ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡುಗತ್ತಲ ರಾತ್ರಿ..

-ನಂದಿನಿ ಹೆದ್ದುರ್ಗ
ಎರಡು ದುಃಖಾಂತ್ಯದ ಹಾಡು

೧ .

ಕಡುಗತ್ತಲ ರಾತ್ರಿ
ಅಪರಿಚಿತದ ಕಾಡು ಹಾದಿ
ಯಲ್ಲಿ
ನನ್ನ ಸ್ವಂತದ ರೈಲು
ಹೇಳದೆ ಇಳಿಸಿ
ಸಾಗಿತ್ತು ಮುಂದೆ
ಗವ್ಗುಡುವ ಹೊತ್ತು
ಹೆಬ್ಬಾವು ಗಿಡುಗ ರಣಹದ್ದು
ಕತ್ತಲೂ ಬೆಚ್ಚುವ ಗೂಗೂ ಸದ್ದು
ಹಸಿದ ಹುಲಿ ಚಿರತೆ ತೋಳ
ಚೇಳು ವಿಷದ ಮುಳ್ಳು
ಮರೆವುಬಳ್ಳಿ ರಾಕ್ಷಸ ಹಲ್ಲಿ!!

ಯಾಕೆ ಇಳಿಸಿತು
ನನ್ನ ರೈಲು ಇಲ್ಲಿ?
ತೊರೆದು ಹೋದರು
ಎಲ್ಲಾ ಎಲ್ಲಿ?

ಹೊಕ್ಕಿದ
ಮುಳ್ಳು ಕಿತ್ತು
ಹೂವು ಮೂಸಿ ಹಣ್ಣು ಹೆಕ್ಕಿ
ನಡೆದೂ ನಡೆದೂ ನಡೆದು…

ಅದು
ನಡುಮದ್ಯದ ಕಾಡು
ಒಂದು ವಿಸ್ತಾರದ ಮನೆ
ಎತ್ತರೆತ್ತರದ ತೋಟ ಹೂವು ಚಿಟ್ಟೆ ಹಕ್ಕಿ
ಅಲ್ಲಿ
ಅವರಿದ್ದರು!
ನನ್ನ
ಒಳಕರೆದರು!!

ಹುಲಿ…ಹಸುವ‌ ಉಳಿಸಿತ್ತಲ್ಲವೇ?
ಹಾವು…ಶಿವಮುಡಿಯ ಹೂವು ತಾನೇ?

೨ .

ಬೆಳದಿಂಗಳ ರಾತ್ರಿ
ಮಹಾನಗರದ ಹೊರವಲಯ
ಓಡುತ್ತಿತ್ತು ರೈಲು
ಮಾಯಾವಿ ಮುಗಿಲು
ಚುಕ್ಕಿ ನೆರೆ
ರಸ್ತೆ ತುಂಬಾ ಬೆಳಕ ಕಳೆ
ಎಲ್ಲೋ ಎರೋಪ್ಲೇನು
ಇಲ್ಲಿ
ಝಗಮಗ ಕಮಾನು
ಹೊಸಯುಗದ ಗಂಡು ಹೆಣ್ಣು
ತುಳುಕು ಕುಲುಕು ಪಲುಕು

ಕತ್ತು ಹೊರಗಿಟ್ಟೇ
ಎಷ್ಟು ಕಾಲ ಕೂರಬಹುದು
ಜೀವ?

ಕೊಳಕು ಭೋಗಿ, ಹೇಸಿಗೆ ನುಗ್ಗಿ
ಪಾಯಿಖಾನೆ ವಾಸನೆ
ವಾಕರಿಸಿ ಛೀಕರಿಸಿ
ಹೊರದಬ್ಬಿದ ಉಸಿರು
ಒಳಗೆಳೆಯಲಾಗದೆ
ದಮ್ಮು ಕಟ್ಟಿ
ತಾಳಲಾರದೆ ಇನ್ನು
ಎಳೆದೆ ಚೈನು,
ಗಕ್ಕನೆ ನಿಂತಿತು ರೈಲು
ಛಂಗನೆ ಹೊರನೆಗೆದು
ಹೊಸಗಾಳಿ ಕುಡಿದು
ಓಡಿ ಓಡಿ ಓಡಿ ಓಡಿ…

ಅದು
ಕಾಡಹಾದಿ
ಒಂದು ಮನೆ
ಎತ್ತರೆತ್ತರದ ತೋಟ ಹೂವು ಚಿಟ್ಟೆ ಹಕ್ಕಿ

ಅಲ್ಲಿ
ಅವರಿದ್ದರು
ನೋಡಿ ನಸುನಕ್ಕರು
ಒಳಕರೆದರು

ಭೋಗಿ… ನಾನೇ ಗುಡಿಸಬಹುದಿತ್ತೆ?
ಪಾಯಿಖಾನೆ…. ನಾನೇ ತೊಳೆಯಬಹುದಿತ್ತೆ?

‍ಲೇಖಕರು Admin

5 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading