ದೋಣಿ ಜೀವನ ಪಾಠಶಾಲೆ ಕತೆ ಸಿಗುವ ಹೊತ್ತಲ್ಲಿ…
-ಪ್ರಸಾದ್ ಶೆಣೈ.ಆರ್.ಕೆ.
ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಡೆಯುತ್ತಲೇ..ಕಣ್ಣೆದರು ಅವತರಿಸಿದ ಬೆಟ್ಟದ ತಪ್ಪಲನ್ನೆಲ್ಲಾ ನೋಡುತ್ತಾ,ಯಾವುದೋ ಅನಾಮಧೇಯ ಅರ್ಬಿಯಲ್ಲಿ ಕೂತು..ಆ ನೀರನ್ನು ಗುಟುಕಿದಾಗಲೆಲ್ಲಾ,ಹಾಗೇ ನೀರು ಗುಟುಕಿ,ಕಾಡಿನ ಇನ್ನೊಂದು ದಿಕ್ಕಿಗಿರುವ ಆ ಮಣ್ಣಿನ ಮನೆಯಲ್ಲಿರುವ ಆ ವಯಸ್ಸಾದ ಮುದುಕಿಯನ್ನು ನೋಡಿದಾಗಲೆಲ್ಲಾ,ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಬರುವ ಯಾವುದೋ ಒಂದು ಮುದುಕಿಯ ಪಾತ್ರ ನೆನಪಾಗುತ್ತದೆ.
ಅವಳ ಬಿಳಿ ಮೈಯ ಗಂಡನನ್ನು ಕಂಡಾಗ ‘ಬೆಟ್ಟದ ಜೀವ’ದ ಗೋಪಾಲಯ್ಯ ಇವರೇ ಇರಬೇಕು ಅಂತೆನಿಸುವಷ್ಟು ಮನಸ್ಸು ಆ ಮನುಷ್ಯನನ್ನು ತೂಕಕ್ಕೆ ಹಾಕುತ್ತದೆ.ಹಾಗೇ ಸಾಗಿದರೆ,ಮತ್ತಷ್ಟು ಬೆಳೆಯುವ ಕಾಡಲ್ಲಿ..ವಿಚಿತ್ರ ಎನ್ನಿಸುವ ಕತೆಗಳೆಲ್ಲಾ ತಂತಾನೇ ಮೈ ತಳೆದು ಕೊಳ್ಳುತ್ತದೆ..ಜಗತ್ತಲ್ಲಿ ಹೆಜ್ಜೆಹೆಜ್ಜೆಗೂ ಕತೆ ಇದೆ. ಅಚ್ಚರಿ ಇದೆ.ಅದನ್ನು ದಕ್ಕಿಸಿಕೊಳ್ಳಬೇಕಾದರೆ ಆ ರೋಮಾಂಚತೆಯನ್ನು ಪ್ರತ್ಯಕ್ಷವಾಗಿ ಅನುಭವಿಸಬೇಕು.ಆಗ ರೂಪುಗೊಳ್ಳುವ ಕಥಾ ಪಾತ್ರಗಳು,ನೆಮ್ಮಧಿಯೀಯುವ ಪ್ರಸಂಗಗಳು ಅಮೋಘ.
ಘಟ್ಟದ ಅಂಚಿನ ದಾರಿಯಲ್ಲಿ ನುಸುಳಿ ಬರುವ ಬಸ್ಸಿನ ಡ್ರೈವರಣ್ಣನಿಗೆ ಮಲ್ಲಿಗೆ ಮಾರಿ ,ಬದುಕಿನ ಸಂಭ್ರಮ ಪೋಣಿಸಿಕೊಳ್ಳುವ ಮುಗುದೆ,ನಗರದ ಬಿಸಿ ಬೇಗೆಯನ್ನೇ ಈ ವರೆಗೆ ನೋಡದೇ ಒಂಟಿಯಾಗೇ ಅಲೆಯುವ ಪೋರ,ಬುಟ್ಟಿ ಹೆಣೆಯೂದರಲ್ಲೇ ಧ್ಯಾನಸ್ಥಳಾಗುವ ಹಣ್ಣು ಮುದುಕಿ,ಕಾಡ ಗುಡಿ ದೇವರಿಗೆ ಶೃದ್ದೆಯಿಂದ ಅಭಿಷೇಕ ಮಾಡುವ ಅರ್ಚಕ,ಇವರೆಲ್ಲರೂ ಊರು ಸುತ್ತುವ ಕನಸಿಜನ ಕಣ್ಣಲ್ಲಿ..ಒಂದೊಂದಾಗಿ ಪಾತ್ರ ಪೋಷಣೆ ಮಾಡುತ್ತಾ.ಒಬ್ಬರನ್ನೊಬ್ಬರು ಸ್ನೇಹಿತರಂತೆ ಮಾತಾಡುತ್ತಾ ಕೂತುಬಿಡುತ್ತಾರೆ ಮುಂದೆ ಅವನ ಕೈಯಲ್ಲಿ ಕತೆಯಾಗಲು.
ಆ ಬರೆಹಗಾರ ಅವರ ಅಂತರಂಗದ ವೇದನೆಗಳಿಗೆ ಮುಖಾಮುಖಿಯಾಗುತ್ತಾ,ಅವರ ರಹಸ್ಯ ಕಥನಗಳನ್ನು ಕೇಳಿ ತಲ್ಲೀನರಾಗಿಬಿಡುತ್ತ ,ನಿಧಿ ದಕ್ಕಿದಂತಾಡಿ ಧನ್ನೋಸ್ಮಿ..ಧನ್ನೋಸ್ಮಿ ಅನ್ನುತ್ತಾನೆ ಕತೆ ದಕ್ಕಿದಕ್ಕೆ..ಕಥಾಗಾರ ಈ ವೇಳೆ ಪಡೆಯುವಷ್ಟು ಸಾರ್ಥಕತೆ..ಹುಮ್ಮಸ್ಸು..ಆನಂದ ಪಾವನ ತೀರ್ಥವೇ ಅನ್ನಬೇಕು.ಲೇಖನಾದವನಿಗೆ ಸಾಮಾನ್ಯ ಜನಗಳ ಅಂತರಾಳವನ್ನು ಹೊಕ್ಕುವ ಹಂಬಲಿಕೆ ಇದ್ದೇ ಇರಬೇಕು ಎಂದು ಹಿರಿಯ ಕತೆಗಾರರು ಹೇಳುತ್ತಲೇ ಇರುತ್ತಾರೆ.
ಸಮುದ್ರ ತೀರದಲ್ಲಿ ಬಂಗುಡೆ ಮೀನಿನ ಸಾರು ಮಾಡುತ್ತಾ,ಮಾರುವ ಆ ಹೆಂಗಸು.ಗೂಡಂಗಡಿಯಲ್ಲಿ ಶಕ್ತಿಬೀಡಿ ಎಳೆಯುತ್ತಾ..ಪ್ರಸ್ತುತ ವಿದ್ಯಮಾನಗಳ ಚಟ್ನಿ ಬೆರೆಸಿ ಊಟ ಮಾಡುವ ಪ್ರಾಯದ ಗಂಡಸು,ಬೆಟ್ಟದ ಗುಡಿಯಲ್ಲಿ ಕೂತು.-‘ಮಗ ನನ್ನನ್ನು ಬಿಟ್ಟು ಹೋದ ಅಂತ ಅಳುವ ಆ ಮುಪ್ಪಿನ ಜೀವ. ಇವರೆಲ್ಲರೂ ತಿರುಗಾಡುವ ಕತೆಗಾರನಲ್ಲಿ ವಿಭಿನ್ನವಾಗಿ ಕೂತಾಗಲೇ..ಅಲ್ಲೊಂದು ಕತೆಯೋ?ಜೀವನ ಪ್ರೀತಿಯೋ.ಪುಟಿಯುತ್ತದೆ.
ಇವರೆಲ್ಲರೂ ಸಾಮಾನ್ಯರಿಗೆ ಹಾಳು ಕಸವಾದರೂ..ಕತೆಗಾರನಿಗೆ ಇವರೇ ಚಿನ್ನ.ಇವರೆಲ್ಲರ ಬದುಕಿನ ರೋಮಾಂಚಕತೆಗಳೋ?,ಅಲವತ್ತುಕೊಳ್ಳುವ ವೇದನೆಗಳೋ?ಕತೆಗಾರನ ಎದೆಯ ಪಿಟೀಲಿನಲ್ಲಿ ಸೇರಿಕೊಂಡಾಗ ಮುತ್ತಿನಂತಹ ಹಾಡಾಗುತ್ತದೆ..ಅವರ ಬದುಕು,ಲಯ,ಸಂಭ್ರಮ,ಸುಖ,ತ್ರಾಸ ಎಲ್ಲವೂ ಕತೆಗಾರನಲ್ಲಿ ಬೆಳೆದು..ಓದುವವನ ಎದೆಯಲ್ಲಿ ಹೊಳೆಯುವ ಚುಕ್ಕಿಗಳಾಗುತ್ತವೆ.
ಜಗತ್ತೆಂದರೆ ಸಾಹಿತ್ಯ.ಜಗತ್ತೆಂದರೆ ಅಣಿಯಿಲ್ಲದ ಕಾದಂಬರಿ..ಇಲ್ಲಿ ಕಣ್ಣು ಮಿಣುಕಿಸಿದಾಗಲೆಲ್ಲಾ ಎಷ್ಟೊಂದು ಸಂಭ್ರಮದ ನಕ್ಷತ್ರ?ದುರಂತದ ಹಾಡುಗಳು. ಕೃಷ್ಣನ ಕೊಳಲಿನ ಹಾಡಿನ ಹಾಗೇ ಚಿಗುರುಗೊಳ್ಳುತ್ತಾ, ಮತ್ತೊಮ್ಮೆ ಸ್ವರ ನಿಲ್ಲಿಸುತ್ತಾ ತೃಪ್ತಿಗೊಳಿಸುವ ಹಾಗೆ.ಇದಕ್ಕೆಲ್ಲಾ ಹಂಬಲಿಸುತ್ತಾ ಸಾಗುವ ಕತೆಗಾರನಿಗೆ ಈ ಜಗತ್ತನ್ನು ಪ್ರೀತಿಸುವ ಗುಣ ಇದ್ದರೆ, ಜನ ಸಾಮಾನ್ಯನ ಜತೆ ಬೆರೆಯುವ ಖುಷಿ ಇದ್ದರೆ,ಮುಂದೆಲ್ಲವೂ ಅವನ ಲೇಖನಿಯಿಂದ ವಿಸ್ಮಯವಾಗಿ ಹರಿಯುತ್ತದೆ ಎನ್ನುವುದಂತೂ ದಿಟ.
ಹೌದು ಕತೆಗಳಿರೂದು ಸಾಮಾನ್ಯನ ತುಟಿಯಂಚಲ್ಲಿ.ಬದುಕಿನ ರಹಸ್ಯ ಮಾತುಕತೆಯೊಂದಿಗೆ ಬೇಯುವ ದಾಸಣ್ಣನ ಕ್ಯಾಂಟಿನ್ನಿನಲ್ಲಿ.ತೆಂಗಿನ ಗರಿಗಳ ತಟ್ಟಿ ಮಾಡಿ..ದಿನ ನೋಡುವ ಮುಪ್ಪಿನ ಹೆಂಗಸಿನ ಸರಿದು ಹೋದ ದಿನಗಳಲ್ಲಿ. ಕುವೆಂಪು,ಮಾಸ್ತಿ,ಕಾರಂತರುಗಳಿಗೆ ಇಂತಹ ಪಾತ್ರದಾರಿಗಳೇ ಚಿನ್ನದಂತೆ ಕಂಡದ್ದು ಇದೇ ಕಾರಣಕ್ಕೆ.ಕಾರಂತರಂತೂ ನಿಜ ಬದುಕಿನ ಪಾಠಶಾಲೆಯಲ್ಲಿ ಸಾಯುವವರೆಗೂ ಕಲಿತರು.ಜನ ಸಾಮಾನ್ಯನ ಕನಸನ್ನು ಅರಿಯಲು ಹಂಬಲಿಸಿದರು.
ಸುಮ್ಮನೆ ಕಲ್ಪನೆಯಲ್ಲೇ ಕಾಡನ್ನು ಕೊರೆಯಬಹುದಿತ್ತು ಆದರೆ..ಕಾರಂತರು ಕಾಡು ಸುತ್ತುತ್ತಾ ನೀರ ತೊರೆಗಳಲ್ಲಿ ಕರಗಿದರು. ಗೋಪಾಲಯ್ಯನವರಂತಾ ನೂರು ಜನರನ್ನು ಮಾತಾಡಿಸಿದರು. ಬರೀ ಅಕ್ಷರಗಳಲ್ಲೇ ಜಾರದೇ,ವಾಸ್ತವದ ಜೀವನ ಪಾಠಶಾಲೆಯಲ್ಲಿ ಕಲಿಯುತ್ತಾ ಬಲಿತರು.ಸಮುದ್ರವನ್ನೇ ನೋಡದೇ ಸಮುದ್ರ ಹಾಗೇ..ಹೀಗೆ.. ಅಂತೆಲ್ಲ ಹೇಳುವುದಲ್ಲ ,ಸಮುದ್ರಕ್ಕೆ ಇಳಿಯಬೇಕು ಎನ್ನುವ ತತ್ವ ಕಾರಂತರದ್ದಾಗಿತ್ತು.ಅದಕ್ಕೆ ಇವತ್ತೂ ಅವರ ಕಾದಂಬರಿ ಓದುವಾಗ ಅದು ಕಟ್ಟು ಕತೆಯಂತೆ ಭಾಸವಾಗದೇ,ನಮ್ಮ ಸುತ್ತಲಿನ ಕತೆಯಂತೆಯೇ ತೋರುತ್ತದೆ.
ಅವರು ಕಾಡುಜಾಡುಗಳಲ್ಲಿ ಸುತ್ತಿರದೇ ಇದ್ದರೆ ಅವರಿಗೆ ಸರಸಮ್ಮನ ಸಮಾಧಿ ಸಿಕ್ಕುತ್ತಿತ್ತಾ? ಆ ಬೆಳ್ಯಕ್ಕನ ಪ್ರೇತ ಸಿಗುತ್ತಿತ್ತಾ? ಗೋರೂರು ರಾಮಸ್ವಾಮಿ ಅಯ್ಯಂಗಾರರು ಹೇಮಾವತಿಯನ್ನೆ ನೋಡದೇ ಹೇಮಾವತಿ ಬರೆದರಾ?,-‘ಅತ್ತಾರೆ ಅತ್ತು ಬಿಡು ಹೊನಲು ಬರಲಿಅಂತ ಕವಿ ಬೇಂದ್ರೆಯೊಳಗ ಕವಿತಿ ಹುಟ್ಟಿದ್ದು, ಅವಳ ತುಟಿಯಂಚಲ್ಲಿ ಇನ್ನೇನು ಜಾರಲಿದ್ದ ಬೇಸರ ನೋಡಿ ತಾನೇ.-‘ನಾನು ಬಡವಿ ಆತ ಬಡವ’ಎಂದದ್ದು ಬಡತನ ಅನ್ನ ನುಂಗಿಯೇ ಅಲ್ಲವಾ?.
ತೇಜಸ್ವಿಯವರಿಗೆ ಎಂಷ್ಟ,ಮಂದಣ್ಣ,ಕಿವಿ,ಎಲ್ಲರೂ ನಿಜ ಜೀವನದಲ್ಲಿ ಮುಖಾಮುಖಿಯಾಗಿದ್ದರಿಂದ ತಾನೇ ಅವರು ಕತೆಯಾಗಿ ಬೆಳೆದದ್ದು. ಇವರ ಹಾಗೇ ಬರಹಗಾರನಿಗೆ ಬದುಕೇ ಪಾಠವಾದಾಗ,ತನ್ನೆದುರು ನಡೆಯುವ ಸಾಮಾನ್ಯ ಜನರ ಮದುವೆಯೂ,ದುಗುಡವೂ,ಜಂಜಡವೂ ಕತೆಯಾದಾಗ ಅದರ ವರ್ಚಸ್ಸೇ ಬೇರೆ.ಅನುಭೂತಿಯೇ ಬೇರೆ.
ಸಾಹಿತಿಯಾದವನು ಸಾಮಾನ್ಯನೊಂದಿಗೇ ಸಾಮಾನ್ಯನಾಗುತ್ತಲೇ ಹೋದಾಗ,ಬದುಕಿನ ನೈಜ ಪಾಠಶಾಲೆಯಲ್ಲಿ ಕತೆಗಾರ ಕಲಿತಾಗ,ಅವನ ಕತೆಯೂ ನೈಜವಾಗಿ ಬಲಿತುಕೊಳ್ಳುತ್ತದೆ.ಸಾಹಿತಿಗೆಸಾಮಾನ್ಯ ಜನರ ಪಾಡೇ ಹಾಡಾಗಬೇಕು,ಅವನು ಸಾಮಾನ್ಯನೊಂದಿಗೆ ಬೆರೆಯಬೇಕು ಹಾಲು-ಸಕ್ಕರೆಯಂತೆ.ಆಗಲೇ ಹಾಲಿಗೆ ಸಕ್ಕರೆಯ ರುಚಿಯೂ,ಸಕ್ಕರೆಗೆ ಹಾಲಿನ ರುಚಿಯೂ ದಕ್ಕುತ್ತದ.
ಆಗ ಕತೆ ಸಿಕ್ಕುತ್ತದೆ.ಕಷ್ಟ ಕತೆಯಾಗುತ್ತೆ.ಮಾತು ಗೀತೆಯಾಗುತ್ತದೆ.ಒಲುಮೆ ಕವನವಾಗುತ್ತದೆ.ಸುಖ ರೂಪಕವಾಗುತ್ತದೆ.’ಜೀವನನ್ನೇ ಸೀತಾನದಿಯ ಪ್ರವಾಹಕ್ಕೆ ಹೋಲಿಸಿ ,ಅದರ ಮಿತದೂರದ ಯಾತ್ರೆಯನ್ನು ಗಮನಿಸಿದ್ದಾದರೂ-‘ಬಾಳಿನ ಬೆಡಗು, ಭವ್ಯತೆ, ರೌದ್ರ, ಕ್ಲೇಶ, ಮೊದಲಾದ ಅಸಂಖ್ಯ ಆಘಾತಗಳ ಉಪಮೆ ಒಂದೊಂದಾಗಿ ನಮ್ಮ ಕಣ್ಣಿಗೆ ಹೊಳೆದೀತು..’ಎನ್ನುವ ಕಾರಂತರ ಮಾತು ಈಗ ನೆನಪಾಗುವುದು ಇದಕ್ಕೇ..









0 Comments