ಕುಂ ವೀರಭದ್ರಪ್ಪ ಅವರ ನೂತನ ಕಾದಂಬರಿ ‘ಜೈ ಭಜರಂಗ ಬಲಿ’ ಇದೇ ೧೮ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ
ಈ ಹಿಂದೆ ‘ಅವಧಿ’ಯಲ್ಲಿ ಖ್ಯಾತ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ವಿಮರ್ಶೆಯನ್ನು ಓದಿದ್ದೀರಿ
ಈಗ ಹೆಸರಾಂತ ವಿಮರ್ಶಕರಾದ ಪ್ರೊ ಬಸವರಾಜ ಕಲ್ಗುಡಿ ಅವರು ಬರೆದ ಮುನ್ನುಡಿಯನ್ನು ಓದಿ-
ಪ್ರೊ.ಬಸವರಾಜ ಕಲ್ಗುಡಿ
ಕುಂವೀ ಎಂದೇ ಖ್ಯಾತಿಯಾದ- ಕುಂ.ವೀರಭದ್ರಪ್ಪನವರು, ಕನ್ನಡದ ಕಾದಂಬರಿ ಹಾಗೂ ಕಥಾಲೋಕದಲ್ಲಿ ಈಗ ಪ್ರಸಿದ್ಧ ಹೆಸರು. ದ್ವಿಭಾಷಿಕ ಪರಿಸರದ ಸಮುದಾಯಗಳ ಗಡಿಯಲ್ಲಿ ಜೀವನವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿರುವ ಇವರ ಕಥನ ಲೋಕವನ್ನು ಮೊದಲಿನಿಂದಲೂ ಕುತೂಹಲ ಆಸಕ್ತಿಯಿಂದ ಗಮನಿಸುತ್ತ ಬಂದವನು ನಾನು.
ಕನ್ನಡದಲ್ಲಿ ಹಳ್ಳಿಗಳು, ಅರೆಹಳ್ಳಿಗಳ ಬಡ ಸಮುದಾಯಗಳ ಲೋಕವನ್ನು ಕುಂವೀಯ ಹಾಗೆ ಸಂಕೀರ್ಣವಾಗಿ ನೋಡಿ, ಸೃಜನಶೀಲ ಲೋಕದಲ್ಲಿ ಪಲ್ಲಟಿಸಿ ಹೇಳಿದವರು ಬಹಳ ಕಡಿಮೆ.
ಭಾರತೀಯ ಸಂದರ್ಭದಲ್ಲಿ ವಾಸ್ತವವಾದೀ ಮಾರ್ಗವನ್ನು ಹಿಡಿದ ಹಲವಾರು ನವೋದಯ ಬರಹಗಾರರಲ್ಲಿ ಕುಂವೀಯವರ ಬಹುಳ ವ್ಯಾಪ್ತಿಯ ವಸ್ತು ಕಂಡುಬರುವುದು ನಿಜ. ಕನ್ನಡದ ಶಿವರಾಮ ಕಾರಂತ, ಹಿಂದಿಯ ಫಣೀಶ್ವರನಾಥ ರೇಣು, ಉರ್ದುವಿನ ಪ್ರೇಮಚಂದ್, ಮಲಯಾಳಿ ಭಾಷೆಯ ತಕಳಿ, ಪೊಟ್ಟೆಕಾಟ್, ಬಶೀರ್, ವಾಸುದೇವನ್ ನಾಯರ್, ತಮಿಳಿನ ಭಾರತಿದಾಸ್ ಮುಂತಾದವರ ಕಾದಂಬರಿಗಳಲ್ಲಿ ವಸ್ತುವಿನ ದೃಷ್ಟಿಯಿಂದ ವಿಶಾಲ ವ್ಯಾಪ್ತಿ ಇರುವುದೇನೋ ನಿಜ. ಆದರೆ ಆ ಕಾಲದ ಸಹಜ ಗುಣಕ್ಕೆ ಅನುಗುಣವಾಗಿ ಹೆಚ್ಚು ಚಲನಶೀಲಕ್ಕೆ ಒಳಗಾಗದ, ಸ್ಥಗಿತಗೊಂಡ ವರ್ತಮಾನದ ಚಿತ್ರಣಕ್ಕೆ ಹೆಚ್ಚು ಪ್ರಾಶಸ್ತ್ಯ.
ಹೀಗಾಗಿ ಲೇಖಕನ ಕರುಣೆ, ಅನುಕಂಪದ ಜೊತೆಗೆ ಭವಿಷ್ಯದಲ್ಲಿನ ಆಶಾವಾದದ ಆಯಾಮವು-ಕುವೆಂಪು ಅವರ ಭಾವನಾತ್ಮಕ ಪರಿಭಾಷೆಯಲ್ಲಿ ಹೇಳುವುದಾದರೆ ʼಕಟ್ಟುವೆವು ನಾವು ಹೊಸನಾಡೊಂದನುʼ ಎಂಬ ಉತ್ಸಾಹದ ನೆಲೆಯು ಮುಖ್ಯವಾಗಿ ಊರುತ್ತದೆ. ಆದರೆ ಪ್ರಗತಿಶೀಲರ ಜೀವನದ ಬಯನರಿ ನೋಟದ ವ್ಯಾಪ್ತಿಗಿಂತ, ಬಹುಪಾಲು ಸೂಕ್ಷ್ಮವೂ ಸಂವೇದನಶೀಲವೂ ಆಗಿ ಇವುಗಳು ಕಾಣುತ್ತವೆ.
ಕುಂವಿಯವರ ಕಥನಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಿದರೆ ಒಂದು ಪಲ್ಲಟವು ಎದ್ದು ಕಾಣುತ್ತದೆ. ಅವರ ಪ್ರಾರಂಭದ ಕಥನಗಳು ವಾಸ್ತವತಾ ಮಾರ್ಗವನ್ನು ಹಿಡಿದರೂ, ವಸ್ತುವಿನ ದೃಷ್ಟಿಯಿಂದ ಒಂದು ನವ ಚಲನಶೀಲ ಲೋಕದ ಅನಾವರಣವು ಅನೇಕ ಬಗೆಯ ಡೈನಮಿಕ್ ಆದ ಮುಖಾಮುಖಿಗಳಿಗೆ ಸಾಕ್ಷಿಯಾಗುತ್ತದೆ. ಒಂದು ವಿಸ್ತಾರವಾದ ಹರವು ಹಾಗೂ ದರ್ಶನ ಈ ಕಾರಣದಿಂದ ಇವರ ಕಥನಗಳಿಗೆ ಲಭ್ಯವಾಗಿದೆ.
ಕ್ರಮೇಣ-ಈ ಕಥನ ಶೈಲಿಯ ಮಿತಿಯನ್ನು ಕುಂವಿಯವರು ಅರಿತಿದ್ದು; ಆ ಕಾರಣಕ್ಕೆ ಕುಂವೀಯವರ ಕಥನ ಶೈಲಿಗೆ ಬಂದ ಭಿನ್ನ ಮಾರ್ಗವು, ಹೊಸ ಶೈಲಿಯ ಬರವಣಿಗೆಗೆ ದಾರಿ ಮಾಡಿಕೊಟ್ಟಿದೆ.
ಬಿಸಿಯಾಗಿ ತಟ್ಟುವ ವರ್ತಮಾನವನ್ನು ಹೆಚ್ಚು ಸೂಕ್ಷ್ಮಗೊಳಿಸಿ ಹೇಳಲು ವಾಸ್ತವವಾದಿ ಶೈಲಿಗೆ ಸಾಧ್ಯವಾಗದು. ಇದನ್ನು ಮೀರಲು ಮುಖ್ಯವಾಗಿ ಜಗತ್ತಿನ ಕಥನಕಾರರು ಎರಡು-ಮೂರು ವಿಧದ ಭಿನ್ನ ವಿನ್ಯಾಸವನ್ನು ಪ್ರಯೋಗಿಸಿದ್ದಾರೆ.
ಸಂಪೂರ್ಣ ʼರೂಪಕಾತ್ಮಕವಾದʼ ಕಟ್ಟುವಿಕೆ ಒಂದು ಬಗೆ. ಕಾಫ್ಕಾನ ʼಮೆಟಮಾರ್ಫಸಿಸ್ʼ ಆ ಬಗೆಯ ಒಂದು ಕಥನ. ಲೋಕದ ಬಗೆಗಿನ ಅಸಂಗತತೆಯನ್ನು ಗಂಭೀರವಾದ ಬಗೆಯಲ್ಲಿ ಹಿಡಿಯುವ ಕಥನಶೈಲಿ ಇದು. ಇನ್ನೊಂದು ಮಾರ್ಗ-ಅಲಿಗರಿ ಮತ್ತು ವ್ಯಂಗ್ಯ (Satire)ದ ಮೂಲಕ ವಾಸ್ತವವನ್ನು ಸಂಕೇತವಾಗಿಸುವುದು. ಆದರೆ ʼರೂಪಕಾತ್ಮಕʼ ಮಾದರಿಯಂತೆ ಗಂಭೀರವಾಗದೆ, ಸಂಕೇತವು ತಿಳಿ ಹಾಸ್ಯ, ವಿಡಂಬನೆಯ ಮೂಲಕ ಓದುಗನನ್ನು ತನ್ನೊಡನೆ ಕರೆದೊಯ್ಯುವಂಥದ್ದು.
ಕುಂವೀಯವರ ಕಥನಶೈಲಿಯ ಪಲ್ಲಟವು ಹಿಂದಿನ ಅನೇಕ ಕಥನಗಳಲ್ಲಿ ರೂಪುಗೊಳ್ಳುತ್ತಿದ್ದು ಅವರ ʼಜೈ ಬಜರಂಗ ಬಲಿʼ ಕೃತಿಯಲ್ಲಿ ಒಂದು ಪಕ್ವತೆ ಮತ್ತು ಪರಾಕಾಷ್ಟತೆಯನ್ನು ಮುಟ್ಟಿದೆ. ವಿಡಂಬನೆ, ಹಾಸ್ಯ ಮತ್ತು ಅಲಿಗರಿಗಳ ಮುಪ್ಪುರಿ ಪ್ರಯೋಗವು ಈ ಕಾದಂಬರಿಯ ವಿಶೇಷವಾಗಿದೆ. ಕನ್ನಡದಲ್ಲಿ ಈ ಬಗೆಯ ಶೈಲಿಯ ಪ್ರಯೋಗ ಇಷ್ಟೊಂದು ವ್ಯಾಪಕವಾಗಿ ಕನ್ನಡದ ಯಾವ ಕೃತಿಯಲ್ಲೂ ಕಾಣುವುದಿಲ್ಲ.
ಲೇಖಕನಿಗೆ ತಾನು ಕಾಣುವ ಜೀವನವು ಅಸಂಗತವೆನ್ನಿಸತೊಡಗಿದಾಗ ಎರಡು ಮಾದರಿಯ ಭಾವನೆಗಳು, ಬರವಣಿಗೆಯ ಶೈಲಿಯಾಗಿ ರೂಪುಗೊಳ್ಳುವುದು ಸಾಧ್ಯ. ಒಂದನೆಯದು ಅಗಾಧ ನೈತಿಕ ಸಿಟ್ಟಿನಿಂದ ಕೂಡಿದ ಚಿತ್ರಣ. ಕಾರಂತರ ಕೊನೆಕೊನೆಯ ಕಾದಂಬರಿಗಳಲ್ಲಿ ಸ್ವಾಮೀಜಿಗಳ ಬಗ್ಗೆ ತೋರುವ ಭಾವವು ಈ ಬಗೆಯದ್ದು. ವ್ಯಗ್ರ ಸಿಟ್ಟು, ತಿರಸ್ಕಾರ ಈ ಚಿತ್ರಣಗಳ ಹಿಂದೆ ಇದೆ. ಆದರೆ ಅಂಥ ವ್ಯವಸ್ಥೆಯನ್ನು ವಿಡಂಬಿಸುತ್ತ, ಅಲಿಗರಿಯ ಮೂಲಕ ಚಿತ್ರಿಸಿರುವ ಕ್ರಮವು ಬರವಣಿಗೆಗೆ ಅನನ್ಯ ಕಲಾತ್ಮಕ ಸಾಧ್ಯತೆಯನ್ನು ಕೊಡಬಲ್ಲುದಾಗಿದೆ. ಕುಂವೀಯವರು ವರ್ತಮಾನದ ಅಸಾಂಗತ್ಯವನ್ನು ಕಲೆಯಾಗಿಸುವ ಕ್ರಮದಲ್ಲಿ ಹಿಡಿದ ಈ ದಾರಿಯು ʼಜೈ ಬಜರಂಗ ಬಲಿʼ ಕಾದಂಬರಿಯ ಕಲಾತ್ಮಕ ಸಾಧ್ಯತೆಗಳನ್ನು ವಿಭಿನ್ನವೂ, ವಿಶಿಷ್ಟವೂ ಆಗಿ ಮಾಡಿದೆ.
ಕುಂವೀಯವರ ಈ ಕಾದಂಬರಿಯನ್ನು ಓದುತ್ತ ನನಗೆ 70ರ ದಶಕದ ಬ್ರಿಟಿಷ್ ಕಾದಂಬರಿಕಾರ ಜಾರ್ಜ್ ಆರ್ವೆಲ್‌ನ ʼ1984ʼ ಹಾಗೂ ʼಎನಿಮಲ್ ಫಾರ್ಮ್ʼ-ಈ ಎರಡೂ ಕಾದಂಬರಿಗಳು ನೆನಪಿಗೆ ಬಂದವು. ಅಲ್ಲಿ ರಾಜಕೀಯ ವಿಡಂಬನೆಯು ಚಿತ್ರಿತವಾದ ಬಗೆಯು ತನ್ನ ಕಾಲದ ಫ್ಯಾಸಿಸ್ಟ್ ಪ್ರಭುತ್ವದ ಅಮಾನವೀಯತೆಯನ್ನು ಮಾತ್ರವಲ್ಲ; ಎಲ್ಲ ಕಾಲದ ಇಂಥ ಪ್ರವೃತ್ತಿಗಳ ಸಂಕೇತವಾಗಿಬಿಡುವುದು- ಆ ಕಾದಂಬರಿಗಳ ಯಶಸ್ಸಿಗೆ ಕಾರಣವಾಯಿತು.
ಆದರೆ ಆ ಕಾದಂಬರಿಗಳಲ್ಲಿ ಪ್ರಯೋಗವಾದ ʼಅಲಿಗರಿʼಯು ಅನೇಕ ಬಾರಿ, ಕೇವಲ ಒಂದು ಗುಣಧರ್ಮಕ್ಕೆ ಸಂಕೇತವಾಗಿ, ಕಾದಂಬರಿಗಳ ವಸ್ತುವನ್ನು ಏಕತಾನತೆಗೆ ಗುರಿಮಾಡಿದೆ ಎಂದು ನನಗೆ ಅನ್ನಿಸಿದ್ದೂ ಉಂಟು. ಆದರೆ ಕುಂವೀಯವರ ʼಜೈ ಬಜರಂಗ ಬಲಿʼ ಓದುವಾಗ ಒಂದು ಸಂಕೀರ್ಣವಾದ ವರ್ತಮಾನದ ಅಸಾಂಗತ್ಯವು ದಟ್ಟವಾಗಿ, ಮೂಡಿಬಂದು ಇಲ್ಲಿಯ ಅಲಿಗರಿ ಕೇವಲ ಸಾಂಕೇತಿಕವಾಗದೆ, ಯಶಸ್ವಿಯಾದ ತಂತ್ರವಾಗಿರುವುದು ಕಂಡುಬರುತ್ತದೆ.
ʼಜೈ ಬಜರಂಗ ಬಲಿʼಯಲ್ಲಿ ಕಥೆ ಅನ್ನುವುದು ಇದೆಯಾ ಅಂದರೆ ಇದೆ; ಇಲ್ಲವೆಂದರೆ ಇಲ್ಲ. ಇದು ಕನ್ನಡದ ವರ್ಣಕ ಪರಂಪರೆಯ ಸ್ವರೂಪದ್ದು. ಇಲ್ಲಿ ಅನೇಕ ಕಥೆಗಳು ಹುಟ್ಟಿಕೊಳ್ಳುತ್ತವೆ; ಒಂದಕ್ಕೊಂದು ಸಂಬಂಧ ಕಲ್ಪಿಸಿಕೊಳ್ಳುತ್ತವೆ. ಆದರೆ ಓದುಗನನ್ನು ಕಾಡುತ್ತವೆ.
ಧಾರ್ಮಿಕ ನಂಬಿಕೆ ಹಾಗೂ ಸಂಬಂಧಿಸಿದ ಅನೇಕ ಕಥನಗಳು ಇಲ್ಲಿವೆ: ನಂಬಿಕೆಯು ಕುರುಡು ನಂಬಿಕೆಯಾಗುವುದು; ರಾಜಕಾರಣಕ್ಕೆ ಅದನ್ನು ಬಳಸಿಕೊಳ್ಳುವ ಬಗೆ; ಈ ನಂಬಿಕೆಗಳನ್ನು ಒಂದನೇ ಜಗತ್ತು ನೋಡುವ ಬಗೆ- ಹೀಗೆ ಒಂದು ಕಥನದ ಸುಳಿ ಇದ್ದರೆ, ರಾಜಕಾರಣದ ಹಲವು ಬಗೆಯ ಮುಖವಾಡಗಳು ನಂಬಿಕೆಗಳನ್ನು ಬಳಸಿಕೊಳ್ಳುವ ರೀತಿ- ಇನ್ನೊಂದು ಚಿತ್ರವನ್ನು ಓದುಗನ ಮುಂದಿಡುತ್ತದೆ.
ಈ ಜಗತ್ತಿನಲ್ಲಿ ಮುಗ್ಧರು ಕೆಲವರು ಮಾತ್ರ ಇದ್ದಾರೆ; ಆದರೆ ಮುಖವಾಡ ತೊಟ್ಟವರು ಅಸಂಖ್ಯಾತ ಸಂಖ್ಯೆಯವರು. ಇದರಿಂದ ಅಸಂಗತವಾಗುತ್ತಿರುವ, ಹಾಗೂ ರೂಕ್ಷವಾಗುತ್ತಿರುವ ಬದುಕಿನ ಕಥನವು ಮುಖ್ಯವಾದ ಸುಳಿಯಂತೆ ಉಳಿದೆಲ್ಲವನ್ನೂ ತನ್ನ ಕಕ್ಷೆಗೆ ತೆಗೆದುಕೊಳ್ಳುತ್ತಲಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಹಲವು ವರ್ಣದ ಜಗತ್ತನ್ನು ಒಂದು ಕೆಲಡಿಯೊಸ್ಕೋಪ್‌ನ ತರಹ ಓದುಗನ ಮುಂದೆ ನಿಲ್ಲಿಸುತ್ತಾರೆ, ಕುಂವೀಯವರು. ಎಲ್ಲಿಯೂ ಸಹ, ನಮ್ಮ ನಡುವಣ ಒಂದು ಬಗೆಯ ರಾಜಕಾರಣ ಹೇಳುವ ಸತ್ಯವನ್ನೇ ಸತ್ಯವೆಂದು ಭಾವಿಸಿ, ಮಾತನಾಡುವ, ಬರೆಯುವ ಬರಹದಂತೆ-ಪೊಲಿಟಿಕಲಿ ಕರೆಕ್ಟ್ ಅನ್ನುವ ಭಾಷೆಯನ್ನು ಮೀರಿದೆ- ಇಲ್ಲಿಯ ಕುಂವೀಯವರ ಚಿಂತನೆಯ ಕ್ರಮ.
ಈ ಕಾದಂಬರಿಯ ಕೇಂದ್ರ ಸಂಕೇತವು ಮರ್ಕಟ. ಇದು ಸಂಕೇತವಾಗುವ ನೆಲೆಯು ಹಾಗೂ ಮರ್ಕಟದ ಸಹಜ ವರ್ತನೆಯು ಎಲ್ಲಿಯೂ ಆಭಾಸವಾಗದಂತೆ, ಸಹಜವಾಗಿ ಕಥೆಯಲ್ಲಿ ಸ್ಥಾನ ಪಡೆಯುತ್ತದೆ. ಮರ್ಕಟವನ್ನು ದೈವತೆಯ ಸ್ವರೂಪವೆಂದು ತಿಳಿದ ಮುಗ್ಧ ವೈದಿಕರು ಇರುವಂತೆ, ಅದರ ಲಾಭ ಪಡೆಯುವ ವೈದಿಕರೂ, ಮರ್ಕಟನ ಪ್ರತಿಷ್ಟೆಯಿಂದಾಗಿ ಲಾಭ ಪಡೆಯುವ ವ್ಯಾಪಾರಿ ಮುಸಲ್ಮಾನರೂ, ವಿಭಿನ್ನ ಪಂಗಡಗಳ ಮುಖವಾಡ ತೊಟ್ಟ ರಾಜಕಾರಣಿಗಳೂ, ಹೀಗೆ ಒಂದು ನಾಟಕವೇ ಇಲ್ಲಿ ತನ್ನ ಹಾವ ಭಾವ ವಿಲಾಸ, ವಿಭ್ರಮಗಳಿಂದ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ.
ಕಿಂಡಿಯೆನ್ನುವ ಪ್ರದೇಶದಲ್ಲಿ ಅರಾಧ್ಯ ದೈವವಾಗಿ, ದೊಪ್ಪನೆ ಬಂದ ಮರ್ಕಟ, ಅದಕ್ಕೆ ಸಹಜವಾಗಿ, ಪ್ರಕೃತಿದತ್ತವಾಗಿ ಒದಗಿದ ಲೈಂಗಿಕ ಉದ್ರೇಕ-ಇದು ಭಕ್ತರಲ್ಲಿ ಹುಟ್ಟಿಸಿದ ಅನೇಕ ಸಾಂಕೇತಿಕ (=ಧಾರ್ಮಿಕ) ನಂಬಿಕೆಗಳು, ಭಕ್ತ ಸ್ತ್ರೀಯರಲ್ಲಿ ಉಂಟಾದ ಕೋಲಾಹಲ, ಮುಖ್ಯಮಂತ್ರಿಯ ಅಕ್ಕ ಸಂಜೀವಮ್ಮಳಿಗೆ ತನ್ನ ಕೈಕೊಟ್ಟ ಪ್ರೇಮಿಯ ಲೀಲಾವಿಲಾಸಗಳ ನೆನಪು; ಅದರಿಂದ ಅವರು ಖಿನ್ನತೆಗೆ ಒಳಗಾಗುವುದು;-ಹೀಗೆ ಸಾಲುಸಾಲು ಘಟನೆಗಳು ಹಾಸ್ಯ, ವಿಡಂಬನೆ, ವಿವರಗಳಲ್ಲಿ, ಜೀವನದ ಒಳಗನ್ನ ಹೆಕ್ಕಿ ಹುಡುಕುವಂತೆ ಮಾಡುತ್ತವೆ.
ಮರ್ಕಟನ ಮಹಿಮೆಯಿಂದಾಗಿ-ಕಿಂಡಿಯು ʼಭಜರಂಗಬಲಿನಗರʼವೆಂದು ಪರಿವರ್ತನೆ ಹೊಂದಿ- ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕಿದ್ದು ಇಲ್ಲಿಯ ಕಥನದ ಇನ್ನೊಂದು ಕುತೂಹಲಘಟ್ಟ. ಓದಿಯೇ ಸವಿಯಬೇಕು!
ಪ್ರೌಢವಾದ ಮರ್ಕಟದೈವದ ಲೈಂಗಿಕೋನ್ಮಾದವು, ಭಕ್ತೆಯರಾದ ಹೆಣ್ಣುಮಕ್ಕಳ ಬೆವರ ವಾಸನೆಯಿಂದಲೇ ಪ್ರಕಟವಾಗುತ್ತಿದ್ದುದನ್ನು ಕಂಡ ಭಕ್ತಮಂಡಳಿಯು, ಆ ದೈವಕ್ಕೆ ʼಲಾವಣ್ಯʼಳೆಂಬ ಸ್ತ್ರೀಮರ್ಕಟದ ಜೊತೆಗೆ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಸಿದಾಗ ಅದು ಪ್ರಕೃತಿದತ್ತ ಕ್ರಿಯೆ ನಡೆಸಲು ಊರಿನಿಂದ ಮರೆಯಾಗಿ ಊರ ಹೊರಗಿನ ಆಲದ ಮರದಲ್ಲಿ ಬೀಡುಬಿಟ್ಟಿದ್ದು, ಹಾಗೂ ಈ ಸಂಗದಿಂದಾಗಿ ಛೋಟಾ ಮರ್ಕಟನ ಉದಯವಾದದ್ದು; ಕಾಲಾನುಕ್ರಮದಲ್ಲಿ ವಾನರ ಸಂತತಿ ಕಿಂಡಿಯ ನರಸಂತತಿಗಿಂತ ಹೆಚ್ಚಾದದ್ದು-ʼಬಜರಂಗಬಲಿಯಲ್ಲಿ ಒಂದು ನಾಟಕೀಯ ತಿರುವಿಗೆ ಕಾರಣವಾಗುತ್ತದೆ. ಭಕ್ತರು ಮರ್ಕಟೇಶ್ವರನ ಉಪಟಳ ತಾಳದೆ, ಕ್ರಮೇಣ ಅವುಗಳ ವಿರೋಧಿಗಳಾಗುವುದು ಒಂದು ವಿಪರ್ಯಾಸ; ಆದರೆ ಲೋಕನೀತಿ ಇರುವುದೇ ಹೀಗಲ್ಲವೇ?
ʼಬಜರಂಗಬಲಿʼ ಅನೇಕ ಕಥನಗಳನ್ನು ಒಳಗೊಂಡಿದೆ ಎಂದು ಹೇಳಿದೆನಷ್ಟೆ. ಇಲ್ಲಿಯ ಒಂದೊಂದೂ ಕಥನವೂ ನಮ್ಮ ನಡುವಣ ಲೋಕದ ವಿಭಿನ್ನ ಮುಖಗಳನ್ನು, ಅವುಗಳ ಬಂಡವಾಳಗಳನ್ನು ಪರೋಕ್ಷವಾಗಿ, ಹಾಗೂ ನಾಟಕೀಯವಾಗಿ ಹಿಡಿಯುತ್ತದೆ. ಉದಾಹರಣೆಗೆ: ತಮ್ಮ ಟಿ.ಆರ್.ಪಿ ಹೆಚ್ಚುವಿಕೆಗಾಗಿ ಘಟನೆಗಳನ್ನು ಉದ್ರೇಕಿಸುವ ಸೋಶಿಯಲ್ ಮೀಡಿಯಾಗಳ ಕಥೆ ಕಾದಂಬರಿಯಲ್ಲಿ ಹಾಸುಹೊಕ್ಕಾಗಿ ಸೇರಿದೆ. ಎಡ-ಬಲ ಪಂಥೀಯರು-ಮುಖಾಮುಖಿಯಾಗುವ ಸಂಘರ್ಷದ ಅನೇಕ ಹಾಸ್ಯಾಸ್ಪದ ಘಟನೆಗಳು ಇಲ್ಲಿ ರಾಜಕಾರಣವನ್ನು ಬೆತ್ತಲೆಗೊಳಿಸಿ ನೋಡುತ್ತವೆ. ಆಳುವ ಪಕ್ಷ ಹಾಗೂ ವಿರೋಧಪಕ್ಷಗಳು ಭಜರಂಗಬಲಿ ನಗರದ ಸುತ್ತ ತಮ್ಮ ರಾಜಕಾರಣದ ಒಳ-ಹೊರಗುಟ್ಟನ್ನು ಬಿಡಿಸಿಡುವ ಘಟನೆಗಳೂ ಕಾದಂಬರಿಯ ಇನ್ನೊಂದು ಆಸಕ್ತಿದಾಯಕ ಕಥನವಾಗಿದೆ.
ಈ ಕಾದಂಬರಿಯ ಎರಡು ಘಟನೆಗಳನ್ನು ಓದುಗರ ಕುತೂಹಲ ಕೆರಳಲೆಂದು ಉದಾಹರಿಸುತ್ತೇನೆ.
ಒಂದನೆಯದು-ಇಂಗ್ಲೀಷ್ ಚಿತ್ರಜಗತ್ತಿನ ಅತಿಪ್ರಸಿದ್ಧ ನಿರ್ದೇಶಕ ರುಪೆಟ್ ವ್ಯಾಟ್. ಈತ ʼರೈಜ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ʼ ಎಂಬ ಅಜಾನುಬಾಹು ಮಂಗಗಳ ಕಥೆಯನ್ನು ಸಿನಿಮಾ ಮಾಡಿ ಪ್ರಶಸ್ತಿ ಗಳಿಸಿ, ಪ್ರಸಿದ್ಧಿ ಹೊಂದಿದವನು. ಅವನಿಗೂ ಒಂದು ಕುತೂಹಲ ಹುಟ್ಟಿದೆ. ಏನು ಆ ಕುತೂಹಲ? ಕಾದಂಬರಿಕಾರರ ಮಾತಿನಲ್ಲೇ ಅದನ್ನು ಕೇಳಿ; “ವರ್ತಮಾನ ಸಂದರ್ಭದಲ್ಲಿ ಅವೇ ಮಂಗಗಳಿಗೆ ಅದೇ ಭಾರತ ಸಾಮಾಜಿಕ ರಾಜಕೀಯ ಪೌರಾಣಿಕ ಸ್ಥಾನಮಾನ ಗೌರವ ಲಭಿಸಿರುವುದೋ ಇಲ್ಲವೋ! ಅವುಗಳ ಚಾಣಾಕ್ಷತನವನ್ನು ವೃತ್ತಿಪರ ರಾಜಕಾರಣಿಗಳೂ, ಅವುಗಳ ಚಾಕಚಕ್ಯತೆಯನ್ನು ಆ ದೇಶದಲ್ಲಿನ ಕೈಗಾರಿಕೋದ್ಯಮಿಗಳೂ, ಅವುಗಳ ಆಂಗಿಕ ಅಭಿನಯ, ಸಾಮರ್ಥ್ಯವನ್ನು ಆ ದೇಶದಲ್ಲಿನ ರಂಗಭೂಮಿ, ಚಲನಚಿತ್ರ ಕಲಾವಿದರೂ, ಅವುಗಳಲ್ಲಿನ ಆಟ್ಯಪಾಟ್ಯ ಕಲೆಯನ್ನು ಆ ದೇಶದ ಕ್ರಿಡಾಪಟುಗಳೂ, ಅವುಗಳಲ್ಲಿನ ಕಲಿಕಾ ಸಾಮರ್ಥ್ಯವನ್ನು ಆದೇಶದಲ್ಲಿನ ವಿದ್ಯಾರ್ಥಿಗಳೂ, ಅವುಗಳಲ್ಲಿನ ಕೌಟುಂಬಿಕ ಸಹಕಾರ ತತ್ವವನ್ನು ಆ ದೇಶದಲ್ಲಿನ ಸಂಸಾರಿಗಳೂ. . . . ಇಂಥ ಹಲವಾರು ಸಂಗತಿಗಳ ಕುರಿತು ಆತ ತೀವ್ರ ಆಸಕ್ತಿ ತಳೆದ”
ಕಿಂಡಿ ಪ್ರದೇಶಕ್ಕೆ ಬಂದ ರೂಪೆಟ್‌ನಿಗೆ ಮರ್ಕಟಗಳಿಂದ ಒದಗಿದ ಸ್ವಾಗತದ ಸ್ವಾರಸ್ಯವನ್ನು ಓದಿ ತಿಳಿಯಬೇಕು. ಬ್ರಿಟಿಷ್ ವಸಾಹತು ಕಾಲದಲ್ಲಿ – ಈ ದೇಸೀಯರ ಮೇಲಿನ ಕುತೂಹಲವು ಅನೇಕಬಾರಿ ವಸಾಹತುಗಳನ್ನು ಎಂಥ ಪಡಿಪಾಟಲಿಗೆ ಗುರಿ ಮಾಡಿತ್ತು ಎನ್ನುವುದನ್ನು ಮೆಕಾಲೆಯನ್ನು ಓದಿದವರಿಗೆ ಹೇಳಬೇಕಾದ್ದಿಲ್ಲ.!
ಇನ್ನೊಂದು ಘಟನೆ : ಮರ್ಕಟಗಳ ಸಂತತಿ ಹೆಚ್ಚಾಗಿ, ಅವುಗಳನ್ನು ಏನು ಮಾಡಬೇಕು ಎಂದು ನಿರ್ಧರಿಸಲು ಕಿಂಡಿಗೆ ಮುಖ್ಯಮಂತ್ರಿ ಮತ್ತು ಅವರ ಹಳೆಯ ಪ್ರೇಯಸಿ ಆಗಮಿಸುತ್ತಾರೆ. ಅವರನ್ನು ದಲಿತಕೇರಿಗೆ ʼಎಂಕೋಬʼ ಎನ್ನುವ ಮುಖಂಡ ಆಹ್ವಾನಿಸುತ್ತಾನೆ. ಆಗ ಆ ಕೇರಿಯ ವರ್ಣನೆಯನ್ನು ಲೇಖಕರು ಮಾಡುವ ಶೈಲಿಯು ಹೀಗಿದೆ: “ಅಧಿಕಾರಿಗಳಿಗೆ ಅವರು ತಮ್ಮ ನಗರದ ವಾಸ್ತು ವಿನ್ಯಾಸ ತೋರಿಸಿದರು. ಚರಂಡಿ, ಬೀದಿಗಳೆರಡಕ್ಕೂ ಭಾವೈಕ್ಯತೆ ಬೆಸೆದಿತ್ತು. ಬೆವರು ಕಿಮಟು ಭಾರಕ್ಕೆ ಗಾಳಿ ಕುಸಿದಿತ್ತು. ಅಲ್ಲಲ್ಲಿ ಮಕ್ಕಳು ಬಹಿರ್ದೆಸೆಗೆ ಕುಳಿತು ತಿಣುಕುತ್ತಿದ್ದ ನಾದವನ್ನು ಬೀದಿ ನಿನದಿಸುತ್ತಿತ್ತು”
ಇಂಥ ಹಾಸ್ಯಮಯ ವಿಡಂಬನೆಯ ವಾಕ್ಯಗಳು ಕಾದಂಬರಿಯಲ್ಲಿ ಯಥೇಚ್ಛ. ಅವುಗಳನ್ನು ಓದಿಯೇ ಸವಿಯಬೇಕು. ಕಾದಂಬರಿಯ ಒಂದು ಭಾಗದಲ್ಲಿ ಮುಖ್ಯಮಂತ್ರಿಗಳು ದಲಿತಕೇರಿಗೆ ವಾಸ್ತವ್ಯಕ್ಕೆ ಬರುವ ಒಂದು ಘಟನೆ ಇದೆ. ದಲಿತಕೇರಿಯ ಬೇಡಿಕೆ ಅಲ್ಲಿ ಒಂದೇ ಆಗಿತ್ತು. “ಸವರ್ಣೀಯರ ಕಪಿಮುಷ್ಠಿಯಲ್ಲಿರುವ ಕಪಿಗಳನ್ನು ನಮ್ಮ ಕೇರಿಗೂ ಕಳಿಸಿರಿʼ. ಅದಕ್ಕೆ ಮುಖ್ಯಮಂತ್ರಿಗಳ ಆಶ್ವಾಸನೆ-“ಅವುಗಳ ದೃಷ್ಟೀಲಿ ಮನುಷ್ಯರೆಲ್ಲರೂ ಒಂದೆ; ಬರುವವು ಕಾಯಿರಿ; ಎನ್ನುವ ಭರವಸೆ!!
ಮಿನುಗುವ ಕೃತಕ ಹಲ್ಲುಗಳ ಸೆಟ್ಟುಗಳನ್ನು ಹಾಕಿಕೊಂಡ ಮುಖ್ಯಮಂತ್ರಿ ಹಾಗೂ ಅವರ ಪ್ರೇಯಸಿ ಕಸ್ತೂರಮ್ಮ ಇಲ್ಲಿಯ ಸಾರ್ವಜನಿಕ ವೇದಿಕೆಗೆ ಬಂದಾಗ ಭಾಷಣಕಾರರು ಮುಖ್ಯಮಂತ್ರಿಗಳ ಹಲ್ಲುಗಳ ಕಾಂತಿಗಳನ್ನು ಹೊಗಳಿದ್ದೇ ಹೊಗಳಿದ್ದು! ಅದಕ್ಕೆ ಪ್ರೇಯಸಿಯು ಮುನಿಸಿನಿಂದ- ‘ನಿಮ್ಮ ಹಲ್ಲು ಪ್ಲಾಟಿನಂ ಡೈಮಂಡಿನದು, ನನ್ನದು ವೆರಿ ಆರ್ಡಿನರಿ’ ಎಂದು ಏಕಾಂತದಲ್ಲಿ ದುಃಖಿಸಿದರು. ಗ್ರಾಮವಾಸ್ತವ್ಯದ ನಂತರ ಚಿನ್ನದ ಹಲ್ಲು ಮಾಡಿಸಿಕೊಡಲು ಇವರು ಆಶ್ವಾಸನೆ ನೀಡಿದರು.
ಆದರೆ ರಾತ್ರಿಯ ಏಕಾಂತವನ್ನು ಕಳೆದ ಇವರಿಬ್ಬರು ನಿದ್ರೆ ಕೆಟ್ಟಿದ್ದರಿಂದಲೋ ಏನೋ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ಏಕಾಂತ ಸ್ಥಳದಲ್ಲಿ ನಗ್ನತೆಯ ಭಾವದಲ್ಲಿ ಕಳೆಯುತ್ತಿದ್ದಾಗ ತಮ್ಮ ತಮ್ಮ ದಂತಪಂಕ್ತಿಗಳನ್ನು ಕಳಚಿ ಬಿಸಿಲಿಗೆ ಇಟ್ಟಿದ್ದರು. ನಸು ನಿದ್ರೆ ಇವರನ್ನು ಆವರಿಸಿದಾಕ್ಷಣದಲ್ಲಿ ʼಕಿಂಡಿʼಯ ಮಂಗಗಳು ʼವೃದ್ಯಾಪ್ಯ ಮರೆಮಾಚುವುದು; ತಾರುಣ್ಯ ಅಭಿನಯಿಸುವುದು ಸರಿಯೇ?ʼ ಎಂಬ ಅರ್ಥದಲ್ಲಿ ಇವರನ್ನು ನೋಡಿ ಬಿಟ್ಟವು. ಕೃತಕ ದಂತಪಂಕ್ತಿಗಳನ್ನು ಖಾದ್ಯಗಳೆಂದು ತಿಳಿದು ಅವುಗಳನ್ನು ಅಪಹರಿಸಿದವು. ಅವು ಖಾದ್ಯಗಳಲ್ಲವೆಂದು ಗೊತ್ತಾದ ಬಳಿಕ ಅವುಗಳನ್ನು ಖ್ಯಾತ ನಿರ್ದೇಶಕ ರೂಪೆಟ್ ಇದ್ದ ಜಾಗದಲ್ಲಿ ತಂದು ಹಾಕಿದವು. ಅವನು ಆಗಲೇ ಮಂಗಗಳನ್ನು ಕುರಿತು ಹೆಣೆದಿದ್ದ ಚಿತ್ರಕಥೆಗೆ ʼಡೆಂಚರ್ʼ ಎನ್ನುವ ಹೆಸರು ಇಟ್ಟಿದ್ದ……
ಅಸಾಂಗತ್ಯ ಹಾಗೂ ಅರ್ಥಹೀನ ವಾತಾವರಣವನ್ನು ಇಡೀ ಕಾದಂಬರಿಯಲ್ಲಿ ತಣ್ಣಗೆ ಹೀಗೆ ಹಿಡಿದಿರುವುದು ಕುಂವಿಯವರ ಹೊಸ ಬರವಣಿಗೆಯ ಪಕ್ವತೆಗೆ ಸಾಕ್ಷಿಯಾಗಿದೆ. ತನ್ನ ತಂತ್ರಗಾರಿಕೆಯಿಂದ ಹಲವು ವಸ್ತುಗಳನ್ನು ನಿಭಾಯಿಸಿದ ಹಾಗೂ ಅವುಗಳನ್ನು ಜೋಡಿಸಿದ ರೀತಿಯಿಂದಾಗಿ ʼಜೈಬಜರಂಗಬಲಿʼ ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.
ಕುಂವೀ ನನ್ನ ಏಕವಚನದ ಗೆಳೆಯ. ಭಾವಜೀವಿ. ಆದರೆ ಸೂಕ್ಷ್ಮಗ್ರಾಹಿ. ಇವೆರಡೂ ಇವರ ವ್ಯಕ್ತಿತ್ವದಲ್ಲಿ ಮೇಳೈಸಿದರೂ-ಕಲೆಗಾರಿಕೆಯ ಸಂದರ್ಭದಲ್ಲಿ- ಮಾನಸಿಕ ದೂರ ಕಾಯ್ದುಕೊಂಡು ಹೊಸ ಶೈಲಿಯ ನಿರ್ಮಾಣ ಮಾಡುತ್ತಿರುವುದು ಇವರ ಸೃಜನಶೀಲತೆಯ ವಿಶಿಷ್ಟತೆಗೆ ಉದಾಹರಣೆಯಾಗಿದೆ.





0 Comments