ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕನಸಿಗೂ ಭ್ರಮೆಗೂ ವ್ಯತ್ಯಾಸ ತಿಳಿದಿಕೋ ಹೆಣ್ಣೇ…' – ಹೇಮಲತಾ

ಹೇಮಲತಾ

ಎಷ್ಟೋ ಹಕ್ಕಿಗಳು ಗೂಡು ಕಟ್ಟುತ್ತವೆ ಬೆಚ್ಚಬೆಚ್ಚಗೆ; ಬಗೆಬಗೆ: ಹುಲ್ಲು, ನಾರು, ಹತ್ತಿ, ಕಡ್ಡಿ,ಕಸ, ತರಗೆಲೆ …
ಅದು ಗೀಜಗ . ಒಂದೇ ವಿಧದ ನಾರಿನಲ್ಲಿ ಶ್ರಮವನ್ನೇ ನೇಯುತ್ತಿತ್ತು . ನಿನ್ನದೆರಡು ಕೈಗಳಿವೆ, ರಾಶಿ ನಾರು ಎದುರಿದೆ, ಸಾಧ್ಯವ? – ತಾತ ಸವಾಲೆಸೆದಾಗ ವಯಸೆಷ್ಟು? ಒಂಭತ್ತಿದ್ದಿರಬೇಕು . ಪುಟ್ಟ ಹಕ್ಕಿಯೆದುರು ನಾವೆಷ್ಟು ಅಲ್ಪ ಮೊದಲ ಜ್ಞಾನೋದಯ -ಮಿತಿ ಮತ್ತು ಶಕ್ತಿಯ ಕುರಿತು.
ವಲಸೆ ಮುಗಿದು ಹಾರಿದಮೇಲೆ ಕಿತ್ತುತಂದು ಕೋಣೆಯಲ್ಲಿ ತೂಗಿದಳು. ಅಚ್ಚುಕಟ್ಟಾದ ಕಸೂತಿಯ ಒಳಗೆ ರೂಮುಗಳು, ಮೆತ್ತಗಿನ ಹಾಸಿಗೆ, ಬೆಳಕಿಗೆ ಮಿಂಚುಹುಳದ ದೀಪ. ನೋಡುತ್ತಾ ನೋಡುತ್ತಾ ಹೆಣೆಯುತ್ತಿದ್ದಳು ಅದರಂತೆ ಚೆಂದದ ಕನಸಿನಗೂಡು. ಅಲ್ಲಿ ಅವಳು ಮತ್ತು ಅವನು. ಅವನ ರೆಟ್ಟೆಬಳಸಿ ತಬ್ಬಿ ಎದೆಯಲಿ ಹುದುಗಿ ಕಳೆದುಹೋಗಬಯಸುವ ಅವಳು,ಕಾವಿಗೆ ಪಿಳಿಪಿಳಿ ಕಣ್ಣು ತೆರೆದ ಪುಟ್ಟದೊಂದು ಕೂಸುಮರಿ,ನಿಶ್ಚಿಂತ ರಾತ್ರಿಹಗಲು.
ಮತ್ತು ಹಬ್ಬಗಳಿಗೊಂದು ಬಣ್ಣದ ರಂಗವಲ್ಲೇ, ಸಂಜೆಗೊಂದುದೀಪ,ಒಗ್ಗರಣೆಗೆ ಹಸಿ ಕರಿಬೇವು, ಎಲ್ಲಾ ಪಿಕ್ಚರಿನ ಹೀರೋಯಿನ್ ಳಂತೆ ತಬ್ಬಿ ಸುತ್ತಲು ಗಾಡಿ ,ದೂರದೂರಿಗೆ ಕಾರು.
ಶ್ರಮವನೆಲ್ಲ ಒಟ್ಟುಗೂಡಿಸಿದ್ದಳು ಅದಕ್ಕಾಗಿ . ಇದೆಲ್ಲ ಅಂತಾ ಕಷ್ಟವಿತ್ತೆ ? ಕ್ಲಿಷ್ಟವಿತ್ತೆ ?
ಜೇನುಕಣ್ಣುಗಳೊಳಗೆ ತುಂಬಿ ತೊಟ್ಟಿಕುತ್ತಿದ್ದ ಸವಿಕನಸುಗಳು ತುಂಬು ಪ್ರೀತಿಯನ್ನೇ ಅಂಟುತ್ತಿದ್ದವು.
ಪುಸ್ತಕದ ಹಾಳೆಯಲ್ಲಿ ಬಿಡಿಸಿದ ಬಾತುಕೋಳಿ ಅರೆಗಣ್ಣು ತೆರೆದು ನಿಶ್ಚಿಂತ ತೇಲುತ್ತಿತ್ತು ಕನಸಗೊಳದೊಳಗೆ .
ಬಂದವನೇ ಹರಿದು ಚಿಂದಿ ಮಾಡಿಬಿಟ್ಟ . ಅಷ್ಟೊಂದು ಅಗಾಧ ಕ್ರೌರ್ಯ !!! ಎಲ್ಲರಲ್ಲೂ ಅದೇ ಪ್ರಶ್ನೆ ಹೇಗೆ ಸಾಧ್ಯ ಮನುಷ್ಯನೊಬ್ಬನಲ್ಲಿ ಅಂತಾ ವಿಕೃತಿ,… ಹೌದು ಹೇಗೆ ಸಾಧ್ಯ ? ಅವಳಲ್ಲೂ ಅದೇ ಆಘಾತ.
ಕೋಣೆಯ ತುಂಬೆಲ್ಲ ಹರಡಿಹಂಚಿದ ನಾರುಎಳೆಗಳು , ಮತ್ತೆಂದು ಮತ್ತೆ ಕನಸ ಹೆಣೆಯಲಾಗದಂತೆ ತುಂಡರಿಸಿ ಚೆಲ್ಲಿ ಚಿಲ್ಲಪಿಲ್ಲಿ . ದಿಂಬಿಗಿಳಿದ ಕಣ್ಣೀರಿಂದ ನೆಂದು ನೊಂದು ಹೊರಬಂದವೇ ಒಂದೊಂದೇ?

ಅಲ್ಲೊಬ್ಬ ಹೆಣ್ಣುಗೂಳಿಯಂತ ಗಯ್ಯಾಳಿ ಉರಿವ ಬೆಂಕಿಗೆ ಪುಳ್ಳೆತುರುಕುತ್ತಿದ್ದಳು , ಹೆಚ್ಚಾಗಬೇಕು , ಹುಚ್ಚಾಗಬೇಕು ಕಿಚ್ಚು, ಕೆಲವರ ಮನಸು ಬೆಚ್ಚಗಾಗೋದು ಹಾಗೆ .
ಎಲ್ಲಿರುತ್ತಿದ್ದಳೋ ಏನೋ ಅದೇ ವೇಳೆಗೆ ಥಟ್ ಅಂತ ಬರುತ್ತಿದ್ದಳು ಆ ಮಾಟಗಾತಿ , ಕೈಯಲ್ಲಿ ಬೆತ್ತ ಹಿಡಿದು ಕಲಿತಿಕೋ ಮಾಟಮಾಡುವುದ ಅಂತೆಲ್ಲ ಬೊಬ್ಬರೆಯುತ್ತಿದ್ದಳು. ಹಾಗೆ ಅಂತೆ ಅವಳು ಗಳಿಸಿದ್ದು, ಉಳಿದಿದ್ದು!
ಹೆಚ್ಚೇನಿಲ್ಲ ಅವನು ಹೆಪ್ಪುಗಟಿದ್ದ ರಕ್ತದಲ್ಲಿ, ಉಸಿರು ಉಬ್ಬಿಸಿದ ಗಂಟಲು ನರಗಳಲ್ಲಿ , ಕೃತಕ ನಗುಮೆಚ್ಚುಗೆಗಳಲ್ಲಿ ಬೀಜ ಹುಡುಕುತ್ತಾನಂತೆ ಪ್ರೀತಿ ಚಿಗುರಿಸಲು… ಬಾಸುಂಡೆ ಬಿದ್ದರು ಉಸಿರು ಚೆಲ್ಲಬಾರದು , ಕಣ್ಣೀರಿನ ಬದಲು ಪ್ರೀತಿಯ ಕಂಬನಿಯನ್ನು ಪದತಳಕಕ್ಕೆ ಹರಿಸಬೇಕು , ಸೋತು ಸುಣ್ಣವಾಗಿ ಕಾಲಿಗುರುಳಬೇಕು … ಅವನ ಶೌರ್ಯಸಾಹಸದ ಮೇಲೆ ಅವನಿಗೆ ನಂಬಿಕೆ ಬರಬೆಕು.. ರಕ್ತ ಹೀರಿದ ಜಿಗಣೆ ಬಿಡುವುದಿಲ್ಲವೇ?
ಬಲಿಪಡೆಯುವ ದೇವರಿಗೆ ಕತ್ತು ಒದರಿ , ಒಪ್ಪಿಗೆ ಸೂಚಿಸಿ ಅರ್ಪಿಸಿಕೊಳ್ಳಬೇಕು ಮಾಂಸ , ಮಜ್ಜೆ , ಮೂಳೆ , ಪ್ರಾಣ , ಪ್ರೀತಿ , ತೊಗಲು ಎಲ್ಲಾ ಬಗೆದು ಬೇಯಿಸಿ ಜಿಗಿದು ತಿಂದ ಮೇಲೆ ಜೀರ್ಣೋದ್ಧಾರವಾದಂತೆ ಹೆಣ್ಣು .
ಸೂಫಿ ಹೇಳುತ್ತಾನೆ ಸುತ್ತುರಿಯಬೇಕು ಪ್ರೇಮದ ಜ್ವಾಲೆಯಲ್ಲಿ , ಅರ್ಪಿಸಿಕೊಳ್ಳಬೇಕು ಅವನೊಳಗೊಂದಾಗಿ… ಸಂಗಾತನೊಂದಿಗೆ ಒಂದಾಗೋದು ಹಾಗೆ ಪ್ರೇಮ ಪರಿಭಾಷೆಯಲ್ಲಿ .
ಅವನ ಕಣ್ಣಲ್ಲಿ ಎಂದೂ ಪ್ರೇಮದಸುಳಿವಿರಲಿಲ್ಲ , ಕಂಪಿಸುತಿದ್ದಳು ಬೆಚ್ಚಿ ಸುಳಿದರು ನೆರಳು. ಪ್ರೇಮವೆಂದರೆ ನೆಮ್ಮದಿಯ ಅಸ್ತಿತ್ವ ಮತ್ತು ಭಯದ ಗೈರುಹಾಜರಿ ತಾನೇ ಸೂಫಿ ?
ಎಲ್ಲ ಮೊಟ್ಟೆಗಳು ಮರಿಯಾಗುವುದಿಲ್ಲ , ಹಸಿದ ಹಾವುಗಳ ಹೊಟ್ಟೆಯೊಳಗೆ ಒಡೆದು ಪುಡಿಪುಡಿಯಾಗಿ ಕರಗುತ್ತವೆ . ಕಟ್ಟುವ ಕ್ರಿಯೆಯಷ್ಟೇ ಕಷ್ಟ , ಒಡೆಯುವುದಲ್ಲ.
ಒಡೆಯಲು ಚಾಚುವ ಕೈಗಳು ಎಷ್ಟೊಂದು.
ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಒಳ್ಳೆಯವಳಂತೆ ಅವಳು,ಅವಳ ಹಾರೈಕೆಯ ಹಾಡಿಗೆ ತಲೆದೂಗಿದ ಮತ್ತೊಬ್ಬ ಹಾಗಂತ ಹೇಳಿದ್ದ … ಬಯಸುವುದಕ್ಕು, ಮಾಡುವುದಕ್ಕೂ ಎಷ್ಟೆಲ್ಲಾ ವ್ಯತ್ಯಾಸವಿದೆ ಸೂಫಿ . ನಂಬಲು ಅರ್ಹ ಉಳಿದವರಾದರು ಯಾರು . ನಾರನೆಲ್ಲ ಗುಡಿಸಿ ಬೆಂಕಿಹಚ್ಚಿದ್ದಾಳೆ ಈಗ , ಸಾಕ್ಷಿನಾಶ ಪಡಿಸಬೇಕು ಮೊದಲು, ನಂತರ ಅಲ್ಲೊಂದು ಕನಸೇ ಇರಲಿಲ್ಲ ಎಂದು ವಾದಿಸಿ ಸಾಬೀತು ಪಡಿಸಬೇಕು ..
ಇಲ್ಲಿ ಒಬ್ಬರ ಹೆಣದಬೆಂಕಿಗೆ ಮತ್ತೊಬ್ಬರ ಮನೆ ಬೆಳಗುವ ಅನಿವಾರ್ಯತೆ ಇದೆ.. ಬೆಂಕಿಗೆ ಹಚ್ಚುವ ಶಕ್ತಿಯಷ್ಟೇ,ಅದು ಚಿತೆಯದ್ದೆಂಬ ಪಾಪಪ್ರಜ್ಞೆ ಇರಬೇಕಿಲ್ಲ, . ಹಸಿವು , ಅವರವರ ಹೊಟ್ಟೆ ಹಸಿವು ಅದಷ್ಟೇ ಮುಖ್ಯ,ಅದಷ್ಟೇ ಸತ್ಯ. ಹೊಟ್ಟೆ ತುಂಬಿಸುವ ಕಾಯಕಕ್ಕೆ ಅದರದೇ ಆದ ನಿಷ್ಠೆಯಂತೆ ..ನ್ಯಾಯ ನೀತಿ ಎನ್ನುವುದು ಎಂದಿನಂತೆ ಉಳ್ಳವರು ಹಗ್ಗಕಳಚಿದ ಮರೀಚಿಕೆ
ಕನಸಿಗೂ ಭ್ರಮೆಗೂ ವ್ಯತ್ಯಾಸ ತಿಳಿದಿಕೋ ಹೆಣ್ಣೇ ಮೊದಲು , ಇಲ್ಲಿ ಶ್ರಮದ ಗೂಡು ನೇಯುವ ಗೀಜಗ ಸೆರೆಯಾಗಿದೆ ಅಸಹಾಯಕತೆಯ ಪಂಜರದಲ್ಲಿ ….. ಒಪ್ಪಿಕೊ ಶರಪಂಜರದ ಸಾವು ಪ್ರೇಮವೆಂದು ,ಎಂದಿನಂತೆ ಕಾಲಾನುಕಾಲದಿಂದ….
 

‍ಲೇಖಕರು G

11 March, 2015

2 Comments

  1. vidyashankar

    “ಅಷ್ಟೊಂದು ಅಗಾಧ ಕ್ರೌರ್ಯ !!! ಎಲ್ಲರಲ್ಲೂ ಅದೇ ಪ್ರಶ್ನೆ ಹೇಗೆ ಸಾಧ್ಯ ಮನುಷ್ಯನೊಬ್ಬನಲ್ಲಿ ಅಂತಾ ವಿಕೃತಿ,… ಹೌದು ಹೇಗೆ ಸಾಧ್ಯ ?” vikruthi manushyanige maatra saadhya, ulididdu prakruti sahaja….

  2. hemalatha

    Nija Vidyanna vikruthi manushyanige maatra saadhya.. aadre sandarbhavallada sandharbhadalli… aragisi kollodu kashta

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading