವನೇಶ್ವರಿಯನ್ನು ಕೆಳಗಿಳಿಸುವ ಪ್ರಸ್ತಾಪ ಕನ್ನಡಪರ ಸಂಘಟನೆಗಳ ಭಾವುಕ ಆಕ್ರೋಶಕ್ಕೆ ತುತ್ತಾಗುವ ಭಯವೇ? ಚಾರಿತ್ರಿಕವಾಗಿ ಮತೀಯ ರಾಷ್ಟ್ರೀಯತೆ ಮತ್ತು ಮತೀಯ ಉಪರಾಷ್ಟ್ರೀಯತೆಯೊಂದಿಗೆ ತಳಕು ಹಾಕಿಕೊಂಡಿರುವ ಭುವನೇಶ್ವರಿಯ ಪ್ರತಿಮೀಕರಣದ ವಿರೋಧ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಆತಂಕವೇ? ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿ ಮೆರವಣಿಗೆಯನ್ನೋ ಮಹಾರಾಜರ ತುಣುಕು ಖಾಸಗಿ ದರಬಾರನ್ನೋ ನೋಡಲು ಜನಬರುವುದಿಲ್ಲ.
ಕರ್ನಾಟಕದ ಕಲಾಪ್ರಕಾರಗಳನ್ನು ಆಸ್ವಾದಿಸಲು ಎಲ್ಲ ಜಾತಿ ಧರ್ಮ ಪಂಥಗಳ ಜನಸಮುದಾಯ ಒಂದಾಗಿ ಸೇರುತ್ತಾರೆಂಬ ಮತ್ತೊಂದು ಆಯಾಮದಲ್ಲಿ ಅರ್ಥೈಸಿಕೊಳ್ಳಬೇಕೆ? ಪ್ರಜಾಪ್ರಭುತ್ವ ಕಾಲದಲ್ಲಿ ಅರಸೊತ್ತಿಗೆಯನ್ನು ಪ್ರತಿಪಾದಿಸುವ ಹಾಗೂ ಜಾತ್ಯಾತೀತ ಗಣರಾಜ್ಯದಲ್ಲಿ ಒಂದು ಧರ್ಮದ ಚಹರೆ ಅಧಿಕಾರದ ಶಕ್ತಿ ಕೇಂದ್ರದಲ್ಲಿ ರಾರಾಜಿಸುವುದನ್ನು ಕಡೆಗಣಿಸಬಹುದೇ?. ಇಂಥ ಬಿಕ್ಕಟ್ಟಿನ ಕಾಲದಲ್ಲಿ ಮೌನವು ಒಪ್ಪಿಗೆಯನ್ನೇ ಉತ್ಪಾದಿಸುತ್ತವೆ. ನಾವೆಲ್ಲ ಮೌನವಾಗಿದ್ದೇವೆ. ಬೇಂದ್ರೆಯವರ ‘ಒಂದೇ ಕರ್ನಾಟಕ’ ಎಂಬ ಕವಿತೆ ನೆನಪಾಗುತ್ತಿದೆ. ಇದು ಪ್ರಕಟವಾದದ್ದು 1951ರಲ್ಲಿ. ಕರ್ನಾಟಕ ಏಕೀಕರಣ ಚಳುವಳಿಯ ಭಾವೋತ್ಕರ್ಷದ ಕಾಲವದು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆರ್ಯನ್ ರೇಸ್ ಬಗ್ಗೆ ಅದು ಅತ್ಯಂತ ಶ್ರೇಷ್ಠವಾದದ್ದು ಉಳಿದೆಲ್ಲ ರೇಸ್ಗಳನ್ನು ಅದಕ್ಕಿಂತ ಕೀಳು ಎಂದು ನೋಡಬೇಕು ಎನ್ನುವ ಹಿಟ್ಲರನ ಧೋರಣೆಗೆ ಸಂವಾದಿಯಾದ, ಕನ್ನಡ ಎಲ್ಲಕ್ಕಿಂತ ಶ್ರೇಷ್ಠ ಮಿಕ್ಕವೆಲ್ಲ ಟೀಕೆಗೆ ಗುರಿಯಾಗಬೇಕಾಗಿದ್ದು ಎನ್ನುವ ಧೋರಣೆಯನ್ನು ವಿಡಂಬಿಸಿರುವದಾಗಿ ಬೇಂದ್ರೆಯವರೇ ಹೇಳಿಕೊಂಡಿದ್ದಾರೆ. ಏಕೀಕರಣ ಚಳುವಳಿಯ ಮೂಲಕ ಕರ್ನಾಟಕತ್ವ ಪಡೆಯುತ್ತಿದ್ದ ಮತೀಯ ಆಯಾಮವನ್ನು ನಿರಾಕರಿಸುವ ಪದ್ಯವಿದು.
ಇಲ್ಲಿಯ ಜನ-ಮನ-ಭಾಷೆಯು ಕನ್ನಡವದು ಒಂದೇ
ಒಂದೇ ಜನವೂ ಒಂದೇ ಮನವೂ ಕನ್ನಡಿಗರು ಎಂದೇ
ಕುಲವೊಂದೇ ಸ್ಥಲವೊಂದೇ ನೀತಿಯನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರೂ ಒಂದೇ
ಇರದಿದ್ದರೂ ಒಂದೇ
ಒಂದೇ ಒಂದೇ ಒಂದೇ ಕರ್ನಾಟಕವೊಂದೇ
ಒಂದೇ ಕುಲ, ಒಂದೇ ನೆಲ, ಒಂದೇ ನೀತಿ ಎನ್ನದವರು ಇದ್ದರೂ ಒಂದೇ ಇರದಿದ್ದರೂ ಒಂದೇ ಎನ್ನುವಲ್ಲಿ ವ್ಯಂಗ್ಯವನ್ನು ಗಮನಿಸಬೇಕು. ಪ್ರಾಯಶಃ ಈ ಕವಿತೆಯಷ್ಟು ಅಪಾರ್ಥವಾದ ಕವಿತೆ ಕನ್ನಡದಲ್ಲಿ ಬೇರೊಂದಿಲ್ಲ ಎಂದು ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಅಭಿಪ್ರಾಯಪಡುತ್ತಾರೆ. ನಾಡಿನ ಬಹುಸಾಂಸ್ಕೃತಿಕತೆಯನ್ನು ಧ್ವಂಸಗೊಳಿಸುವ ಭಾಷಿಕ ಮೂಲಭೂತವಾದಿತನ ಹಾಗೂ ಸರ್ವಾಧಿಕಾರಿ ಮನೋಧರ್ಮವನ್ನು ತೀವೃವಾಗಿ ವಿಡಂಬಿಸಿದ ಈ ಪದ್ಯವನ್ನು ಕನ್ನಡಿಗರು ವಾಚ್ಯವಾಗಿ ಸ್ವೀಕರಿಸಿ ಕನ್ನಡಭಿಮಾನದ ಉತ್ತೇಜನಕ್ಕೆ ಬಳಸಿಕೊಳ್ಳುತ್ತಿರುವುದು ತಲ್ಲಣದ ವಿಷಯ. ಇದು ಕನ್ನಡ ಎದುರಿಸತ್ತಿರುವ ಹೊರಗಿನ ಆಕ್ರಮಣದ ಪರಿಣಾಮವೋ ಅಥವಾ ಕನ್ನಡ ಭಾಷಿಕ ಸಮುದಾಯದಲ್ಲಿ ಮೌನವಾಗಿ ಆವರಿಸುತ್ತಿರುವ ಭಾಷಿಕ ಮೂಲಭೂತವಾದದ ಪರಿಣಾಮವೋ? ಕನ್ನಡ ನಿರಂತರ ಬಿಕ್ಕಟ್ಟುಗಳನ್ನು ಎದುರಿಸಿದೆ. ಮತ್ತು ಅವುಗಳನ್ನು ಅರಗಿಸಿಕೊಂಡಿದೆ. ಸಂಸ್ಕೃತ, ಪ್ರಾಕೃತ, ಹಿಂದಿ, ಇಂಗ್ಲೀಷ್, ಪರ್ಶಿಯನ್ ಭಾಷೆಗಳ ಶಕ್ತಿರಾಜಕಾರಣದ ಸರ್ವಾಧಿಕಾರಿ ನಡೆಯನ್ನು ಪ್ರತಿಭಟಿಸಿದೆ. ಹಾಗೂ ಅನ್ಯಭಾಷೆಗಳ ಸಾಹಿತ್ಯಿಕ ಸಾಂಸ್ಕೃತಿಕ ದರ್ಶನಗಳನ್ನು ಸ್ವೀಕರಿಸಿದೆ. ಆದರೆ ತನ್ನ ಅಧಿಕಾರ ಕೇಂದ್ರದ ಒಳವಲಯದ ಭಾಷೆಗಳು ಹಾಗೂ ಭಾಷಿಕ ಸಮುದಾಯಗಳ ವಿಷಯದಲ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆಯೇ ಎಂಬ ಸಂಶಯಕ್ಕೆ ಭುವನೇಶ್ವರಿಯ ಪ್ರತಿಮೆ ಪುಷ್ಠಿ ನೀಡುತ್ತದೆ.
ದಿಲ್ಲಿ ದೂರದರ್ಶನ ಆಕಾಶವಾಣಿಗಳಲ್ಲಿ ಕನ್ನಡ ಚಾನಲ್ ಹಾಗೂ ಕನ್ನಡ ವಾರ್ತೆಗಳನ್ನು ನಿರೀಕ್ಷಿಸುವ ನಾವು ಕರ್ನಾಟಕದಲ್ಲಿ ಉರ್ದು ಕೊಂಕಣಿ ತುಳು ಕೊಡವ ಇತ್ಯಾದಿ ಭಾಷಿಕರಿಗಾಗಿ ವಾರ್ತೆಗಳನ್ನು ಪ್ರಸಾರ ಮಾಡುವ ವ್ಯವಸ್ಥೆಯ ಬಗ್ಗೆ ಚಿಂತಿಸಿದ್ದವೆಯೇ? ಇದು ಕೇವಲ ಒಂದು ವಾರ್ತೆಯ ಪ್ರಶ್ನೆಯಲ್ಲ. ಒಟ್ಟಾರೆ ಅಲ್ಪಸಂಖ್ಯಾತ ಭಾಷಿಕ, ಧಾರ್ಮಿಕ, ಜನಾಂಗಿಕ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ನೈತಿಕ ಜವಾಬ್ದಾರಿಯ ಪ್ರಶ್ನೆಯಾಗಿದೆ.
3
‘ಕನ್ನಡ ಭುವನೇಶ್ವರಿ’ ಯ ಹುಟ್ಟು ಮತ್ತು ಬೆಳವಣಿಗೆ

ಭಾರತದ ಚರಿತ್ರೆಯಲ್ಲಿ ಪುರೋಹಿತಶಾಹಿ ವಂಚಕತನ ಉರಿವ ಮನೆಗಳಲ್ಲಿಯ ಗಳವನ್ನು ಹಿರಿಯುವ ರೀತಿಯದು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕರ್ನಾಟಕ ಏಕೀಕರಣ ಚಳುವಳಿಗಳು ಇದಕ್ಕೆ ಉತ್ತಮ ಉದಾಹರಣೆ. ದೇಶವನ್ನು ವಸಾಹತುಶಾಹಿಯಿಂದ ಬಿಡುಗಡೆಗೊಳಿಸುವ ಹಾಗೂ ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸುವ ಸಾಮೂಹಿಕ ಸಂಕಟಗಳ ಹೋರಾಟಗಳ ಒಡಲಲ್ಲೇ ಅತ್ಯಂತ ನಿಖರವಾಗಿ ತಮ್ಮ ಭವಿಷ್ಯದ ಹಿತಾಸಕ್ತಿಯ ಕಾರ್ಯಸೂಚಿಗಳನ್ನು ಬಿತ್ತಲಾಯಿತು. ವಸಾಹತುಶಾಹಿಯು ಗತಕಾಲದ ವೈಭವೀಕರಣ ಹಾಗೂ ಮಧ್ಯಕಾಲೀನ ಚರಿತ್ರೆಯ ವಿಕೃತೀಕರಣಗಳೆಂಬ ಒಡೆದಾಳುವ ನೀತಿಯ ಸಂಕಥನಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಟ್ಟಿತು. ರೋಮಿಲಾ ಥಾಪರ ಹೇಳುವಂತೆ ಪುರಾತನ ಕಾಲದಲ್ಲಿ ಹಿಂದೂ ಸಮಾಜ ಆದರ್ಶಪ್ರಾಯವಾಗಿತ್ತು, ಮುಸ್ಲಿಮರು ಭಾರತಕ್ಕೆ ಬಂದುದೇ ಎಲ್ಲ ಕೆಡುಕಿನ ಮೂಲ ಎನ್ನುವುದು ಅದರ ಪ್ರತಿಪಾದನೆಯಾಗಿತ್ತು. ಹಿಂದೂ ಕೋಮುವಾದಿಗಳು ಈ ಪ್ರತಿಪಾದನೆಯನ್ನು ಪ್ರತಿಮೀಕರಿಸತೊಡಗಿದರು. ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಹೋರಾಟದಲ್ಲಿ ಹಿಂದೂ ಆಕರಗಳ ಬಳಕೆ ಸಹಜವಾಗಿದ್ದರೂ ಅದು ತೀವ್ರಗಾಮಿಗಳಲ್ಲಿ ಕೋಮುವಾದಿ ಸ್ವರೂಪವನ್ನು ಪಡೆದಿತ್ತು. ವಿದೇಶೀ ಬಂಡವಾಳಶಾಹಿಯ ವಿರುದ್ಧ ದೇಶೀ ಬಂಡವಾಳಶಾಹಿ ಬಲಗೊಂಡು ನಡೆಸಿದ್ದ ಹೋರಾಟದ ಪ್ರತಿನಿಧಿಗಳಾಗಿದ್ದ ತೀವ್ರಗಾಮಿಗಳು ಸ್ವರಾಜ್ಯವನ್ನು ಹಿಂದೂ ಮೇಲ್ಜಾತಿ ಮೇಲ್ವರ್ಗ ಹಾಗೂ ಬಂಡವಾಳಶಾಹಿಗಳ ಕೈಗೊಪ್ಪಿಸುವ ಆಶಯವನ್ನು ಹೊಂದಿದ್ದರು. ಹೀಗಾಗಿ ಭಗವದ್ಗೀತೆ ಅವರಿಗೆ ಸ್ಫೂರ್ತಿ ನೀಡಿತು.
ಬ್ರಿಟೀಷ್ ಆಧಿಪತ್ಯದಲ್ಲಿ ಪ್ರಾತಿನಿದ್ಯಕ್ಕಾಗಿ ಮುಸ್ಲಿಂ ಮೇಲ್ವರ್ಗ ನಡೆಸಿದ ಹೋರಾಟ ಹಾಗೂ ಅದರಿಂದ ಪ್ರೇರಿತವಾಗದ ಹಿಂದೂ ಶೂದ್ರ, ದಲಿತ, ಕೆಳಜಾತಿ ಸಮುದಾಯಗಳ ಪ್ರಾತಿನಿಧ್ಯದ ಜಾಗೃತಿಯನ್ನು ನಿಯಂತ್ರಿಸಲು ಭಗವದ್ಗೀತೆಯ ವರ್ಣಾಶ್ರಮ ಚಿಂತನೆಯಲ್ಲಿ ಹೋರಾಟವನ್ನು ಮುಂದುವರೆಸುವದು ಅವರಿಗೆ ಅನಿವಾರ್ಯವಾಗಿತ್ತು. ಜನತೆಯ ವಿರೋಧವನ್ನು ಪ್ರತಿಫಲಾಪೇಕ್ಷೆ ಇಲ್ಲದೇ ಹೋರಾಟಕ್ಕೆ ಬಳಸಿಕೊಂಡು ಸ್ವರಾಜ್ಯವನ್ನು ಪಡೆಯುವ ಹಾಗೂ ಅದರ ವಾರಸುದಾರಿಕೆಯನ್ನು ವರ್ಣಾಶ್ರಮ ವ್ಯವಸ್ಥೆಗೊಪ್ಪಿಸುವ ಆಶಯ ಹಿಂದೂ ಆಕರಗಳ ಬಳಕೆಯ ಹಿಂದಿನ ಆಶಯವಾಗಿತ್ತು. ಬಂಕಿಮಚಂದ್ರರ ‘ವಂದೇ ಮಾತರಂ’ ಗೀತೆಯನ್ನೊಳಗೊಂಡ ಆನಂದಮಠ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿತು. ನಾಡನ್ನು ತಾಯಿ ಮಾತೆಗೆ ಸಮೀಕರಿಸಿ ತಿಳಕರು ಗಣೇಶ ಚತುರ್ಥಿ, ಶಿವಾಜಿ ಜಯಂತಿ, ಆರಂಭಿಸಿದ್ದು ಕೂಡ ಈ ಉದ್ದೇಶದಿಂದಲೇ. ಇದೇ ವೇಳೆಯಲ್ಲಿ ಮುಸ್ಲಿಂ ಮೇಲುವರ್ಗಕೂಡ ತಮ್ಮ ಧಾರ್ಮಿಕ ಪರಿಕರಗಳಲ್ಲಿ ಹೋರಾಟಕ್ಕೆ ಸಂಕೇತಗಳನ್ನು ಕಂಡುಕೊಳ್ಳತೊಡಗಿತು. ರಾಷ್ಟ್ರೀಯ ಹೋರಾಟದಲ್ಲಿ ರೂಪತಾಳಿದ ಧಾರ್ಮಿಕ ಚಹರೆಗಳು ಗಾಂಧೀ ಸಾವಿನ ಅರ್ಧ ಶತಮಾನದ ನಂತರ ಬಲಪಂಥೀಯ ಕೋಮುವಾದಿ ಸರಕಾರ ಸ್ಥಾಪನೆಗೊಳ್ಳುವಲ್ಲಿ ಬಳಕೆಯಾದವು. ಉತ್ತರ ಭಾರತದ ಚರಿತ್ರೆಯನ್ನು ವಸಹತುಶಾಹಿ ಹಾಗೂ ಮತೀಯ ರಾಷ್ಟ್ರೀಯವಾದಿ ಚರಿತ್ರೆ ತಿರುಚಿದಂತೆಯೇ ದಕ್ಷಿಣದ ವಿಜಯ ನಗರದ ಇತಿಹಾಸವನ್ನು ತಿರುಚಲಾಯಿತು.
ವಿಜಯನಗರದ ಹುಟ್ಟು ಮತ್ತು ಪತನಗಳನ್ನು ಹಿಂದೂ ಧರ್ಮದ ರಕ್ಷಣೆ ಮತ್ತು ಪತನಗಳಿಗೆ ಸಮೀಕರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಹೋರಾಟದೊಂದಿಗೆ ಕರ್ನಾಟಕ ಏಕೀಕರಣ ಚಳುವಳಿಯೂ ಸೇರಿಕೊಂಡಿತು. ಹಿಂದೂ ಸಾಮ್ರಾಜ್ಯದ ಗತವೈಭವದ ಕೂಸಾಗಿ ಕನಾಟಕ ಗತವೈಭವದ ಪರಿಕಲ್ಪನೆ ಉದಯಿಸಿ ಹಿಂದುತ್ವದೊಳಗೆ ಕನ್ನಡತ್ವದ ಕರಳುಬಳ್ಳಿಯ ಸಂಬಂಧವನ್ನು ಹೊಸೆಯಲಾಯಿತು. ಫಾದರ್ ಹೆರಾಸ್ ಎಂಬ ವಸಾಹತುಶಾಹಿ ಚರಿತ್ರೆಕಾರ ಹೊಯ್ಸಳ ಮತ್ತು ಸಂಗಮರ ಮಧ್ಯ ಧಾರ್ಮಿಕ ವಂಶಸಂಬಂಧವನ್ನು ಕಲ್ಪಿಸಿ ಹೊಯ್ಸಳರು ಮುಸ್ಲಿಂ ಆಕ್ರಮಣಕಾರರ ವಿರುದ್ಧ ಹಿಂದೂ ಸಾಮ್ರಾಜ್ಯ ಸ್ಥಾಪಿಸಲು ಸಂಗಮ ವಂಶಕ್ಕೆ ಪ್ರೇರಣೆ ನೀಡಿದರೆಂದು ಬರೆಯುವ ಮೂಲಕ ವಿಜಯನಗರ ಸಾಮ್ರಾಜ್ಯದ ಉದಯದ ಕಥನವನ್ನು ಮತೀಕರಿಸಿದರು. ರಾಬರ್ಟ್ ಸೀವೆಲ್ ‘ದಿ ಫಾರ್ಗಾಟನ್ ಎಂಪೈರ್’ ಕೃತಿಯಲ್ಲಿ ಮುಸ್ಲಿಮರ ದುರಾಕ್ರಮಣದಿಂದ ವಿಜಯನಗರ ನಾಶವಾಯಿತೆಂಬ ಮತೀಯ ಸಂಕಥನವನ್ನು ರೂಪಿಸಿದ. ಡಾ. ವಿ.ಎ. ಸಾಲೆತ್ತೊರೆ, ಡಾ. ಪಿ.ಬಿ. ದೇಸಾಯಿಯವರಂಥ ಇತಿಹಾಸಕಾರರು ಇವುಗಳನ್ನಾಧರಿಸಿ ಕರ್ನಾಟಕದ ಚರಿತ್ರೆಯನ್ನು ರೂಪಿಸಿದರು. ಆಲೂರ ವೆಂಕಟರಾಯರು ‘ಕರ್ನಾಟಕದ ಗತವೈಭವ’ ಹಾಗೂ ‘ಶ್ರೀ ವಿದ್ಯಾರಣ್ಯ ಚರಿತೆ’ ಕೃತಿಗಳನ್ನು ಬರೆದರು. ಡಾ. ಎಂ. ಚಿದಾನಂದಮೂರ್ತಿಯವರು ಇಂದಿಗೂ ಈ ಮತೀಯ ಚಿಂತನೆಯ ಪ್ರತಿಪಾದಕರಾಗಿದ್ದಾರೆ.
ತಮಿಳು ಭಾಷಾ ಚಳುವಳಿ ಹಾಗೂ ಉಪರಾಷ್ಟ್ರೀಯತೆಗೆ ಪೆರಿಯಾರ್ ಅವರ ಚಿಂತನೆಯ ಪ್ರಭಾವವಿತ್ತು. ಅದು ಸ್ಪಷ್ಟವಾಗಿ ಬ್ರಾಹ್ಮಣವಿರೋಧಿ, ಆರ್ಯನ್ ವಿರೋಧಿ ಹಾಗೂ ಉತ್ತರಭಾರತ ವಿರೋಧಿ ನಿಲುವುಗಳನ್ನು ಹೊಂದಿತ್ತು. ಕೇರಳ ಭಾಷಾ ಚಳುವಳಿಗೆ ಎಡಸಿದ್ಧಾಂತರ ಪ್ರೇರಣೆ ಸಿಕ್ಕಿತು. ಆದರೆ ಕನ್ನಡ ಭಾಷಾ ಚಳುವಳಿಗೆ ಮತೀಯ ಚರಿತ್ರೆ ಆಧಾರವಾಯಿತು. ದಕ್ಷಿಣ ಭಾರತದಲ್ಲಿ ಬಲಪಚಿಥೀಯ ಕೋಮುವಾದಿ ಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದು ಕನರ್ಾಟಕದಲ್ಲಿ ಆಗ ‘ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವ’ದ ಮೂಲಕ ಈ ಮತೀಯ ಸಂಕಥನವನ್ನು ಜನಸಮುದಾಯಕ್ಕೆ ಮತ್ತೊಮ್ಮೆ ನೆನಪಿಸಲಾಯಿತು. ‘ಕನ್ನಡ ಭುವನೇಶ್ವರಿ’ ಪ್ರತಿಮೆ ಕನರ್ಾಟಕದಲ್ಲಿ ಬಲಪಂಥೀಯ ಕೋಮುವಾದ ಬೆಳವಣಿಗೆಗೆ ಪೂರಕವಾದಂತಿದೆ.
ಆಧುನಿಕ ಕನ್ನಡದ ಬಹುತೇಕ ಕವಿಗಳು ವಿಜಯನಗರ ಸಾಮ್ರಾಜ್ಯದ ಮತೀಯ ಚರಿತ್ರೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಶಾಂತಕವಿಗಳು ಮೊದಲ ಬಾರಿಗೆ ‘ವಿದ್ಯಾರಣ್ಯ ವಿಜಯ’ವೆಂಬ ಕೀರ್ತನೆಯಲ್ಲಿ ಈ ಮತೀಯ ಸಂಕಥನವನ್ನು ದಾಖಲಿಸಿದರು. ಕನ್ನಡತ್ವವನ್ನು ಬಡಿದೆಬ್ಬಿಸಲು ಮುಸ್ಲಿಂ ವಿರೋಧಿ ತಿರುಚಿದ ಚರಿತ್ರೆ ಆಧಾರವಾಯಿತು. ಶಾಂತ ಕವಿಗಳು ತಮ್ಮ ಕೀರ್ತನೆಯಲ್ಲಿ ಮಹಮ್ಮದೀಯರ ದಾಳಿಯಿಂದ ಸರ್ವನಾಶವಾದ ವಿಜಯನಗರ ಸಾಮ್ರಾಜ್ಯದ ದುರಂತವನ್ನು ಭಾವುಕವಾಗಿ ಚಿತ್ರಿಸಿದರು. ಹರಿಹರ ಸಾಯಣರಿಗೆ ಹೊಸರಾಜ್ಯವನ್ನು ಕಟ್ಟಲು ವಿದ್ಯಾರಣ್ಯರು ಧರ್ಮದೀಕ್ಷೆ ನೀಡಿ ಪ್ರೇರೇಪಿಸಿದ ಹಾಗೂ ಕನ್ನಡ ಭುವನೇಶ್ವರಿ ಆಶೀರ್ವದಿಸಿದ ಕಥನವನ್ನು ನಿರೂಪಿಸಿದರು. ಹೀಗೆ ಕನ್ನಡತ್ವದ ಪರಿಕಲ್ಪನೆ ಭುವನೇಶ್ವರಿಯ ರೂಪದಲ್ಲಿ ಮತೀಯ ರೂಪ ತಾಳಿತು. ಚಾರಿತ್ರಿಕವಾಗಿ ಪರಧರ್ಮ ಪರ ವಿಚಾರಗಳ ಸೈರಣಾವಾದವನ್ನು ಕನ್ನಡತ್ವವೆಂದು ಪ್ರತಿಪಾದಿಸಿದ ಕವಿರಾಜಮಾರ್ಗಕಾರನ ವಿವೇಕಕ್ಕೆ ಧಕ್ಕೆಯಾಯಿತು. ಬಿ.ಎಂ.ಶ್ರೀಯವರು ‘ಕನ್ನಡ ತಾಯ ನೋಟ’ ದಲ್ಲಿ ಹಿಂದೊಮ್ಮೆ ಹಿರಿದಾಗಿ ಬಾಳಿ ಸಧ್ಯ ಹಾಳು ಹಂಪೆ ಬಡವಾಗಿ ಕಣ್ಣೀರಿಡುತ್ತಿರುವ ‘ಭುವನೇಶ್ವರಿ’ಯನ್ನು ಚಿತ್ರಿಸಿದ್ದಾರೆ. ಶಾಂತ ಕವಿಗಳಿಂದ ಮೊದಲುಗೊಂಡು 2009 ರಲ್ಲಿ ಪ್ರಕಟವಾದ ಎಚ್.ಎಸ್.ವೆಂಕಟೇಶಮೂರ್ತಿಯವರ ‘ಹಂಪೆಯಲ್ಲಿ’ ಕವಿತೆಯವರೆಗೆ ಕನ್ನಡ ನಾಡಗೀತೆಗಳ ಪರಂಪರೆಯಲ್ಲಿ ಕನ್ನಡತ್ವದ ಮತೀಯ ನೆಲೆಗಳು ಅನಾವರಣಗೊಂಡಿವೆ.
ಕನ್ನಡ ನಾಡು ನುಡಿ ಸಂಸ್ಕೃತಿಗಳನ್ನು ಚಿತ್ರಿಸುವ ಪರಂಪರೆಯನ್ನು ಕಟ್ಟಿಕೊಳ್ಳುವ ಭುವನೇಶ್ವರಿಯನ್ನು ಕೇಂದ್ರದಲ್ಲಿಟ್ಟುಕೊಂಡ ನಾಡಗೀತೆಗಳಲ್ಲಿ ಕಂಡುಬರುವ ಹಲವು ಆಶಯಗಳನ್ನು ಸಂಗ್ರಹಿಸಬಹುದಾಗಿದೆ. ಮೊದಲನೆಯದಾಗಿ ಅವು ಮುಸ್ಲಿಂ ರಾಜಮನೆತನ, ಶಿಲ್ಪಕಲೆ, ಸಂಸ್ಕೃತಿ, ಚರಿತ್ರೆಗೆ ಸಂಬಂಧಿಸಿದ ಸಂಗತಿಗಳನ್ನು ಕನ್ನಡ ಪರಂಪರೆಯಿಂದ ಹೊರಗಿಡುತ್ತವೆ. ಶಾಂತಕವಿಗಳ ‘ರಕ್ಷಿಸು ಕರ್ನಾಟಕ ದೇವಿ’, ಗೋವಿಂದಪೈಗಳ ‘ಕನ್ನಡಿಗರ ತಾಯಿ’, ಬಿ.ಎಂ.ಶ್ರೀಯವರ ‘ಕನ್ನಡ ಬಾವುಟ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಬೇಂದ್ರೆಯವರ ‘ನನ್ನದು ಈ ಕನ್ನಡನಾಡು’, ಕುವೆಂಪು ಅವರ ‘ಮೆಟ್ಟುವ ನೆಲ ಕರ್ನಾಟಕ’ ರಸಿಕರಂಗರ ‘ಎಂಥ ನಾಡಿದು’ ಗೋಕಾಕರ ‘ನಾಡಿನ ಹಾಡು’, ಸಿದ್ಧಯ್ಯ ಪುರಾಣಿಕರ ‘ತಾಯಬರವು’ ಅಡಿಗರ ‘ಕನ್ನಡವೆಂದರೆ’, ಕಣವಿಯವರ ‘ವಿಶ್ವಭಾರತಿಗೆ ಕನ್ನಡದಾರತಿ’ ಹಾಗೂ ‘ಕನ್ನಡ ಜ್ಯೋತಿಯ ದೀಪಗಳು’, ಲಕ್ಷ್ಮೀನಾರಾಯಣಭಟ್ಟರ ‘ಜಯ ಜಯ ಜಯ ಕನ್ನಡ ರಾಜೇಶ್ವರಿ’ ಇತ್ಯಾದಿ.
ಮೌರ್ಯ ಕದಂಬರಿಂದ ಮೈಸೂರು ಅರಸರವರೆಗೆ ರಾಜ ಪರಂಪರೆಯನ್ನು, ಪಂಪ ರನ್ನರಿಂದ ಲಕ್ಷ್ಮೀಶ ಮುದ್ದಣರವರೆಗೆ ಕಾವ್ಯ ಪರಂಪರೆಯನ್ನು, ಬದಾಮಿ ಪಟ್ಟದಕಲ್ಲು ಶ್ರವಣಬೆಳಗೊಳ ಇತ್ಯಾದಿ ಶಿಲ್ಪಕಲಾ ಪರಂಪರೆಯನ್ನು ಕಟ್ಟಿಕೊಳ್ಳುವ ಈ ನಾಡಗೀತೆಗಳು ಆದಿಲ್ಷಾಹಿ, ಹೈದರ್, ಟಿಪ್ಪುಸುಲ್ತಾನ, ಬಿಜಾಪುರ, ಗೋಳಗುಮ್ಮಟ, ಶಿಶುನಾಳ ಶರೀಫ್ ಇತ್ಯಾದಿ ಕನ್ನಡ ಪರಂಪರೆಯ ಧಾರೆಯನ್ನು ಗಡಿಪಾರು ಮಾಡಿವೆ. ಇದಕ್ಕೆ ಕಾರಣ ವಿಜಯನಗರ ಚರಿತ್ರೆಯ ಮತೀಯ ಕಥನದ ಸ್ವೀಕಾರ. ಕುವೆಂಪು ಮೊದಲ ನಾಡಗೀತೆಯಲ್ಲಿ ಟಿಪ್ಪು, ಹೈದರ್ರನ್ನು ಸೇರಿಸಿದ್ದು ನಂತರದಲ್ಲಿ ಬಿಟ್ಟುಕೊಟ್ಟರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನಿಸಾರ್ ಅಹಮದ್ ಮತ್ತು ಎಂ. ಅಕಬರ್ ಅಲಿಯವರು ತಮ್ಮ ನಾಡಗೀತೆಗಳಲ್ಲಿ ಮುಸ್ಲಿಂ ಕುರುಹುಗಳನ್ನು ಸೇರಿಸಲು ಯತ್ನಿಸಿದ್ದಾರೆ. ಆದರೆ ನಿಸಾರ್ ಅಹಮದ್ ಹಾಗೂ ಬಿ.ಎ.ಸನದಿ ಅವರ ನಾಡಗೀತೆಗಳಲ್ಲಿ ಅವರ ಧರ್ಮಕ್ಕೆ ಸಲ್ಲದ ಮೂರ್ತಿ ಪೂಜೆ ಹಾಗೂ ಪೂಜಾ ವಿಧಾನಗಳು ವ್ಯಕ್ತಗೊಂಡಿವೆ. ಇದನ್ನು ಸಂಕರಶೀಲತೆ ಅನ್ನಬೇಕೋ, ಬಲಪಂಥೀಯರು ಅಪೇಕ್ಷಿಸುವ ‘ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕೆಂಬ’ ನಿರೀಕ್ಷೆಯನ್ನು ಪೂರೈಸಿದ ಅಸಹಾಯಕತೆಯೆನ್ನಬೇಕೋ ತಿಳಿಯದು.
ಈ ನಾಡಗೀತೆಗಳ ಭಾಷೆ ಸಂಸ್ಕೃತಭೂಯಿಷ್ಟವಾಗಿದೆ. ಸ್ವತಃ ‘ಭುವನೇಶ್ವರಿ’ಯೇ ಸಂಸ್ಕೃತಪದ. ಪ್ರಾಚೀನ ಸಾಹಿತ್ಯದಲ್ಲಿ ಉತ್ತರದ ಚೌಕಟ್ಟು ಇರುವ ಕೃತಿಗಳಲ್ಲಿಯೂ ದಕ್ಷಿಣದ ಕುರುಹುಗಳನ್ನು ಸ್ಥಾಪಿಸುವ ಪ್ರಯತ್ನ ನಡೆದಿತ್ತು. ಪಂಪ, ಹರಿಹರ ಇತ್ಯಾದಿ. ಆದರೆ ಇಲ್ಲಿ ಕರ್ನಾಟಕತ್ವ, ಸಂಸ್ಕೃತ ಭಾಷೆ ಹಾಗೂ ಆರ್ಯಸಂಸ್ಕೃತಿಗಳ ನಡುವೆ ಸುಸಂಬಂಧವನ್ನು ಕಲ್ಪಿಸುವ ಕ್ರಮ ಕಂಡುಬರುತ್ತದೆ. ಈ ಎಲ್ಲ ನಾಡಗೀತೆಗಳಲ್ಲಿ ಎದ್ದುಕಾಣುವ ಬಹುಮುಖ್ಯ ಸಂಗತಿಯೆಂದರೆ ದಲಿತ, ಜಾನಪದ ಮತ್ತು ಮಹಿಳಾ ಜಗತ್ತಿನ ಕಣ್ಮರೆ. ಕೋಮುವಾದ ಬಹಿರಂಗದಲ್ಲಿ ಹಿಂದೂ ಮುಸ್ಲಿಂ ವಿರೋಧದಂತೆ ಕಂಡರೂ ಆಳದಲ್ಲಿ ಶೂದ್ರ ದಲಿತರ ಮಹಿಳೆಯರ ಹಕ್ಕುಬಾಧ್ಯತೆಗಳನ್ನು ನಿರಾಕರಿಸುತ್ತದೆ. ಕನ್ನಡದ ನಾಡಗೀತೆಗಳಲ್ಲಿ ಈ ಚಹರೆಗಳು ಕಂಡುಬರುತ್ತದೆ. ಬಹುತೇಕ ನಾಡಗೀತೆಗಳು ಕರ್ನಾಟಕವನ್ನು ಕಟ್ಟುವುದು ಆಳುವ ವರ್ಗದ ವೈಭವೀಕರಣ ಹಾಗೂ ಶಿಷ್ಟ ಧರ್ಮಗಳ ಪ್ರತಿಷ್ಠಾಪನೆಯ ಮೂಲಕ. ಕರ್ನಾಟಕದ ಸಂಕರಶೀಲ ಅನುಭಾವ ಪರಂಪರೆಗಳನ್ನು ನಿರ್ಲಕ್ಷಿಸುತ್ತವೆ. ಕುವೆಂಪು ಅವರ ನಾಡಗೀತೆ ಕೂಡ ಧರ್ಮಸಮನ್ವಯದ ನುಡಿಗಳನ್ನು ಹೊರತುಪಡಿಸಿದರೆ ಉತ್ತರದ ವೈದಿಕ ಸಂಸ್ಕೃತಿಯ ವೈಭವೀಕರಣದಿಂದ ಆರಂಭವಾಗುತ್ತದೆ. ರಾಜಮನೆತನಗಳನ್ನು ಸಾಲಾಗಿ ಹಿಡಿಯುತ್ತದೆ. ಪ್ರಜಾಪ್ರಭುತ್ವ ಕಾಲದಲ್ಲೂ ರಾಜಪ್ರಭುತ್ವವನ್ನು ಪ್ರತಿಪಾದಿಸುವ ನಾಡಗೀತೆ ಬೇಕೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
ಎಂ. ಗೋಪಾಲಕೃಷ್ಣ ಅಡಿಗರ ನಾಡಗೀತೆಗಳು ಕರ್ನಾಟಕದ ಬಹುಪ್ರಾದೇಶಿಕತೆ, ಶೂದ್ರ ದಲಿತ ದುಡಿಯುವ ವರ್ಗದ ಪ್ರಾತಿನಿಧ್ಯವನ್ನು ಒಳಗೊಂಡಿವೆ. ಕರ್ನಾಟಕತ್ವಕ್ಕೆ ವಿಸ್ತೃತ ನೆಲೆಯನ್ನು ಒದಗಿಸುತ್ತವೆ. ಆದರೆ ಅವರ ಮತೀಯವಾದಿ ನಿಲುವಿಗೆ ತಕ್ಕಂತೆ ಮುಸ್ಲಿಮರನ್ನು ಹೊರಗಿಡುತ್ತವೆ. ‘ಈರ ಭೋರ ಭಟ್ಟ ಶೆಟ್ಟಿ ಕೂಲಿಕಾರ ರೈತ ಎಲ್ಲರದ್ದೂ ಕನ್ನಡ’ ಎನ್ನುವಾಗ ಸಾಬಿಗಳ ಒಂದೂ ಹೆಸರು ಸೇರ್ಪಡೆಯಾಗುವುದಿಲ್ಲ. ಶೂದ್ರ ದಲಿತರನ್ನೊಳಗೊಂಡು ಮುಸ್ಲಿಮರನ್ನು ವಿರೋಧಿಸುವ ಬಲಪಂಥೀಯ ರಾಜಕಾರಣದ ಸುಳಿವನ್ನು ಒಳಗೊಂಡಿವೆ.
ಮತೀಯ ರಾಷ್ಟ್ರೀಯವಾದವನ್ನು ಮತೀಯ ಉಪರಾಷ್ಟ್ರೀಯವಾದವನ್ನು ತಿರಸ್ಕರಿಸುವ ಧ್ವನಿಯನ್ನು ಬೇಂದ್ರೆಯವರಲ್ಲಿ ಕಾಣಬಹುದು. ‘ಒಂದೇ ಕರ್ನಾಟಕ’ ಭಾಷೆಯ ಹೆಸರಿನ ಹಿಟ್ಲರ್ ಶಾಹಿಯನ್ನು ಕನ್ನಡ ಮಾತೆಯ ಪರಿಕಲ್ಪನೆಯನ್ನೂ ವಿಡಂಬಿಸುತ್ತದೆ. ‘ಕನಸಿನೊಳಗೊಂದು ಕಣಸು’ ಕವಿತೆಯ ಒಡಲಾಳದಲ್ಲೂ ಇಂಥ ಸೂಕ್ಷ್ಮ ವಿಡಂಬನೆ ಇದೆ.
ರಾಷ್ಟ್ರೀಯವಾದ ಮತ್ತು ಉಪರಾಷ್ಟ್ರೀಯವಾದಗಳ ಮತೀಯ ಆಯಾಮವನ್ನು ದಲಿತ ಕಾವ್ಯ ದಲಿತನೆಲೆಯಿಂದ ತಿರಸ್ಕರಿಸಿದೆ. ಡಿ. ಗೋವಿಂದದಾಸ್ ಅವರ ‘ಭಾರತಾಂಬೆಯ ರಥೋತ್ಸವ’, ಅರವಿಂದ ಮಾಲಗ್ಪತ್ತಿಯವರ ‘ಭಾರತಾಂಬೆಗೆ’ ಕವಿತೆಗಳನ್ನು ಗಮನಿಸಬಹುದು. ಆದರೆ ಸಿದ್ಧಲಿಂಗಯ್ಯನವರ ‘ಕನ್ನಡವ್ವನಿಗೆ’ ಕವಿತೆ ದಲಿತ ನೆಲೆಯಿಂದ ‘ಭುವನೇಶ್ವರಿ’ ‘ಕನ್ನಡಮ್ಮನ’ ರೂಪಕವನ್ನು ಛಿದ್ರೀಕರಿಸುತ್ತದೆ. ಪ್ರಭುಗಳು, ವ್ಯಾಪಾರಿಗಳು ಹಾಗೂ ಪುರೋಹಿತಶಾಹಿಗಳ ಸಂಗಾತಿಯಾಗಿ ಅವರು ಕನ್ನಡವ್ವನನ್ನು ಕಲ್ಪಿಸಿದ್ದಾರೆ.
ರೈತರ ಬೆವರ ನೆಕ್ಕಿ ನೆಕ್ಕೂದಿದ
ಜಮೀನುದಾರರ ಜೊತೆಗಾತಿ
ಕಾರ್ಮಿಕರ ರಕ್ತದ ರವೆ ಉಂಡೆಯ ಉಂಡು ಕಾರಿನ
ಹಾರನ್ನಿನಂತೆ ತೇಗುವ ಮಾಲೀಕರ ಮಿಂಡಗಾತಿ’
ಕನ್ನಡ ಭುವನೇಶ್ವರಿಯ ಪ್ರತಿಮೆ ಹಾಳಾದ ಹಂಪೆಯ ಕಳವಳದ ಮತೀಯ ಚರಿತ್ರೆಯ ನಡುವೆ ಅವತರಿಸಿದೆ. ಬೇರೆ ಬೇರೆ ಸ್ತರಗಳಲ್ಲಿ ವಿಸ್ತರಿಸಿದೆ. ಅದನ್ನು ತಡುವುವುದು ಕೆಡುವುವುದು ಆಚರಣೆಯ ಸ್ತರದಲ್ಲಿ ಅಸಾಧ್ಯ ಎಂಬಂಥ ವಾತಾವರಣ ನಿಮರ್ಾಣವಾಗಿದೆ. ಆದರೆ ನಿಜವಾದ ಹಾಗೂ ಸತ್ವಶಾಲಿಯಾದ ಕರ್ನಾಟಕತ್ವದ ಉಳಿವಿಗಾಗಿ ಅದು ಬದಲಾಗಲೇ ಬೇಕಿದೆ.
4
ಪರ್ಯಾಯಗಳ ಹುಡುಕಾಟ

ಕರ್ನಾಟಕತ್ವ ಎನ್ನುವದು ಬಹುತ್ವ, ಶ್ರೇಣೀಕರಣ, ಸಂಘರ್ಷ ಹಾಗೂ ಸಂಕರಶೀಲತೆಗಳ ಸಾಂಸ್ಕೃತಿಕ ವಾಸ್ತವ. ಎರಡು ಎರಡೂವರೆ ಸಾವಿರ ವರುಷಗಳ ಆಗುವಿಕೆ. ಹಲವಾರು ಜನಾಂಗ ಧರ್ಮ ಪ್ರಭುತ್ವ ಭಾಷೆ ಸಮಾಜೋ ಆರ್ಥಿಕ ಸ್ಥಿತ್ಯಂತರಗಳಿಗೆ ಮುಖಾಮುಖಿಯಾಗುತ್ತ ಸಂಘರ್ಷ ನಿರಾಕರಣೆ ಹಾಗೂ ಸ್ವೀಕರಣ ಮಿಲನಗಳನ್ನೊಳಗೊಂಡಂತೆ ರೂಪತಾಳಿದ ಲೋಕಗ್ರಹಿಕೆಯ ವಿಧಾನ. ಇಂದಿಗೂ ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಜಾತಿ ಸಮುದಾಯಗಳಿವೆ. ಐವತ್ತಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಏಳೆಂಟು ಧರ್ಮ ಹಾಗೂ ಹತ್ತಾರು ಪಂಥಗಳ ಅನುಯಾಯಿಗಳಿದ್ದಾರೆ. ಇವುಗಳ ನಡುವೆ ತಾರತಮ್ಯ ಸಮಾನತೆಯ ಹೋರಾಟ ಜೀವಂತವಾಗಿದೆ. ವರ್ಗ ವರ್ಣ ಲಿಂಗಾಧಾರಿತ ಅಸಮಾನ ನೆಲೆಗಳಂತೂ ಭಿನ್ನ ಆಯಾಮಗಳಲ್ಲಿ ರೂಪಾಂತಗೊಂಡಿವೆ. ಇಂಥ ಕರ್ನಾಟಕವನ್ನು ಪ್ರತಿನಿಧಿಸುವ ಸಮರ್ಥ ಪ್ರತಿಮೆ ಎಂದರೆ ಕನ್ನಡ ವೊಂದೇ. ಅಥವಾ ಪ್ರತಿಮೀಕರಣದ ಅಗತ್ಯವಿಲ್ಲ. ಇಷ್ಟಾಗಿಯೂ ಬೇಕೇ ಎಂದರೆ ಈ ಎಲ್ಲ ವೈವಿಧ್ಯ ವೈರುಧ್ಯ ಅಸ್ಮಿತೆಗಳನ್ನು ಒಳಗೊಳ್ಳುವ ಪ್ರತಿಮೆಗಾಗಿ ಚಿಂತಿಸಬೇಕಾಗುತ್ತದೆ. ಲಿಂಗಾಯತಧರ್ಮ ಇಷ್ಟಲಿಂಗದ ರೂಪಕವನ್ನು ಗುಡಿಗೆ ಪರ್ಯಾಯವಾಗಿ ನೀಡಿತು.
ದಲಿತ ಸಂಘರ್ಷ ಸಮಿತಿಗೆ ಕಸಬರಿಗೆ ಸಂಕೇತವಾಗಿತ್ತು. ಬಂಡಾಯ ಸಂಘಟನೆಗೆ ಪೆನ್ನು ಸಂಕೇತವಾಗಿತ್ತು. ಎಡಪಕ್ಷಗಳು ಶ್ರಮಿಕ ವರ್ಗದ ಆಯುಧಗಳನ್ನೇ ಸಂಕೇತವಾಗಿ ಬಳಸಿಕೊಂಡಿವೆ. ಭುವನೇಶ್ವರಿಯ ಜಾಗದಲ್ಲಿ ಹೊಸ ರೂಪಕ ರೂಪತಾಳಬೇಕಾದದ್ದು ಇಂದಿನ ಅನಿವಾರ್ಯತೆ. ಆ ನೆಲೆಯಲ್ಲಿ ಚರ್ಚೆ ಮುಂದುವರಿಯಲಿಯೆಂದು ಕರ್ನಾಟಕತ್ವವನ್ನು ಪ್ರತಿನಿಧಿಸುವ ಪ್ರತಿಮೆಯೊಂದನ್ನು ಹೀಗೆ ಕಲ್ಪಿಸಿಕೊಳ್ಳುತ್ತೇನೆ- ಗಂಡು ಹೆಣ್ಣು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮೂರು ಮುಖಗಳನ್ನುಳ್ಳ ಜೀವವೊಂದಕ್ಕೆ ನೂರಾರು ಕೈಗಳಿರಬೇಕು. ಪ್ರತಿ ಕೈಯಲ್ಲೂ ನಾಡಿನ ಜಾತಿ, ಧರ್ಮ, ಅನುಭಾವಪಂಥ, ಬುಡಕಟ್ಟು, ಭಾಷೆಗಳು, ಉಪಭಾಷೆಗಳು, ನಿಸರ್ಗ ಇತ್ಯಾದಿಗಳ ಜೀವಚೈತನ್ಯವನ್ನು ಪ್ರತಿನಿಧಿಸುವ ಸಂಕೇತಗಳಿರಬೇಕು. ವೈವಿಧ್ಯ ವೈರುಧ್ಯ ಸಂಘರ್ಷ ಹಾಗೂ ಸಹಬಾಳ್ವೆಗಳೆಲ್ಲವನ್ನೂ ಧ್ವನಿಸುವಂತಿರಬೇಕು.
ಕರ್ನಾಟಕತ್ವವನ್ನು ಭುವನೇಶ್ವರಿ ಪ್ರತಿಮೆಯಿಂದ ಬೇರ್ಪಡಿಸುವ, ಮೈಸೂರು ದಸರಾ ಆಚರಣೆಯನ್ನು ಚಾಮುಂಡೇಶ್ವರಿ ಪೂಜೆ ಹಾಗೂ ಮೆರವಣಿಗೆಗಳಿಂದ ಬಿಡುಗಡೆಗೊಳಿಸುವ ಮೂಲಕ ನಿರ್ಮತೀಯ ಕರ್ನಾಟಕತ್ವದ ಉಳಿವಿಗಾಗಿ ಕರ್ನಾಟಕದಲ್ಲಿ ಒಂದು ಚಳುವಳಿಯೇ ನಡೆಯಬೇಕಾಗಿದೆ. ಅದು ಈ ಸಂಕಥನಗಳ ಹಿಂದಿನ ತಾತ್ವಿಕ ಸಮಸ್ಯೆಗಳನ್ನು ಜನಸಮುದಾಯಕ್ಕೆ ಮುಟ್ಟಿಸುವಂತಿರಬೇಕು. ಸರಕಾರದ ಮಟ್ಟದಲ್ಲಿ ಬದಲಾವಣೆಗೆ ಒತ್ತಾಯ ತರುವ ಸ್ವರೂಪದಲ್ಲಿರಬೇಕು. ಈ ಕುರಿತಂತೆ ಕರ್ನಾಟಕದ ಪ್ರಗತಿಪರರಲ್ಲಿ ಅಸಮಾಧಾನವಿದೆ. ಕೆಲವರು ಸಾಂದರ್ಭಿಕವಾಗಿ ದನಿ ಎತ್ತುತ್ತಲೇ ಇದ್ದಾರೆ. ಆದರೆ ಅದು ಸಾಮೂಹಿಕ ಪ್ರತಿಭಟನೆಯ ರೂಪ ತಾಳುತ್ತಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?






ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? you only. ಕಲ್ಪನೆಗೇನು ಕೊರತೆ ಇರದು. ಕಲ್ಪಿಸಿಕೊಂಡಶ್ಟೂ ಕಲ್ಪನೆ ಹೊರಹೊಮ್ಮುತ್ತದೆ. ನಾನೂ ಒಬ್ಬ ಕುರುಡನಾಗಿದ್ದರೂ ಬ್ಲಾಗ್ ಬರೆಯುವುದನ್ನು ಮಾಡುತ್ತಿದ್ದೇನೆ. ನನ್ನ ಬ್ಲಾಗ್ನ ಲಾಂಚನವಾಗಿ ಬಾರತಾಂಬೆಯನ್ನು ಕಲ್ಪಿಸಿಕೊಂಡು ಅದನ್ನೇ ಅದಕ್ಕೆ ಹಾಕಿದ್ದೇನೆ. ಬದಲಾವಣೆಯು ಬೇರು ಮಟ್ಟದಲ್ಲಿಯೇ ಆಗದ ಹೊರತು ಸುಳಿಯ ಮಟ್ಟದಲ್ಲಿ ಆಗಲಾರದು. ಕೇವಲ ಬೇರಿನಿಂದಲೇ ಮರಕ್ಕೆ ಎಲ್ಲಾ ಅಂಶಗಳೂ ದೊರೆಯುತ್ತದೆಂದರೆ ತಪ್ಪು ಆಗುತ್ತದೆ. ಸುಳಿಯೂ ಕೂಡ ತಾನು ನಿರ್ವಹಿಸುವ ಪಾಂಗನ್ನು ನಿರ್ವಹಿಸುತ್ತದೆ. ಇನ್ನೊಂದು ಹೇಳಬೇಕೆನಿಸಿದೆ. ಅದೇನೆಂದರೆ ಅರಸರೂ ಕೂಡ ಕನ್ನಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅವುಗಳನ್ನು ಸಾಂಕೇತಿಕವಾಗಿ ಪದೇಪದೇ ನೆನಪಿಸಿಕೊಂಡು ಅದರಿಂದ ಪ್ರೇರಣೆಪಡೆದು ಹೋರಾಟವನ್ನು ಜೀವಂತವಾಗಿಸಿಕೊಂಡು ಕನ್ನಡದ ಉಳಿವಿಗೆಂದೇ ಇರಿಸಿಕೊಂಡಿರಬಹುದಲ್ಲವೇ? ಈಗ ನೋಡಿ ಕೆಂಪು ಬಣ್ಣವನ್ನು ಅಪಾಯ, ಕೋಪ, ಮತ್ತು ಬದಲಾವಣೆಯ ಸಂಕೇತವೆಂದು ಆರೋಪಿಸಿಲ್ಲವೇ? ಕನ್ನಡಾಂಬೆಯ ಚಿತ್ರವೂ ಅಶ್ಟೆ. ಇಸ್ಲಾಂನಲ್ಲಿ ಅಶ್ಟಾಗಿ ದೇವತೆಗೆ ಮೊರೆಹೋಗುವುದು ಇಲ್ಲ. ಒಂದು ವೇಳೆ ಹೋದರೂ ಅದು ನನ್ನ ಅರಿವಿಗೆ ಇಲ್ಲಿಯ ತನಕ ಬಂದಿಲ್ಲ. ಕುಟುಂಬವೊಂದರಲ್ಲಿ ಪೂಜ್ಯಕ್ಕೆ ಮೊದಲನೆಯ ಅರ್ಹವಾಗಿ ತಾಯಿಯೇ ಇರುವುದು. ಇದು ನಿಮಗೂ ತಿಳಿದಿದೆ. ಹಾಗಾಗಿ ಆ ರೀತಿಯ ಚಿತ್ರವು ಇರುವುದು ಕಂಡಿತವಗಿಯೂ ತಪ್ಪು ಅಲ್ಲ. ಒಂದು ವೇಳೆ ನಾನು ಹೇಳಿದ್ದು ತಪ್ಪು ಆದರೆ, ಬೆಕ್ಕಿಗೆ ಗಂಟೆಯನ್ನು ನೀವೇ ಕಟ್ಟಬೇಕು. ಯೋಚನೆಗಳು ನಿಮ್ಮಿಂದಲೇ ಹುಟ್ಟಿರುವುದೆಂದ ಮೇಲೆ ನೀವೇ ಆ ಯೋಚನೆಯನ್ನು ನೆರವೇರಿಸಿಕೊಳ್ಳಬೇಕು. ಸಂವಿಧಾನದ ಮುನ್ನುಡಿಯಲ್ಲಿರುವಂತೆ ನಮ್ಮ ದೇಶವಾಗಿದ್ದರೂ ತುಂಬಾ ಹಿಂದಿನಿಂದ ಜನಮಾನಸದಲ್ಲಿರುವುದನ್ನು ಬದಲಿಸಲು ಆಗುವುದೇ?
excellent
ಕನ್ನಡ ಕನ್ನಡಿಗ ಕರ್ನಾಟಕತ್ವಗಳೇ ನಮ್ಮ ನಮ್ಮೆಲ್ಲರ ಪಾಲಿಗೆ ಜೀವನದ ಜೀವ ಜೀವಾಳವಾಗಬೇಕು ಮತ್ತು ಕನ್ನಡ ಕನ್ನಡಿಗ ಕರ್ನಾಟಕತ್ವಗಳು ನಮ್ಮ ನಮ್ಮೆಲ್ಲರ ಸಾಹಿತ್ಯ ಸಂಸ್ಕೃತಿ ಕಲೆ ಶಿಲ್ಪಕಲೆ ವಾಸ್ತುಶಿಲ್ಪ ಸಂಗೀತ ಪ್ರವಚನ ವಿಚಾರಗೋಷ್ಠಿ ಕಥೆ ಕಾದಂಬರಿ ವ್ಯಕ್ತಿಚಿತ್ರ ವಿಮರ್ಶೆ ದೃಶ್ಯ ಕಾವ್ಯ ಈ ಎಲ್ಲ ಎಲ್ಲವೂ ನಮ್ಮ ನಮ್ಮೆಲ್ಲರ ಜವಾಬ್ದಾರಿ ಜೀವನದ ಹಾಸುಹೊಕ್ಕಾಗಿದೆ..
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಚ
ಕನ್ನಡ ಕನ್ನಡಿಗ ಕರ್ನಾಟಕತ್ವಗಳೇ ನಮ್ಮ ನಮ್ಮೆಲ್ಲರ ಜೀವ ಜೀವಾಳ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com