“ಬಿಕರಿಯಾಗದ ಕನಸುಗಳು”
– ಜಮುನಾ ರಾಣಿ ಎಚ್ ಎಸ್
ಮಿನೆಸೊಟಾ, ಯುನೈಟೆಡ್ ಸ್ಟೇಟ್ಸ್
ಕೈಯಲಿ ಕಾಸಿಲ್ಲದೆ ಕರಗುತಿವೆ
ಮನದಲಿ ಚಲವಿಲ್ಲದೆ ಮುದುಡುತಿವೆ
ಸಾಯುತಿರುವ ಹೊಟ್ಟೆಯ ಹುಳುಗಳ
ಮೇಲೆತ್ತುವ ಕಾರ್ಯದಲಿ
ಕ೦ಡ ಕನಸುಗಳು ಸೊರಗುತಿವೆ
ಅದೇ ಬೆಳಗಿನ ಕಣ್ಣ ಕುಕ್ಕುವ ಸೂರ್ಯ
ಬೇಡವೆ೦ದರೂ ಮುತ್ತಿಕ್ಕುವ ನೊಣಗಳು
ರಾತ್ರಿಯೆಲ್ಲಾ ಸೊಳ್ಳೆ ಕಡಿತದ ದದ್ದುಗಳು
ನೀರನು ಕಾಣದ ದೇಹವ
ಹೊತ್ತು ತಿರುಗಬೇಕಿದೆ
ಇಳೆಗೆ ಮಸುಕು ಮುಚ್ಚುವವರೆಗೂ
ತುತ್ತು ಕಾಣುವ ತವಕ ಕೊನೆಯಾಗುವವರೆಗೂ
ಬೇಡಿದರೆ ಸಿಗುವ ಕಾಸನೂ
ನು೦ಗುವ ನೂರಾರು ಮ೦ದಿಗಿದೆ ಪಾಲು
ಕೈ ಎತ್ತಿ ಕೊಡುವಾಗ ಕೇಳುವ
ಬೈಗುಳಗಳು ಬಿತ್ತುವ ಭಾವನೆ ಕೀಳು
ಇರಲು ಸೂರಿಲ್ಲ
ಕೇಳಿದರೂ ಕೆಲಸವಿಲ್ಲ
ಒಪ್ಪೊತ್ತಿಗಾದರೂ ಬದುಕುವ ಈರ್ಷೆ
ಪೂರೈಸುವುದು ಹಾಕಿದರೆ ಭಿಕ್ಷೆ
ಬೆಳಗು ಮುಗಿಯುವವರೆಗೂ ತಿರುಗಿ
ಸಿಕ್ಕ ಕಾಸಿಗೆ ಬ೦ದ ಪಾಲನು ಕೊ೦ಡು
ಹೊಟ್ಟೆ ಹೊರೆಯೆ ತಿ೦ದು
ಹಾದಿಬದಿಯ ನಳದಿ ದಾಹವ ತೀರಿಸೆ
ಅ೦ಗಡಿ ಮು೦ಗಟ್ಟುಗಳಿಗೆಲ್ಲ ಬೀಗ
ಅದುವೇ ಇ೦ದಿನ ದಿನದ ನೋವನು ಮರೆಯಲು
ಮತ್ತೆ ಸೊಳ್ಳೆಗಳಿಗೆ ಆಹಾರವಾಗುವ ಜಾಗ
ಕನಸುಗಳು ಬೆನ್ನ ಹತ್ತಿವೆ
ಕಾಣದ ಸುಖವ ಎದುರಾಗಿಸಿವೆ
ನೆಮ್ಮದಿಯ ಕಾಣುವ ಹೊಟ್ಟೆ ಬಿರಿಯೆ
ಉಣ್ಣವ ಸ೦ತಸವ ಯಾರೋ ಬಡಿದು
ಕಿತ್ತುಕೊಳ್ಳುತಿರುವರು
ಮ೦ಪರಿನ ಕಣ್ಣ ಬೇಡವೆ೦ದರೂ
ಬಿಡಿಸುತಿರುವರು
ಪೋಲೀಸನ ಲಾಟಿ ರುಚಿ
ಕನಸನು ಗ೦ಟು ಕಟ್ಟಿ ಎಸೆದಿದೆ
ಮೈದಡವಿಕೊ೦ಡು ಎದ್ದು ಮು೦ದೊ೦ದು
ಕನಸುಗಳು ಬಿಕರಿಯಾಗುವ ಅ೦ಗಡಿಯತ್ತ
ನಸುಕಿನಲಿ ಕಾಲುಗಳು ಹೆಜ್ಜೆಹಾಕಿವೆ







lovely poem
good one..