ಕಡಲೆ ಮಾರುವವನ ಕೈ ಲೆಕ್ಕ !

ಆಶಿಕ್ ಮುಲ್ಕಿ

ಗಿಜಿಗುಡುವ ಗಾಂಧಿನಗರದ ಬೀದಿ ಬದಿಯೊಂದರಲ್ಲಿ ಓರ್ವ ತಾತ ಕಡಲೆ ಬೀಜ ಮಾರುತ್ತಿದ್ದರು. ಅದೇನೋ ಸಂಕಟ, ಖುಷಿಗಳ ಹೊತ್ತು ಓಡಾಡುವ ಜನರ ನಡುವೆ ಬಿಸಿ ಬಿಸಿ ಕಡಲೆ ಬೀಜ ಇರುವ ತಟ್ಟೆಗೆ ಅಗಾಗ್ಗೆ ಟಣ್ ಟಣ್ ಎಂದು ಭಾರಿಸುತ್ತಿದ್ದರು. ಮಧ್ಯೆ ಮಧ್ಯೆ ಒಬ್ಬೊಬ್ಬರು ಹತ್ತು ರೂಪಾಯಿ ಕೊಟ್ಟು ಕಡಲೆ ಪೊಟ್ಟಣ ಕೊಂಡು ನಡೆಯುತ್ತಿದ್ದರು.‌ ರಸ್ತೆಯಲ್ಲಿ ನೀರಂತೆ ಹರಿಯುವ ವಾಹನಗಳು ಒಂದೆಡೆ. ಅದೇ ರಸ್ತೆಯ ಒಂದು ಬದಿಯ ತಳ್ಳು ಗಾಡಿಯಲ್ಲಿ ಈ ಕಡಲೆ ಮಾರುವ ತಾತ. ಅವರ ಎಡಗೈಗೆ ಮೂರು ಬೆರಳುಗಳಿಲ್ಲ. 

ಆಗಾಗ್ಗೆ ಆಟೋ ಚಾಲಕರು ಬಂದು ಮಾತನಾಡಿಸಿ ಹೊರಡುತ್ತಿದ್ದರು. ಬಿಳಿಗೂದಲು, ಬಿಳಿ ಪುಡಿ ಮೀಸೆಯ ತಾತ ಕಣ್ಣು ಮುಚ್ಚಿಯೇ ಆ ದಾರಿಯ ಬಗ್ಗೆ ಹೇಳಬಲ್ಲರು ಎನ್ನುವಷ್ಟು ಆ ರಸ್ತೆಗೆ ಚಿರಪರಿಚಿತ ಎಂದೆನಿಸಿತು ನನಗೆ. ಮೆಜೆಸ್ಟಿಕ್ಕಿನ ಬಲಕ್ಕಿರುವ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ಮುಂಭಾಗದ ಕಿಕ್ಕಿರಿಯುವ ರಸ್ತೆಯದು. ಕಡಲೆ ಬೀಜ ಕಟ್ಟಲು ಆಗಾಗ್ಗೆ ಪೊಟ್ಟಣ ಕಟ್ಟುವ ಅವರು ಹತ್ತು ರೂಪಾಯಿಗೆ ತಕ್ಕಷ್ಟೇ ಕಟ್ಟುತ್ತಾರೆ.

ಎಲ್ಲಾ ಪೊಟ್ಟಣಗಳೂ ಕೂಡ ಅವಳಿಗಳು ಎನ್ನುವಷ್ಟರ ಮಟ್ಟಿಗೆ ಒಂದೇ ರೀತಿಯಲ್ಲಿತ್ತು. ಬಲಗೈಯಿಂದ ಪೇಪರಿನ ಒಂದು ತುದಿ ತಿರುವಿ, ಎಡಗೈನಲ್ಲಿರುವ ಎರಡು ಬೆರಳುಗಳ ಮಧ್ಯೆ ಪೇಪರಿನ ಮತ್ತೊಂದು ತುದಿ ಹಿಡಿದು ಕಟ್ಟುವ ಪೊಟ್ಟಣ, ಹತ್ತು ಬೆರಳಿರುವ ಕೈಯಿಂದಲೂ ಸಾಧ್ಯವಿಲ್ಲವೇನೋ ಎಂಬಂತಿದೆ. 

ದಾರಿ ಹೋಕರಿಗೆ ನಿಖರವಾಗಿ ವಿಳಾಸ ತಿಳಿಸುತ್ತಾರೆ. ಅಕ್ಕ ಪಕ್ಕದಲ್ಲಿ ನೇತಾಡುತ್ತಿರುವ ಮಾರಾಟ ವಸ್ತುಗಳ ಜೊತೆ ಮಾತನಾಡುತ್ತಾರೆ ಇವರು ಎಂದು ಎನ್ನಿಸುವಂತಿದೆ ಅವರ ಭಾವ. ಇವರ ಕಡಲೆ ಮಾರಾಟ ಗಾಡಿಯ ಒಂದು ಹೆಜ್ಜೆ ದೂರದಲ್ಲೇ ಚಪ್ಪಲಿ ಅಂಗಡಿ. ಬಣ್ಣ ಬಣ್ಣದ ಚಪ್ಪಲಿಗಳು ಹೊರಗಡೆ ಇವರ ಕಣ್ಣಿಗೆ ರಾಚುವಂತೆ ನೇತಾಡುತ್ತಿತ್ತು. ಪಕ್ಕದಲ್ಲೇ ಶೋಕೇಸಿನ ಒಳಗೆ ಘಮಗಮಿಸುವ ಅತ್ತರಿನ ಬಾಟಲಿಗಳು. ಇದೇಂಥಾ ರೂಪಕ ಎನ್ನಿಸಿತು ನನಗೆ. ಅವರ ಕಣ್ಣಿನ ತೊಗಲು ನೇತಾಡುತ್ತಿವೆ, ಚಪ್ಪಲಿಗಳಲ್ಲಿ ಮತ್ತು ಅತ್ತರಿನ ಬಾಟಲಿಗಳಲ್ಲಿ. 

ಹತ್ತು ರೂಪಾಯಿಗೆ ಕಡಲೆ ಕೇಳಿ ಬಂದರೆ ಸಮಾಸಮ ಲೆಕ್ಕ. ಒಂದು ಹಿಡಿ. ಮತ್ತೊಂದ ಕಾಲು ಹಿಡಿ‌ ಕಡಲೆ. ತೂಕದ ಸಾಮಗ್ರಿಗಳನ್ನೂ ಮೀರಿಸುವ ಲೆಕ್ಕವದು ಎಂದೆನಿಸಿತು ನನಗೆ. ಒಂದು ಕಡಲೆ ಬೀಜವೂ ಅಧಿಕ ಇಲ್ಲ ಎಂಬಂತಿದೆ ಅವರ ಕೈ ಲೆಕ್ಕ. ಏಳು ಬೆರಳುಗಳಲ್ಲಿ ಎಷ್ಟು ನಿಖರ ಲೆಕ್ಕ ! ನಿಬ್ಬೆರಗಾದೆ. ಒಮ್ಮೊಮ್ಮೆ ಅವರೇ  ಲೆಕ್ಕ ತಪ್ಪಿಸುತ್ತಾರೆ. ಅಕ್ಕಪಕ್ಕದಲ್ಲಿರುವ ಅಂಗಡಿಗಳ ಹುಡುಗರು ಬಂದರೆ ಪೊಟ್ಟಣ ಪ್ರೀತಿಯಿಂದ ಅರಳುತ್ತದೆ. ಸೊಟ್ಟಗಿನ ಪೊಟ್ಟಣ ದಡೂತಿಯಾಗುತ್ತದೆ. ನಗುತ್ತಲೇ ಹತ್ತು ರೂಪಾಯಿಗೆ ಕಡಲೆ ಬೀಜ ಪೊಟ್ಟಣಕ್ಕೆ ತುಂಬಿಸುತ್ತಾರೆ. ಐದು ನಿಮಿಷ ನಿಂತು ಮಾತಾಡಿದರೆ ಪೊಟ್ಟಣದಿಂದ ಉಕ್ಕಿ ಹರಿಯುವ ಕಡಲೆ ಬೀಜ, ಹುಡುಗರ ಕೈ ತುಂಬುತ್ತದೆ. 

ಮಧ್ಯದಲ್ಲಿ ಪರಿಚಿತರು ಬಂದು ತಾತನ ಜೊತೆ ಮಾತಿಗೆ ನಿಂತರು. ಊರಿಂದ ಯಾವಾಗ ಬಂದಿರಿ ಎಂದು ಕೇಳಿದರು. ಮಾರು ದೂರದಲ್ಲೇ ನಿಂತಿರುವ ನನಗೆ ಅವರ ಮಾತು ನಮ್ಮಿಬ್ಬರ ನಡುವೆ ಇದ್ದ ಅಂತರದಷ್ಟೇ ಸಮೀಪ ಎಂದೆನಿಸಿತು. ತನ್ನ ಎಲ್ಲಾ ಸಂಕಟಗಳಿಗೂ ನಗುವಿನ ಆಭರಣ ತೊಡಿಸಿದಂತೆ ಮಾತು ಹೊರಡಿಸುತ್ತಿದ್ದ ಅವರು, ಎರಡೇ ದಿನಕ್ಕೆ ಊರಿಂದ ಮರಳಿ ಬಂದರೆಂದು ಹೇಳಿದರು. ಬಂದ ದಿನವೇ ಸಂಜೆ ತನ್ನ ಕಡಲೆ ಬೀಜದ ತಳ್ಳು ಗಾಡಿಯ ಜೊತೆಗೆ ಬದುಕ ಬಂಡಿಯನ್ನೂ ತಳ್ಳಿ ವ್ಯಾಪಾರಕ್ಕೆ ಬಂದರೆಂದು ಅವರಿಬ್ಬರ ಮಾತಿನಿಂದ ತಿಳಿಯಿತು. 

ಕಾದು ಕೆಂಡದಂತಿದ್ದ ಬಾಣಲೆಯಲ್ಲಿ ಮರಳು ಕುದಿಯುತ್ತಿದ್ದವು. ಅದರೊಳಕ್ಕೆ ಸುರಿಯುವ ಕಡಲೆಗಳು ನಿಜಕ್ಕೂ ಮುಗ್ಧರು. ನಿರ್ದಾಕ್ಷಿಣ್ಯವಾಗಿ ಮರಳಿಗೆ ಕಡಲೆ ಸುರಿದು ಹುರಿಯುತ್ತಿದ್ದ ತಾತ ಮಧ್ಯೆ ಮಧ್ಯೆ ಒಂದೇ ಸಮನೆ ಯೋಚನೆಗೆ ಜಾರುತ್ತಿದ್ದರು. ಅಂಥಾ ಜನಜಂಗುಳಿಯ ನಟ್ಟ ನಡುವೆಯೂ ಏಕಾಂತಕ್ಕೆ ಜಾರುತ್ತಿದ್ದರು. ಕವಿದ ಮೋಡಗಳು ಮಳೆ ಉಯ್ಯುವ ತಂಪಾದ ವಾತಾವರಣದಲ್ಲೂ ಅವರ ಹಣೆಗಳಲ್ಲಿ ಬೆವರಿನ ಚುಕ್ಕಿಗಳಿದ್ದವು. ನೆರಿ ಕಟ್ಟಿರುವ ಚರ್ಮಗಳು ಬಗೆ ಬಗೆಯ ಸಂಕಟಗಳನ್ನು ಆಡಿಸಿಕೊಂಡಿತ್ತು. ಆ ತಾತನ ನೋಟ, ಬದುಕಿನ ಮುಂದೆ ಸೋಲೊಪ್ಪಿಕೊಳ್ಳದ ಧೀರನಂತೆ ಕಂಡಿದ್ದು, ಅಲ್ಲಿ ನೆರೆದಿದ್ದವರ ಪೈಕಿ ನನಗೆ ಮಾತ್ರವೇ ಎಂಬ ಅನುಮಾನ ನನ್ನದು.

ಒಬ್ಬರ ಜತೆ ಏನೋ ಕೊಳ್ಳಲು ಅಲ್ಲಿಗೆ ಹೋದ ನಾನು, ಕಡಲೆ ಮಾರುವವನ ಕೈ ಲೆಕಕ್ಕೆ ಸೋತು ಅಲ್ಲೇ ನಿಂತೆ. ಸುಮಾರು ಅರ್ಧ ಗಂಟೆ ಅದೇ ನಿಲ್ಲು ನನ್ನದು. ಆಗಾಗ್ಗೆ ಕಡಲೆ ತಾತ ನನ್ನನ್ನು ನೋಡುತ್ತಾರೆ. ನೋಡುತ್ತಾ ನೋಡುತ್ತಾ ಕಡಲೆ ಪೊಟ್ಟಣ ಕಟ್ಟುತ್ತಾರೆ. ಕಡಲೆ ಕೇಳಿ ಬಂದವರಿಗೆ ಕಡಲೆಯನ್ನೂ ಕೊಡುತ್ತಾರೆ. ನಡುವೆ, ನನಗೆ ನಗುವನ್ನೂ ಬೀರುತ್ತಾರೆ. ಮಾತನಾಡಿಸಬಹುದಿತ್ತು. ಆದರೆ ಮಾತನಾಡಿಸಲಿಲ್ಲ. ಅವರ ಭಾವ ಭಾರವಿದ್ದಂತೆ ಕಂಡಿತು ನನಗೆ. ಸುಮ್ಮನಾದೆ.

ಸಣ ಪೊಟ್ಟಣದೊಳಕ್ಕೆ ಕಡಲೆ ಉರಳುವ ರೀತಿ ಸ್ವಲ್ಪ ಹೊತ್ತು ತಾತನ ಭಾವಕ್ಕೆ ಉರುಳಿದೆ. ಪಕ್ಕದಲ್ಲೆ ನೇತು ಹಾಕಿದ್ದ ಚಪ್ಪಲಿ ಒಂದು ಕತೆ ಹೇಳಿತು. ಅಲ್ಲೇ ಪಕ್ಕದಲ್ಲಿದ್ದ ಅತ್ತರಿನ ಘಮಲು ಮತ್ತೊಂದ ಕತೆ. ಜೊತೆಗೆ ಇವರಡಕ್ಕೆ ಹೋಲಿಸಿದರೆ ಕಡಲೆ ದುಬಾರಿಯಲ್ಲ ಎಂದೆನಿಸಿತು. ಸೋತ ಭಾವ. ನಿಜಕ್ಕೂ ತಾತನ ಬದುಕುವ ಆಸೆಗೆ ನಾನು ಸೋತೆ. 

‍ಲೇಖಕರು Admin

June 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: