ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಣ್ಮರೆಯಾಗುತ್ತಿರುವ ಟಾಂಗಾ ಸವಾರಿ’ – ಎಸ್ ಬಿ ಜೋಗೂರ್

ಡಾ ಎಸ್ ಬಿ ಜೋಗೂರ್

ಈಚೆಗೆ ನನ್ನ ಸಹೋದರಿಯ ಮಗನ ಮದುವೆಗೆ ಬಿಜಾಪುರಕ್ಕೆ ತೆರಳಿದ್ದೆ. ಅಪ್ಪ-ಅವ್ವ ಇಬ್ಬರೂ ತೀರಿದ ಮೇಲೆ ಹುಟ್ಟ್ಟೂರು ಸಿಂದಗಿ ಮತ್ತು ಬಿಜಾಪುರಕ್ಕೆ ತೆರಳುವುದು ತುಸು ಅಪರೂಪ ಎನ್ನುವಂತಾಗಿದೆ. ಮದುವೆ, ನಾಮಕರಣ, ಸೀಮಂತಗಳನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಳ್ಳುವ ನನಗೆ, ಆ ಮದುವೆಯನ್ನು ತಪ್ಪಿಸಿಕೊಳ್ಳಲು ಯಾವುದೇ ನೆಪಗಳನ್ನು ಮುಂದೆ ಮಾಡುವಂತಿರಲಿಲ್ಲ. ಹೀಗಾಗಿ ಎರಡು ದಿನ ಮುಂಚೆಯೇ ಹಾಜರಾಗಿದ್ದೆ. ಏನಾದರೂ ಮಾಡತಿರು ತಮ್ಮ ಎನ್ನುವ ನನ್ನ ಮನಸಿಗೆ ಆ ಮದುವೆ ಮನೆಯಲ್ಲಿಯ ಯಾವ ಕೆಲಸಗಳೂ ಒಗ್ಗಲಿಲ್ಲ ಹೀಗಾಗಿ ಆ ದಿನ ಬೆಳ್ಳಂಬೆಳಿಗ್ಗೆ 10 ವರ್ಷದ ನನ್ನ ಮಗನನ್ನು ಕರೆದುಕೊಂಡು ಬಿಜಾಪುರದ ಪ್ರಸಿದ್ಧ ಸ್ಮಾರಕಗಳನ್ನು ತೋರಿಸಲೆಂದು ನಡೆದೆ. ಬಿಜಾಪುರ ಜಿಲ್ಲೆಯವನೇ ಆದ ನನಗೆ ಬಾದಾಮಿ, ಐಹೊಳೆ, ಪಟ್ಟದಕಲ್ಲು ಪ್ರದೇಶಗಳನ್ನು ನೋಡಲು ನನಗೆ 44 ವರ್ಷ ಬೇಕಾಯಿತು. ಕಳೆದ ವರ್ಷವಷ್ಟೇ ಈ ಸ್ಥಳಗಳನ್ನು ನೋಡಿದೆ. ಗೋಲ್ ಗುಂಬಜ್ ದಿಂದ ಶುರು ಮಾಡಿ ಜಾಮೀ ಮಸೀದೆ, ಇಬ್ರಾಹಿಂ ರೋಜಾ, ಉಪಲೀ ಬುರಜ್, ಮುಲ್ಕ್ ಎ ಮೈದಾನ್ ತೋಪ್ ಹೀಗೆ ಒಂದು ಸುತ್ತು ಹಾಕುವುದೆಂದು ಯೋಚಿಸಿ ನಡೆದೆ. ನಾನು ಅದೆಷ್ಟು ಬಾರಿ ಗೋಲ್ ಗುಂಬಜ್ ಹತ್ತಿ ಇಳಿದಿರುವೆನೋ ನೆನಪಿಲ್ಲ. ಆದರೆ ನನ್ನ ಮಗನಿಗೆ ಮಾತ್ರ ಅದು ಮೊದಲ ಬಾರಿ ಹೀಗಾಗಿ ಅವನು ಅತ್ಯಂತ ಉತ್ಸಾಹದಿಂದ ಹತ್ತಿ ಇಳಿದ. ಹಾಗೆ ಇಳಿಯುವಾಗ ಅವನ ಪ್ರಶ್ನೆಗಳು ನೂರಾರು.. ಅವೆಲ್ಲಕ್ಕೂ ನಾನು ಸಮರ್ಪಕವಾಗಿ ಉತ್ತರಿಸಿದೆ ಎನಿಸಿಲ್ಲ. ನಾನು ಕೂಡಾ ಆದಿಲ್ ಶಾಹಿಗಳ ಕಾಲದಲ್ಲಿ ಬದುಕಿದ್ದವನಲ್ಲ. ಅಲ್ಲಿರುವ ಕೆಲವು ಮಾಹಿತಿಗಳ ಮೂಲಕ ಅವನಿಗೆ ಉತ್ತರ ನೀಡಿದ್ದೆ.
ಗೋಲಗುಂಬಜ್ ದಿಂದ ನಮ್ಮ ಯಾತ್ರೆ ಆರಂಭವಾಗಬೇಕು ಅದಕ್ಕಾಗಿ ಒಂದು ಟಾಂಗಾ ಗಾಡಿಯನ್ನು ಗೊತ್ತು ಪಡಿಸುವುದು ಒಳ್ಳೆಯದು. ಎಂದು ಅಲ್ಲಿರುವ ಎಂಟತ್ತು ಗಾಡಿಗಳನ್ನು ನೋಡಿ, ಆ ಎತ್ತರ ಕುದುರೆ ಯಾರದು ಎನ್ನುತ್ತಿರುವಂತೆ ಒಬ್ಬಾತ ನಮ್ಮ ಬಳಿಗೆ ಬಂದು ‘ಸಾಬ್ ಎಲ್ಲಿಗೆ ಹೋಗಬೇಕು..? ಬಿಜಾಪುರ ನೋಡಬೇಕಾ..?’ ಅಂದ. ಹಾಗೇನಿಲ್ಲ ನಾನು ಇಲ್ಲಿಯವನೇ.. ನನ್ನ ಮಗನಿಗೆ ತೋರಿಸಬೇಕಿದೆ. ಒಂದು ಸುತ್ತು ಎರಡು ಮೂರು ಇಮಾರತು ಅಂದೆ. ಅವನು ಬರ್ರಿ ಸಾರ್ ಎನ್ನುತ್ತ ತನ್ನ ಟಾಂಗಾ ಗಾಡಿ ಬಳಿ ಬಂದ. ಆದರೆ ಆ ಕುದುರೆ ತುಸು ಚಿಕ್ಕದು. ಪಾಪ..! ಅದರ ಮೇಲೆ ನಮ್ಮ ಭಾರ ಹಾಕೂದು ಬೇಡ ಅದಕ್ಕೆ ಸರಿಯಾಗಿ ಓಡಲಿಕ್ಕೆ ಆಗುತ್ತೋ.. ಇಲ್ಲೋ ಎಂದು ಅನುಮಾನಿಸಿ, ಪಕ್ಕದಲ್ಲಿದ್ದ ಎತ್ತರವಾಗಿದ್ದ, ಗಟ್ ಮುಟ್ಟಾಗಿರುವ ಕುದುರೆಯ ಕಡೆ ನೋಡಿ, ಇದು ಯಾರದ್ದು..? ಅಂದೆ. ಅದಕ್ಕವನು ‘ಸಾಬ್ ನೀವೇನು ಕುದುರೆ ಖರೀದಿ ಮಾಡ್ತೀರಾ..? ಎರಡು ಮೂರು ಪ್ಲೇಸ್ ನೋಡ್ತೀರಿ ಅಷ್ಟೇ.. ಕುದುರೆ ಸಣ್ಣದು ಅಂತ ಯೋಚನೆ ಮಾಡಬ್ಯಾಡ್ರಿ ಹತ್ತಿ ನೋಡ್ರಿ’ ಅಂದ.
ನನಗೂ ಹೌದಲ್ಲ..! ನಾನೇನು ಕುದುರೆಯನ್ನು ಖರೀದಿಸುತ್ತಿರುವೆನೆ..? ಇಲ್ಲವಲ್ಲ.. ಎಂದುಕೊಂಡು ಹತ್ತಿ ಕುಳಿತೆ. ಹೀಗೆ ಟಾಂಗಾ ಗಾಡಿಯಲ್ಲಿ ಹೋಗುವುದೇ ಒಂದು ಮಜಾ.. ಆದರೆ ಈಗ ಬಿಜಾಪುರದಲ್ಲಿ ಟಾಂಗಾ ಕುದುರೆಗಳೇ ಅಪರೂಪವಾಗುತ್ತಿವೆ ಅವನ ಹೆಸರು ಮಶಾಕಸಾಬ್ ಅವನೇ ಹೇಳುವಂತೆ ಸಾಬ್ ಈ ರಿಕ್ಷಾಗಳು ಬಂದ ಮ್ಯಾಲೆ ಟಾಂಗಾಗಳನ್ನ ಯಾರೂ ಕೇಳವರು ಇಲ್ಲದಂಗ ಆಯ್ತು. ನಾವು ಚಿಕ್ಕವರಿದ್ದಾಗ ಸುಮಾರು 600 ಟಾಂಗಾ ಗಾಡಿ ಇದ್ವು ಈಗ ನೋಡ್ರಿ ಎಲ್ಲಾ ಸೇರಿ ಎಂಬತ್ತು ದಾಟಲ್ಲ. ಯಾರೂ ಇವತ್ತು ಟಾಂಗಾ ಹತ್ತಲ್ಲ’ ಅನ್ಕೊಂತೇ ಹೊಯ್..ಹೊಯ್ ಏ ಬಾಬಾ ಬಾಜೂ.. ಅಂತಾ ಆತ ಟಾಂಗಾ ಓಡಿಸುತಿದ್ದ. ಪಾಪ..! ಆ ಕುದುರೆ ಮೈಯಲ್ಲಿನ ತ್ರಾಣವೆಲ್ಲಾ ಕೂಡಿಸಿ ಗಾಡಿ ಎಳೆಯುತ್ತಿತ್ತು. ನನ್ನ ಮಗ ಮುಂದಿನ ಬದಿ ಕುಳಿತಿದ್ದ ಅವನ ಪಕ್ಕದಲ್ಲಿ ಕುಳಿತು ಮಶಾಕ್ ಗಾಡಿ ಓಡಿಸುತ್ತಿದ್ದ. ಕೈಯಲ್ಲಿಯ ಚಾಬೂಕಿನಿಂದ ಅದಕ್ಕೆ ಮತ್ತೆ ಮತ್ತೆ ಹೊಡೆಯುತ್ತಿದ್ದ. ಆಗ ನಾನು ಅವನಿಗೆ ಹೋಗಲಿ ಆರಾಮಸೆ ಹೋಗಲಿ ಹೊಡೀಬೇಡ ಅಂದೆ. ಆತ ಕಳಿತುಕೊಳ್ಳ್ಲುವ ಬದಿಯಲ್ಲೇ ಒಂದು ಗೊಣಿ ಚೀಲದಲ್ಲಿ ಒಂದಷ್ಟು ಕತ್ತರಿಸಿದ ಒಣ ಜೋಳದ ಕಣಿಕೆಯನ್ನು ಇಟ್ಟಿದ್ದ. ಕುದುರೆ ಹೊಟ್ಟೆ ತುಂಬಾ ತಿಂದಂತಿರಲಿಲ್ಲ. ಅದು ಹೇಗೆ ಸಾಧ್ಯ..? ದಿನಕ್ಕೆ ಹೆಚ್ಚೆಂದರೆ ಐದು ನೂರು ರೂಪಾಯಿ. ಕೆಲ ಬಾರಿ ಅದೂ ಇಲ್ಲ. ಅದರಲ್ಲಿಯೇ ಆ ಕುದುರೆಗೆ ಮೇವಾಗಬೇಕು, ಅವನ ಕುಟುಂಬದವರ ಹೊಟ್ಟೆ ಕಾವಾಗಬೇಕು ಹೀಗಾಗಿ ಈಗಿನ ದಿನ ಮಾನಗಳಲ್ಲಿ ಈ ಟಾಂಗಾಗಳನ್ನು ನಡೆಸುವದೇ ಕಷ್ಟ ಎನ್ನುವಂತಿತ್ತು ಮಶಾಕನ ಮಾತು.

ಆ ಬಿರುಬಿಸಿಲಲ್ಲಿಯೂ ಕುದುರೆ ಒಂದೇ ಸವನೇ ಓಡುತ್ತಿತ್ತು. ಜಾಮೀ ಮಸ್ಸೀದಿ ಹತ್ತಿರ ಬಂದಂತೆ ಮಶಾಕ್ ಓ..ಹೋ.. ಎನ್ನುತ್ತಿರುವಂತೆ ಕುದುರೆಯ ಹೆಜ್ಜೆಗಳು ನಿಧಾನವಾದವು. ಕೆಳಗಿಳಿದು ಮಸೀದಿ ಒಳಗಡೆ ತೆರಳಿದೆವು. ಬಾಗಿಲಲ್ಲಿ ಒಬ್ಬಳು ಮಹಿಳೆ ಚಪ್ಪಲಿಯನ್ನು ಬದಿಗೆ ಬಿಡಲು ಸೂಚಿಸಿದಳು. ಅದರ ಜೊತೆಯಲ್ಲಿ ಆಕೆ ಬಿಜಾಪುರದ ಸ್ಮಾರಕಗಳ ಫೋಟೊ ಮಾರಾಟ ಮಾಡುತ್ತಿದ್ದಳು. ಒಳಗಡೆ ನನ್ನ ಮಗನಿಗೆ ಆ ಮಸೀದೆಯ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ನೀಡಿ ಮರಳಿದೆವು. ಹೊರಗೆ ಗಿಡದ ಕೆಳಗೆ ಒಬ್ಬ ಪುಟ್ಟ ಪೋರ ಹೆಚ್ಚೂ ಕಡಿಮೆ ನನ್ನ ಮಗನ ವಯಸ್ಸಿನವನು. ಶೇಂಗಾ ,ಹುರಕಡ್ಲಿ, ಪೇರಲಹಣ್ಣು ಮಾರುತ್ತಿದ್ದ. ಎರಡು ಪೇರಲ ಹಣ್ಣನ್ನು ಖರೀದಿಸಿ ಒಂದನ್ನು ಮಗನಿಗೆ ಇನ್ನೊಂದರಲ್ಲಿ ನಾನು ಮತ್ತು ಮಶಾಕ್ ಹಂಚಿಕೊಂಡು ತಿನ್ನುತ್ತಾ ನಡೆದವು. ಮಶಾಕ್ ದಾರಿಯುದ್ದಕ್ಕೂ ಅಲ್ಲಲ್ಲಿ ಕಾಣುವ ಸ್ಮಾರಕಗಳ ಬಗ್ಗೆ ಹೇಳುತ್ತಲೇ ನಡೆದಿದ್ದ. ಮುಂಬೈನ ಗೇಟವೇ ಆಫ್ ಇಂಡಿಯಾ ಹೇಗೋ ಹಾಗೆ ಈ ಬಡೆಕಮಾನ್ ಎನ್ನುತ್ತಾ ನನ್ನ ಮಗನಿಗೆ ಅದನ್ನು ತೋರಿಸಿದ. ನನ್ನ ಮಗನಿಗೆ ಅದೆಲ್ಲೋ ದೆವ್ವ ಬಿಡಿಸುತ್ತಾರೆ ಅಂತಿದ್ದೆಲ್ಲಾ ಅದೆಲ್ಲಿ..? ಎನ್ನುತ್ತಿರುವಂತೆ ಆ ಬದಿ ಕೈ ಮಾಡಿ ಮಶಾಕ್ ಇದೇ ನೋಡ್ರಿ ಜೋಡ್ ಗುಮ್ಮಟ ಅಲ್ಲಿ ದೆವ್ವ ಬಿಡಸ್ತಾರೆ ಅಂದಾಗ ನನ್ನ ಮಗ ಬಾಯಿ ಬಿಟ್ಗೊಂಡು ಅದನ್ನು ನೋಡುತ್ತಿದ್ದ. ಊರಿನ ರಸ್ತೆಗಳ ಬಗ್ಗೆ, ಬಿಜಾಪುರ ಪಟ್ಟಣ ಬೆಳವಣೆಗೆಯಾದ ಬಗ್ಗೆ ಹಿಂದಿದ್ದ ಎಮ್.ಎಲ್.ಎ. ಮತ್ತು ಹಾಲಿ ಎಮ್.ಎಲ್.ಎ ಬಗ್ಗೆ ಮಾತಾಡುತ್ತಾ ನಡೆದೆವು. ಸ್ವಲ್ಪ ಸಮಯದ ನಂತರ ಟಾಂಗಾ ಇಬ್ರಾಹಿಂ ರೋಜಾ ಬಳಿ ಬಂದು ನಿಂತಿತು. ಆ ಇಮಾರತನ್ನು ನೋಡಿದ್ದೇ ನನ್ನ ಮಗ ‘ಪಪ್ಪಾ, ಪ್ಯಾರಗೆ ಆಗಿ ಬಿಟೈತೆ ಅಂತ ಹಾಡನ್ನು ನೆನಪು ಮಾಡಿ ಕೊಟ್ಟ. ಕೆಲವು ಸ್ಮಾರಕಗಳನ್ನು ಜನಪ್ರಿಯಗೊಳಿಸುವುದು ಈ ಸಿನೇಮಾದವರಿಂದಲೇ ಸಾಧ್ಯ. ‘ಪ್ಯಾರ್ ಗೆ ಆಗಿ ಬಿಟೈತೆ’ ಹಾಡು ಇಲ್ಲಿ ಶೂಟಿಂಗ್ ಆದ ನಂತರ ಇಲ್ಲಿಗೆ ಬರುವವರ ಸಂಖ್ಯೆ ತುಸು ಹೆಚ್ಚಾಗಿದೆ ಎನ್ನುವುದು ಒಂದು ಮಾಹಿತಿ. ಹಿಂದೆ ಶೋಲೆ ಚಿತ್ರ ಬಿಡುಗಡೆಯಾದಾಗ ಅದರಲ್ಲಿ ಬಸಂತಿ ಟಾಂಗಾ ಓಡಿಸುವ ಸನ್ನಿವೇಶದ ಪರಿಣಾಮ ಟಾಂಗಾ ಸವಾರಿಗೆ ವಿಪರೀತ ಡಿಮಾಂಡು.
ಎದುರು ಬದುರಾಗಿರುವ ಈ ಎರಡೂ ಇಮಾರತುಗಳಲ್ಲಿ ಅನೇಕ ರೀತಿಯ ಕುಸರಿ ಕೆಲಸಗಳು ನೋಡಲು ದೊರೆಯುತ್ತವೆ. ಅಂತವುಗಳಲ್ಲಿ ಕಲ್ಲಿನಲ್ಲಿಯೇ ಕೆತ್ತಿದ ಸರಪಳಿಯೂ ಒಂದು. ಅದನ್ನು ನೋಡಿ ಆದ ಮೇಲೆ ಸೀದಾ ಉಪಲೀ ಬುರಜ್ ಗೆ ತೆರಳಿದೆವು. ಉಪಲೀ ಎಂದರೆ ಕುಳ್ಳು ಎಂದರ್ಥ. [ಬೆರಣಿ ತಟ್ಟುವದು] ಓರ್ವ ಮುದುಕಿ ಕುಳ್ಳು ಮಾರಿ ಕಟ್ಟಿಸಿದ ಇಮಾರತು ಅದೆಂದು ಹೇಳಲಾಗುತ್ತದೆ. ಅದನ್ನು ನೋಡಿಯಾದ ಮೇಲೆ ಕೊನೆಯದಾಗಿ ಮುಲ್ಕ್ ಮೈದಾನ ತೋಪ್, ಅಲ್ಲಿ ಹೇಳಿಕೊಳ್ಳುವ ಯಾವ ಇಮಾರತೂ ಇಲ್ಲ ಇದ್ದದ್ದು ಒಂದು ಬೃಹತ್ ಆಕಾರದ ಪಿರಂಗಿ. ಅದನ್ನು ನೋಡಲೆಂದೇ ಜನ ಇಲ್ಲಿಗೆ ಬರುತ್ತಾರೆ. ಬಿಜಾಪುರದಲ್ಲಿ ನೋಡಲು ಇನ್ನೂ ಹತ್ತಾರು ಸ್ಮಾರಕಗಳಿದ್ದವು ಜೊತೆಗೆ ನಮ್ಮ ಸಮಯಕ್ಕೂ ಒಂದು ಲಿಮಿಟೇಶನ್ ಇತ್ತು ಹೀಗಾಗಿ ಮಶಾಕನ ಜೊತೆಗೆ ಮೊದಲೇ ಮಾತನಾಡಿದಂತೆ ಅಷ್ಟು ಸ್ಥಳಗಳನ್ನು ನೋಡಿ ಅವನಿಗೆ ಹಣ ನೀಡಿ ನಡೆದೆವು. ಮಶಾಕ್ ಕುದುರೆಗೆ ನೀರು ಕುಡಿಸಲು ಗಾಂಧಿ ಚೌಕಗೆ ಬಂದ. ಅಲ್ಲಿಯೇ ನಾವಿಳಿದು ಅವನು ಕೇಳಿದ್ದಕ್ಕಿಂತಲೂ ಹತ್ತು ರೂಪಾಯಿ ಹೆಚ್ಚಿಗೆ ನೀಡಿ ನಡೆದೆವು.
ಮಶಾಕನಂಥಾ ಅದೆಷ್ಟೋ ಜನರು ಇಲ್ಲಿ ಟಾಂಗಾ ಕುದುರೆಯನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಟಾಂಗಾ ಗಾಡಿ ಮತ್ತು ಕುದುರೆ ಕೇವಲ ಸವಾರಿಗಾಗಿ ಮಾತ್ರವಲ್ಲದೇ ಬಿಜಾಪುರ ಜಿಲ್ಲೆಯ ಒಂದು ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ರೂಪವೂ ಹೌದು. ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ ನನ್ನನ್ನು ಬಿಜಾಪುರಕ್ಕೆ ಕರೆದುಕೊಂಡು ಬಂದರೆ, ಈ ಟಾಂಗಾದಲ್ಲಿಯೇ ಸವಾರಿ. ಇಂಥಾ ಟಾಂಗಾ ಗಾಡಿಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಜವಾಬ್ದಾರಿ ಪ್ರಾಚ್ಯವಸ್ತು ಇಲಾಖೆಯ ಮೇಲೂ ಇದೆ, ಮತ್ತು ಸರಕಾರದ ಮೇಲೂ ಇದೆ. ಈಗಾಗಲೇ 600 ರಷ್ಟಿದ್ದ ಟಾಂಗಾ ಕುದುರೆಗಳು ಈಗ ಕೇವಲ 80 ಕ್ಕೆ ತಲುಪಿವೆ ಭವಿಷ್ಯದಲ್ಲಿ ಅವುಗಳನ್ನು ನೋಡುವುದು ಕೇವಲ ಪ್ರಾಚ್ಯ ವಸ್ತು ಸಂಗ್ರಾಲಯದಲ್ಲಿ ಮಾತ್ರ ಎನ್ನುವಂತಾಗಬಾರದು. ಈ ಟಾಂಗಾ ಅದನ್ನೋಡಿಸುವವರ ಬದುಕಿನ ಜಟಕಾ ಬಂಡಿ, ಅದನ್ನು ಆಶ್ರಯಿಸಿದವರಿಗೆ ಯಾವುದಾದರೂ ಸೂಕ್ತ ಪರಿಹಾರದ ಮೂಲಕ ಟಾಂಗಾ ಗಾಡಿಗಳು ಉಳಿಯುವಂತೆ ನೋಡಿಕೊಳ್ಳಬೇಕಿದೆ. ಇಂಥಾ ಐತಿಹಾಸಿಕ ನಗರಗಳಲ್ಲಿ ಈ ಟಾಂಗಾಗಳು ಉಳಿಯಬೇಕಾದ ಅವಶ್ಯಕತೆಯಿದೆ. ಅದು ನಮ್ಮ ಪರಂಪರೆಯ ಕುರುಹೂ ಹೌದು.
 
 
 
 
 

‍ಲೇಖಕರು G

4 July, 2014

2 Comments

  1. Prabhakar M. Nimbargi

    Dr. Jogur, you have touched a fine tune in the depth of my heart and made me to go back almost four to four and a half decades in my life time. Among such tangas there was one particular tanga, with No. 1. Probably you have not seen it, you should have seen it & the height, gait and royal walk of a horse. Its steps were always a music to the ears. The tanga too had a good body, finely decorated every where. Its rental was always the highest in Bijapur. If you sit in it, the passers-by would glare at you as if commenting, “Lo, he is riding the No. 1.” Definitely it was out of reach of us, the college going boys and lower middle class persons. Yes, tangas for long have been the cultural representatives of Bijapur. Thanks for rejuvenating my reminiscences. Very good article.

    • Anonymous

      prabhakarji very nice.. really i missed the no 1 tanga.. thank u for the beatiful memories

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading