ದೀಪಾ ಗೋನಾಳ
ಒಂದು ಸಿನಿಮಾ, ಒಂದೊಳ್ಳೆ ಸಿನಿಮಾ ಅನಿಸೊಕೊಳ್ಳೊಕೆ ತನ್ನದೆ ಆದ ಸಾಕಷ್ಟು ಅಂಶಗಳಿರುತ್ವೆ.
ಅದು ಕಥೆ, ಕಥೆ ಹೆಣೆದಿರುವ ರೀತಿ, ಪಾತ್ರಗಳು, ಪಾತ್ರಕ್ಕೆ ಜೀವ ತುಂಬಿರುವ ಪಾತ್ರಧಾರಿಗಳು, ಸಂಭಾಷಣೆ, ಪ್ರಸಾದನ, ಕ್ಯಾಮಾರ ವರ್ಕ್, ಅಲ್ಲಲ್ಲಿ ಸಿಗುವ ಬೆಳಕು-ಕತ್ತಲು, ಹಿನ್ನೆಲೆ ಸಂಗೀತ, ಸಾಹಿತ್ಯ, ಕುಣಿತ. ಶೂಟಿಂಗ್ ಮಾಡಿರುವ ಸ್ಥಳಗಳು,ಪಟ್ಟಿ ಬೆಳೆಯುತ್ತಾ ಹೋಗಿ ಕಡೆಗೆ ನೋಡುಗನ ಸಂವೇದನೆಗೆ ಬಂದು ನಿಲ್ಲುತ್ತದೆ.
ಸಿನೆಮಾ ನೋಡುಗರು ಇದೆಲ್ಲ ತಲೆಯಲ್ಲಿಟ್ಟುಕೊಂಡು ಖಂಡಿತ ಚಿತ್ರಮಂದಿರದ ಕತ್ತಲಲ್ಲಿ ಕೂಳಿತುಕೊಳ್ಳುವುದಿಲ್ಲ. ಯುವ ಪೀಳಿಗೆಯಂತು ಒಂದು ಸಿನೆಮಾವನ್ನು ಮೂರು ಗಂಟೆಯ ತಮಾಷೆಯನ್ನಾಗಿಯಷ್ಟೆ ಗುರುತಿಸುತ್ತಿದ್ದಾರೆ. ಇನ್ನು ಪ್ರೇಮಿಗಳಿಗೆ ಅದು ಒಂದು, ಜೊತೆಗುಳಿಯಲು ಸಿಗುವ ಸುಲಭ ತಾಣವಷ್ಟೆ.
ಆದರೆ ಈ ಸೂಕ್ಷ್ಮ ಸಂವೇದನೆ ಇರುವವರ ಗೋಳು ದೊಡ್ಡದು ಅವರು ಸಿನೆಮಾವನ್ನು ಕೂಡ ಬದುಕಿನ ಒಂದು ಬದಿಯನ್ನಾಗಿಸಿಯೇ ನೋಡುತ್ತಾರೆ. ಸಿನೆಮಾದ ಪ್ರತಿ ಪರದೆ ಸರಿದಾಗಲು ಹಿಂದಿನ ಪರದೆಗೂ ಮುಂದಿನ ಪರದೆಗೂ ಸಮೀಕರಿಸುತ್ತ ತರತಮಕಂಡರೆ ಪಕ್ಕನೆ ಗ್ರಹಿಸುತ್ತಾ ಚಲಿಸುತ್ತಾರೆ. ಸಾಕಷ್ಟು ಸಿನೆಮಾ ನೋಡಿದ ಅನುಭವದಿಂದಲೋ ಅಥವಾ ಸಿನೆಮಾಗೆ ತಾವೇ ಕಟ್ಟಿಕೊಂಡ ಚೆಂದದ ವ್ಯಾಖ್ಯಾನದಿಂದಲೋ ಕೆಲ ಸಿನೆಮಾ ಪ್ರೇಮಿಗಳಿಗೆ ನಿರ್ದೇಶಕನ ಎಡವಟ್ಟುಗಳು ಪಕ್ಕನೆ ಸಿಕ್ಕಿ ಬಿಡುತ್ತವೆ.

ವಾರದ ಹಿಂದೆ ಒಂದು ಸಿನಿಮಾ ನೋಡಿದೆ. ಈ ಸಿನಿಮಾ ನಿರ್ದೇಶಕ ಮತ್ತು ಸಾಹಿತ್ಯ ವ ಸಂಭಾಷಣೆ ಬರೆದವರ ಎಲ್ಲಾ ಸಿನಿಮಾ ನೋಡುತ್ತಲೇ ಬಂದ ನನಗೆ ತುಂಬ ತರಾತುರಿಗೆ ಒಂದು ಸಿನೆಮಾ ಮಾಡಿ ಕೊಡಬೇಕೆಂಬ ಆತುರದಲ್ಲಿ-ಅತಿಥಿಗಳಿಗೆ ಅವಸರದಲ್ಲಿ ಮಾಡಿಕೊಟ್ಟ ಉಪ್ಪಿಟ್ಟಿನಂತಿತ್ತು. ರವೆ ಇನ್ನೊಂದಷ್ಟು ಕೆಂಪೇರುವ ತನಕ ಹುರಿಯಬಹುದಿತ್ತು. ನಾಲಕ್ಕು ಕಾಳು ಶೇಂಗಾ ಬೀಜ, ಉದ್ದಿನ ಬೇಳೆ ಒಗ್ಗರಣೆಗೆ ಸಿಡಿಸಬಹುದಿತ್ತು. ಒಲೆಯಿಂದ ಇಳುವುವಾಗ ಅರ್ಧ ಲಿಂಬೆ ಹೊಟ್ಟೆ ಹಿಂಡಿ ಚೆನ್ನಾಗಿ ಕಲಸಿದ್ದರೆ ಆಹಾ!!
ಕಣ್ಣಿಗೂ ತನ್ನದೆ ಆಯ್ಕೆಗಳಿರುತ್ತವೆ ಥೇಟ್ ನಾಲಿಗೆಯಂತೆ. ಕ್ಯಾಮಾರ ನಿರ್ವಹಿಸುವವರಿಗೆ ಈ ಸಿನೆಮಾದಲ್ಲಿನ ಹೆಚ್ಚಿನ ಬೆಳಕನ್ನ ಕತ್ತರಿಸುವ ಕಲೆ ಗೊತ್ತಿರಬೇಕಿತ್ತು!! ಗೊತ್ತಿದ್ದು ಬಳಸಲಿಲ್ಲವೋ!? ಅನಗತ್ಯ ಜೋಕ್ ಗಳು ರುಚಿಗೆಡಿಸುತ್ತವೆ ಎನ್ನುವುದು ನನ್ನ ಅಭಿರುಚಿಗೆ ಧಕ್ಕಿದ್ದು. ಒಂದೊಳ್ಳೆ ಅಂಶ ಅಂದರೆ ಸಿನಿಮಾದಲ್ಲಿ ವಿಲನ್ ಇಲ್ಲ, ಫೈಟ್ ಇಲ್ಲ ಇರುವ ಭಾವನೆಗಳ ಚಡಪಡಿಕೆ-ಒಡಂಬಡಿಕೆಗಳನ್ನೆ ಖಳನಾಯಕನನ್ನಾಗಿ ಮಾಡಿದ್ದಾರೆ ನಾವು ಇಡೀ ಜೀವನ ಹೋರಾಡಬೇಕಾದ್ದು ಅವುಗಳೊಂದಿಗೆಯೇ ಅಲ್ಲವೇ!? ಅಂತ ನೋಡುಗ ಗುರುತಿಸಬೇಕು. ಹಾಡುಗಳು ಪ್ರಾಯಶಃ ಚೆನ್ನಾಗಿವೆ.ಎಲ್ಲ ಪಾತ್ರಧಾರಿಗಳ ಆಯ್ಕೆಯೂ ಭಾಗಶಃ ಸರಿಯಿದೆ. ನಾಯಕಿಯರ ಆಯ್ಕೆ ಇಷ್ಟವಾಯಿತು ಆದರೆ ಅವರಿಂದ ಇನ್ನೊಂದಷ್ಟು ಕೆಲಸ ಮಾಡಿಸಬಹುದಿತ್ತು. ಪ್ರಭಾವ ಬೀರುವಂತ ಪಾತ್ರ ನಿರ್ವಹಣೆಗೆ ಹಚ್ಚಬಹುದಿತ್ತು.
ಸಿನಿಮಾ ಹೆಸರು ಖಂಡಿತ ಚೆಂದಿದೆ. ಹಾಗಂತ ಹೆಸರಿಗೆ ಜೋತು ಬಿದ್ದು ಕಥೆಕಟ್ಟಬಾರದು. ಇತ್ತೀಚೆಗೆ ಒಂದೇರಡು ಕಥೆ ಓದಿದೆ ಕಥಾ ನಾಯಕ, ಮಗನನ್ನ ಮತ್ತು ಹೆಂಡತಿಯನ್ನ ಕಳೆದುಕೊಂಡ ಮೇಲೆ ಒಬ್ಬನೇ ಉಳಿಯುತ್ತಾನೆ ಆ ಕಥೆಯ ಹೆಸರು ದ್ವೀಪ ಇಡೀ ಕಥೆಯಲ್ಲಿ ಒಮ್ಮೆಯೂ ಈ ಶಬ್ಧ ಕಾಣಸಿಗುವುದಿಲ್ಲ ಆದರೆ ಕಥೆಗೆ ಮಾತ್ರ ಚೆಂದ ಒಪ್ಪುತ್ತೆ. ಬೀಜ ಅಂತ ಮತ್ತೊಂದು ಕಥೆ ಗೆಳೆಯನಿಗೆ ಮಕ್ಕಳಾಗುವುದಿಲ್ಲ ಆದರೆ ಜೀವದ ಗೆಳೆಯ ತನ್ನ ಬೀಜದಾನ ಮಾಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತೆ.

ಆದರೆ ಕಥೆಯ ಕೊನೆಯ ತನಕವೂ ಎಲ್ಲೂ ಬೀಜ ಅನುರಣಿಸುವುದಿಲ್ಲ. ಬಹುಶಃ ಇಂತಹ ಮಾದರಿಯನ್ನೆ ನಾನು ಸಿನಿಮಾಂದಿದಲೂ ಬಯಸುತ್ತಿರಬಹುದು. ಹೆಸರಿನ ಆಚೆಗೆ ಸಿನಿಮಾದ ನೆನಪು ನನ್ನೊಳಗೆ ಉಳಿಯಬೇಕು ನೋಡಿ ಬಂದ ಮೇಲೂ ತಿಂಗಳಾನುಗಟ್ಟಲೇ ಸಿನಿಮಾ ಕಾಡಬೇಕು ಏನನ್ನೊ ಬೇಡಬೇಕು, ತುಡಿತ ನಿರಂತರವಾಗಿರಬೇಕು. ಅಂತಹ ಸಿನೆಮಾಗಳನ್ನು ಕೊಟ್ಟಿದ್ದೀರಿ ಮತ್ತು ಅದೇ ಅದಕ್ಕಿಂತ ಹೆಚ್ಚಿನ ನಿರೀಕ್ಷೆಯಲ್ಲಿ ನಾವು-
ನೋವುಗಳು ಎಲ್ಲರಿಗೂ ಇವೆ ನಗುತ್ತಿರಬೇಕು ಅನ್ನೋದು ಸಿನೆಮಾದ ಒಟ್ಟು ಉದ್ದೇಶ, ಸ್ನೇಹಿತರು ಬದುಕಿಗೆ ಎಷ್ಟು ಹಿತ ಎಂಬುದು ಪರದೆ ಉದ್ದಕ್ಕೂ ಇದೆ. ಕನ್ನಡದ ಕಂಪು ಇಂಪು ಏನಾಗುತ್ತ ಹೊರಟಿದೆ ಎಂಬುದನ್ನ ಸಿನಿಮಾ ನೋಡಿಯೇ ತಿಳಿಯಬೇಕು ಅದನ್ನು ಹೇಳುವಲ್ಲಿ ನಿರ್ದೇಶಕರಾದಿಯಾಗಿ ಎಲ್ಲರೂ ದುಡಿದಿದ್ದಾರೆ. ಒಂದು ಛಾವಣಿ ಸೋರುವ ಕಟ್ಟಡ ದೊಡ್ಡ ರೂಪಕದಂತೆ ಕಟ್ಟಿಕೊಟ್ಟದ್ದು ಮನಕ್ಕೆ ಹಿತವೆನಿಸಿತು. ಇಂತ ಪುಟ್ಟ ಪುಟ್ಟ ಕಾರಣಗಳಿಂದಲೇ ಕೆಲವು ಸಿನೆಮಾ ನೆನಪುಳಿಯುವುದು ಹೌದು. ಆ ಉದ್ದೇಶ ನನಗೂ ಇಷ್ಟವಾಯಿತು. ನಾನು ಮೆಚ್ಚುವ ನಿರ್ದೇಶಕರು ಇನ್ನೂ ಚೆಂದ ಸಿನಿಮಾ ಮಾಡಬೇಕೆಂಬುದು ಒಬ್ಬ ಅಭಿಮಾನಿಯಾಗಿ ನನ್ನ ಆಸೆ.
ಸಿನೆಮಾ ಯಾವುದೆಂದು ಬಹುತೇಕರಿಗೆ ಅರ್ಥವಾಗಿರುತ್ತೆ. ಈಗ ಒಟ್ಟಾರೆಯಾಗಿ ನಾನು ನೋಡಬಯಸುವ ಸಿನಿಮಾದ ಕುರಿತು ಇದರೊಳಗೆ ಹೇಳುತ್ತ ಬಂದಿದ್ದೀನಿ ಅಷ್ಟೆ.
ಸಿನಿಮಾ ಹೀಗೆ ಇರಬೇಕೆಂದು ಹೇಳಿದ ಮೇಲೆ ಏನನಿಸ್ತಿದೆ ಗೊತ್ತಾ, ನಾವು ಏನಂದುಕೊಂಡು ಸಿನಿಮಾ ನೋಡಲು ಹೋಗ್ತಿವೊ ಅದೆನ್ನೆಲ್ಲ ಮರೆಸಿ, ಎಲ್ಲವನ್ನು ಮುರಿದು ಬೇರೆನನ್ನೊ ಕಟ್ಟಿ ಕೈಗಿಟ್ಟರೆ ಹೇಗಿರುತ್ತೊ ಹಾಗಾದರೆ ಚೆನ್ನ ಅಲ್ವಾ!?
ಅದು ಸಿನಿಮಾ ಆದರೇನು? ಬದುಕಾದರೇನು? ನಮ್ಮ ನಮ್ಮ ಬದುಕಿನ ಚಿತ್ರ ನಿರ್ವಹಣೆ, ನಿರ್ದೇಶನ, ಅಭಿನಯ, ಛಾಯಾಗ್ರಹಣ, ನಿರ್ಮಾಣ ನಮ್ಮದೇ ಅಲ್ಲವೇ !!!






0 Comments