ಕನ್ನಡದಲ್ಲಿ ಶಿಕ್ಷಣ ಮಾಧ್ಯಮ
“ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು, ಶಿಕ್ಷಣದ ಎಲ್ಲ ಘಟ್ಟಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು, ಅದು ರಾಜ್ಯದ ಆಡಳಿತ ಭಾಷೆಯೂ ಆಗಬೇಕು. ಈ ಸಂಕಲ್ಪಗಳು ಕೈಗೂಡಿದರೆ ಉಳಿದ ಎಲ್ಲಾ ಕೇಡುಗಳು ಕಣ್ಮರೆಯಾಗುತ್ತವೆ”ಎಂದು ಮಹಾಕವಿ ಕುವೆಂಪು 1955ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠದಿಂದ ಹೇಳಿದ ಮಾತುಗಳು ಇಲ್ಲಿ ಉಲ್ಲೇಖನೀಯ.
ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಆಯಾ ರಾಜ್ಯಗಳ ಭಾಷೆಗಳು ಆಡಳಿತ ಭಾಷೆಯಾಗುತ್ತವೆ, ಶಿಕ್ಷಣ ಮಾಧ್ಯಮವಾಗುತ್ತವೆ, ಜನರ ನಡುವಿನ ಸಂಪರ್ಕ ಭಾಷೆಯಾಗುತ್ತವೆ – ಎಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಅದು ನಿರೀಕ್ಷೆಯಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಮೊದಲಿಗೆ ರಚಿಸಿದ್ದ ಎ.ಜಿ. ರಾಮಚಂದ್ರರಾವ್, ಮಲ್ಲಾರಾಧ್ಯರ ಸಮಿತಿಯಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ವರದಿಗಳು ಕನ್ನಡ ಮಾಧ್ಯಮದ ಪರವಾಗಿಯೇ ಇವೆ. ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಗಳೂ ಕನ್ನಡ ಪರವಾಗಿಯೇ ಇವೆ. ಆದರೆ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ.
ರಾಜ್ಯ ಸರ್ಕಾರ 29-4-1994ರಂದು ಆದೇಶ ಹೊರಡಿಸಿ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಿತು. ಇದನ್ನು ಇಂಗ್ಲೀಷ್ ಶಾಲೆಗಳ ಒಕ್ಕೂಟ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾ ಬಂದಿತು. ಇದನ್ನು ರಾಜ್ಯದ ಉಚ್ಚನ್ಯಾಯಾಲಯವು ಪರಿಶೀಲಿಸಿ 8-7-2008ರಂದು ಭಾಷಾಮಾಧ್ಯಮದ ತೀರ್ಪನ್ನು ಇಂಗ್ಲೀಷ್ ಶಾಲೆಗಳ ಒಕ್ಕೂಟದ ಪರವಾಗಿ ನೀಡಿತು. ಈ ತೀರ್ಪನ್ನು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಸಂವಿಧಾನ ಪೀಠವು 6-5-2014 ರಂದು ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯಿತು. ನಂತರ ಕರ್ನಾಟಕ ಸರ್ಕಾರವು ಅಕ್ಟೋಬರ್ 2014ರಲ್ಲಿ ಮತ್ತೊಮ್ಮೆ ಪರಿಶೀಲನೆಗಾಗಿ ಮೇಲ್ಮನವಿ ಸಲ್ಲಿಸಿದಾಗ ಇದರ ಪುನರ್ ಪರಿಶೀಲನೆ ಅಗತ್ಯವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಕೈಬಿಟ್ಟಿತು. ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲಿನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು; ಕನ್ನಡದ ಭವಿಷ್ಯ
ಈಗ ಶಿಕ್ಷಣ ಮಾಧ್ಯಮದ ಗೊಂದಲ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶ ಭಾಷೆ ಉಳಿಸುವಲ್ಲಿ ಕರ್ನಾಟಕ ಸರ್ಕಾರದ ನಿಲುವು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಕನ್ನಡಿಗರ ಹೊಣೆಗಾರಿಕೆ ಹೆಚ್ಚಿದೆ. ಕನ್ನಡಿಗರು ಒಂದು ದೀರ್ಘಕಾಲೀನ ಆಂದೋಲನಕ್ಕೆ ಸಿದ್ಧವಾಗಿ ತಾರ್ಕಿಕ ಅಂತ್ಯ ಕಾಣುವ ತನಕ ವಿಶ್ರಮಿಸಬಾರದು. ಇದಕ್ಕೆ ಇಡೀ ರಾಷ್ಟ್ರದ ಜನರ ಬೆಂಬಲ ಸಿಗುತ್ತದೆ. ಹಾಗಾಗಿ ನಾವು ಈ ರೀತಿ ಕಾರ್ಯಕ್ರಮ ರೂಪಿಸಬೇಕಾಗಿದೆ.
1. ಈ ತೀರ್ಪು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಆತಂಕ ಒಡ್ಡಿರುವುದರಿಂದ, ಸಂವಿಧಾನದ ಷೆಡ್ಯೂಲ್-8 ರಲ್ಲಿರುವ ಎಲ್ಲಾ ಭಾಷೆಗಳನ್ನು ಶಿಕ್ಷಣ ಮಾಧ್ಯಮದಲ್ಲಿ ಕಡ್ಡಾಯಗೊಳಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶೀಯ ಭಾಷೆಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಕೇಂದ್ರ ಸಕರ್ಾರದ ಮೇಲೆ ಒತ್ತಡ ತರಬೇಕು. ಈ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ದೇಶೀಯ ಭಾಷೆಗಳನ್ನು ಉಳಿಸಲು ನೆರವಾಗುವಂತೆ ಕೋರಬೇಕು. ಸಂವಿಧಾನದ 21ಎ, 29, 30, 43 ಕಲಂಗಳಿಗೆ ತಿದ್ದುಪಡಿ ಮಾಡಿ ಪ್ರಾದೇಶಿಕ/ರಾಜ್ಯ ಭಾಷೆ ಕಲಿಯುವುದು ಅಗತ್ಯ ಎಂಬುದನ್ನು ಸೇರಿಸಬೇಕು.
2. ಸಂವಿಧಾನ ತಿದ್ದುಪಡಿ ಮುಂತಾದ ಕ್ರಿಯೆಗಳು ಸಾಕಷ್ಟು ಸಮಯ ಹಿಡಿಯುವುದರಿಂದ 2010ರ ಶಿಕ್ಷಣ ಹಕ್ಕು ಕಾಯಿದೆಯಲ್ಲಿರುವ ಅಂಶವನ್ನು ಆಧರಿಸಿ ರಾಜ್ಯ ಸರ್ಕಾರ ಕೂಡಲೇ ಭಾಷಾ ನೀತಿಯೊಂದನ್ನು ರೂಪಿಸಬೇಕು. ಕಾಯ್ದೆಯ ಪ್ರಕರಣ 29(2)(ಎಫ್) ಅನ್ವಯ ಸಾಧ್ಯವಾದಷ್ಟು ಮಾತೃಭಾಷೆ ಎಂಬುದನ್ನು ಕಡ್ಡಾಯವಾಗಿ ಮಾತೃಭಾಷೆ ಅಥವಾ ರಾಜ್ಯ ಭಾಷೆ ಎಂದು ಬದಲಿಸಬೇಕು.
3. 1966ರ ಡಿ.ಎಸ್. ಕೊಠಾರಿ ಆಯೋಗದ ಶಿಫಾರಸ್ಸಿನಂತೆ ಈ ಕಾರ್ಯ ಸಾಧ್ಯವಾದರೆ ಸಮಾನ ಶಾಲಾಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಬಡವರ ಮಕ್ಕಳ ಶಾಲೆ ಮತ್ತು ಶ್ರೀಮಂತರ ಮಕ್ಕಳ ಶಾಲೆ ಎಂಬ ಶೈಕ್ಷಣಿಕ ವರ್ಗಬೇಧವನ್ನು ತೊಡೆದು ಹಾಕಲು ಸಹಾಯವಾಗುತ್ತದೆ. ಈ ಬದಲಾವಣೆಯಿಂದ ಮಾಲಿಯ ಮಗ ಮತ್ತು ಮಂತ್ರಿಯ ಮಗ, ಕೂಲಿಯ ಮಗ ಮತ್ತು ಕೋಟ್ಯಾಧೀಶನ ಮಗ, ಭೂಮಾಲಿಕನ ಮಗ ಮತ್ತು ಜೀತಗಾರನ ಮಗ, ಪ್ರಧಾನಿಯ ಮಗ ಮತ್ತು ಪೌರಕಾರ್ಮಿಕನ ಮಗ ಇವರೆಲ್ಲರೂ ಒಂದೇ ಬೆಂಚಿನಲ್ಲಿ, ಒಂದೇ ತರಗತಿಯಲ್ಲಿ ಕುಳಿತು ಕಲಿಯುವ ವಾತಾವರಣ ನಿರ್ಮಾಣವಾಗುತ್ತದೆ. ಇದು ವರ್ಣರಹಿತ ಮತ್ತು ವರ್ಗರಹಿತ ನವಕರ್ನಾಟಕದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.






ಅಧ್ಯಕ್ಷರಿಗೆ ಅಭಿನಂದನೆಗಳು,ಕನ್ನಡ ಮನದ ಮಾತಾಗಿ ಉಳಿಯಬಾರದು, ಅನ್ನದ ದಾರಿಯಾಗಬೇಕು.
ಸಿದ್ಧರಾಮಯ್ಯನವರ ಸರಕಾರ ಎಲ್ಲ ಸರಕಾರಿ ಉದ್ಯೋಗಗಳನ್ನು ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯ ವರೆಗೆ ಕಲಿತವರಿಗೆ ಮೀಸಲಿಡುವ ಕಾನೂನು ತಂದರೆ ಸಮಸ್ಯೆಗಳು ಹತ್ತುವರ್ಷಗಳ ಒಳಗೆ ದೂರವಾಗುವುವು… ನನ್ನನ್ನು ನಂಬಿ!