ಪಾಪ ಕುಡಿದಾಗಮಾತ್ರ ಹಾಗೆ, ಉಳಿದಂತೆ ಒಳ್ಳೆ ಆಚಾರಿ ಆತ..

ಕೆಲಸದವರು/ಕಾರ್ಮಿಕರು ಏನೇ ತಪ್ಪು ಮಾಡಿದರೂ ಅಣ್ಣನಿಗೆ ಅದು ಅಪ್ಯಾಯಮಾನವೆ.

ಕೆಲಸಗಾರರಿಂದ ಸಾಧ್ಯವಾದಷ್ಟು ದುಡಿಸಿಕೊಳ್ಳಲು ಮನೆಯ ಮಾಲಿಕ ಫ್ಲ್ಯಾನ್ ಮಾಡುತ್ತಾನೆ. ಮಾಲಿಕ ಮತ್ತು ಕಾರ್ಮಿಕರ ನಡುವೆ ಒಂದು ಅಂತರವನ್ನು ಸದಾ ಕಾಯ್ದುಕೊಳ್ಳಲು ಬಯಸುತ್ತಾನೆ. ಇದು ಲೋಕ ರೂಢಿ. ಇದು ಇಂದಿನ ಅರ್ಥಶಾಸ್ತ್ರ. ಆದರೆ ಮನೆಗೆ ಬಂದ ಕೆಲಸಗಾರರ ಜೊತೆ ಇರಬಹುದಾದ ಅಂತರವನ್ನು ಅಣ್ಣ ಕಳೆದುಕೊಳ್ಳಲು ಸದಾ ಹರಸಾಹಸ ಮಾಡುತ್ತಿದ್ದ. ಇದು ಮನೆಗೆ ಬಂದ ಕೆಲವು ಕೆಲಸಗಾರರಿಗೇ ಕಿರಿಕಿರಿ ಆಗಿದ್ದೂ ಇದೆ.

ನಮ್ಮ ಮನೆ ಕಟ್ಟುವಾಗ ನಮ್ಮ ಜಾಗದ ಪಕ್ಕದಲ್ಲಿಯೇ ವಾಸವಾಗಿರುವ ಸುಬ್ರಾಯ ಶೆಟ್ಟರು ಗೋಡೆ ಹಾಕಿದ್ದಂತೆ. ಗೋಡೆಯೆಂದರೆ ಕಲ್ಲಿನದಲ್ಲ. ಬರೀ ಮಣ್ಣಿನ ಗೋಡೆ. ಸಾಕಷ್ಟು ನೀರಿರಲಿಲ್ಲ, ಇದ್ದ ನೀರಲ್ಲೇ ಮಣ್ಣು ಕಲಸಿ ಕಟ್ಟಿದೆವು ಎನ್ನುತ್ತಿದ್ದರು ಶೆಟ್ಟರು. ಹಾಗಾಗಿ ಮನೆ ಕಟ್ಟಿದಾಗಿನಿಂದ ನಮ್ಮ ಮನೆಯವರೊಂದಿಗೆ ಇಲಿ, ಹೆಗ್ಗಣ, ಹಾವು ಮತ್ತು ವರಲೆ ಒಟ್ಟೊಟ್ಟಿಗೆ ವಾಸ ಮಾಡುತ್ತಿದ್ದವು. ಆದರೂ …ಈಗಲೂ….. 50 ವರ್ಷದ ನಂತರ ಕೂಡ ಗಟ್ಟಿಯಾಗಿಯೇ ಇದೆ.

ಮೇಲ್ಮನೆಯ ಕೆಲಸಕ್ಕೆ ಬಂದವನು ನಮ್ಮೂರಿನ ಹತ್ತಿರದ ಸಾಲ್ಕೋಡಿನವರೇ ಆದ ಗಣಪತಿ ಆಚಾರಿ. ಈಗ ಆತ ಇಲ್ಲ. ಆತನಿಗೆ ಅಣ್ಣನ ಮೇಲೆ ಅಪಾರ ಪ್ರೀತಿ. ಊರ ಮಾಸ್ತರರು ಅಂದ ಮೇಲೆ ಕೇಳಬೇಕೆ. ಅದರಲ್ಲೂ ನಮ್ಮೂರಲ್ಲಿ ಶೂದ್ರರಿಗೊಂದು ಮಾನ್ಯತೆ ತಂದುಕೊಟ್ಟವನು ಅಣ್ಣ. ಹಾಗಾಗಿ ಆ ಕಾಲದ ಹಿಂದುಳಿದ ಜಾತಿಗಳ ಆದರಣೀಯ ವ್ಯಕ್ತಿ ಈತ.

ಆಗೆಲ್ಲಾ ಮನೆಯೆಂದರೆ ಸೋಗೆಯದು; ಬಿಟ್ಟರೆ ತಾಳಿ ಮಡ್ಳಿನದು. ವರ್ಷಕ್ಕೊಮ್ಮೆ ಹೊದಿಕೆ ಮಾಡುವಾಗ ಕರಿ ಹೆಕ್ಕಿ ಸ್ವಚ್ಛ ಮಾಡುವುದೇ ಒಂದು ಹರಸಾಹಸದ ಕೆಲಸ. ಮನೆಕರಿ ಮಾಡಿ ಸೊಂಟ ಎಲ್ಲಾ ಬಿದ್ದೋಯ್ತು ಅಂತ ಮನೆಯ ಹೆಂಗಸರು ಒಳಗೊಳಗೇ ಬೈದುಕೊಳ್ಳುತ್ತಿದ್ದರು!!

ದೊಡ್ಡದಾಗಿ ಬೈದರೆ ಕೇಳುವವರಾರು? ಅಲ್ಲವೇ?!! ಅದರಲ್ಲೂ ಆ ಬಿಸಿಲಿನಲ್ಲಿ ಮನೆ ಕೋಳಿಗೆ ಹತ್ತಿ ಒಂಚೂರು ಬಿಸಿಲನ್ನು ಹಾಳು ಮಾಡದೇ ಮೈಯೆಲ್ಲಾ ಸುಡಿಸಿಕೊಂಡಿ ನಾವೆಲ್ಲಾ ಹೈರಾಣಾಗಿಲ್ಲವೇ ಎಂದು ಮನೆಯ ಗಂಡಸರು ದೊಡ್ಡದಾಗೇ ಬೈದುಕೊಳ್ಳುತ್ತಿದ್ದರು. ಯಾಕೆಂದರೆ ಅವರ ಬೈಗಳಕ್ಕೆ ಒಂದು ಮಾನ್ಯತೆ ಇತ್ತಲ್ಲ.!!

ಈ ಉಸಾಬರಿಯೇ ಬೇಡ ಅಂತ ಎಷ್ಟೇ ಕಷ್ಟ ಆದ್ರೂ ವರ್ಷದ ಹೊದಿಕೆ ಮನೆಯನ್ನು ಮಾಡದಿರುವ ಒಳ್ಳೆಯ ನಿರ್ಧಾರ ತೆಗೆದುಕೊಂಡರು. ಆ ಕಾಲದ ಅಪರೂಪದ ಹಂಚಿನ ಮನೆ ನಮ್ಮದಾಗಿರುವುದರಿಂದ ಗೋಡೆ ಹಾಕಿದ ಮೇಲೆ ಆಚಾರಿಯದೇ ಮುಖ್ಯ ಕೆಲಸ. ಅಣ್ಣ ಶಾಲೆಗೆ ಹೋಗುತ್ತಿರುವುದರಿಂದ ನಿಂತು ಕೆಲಸ ಮಾಡಿಸಲು ಆಗುತ್ತಿರಲಿಲ್ಲ. ಆಗ ನಿಂತು ಮನೆ ಕಟ್ಟಿಸಲು ಸಹಾಯ ಮಾಡುತ್ತಿದ್ದವನು ನಾಗತ್ತೆ ಮನೆ ಭಾವ, ನಮ್ಮಲ್ಲಿ ಹೆಚ್ಚು ಕಡಿಮೆ ಎಲ್ಲರಿಗೂ ಹೆಸರಿನ ತುದಿಗೆ ‘ಭಾವ’ ಎಂದು ಸಂಬಂಧ ವಾಚಕವನ್ನು ಹಚ್ಚೇ ಕರೆಯುತ್ತಿದ್ದೆವು. ಈತನ ಹೆಸರು ನಾರಾಯಣ ನಮ್ಮೂರಲ್ಲಿ 2-3 ಜನ ನಾರಾಯಣ ಇರುವುದರಿಂದ ಹತ್ತಾರು ಜನ ಭಾವಂದಿರು ಇರುವುದರಿಂದ ಗುರುತಿಸುವಿಕೆಯಲ್ಲಿ ನಿಖರತೆಗಾಗಿ ನಾಗತ್ತೆ ಮನೆ ಭಾವ, ಹೊನ್ನಮ್ಮತ್ತೆ ಮನೆ ಭಾವ, ಅತ್ತೆ ಮನೆ ಭಾವ…. ಎಂದು ಕರೆಯುವ ರೂಢಿ ಇತ್ತು.

ನಾಗತ್ತೆ ಮನೆ ಭಾವ ಮುಂದಾಗಿ ಮೇಲ್ಮನೆಗೆ ಬೇಕಾದ 4 ಮೂಲೆ ಪಕಾಸನ್ನು ತರಿಸಿದ. ಎಲ್ಲೂ ಮಧ್ಯೆ ಜಾಯಿಂಟ್ ಆಗಬಾರದೆಂದು 30-35 ಅಡಿಯ ಸಬಂಧ ಉದ್ದ ಇರುವ ಮೂಲೆ ಪಕಾಸು ಬಂತು. ಆದರೆ ಈ ಗಣಪತಿ ಆಚಾರಿ ಕುಡಿತದ ಅಮಲಿನಲ್ಲಿ 25-26 ಪೂಟಿಗೆ ಕತ್ತರಿಸಿ (35 ಅಡಿ ಬದಲು ಕುಡಿದ ಅಮಲಿನಲ್ಲಿ ಮರೆತು 25 ಅಡಿ ಎಂದುಕೊಂಡಿರಬೇಕು) ಹಾಕಿದ. “ಎಷ್ಟು ಕಷ್ಟಪಟ್ಟು ತಂದಿದ್ದು ಇದು. ಎಲ್ಲಾ ಕೆಲಸ ಹಾಳು ಮಾಡಿದ್ಯಲ್ಲೋ ಎಂದರೆ”, ತೊಂದರೆ ಇಲ್ಲ ಬಿಡಿ, ಅದನ್ನು ಮತ್ತೆ ಬೋಲ್ಟ ಹಾಕಿ ಕೂಡಿಸಬಹುದು ಎಂದು ಒಂದು ಜಾಯಿಂಟ್ ಹೊಡೆದ.

ಈ ಪ್ರಕರಣ ಅಣ್ಣನ ಬಳಿ ಹೋದಾಗ ಆಚಾರಿ ಸರಿಯಾಗಿ ಬೈಸಿಕೋತಾನೆ ಅಂತ ಎಲ್ಲರೂ ಕಾಯ್ತಾ ಇದ್ರೆ-
“ಇರಲಿ ಬಿಡು. ಇಡೀ ಪಿಕಾಸಾದರೇನು? ಸೇರಿಸಿ ಮಾಡಿದ್ದಾದರೇನು? ಅಷ್ಟು ಉದ್ದ ಆದರಾಯಿತಲ್ಲ! ಪಾಪ ಕುಡಿದಾಗ ಮಾತ್ರ ಆತ ಹಾಗೆ. ಉಳಿದಂತೆ ತೀರಾ ಒಳ್ಳೆ ಆಚಾರಿ ಆತ” ಎಂದು ಶಿಫಾರಸಿನ ಮಾತಿನೊಂದಿಗೆ ಕುಡಿತದ ಮಾಮೂಲಿಯನ್ನು ಕೊಟ್ಟು ಕಳಿಸಿದನಂತೆ. ಹಾಗಾಗಿಯೇ ಆತ ಮನೆ ಕಟ್ಟಿದ ಮೇಲೂ ಹಲವು ವರ್ಷ ನಮ್ಮನೆಗೆ ಬರ್ತಿದ್ದ ಆತ.

ಗಣಪತಿಯ ಕತೆ ಅಲ್ಲಿಗೆ ಮುಗಿದಿಲ್ಲ. ಮನೆ ಕಟ್ಟುವಾಗ ಆತನೇ ಮಾಡಿದ ನಮ್ಮನೆಯ ಹಳೆಯ ಮಂಚದ ಕತೆಯೂ ಇವನ ಕುಡಿತಕ್ಕೆ ಬಲಿಯಾಯಿತು. ಆಗ 64 ಅಡಿ ಅಗಲದ ಒಂದೇ ಹಲಸಿನ ಹಲಗೆಯನ್ನು ಮಂಚಕ್ಕೆಂದು ತರಿಸಲಾಗಿತ್ತು. ಅದರ ಕಾಲಿಗೆ ‘ಕಡ’ ಹಾಕಿಸುವ ನಿರ್ಧಾರವು ಆಗಿತ್ತಂತೆ. ಇಡೀ ಹಲಗೆಯ ಮಂಚ ಆಗಬೇಕು; ಚೆಂದಾ ಆಗಬೇಕು ಎಂದು ಹೇಳಿದರೆ ಕುಡಿತದ ಅಮಲಿನಲ್ಲಿಯೇ ಇದ್ದ ಗಣಪತಿ ಆಚಾರಿ (ಆತ ಇಡೀ ದಿನ ಕುಡಿಯುತ್ತಿರಲಿಲ್ಲ. ರಾತ್ರಿ ಮಲಗುವಾಗ ಕುಡಿದು ಮಲಗಿದ್ರೆ ಮತ್ತೆ ಬೆಳಗಿನವರೆಗೆ ಹೆಂಡವನ್ನು ಮುಡ್ತಿರಲಿಲ್ಲ!) ಎರಡು ದಿನದಲ್ಲಿ ಮಂಚ ಸಿದ್ಧಪಡಿಸಿದ್ದ.

ಆತ ಮಾಡಿದ ಮಂಚವನ್ನು ನೋಡಿದ ಮೇಲೆ ‘ಮಂಚವನ್ನು ಚೆಂದಾ ಮಾಡು’ ಎಂದು ಹೇಳಿದವರು ದಂಗಾದರು. 64 ರ ಸೈಜಿನ ಒಂದೇ ಮರದ ಹಲಗೆಯನ್ನು ಕತ್ತರಿಸಿ ಸೈಡ್ ಪ್ಲೇಟ್ ಮಾಡಿ, ಮಧ್ಯೆ ಹೊಂಡ ಮಾಡಿ ನಾಲ್ಕು ಕಾಲನ್ನು ಚೆಂದಾ ಮಾಡಿ ‘ಕಡ’ ಹೊಡೆದು ಇಟ್ಟಿದ್ದನಂತೆ. “ಮಧ್ಯೆ ಹೊಂಡ ಇದ್ದು ಪಕ್ಕದಲ್ಲಿ ಎತ್ತರ ಇದ್ದರೆ ಕೂತ್ಕೋಳೋಕೆ ಆಗ್ತದಾ? ಮಧ್ಯೆ ಕಸ, ಮಣ್ಣು ನಿಂತ್ಕೊಳ್ಳೋದಿಲ್ಲಾ? ಕಸ ತೆಗೆಯೋದು ಹೇಗೆ? ಎಂದು ಇದನ್ನು ನೋಡಿ ಎಲ್ಲರೂ ಆತನಿಗೆ ಬೈದ್ರಂತೆ.

ಆದರೆ ಗಣಪತಿ ಆಚಾರಿಗೆ ಇವರು ಹೇಳಿದ್ದು ಹೌದು ಅಂತ ಕುಡಿತ ಇಳಿದಾಗ ಅನ್ನಿಸ್ತು. ಬಹುಶಃ ಬೇಜಾರು ಮಾಡ್ಕೊಂಡಿರಬೇಕು. ಬೇಜಾರಿನಲ್ಲಿ ಸ್ವಲ್ಪ ಜಾಸ್ತಿನೇ ಕುಡಿದಿರಬೇಕು! ಬಂದು ಮತ್ತೆ ಈ ಮಂಚವನ್ನು ಕೊಯ್ದು ಸುತ್ತು ನಾಲ್ಕು ಕಡೆ ಉಬ್ಬಾಗಿರುವ ಪ್ಲೇಟ್ ಕಿತ್ತು, ಒಂದೇ ಲೆವೆಲ್‍ಗೆ ಕೂಡಿ ಇಟ್ಟಿದ್ದನಂತೆ. ಪ್ಲೇಟ್ ಮಧ್ಯದಲ್ಲಿ ಅರ್ಧರ್ಧ ಇಂಚು ಗ್ಯಾಪು, ಮಳೆಗಾಲ ಬಂದ್ರೆ ಗ್ಯಾಪ್ ಕಡಿಮೆ ಆಗೋದು ಚಳಿಗಾಲ ಬಂದ್ರೆ ಗ್ಯಾಪ್ ಹೆಚ್ಚಾಗೋದು. ಗ್ಯಾಪ್ ಹೆಚ್ಚಾಗಿದ್ದಲ್ಲೆಲ್ಲಾ ಬೆಣೆ ಹೊಡೆದರು. ಅದನ್ನು ನೋಡಿ ಮತ್ತೇನಾದ್ರೂ ಹೇಳಿದ್ರೆ ಮತ್ತೆ ಕೊಯ್ದು ಬಾನ್ಗಡಿ ಮಾಡಬಹುದೆಂದು ತಾವು ಹಿಂದೆ ಬೈದ ಬೈಗುಳದ ಬಗ್ಗೆ ತಾವೇ ಪಶ್ಚಾತ್ತಾಪಪಟ್ಟು “ಈ ಬೊಡ್ಡ ಆಚಾರಿ ಹತ್ರ ನಾವು ಮಾತಾಡೋದಕ್ಕಿಂತ ಸುಮ್ಮನಿರೋದೆ ಒಳ್ಳೆಯದು. ಮಾಸ್ತರರ ಹಣೆಬರಹ.ನಾವೆಂತ ಮಾಡ್ಳಿಕ್ಕಾಗ್ತದೆ’ ಎಂತ ಹೋದ್ರಂತೆ.

ಮಂಚ ತೋರಿಸಿ ಅಣ್ಣ ವಿನೋದದಿಂದ ಈ ಕತೆಯನ್ನು ಹೇಳ್ತಿದ್ದ.

‘ನಿನಗೆ ಬೇಸರ ಆಗಿರಲಿಲ್ವಾ?’ ಎಂದು ಕೇಳಿದೆ.

“ಆಗಿತ್ತು. ಆದ್ರೆ ಪಾಪ ಆತ ಮನೆಯಲ್ಲಿ ಎಂದೂ ಮಂಚ ಉಪಯೋಗಿಸಿದವನಲ್ಲ. ಹಾಗಾಗಿ ಅದು ಹೇಗಿರ್ಬೇಕು? ಹೇಗಿದ್ದರೆ ಹೆಚ್ಚು ಅನುಕೂಲ? ಅಂತ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಅದರಲ್ಲೂ ಮಗ ಸತ್ತ ಮೇಲೆ ಕುಡಿಯೋದನ್ನು ಜಾಸ್ತಿ ಮಾಡಿದ್ದಾನೆ. ನಾನು ಬೈದ್ರೆ ಉಳಿದವರೂ ಮತ್ತೆ ಬೈತಾರೆ. ಹಾಗಾಗಿ ನಾನು ಒಂದೇ ಹಲಗೆ ಆದ್ರೇನು? ಮೂರು ಹಲಗೆ ಆದ್ರೇನು? ನೆಲಕ್ಕೆ ಕುಳಿತುಕೊಳ್ಳದಂತೆ ಒಂದು ಮಂಚ ಇರಲಿ ಬಿಡು” ಅಂದೆ.

ಹೀಗೆ ಕೆಲಸದವರು / ಕಾರ್ಮಿಕರು ಏನೇ ತಪ್ಪು ಮಾಡಿದರೂ ಅಣ್ಣನಿಗೆ ಅದು ಅಪ್ಯಾಯಮಾನವೆ.

ಸಾಮಾನ್ಯವಾಗಿ ನಮ್ಮನೆಗೆ ಕೆಲಸಕ್ಕೆ ಬರುವವನು ಅಯ್ಯ (ಗೋಪಾಲ ಅಂತ ಅವನ ಹೆಸರು) 4-5 ಜನರ ಗುಂಪಿನೊಂದಿಗೆ ಕೆಲಸಕ್ಕೆ ಬರ್ತಿದ್ದ. ಈ ಅಯ್ಯ ಅಣ್ಣನ ಬಾಲ್ಯದ ಸ್ನೇಹಿತ. ಹಿಂದೆ ಇವನಿಗೆ ಒಂದು ಸಣ್ಣ ಜುಬ್ಬ ಇತ್ತಂತೆ. ಅಣ್ಣನ ಜೊತೆಗೆ ಓದೋಕೆ ಬರ್ತಿದ್ದನಂತೆ. ಯಾಕೆಂದರೆ ಅವನಿಗೂ ರಾತ್ರಿ ದೀಪ ಹಚ್ಚೋಕೆ ಮನೆಯಲ್ಲಿ ಚಿಮಣಿ ಎಣ್ಣೆ ಇರಲಿಲ್ಲ. ಅಣ್ಣನಿಗೂ ಇರಲಿಲ್ಲ ಎನ್ನುವುದು ಬೇರೆ ಮಾತು. ಇವರೆಲ್ಲಾ ಸೇರಿ ಹೊನ್ನಮತ್ತೆ ಮನೆಗೆ ಹೋಗ್ತಿದ್ದರು.(ಹಿಂದಿನ ಅಧ್ಯಾಯದಲ್ಲಿ ಹೇಳಿದ್ದೆ.)

ಸಾಕಷ್ಟು ಸಲ ಇವನ ಹತ್ತಿರ ಜುಟ್ಟ ತೆಗೆ ಅಂದ್ರೆ ತೆಗೆದಿರಲಿಲ್ಲಂತೆ. ಹಾಗಾಗಿ ಒಂದಿನ ರಾತ್ರಿ ಓದಿ ಮಲಗಿದ ನಂತರ ಅಣ್ಣ ಮತ್ತು ಇವನ ಓದಿನ ಸ್ನೇಹಿತರೆಲ್ಲ ಸೇರಿ, ಕತ್ತಿಯಿಂದ ಅವನ ಜುಟ್ಟ ಕೊಯ್ದು ಹುಲ್ಲಿನ ರಾಶಿಯಲ್ಲಿ ಅಡಗಿಸಿಟ್ಟಿದ್ದರಂತೆ. ಬೆಳಿಗ್ಗೆ ಎದ್ದಾಗ ಎಲ್ಲರೂ ಇವನನ್ನು ನೋಡಿ ಮುಸಿ ಮುಸಿ ನಗ್ತಿದ್ದರಂತೆ. ಹಾಸಿಗೆಯಿಂದ ಏಳುವಾಗ ಹಿಂಬದಿ ಕೈ ಹಾಕಿ ಜುಟ್ಟ ಕಟ್ಕೋಬೇಕು ಅಂದ್ರೆ ಜುಟ್ಟವೇ ಇರಲಿಲ್ಲವಂತೆ. ಒಂದಿಷ್ಟು ಕೂಗಾಡಿ, ಬೈದಾಡಿ ಮೇಲೆ ಇವರೇ ಆತನನ್ನು ಸಮಾಧಾನ ಮಾಡಿದ್ರಂತೆ. ಅಲ್ಲಿಂದ ಮುಂದೆ ಇವನಿಗೆ ‘ಜುಟ್ಟಕೊಯ್ಕ’ ಎಂದು ತಮಾಷೆ ಮಾಡ್ತಿದ್ದರು.

ಹಾಗಾಗಿ ಅಂದು ತನ್ನ ಜೊತೆ ಓದಿದವನು, ತನ್ನ ಮನೆಯ ಬಡತನದಿಂದ ಮುಂದೆ ಓದು ಸಾಧ್ಯವಾಗದೇ ಇಂದು ನನ್ನ ಮನೆಯ ಕೆಲಸಕ್ಕೆ ಬಂದಿದ್ದಾನೆ; ಅವನು ದೈಹಿಕ ಶ್ರಮ ಪಡುತ್ತಿರುವಾಗ ಅವರೆದುರು ನಾನು ಈಗ ಮನೆಯಲ್ಲಿ ಕುಳಿತು ಓದು-ಬರವಣಿಗೆಯಂತ ಕೆಲಸದಲ್ಲಿ ಕುಳಿತಿರುವುದು ಎಷ್ಟು ಚೆಂದ? ಇದು ಅಣ್ಣನಿಗೆ ಮುಜುಗರ ತಂದೋಡ್ಡುತ್ತಿತ್ತು. ಆದರೂ ಅನಿವಾರ್ಯ.

ಸಾಮಾನ್ಯವಾಗಿ ಹಿಂದೆ ಕೆಲಸಕ್ಕೆ ಬಂದವರು ಬೆಳಿಗ್ಗೆ 10 ಕ್ಕೆ ಕೆಲಸ ಶುರು ಮಾಡುತ್ತಾರೆ. ಒಂದೊ ಒಂದುವರೆ ತಾಸು ಆದ ಮೇಲೆ ತಿಂಡಿ-ಚಹಾ ಕೊಡುವುದು; 2 ಗಂಟೆಗೆ ಊಟ; ಸಂಜೆ ಸಂಜೆ 4ಕ್ಕೆ ಚಹಾ. 5ಕ್ಕೆ ಕೆಲಸ ಮುಗಿಸಿ ಹೋಗುತ್ತಾರೆ. ಒಮ್ಮೊಮ್ಮೆ ಹಿಡಿದ ಕೆಲಸ 5ಕ್ಕೆ ಮುಗಿಯದಿದ್ದರೆ 6ರ ವರೆಗೂ ಇರುತ್ತಾರೆ. ಆದರೆ ಅಣ್ಣ ಮನೆಯಲ್ಲಿದ್ದರೆ- ರವಿವಾರ ಅಥವಾ ರಜಾದಿನದಲ್ಲಿ- ಬೆಳಿಗ್ಗೆ ಅವರು ಬಂದೊಡನೆ ಚಾ-ತಿಂಡಿ ಕೊಡು ಎಂದು ಹೇಳುತ್ತಿದ್ದ.

ಅವರು ಬೇಡವೆಂದರೂ ಮನೆಯವರು ಕೂಡಲೇ ಬೇಕಾಗಿತ್ತು. ಅವರಿಗೆಲ್ಲಾ ಕವಳ ಕೊಟ್ಟು ಕಳುಹಿಸುತ್ತಿದ್ದ. ಮತ್ತೆ ಒಂದು ಒಂದೂವರೆ ಗಂಟೆ ಬಿಟ್ಟು ಚಹಾಕ್ಕೆ ಕರೆಯುತ್ತಿದ್ದ. ಬೇಲಿ ಹಾಕಲು ಬಂದವರಿಗೆ ‘ಅಲ್ಲಿ ಮುಳ್ಳಿದೆ, ಅಲ್ಲಿ ಹೋಗಬೇಡಿ; ಅಲ್ಲಿ ಮರ ದೊಡ್ಡದಿದೆ, ಹತ್ತಬೇಡಿ, ಅಲ್ಲಿ ನೆಲ ಗಟ್ಟಿ ಇದೆ ಅಗೆಯಬೇಡಿ….” ಹೀಗೆ ಸಲಹೆ ನೀಡುತ್ತಿದ್ದ. ಮಳೆ ಬಂತೆಂದರೆ “ಆ ನೀರಲ್ಲಿ ಅದ್ದ ಬೇಡಿ, ಮನೆಗೆ ಬನ್ನಿ; ಮಳೆ ಕಡಿಮೆ ಆದ ಮೇಲೆ ಹೋದರಾಯಿತು” ಎನ್ನುತ್ತಿದ್ದ.

ಮಧ್ಯಾಹ್ನ 1 ಗಂಟೆಯಾದರೆ ಊಟಕ್ಕೆ ಕರೆಯುವುದು. “ನೀನು ಊಟ ಮಾಡು ಮಾರಾಯ.. ನಾವು ಆಮೇಲೆ ಊಟ ಮಾಡ್ತೇವೆ. ಈಗ ಮಾತ್ರ ಚಾ ಕುಡಿದಾಗಿದೆ.” ಎಂದು ಅಯ್ಯ ಹೇಳಿದರೆ, ಇವನಿಗೆ ಸಮಾಧಾನ ಇಲ್ಲ. ಕೆಲಸದವರನ್ನು ಬಿಟ್ಟು ಊಟ ಮಾಡುವುದು ಹೇಗೆ? ಎನ್ನುವ ಸಂದಿಗ್ಧತೆ. ಊಟ ಮಾಡಿದ ಮೇಲೆ “ಮಲಗಿಕೊಳ್ಳಿ ಅರ್ಧ ಗಂಟೆ. ಆಮೇಲೆ ಕೆಲಸಕ್ಕೆ ಹೋದರಾಯ್ತು” ಎನ್ನುತ್ತಿದ್ದ.

ಯಾಕೆಂದರೆ ಅಣ್ಣನಿಗೆ ಕೂಡ ಊಟವಾದ ಮೇಲೆ ಅರ್ಧಗಂಟೆ ಮಲಗುವ ರೂಢಿ ಇತ್ತು. ಒಂದು ವೇಳೆ ಅವರು ಮಲಗದಿದ್ದರೂ ಈತ ಒಂದು ತಾಸಾದರೂ ಅವರೊಂದಿಗೆ ಸುದ್ದಿ ಹೇಳಿ ರೆಸ್ಟ್ ಕೊಡುತ್ತಿದ್ದ. ಮತ್ತೆ 5 ಗಂಟೆಯಾದರೆ ಕೆಲಸ ಮಾಡುವಲ್ಲಿ ಇವನೇ ಹೋಗಿ, “ಟೈಂ ಆಯ್ತು, 5 ಗಂಟೆ ಬಸ್ಸು ಬಂದು ಹೋಯ್ತು. ಮನೆಗೆ ಹೋಗಿ. ನಾಳೆ ಮಾಡಿದ್ರಾಯ್ತು. ಏನ್ ಗಡಿ ಬಿಡಿ ಇಲ್ಲ. ಸಾವಕಾಶ ಮಾಡಿ” ಎಂದು ಕೆಲಸಗಾರರಿಗೆ ಮನೆಗೆ ಹೋಗಲು ಒತ್ತಾಯಿಸ್ತಿದ್ದ.

ಆಗೆಲ್ಲಾ ಅಯ್ಯ ಅಕ್ಕನ ಹತ್ತಿರ ಬಂದು “ಈ ರೋಹಿದಾಸ ಭಾವ ಇರೋ ದಿನ ಕೆಲಸಕ್ಕೆ ಕರೀಬೇಡ. ಒಂದು ಕೆಲಸನೂ ಮಾಡೋಕೆ ಕೋಡೋದಿಲ್ಲ. ಬರೀ ಊಟ-ತಿಂಡಿ-ಚಾ-ನಿದ್ರೆಲೇ ದಿನ ಮುಗಿಸ್ತಾನೆ” ಎಂದು ಕಂಪ್ಲೇಂಟ್ ಮಾಡುತ್ತಿದ್ದ.

ಅಯ್ಯ ಅಂತಲ್ಲ; ಯಾರು ಬಂದರೂ ಹಾಗೆ, ಕಾಯಿ ಕೊಯ್ಯುವವರು ಬಂದರೆ ದೊಡ್ಡ ಮರವನ್ನು ಹತ್ತಲೇ ಕೊಡುತ್ತಿರಲಿಲ್ಲ. “ಬಿದ್ದ ಕಾಯಿ ಹೆಕ್ಕಿದರಾಯ್ತು. ಯಾಕೆ ಅವರಿಗೆ ತೊಂದರೆ” ಎಂದು ಪೂರ್ತಿ ಕಾಯಿ ಕೊಯ್ಯಿಸದೇ ಕಳಿಸುತ್ತಿದ್ದ. ಗೊಬ್ಬರ ತೆಗೆಯಲು ಅಮಾಸೆ ಗೌಡ ಬಂದ್ರೆ, ಗೇರು ಬೀಜ ಕೊಯ್ಯಲು ಹನುಮಂತನ ಮಕ್ಕಳು ಬಂದ್ರೆ…….ಯಾರು ಕೆಲಸಕ್ಕೆ ಬಂದ್ರೂ ಹಾಗೆ.

“ಎಲ್ಲಾದರೂ ಈ ರೋಹಿದಾಸ ಭಾವ ಹೊಟೇಲ್ ಇಟ್ರೆ ಅಲ್ಲಿಯ ಕೆಲಸಗಾರರಿಗೇ ಮಾಡಿದ ತಿಂಡಿ-ಊಟ ತಿನ್ನಿಸಿ ದಿವಾಳಿ ಆಗ್ತಿದ್ದ” ಎಂದು ಪ್ರೀತಿ-ಕೃತಜ್ಞತೆಯಿಂದ ತಮಾಷೆ ಮಾಡ್ತಿದ್ದರು.

‍ಲೇಖಕರು Avadhi Admin

August 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: