ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಟ್ಟೆಯಿರಲವ್ವ ಮನೆಮುಂದ..

neeta s rao

ನೀತಾ ರಾವ್

ಒಂದು ಕಾಲ ಇತ್ತು, ಬೆಳಗಾವಿ ಶಹರದಾಗಿನ ಮನಿಗೋಳಂದ್ರ, ಪ್ರೈವೇಟ ರೂಮಿಲ್ಲ, ಗೀಮಿಲ್ಲ, ರೇಲ್ವೆ ಡಬ್ಬಿ ಹಂಗ ಉದ್ದಕ ಇರ್ತಿದ್ವು. ಆದ್ರ ಭಾಳಷ್ಟು ಮನಿಗೋಳಿಗೆ ಮುಂದ ಜಾಗ, ಸಣ್ಣದರೇ ಯಾಕಾಗವಾಲ್ತು ಒಂದು ಕಟ್ಟಿ, ಹಿಂದ ಹಿತ್ತಲಾ ಇವೆಲ್ಲಾ ಇದ್ದ ಇರ್ತಿದ್ವು. ಮುಂದಿನ ಕಟ್ಟಿ ಅಂತೂ ನಾನಾ ಕಾರಣಕ್ಕ ಬ್ಯಾರೆ ಬ್ಯಾರೆ ಜನರಿಗೆ ಉಪಯೋಗ ಆಗ್ತಿದ್ವು. ಬೆಳಗಿನ ಪೇಪರ ಓದಕೋತ ಗಂಡಸರು ಕಟ್ಟಿ ಮ್ಯಾಲೆ ಕೂತ ಎದ್ದರಂದ್ರ, ಆಮ್ಯಾಲೆ ಸಾಲಿ ಹುಡುಗೋರು ಆಟಾ ಆಡಲಿಕ್ಕೂ ಇದ ಕಟ್ಟಿ ಉಪಯೋಗಕ್ಕ ಬರ್ತಿತ್ತು. ಮಧ್ಯಾಹ್ನ ದೈಹಿಕ ಶ್ರಮದ ಕೆಲಸಾ ಮಾಡಿ ದಣದು ಬರೋ ಕೆಲಸಗಾರರಿಗೂ ಇವ ಕಟ್ಟಿ ಒಂದಿಷ್ಟು ವಿಶ್ರಾಂತಿ ಒದಗಸತಿದ್ವು.

ಇನ್ನು ಎಲ್ಲಾ ಕೆಲಸಾ ಮುಗಿಸಿ ಮಧ್ಯಾಹ್ನ ಒಂದ ಸಣ್ಣ ನಿದ್ದಿ ತಗದು ಸಂಜಿ ಮುಂದ ಮುಖಾ ತೊಳಕೊಂಡು ಫ್ರೆಶ್ಶಾಗಿ ಪೌಡರ ಹಚಗೊಂಡು ಹೊರಗ ಬರೋ ಹೆಣ್ಣಮಕ್ಕಳಿಗೂ ಇದ ಕಟ್ಟಿ ಹರಟಿ ಹೊಡಿಲಿಕ್ಕೆ ಜಾಗಾ ಕೊಡೋದು. ಇಂಥಾ ಕಟ್ಟಿ ಮ್ಯಾಲೇ ಕೂತು ಆಡಿ ನಾವೂ ನಮ್ಮ ಬಾಲ್ಯಾ ಕಳದ್ವಿ. ಮಧ್ಯಾಹ್ನ, ಸಂಜಿ ಹಿಂಗ ಯಾವಾಗಂದ್ರ ಆವಾಗ ಕಟ್ಟಿ ಮ್ಯಾಲೆ ಕೂಡೋದಂದ್ರ homeಭಾಳ ಖುಶಿ ನಮಗ. ನಾವು ಸಣ್ಣವರಿದ್ದಾಗ ವಾರಕ್ಕೋ ಎರಡು ವಾರಕ್ಕೋ ಒಂದು ಸಲಾ, ಒಬ್ಬ ದಾಸಯ್ಯ ಬಂದು, ‘ಅಂಬಿಗ ನಾ ನಿನ್ನ ನಂಬಿದೆ, ಜಗದಂಬಾ ರಮಣ ನಿನ್ನ ನಂಬಿದೆ’ ಅಂತ ಹಾಡಂದು ಮನಿಯವ್ರು ಹಾಕೋ ಅಕ್ಕಿ, ಹತ್ತೋ ಇಪ್ಪತ್ತು ಪೈಸೆನೋ (ಆವಾಗೆಲ್ಲಾ ಅಷ್ಟಂದ್ರನ ಭಾಳಾಗಿತ್ತು) ಪ್ರೀತಿಯಿಂದ ತೊಗೊಂಡು ಮುಂದ ಹೋಗ್ತಿದ್ದ.

ಹಾಕಿದ ಅಕ್ಕಿ, ರೊಕ್ಕಾ ಕಡಿಮ್ಯಾತು ಅಂತಾಗ್ಲಿ, ಯಾವುದರೆ ಒಂದು ಮನಿಯವ್ರು ಹಾಕಲಿಲ್ಯಾಕಂತಾಗ್ಲಿ ಒಂದಿನಾನೂ ಬೇಜಾರು ಮಾಡಕೊಂಡಂಗ ಕಾಣತಿರಲಿಲ್ಲ. ಈಗ ಸುಮಾರು ಮೂವತೈದು, ಮೂವತ್ತಾರು ವರ್ಷದ ನಂತರನೂ ಆ ದಾಸಯ್ಯ, ಅವನ ಆ ಅಂಬಿಗ ನಾ ನಿನ್ನ ನಂಬಿದೆ ಹಾಡು ಈ ಮನಸ್ಸಿನ್ಯಾಗ ಯಾಕ ಅಚ್ಚೊತ್ತಿಧಂಗ ಉಳಕೊಂಡಾವೋ ಗೊತ್ತಿಲ್ಲ. ಆದ್ರ ‘ಹಾಯಿ ಹರಿಗೋಲಂಬಿಗಾ, ಅದಕೊಂಭತ್ತು ಛಿದ್ರಗಳಂಬಿಗಾ’ ಅನ್ನೋದರ ಅರ್ಥ ಮಾತ್ರ ಇತ್ತಿತ್ತಲಾಗಿ ತನಗ ತಾನ ಹೊಳದದ.

ಹುಡುಗ್ಯಾರು ಆಗಿನ ಕಾಲದಾಗ ಹಳ್ಳ ಆಡೋದು ಭಾರಿ ಜೋರಿತ್ತು. ಐದು ಹಳ್ಳೌ ಆರಿಸಿಕೊಂಡು ಅವನ್ನ ಇನ್ನೊಂದು ಕಲ್ಲಿಗೆ ಕುಟ್ಟಿ ಕುಟ್ಟಿ ಗುಂಡ ಮಾಡಕೊಳ್ಳೋದು. ನಮ್ಮ ಒಬ್ಬ ಗೆಳತಿ ಮನಿ ಕಟ್ಟಿ ಎಷ್ಟ ಧೊಡ್ಡದಿತ್ತಂದ್ರ ಅದನ್ನ ಒಳಗ ತೊಗೊಂಡ್ರ ಒಂದು ಧೊಡ್ಡ ಪಡಸಾಲಿನ ಆಗೋವಷ್ಟು. ಅಲ್ಲೇ ಕುತಗೊಂಡು ನಾವು ಹಳ್ಳಾಟಾ ಆಡತಿದ್ವಿ. ಒಂದೋ, ಎರೆಡೋ, ಮೂರೋ, ನಾಲ್ಕೋ, ಐದೋ, ಸೈದೋ ಅಂತ ಒಂದೊಂದ ಹಳ್ಳ ಮ್ಯಾಲೆ ಎಸದು ಕೆಳಗಿನ ಹಳ್ಳ ಮುಷ್ಟಿ ಒಳಗ ಹಿಡಿಯೋದು. ಈ ಆಟ ಸಾಲಿ ಸೂಟಿ ಇರೋ ಅಷ್ಟೂ ದಿನಾ ಸುರುನ ಇರ್ತಿತ್ತು.

ಇನ್ನು ಕೆಲವು ಮನಿಗೆ ಎತ್ತರ ಕಟ್ಟಿ ಇದ್ದು, ರಸ್ತೆಗೂ ಕಟ್ಟಿಗೂ ನಡುವ ಗಟರು ಇರ್ತಿತ್ತು. ನಮ್ಮ ಖೋ ಖೋ ಆಟಕ್ಕ ಹೇಳಿ ಮಾಡಿಸಿಧಂತಾ ಕಟ್ಟಿಗೋಳವು. ಈ ಖೋ ಖೋ ಆಟಕ್ಕ ನಮ್ಮದ ಬ್ಯಾರೆ ರೂಲ್ಸ ಇದ್ದು. ಓಡಿ ಓಡಿ ಸುಸ್ತಾದ ಕೂಡ್ಲೇ ಟ್ಯಾಮ ಪ್ಲೀಸ್ ( time please) ಅಂತ ಒದರಿ ಒಂದು ಕಾಲು ಕಟ್ಟಿ ಮ್ಯಾಲೆ ಒಂದು ಕಾಲು ರಸ್ತೆ ಮ್ಯಾಲೆ ಕೊಟ್ಟು ತ್ರಿಶಂಕು ಸ್ಥಿತಿಯೊಳಗ ನಿಂತು ಬಿಡೋದು. ಅಂಥ ವಿಚಿತ್ರ ಪೊಸಿಶನ್ನಿನ್ಯಾಗ ನಮ್ಮನ್ನ ಮುಟ್ಟಲಿಕ್ಕೆ ಬರಂಗಿಲ್ಲಂತ ರೂಲು ಮಾಡಿಕೊಂಡಿದ್ವಿ.

ಈಗ ಆ ಪೊಸಿಶನ್ನು ನೆನಿಸಿಕೊಂಡ್ರನ ನಗಿ ಜೊತಿಗೆ ನಡುಕ ಹುಟ್ತದ ಮೈಯೊಳಗ. ಮುಟ್ಟಾಟ ಆಡಲಿಕ್ಕೂ ಎಲ್ಲಾರ ಮನಿ ಕಟ್ಟಿ ಬೇಕಿತ್ತು ನಮಗ. ಇಡೀ ಓಣಿ ತುಂಬ ಓಡಕೋತ, ಕಟ್ಟಿ ಮ್ಯಾಲೆ ಹತ್ತಿ, ಕೆಳಗ ಜಿಗದು ಔಟ ಆದಾಕಿನ್ನ ಸರಿ ಗೋಳ ಹೊಯ್ಕೋಳ್ಳೋದು. ಕೊನಿಗೆ ಬ್ಯಾಸರಾಗಿ ಅಕಿ ಯಾರ್ದರೆ ಕಟ್ಟಿ ಮ್ಯಾಲೆ ಧಸಕ್ಕಂತ ಕೂತ ಬಿಡೋದು, ಕೊನಿಗೆ ಆಟದ ಏರಿಯಾ ಫಿಕ್ಸ ಮಾಡಕೊಂಡು ಅಷ್ಟರಾಗ ಓಡೋದು ಅಂತ ಮತ್ತೊಂದು ಹೊಸಾ ರೂಲು ಮಾಡೋದು. ಓಟ್ಟಿನ್ಯಾಗ ಹೇಳಬೇಕಂದ್ರ ಸಣ್ಣವರಿದ್ದಾಗ ಕಟ್ಟಿಯೊಳಗ ನಮ್ಮ ಜೀವಾ ಇತ್ತು.

home in aplateಇನ್ನ ಸಂಜಿನ್ಯಾಗ ಹೆಣ್ಣಮಕ್ಕಳು ಕಟ್ಟಿ ಮ್ಯಾಲೆ ಕೂತರಂದ್ರ ಹಾದಿ ಮ್ಯಾಲೆ ಹೋಗಾವ್ರು ಬರಾವ್ರದೆಲ್ಲಾ ಉಸಾಬರಿ ಮಾಡಾವ್ರು. ‘ಇಕಿ ಯಾರೋ ಹೊಸದಾಗಿ ಕಾಣಲಿಕತ್ತಾಳಲಾ, ನಮ್ಮ ಓಣ್ಯಾಗ ಹೊಸದಾಗಿ ಭಾಡಗಿಗೆ ಬಂದಾರೇನ ಮತ್ತ!’, ‘ಅಕಿನ್ನೋಡು, ನೋಡಿದ್ರೂ ನೋಡಲಾರಧಂಗ ಹೊಂಟಾಳ, ಎಷ್ಟ ದಿಮಾಕು ತೋರಸ್ತಾಳ’ ಅಂತ ಒಂದಿಷ್ಟು ಸುದ್ದಿ ಮಾತಾಡಿ ರಾತ್ರಿ ಅಡಗಿ ನೋಡಕೊಳ್ಳಿಕ್ಕೆ ಮತ್ತ ಒಳಗ ಹೋಗಾವ್ರು. ಅಂತೂ ಈ ಕಟ್ಟಿ ಅಂದ್ರ ಮಲ್ಟಿ ಪರ್ಪಸ ಜಾಗ ಆಗಿತ್ತು. ಆದರ ಈಗೀಗ ಹಳೆ ಮನಿ ತಗದು ಹೆಚ್ಚೂ ಕಡಮಿ ಎಲ್ಲಾರೂ ಹೊಸಾ ಮನಿ ಮಾಡಿದ್ರು, ಆದ್ರ ಎಲ್ಲಾರಿಗೂ ಬೇಕಿದ್ದ ದೊಡ್ಡ ಕಟ್ಟಿ ಕಟ್ಟೋದು ಮರತಬಿಟ್ರು.

ನೆಲದಿಂದ ಒಂದಿಷ್ಟು ಎತ್ತರದ ಮ್ಯಾಲೆ ಮನಿ ಕಟ್ಟೋದ್ರಿಂದ ಎರಡೋ, ಮೂರೋ ಮೆಟ್ಟಲು ಎಲ್ಲಾರೂ ಮಾಡತಾರ, ಆದ್ರ ಮೊದಲಿನ ಥರಾ ಮನಿ ಉದ್ದಕ್ಕೂ ಕಟ್ಟಿ ಕಟ್ಟಂಗಿಲ್ಲ. ಹಂಗಂತ ಕಟ್ಟಿ ಮ್ಯಾಲೆ ಕುತಗೊಳ್ಳೋ ಪುರಸೊತ್ತರೇ ಯಾರಿಗದ ಈಗ? ಸಣ್ಣ ಹುಡುಗೋರು ಮನಿ ಹೊರಗ ಬಂದು ಖರೆ ಖರೆ ಆಟಾ ಆಡೋ ಬದ್ಲು ಮೊಬೈಲು ಇಲ್ಲಾ ಕಂಪ್ಯೂಟರನ್ಯಾಗ ವರ್ಚುವಲ್  ಗೇಮ ಆಡೋದ್ರೊಳಗ ಗರ್ಕ ಆಗ್ಯಾರ. ಗಂಡಸರಿಗೂ ಕೆಲಸಕ್ಕ ಹೋಗೋ ಗಡಿಬಿಡಿ. ಮೊದ್ಲಿನ ಮಂದಿ ಹಂಗ ಲುಂಗಿ ಉಟಗೊಂದು, ಮ್ಯಾಲೊಂದು ಬನಿಯನ್ ಹಾಕ್ಕೊಂಡು ಕಟ್ಟಿ ಮ್ಯಾಲೆ ಕೂತು ಪೇಪರ ಓದಲಿಕ್ಕೆ ಈಗಿನ ಮಂದಿಗೆ ಮಾನ ಸಾಲಂಗಿಲ್ಲ.

ಇನ್ನ ಈಗಿನ ಹೆಣ್ಣಮಕ್ಕಳು ಸುಮ್ಮನ ಕಟ್ಟಿ ಮ್ಯಾಲೆ ಕೂತು ಹರಟಿ ಹೊಡದ್ರ ತೂಕ ಹೆಚ್ಚಾದೀತಂತ ಹೆದರಿ ಕಿವಿಗೆ ಇಯರಫೋನು ಹಾಕ್ಕೊಂಡು ಮೊಬೈಲಿನ್ಯಾಗ ಮಾತಾಡಕೋತ, ಇಲ್ಲಾ ಹಾಡು ಕೇಳಕೋತ ವಾಕಿಂಗ ಮಾಡಿಲಿಕ್ಕೆಂತ ಯಾವದರೆ ಗಾರ್ಡನ್ನಿಗೆ ಹೋಗತಾರ. ಕೆಲಸಾ ಮಾಡಿ ದಣಿಯೋ ಕಾರ್ಮಿಕರು ಇನ್ನೂ ಸಾಕಷ್ಟು ಇದ್ರೂ ಈಗೀಗ ರೆಸ್ಟ್  ತೊಗೊಳ್ಳಿಕ್ಕೆ ಅವರಿಗೆ ಯಾರ ಮನಿ ಕಟ್ಟಿನೂ ಸಿಗಂಗಿಲ್ಲ. ಮೊದಲಿನ ಮಂದಿ ಹಂಗ  ಪ್ರೀತಿಯಿಂದ ಕುಡಿಲಿಕ್ಕೆ ನೀರು ಕೊಟ್ಟು, ಒಂದೊಂದು ಸಲಾ ಬೆಲ್ಲಾನೂ ಕೊಡತಿದ್ದಂಗ, ಈಗಿನ ಮಂದಿ ಕೊಡಂಗಿಲ್ಲ. ಎಲ್ಲೋ ಹಳ್ಳಿ ಒಳಗ ಇನ್ನೂ ಉಳಕೊಂಡಿರೋ ಕಟ್ಟಿನ ನಾವು ನಮ್ಮ ಮುಂದಿನ ಮಕ್ಕಳಿಗೆ ತೋರಸೋ ಪರಿಸ್ಥಿತಿ ಬಂದದ.

ನಮ್ಮ ತಂದೆ ಕಟ್ಟಿಸಿದ ರೇಲ್ವೆ ಡಬ್ಬಿಯಂಥ ಉದ್ದ ಮನಿಗೂ ಏನೋ ಕಾರಣ ಪುಣ್ಯದಿಂದ ಒಂದು ಸಣ್ಣ ಕಟ್ಟಿ, ಮನಿಮುಂದ ಒಂದಿಷ್ಟು ಜಾಗದ ವೈಭವ ಇನ್ನೂ ಅದ. ಮೊದಲು ಬಾಜೂ ಮನಿಯವರ ಜಾಗದಾಗ ಒಂದು ಪಾರಿಜಾತ ಗಿಡನೂ ಇತ್ತು. ಸಂಜಿ ಮುಂದ ಸಣ್ಣಕ ಮೊಗ್ಗು ಒಡದು, ಇನ್ನೂ ಬಿಡಿಸಿಗೊಳ್ಳಲಾರದ ಒಳಗ ಮುಚಗೊಂಡಿರ್ತಿದ್ದ ಬಿಳಿ ಫಕಳಿ, ಅದಕ್ಕ ಕೇಸರಿ ದೇಟಿನ homes2ಕಾಂಬಿನೇಶನ್ನು, ಸುತ್ತೆಲ್ಲಾ ಹರಡೋ ಸಣ್ಣ ಪರಿಮಳ, ಎಲ್ಲಾ ಭಾಳ ಖುಶಿ ಕೊಡತಿದ್ದು. ಬೆಳಿಗ್ಗೆ ಮಾತ್ರ ಗಿಡದೊಳಗ ಇನ್ನ ಇರಂಗಿಲ್ಲಂತ ಕಳಚಿಗೊಂಡು ನಮ್ಮ ಅಂಗಳದ ತುಂಬೆಲ್ಲಾ ಬೀಳೋ ಪಾರಿಜಾತ ಹೂವು ಆರಲಿಕ್ಕೆ ನನ್ನ ಗೆಳತಿ ಒಬ್ಬಳು ಬರತಿದ್ಲು.

ಅವರಮ್ಮ ಲಕ್ಷ ಹೂವಿನ ವ್ರತ ಹಿಡದಿದ್ದರಂತ. ಅದಕ್ಕ ಇಕಿ ಬಂದು ಹೂ ಆರಿಸಿಕೊಂಡು ಹೋಗಾಕಿ, ಅದರ ಕೌತೂಕ ತಾಳಲಾರದ ನಮ್ಮ ಅಪ್ಪ ಅಕಿನ್ನ ಕರದು ಕೂಡಿಸಿಗೊಂಡು ದಣಿವಾರಿಸಿಗೋ ಅಂತ ಉಪಚಾರ ಮಾಡವ್ರು, ಅಮ್ಮ ಬಿಸಿ ಬಿಸಿ ಚಹಾ ಮಾಡಿ ಕೊಡಾಕಿ. ಎಷ್ಟ ಛೊಲೋ ಹುಡುಗಿ, ತಾಯಿ ವ್ರತಕ್ಕ ಎಷ್ಟ ಸಹಾಯ ಮಾಡ್ತಾಳ, ಭಾಳ ಒಳ್ಳೆ ಗಂಡ ಸಿಗ್ತಾನ ನಿನಗ ಅಂತ ಒಂದಿಷ್ಟು ಭೋಪರಾಕ ಹೇಳಿ ಕಳಸಾವ್ರು.

ಮನಿ ಮುಂದ ಪಾರಿಜಾತ ಹೂ ಬಿದ್ದು ಬಿದ್ದು ನನ್ನ ಎತ್ತಿ ದೇವರಿಗೆ ಏರಸರಿ ಅಂತ ಅತ್ತರೂ ಕೇಳದನ ಕಿವುಡಾಗಿದ್ದಕ್ಕ ನಮಗ ಎಂಥಾ ಗಂಡ ಸಿಗತಾನೋ ಅಂತ ಹೆದರಿಕಿನೂ ಆಗತಿತ್ತು ನನಗ. ಅಂಥಾ ಪಾರಿಜಾತ ಗಿಡ ಕಡದು ಆ ಜಾಗದಾಗ ಎತ್ತರ ಮನಿ ನಿಲ್ಲಿಸಿಬಿಟ್ರು ಬಾಜು ಮನಿಯವ್ರು. ಈಗ ನಮಗ ಘಾಳಿನೂ ಇಲ್ಲ, ಪರಿಮಳನೂ ಇಲ್ಲ ಆಗಿ ಹೋಗಿಬಿಟ್ತು. ಆದ್ರೂ ತೌರುಮನಿಗೆ ಹೋದಾಗ ಸಣ್ಣ ಕಟ್ಟಿ ಮ್ಯಾಲೇ ಯಾಕಾಗವಲ್ತು ನಾನು ಒಂದಿಷ್ಟು ಕೂತು ಹೋಗಾವ್ರು ಬರಾವ್ರನ್ನೆಲ್ಲಾ ನೋಡೋದನ್ನ ಬಿಟ್ಟಿಲ್ಲ. ಹಂಗ ಮೊದ್ಲಿನ ಸಂತೋಷ, ಸಮಾಧಾನ ಈಗ ಆಗಂಗಿಲ್ಲಾದ್ರೂ ಕಟ್ಟಿ ಮ್ಯಾಲೆ ಕೂಡೋ ಚಟಾ ತೀರ್ತದ. ಅಷ್ಟ ಸಾಕು.

‍ಲೇಖಕರು admin

16 December, 2016

8 Comments

  1. ಡಿ.ಎಸ್.ರಾಮಸ್ವಾಮಿ

    ಹಿಂದಕ್ಕೆ ದಶಕಗಳ ಹಿಂದಕ್ಕೆ ಕರೆದೊಯ್ದ ಅನುಭವವನ್ನೇ ಎರಕಹೊಯ್ದ ಬರಹ. ಜಗಲಿ ಇಲ್ಲದಿದ್ದ ಮನೆಗಳು‌ ಹಿಂದೆಲ್ಲ ಇರುತ್ತಲೇ ಇರಲಿಲ್ಲ. ಈ ಅಪಾರ್ಟ್ಮೆಂಟ್ ಸಂಸ್ಕೃತಿ ಬಂದ ಮೇಲೆ ಜಗಲಿಯ ಮೇಲಿನ ಹರಟೆ ಇರಲಿ ಎದುರು ಸಿಕ್ಕಾಗ ಒಂದು ಪರಿಚಯದ ನಗುವಿಗೂ ಲೆಕ್ಕಾಚಾರ. ಧನ್ಯವಾದ ಮೇಡಂ.

    • Neeta Rao

      ಧನ್ಯವಾದಗಳು ಸರ್.

  2. Anonymous

    ಮೊನ್ನೆ ನಮ್ಮ ಕೊಪ್ಪಳದ ಹಳೇ ಊರಲ್ಲಿರುವ ಟೀಚರ್ ಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕೋಡೊಕೆ ಹೋಗಿದ್ದೆ. ಅಲ್ಲಿಯೂ ಹಳೇ ಕಾಲದ ಕಂಪೌಂಡ್ ಇಲ್ಲದ ಮನೆಗಳು ಇವೆ . ಕಂಪೌಂಡ್ ಇಲ್ಲದ್ದಕ್ಕೆ ಈಗಲೂ ಸಂಜೆ ಅಲ್ಲಿ ನಿತ್ಯ ಮಕ್ಕಳು, ಹೆಣ್ಣು ಮಕ್ಕಳು, ಪುರುಷರು. ಪಕ್ಕದ ಮಬೆಯವರ ಜೊತೆ ಸಂವಹನದಿಂದ ನೆಮ್ಮದಿಯಾಗಿದ್ದಾರೆ.

    • Neeta Rao

      ಹೌದು, ಕಂಪೌಂಡ್ ಇರದ ಆದರೆ ಕಟ್ಟೆಗಳಿರುವ ಮನೆಯವರು ಪಕ್ಕದ ಮನೆಯವರೊಂದಿಗೆ ಸಂವಹನ ನಡೆಸಲು ಕಟ್ಟೆಗಳೇ ವೇದಿಕೆಗಳಂತೆ ಸಹಾಯ ಒದಗಿಸುತ್ತವೆ.

  3. Ravi

    ಹಳೇ ನೆನಪುಗಳು ಹಂಗ ಒಂದು ರೌಂಡ್ ಬಂದು ಹೊದ್ವು..
    ಭಾಳ ಚಂದ ಬರ್ದಿರಿ

    • Neeta Rao

      ಹಂಗ ಓದಿದವ್ರಿಗೆ ತಮ್ಮ ಹಳೆ ನೆನಪು ಬಂದುಹೋದ್ರ ನನ್ನ ಲೇಖನ ಸಾರ್ಥಕ ಆಧಂಗ ನೋಡ್ರಿ.

  4. A Thimmana Gouda

    ಮನೆಯ ಮುಂದಿನ ಕಟ್ಟೆಯ ಮಹತ್ವ, ಅದು ಉಂಟುಮಾಡುವ ಸಮೂಹ ಜೀವನ ಪದ್ಧತಿ ಹಾಗೂ ಉಪಯೋಗದ ನಾನಾ ಆಯಾಮಗಳನ್ನು ತು೦ಬಾ ಆಪ್ತವಾಗಿ ಬರೆದಿದ್ದೀರಿ. ಹಳೆಯ ನೆನಪುಗಳು ಸ್ಪುರಿಸಿದವು.

    • Neeta Rao

      ಥ್ಯಾಂಕ್ಸ್ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading