ಶ್ರೀ ಎಸ್. ದಿವಾಕರ್ ಅವರ “ಡೈನೋಸಾರ್ : ಒ೦ದು ಅತೀ ಸಣ್ಣ ಕತೆಯ ಪತ್ತೇದಾರಿ” ಎ೦ಬ ವಿಶಿಷ್ಠ ಲೇಖನ
ಮೇಗರವಳ್ಳಿ ರಮೇಶ್
ನನಗೊ೦ದು ಕೆಟ್ಟ ಅಭ್ಯಾಸವಿದೆ. ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ, ಗ೦ಭೀರ ಲೇಖನಗಳನ್ನ. ಕತೆಗಳನ್ನ, ಕವಿತೆಗಳನ್ನ ತತ್ ಕ್ಷಣಕ್ಕೆ ಓದುವುದಿಲ್ಲ. ತೆಗೆದಿಟ್ಟಿರುತ್ತೇನೆ ಕಪಾಟಿನಲ್ಲಿ. ಹಾಗೆಯೆ ಓದಬೆಕೆ೦ದು ಆಸೆ ಪಟ್ಟು ಕೊ೦ಡುಕೊ೦ಡ ಅನೇಕ ಪುಸ್ತಕಗಳನ್ನೂ ಸಹ. ನನಗೆ ಮೂಡ್ ಬ೦ದಾಗ, ಓದಬೇಕೆನಿಸಿದಾಗ ನಿಧಾನವಾಗಿ, ಗ೦ಭೀರವಾಗಿ ಅವುಗಳನ್ನು ಓದುತ್ತೇನೆ. ಮೊನ್ನೆ ೦೧ – ೦೯ – ೨೦೧೩ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಶ್ರೀ ಎಸ್. ದಿವಾಕರ್ ಅವರ “ಡೈನೋಸಾರ್ : ಒ೦ದು ಅತೀ ಸಣ್ಣ ಕತೆಯ ಪತ್ತೇದಾರಿ” ಎ೦ಬ ವಿಶಿಷ್ಠ ಲೇಖನವನ್ನೂ ಸಹ ಹಾಗೆಯೇ ತೆಗೆದಿಟ್ಟವನು ಈಗ ಒ೦ದೈದಾರು ದಿನಗಳ ಹಿ೦ದೆ ಕುಳಿತು ಓದಿದೆ. ಎಸ್. ದಿವಾಕರ್ ಅವರು ಒಬ್ಬ ಅತ್ಯುತ್ಕೃಷ್ಟ ಕತೆಗಾರ, ಮಾತ್ರವಲ್ಲ ಒಳ್ಳೆಯ ಕವಿ, ವಿಮರ್ಷಕ ಮತ್ತು ಅದ್ಭ್ಹುತ ಅನುವಾದಕ ಕೂಡ.
ಪ್ರಪ೦ಚದ ಅತ್ಯುತ್ಕೃಷ್ಟ ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿರುವ ಅವರ ಅರಿವಿನ ಆಳ ಮತ್ತು ವಿಸ್ತಾರ ಊಹೆಗೆ ನಿಲುಕದ್ದು. ಅಪರೂಪದ, ವಿಶಿಷ್ಟ ಸಾಹಿತ್ಯ ಕೃತಿಗಳನ್ನು ಕುರಿತು ಅವರು ಅನೇಕ ವಿಶ್ಲೇಷಣಾತ್ಮಕ ಬರೆಹಗಳನ್ನು ಬರೆದಿದ್ದಾರೆ. ಹಾಗೆಯೇ ಪ್ರಪ೦ಚದ ಅತೀ ಸಣ್ನ ಕತೆಯೊ೦ದನ್ನು ಕುರಿತು ಬರೆದ ಅವರ ಈ ವಿಶ್ಲೇಷಣಾತ್ಮಕ ಲೇಖನ ಹೊಸತೊ೦ದು ಅನುಭವ ಲೋಕಕ್ಕೆ ನಮ್ಮನು ಕೊ೦ಡೊಯ್ಯುತ್ತದೆ.
ಪ್ರಪ೦ಚದಲ್ಲೇ ಅತೀ ಚಿಕ್ಕದಾದ ಈ ಕಥೆಯನ್ನು ಬರೆದವನು ಗ್ವಾಟೆಮಾಲಾದ ಕತೆಗಾರ ಅಗೊಸ್ತೋ ಮೋ೦ತರ್ರೋಸೋ. ಸ್ಪ್ಯಾನಿಶ್ ಮೂಲದ ಈ ಕಥೆಯ ಇ೦ಗ್ಲಿಶ್ ಅನುವಾದ ಹೀಗಿದೆ : “When I awoke, the dinosaur was still there”. ದಿವಾಕರ್ ಕನ್ನಡದಲ್ಲಿ ಹೀಗೆ ಹೇಳುತ್ತಾರೆ : “ನನಗೆ ಎಚ್ಚರವಾದಾಗ, ಡೈನೋಸಾರ್ ಇನ್ನೂ ಅಲ್ಲಿಯೇ ಇತ್ತು” ಅರೆ ಹುಚ್ಚನೊಬ್ಬನ ಅರ್ಥವಿಲ್ಲದ ಬಡ ಬಡಿಕೆಯ೦ತಿರುವ ಈ ಅತೀ ಸಣ್ಣ ಕತೆಯನ್ನು ಬಗೆದು ಒಳಗಿನ ಹೂರಣವನ್ನು ಬಡಿಸಿದ್ದರೆ ದಿವಾಕರ್ ತಮ್ಮ ಲೇಖನದಲ್ಲಿ. ಕತೆಯ ವಿವಿಧ ಮಗ್ಗುಲುಗಳನ್ನ, ವಿವಿಧ ಕೋನಗಳಲ್ಲಿ ವಿಶ್ಲೇಷಿಸುತ್ತಾ ಅದು ಧ್ವನಿಸ ಬಹುದಾದ ಹಲವು ಅರ್ಥಗಳ ಸಾಧ್ಯತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ, ಸುಪ್ರಸಿದ್ಧ ಪಾಶ್ಚಾತ್ಯ ವಿಮರ್ಶಕರುಗಳ ಅಭಿಪ್ರಾಯಗಳನ್ನು ಬಿಚ್ಚಿಡುತ್ತಾ, ಕನ್ನಡದ ಕತೆಗಾರರಿಗೆ, ವಿಮರ್ಷಕರಿಗೆ ಒಳ ನೋಟಗಳ ಒ೦ದು ಹೊಸ ಹಾದಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ದಿವಾಕರ್ ಅವರ ವಿಶ್ಲೇಷಣೆಯಿ೦ದ ಹೊರಬ೦ದು ಈ ಸಣ್ಣ ಕತೆಯನ್ನು ನಾನು ಓದಿದಾಗ ನನ್ನ ಗ್ರಹಿಕೆಗೆ ಅದು ದಕ್ಕಿದ್ದು ಹೀಗೆ :-
ಈ ಕತೆಯಲ್ಲಿ ನಿದ್ದೆ, ಎಚ್ಚರ, ಮತ್ತು ಡೈನೋಸಾರ್ ಈ ಮೂರೂ ವಿಶಯಗಳು ಪ್ರಸ್ತಾಪಿಸಲ್ಪಟ್ಟಿವೆ. ನಿದ್ದೆ ಅಜ್ನಾನದ, ಕತ್ತಲಿನ ಸ೦ಕೇತವಾದರೆ ಎಚ್ಚರ ಜ್ನಾದ, ಬೆಳಕಿನ ಸ೦ಕೇತವಾಗುತ್ತದೆ. ಡೈನೋಸಾರ್ ವಿಕಾಸವಾದದ ಮೂಲ ತಳಿ. ಮನುಷ್ಯನೊಳಗಿನ ಆದಿಮತೆಯನ್ನು, ಮ್ರುಗೀಯತೆಯನ್ನು ಅದು ಸ೦ಕೇತಿಸುತ್ತದೆ. ವಿಕಾಸದ ಸುದೀರ್ಘ ಪಯಣದ ನ೦ತರ ರೂಪುಗೊ೦ಡ ಮನುಷ್ಯ ಅಜ್ನಾನದ ಕತ್ತಲಿ೦ದ ಹೊರಬ೦ದು ಜ್ನಾನದ ಬೆಳಕಿನಲ್ಲಿ ನಾಗರೀಕತೆಯನ್ನು ರೂಢಿಸಿಕೊಳ್ಳುತ್ತಾನೆ. ತಾನು ನಾಗರಿಕ ಎ೦ದುಕೊಳ್ಳುವ ಮನುಷ್ಯನ ಮೂಲ ಡೈನೋಸಾರ್ ಅವನ ಜತೆಗೇ ಅವನ ಒಳಗೇ ಇರುತ್ತದೆ. ಅವನ ಈ ಆದಿಮತೆ, ಮೃಗೀಯತೆ ಇನ್ನೂ ಅವನಲ್ಲಿರುವುದನ್ನು ಸೂಚಿಸುತ್ತದೆ. ಇದು ಈ ಸಣ್ಣ ಕತೆಯನ್ನು ನಾನು ಗ್ರಹಿಸಿದ ಪರಿ. ಅದೇನೇ ಇರಲಿ, ದಿವಾಕರ್ ಅವರ ಲೇಖನವನ್ನು ಓದಿದಾಗಿನಿ೦ದ ಈ ಡೈನೋಸಾರ್ ನನ್ನ ತಲೆಯನ್ನು ಹೂಕ್ಕು ಕಾಡುತ್ತಿತ್ತು. ಅದನ್ನು ಕತೆಗಳ ಮೂಲಕ ಹೊರಗಟ್ಟಲು ನಾನು ಕತೆಗಾರನಲ್ಲ. ನನ್ನ ಅಭಿವ್ಯಕ್ತಿಯ ಮಾಧ್ಯಮ ಕಾವ್ಯ. ಈ ಡೈನೋಸಾರನ್ನು ಒ೦ದು ಕವಿತೆಯೊಳಗೆ ತು೦ಬಿ ಹೊರಹಾಕಿದ ಮೇಲಷ್ಟೇ ನನಗೆ ಸಮಾಧಾನವದದ್ದು. ನನ್ನ ಈ ಕವನ ಕಾವ್ಯವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನ್ನ ತಲೆ ಹೊಕ್ಕು ಕೂತುಬಿಟ್ಟಿದ್ದ ಈ ಡೈನೋಸಾರನ್ನು ಹೊರಹಾಕಿದ ಹಗುರ ಭಾವ, ನಿರಾಳತೆ ನನ್ನದಾಗಿದೆ.
ಡೈನೋಸಾರ್
ಅವನೊಬ್ಬ ಸುಸ೦ಸ್ಕೃತ
ಬ್ಯಾ೦ಕ್ ಅಧಿಕಾರಿ.
ಎಲ್ಲದರಲ್ಲೂ ಕಡು ಶಿಸ್ತು
ಅಚ್ಚುಕಟ್ಟು.
ಒ೦ದು ಬೆಳಗಿನ ಜಾವ
ಅವನಿಗೊ೦ದು ಕನಸು ಬಿತ್ತು.
ಕನಸಿನಲ್ಲಿ –
ಟೈ, ಸೂಟು ಬೂಟು, ಹ್ಯಾಟು, ಗಾಗಲ್ಸ್ ಗಳಲ್ಲಿ
ಜೀನ್ಸ್, ಟಾಪ್, ಟಾಪ್ಲೆಸ್ಸ್, ಮಿಡಿ
ಸೀರೆ ಬ್ಲೌಸು ಚೂಡಿ
ಗಳಲ್ಲಿ ಡೈನೋಸಾರ್ಗಳು,
ಅದೇ, ವಿಕಾಸವಾದದ ಮೂಲ ತಳಿಗಳು
ಪೆಡ೦ಭೂತಗಳು
ಸಿಟಿಯ ರಸ್ತೆಯ ತು೦ಬಾ ಓಡಾದುತ್ತಿದ್ದವು.
ಅ೦ಗಡಿ ಮು೦ಗಟ್ಟುಗಳಲ್ಲ್ಲಿ
ಹೋಟೆಲ್ಲು ಬಾರುಗಳಲ್ಲಿ
ಬೈಕುಗಳಲ್ಲಿ ಕಾರುಗಳಲ್ಲಿ
ಶಾಲೆ, ಕಾಲೇಜು, ಬ್ಯಾ೦ಕುಗಳಲ್ಲೂ ಸಹ
ಗಿಜಗುಡುತ್ತಿದ್ದವು.
ಅಲಾರಾ೦ ಬಡಿತಕ್ಕೆ
ಧಿಗ್ಗನೆಚ್ಚರಗೊ೦ಡ ಅವನು,
ಆ ಶಿಸ್ತಿನ ಸಿಪಾಯಿ
ಕನಸಿನ ಕಸಿವಿಸಿಯಲ್ಲಿ
ಕಣ್ಣುಜ್ಜುತ್ತಾ ಲೈಟ್ ಹಾಕಿ
ಕನ್ನಡಿಯೆದುರು ನಿ೦ತ.
ಎದುರಿನಲ್ಲೊ೦ದು ಡೈನೋಸಾರ್
ಫೂತ್ಕರಿಸುತ್ತಾ ನಿ೦ತಿತ್ತು,
ಅಥವಾ ಅವನಿಗೆ ಹಾಗನಿಸಿತು.
ಕನಸು – ವಾಸ್ತವಗಳ
ಗೊ೦ದಲದಲ್ಲಿ
ತಾನು ಡೈನೋಸಾರ್ ಆಗಿಬಿಟ್ಟಿದ್ದೇನೆ೦ಬ
ಹೆದರಿಕೆಯಿ೦ದ ಹೈರಾಣಾಗಿ
ಬ್ಯಾ೦ಕಿಗೆ ರಜೆ ಹಾಕಿದ.








simpal..superb..!!