ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡದ ಆಹುತಿಗೆ ತುಪ್ಪ ಸುರಿದ ಸುಪ್ರೀಂ ಕೋರ್ಟ್ ತೀರ್ಪು

ಲಕ್ಷ್ಮೀಶ ಹೆಗಡೆ

“ಕಲಿಕಾ ಮಾಧ್ಯಮವನ್ನು ನಿರ್ಧರಿಸುವ ಹಕ್ಕು ಪೋಷಕರು ಮತ್ತು ಮಕ್ಕಳಿಗೆ ಸೇರಿದ್ದು, ಸರ್ಕಾರವಾಗಲೀ ಯಾರೇ ಆಗಲಿ ಇಂಥದ್ದೇ ಮಾಧ್ಯಮದಲ್ಲಿ ಮಕ್ಕಳು ಕಲಿಯಬೇಕೆಂದು ಒತ್ತಾಯ ಹೇರುವಂತಿಲ್ಲ” ಇದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು.೪ ನೇ ತರಗತಿಯ ತನಕ ಮಕ್ಕಳು ತಮ್ಮ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದ್ದಕ್ಕೆ ಭಾರತದ ಸರ್ವೋಚ್ಚ ನ್ಯಾಯಾಲಯ ಕೊಟ್ಟ ಉತ್ತರವಿದು. ಕಾನೂನಿನ ದೃಷ್ಟಿಯಿಂದ ಮತ್ತು ನಮ್ಮ ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಹಕ್ಕುಗಳ ಪ್ರಕಾರ ನೋಡುವುದಾದಾರೆ ಈ ತೀರ್ಪು ಸರಿಯಾಗೇ ಇದೆ.ಆದರೆ ಒಂದು ಭಾಷೆಯ ಅದರಲ್ಲೂ ಕನ್ನಡದಂತಹ ಭಾಷೆಯ ಉಳಿವಿಗೆ,ಒಂದು ಭಾಷೆಯ ಬೆಳವಣಿಗೆಗೆ ಈ ತೀರ್ಪು ಮಾರಕವಾಗಿದೆ.ತೀರ್ಪು ಹೊರಬಿದ್ದ ದಿನವೇ ನಾನು ಬಹಳಷ್ಟು ಬೇಸರಗೊಂಡೆ.ಬೇಸರ ಮಾಡಿಕೊಳ್ಳಲು ಕಾರಣವೂ ಇದೆ.ಏಕೆಂದರೆ ಸ್ವತಃ ನಾನು ಒಂದರಿಂದ ಹತ್ತನೇ ತರಗತಿಯವರೆಗೂ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವನು.ಮುಂದೆ ಪಿಯುಸಿ ಯಲ್ಲಿ ಆಂಗ್ಲ ಮಾಧ್ಯಮಕ್ಕೆ ಬಂದ ನಾನು ನಂತರ ರಾಜ್ಯದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದೇನೆ.ಆದ್ದರಿಂದ ಈ ತೀರ್ಪು ನನ್ನನ್ನು ಬಹಳವಾಗಿ ಘಾಸಿಗೊಳಿಸಿತು.ಈ ತೀರ್ಪಿನ ಬಗ್ಗೆ ನನಗನ್ನಿಸಿದ್ದನ್ನು,ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಒಂದು ಮಗುವಿಗೆ ತಾಯಿ ಕಲಿಸುವ ಭಾಷೆಯನ್ನು ‘ಮಾತೃಭಾಷೆ’ ಎನ್ನುತ್ತಾರೆ.ಮಗು ಮೊದಲು ಮಾತನಾಡುವುದೂ ಅದೇ ಭಾಷೆಯಲ್ಲಿ.ಬೆಳೆದು ದೊಡ್ಡದಾಗುವಾಗ ಚಿಂತನೆ ಮಾಡುವುದು,ಆಲೋಚಿಸುವುದೆಲ್ಲಾ ತನ್ನ ಮಾತೃಭಾಷೆಯಲ್ಲೇ.ಹೀಗಿರುವಾಗ ಮಗು ತನ್ನ ಶಿಕ್ಷಣದ ಪ್ರಾಥಮಿಕ ಹಂತವನ್ನು ತನ್ನ ಮಾತೃಭಾಷೆಯಲ್ಲೇ ಕಲಿತರೆ ಅದು ಶಿಕ್ಷಣವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.ತಾನು ಕಲಿಯುತ್ತಿರುವ ವಿಷಯದ ಕುರಿತು ಹೆಚ್ಚಿನ ಆಸಕ್ತಿ,ಪ್ರೀತಿ ಮೂಡುತ್ತದೆ.ಅಲ್ಲದೇ ಮಾತೃ ಭಾಷೆಯ ಮಾಧ್ಯಮದಲ್ಲಿ ಕಲಿತರೆ ಅದನ್ನು ಒಂದು ಹೊರೆ ಎಂದುಕೊಳ್ಳದೇ ಶಿಕ್ಷಣವನ್ನು ಆಸ್ವಾದಿಸುತ್ತಾ ಕಲಿಯಬಹುದು.ಹಾಗೆ ಕಷ್ಟಪಟ್ಟು ಕಲಿತಿದ್ದಕ್ಕಿಂತ ಇಷ್ಟಪಟ್ಟು ಕಲಿತ ವಿದ್ಯೆ ಹೆಚ್ಚಿನ ಕಾಲ ನಮ್ಮಲ್ಲುಳಿಯುತ್ತದೆ. ಅಲ್ಲದೇ ಮಾತೃಭಾಷೆಯ ಮೇಲಿನ ಪ್ರೀತಿ,ಅಭಿಮಾನ ಜಾಸ್ತಿಯಾಗುತ್ತದೆ.ತನ್ನ ಮಾತೃಭಾಷೆಯನ್ನು ಸರಿಯಾಗಿ ಬಲ್ಲ ವ್ಯಕ್ತಿ ಜಗತ್ತಿನ ಮತ್ತೆಲ್ಲಾ ಭಾಷೆಗಳನ್ನೂ ಸುಲಭವಾಗಿ ಕಲಿಯುತ್ತಾನೆ. ಇದು ಹತ್ತು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲಿ ಕಲಿತ ಬಳಿಕ ನಾನು ಕಂಡುಕೊಂಡ ಅಂಶಗಳು.

ಇನ್ನು ಕರ್ನಾಟಕದಲ್ಲಿನ ಕನ್ನಡದ ಸ್ಥಿತಿಗತಿಯ ಬಗ್ಗೆ ನಾನು ಕಂಡದ್ದನ್ನು ಇಲ್ಲಿ ತೆರೆದಿಡುತ್ತೇನೆ.ನಾನು ಪಿಯು.ಸಿ.ಗೆ ಆಂಗ್ಲ ಮಾಧ್ಯಮಕ್ಕೆ ಬಂದಾಗಿನಿಂದಲೂ ಗಮನಿಸಿದಂತೆ ಆಂಗ್ಲಮಾಧ್ಯಮದಲ್ಲಿ ಓದುತ್ತಿರುವ ಕನ್ನಡದ ಹುಡುಗಿಯರು ಯಾರೂ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವುದಿಲ್ಲ.ಅದೇನೋ ಗೊತ್ತಿಲ್ಲ ನಮ್ಮ ಕನ್ನಡದ ಹುಡುಗಿಯರಿಗೆ ಕನ್ನಡದಲ್ಲಿ ಮಾತನಾಡುವುದೆಂದರೆ ಅಲರ್ಜಿ ಇದ್ದಂತಿದೆ.ನಾನು ವೈದ್ಯಕೀಯ ಶಿಕ್ಷಣ ಪಡೆಯಲು ಬಂದ ಮೇಲೂ ಗಮನಿಸಿರುವಂತೆ ನಗರಗಳಲ್ಲಿ ವಾಸಿಸುತ್ತಿರುವ ಎಲ್.ಕೆ.ಜಿ ಯಿಂದಲೂ ಆಂಗ್ಲ ಮಾಧ್ಯಮದಲ್ಲಿ ಕಲಿತ ಅನೇಕ ಕನ್ನಡದ ಹೆಣ್ಣು ಮಕ್ಕಳಿಗೆ ಸರಿಯಾಗಿ ಕನ್ನಡ ಮಾತನಾಡಲೂ ಬರುವುದಿಲ್ಲ.ಇನ್ನು ಕನ್ನಡವನ್ನು ಅವರು ಓದುವುದಂತೂ ಕೇಳುವುದೇ ಬೇಡ.ಕನ್ನಡದಲ್ಲಿ ಓದಬೇಕಾದ ಸಂದರ್ಭ ಬಂದಾಗಲೆಲ್ಲಾ ಆಕಾಶವೇ ತಮ್ಮ ಮೇಲೆ ಕಳಚಿ ಬಿದ್ದವರಂತೆ ಆಡುತ್ತಾರೆ.ಇವರು ಯಾರೂ ಕನ್ನಡ ದಿನಪತ್ರಿಕೆಗಳನ್ನಾಗಲೀ,ಕನ್ನಡದ ಪುಸ್ತಕಗಳನ್ನಾಗಲೀ ಓದುವುದನ್ನು ನಾನು ನೋಡಿಲ್ಲ.ಆಂಗ್ಲ ಮಾಧ್ಯಮದಲ್ಲಿ ಕಲಿತು ವೈದ್ಯಕೀಯ ಸೀಟು ಪಡೆದು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದ ಹುಡುಗಿಯರು ಆಸ್ಪತ್ರೆಯಲ್ಲಿ ರೋಗಿಗಳ ಜೊತೆಯೂ ಬಹಳ ಕಷ್ಟದಿಂದ ಕನ್ನಡದಲ್ಲಿ ಮಾತನಾಡುತ್ತಾರೆ.ಈ ವಿಷಯದಲ್ಲಿ ಹುಡುಗರೇ ಸ್ವಲ್ಪ ಪರವಾಗಿಲ್ಲ ಎಂದು ಹೇಳಬಹುದಾದರೂ ಅವರ ಸ್ಥಿತಿಯೂ ಹುಡುಗಿಯರಿಗಿಂತ ಏನು ಭಿನ್ನವಾಗಿಲ್ಲ.
ನಾನು ಬರೆದ ಲೇಖನಗಳನ್ನು ಓದಿ ಎಂದು ಆಂಗ್ಲ ಮಾಧ್ಯಮದಲ್ಲಿ ಕಲಿತ ನನ್ನ ಮಿತ್ರರಿಗೆ ಕೊಟ್ಟಾಗ ಅನೇಕರು ಹೀಗೆ ಹೇಳಿದ್ದುಂಟು. “ನೀನು ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತೀಯ,ಹಾಗೂ ಅವು ಎರಡು-ಮೂರು ಪುಟಗಳಷ್ಟಿರುತ್ತವೆ.ಕನ್ನಡದಲ್ಲಿ ಅಷ್ಟೆಲ್ಲಾ ಉದ್ದುದ್ದದ ಲೇಖನಗಳನ್ನು ಬರೆದರೆ ಓದುವುದು ಕಷ್ಟ”.ಒಬ್ಬ ನನ್ನ ಮಿತ್ರನಿಗೆ ನಾನು ಕನ್ನಡದ ಕಾದಂಬರಿಯೊಂದನ್ನು ಓದಲು ಕೊಟ್ಟಿದ್ದೆ.ಅದನ್ನು ನೋಡಿದ ಮತ್ತೊಬ್ಬ “ನಿನಗೆ ಕನ್ನಡದಲ್ಲಿ ಒಳ್ಳೊಳ್ಳೆಯ ಪುಸ್ತಕಗಳು ಬರುತ್ತವೆಂದು ಹೇಗೆ ಗೊತ್ತಾಗುತ್ತದೆ,ನನಗೆ ಕನ್ನಡ ಪುಸ್ತಕಗಳ ಬಗ್ಗೆ ತಿಳಿಯುವುದೇ ಇಲ್ಲ” ಎಂದ.ಅದಕ್ಕೆ ನಾನು”ಕನ್ನಡದ ದಿನಪತ್ರಿಕೆಗಳನ್ನು ಓದುವುದರ ಮೂಲಕ ನಾನು ಕನ್ನಡ ಪುಸ್ತಕಗಳ ಬಗ್ಗೆ ತಿಳಿದುಕೊಳ್ಳುತ್ತೇನೆ.ಏಕೆ ನಿನಗೆ ದಿನಪತ್ರಿಕೆ ಓದುವ ಅಭ್ಯಾಸವಿಲ್ಲವೇ” ಎಂದು ಕೇಳಿದೆ.ಅದಕ್ಕವನು “ಇಲ್ಲ ನಾನು ಕನ್ನಡ ದಿನಪತ್ರಿಕೆಗಳನ್ನು ಓದುವುದಿಲ್ಲ.ಇಂಗ್ಲೀಷ್ ಪೇಪರ್ ಮಾತ್ರ ಓದುವುದು” ಎಂದ. ನನಗೆ ಬಹಳ ಸೋಜಿಗವೆನಿಸಿತು.ಇಲ್ಲಿ ಕನ್ನಡದ ಹುಡುಗಿಯರು ಕನ್ನಡದಲ್ಲಿ ಮಾತನಾಡದ ಕುರಿತು ಏಕೆ ಕಳವಳ ವ್ಯಕ್ತಪಡಿಸಿದೆನೆಂದರೆ ಮುಂದೊಂದು ದಿನ ಆ ಹುಡುಗಿಯರು ಬೆಳೆದು ದೊಡ್ದವರಾಗಿ ಮದುವೆಯಾಗುತ್ತಾರೆ.ಆಗ ಅವರ ಮಕ್ಕಳಿಗೆ ಈ ತಾಯಂದಿರು ಮಾತೃಭಾಷೆಯಾಗಿ ಯಾವ ಭಾಷೆಯನ್ನು ಕಲಿಸಬಹುದು,ಖಂಡಿತವಾಗಿಯೂ ಇಂಗ್ಲೀಷನ್ನೇ.ಏಕೆಂದರೆ ಕನ್ನಡವನ್ನು ತಮ್ಮ ಮಕ್ಕಳಿಗೆ ಕಲಿಸಲು ಇವರಿಗೆ ಸರಿಯಾಗಿ ಕನ್ನಡ ಬಂದರೆ ತಾನೆ. ಇದು ಮುಂದೆ ಹೀಗೆ ಮುಂದುವರಿದರೆ ಕನ್ನಡ ಭಾಷೆ ಅಳಿಯುತ್ತದೆ.ಹಾಗಾಗಿ ಒಂದರಿಂದ ನಾಲ್ಕನೇ ತರಗತಿಯವರೆಗಾದರೂ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ ಆ ಮೂಲಕವಾದರೂ ಕನ್ನಡ ಉಳಿಯಲಿ ಎಂಬ ಸರ್ಕಾರದ ಕಾಳಜಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಹೊಡೆತ ಬಿದ್ದಿದೆ.
ಕನ್ನಡದ ಅಧುನಿಕ ಪೋಷಕರ ಮನಸ್ಥಿತಿಯ ಬಗ್ಗೆ ಹೇಳುವುದಾದರೆ ದೊಡ್ಡ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಕೋಟ್ಯಾಧೀಶನಿಂದ ಹಿಡಿದು ದಿನಗೂಲಿ ಮಾಡುವ ಕಾರ್ಮಿಕನೂ ಸಹ ತನ್ನ ಮಕ್ಕಳು ಕಾನ್ವೆಂಟ್ ನಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಬೇಕೆಂದು ಬಯಸುತ್ತಾನೆ. ಎಷ್ಟು ಕಷ್ಟವಾದರೂ ಪರವಾಗಿಲ್ಲ ತನ್ನ ಮಗು ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಕಲಿಯುವಂತೆ ಮಾಡಲು ಹರಸಾಹಸ ಪಡುತ್ತಾನೆ. ಕಲಿಕಾ ಮಾಧ್ಯಮವೊಂದನ್ನು ಬಿಟ್ಟರೆ ಮತ್ಯಾವುದರಲ್ಲಿಯೂ ನಾವು ಕಾನ್ವೆಂಟ್ ಶಾಲೆಗಳಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ಕನ್ನಡ ಮಾಧ್ಯಮ ಶಾಲೆಗಳು ಎಷ್ಟು ಬೊಬ್ಬೆ ಹೊಡೆದರೂ ಇವರಿಗೆ ಕೇಳುವುದೇ ಇಲ್ಲ.ಇದೀಗ ಸಣ್ಣ ಸಣ್ಣ ಹಳ್ಳಿಗಳಲ್ಲೂ ಕಾನ್ವೆಂಟ್ ಶಾಲೆಗಳು ಆರಂಭವಾಗಿರುವುದರಿಂದ ತೀರಾ ಅನಕ್ಷರಸ್ಥರಾದ ಪೋಷಕರೂ ಸಹ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಕಳಿಸುತ್ತಾರೆ.ಹೀಗಾಗಿ ಹಳ್ಳಿಗಳಲ್ಲಿರುವ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳೂ ವಿದ್ಯಾರ್ಥಿಗಳಿಲ್ಲದೇ ಖಾಲಿ ಬಿದ್ದಿವೆ.ಅನೇಕ ಸರ್ಕಾರೀ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ.ನಗರ ಪ್ರದೇಶದಲ್ಲಿನ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳ ಪಾಡನ್ನಂತೂ ಕೇಳುವುದೇ ಬೇಡ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುವುದೆಂದರೆ ತೀರಾ ನಿಕೃಷ್ಟ ಎಂಬ ಭಾವನೆ ಅನೇಕ ಪೋಷಕರಲ್ಲಿದೆ.
ತಮ್ಮ ಮಕ್ಕಳನ್ನು ಮಾತ್ರಾ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸುವ ಇವರುಗಳು ಕೇಳುವವರು ಸಿಕ್ಕಿದರೆ ನಿಮ್ಮ ಮಕ್ಕಳನ್ನು ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗೇ ಕಳಿಸಿ ಎಂದು ಹೇಳುವುದರ ಮೂಲಕ ತಮ್ಮನ್ನು ತಾವು ಕನ್ನಡ ಪ್ರೇಮಿಗಳು ಎಂದು ತೋರಿಸಿಕೊಳ್ಳುತ್ತರೆ.ನಾನು ಏಳನೇ ತರಗತಿ ಪಾಸಾದ ನಂತರ ಎಂಟನೇ ತರಗತಿಗೆ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗಬೇಕೆಂದು ಬಹಳ ಆಸೆಪಟ್ಟಿದ್ದೆ.ನನ್ನಪ್ಪ ನಮ್ಮೂರಿನ ಹೆಸರಾಂತ ಆಂಗ್ಲ ಮಾಧ್ಯಮ ಶಾಲೆಗೆ ನನ್ನನ್ನು ಸೇರಿಸಲು ಶಾಲೆಯ ಅರ್ಜಿ ಪತ್ರವನ್ನು ತಂದು ಇಟ್ಟಿದ್ದರು.ಆಗ ನಮ್ಮ ಸಂಬಂಧಿಕರೊಬ್ಬರು” ಇವನಿಗೆ ಇಂಗ್ಲೀಷ್ ಮೀಡಿಯಂ ಶಾಲೆ ಏಕೆ,ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ.ಸುಮ್ಮನೇ ನಿಮ್ಮ ಮನೆಯ ಪಕ್ಕದಲ್ಲೇ ಇರುವ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗೇ ಇವನನ್ನು ಹೈಸ್ಕೂಲಿಗೆ ಕಳಿಸಿ” ಎಂದು ನುಡಿದಿದ್ದರು. ಹೀಗೆ ಹೇಳಿದ ಆ ನಮ್ಮ ಸಂಬಂಧಿಕರು ಮಾತ್ರ ತಮ್ಮ ಮಗನನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ತಮ್ಮ ಮನೆಯ ಪಕ್ಕದಲ್ಲಿಯೇ ಕನ್ನಡ ಮಾಧ್ಯಮ ಶಾಲೆ ಇದ್ದರೂ ಮಗನನ್ನು ಮನೆಯಿಂದ ಹತ್ತು ಕಿಲೋಮೀಟರ್ ದೂರ ಇರುವ ಕಾನ್ವೆಂಟ್ ಆಂಗ್ಲಮಾಧ್ಯಮ ಶಾಲೆಗೆ ಆರಂಭದಲ್ಲಿಯೇ ೫೦೦೦೦ ಕೊಟ್ಟು ಎಲ್.ಕೆ.ಜಿ.ಗೆ ಸೇರಿಸಿದರು.
ಈ ಕುರಿತು ನನ್ನಪ್ಪ ಅವರ ಬಳಿ ಕೇಳಿದಾಗ ಅವರು ” ನಮ್ಮ ಪಕ್ಕದಲ್ಲಿಯೇ ಸರ್ಕಾರೀ ಶಾಲೆಯಿದ್ದರೂ ಅದು ಕನ್ನಡ ಮಾಧ್ಯಮ ಶಾಲೆ.ಅಲ್ಲಿ ತೀರಾ ಕೀಳು ಜಾತಿಯ ಮಕ್ಕಳು ಸಹ ಬರುತ್ತಾರೆ.ಹಾಗಾಗಿ ನನ್ನ ಮಗ ಅಲ್ಲಿ ಕಲಿಯುವುದು ನನಗೆ ಇಷ್ಟವಿಲ್ಲ.ಅವನು ಇಂಗ್ಲೀಷ್ ಮೀಡಿಯಂ ನಲ್ಲಿಯೇ ಓದಬೇಕು.ಹಾಗಾಗಿ ಕಷ್ಟವಾದರೂ ಅವನನ್ನು ಕಾನ್ವೆಂಟ್ ಶಾಲೆಗೆ ಕಳಿಸುತ್ತಿದ್ದೇವೆ” ಎಂದರು.ಆದರೆ ದಿನಾ ಕಾನ್ವೆಂಟ್ ನಿಂದ ಶಾಲೆ ಮುಗಿಸಿಕೊಂಡು ಬಂದ ಅವರ ಮಗ ಸಂಜೆ ಆಟವಾಡಲು ಮಾತ್ರಾ ತಮ್ಮ ಮನೆಯ ಪಕ್ಕದಲ್ಲಿಯೇ ಇರುವ ಕನ್ನಡ ಮಾಧ್ಯಮ ಶಾಲೆಯ ಆವರಣದೊಳಕ್ಕೆ ಹೋಗುತ್ತಾನೆ. ಇವರಿಗೆ ಕಲಿಯಲು ಕನ್ನಡ ಮಾಧ್ಯಮ ಶಾಲೆ ಬೇಡ. ಆಟವಾಡಲು ಮಾತ್ರ ಸರಕಾರೀ ಕನ್ನಡ ಮಾಧ್ಯಮ ಶಾಲೆ ಬೇಕು. ಶ್ರೀ ಸಿದ್ಧಲಿಂಗಯ್ಯನವರು ಬರೆದಿರುವ ‘ಏಕಲವ್ಯ’ ನಾಟಕದಲ್ಲಿ ಕರ್ಣನು ಏಕಲವ್ಯನ ಬಳಿ ಕುರುಕ್ಷೇತ್ರ ಯುದ್ಧಕ್ಕೆ ಸಹಾಯ ಕೇಳಲು ಬಂದಾಗ ಏಕಲವ್ಯ ಹೀಗೆ ಹೇಳುತ್ತನೆ. “ನೀನು ಸೂತಕುಲದವನು ಎಂದು ಎಲ್ಲರ ಬಳಿ ಹೇಳಿಕೊಂಡು ಬಂದೇ ಅನುಕಂಪದಿಂದ ದುರ್ಯೋಧನನಿಂದ ಅಂಗ ರಾಜ್ಯವನ್ನು ಪಡೆದು ಅಂಗಾಧಿಪತಿಯಾದೆ.ನೀನು ರಾಜನಾದ ಬಳಿಕ ನಿನ್ನ ಸೂತ ಕುಲದವರನ್ನು ಕಣ್ಣೆತ್ತಿಯೂ ನೋಡಿಲ್ಲ.ಬೆಸ್ತನ ಮೈಯ ವಾಸನೆ ಕೇಳಿ ದುರ್ಯೋಧನ ಹತ್ತು ಗಾವುದ ದೂರ ಓಡಿದರೆ ಕರ್ಣನಾದ ನೀನು ನೂರು ಗಾವುದ ದೂರ ಓಡುತ್ತೀಯ”.
ಹಾಗೆಯೇ ಕನ್ನಡ ಮಾಧ್ಯಮ ಶಾಲೆಯನ್ನು ಕಂಡು ಇಂದಿನ ಆಧುನಿಕ ಮಕ್ಕಳು ಒಂದು ಕಿಲೋಮೀಟರ್ ದೂರ ಓಡಿದರೆ ಅವರ ಪೋಷಕರು ಹತ್ತು ಕಿಲೋಮೀಟರ್ ದೂರ ಓಡುತ್ತಾರೆ.ಹೀಗಿದೆ ಆಧುನಿಕ ಪೋಷಕರ ಮನಸ್ಥಿತಿ.ನಾನು ಈಗಾಗಲೇ ತಿಳಿಸಿದ ನಮ್ಮ ಸಂಬಂಧಿಕರು ಕೀಳು ಜಾತಿಯ ಮಕ್ಕಳು ಬರುತ್ತಾರೆ ಎಂಬ ಕಾರಣದಿಂದ ತಮ್ಮ ಮಗನನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲಿಲ್ಲವೋ ಅದೇ ಕೀಳು ಜಾತಿಯ ಜನರ ಜೊತೆ ದಿನ ಬೆಳಗಾದರೆ ವ್ಯವಹರಿಸಿ ವರ್ಷಕ್ಕೆ ಲಕ್ಷಗಟ್ಟಲೇ ಹಣ ಸಂಪಾದಿಸುತ್ತಾರೆ.ಅಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲು,ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೀಳು ಜಾತಿಯ ಜನರ ಜೊತೆ ವ್ಯವಹರಿಸಲು ತಯಾರಿರುವ ಇವರು ತಮ್ಮ ಮಗನನ್ನು ಮಾತ್ರ ಆ ಜನರ ಮಕ್ಕಳೊಂದಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸಲು ತಯಾರಿಲ್ಲ.ಅವರ ಪ್ರಕಾರ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಕಾನ್ವೆಂಟ್ ನಲ್ಲಿ ಕಲಿತ ಮಕ್ಕಳಷ್ಟು ಚುರುಕಾಗಿರುವುದಿಲ್ಲ,ವ್ಯವಹಾರ ಜ್ಞಾನವುಳ್ಳವರಾಗಿರುವುದಿಲ್ಲವಂತೆ.ಇಂಥವರಿಗೆ ಏನು ಹೇಳಬೇಕೋ ನನಗಂತೂ ತಿಳಿಯುತ್ತಿಲ್ಲ.ನಾನು ಹೈಸ್ಕೂಲಿಗೆಂದು ಹೋದ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಯಲ್ಲಿ ಶೇಕಡಾ ೭೦ರಷ್ಟು ಜನ ಮುಸ್ಲಿಂ ವಿದ್ಯಾರ್ಥಿಗಳಿದ್ದರು.ಅವರ ಜೊತೆ ಬೆರೆತು ಕಲಿತಿದ್ದಕ್ಕೇ ನಾವು ಹಾಳಾಗುವುದಾಗಿದ್ದಿದ್ದರೆ ನಾನಿಂದು ಕರ್ನಾಟಕದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನನಲ್ಲಿ ಎಂಬಿಬಿಎಸ್ ಓದುತ್ತಿರಲಿಲ್ಲ.
ಬದಲಿಗೆ ನಮ್ಮ ಜೊತೆ ಕಲಿತ ನಮ್ಮ ಮುಸ್ಲಿಂ ಸಹಪಾಠಿಗಳಿಗೆ ನಾವು ನಮ್ಮಲ್ಲಿರುವ ಒಳ್ಳೆಗುಣಗಳನ್ನು ಕಲಿಸಿಕೊಟ್ಟೆವು.ಅವರಲ್ಲಿರುವ ಒಳ್ಳೆ ಗುಣಗಳನ್ನು ಕಲಿತೆವು.ಅನೇಕ ಜನ ಮುಸ್ಲಿಂ ವಿದ್ಯಾರ್ಥಿಗಳು ನನ್ನಿಂದ ಪಾಠ ಹೇಳಿಸಿಕೊಂಡು ಕಲಿತರು.ಹಾಗಾಗಿ ಓದುವ ಹುಡುಗರು ಎಲ್ಲಿದ್ದರೂ ಓದುತ್ತಾರೆ,ಮತ್ತು ಜಗತ್ತಿನ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ.ನಾಡಿನ ಶ್ರೇಷ್ಟ ವ್ಯಕ್ತಿಗಳಾದ ಸರ್ ಎಂ.ವಿಶ್ವೇಶ್ವರಯ್ಯನವರು,ಎಸ್.ಎಲ್.ಭೈರಪ್ಪನವರು,ಕುವೆಂಪು,ತೇಜಸ್ವಿ,ಅನಂತಮೂರ್ತಿ,ಇನ್ಫೋಸಿಸ್ ನ ಸುಧಾಮೂರ್ತಿ ಇವರುಗಳೆಲ್ಲ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಕಲಿತವರೇ ತಾನೆ.ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂದು ಬಯಸುವ ಇಂದಿನ ಪೋಷಕರು ತಾವು ಸ್ವತಃ ಕನ್ನಡ ಮಾಧ್ಯಮದಲ್ಲಿ ಕಲಿತೇ ಇವತ್ತು ಸಮಾಜದಲ್ಲಿ ಚೆನ್ನಾಗಿ ಬದುಕುತ್ತಿದ್ದೇವೆ ಎಂದು ಮರೆತಂತೆ ಕಾಣುತ್ತದೆ.ಕನ್ನಡದಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಆಂಗ್ಲ ಭಾಷೆಯನ್ನು ಚೆನ್ನಾಗಿ ಕಲಿಯಬಲ್ಲರು.ಅದೇ ಆಂಗ್ಲ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಯುವುದು ಕಷ್ಟವಾಗುತ್ತದೆ.ಇದನ್ನು ಸ್ವತಃ ಇಂಗ್ಲೀಷ್ ಮೀಡಿಯಂ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ ನನ್ನಲ್ಲಿ ಹೇಳಿದ್ದಾರೆ.
ಕನ್ನಡದಲ್ಲಿ ಮಾತನಾಡುವ,ಬರೆಯುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನಲ್ಲಿ ಮಾತನಾಡಿ ಬರೆಯಿರಿ ಎಂದರೆ ಅವರಿಗೆ ಅಷ್ಟೇನೂ ಕಷ್ಟವಾಗುವುದಿಲ್ಲ.ಅದೇ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಮಾತನಾಡಿ ಎಂದರೆ ತಡವರಿಸುತ್ತಾರೆ.ನಾಲ್ಕು ವಾಕ್ಯ ಕನ್ನಡದಲ್ಲಿ ಬರೆಯಿರಿ ಎಂದರೆಶ್ ಬರೆಯಲು ಹರಸಾಹಸ ಪಡುತ್ತಾರೆ.ಹಾಗಾಗಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಾಲ್ಕನೇ ತರಗತಿಯವರೆಗಾದರೂ ಮಕ್ಕಳು ಕನ್ನಡದಲ್ಲಿ ಓದಬೇಕು ಎಂಬುದನ್ನು ಕಡ್ಡಾಯ ಮಾಡಲು ಹೊರಟಿರುವ ರಾಜ್ಯಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೊಡಲಿ ಏಟು ಬಿದ್ದಿದೆ.

ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಎಲ್ಲಾ ರಾಜ್ಯದ ಎಲ್ಲ ಭಾಷೆಗಳಿಗೂ ಅನ್ವಯವಾಗುತ್ತದೆ.ಯಾವ ರಾಜ್ಯಸರ್ಕಾರವೂ ಸಹ ವಿದ್ಯಾರ್ಥಿಗಳು ಇದೇ ಭಾಷೆಯಲ್ಲಿ ಕಲಿಯಬೇಕೆಂದು ಒತ್ತಾಯಿಸುವಂತಿಲ್ಲ.ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ತಮಿಳು,ತೆಲುಗು,ಮಲಯಾಳಂ,ಕೊಂಕಣಿ,ಮರಾಠಿ,ಬಂಗಾಳಿ ಹೀಗೆ ಎಲ್ಲಾ ಭಾಷೆಗಳಿಗೂ ಹೊಡೆತ ಬಿದ್ದಿದೆ ಎಂದು ಅನೇಕರು ಹೇಳಿದರು.ಆದರೆ ಕನ್ನಡಕ್ಕೆ ಮಾತ್ರ ಬಹಳ ದೊಡ್ಡದಾದ ಏಟು ಬಿದ್ದಿದೆ ಎಂಬುದು ನನ್ನ ಅನಿಸಿಕೆ.ಹೇಗೆಂದು ಹೇಳುತ್ತೇನೆ.ನಾನು ನೋಡಿರುವ ಪ್ರಕಾರ ತಮಿಳರು,ಮಲಯಾಳಿ,ತೆಲುಗು,ಕೊಂಕಣಿ ಭಾಷಿಗರು ತಾವು ಯಾವ ರಾಜ್ಯದಲ್ಲಿದ್ದರೂ,ಯಾವ ದೇಶದಲ್ಲಿದ್ದರೂ ತಮ್ಮ ಮಾತೃಭಾಷೆಯನ್ನೇ ಮಾತನಾಡುತ್ತಾರೆ.ಅದರಲ್ಲೇ ವ್ಯವಹರಿಸುತ್ತಾರೆ.ತಮ್ಮ ಮಕ್ಕಳಿಗೂ ತಮ್ಮ ಭಾಷೆಯನ್ನೇ ಕಲಿಸುತ್ತಾರೆ.ಆ ರಾಜ್ಯಗಳ ಹೆಣ್ಣು ಮಕ್ಕಳು ತಮ್ಮತಮ್ಮಲ್ಲೇ ಮಾತನಾಡುವಾಗಲೂ ತಮ್ಮ ರಾಜ್ಯದ ಬಾಷೆಯಲ್ಲೇ ಮಾತನಾಡುತ್ತಾರೆ.ಇಂಗ್ಲೀಷ್ ನಲ್ಲಿ ಮಾತನಾಡುವುದನ್ನು ನಾನೆಂದೂ ನೋಡಿಲ್ಲ.
ಉದಾಹರಣೆಗೆ ನಾನು ಓದುತ್ತಿರುವ ಕಾಲೇಜಿನಲ್ಲೇ ೫೦ಕ್ಕೂ ಹೆಚ್ಚು ಜನ ಮಲಯಾಳಿಗಳಿದ್ದಾರೆ.೧೦೦ಕ್ಕೂ ಹೆಚ್ಚು ಜನ ಹಿಂದಿ ಮಾತನಾಡುವ ಉತ್ತರಭಾರತದ ವಿದ್ಯಾರ್ಥಿಗಳಿದ್ದಾರೆ.ಇವರುಗಳೆಲ್ಲರೂ ತಮ್ಮ ರಾಜ್ಯದ ಜನರ ಜೊತೆ ಮಾತನಾಡುವಾಗಲೆಲ್ಲಾ ತಮ್ಮ ತಮ್ಮ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ.ಇಂಗ್ಲೀಷ್ ಬಳಸುವುದಿಲ್ಲ.ಆದರೆ ನಮ್ಮ ಕರ್ನಾಟಕದ ಅನೇಕ ವಿದ್ಯಾರ್ಥಿಗಳು ತಮಗೆ ಕನ್ನಡ ಬಂದರೂ ಇಂಗ್ಲೀಷ್ ನಲ್ಲಿಯೇ ಮಾತನಾಡುತ್ತಾರೆ.ಅಷ್ಟೇ ಏಕೆ ನಾನಿರುವ ಹಾಸ್ಟೆಲ್ ಪಕ್ಕದಲ್ಲಿಯೇ ಎರಡು-ಮೂರು ಗುಜರಾತೀ ಸೇಠುಗಳಿದ್ದಾರೆ.ಅವರೆಲ್ಲರೂ ಚೆನ್ನಾಗಿ ಕಲಿತು ಉನ್ನತ ಹುದ್ದೆಯಲ್ಲಿರುವವರೇ.ಅವರು ಎಂದೂ ಗುಜರಾತೀ ಭಾಷೆ ಬಿಟ್ಟು ಬೇರೆ ಮಾತನಾಡಿದ್ದನ್ನು ನಾನು ನೋಡಿಲ್ಲ.ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳಿಸುತ್ತಾರಾದರೂ ತಮ್ಮ ಮಕ್ಕಳ ಜೊತೆ ಗುಜರಾತೀ ಭಾಷೆಯಲ್ಲೇ ಮಾತನಾಡುತ್ತಾರೆ.ಅವರ ಅಕ್ಕ ಪಕ್ಕದ ಮನೆಗಳಲ್ಲಿರುವ ಕನ್ನಡಿಗರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳುಹಿಸುವುದಷ್ಟೇ ಅಲ್ಲದೇ ಮಕ್ಕಳ ಇಂಗ್ಲೀಷ್ ಜ್ಞಾನವೃದ್ಧಿಯಾಗಬೇಕೆಂದು ತಾವೂ ಸಹ ಇಂಗ್ಲೀಷ್ ನಲ್ಲಿಯೇ ಮಾತನಾಡುತ್ತಾರೆ.ಹೀಗಾದರೆ ಕನ್ನಡ ಉಳಿಯುವುದು ಹೇಗೆ.
ಇನ್ನು ಕರ್ನಾಟಕದಲ್ಲೇ ತುಳು ಭಾಷೆ ಮಾತನಾಡುವವರು ಅನೇಕರಿದ್ದಾರೆ.ಅವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ತಾವು ಮನೆಯಲ್ಲಿ ತುಳುವನ್ನೇ ಮಾತನಾಡುತ್ತಾರೆ ಮತ್ತು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳಿಸಿದರೂ ಅವರಿಗೆ ತುಳು ಕಲಿಸುತ್ತಾರೆ.ಆ ಮೂಲಕ ತಮ್ಮ ಮಾತೃಭಾಷೆಯನ್ನು,ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ.ಅಲ್ಲದೇ ಕರ್ನಾಟಕದಲ್ಲಿರುವ ಕೊಂಕಣಿಗರು,ಮರಾಠಿಗರು ಎಲ್ಲರೂ ಇಂಗ್ಲೀಷ್ ಗೊತ್ತಿದ್ದರೂ ಸಹ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ.ಆದರೆ ಕನ್ನಡಿಗರು ಮಾತ್ರ ಕನ್ನಡವನ್ನು ಮರೆತು ಆಂಗ್ಲ ಭಾಷೆಯಲ್ಲಿ ಮಾತನಾಡುವುದರ ಮೂಲಕ ತಾವು ನಾಗರೀಕರಾದೆವು,ಆಧುನಿಕ ಜಗತ್ತಿಗೆ ತೆರೆದುಕೊಂಡೆವು ಎಂದು ಭಾವಿಸಿದ್ದಾರೆ. ಹಾಗಾಗಿ ಕನ್ನಡಿಗರನೇಕರು ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳಿಸಿದರೂ ಮನೆಯಲ್ಲೇ ಕನ್ನಡ ಮಾತನಾಡುವುದಿಲ್ಲವಾದ್ದರಿಂದ ಕನ್ನಡವು ಕ್ರಮೇಣ ನಶಿಸಿ ಹೋಗುವ ಸಾಧ್ಯತೆ ಇದೆ.ಇದನ್ನು ಮನಗಂಡೇ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕನ್ನಡದಲ್ಲಿ ಕಡ್ಡಾಯ ಮಾಡಲು ಹೊರಟಿದೆ.ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡುತ್ತಿಲ್ಲ. ಹೀಗಾಗಿ ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಕೋರ್ಟ್ ನ ತೀರ್ಪು ಕನ್ನಡ ಭಾಷೆಗೆ ಮಾತ್ರ ಜಾಸ್ತಿ ಮಾರಕವಾಗುವ ಸಾಧ್ಯತೆ ಇದೆ.
ಇನ್ನು ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರವು ಮಾಡುತ್ತಿರುವ ಕೆಲಸ ಸಮರ್ಪಕವಾಗಿದೆಯೇ? ನಾವು ಕೇರಳ,ತಮಿಳುನಾಡು ಕಡೆ ಪ್ರವಾಸ ಹೋಗಿದ್ದಾಗ ಎಲ್ಲಿಯೂ ಆ ರಾಜ್ಯದ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಬರೆದ ನಾಮಫಲಕಗಳಾಗಲೀ,ಊರಿನ ಹೆಸರಾಗಲೀ,ಬೇರೆ ಬೋರ್ಡ್ ಗಳಾಗಲೀ ಕಣ್ಣಿಗೆ ಬೀಳಲಿಲ್ಲ.ಅನಿವಾರ್ಯವಾಗಿ ಇಂಗ್ಲೀಷ್ ಅನ್ನು ಬಳಸಲೇ ಬೇಕಾಗಿ ಬಂದರೆ ಅವರ ರಾಜ್ಯಭಾಷೆಯ ಕೆಳಗೆ ಇಂಗ್ಲೀಷ್ ನಲ್ಲಿ ಬರೆಯುತ್ತಿದ್ದರು.ಅಲ್ಲದೇ ಅಲ್ಲಿನ ಜನರು ಇಂಗ್ಲೀಷ್ ಮಾತನಾಡಲು ಬಂದರೂ ತಮ್ಮ ತಮ್ಮ ರಾಜ್ಯಭಾಷೆಯಲ್ಲೇ ಮಾತನಾಡುತ್ತಿದ್ದರು.ಹುಡುಕಿದರೂ ಎಲ್ಲಿಯೂ ತಮಿಳುನಾಡು,ಕೇರಳದಲ್ಲಿ ಬೇರೆ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಕಾಣಲಿಲ್ಲ.ಆದರೆ ಕರ್ನಾಟಕದಲ್ಲಿ ನಾವು ನೋಡುತ್ತಿರುವುದೇನು.ಎಲ್ಲಿ ನೋಡಿದರೂ ಇಂಗ್ಲೀಷ್ ನ ನಾಮಫಲಕಗಳು,ಕನ್ನಡ ಬಂದರೂ ಇಂಗ್ಲೀಷ್ ನಲ್ಲಿಯೇ ವ್ಯವಹರಿಸಲು ಇಷ್ಟಪಡುವ ಜನಗಳು, ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ನೂರಾರು ಚಿತ್ರಮಂದಿರಗಳು.ಸರ್ಕಾರಕ್ಕೆ ಇವುಗಳ ಕುರಿತು ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಕನ್ನಡ ಪರ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಜನರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಕಳಿಸಿ ಮನೆಯಲ್ಲಿ ಇಂಗ್ಲೀಷ್ ಮಾತನಾಡುತ್ತಾರೆ.
ಅನೇಕರು ಕಾನ್ವೆಂಟ್ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಗುಣಮಟ್ಟ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಿಗುವುದಿಲ್ಲ ಎಂದು ಆರೋಪಿಸುತ್ತಾರೆ. ಇದರ ಕುರಿತು ಸರ್ಕಾರವು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.ಸರ್ಕಾರೀ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಿ ಕ್ರಿಯಾಶೀಲವಾಗಬೇಕಿದೆ.ನಮ್ಮ ನಾಡಿನ ಮಕ್ಕಳ ಶಿಕ್ಷಣಕ್ಕಾಗಿ,ಈ ದೇಶದ ಭವಿಷ್ಯವಾದ ಮಕ್ಕಳ ಓದಿಗಾಗಿ ಸರ್ಕಾರ ಎಷ್ಟು ಹಣ ವ್ಯಯಿಸಿದರೂ ನಷ್ಟವೇನಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರವು ಸಮರ್ಥವಾದ ವಾದ ಮಂಡಿಸಲಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.ಹಾಗಾದರೆ ತನ್ನ ಭಾಷೆಯನ್ನೇ ಉಳಿಸಿಕೊಳ್ಳಲಾರದಷ್ಟು ದುರ್ಬಲವಾಗುತ್ತಿದೆಯೇ ನಮ್ಮ ಸರ್ಕಾರ.
ಕನ್ನಡದ ಉಳಿವಿನ,ಕನ್ನಡದ ಬೆಳವಣಿಗೆಯ ನಿಟ್ಟಿನಲ್ಲಿ ನೋಡುವುದಾದರೆ ಸುಪ್ರೀಂ ಕೋರ್ಟ್ ತೀರ್ಪು ಕನ್ನಡಕ್ಕೆ ನಿಜಕ್ಕೂ ಮಾರಕವಾದುದು.ನಾವು ಕನ್ನಡದಲ್ಲಿಯೇ ವ್ಯವಹರಿಸದ ಮೇಲೆ,ಕನ್ನಡದಲ್ಲಿಯೇ ಶಿಕ್ಷಣ ಪಡೆಯದ ಮೇಲೆ ನಾವು ನಮ್ಮತನವನ್ನು ಉಳಿಸಿಕೊಳ್ಳುವುದೆಂತು.ಸರ್ಕಾರವೇನೂ ಸಂಪೂರ್ಣ ಶಿಕ್ಷಣವನ್ನೇ ಕನ್ನಡದಲ್ಲಿ ಕಲಿಯಬೇಕೆಂದೇನೂ ಹೇಳುತ್ತಿಲ್ಲ.ಕೇವಲ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡದಲ್ಲಿ ಕಲಿಯಿರಿ ಎಂದಷ್ಟೇ ಹೇಳುತ್ತಿದೆ.ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೇನೂ ದಡ್ಡರಾಗಿಬಿಡುವುದಿಲ್ಲ.ವ್ಯವಹಾರ ಜ್ಞಾನ ಇಲ್ಲದವರಾಗುವುದಿಲ್ಲ.ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರೆ ಈ ಜಗತ್ತಿನ ಜ್ಞಾನಾರ್ಜನೆಯ ನಾಗಾಲೋಟದಲ್ಲಿ ಹಿಂದೆ ಬೀಳುವುದೂ ಇಲ್ಲ.ಹಾಗೆ ನೋಡಿದರೆ ಕನ್ನಡವನ್ನು ಚೆನ್ನಗಿ ಬಲ್ಲ ವಿದ್ಯಾರ್ಥಿಗಳು ಮುಂದೆ ಇತರ ಭಾಷೆಗಳನ್ನೂ ಸುಲಭವಾಗಿ ಕಲಿಯುತ್ತಾರೆ ಮತ್ತು ಮುಂದೆ ಉನ್ನತ ವ್ಯಾಸಂಗವನ್ನು ಆಂಗ್ಲಭಾಷೆಯಲ್ಲಿ ಓದುವಾಗಲೂ ಅಷ್ಟೇ ಸುಲಭವಾಗಿ ಕಲಿಯುತ್ತಾರೆ.ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.ಮನೆಯಲ್ಲಂತೂ ಕನ್ನಡ ಮಾತನಾಡುವ ವಾತಾವರಣ ಕ್ರಮೇಣ ಕಡಿಮೆಯಾಗುತ್ತಿದೆ ಹಾಗಾಗಿ ಮಕ್ಕಳು ಶಾಲೆಯಲ್ಲಾದರೂ ಕನ್ನಡ ಕಲಿಯಲಿ ಆ ಮೂಲಕ ಕನ್ನಡ ಉಳಿಯುವಂತಾಗಲಿ ಎಂಬ ಉದ್ದೇಶದಿಂದ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಡ್ಡಾಯ ಮಾಡಿದ ಸರ್ಕಾರದ ನಿರ್ಧಾರವನ್ನು ಯಾರೂ ವಿರೋಧಿಸುವಂತಾಗಬಾರದು.ತನ್ನ ಭಾಷೆಯನ್ನು,ತನ್ನ ಸಂಸ್ಕೃತಿಯನ್ನು,ತನ್ನ ನೆಲದ ಸೊಗಡನ್ನು ಉಳಿಸಿಕೊಳ್ಳಲು ಒಂದು ಸ್ವತಂತ್ರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕೂ ಆಯಾಯ ರಾಜ್ಯ ಸರ್ಕಾರಗಳಿಗೆ ಇಲ್ಲವೇ?
ಇದನ್ನು ಸುಪ್ರೀಂ ಕೋರ್ಟ್ ಸಹ ಮರುಚಿಂತನೆ ಮಾಡಬೇಕು.ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಬೇಕು ಎಂದು ವರ್ಷಗಟ್ಟಲೇ ಹೋರಾಟ ಮಾಡಿದ್ದ ಮಹನೀಯರೆಲ್ಲರೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವೂ ಧ್ವನಿಯೆತ್ತಬೇಕು.ಇದಕ್ಕೆ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರೂ ಕೈ ಜೋಡಿಸಬೇಕು.ಸಾಹಿತಿಗಳು,ಚಿಂತಕರು,ಬುದ್ಧಿಜೀವಿಗಳೆಲ್ಲರೂ ಒಂದಾಗಿ ಹೋರಾಟ ಮಾಡಬೇಕು.ನನಗೇನೂ ಇಂಗ್ಲೀಷ್ ಮೇಲೆ ಯಾವ ದ್ವೇಷವೂ ಇಲ್ಲ.ಮಾತೃಭಾಷೆಯಾದ ಕನ್ನಡವನ್ನು ಎಷ್ಟು ಪ್ರೀತಿಸುತ್ತೇನೆಯೋ ಇತರ ಎಲ್ಲ ಭಾಷೆಗಳನ್ನೂ ನಾನು ಅಷ್ಟೇ ಗೌರವಿಸುತ್ತೇನೆ.ಆದರೆ ಕನ್ನಡದ ಭವಿಷ್ಯದ ದೃಷ್ಟಿಯಿಂದ,ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನ ತೀರ್ಪು ಮಾರಕವಾದುದು.ಇದರ ಕುರಿತು ಪರಾಮರ್ಶೆ ನಡೆಯಬೇಕು.ಸುಪ್ರೀಂ ಕೋರ್ಟ್ ಸಹ ತೀರ್ಪಿನ ಮರುಪರಿಶೀಲನೆ ಮಾಡಬೇಕು. ಆ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆಯಲ್ಲೇ ಕಲಿಯುವಂತಾಗಬೇಕು.ಇಲ್ಲದಿದ್ದರೆ ಅದು ಒಂದು ಭಾಷೆಯ ಬೆಳವಣಿಗೆಗೆ ಮಾರಕವಾಗುತ್ತದೆ,ಅದರಲ್ಲೂ ಕನ್ನಡಕ್ಕಂತೂ ತುಂಬಲಾರದ ಹೊಡೆತ ಬೀಳುತ್ತದೆ.ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಲಿ ಎಂಬುದೇ ನನ್ನ ಆಶಯ..
 

‍ಲೇಖಕರು G

21 May, 2014

1 Comment

  1. Rajan

    ಇದು ಖಂಡಿತವಾದ ಮಾತು.
    ಒಂದು ಭಾಷೆಯನ್ನು ಆಡುವವರು ಇಲ್ಲದಿದ್ದರೆ, ಬಂದರೂ ಆಡಲಿಕ್ಕೆ ಇಷ್ಟವಿಲ್ಲದವರು ಇದ್ದರೆ, ಓದುವವರು ಇಲ್ಲದಿದ್ದರೆ, ಬರೆಯುವವರು ಇಲ್ಲದಿದ್ದರೆ ಭಾಷೆ ಹೇಗೆ ಸ್ವಾಮೀ ಉಳಿಯುತ್ತೆ? ಕನ್ನಡ ಭಾಷೆಗೆ ಸಾವಿಲ್ಲ ಅನ್ನೋದೆಲ್ಲಾ ಭಾವನಾತ್ಮಕತವಾದ ಮಾತುಗಳು, ಸ್ವಲ್ಪ ಕಾಮನ್ ಸೆನ್ಸ್ ನಿಂದಾ, practical & pragmatic ಆಗಿ ಯೋಚಿಸಿದರೆ ಪರಿಸ್ತಿತಿ ಅರ್ಥವಾಗಬಹುದು.
    ನನಗನ್ನಿಸೋದು ಇಷ್ಟು, ನಮ್ಮ ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲವೇ ಇಲ್ಲ, ಜನರ ಒತ್ತಾಯಕ್ಕೆ ಮಣಿದು ಯಾರೋ ತಮ್ಮ ಸಂಭಂಧಿಯನ್ನೇ ಈ ಕೇಸಿಗೆ ವಕೀಲರನ್ನಾಗಿ ಮಾಡಿ ಕೇಸನ್ನು ಬೇಕಂತಾ ಹಳ್ಳ ಹಿಡಿಸಿದ್ದರೆ, match-fixing ಆಗಿದ್ರೂ ನಾವು ಆಶ್ಚರ್ಯ ಪಡಬಾರದು.
    ಪ್ರಪಂಚದಲ್ಲಿ ತಮ್ಮ ಭಾಷೆಯ ಬಗೆಗೆ most inferiority complex ಇರೋದು ಕನ್ನಡಿಗರಿಗೇನೇ. Sad and frustrating but true.
    ಅಂದಹಾಗೆ ನಾನೂ ಕೂಡಾ ಹೈ ಸ್ಕೂಲ್ ತನಕಾ ಕನ್ನಡ ಮಾಧ್ಯಮದಲ್ಲೇ ಓದಿದ್ದು and I am really really happy and proud about it.
    ಇದರಿಂದಾ ನನಗೆ ಕನ್ನಡದ ಮತ್ತು ಇಂಗ್ಲಿಷ್ ನ ಎರಡೂ ಕಿಟಕಿಗಳೂ ತೆರೆದಿವೆ, ಎರಡರ ಸಾಹಿತ್ಯವನ್ನೂ ಓದಿ ಆಸ್ವಾದಿಸುತ್ತೇನೆ, ಆದರೆ ಈಗಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡದ ಕಿಟಕಿಯನ್ನು ಶಾಶ್ವತವಾಗಿ ಮುಚ್ಚಲು ಸಾಯ್ತಾ ಇದ್ದಾರೆ ಮತ್ತು ಅದನ್ನ ಸರಿಪಡಿಸಬೇಕಾದವರು ಕಕ್ಕ ತಿಂತಾ ಕೂತಿದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading