ರಾಘವೇಂದ್ರ ಬೆಟ್ಟಕೊಪ್ಪ
ಇಲ್ಲ, ಇದು ಸಹಜವಾಗಿ ಸಾಧಿಸಲು ಸಾಧ್ಯವಾಗುವದಿಲ್ಲ. ಅದಕ್ಕೆ ಒಂದು ಛಲ ಬೇಕು. ಸಂಸಾರದ ನೊಗದ ಜೊತೆ ನಡೆಯುತ್ತಲೇ ಗುರಿ ತಲುಪುವ ಕನಸು ಇರಬೇಕು. ಸಾಧನೆಗೆ ಸದಾ ಅದು ಅದೇ ಚಿಂತನೆ ಬೇಕು. ಅದೂ ಒಂಥರಾ ಧ್ಯಾನ. ಹಾಗಂತ ನಾನು ಸಾಧಿಸವದು ಇನ್ನೂ ಇದೆ. ಉಸಿರಿನ ಕೊನೇ ತನಕ ಕಲಿಕೆ ಮುಗಿಯುವದಿಲ್ಲ.
ನಾನು ಇರೋದು ಮುಂಬಯಿಯ ಡೊಂಬಿವೀಲಿಯಲ್ಲಿ. ಸುತ್ತೆಲ್ಲಮರಾಠಿಗರು, ಹಿಂದಿ ಬಲ್ಲವರು. ಕನ್ನಡ ಹಾಗೂ ಸಂಸ್ಕ್ರತ ಬಲ್ಲವರು ವಿರಳ. ಇರುವ ಕನ್ನಡ ಸಂಘಗಳು, ಸಂಸ್ಕೃತದ ಒಡನಾಡಿಗಳು ನನ್ನ ಆಸಕ್ತಿ ಉಳಿಸಿಕೊಟ್ಟಿವೆ.
ನಾನು ಸಂಸ್ಕೃತ ಅಂದೆನಲ್ಲ, ಅದು ಇನ್ನೊಬ್ಬರಿಗೆ ಪಾಠ ಮಾಡುವಷ್ಟು ಗೊತ್ತು. ಇಂದಿಗೂ ಐದಾರು ಕಡೆ ಹೈಸ್ಕೂಲ್ ಒಳಗಿನ ಮಕ್ಕಳಿಗೆ, ದೊಡ್ಡವರಿಗೂ ಸಂಸ್ಕೃತದ ಪಾಠ ಕಳೆದ ಒಂದು ದಶಕಗಳ ಆಚೆಯಿಂದಲೂ ಮಾಡುತ್ತಿದ್ದೇನೆ. ಮೊದಲಿಗೆ ಪಾಠ ಮಾಡುವದು ಕಷ್ಟವೇ ಆಗಿತ್ತು ಎನ್ನಿ. ಏಕೆಂದರೆ, ನಾನು ಕನ್ನಡ ಹಾಗೂ ಸಂಸ್ಕೃತ ಬಲ್ಲವಳು. ಆದರೆ ಅವರಿಗೆ ಮರಾಠಿ ಭಾಷೆಯಲ್ಲಿ ತಿಳಿಸಿ ಹೇಳಬೇಕು. ಅಥವಾ ಇಂಗ್ಲೀಷ್ನಲ್ಲಿ ಹೇಳಬೇಕು. ನಾನು ಮುಂಬಿಯಿಗೆ ಹೋದ ಹೊಸತರಲ್ಲಿ ಇಂಥ ಕಾರಣಕ್ಕೇ ಎರಡೂ ಭಾಷೆಯನ್ನು ಕಲಿತೆ. ನಾನು ಕಲಿತು ಸಂಸ್ಕೃತವನ್ನು ಮರಾಠಿಗಳಿಗೆ, ಮುಂಬಯಿಯ ಮಕ್ಕಳಿಗೆ ಕಲಿಸಲು ನಾನು ಹೆಚ್ಚುವರಿ ಎರಡು ಭಾಷೆ ಕಲಿತದ್ದು ಕಾರಣವಾಯಿತು.

ನಾನು ಮುಂಬಯಿ ಮಹಾ ನಗರಕ್ಕೆ ಬಂದು ಒಂದುವರೆ ದಶಕಗಳು ಉರುಳಿದವು. ಹಿರಿಯ ಮಗ ಶರತ್ ಒಂಬತ್ತನೇ ತರಗತಿಗೆ ಬಂದಾಗ ನನಗೂ ಓದುವ, ಆ ಮೂಲಕ ಸಾಧಿಸುವ ಉಮೇದು ಬಂತು. ಕಾವ್ಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಬಲಗೊಂಡಿತು. ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಾಗ ನಾನೂ ಸಂಸ್ಕ್ರತದಲ್ಲಿ ಎಂಎ ಅಂತಿಮ ವರ್ಷದ ಪರೀಕ್ಷೆ ಬರೆದೆ. ಮಕ್ಕಳನ್ನು ಓದಿಸಿ, ಅವರು ಮಲಗಿದ ಬಳಿಕ ನಾನು ಓದಿದೆ. ಹಗಲು ರಾತ್ರಿ ಒಂದೇ ಆಗಿತ್ತು. ಮಕ್ಕಳ ಪರೀಕ್ಷೆ ಮಾರ್ಚಗೆ ಮುಗಿದರೆ ನನಗೆ ಮುಗಿದದ್ದು ಮೇಗೆ. ರಜೆಯ ಅನುಭವ ಅವರಿಗೂ ಆಗಬೇಕು, ನಾನೂ ಓದಬೇಕು. ಮದಯವೆ ಆಗಿ ೧೦ -೧೨ ವರ್ಷ ಏನೂ ಮಾಡಲಾಗಲಿಲ್ಲ. ಮುಂಬಯಿಯ ವಾತಾವರಣಕೆ ಹೊಂದಿಕೊಳ್ಳೋದೇ ಆಯಿತು. ಇಕನಾಮಿಕ್ಸ ಎಂಎ ಮಾಡಲು ಸೀಟ್ ಸಿಗಲಿಲ್ಲ ಎಂದು ಅಪ್ಪ ಹೇಳಿದ ಸಂಸ್ಕೃತ ಎಂಎ ಮಾಡಲಿಲ್ಲ. ಈಗ ಅಂದು ಬಿಟ್ಟಿದ್ದೇ ಮಾಡಿದೆ. ಮುಂಬಯಿಯಲ್ಲಿ ಇಡೀ ಕುಟುಂಬದ ಸಹಕಾರದ ಜೊತೆ ಓದಿದೆ, ಪಾಠ ಮಾಡಿದೆ.
ಇಷ್ಟಕ್ಕೇ ನಿಲ್ಲಲಿಲ್ಲ ನನ್ನ ಓದು.
ಕರ್ನಾಟಕ ಸರಕಾರ ಹೊರ ನಾಡಿನ ಕನ್ನಡಿಗರಿಗೆ ಉನ್ನತ ವ್ಯಾಸಂಗಕ್ಕೆ ಕೊಡುವ ೨೫ ಸಾವಿರ ಪ್ರೋತ್ಸಾಹ ಮೊತ್ತವನ್ನು ಪಡೆದು ಕನ್ನಡದಲ್ಲಿ ಕೂಡ ಎಂಎ ಕೂಡ ಮಾಡಿದೆ. ಎರಡೂ ಎಂಎ ಅಂಚೆ ತೆರಪಿನ ಶಿಕ್ಷಣವಲ್ಲ. ದಿನವಹೀ ತರಗತಿಗೆ ಹೋಗಿದ್ದೆ. ಅದೂ ನಮ್ಮನೆಯಿಂದ ೨೦ ಕಿಮಿ ಆಚೆಗಿನ ವಿಶ್ವ ವಿದ್ಯಾಲಯಕ್ಕೆ. ಮುಂಬಯಿಯ ಟ್ರೇನೇ ನನಗೆ ಪ್ರಯಾಣಕ್ಕೆ ದಾರಿ. ಟ್ರೇನಿನಲ್ಲೂ ನಿಂತು ಹೋದದ್ದೇ ಹೆಚ್ಚು. ಮನೆಗೆ ಬಂದಾಗ ಸುಸ್ತಾದರೂ ನಾನೂ ಓದಬೇಕು, ಅಡುಗೆ ಮಾಡಬೇಕು, ಮಕ್ಕಳಿಗೆ ಕಲಿಸಬೇಕು. ಅವರನ್ನೂ ಓದಿಸಬೇಕು. ಬರೆಯುವದು ತಪ್ಪಿದ್ದರಿಂದ ನನ್ನ ರೈಟಿಂಗ್ ಕೂಡ ಓಡುತ್ತಿರಲಿಲ್ಲ. ಆದರೂ ಓದಿದೆ, ಓಡಿದೆ. ಆಗಲೂ ಮಗಳು ಶ್ರದ್ದಾ ಎಸ್ಸೆಸ್ಸೆಲ್ಸಿ!
ಎರಡು ಎಂಎ ಪದವಿ ಪಡೆದ ಬಳಿಕ ಯಾವುದಾದರೂ ಡಿಲೀಟ ಪದವಿ ಮಾಡಬೇಕು ಅನ್ನಿಸಿತು. ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನ ಸಿಕ್ಕಿತು. ಆಗೆ ಆಯ್ಕೆ ಮಾಡಿದ್ದು ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳ ಕುರಿತು ಹಾಗೂ ತುಲನಾತ್ಮಕ ಅಧ್ಯಯನ. ಕನ್ನಡದಲ್ಲಿ ಬೇಂದ್ರೆ, ಸಾಲಿ ರಾಮಚಂದ್ರ ರಾಯರು, ಕುಕ್ಕೇ ಸುಬ್ರಹ್ಮಣ್ಯ ಶಾಸ್ತ್ರಿ, ಎಸ್.ವಿ.ಪರಮೇಶ್ವರ ಭಟ್ಟ ಮೊದಲಾದವರು ಬರೆದಿದ್ದಾರೆ. ಯಕ್ಷಗಾನದಲ್ಲೂ ಇದೆ. ಈವರೆಗೆ ವಿದ್ವಾಂಸರು ಬರೆದ ಕಾವ್ಯವಮ್ನ ಓದಿ ಬರೆದೆ. ಸಂಸ್ಕ್ರತದ ಮೂಲವನ್ನು ಪ್ರಸ್ತಾಪಿಸಿದೆ. ಕನ್ನಡ ಹಾಗೂ ಸಂಸ್ಕ್ರತ ಬಲ್ಲವನಾಗಿರುವರಿಂದ ಅನುಕೂಲ ಆಯಿತು. ಇದು ಇಂದು ಸುಮಾರು ಮುನ್ನೂರು ಪಟುಗಳ ಪುಸ್ತಕವಾಗಿ ಕೂಡ ಬಂದಿದೆ. ಇನ್ನು ಸದ್ಯ ಡಾಕ್ಟರೇಟ್ ಮಾಡುವ ಆಸೆ ಇದೆ. ಮುಂಬಯಿಯ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಅಧ್ಯಯಕ್ಕೆ ಅವಕಾಶ ಕೋರಿದ್ದೇನೆ. ಇದನ್ನೂ ಕನ್ನಡದಲ್ಲಿ ಮಾಡುತ್ತೇನೆ.
ನನಗೂ ಮುಂಬಯಿಗೂ ಮೊದಲಿಂದ ಸಂಬಂಧವಿಲ್ಲ. ನಾನು ಇಲ್ಲಿಗೆ ಬರುತ್ತೇನೆ ಎಂಬುದೂ ಗೊತ್ತಿರಲಿಲ್ಲ. ಮದುವೆ ಆದ ಮೇಲೆ ಬಂದವಳು. ಮುಂಬಯಿ ನೋಡಿದವಳು. ನಮ್ಮೂರಿನಿಂದ ಆರುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರ. ಹಾಗಂತ ನನಗೆ ಈಗ ಕಾಲೇಜಿಗೆ ಹೋಗುವ ವಯಸ್ಸಲ್ಲ. ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಗಂಡನಿಗೆ ನಿವೃತ್ತಿ ಆಗಿದೆ. ನನಗೂ ೫೨ ಆಗಿದೆ. ಮತ್ತೆ ಮತ್ತೆ ಓದಬೇಕು ಅನ್ನಿಸಿ ೧೦ ವರ್ಷ ಆಯ್ತು. ಮಕ್ಕಳಲ ಓದು, ಅವರ ಪರೀಕ್ಷೆ ಜೊತೆ ನನ್ನ ಓದು ಹಾಗೂ ನನ್ನ ಪರೀಕ್ಷೆ. ಮಕ್ಕಳ ಓದಿನ ಮುಖ್ಯದ ಜೊತೆ ನಾನೂ ನಪಾಸಾಗಬಾರದು. ಓದಿನಲ್ಲಿ ಮಕ್ಕಳಂತೆ ನಾನೂ ಗೆದ್ದೆ!!
ನಮ್ಮೂರು ಅಂದೆನಲ್ಲ, ಅದು ಶಿರಸಿ. ಶಿರಸಿ ಮಲೆನಾಡಿನ ಪೇಟೆ. ಪೇಟೆ ಪಕ್ಕದ ಪುಟ್ಟ ಹಳ್ಳಿ ಕೆರೆ ಪಕ್ಕದ ಊರು ಕೆರೆಕೈ. ಅದು ನನ್ನ ಹುಟ್ಟೂರು. ಯಕ್ಷಗಾನ ತಾಳಮದ್ದಲೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ಮಗಳು. ನನ್ನ ಸಹೋದರ ವಿ.ಉಮಾಕಾಂತ ಭಟ್ಟ. ನಾನೂ ಅಪ್ಪ, ಅಣ್ಣನ ಜೊತೆ ಅರ್ಥ ಹೇಳಿದ್ದೇನೆ ತಾಳಮದ್ದಲೆಗಳಲ್ಲಿ.
ನಾನು ಬಿಎ ತನಕ ಶಿರಸಿ ಕಾಲೇಜಿನಲ್ಲೇ ಓದಿದ್ದೆ. ಯಡಹಳ್ಳಿಯಲ್ಲಿ ಪಿಯುಸಿ ಮುಗಿಸಿದ್ದೆ. ಯಡಹಳ್ಳಿಯಲ್ಲಿ ಓದುವಾಗ ಸೋಮಸಾಗರದ ಡಿಎಸ್ ಭಟ್ಟ ಅವರ ಮನೆಯಿಂದ ಬರುತ್ತಿದ್ದೆ. ಅಲ್ಲಿ ಲಲಿತಾ ಸಹಸ್ರನಾಮ ಉಪದೇಶ ಕೂಡ ಆಗಿತ್ತು. ನಮ್ಮ ಕೆರೆಕೈನಲ್ಲೇ ಇರುವ ಪಂಡಿತ್ ಪ್ರಭಾಕರ ಭಟ್ಟ ಅವರ ಬಳಿ ಆಗ್ರಾ ಘರಾನೆ ಸಂಗೀತ ಕಲಿತಿದ್ದೆ. ರಂಗೋಲಿ ಹಾಕೋದು, ಪತ್ರಿಕೆಗಳಿಗೆ ಬರೆಯೋದು ನನ್ನ ನೆಚ್ಚಿನ ಹವ್ಯಾಸ. ಮದುವೆ ಆಗುವ ತನಕ ಯಕ್ಷಗಾನ, ತಾಳಮದ್ದಗೆ ಅಪ್ಪಯ್ಯನ ಜೊತೆ ಹೋಗುತ್ತಿದ್ದೆ. ಅದರ ಪ್ರಭಾವ ಕಾವ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಭದ್ರ ಬುನಾದಿ ಹಾಕಿದೆ. ಈ ಕೃತಿಗೂ ಡಿಲಿಟ್ಗೂ ಕಾರಣವಾಗಿದೆ.
ಹೊರನಾಡಿನಲ್ಲಿ ಇದ್ದು ಕನ್ನಡದ ಮಹಾಕಾವ್ಯದ ಮೇಲೆ ಕೆಲಸ ಮಾಡುವ ಆಸಕ್ತಿ ಮೂಡಿಸಿದ್ದು ಯಕ್ಷಗಾನ. ಅದು ಸುಳ್ಳಲ್ಲ. ಅದರ ತಾಕತ್ತು ನನ್ನ ಬಳಿ ಕೆಲಸ ಮಾಡಿಸಿದೆ, ಮಾಡಿಸುತ್ತಿದೆ. ತಾಂಕ್ಯೂ ಯಕ್ಷಗಾನ, ತಾಳಮದ್ದಲೆ..
ಹಾ ನನ್ನ ಹೆಸರನ್ನೇ ಮರೆತೆ. ಶೈಲಜಾ ಶಾಂತಾರಾಮ ಹೆಗಡೆ. ಶಿರಸಿ ಬಾವೀಕೈ ಬಳಿ ಕೂಡಮನೆ.. ತವರು ಮನೆ ಕೆರೇಕೈ. ಹೆಸರಲ್ಲೇನಿದೆ, ನಾವು ಮಾಡುವ ಕಾರ್ಯದಲ್ಲಿ ನಮ್ಮ ಶ್ರಮ ನಿಲ್ಲಬೇಕು. ಮಹಿಳೆ ಕೂಡ ಯಾವ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಉದಾಹರಣೆಗಳ ಹಲವಿವೆ. ಯಾವುದಕ್ಕೂ ಶ್ರಮ ಶ್ರದ್ದೆ ಬೇಕು. ಯಾವುದೇ ಕಾರಣಕ್ಕೂ ಸ್ವಾಭಿಮಾನ ಬಿಡಬಾರದು. ಇದು ಯಶಸ್ಸಿನ ಸೂತ್ರ. ವಯಸ್ಸಲ್ಲ.






0 Comments