ಅಮರ್ ದೀಪ
ಸುಮ್ಕಿರಿ ಸಾ…… ಕನಸು ಕಣೋದಿಕ್ಕೆ ಕಾಸು ಕೊಡಬೇಕಾ? ಅಥವಾ ಹಿಂಗಾಗುತ್ತೆ ಅಂತ .. ಕನಸು ಬಿದ್ದಿತ್ತಾ? ಹೀಗೆ ನಾವೂ ಯಾರಿಗಾದರೂ ಒಂದು ಸಾರಿಯಾದರೂ ಕೇಳಿಯೇ ಇರುತ್ತೇವೆ. ಈ ತರಹದ ಪ್ರಶ್ನೆಗೆ ಬಹಳ ಜನರ ನೇರವಾದ, ಸಂಕ್ಷಿಪ್ತವಾದ ಯೋಚನೆ “ನಾವಂದುಕೊಂಡದ್ದು ಹೀಗೆ ಆದರೆ ಎಷ್ಟು ಚೆಂದವೆಂದು ಕನಸು ಕಂಡರೆ, ಈವಪ್ಪ ಅದಕ್ಕೂ ಹೆಸರಿಡುತ್ತಾನೆ” ಅಂತಲೂ “ಕಾಗೆ ಕೂಡುವುದಕ್ಕೂ ಟೊಂಗೆ ಬೀಳುವುದಕ್ಕೂ ಸರಿಹೋಯ್ತು” ಅಂತಾರಲ್ಲ, ಏನೋ ಅಂದೆನೆಪ್ಪ ಇದರಲ್ಲಿ ನಂದೇನ್ ತಪ್ಪು? ಅಂತಿರುತ್ತದೆ. ಅದು ಬಿಡಿ, ಪ್ರತಿಯೊಬ್ಬರಿಗೂ ಪ್ರತಿ ದಿನ ಒಂದೊಂದು ಕನಸು ಬೀಳುತ್ತಿರುತ್ತವೆ. ಕೆಲವೊಂದು ನೆನಪಿರುತ್ತವೆ, ಇನ್ನು ಕೆಲವು ಇಲ್ಲ. ವಯಸ್ಸಿಗನುಗುಣವಾಗಿ ಕನಸು ಗಳು ಬೀಳುತ್ತವೆ ಮತ್ತು ಕೆಲವೊಮ್ಮೆ ವಯಸ್ಸಿಗೆ ಮೀರಿದ ಹಾಗೂ ನಿರೀಕ್ಷೆ ಇರದ ಕನಸುಗಳಾಗಿರು ತ್ತವೆ. ಕಾಲೇಜು ಓದುವ ಹುಡುಗ ಹುಡುಗಿಯರಿಗೆ, ಪ್ರೀತಿ ಪ್ರೇಮದ ಕನಸು, ಓದಿನ ಆಸಕ್ತರಿಗೆ ಮೆಡಲ್ಲುಗಳ, ಮಾರ್ಕುಗಳ ಕನಸು, ನೆಚ್ಚಿನ ನಟ, ನಟಿಯೊಂದಿಗೆ ಭೇಟಿಯಾದಂತೆ, ಕೈ ಕುಲುಕಿ ದಂತೆ ಕನಸು, ಮದುವೆಯಾಗುವವರಿಗೆ ಹನಿಮೂನು ಕನಸು, ಆದವರಿಗೆ ಮಕ್ಕಳ ಕನಸು, ಮನೆ ಕಟ್ಟುವುದು, ಕಾರು ಕೊಳ್ಳುವುದು, ದೇವಸ್ಥಾನಗಳಿಗೆ ಟ್ರಿಪ್ಪು ಹೋಗುವುದು, ಹೀಗೆ ನಾನಾ ರೀತಿ.

ನಾನು ಚಿಕ್ಕವನಿದ್ದಾಗ ಗೋಲಿ, ಬುಗುರಿ ಗೆದ್ದ , ನನಗಿಂತ ಶಕ್ತಿಶಾಲಿ ಹುಡುಗರನ್ನು ಮಣಿಸಿ ಗೆದ್ದ ಕನಸುಗಳು ಬೀಳುತ್ತಿದ್ದವು. ಆದರೆ ಹಗಲಲ್ಲಿ ನಾನು ಆಟಗಳಲ್ಲಿ ಹೆಚ್ಚಾಗಿ ಸೋಲನ್ನು ಮಾತ್ರವೇ ಕಂಡಿರುತ್ತಿದ್ದೆ ಮತ್ತು ಬಲಶಾಲಿಗಳಿಂದ ಒದೆ ತಿನ್ನುತ್ತಿದ್ದೆ. ನಂತರ ಕಾಲೇಜಿನ ದಿನಗಳಲ್ಲಿ ನನ್ನನ್ನು ಅವಮಾನಿಸುವಂಥ, ಹಂಗಿಸುವ, ನಾಲ್ಕು ನಾಲ್ಕು ಜನ ಒಟ್ಟೊಟ್ಟಿಗೆ ಹಿಡಿದು ತದುಕುವ ಕನಸುಗಳು ಬೀಳುತ್ತಿದ್ದವು. ಕೊನೆಗೆ ನನ್ನ ರಿಜಲ್ಟು ಆಲ್ ಕ್ಲೀಯರ್. ಅಲ್ಲಿವರೆಗೂ ನನ್ನನ್ನು ಯಾರೂ “ತಟ್ಟದಂತೆ” ಎಚ್ಚರಿಕೆಯಿಂದಿದ್ದೆ. ಹೊಸದಾಗಿ ಕೆಲಸ ಸಿಕ್ಕ ನಂತರದಲ್ಲಿ ಅಪಘಾತದಲ್ಲಿ ಅಂಗವಿಕಲನಾದಂತೆ ಹಾಗೂ ದೊಡ್ಡದೊಂದು ಸರ್ಪ ನನ್ನನ್ನು ಹಿಂಬಾಲಿಸುತ್ತಿರುವ ಕನಸು ಬೀಳುತ್ತಿದ್ದವು . ಮೂರು ವರ್ಷದ ಹಿಂದೆ ಕಾರು ಅಪಘಾತವನ್ನು ಎದುರಿಸಿದ್ದೆನಾದ್ದರಿಂದ ಬೈಕ್ ನಡೆಸುವಾಗ ಮೈಯೆಲ್ಲಾ ಕಣ್ಣಾಗಿರು ತ್ತೇನೆ.
ಸರ್ಪ ಮಾತ್ರ ನನ್ನನ್ನು ಬಿಟ್ಟಿಲ್ಲ.. ಮೊದಮೊದಲು ನನ್ನೊಬ್ಬನನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಆದರೆ ಇತ್ತೀಚೆಗೆ ನನ್ನ ಮಗ ಮನೆಯಲ್ಲಿ ಅದನ್ನು ತುಳಿದರೂ, ಸರಿಸಿದರೂ, ಹೊರಗೆ ಬಿಟ್ಟು ಬಂದರೂ ಬಿಡದೇ ಅವನೊಂದಿಗೆ ಆಗಾಗ ಆಟವಾಡುತ್ತಿರುವ ಕನಸು ಬೀಳುತ್ತವೆ. ದಯವಿಟ್ಟು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಪರಿಹಾರ ಕೇಳಿಕೊಂಡು ಬನ್ನಿ ಅನ್ನಬೇಡಿ. ಅಲ್ಲಿಗೆ ಹೋಗಿ ಬಂದ ಮೇಲೆಯೇ ನನ್ನ ಮಗನೊಂದಿಗಿನ ಸರ್ಪದ ಕನಸು ಜಾಸ್ತಿ ಆಗಿದೆ.
ನನ್ನ ದುರ್ದಿನಗಳಲ್ಲಿ ನನಗೆ ಒಮ್ಮೆ ಗೊತ್ತಿದ್ದ ಆದರೆ ಯಾವತ್ತೂ ಹತ್ತಿರದ ಕಲ್ಲು ಗುಡ್ಡ ಏರಿ ನಡೆಯುತ್ತಿದ್ದೆ, ಏಕಾ ಏಕಿ ಕಾಲು ಜಾರಿ ಬಿದ್ದು ತರಕು ಗಾಯವೂ ಆಗದೇ “ಏಸು ಕ್ರಿಸ್ತ ” ತನ್ನ ಎರಡು ಕೈಗಳಲ್ಲಿ ಮಗುವಂತೆ ನನ್ನನ್ನು ಹಿಡಿದ ಕನಸು ಬಿದ್ದಿತ್ತು. ಪಕ್ಕಾ ಹಿಂದೂ ಲಿಂಗಾಯತನಾದ ನನ್ನ ಕನಸಲ್ಲಿ “ಏಸು ಕ್ರಿಸ್ತ ” ಬಂದಿದ್ದ. ಆದರೆ, ಒಮ್ಮೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೊಪ್ಪಳದ ಬಸ್ ನಿಲ್ದಾಣದಲ್ಲಿ ಸಿಕ್ಕ ಫಕೀರ ರಾಜಾಸಾಬ್ ಅನ್ನುವವರು ಸಿಕ್ಕ ಹತ್ತು ನಿಮಿಷದಲ್ಲೇ ನನ್ನ ಸದ್ಯದ ವಾಸ್ತವವನ್ನು ಜೊತೆಗಿದ್ದು ಕಂಡವರಂತೆ ಹೇಳಿ ಹೊರಟವನ ಮುಖ ಇವತ್ತಿಗೂ, ಕನಸಿನಲ್ಲೂ ನೆನಪಿಗೆ ಬರುತ್ತಿಲ್ಲ.
ಈಗಿನ್ನು ಮೂವತ್ತೇಳು ವರ್ಷ ವಯಸ್ಸು. ಎದೆ ಮೇಲೆ ಕೈ ಇಟ್ಟುಕೊಂಡು ದಿಂಬಿಗೆ ತಲೆ ಕೊಟ್ಟು ಕಣ್ಣು ಮುಚ್ಚಿಕೊಂಡರೆ ಎಂಥೆಂಥ ಕನಸನುಗಳು ಬಂದು ಬೀಳಲು ಬಯಸುವ ವಯಸ್ಸಿದು. ಅಂದರೆ ಈಗಾಗಲೇ ಕೆಲಸ ಸಿಕ್ಕಿತು, ಮದುವೆ ಆಯಿತು, ಮಕ್ಕಳು ಆಯಿತು, ಇನ್ನು ಮನೆ ಕಟ್ಟುವ ಕನಸು ಅದೂ ಹಗಲಿನದು ಕೂಡ . ಸುತ್ತದೇ ಇರುವ ಊರು, ನೋಡದೆ ಇರುವ ಜಗ, ಹೊಸ ಹೊಸ ಫ್ರೆಂಡ್ಸ್, ಹಳೇ ಗೆಳೆಯರ ನಡುವೆ ನಡೆದ ಹರಕತ್ತು, ಚೇಷ್ಟೆಗಳು, ನೌಕರಿಯಲ್ಲಿ ಭಡ್ತಿ, ಹಾರ ಸನ್ಮಾನ, ಬಹು ಪರಾಕು ಬೀಳೋದಿಕ್ಕೆ ಎಂಥೆಂಥ ಕನಸುಗಳಿವೆ. ಅದು ಬಿಡಿ, ತೀರಿ ಹೋದ ಅಪ್ಪ, ಅಜ್ಜಿಯರು, ಅಜ್ಜ, ಆಪ್ತರು, ಸ್ನೇಹಿತರು ಎಷ್ಟೋ ವರ್ಷಗಳ ನಂತರ ಆಗಾಗ ಕನಸಲ್ಲಿ ಬಂದಿದ್ದರೆಂದು ಹೇಳುತ್ತಿರುತ್ತೇವೆ. ಆದರೆ ನಾವೇ ನಮ್ಮ ಕನಸಲ್ಲಿ ಸತ್ತಂತೆ ಕನಸು ಬಿದ್ದರೆ ?
ಮೊನ್ನೆ ಒಂದು ಕನಸು ಬಿದ್ದಿತ್ತು. ನಾನು ಸಾಯೋದಿಕ್ಕೆ ಏನು ಕಾರಣ ಅಂತಾನೆ ಗೊತ್ತಿಲ್ಲ. ಸತ್ತದ್ದು ಮಾತ್ರ ಪಕ್ಕಾ. ಮನೆ ಮುಂದೆ ಪೆಂಡಾಲು ಒಂದೈವತ್ತು ಚೇರುಗಳು. ಹೆಗಲ ಮೇಲೆ ಟವೆಲ್ ಹಾಕಿಕೊಂಡು ಒಂದಷ್ಟು ಜನ ಹೊರಗೆ,ಬಂದವರನ್ನು ವಿಚಾರಿಸಿಕೊಳ್ಳುತ್ತಿದ್ದ ಮಾಮ, ಸೆರಗು ಹೊದ್ದು ಹೆಂಡತಿ ಮೊದಲು ಮಾಡಿ ಅವ್ವ, ಅಕ್ಕ, ಎಲ್ಲರೂ “ಓ” ಎಂದು ಗೋಳಾಡುತ್ತಿರುವ ಹೆಂಗಸರು, ಮನೆಯ ಪಡಸಾಲೆಯಲ್ಲಿ ಗೂಟಕ್ಕೆ ನನ್ನ ಹೆಣ. ಪರಿಚಯಸ್ಥರು, ಬಂಧು, ಬಳಗ, ಸ್ನೇಹಿತರು, ಎಲ್ಲರೂ ನನ್ನಲ್ಲಿದ್ದ ಒಳ್ಳೆಯ, ಕೆಟ್ಟ ಗುಣಗಳ ವಿಶ್ಲೇಷಣೆಯಲ್ಲಿ ತೊಡಗಿದ್ದರು. ಕೂಗಿ ಕೂಗಿ ಒದರಿದರೂ ನನ್ನ ದನಿ ಯಾರಿಗೂ ಕೇಳುತ್ತಿಲ್ಲ, ಮತ್ತು ನಾನು ಯಾರಿಗೂ ಕಾಣುತ್ತಿಲ್ಲ. ನಾನು ಅಲ್ಲೇ ಸುತ್ತಿತ್ತಿದ್ದೆ, ನನ್ನ ಹೆಣವನ್ನು ನೋಡುತ್ತಾ. ಸಂಜೆ ನಾಲ್ಕು ಗಂಟೆಯಾಯಿತು. ಎತ್ರಿ ಎತ್ರಿ….. ಅಂದು ಕೊನೆ ಪೂಜೆಗೆ ಬ್ಯಾಂಡ್ ಊದಿ ಮುಗಿಸಿದರು. ಆ ನಂತರ ಬ್ಯಾಂಡಿನವರ ಕೆಲಸ ಖತಂ. ಇನ್ನೇನಿದ್ದರೂ “ಓಂ ನಮಃ ಶಿವಾಯ” ಧ್ವನಿ ಮೊಳಗಿಸುತ್ತಾ ನಡೆದ ವಾಹನ.. ಮೊದಲಾದರೆ ಹೆಣ ಹೊರುವುದಕ್ಕೆ ನಾಲ್ಕು ಜನಗಳನ್ನಾದರು ಗಳಿಸಬೇಕು ಅನ್ನುವ ಮಾತು ಚಾಲ್ತಿಯಲ್ಲಿತ್ತು.. ಈಗ ಅದೂ ಇಲ್ಲ, ಸಾಯುವ ಮುಂಚೆ ಮೂರು ಸಾವಿರ ದುಡ್ಡು ಜೋಡಿಸಿಟ್ಟು ಒಂದು ಫೋನ್ ನಂಬರ್ ಕೊಟ್ಟು “ಶಿವಾ” ಅಂದರೂ ಸಾಕು.. ಮುಂದೆ “ಓಂ ನಮಃ ಶಿವಾಯ”.

ದಾರಿಗುಂಟ ಪಟಾಕಿ ಸದ್ದು, ಕುಲುಕಾಟವಿಲ್ಲದೇ ನಿಧಾನವಾಗಿ ಸಾಗುತ್ತಿದ್ದ ಅಂತಿಮ ಸಾಗಣೆ ವಾಹನ. ಸ್ಮಶಾನ ಹತ್ತಿರಾಯಿತು. ನಾನು ಯಾರ ಕೈ ಮುಟ್ಟಿದರೂ, ಎದೆಗೆ ಒದ್ದರೂ ಯಾರಿಗೂ ಸ್ಪರ್ಶವಿಲ್ಲ.
ಸರಿ, ಇನ್ನೇನು ಗುಂಡಿ ತೆಗೆದ ಜಾಗದ ಪಕ್ಕದಲ್ಲೇ ನನ್ನ ಹೆಣ ಇಟ್ಟು, “ಕೊನೆ ಬಾರಿಗೆ ಮುಖ ನೋಡುವವರು ನೋಡಿ” ಎಂದ ಅಯ್ಯನೋರು ಹಿಂದಕ್ಕೆ ಸರಿದದ್ದೇ ಬಂತು. ಎಲ್ಲರೂ ನೋಡಿ ನೋಡಿ ಹಿಂತಿರುಗಿದ ನಂತರ ಬಂದಳು ನೋಡಿ ನನ್ನ ಹೆಂಡತಿ, ನನ್ನ ಮುಖ ನೋಡುತ್ತಾ, ಮಾತೇ ನಿಂತು ನನ್ನ ಎದೆ ಮೇಲೆ ದೊಪ್ಪನೆ ಬಿದ್ದು ಎದೆ ಬಡಿದು ಬಡಿದು ಶುರು ಮಾಡಿದ ಅಳುವಿಗೆ ಅದೆಲ್ಲಿತ್ತೋ ಏನೋ. ಅಲ್ಲಿವರೆಗೆ ಮನೆಯಿಂದ ಹೊರಟು ಸ್ಮಶಾನದ ಗುಂಡಿ ಪಕ್ಕದಲ್ಲಿ ನನ್ನ ಹೆಣ ಇಡುವವರೆಗೂ ಎಷ್ಟು ಬಾಯಿ ಬಡಿದುಕೊಂಡರೂ ಯಾರಿಗೂ ಕೇಳದ ನನ್ನ ದನಿ ನನ್ನ ಸತ್ತ ದೇಹದ ಬಾಯಿಂದ ಒಮ್ಮೆಲೇ “ಆಹ್” ಎಂದು ಉಸಿರಿನಿಂದ ಹೊರ ಬಂದಿತು. ನನ್ನ ಹೆಂಡತಿ ಎದೆ ಮೇಲೆ ಬಡಿದು ನನ್ನ ಜೀವ ನನ್ನ ದೇಹವನ್ನೇನು ಸೇರಿ ಉಸಿರು ಪಡೆಯುವಂತಾಯಿತು. ದಿಗ್ಗನೆದ್ದು ಕುಳಿತೆ. ಮಣ್ಣಿಗೆ ಬಂದಿದ್ದವರೆಲ್ಲ ಖುಷಿ ಪಟ್ಟರೋ, ಆಶ್ಚರ್ಯಪಟ್ಟರೋ ಅಂತೂ ಅವರೊಟ್ಟಿಗೆ ಸ್ಮಶಾನದ ಪ್ರವೇಶದಲ್ಲಿದ್ದ ಬಾವಿಯಿಂದ ನೀರು ತಲೆ ಮೇಲೆ ಹಾಕಿಕೊಂಡು ಮನೆಗೆ ಹೊರಟಿದ್ದಾಯಿತು..
ಆದರೆ?
ನಾನು ನಿಜವಾಗಿಯೂ ಆ ರಾತ್ರಿ ಕನಸಿನಿಂದ ಬಿಡಿಸಿಕೊಂಡು ಡಿಸೆಂಬರ್ ಛಳಿಯ ನಡುಗಿನಲ್ಲೂ ಬೆವತು ಎದ್ದು ಕುಳಿತಿದ್ದೆ. ಆಗ ಸಮಯ ಬೆಳಗಿನ ಮೂರರ ಜಾವ.ಅದಲ್ಲದೇ ಹೊಸ ವರ್ಷದ ಆರಂಭದ ದಿನ ಬೇರೆ. ಪಕ್ಕದಲ್ಲೇ ಹೆಂಡತಿ ಮಕ್ಕಳು ನಿದ್ರೆಯಲ್ಲಿದ್ದರು. ಎಚ್ಚರವಾಗಿ ಎದ್ದು ಕುಳಿತದ್ದು, ಗಾಬರಿ ಯಾದದ್ದು ಯಾಕೆ ಗೊತ್ತಾ? ನನ್ನ ಹೆಂಡತಿ ಕನಸಿನಲ್ಲಿ ನನ್ನ ಎದೆ ಬಡಿವ ಪೆಟ್ಟಿಗೆ ಎಲ್ಲಿ ನಾನು ನಿಜವಾಗಿಯೂ ಸತ್ತೇ ಹೋಗುತ್ತೆನೆನ್ನಿಸಿ, ಬದುಕುವ, ಇನ್ನೂ ಹಲವು ವರ್ಷಗಳ ಸಾವಿನಂಥ ನಿದ್ದೆಯ ರಾತ್ರಿಗಳನ್ನೂ ನೂಕಿ ಕಣ್ಣ ತೆರೆದೇ ಕಾಣುವ ಕನಸಿನ ಬಾಲ ಹಿಡಿದು ಜೀಕುವ ಆಸೆಯಿಂದ.
ಹೌದು, ನನ್ನದೊಂದು ಪ್ರಶ್ನೆ ಇದೆ. ಕನಸುಗಳು “ಬಿದ್ದು” ನಮ್ಮನ್ನು ಎಚ್ಚರಿಸುತ್ತವಾ? ಎತ್ತರಕ್ಕೇರಿಸು ತ್ತವಾ? ಗೊತ್ತಾಗುತ್ತಿಲ್ಲ. ಅಂದಹಾಗೆ, ನಿಮಗೆ ಇವತ್ತು ಬೆಳಗಿನ ಜಾವದಲ್ಲಿ ಬಿದ್ದ ಕನಸು ಯಾವು ದೆಂದು ನೆನಪು ಮಾಡಿಕೊಂಡು ಥಟ್ ಅಂತ ಹೇಳಿ…. ಬಿದ್ದಿಲ್ಲವಾ?..ವೆರಿ ಗುಡ್ .. ಹಗಲುಗನಸು ಬೆನ್ನತ್ತಿ…






THANKS AVADHI…..SIR…NIJAVAAGALU… IDANNU KALISIDA MELE NANAGE HEDARIKE ITTU EKENDARE- NANAGANNISSIDDU NAANU HELIDENAADARU IDANNU ODUVAVARU HEGE TILIDUKOLLUTTARO ENDU….
ಒಂದು ಕನಸಿನ ಸುತ್ತ… ಚೆಂದವಿದೆ ಬರಹ
100 varsha ayusha anta heltare amar ee tarah kanasu bidre, ninnantavaru 100 + 6 varsha badukidare ee tarah article bartane iruttalva adke
raju
chennagide … nimma baraha prabuddavaagide…
I personally am very fascinated about dreams! I am curious to know, whether dreams about our own death are so elaborate indeed? Amar, I have a question for you. Is there a bit of imagination in the dream you had about your own death(like what it happens in ‘Lucid dreams’) or what you have written here is a true narration of the events as they just happened in your dream? Interesting to read! Liked the punch in the last line.
Hagaluganasannu Kaanabeeku Ennuteera…? Barha Estavaayitu, Keep writing.
ondu khsana naanu nivu heneda kanasina madhye sikku hakikondaneno anno bhrame untagittu…. Bhal chand barediri.. ishta aatu..
Obba Kavi mattu obba vimarshaka eradu idaralli kanuttide really atyuttam