ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕನ್ನಂಬಾಡಿ’ಯ ಒಡಲಲ್ಲಿ ಅರಳಿದ ‘ಒರೆಗಲ್ಲು’

ಎನ್.ಆರ್. ವಿಶುಕುಮಾರ್

ಡಾ. ಬೆಸಗರಹಳ್ಳಿ ರಾಮಣ್ಣನವರ ‘ಒರೆಗಲ್ಲು’ ಅಂಕಣ ಪುಸ್ತಕ ಮಂಡ್ಯದಲ್ಲಿ ಬಿಡುಗಡೆಯಾಗಿದೆ.

ಈ ಪುಸ್ತಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಬರೆದ ಮುನ್ನುಡಿ ಇಲ್ಲಿದೆ-

ಡಾ. ಬೆಸಗರಹಳ್ಳಿ ರಾಮಣ್ಣನವರ ‘ಒರೆಗಲ್ಲು’ ಅಂಕಣ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಿರುವುದು ನನಗೆ ಗೌರವದ ಸಂಗತಿ. ಈ ಅಂಕಣ ನನ್ನ ಸಂಪಾದಕತ್ವದ ‘ಕನ್ನಂಬಾಡಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಎನ್ನುವುದು ನನಗೆ ಹೆಮ್ಮೆಯ ವಿಷಯ ಕೂಡ ಹೌದು.

ನನಗಿನ್ನೂ ಚೆನ್ನಾಗಿ ನೆನಪಿದೆ. ಮಂಡ್ಯದಲ್ಲಿ ಕನ್ನಂಬಾಡಿ ಪತ್ರಿಕೆ ಪ್ರಕಟಿಸಲು ಮುಂದಡಿಯಿಟ್ಟಾಗ ರಾಮಣ್ಣನವರು ನನ್ನಲ್ಲಿ ತುಂಬಿದ ಉತ್ಸಾಹವನ್ನು ನಾನೆಂದೂ ಮರೆಯುವಂತಿಲ್ಲ. ಪತ್ರಿಕೆಗೆ ಖಾಯಂ ಆಗಿ ಒರೆಗಲ್ಲು ಅಂಕಣ ಬರೆಯಲು ಒಪ್ಪಿಕೊಂಡಿದ್ದಷ್ಟೇ ಅಲ್ಲದೆ ನನ್ನನ್ನು ಮತ್ತು ನನ್ನ ಪತ್ನಿಯನ್ನು ತಮ್ಮ ಮನೆಯವರಂತೆಯೇ ಪ್ರೀತಿಯಿಂದ ನೋಡಿಕೊಂಡ ರಾಮಣ್ಣನವರ ಹೃದಯ ವೈಶಾಲ್ಯತೆಗೆ ಬೆಲೆ ಕಟ್ಟಲಾಗುವುದಿಲ್ಲ.

ವೃತ್ತಿಯಿಂದ ವೈದ್ಯರಾಗಿದ್ದ ರಾಮಣ್ಣನವರು ಕನ್ನಂಬಾಡಿ ಪತ್ರಿಕೆಗೆ ಅಂಕಣ ಬರೆಯುವ ಸಂದರ್ಭದಲ್ಲಿ ಸೇವಾ ನಿವೃತ್ತಿಯ ಅಂಚಿನಲ್ಲಿದ್ದು ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ (ಅನಸ್ತೇಸಿಯಾ) ತಜ್ಞರಾಗಿ ಕಾವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಅವರಿಗೆ ಹಗಲು ರಾತ್ರಿಗಳನ್ನದೆ ತುರ್ತು ಆಪರೇಷನ್ ಕಾರಗಳಿಗೆ ಕರೆ ಬರುತ್ತಿತ್ತು. ಇಂತಹ ಒತ್ತಡದ ಕಾರ್ಯಗಳ ನಡುವೆ ಕೂಡ ಅವರು ಯಾವುದೇ ಬೇಸರವಿಲ್ಲದೆ ಪತ್ರಿಕೆಗೆ ನಿರಂತರವಾಗಿ ಮೂರು ವರ್ಷಗಳ ಕಾಲ ಒರೆಗಲ್ಲು ಅಂಕಣ ಬರೆದುಕೊಟ್ಟರು. ಇದು ಅವರ ಕಾರ‍್ಯತತ್ಪರತೆ ಮತ್ತು ಪತ್ರಿಕೆಯ ಮೂಲಕ ಜನರಿಗೆ ಒಳ್ಳೆಯದನ್ನು ಹೇಳಬೇಕೆನ್ನುವ ತುಡಿತಕ್ಕೆ ಸಾಕ್ಷಿ.

ರಾಮಣ್ಣನವರಂತೆ ಅವರ ಭಾಷೆ ಕೂಡ ಬಹಳ ಸರಳ. ಹಳ್ಳಿಗಾಡಿನ ಸಾಮಾನ್ಯ ಅಕ್ಷರಸ್ಥರಿಗೂ ಸಹ ಅರ್ಥವಾಗುವಂತೆ ತಮ್ಮ ವಿಷಯಗಳನ್ನು ಅವರು ಸರಳವಾದ ಭಾಷೆಯಲ್ಲಿ ಮಂಡಿಸುತ್ತಿದ್ದರು. ಇನ್ನು ಅವರ ಅಂಕಣಗಳ ವಿಷಯ ವೈವಿಧ್ಯವಂತೂ ಅಪಾರ. ಒಂದು ವಾರ ಇರಾವತಿ ಕರ್ವೆಯವರ ಯುಗಾಂತ ಪುಸ್ತಕದ ಬಗ್ಗೆ ಬರೆಯುತ್ತಿದ್ದ ರಾಮಣ್ಣನವರ ಹೃದಯ, ಮರುವಾರ “ಓ ನನ್ನ ರಕ್ತಹೀನ ಭಾರತವೇ ಎಂದು ಹಳ್ಳಿಗಾಡಿನ ಜನರ ಸಾಮಾನ್ಯ ಕಾಯಿಲೆಯಾದ ರಕ್ತಹೀನತೆಯ ಬಗ್ಗೆ ಮಿಡಿಯುತ್ತಿತ್ತು. ಮತ್ತೊಂದು ವಾರ ಮಂಡ್ಯದ ಮಣ್ಣಿನಭಾಗ್ಯ ಎಂದು ಶ್ರೀ ಕೆ. ವಿ. ಶಂಕರಗೌಡರ ಬಗ್ಗೆ ಅಭಿಮಾನದಿಂದ ಪುಳುಕಿತಗೊಳ್ಳುತ್ತಿತ್ತು. ಹಿಂದಿ ಭಾಷೆಯ ಖ್ಯಾತ ಕತೆಗಾರ ಪ್ರೇಮ್‌ಚಂದ್‌ರನ್ನು ಗ್ರಾಮೀಣ ಭಾರತದ ಜೀವಂತ ಧ್ವನಿ ಎಂದು ಮಂಡ್ಯದ ಜನರಿಗೆ ಪರಿಚಯಿಸುತ್ತಿತ್ತು. ಇದು ರಾಮಣ್ಣನವರ ಅಂಕಣದ ವೈವಿಧ್ಯಕ್ಕೆ ಹಿಡಿದ ಕನ್ನಡಿ.

ಬಹುಶಃ ಗ್ರಾಮೀಣ ಜನರನ್ನು ಅದರಲ್ಲೂ ವಿಶೇಷವಾಗಿ ಮಂಡ್ಯದ ಜನರನ್ನು ರಾಮಣ್ಣನವರಷ್ಟು ಪ್ರೀತಿಯಿಂದ ನೋಡಿದ ಮತ್ತೊಬ್ಬ ಲೇಖಕರನ್ನು ನಾನು ಕಂಡಿಲ್ಲ. ಗ್ರಾಮೀಣ ಜನರ ಕೆಲವು ಸಣ್ಣತನಗಳನ್ನು ಕುಟುಕುತ್ತಲೇ ಆ ಜನರ ಉದಾರತೆ, ಹೃದಯವೈಶಾಲ್ಯ, ಸರಳತೆಗಳ ಬಗ್ಗೆ ರಾಮಣ್ಣನವರು ಅಭಿಮಾನ ಮತ್ತು ಪ್ರೀತಿಯಿಂದ ಮನದುಂಬಿ ಮಾತನಾಡುತ್ತಿದ್ದರು. ಡಾ. ರಾಮಣ್ಣನವರ ವೈದ್ಯಕೀಯ ಸೇವೆ ಸಂಪೂರ್ಣವಾಗಿ ಗ್ರಾಮೀಣ ಪ್ರದೇಶಗಳಲ್ಲಿಯೇ ನಡೆದಿರುವುದು ಗ್ರಾಮೀಣ ಜನರ ಬಗ್ಗೆ ಅವರಿಗಿದ್ದ ಪ್ರೀತಿಗೆ ಸಾಕ್ಷಿ.

ಗ್ರಾಮೀಣ ಮಂಡ್ಯದ ಸ್ವಯಂಪ್ರಭೆ ಡಾ. ಬೆಸಗರಹಳ್ಳಿ ರಾಮಣ್ಣನವರ ಸಮಗ್ರ ಕಥಾ ಸಂಕಲನದ ಹೆಸರು ಕನ್ನಂಬಾಡಿ; ನನ್ನ ವಾರಪತ್ರಿಕೆಯ ಹೆಸರೂ ಸಹ ಕನ್ನಂಬಾಡಿ. ಮಂಡ್ಯದ ಜನರ ಪತ್ರಿಕೆಗೆ ಈ ಹೆಸರನ್ನಿಡಲು ರಾಮಣ್ಣನವರೇ ನನಗೆ ಪ್ರೇರಣೆ.
ಕಿರಿಯರ ಏಳ್ಗೆಯನ್ನು ಸದಾ ಪ್ರೀತಿ ತುಂಬಿದ ಆಸೆಕಂಗಳಿಂದ ನೋಡುತ್ತಿದ್ದ ರಾಮಣ್ಣನವರ ಒರೆಗಲ್ಲು ಅಂಕಣವು ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ನನಗೆ ಸಂತಸದ ವಿಷಯ. ಇದಕ್ಕಾಗಿ ರಾಮಣ್ಣನವರ ಪುತ್ರ ಸಹೋದರ ರವಿಕಾಂತೇಗೌಡರಿಗೆ ನನ್ನ ಅಭಿನಂದನೆಗಳು.

‍ಲೇಖಕರು avadhi

19 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading