ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಬಳವೆಂದರೆ ಕೋಣಗಳ ಓಟ ಮಾತ್ರವಲ್ಲ..

ಕಂಬಳ- ಎರಡು ವಾದಗಳು

ಸುಚಿತ್ ಕೋಟ್ಯಾನ್ ಕುರ್ಕಾಲು

ನನ್ನೂರಿಗೆ ಸಮೀಪದಲ್ಲಿ ಕಟಪಾಡಿ ಎಂಬ ಅರೆ ಪಟ್ಟಣ ಇದೆ. ಬಾಲ್ಯದಿಂದಲೂ ಜನವರಿ ತಿಂಗಳಲ್ಲಿ ನಡೆಯುತ್ತಿದ್ದ ಕಟಪಾಡಿ ಮೂಡು-ಪಡು ಕಂಬಳವನ್ನು ನೋಡುತ್ತಾ ಬೆಳೆದವನು ನಾನು.

ಮೊದಲ ಬಾರಿಗೆ ಕಂಬಳಕ್ಕೆ ಹೋದದ್ದು ಇನ್ನೂ ನೆನಪಿದೆ. ಇನ್ನೇನು ಕಂಬಳ ಗದ್ದೆಗೆ ಸಮೀಪಿಸಬೇಕು ಅನ್ನುವಷ್ಟರಲ್ಲಿ ಗದ್ದೆಯಲ್ಲಿ ಓಡಿದ ಕೋಣಗಳು ಓಡುತ್ತಾ ಓಡುತ್ತಾ ಜನರ ಮಧ್ಯೆ ನುಗ್ಗಿಬಿಡಬೇಕೇ? ಪುಣ್ಯಕ್ಕೆ ಅಪ್ಪ ಕೈ ಗಟ್ಟಿ ಹಿಡಿದಿದ್ದರಿಂದ ಕೋಣಗಳ ಕಾಲಡಿಗೆ ಬೀಳದೆ ಬಚಾವಾಗಿದ್ದೆ.

ಕಲೆ: ಶೇಖರ್ ಬಳ್ಳಾರಿ

ಕಲೆ: ಶೇಖರ್ ಬಳ್ಳಾರಿ

ಕಂಬಳವೆಂದರೆ ಬರೀ ಕೋಣಗಳ ಓಟ ಮಾತ್ರವಲ್ಲ, ಊರವರಿಗೆ ಅದೊಂದು ಜಾತ್ರೆಯಾಗಿತ್ತು. ಮಕ್ಕಳಾಗಿದ್ದ ನಮಗಂತೂ ಅದು ತಿಂಡಿ, ತಿನಸುಗಳನ್ನು, ಆಟಿಕೆಗಳನ್ನು ಕೊಳ್ಳುವ ಊರ ಜಾತ್ರೆಗೆ, ಚರ್ಚಿನ ಸಾಂತ್ ಮಾರಿಗೆ ಪೂರಕವಾದ ಇನ್ನೊಂದು ಅವಕಾಶವಾಗಿತ್ತು. ಇಡೀ ಊರಿಗೆ ಊರೇ ಕಂಬಳದಲ್ಲಿ ಕಲೆಯುತ್ತಿತ್ತು. ರಾತ್ರಿಯಿಡೀ ಇಬ್ಬನಿ ಬೀಳದಂತೆ ತಲೆಗೆ ಮುಂಡಾಸು ಕಟ್ಟಿಕೊಂಡು ಕಂಬಳದ ಗದ್ದೆಯಲ್ಲಿ, ಅಂಗಡಿ ಸಂತೆಯಲ್ಲಿ ಓಡಾಡುವ ನಿದ್ದೆಗಣ್ಣಿನ ಕಂಬಳದ ಹುಚ್ಚರು ಕಾಣಸಿಗುತ್ತಿದ್ದರು.

ಕರಾವಳಿಯ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಕಂಬಳ ಇಂದು ನಿಷೇಧಿಸಲ್ಪಟ್ಟಿದೆ ಹಾಗೂ ಅದರ ಬಗ್ಗೆ ಹೋರಾಟಗಳಾಗುತ್ತಿವೆ. ಕಳೆದ ಕೆಲವು ದಿನಗಳಿಂದ ಪರ ವಿರೋಧ ಮಾತುಗಳು ನಿರುದ್ಯೋಗಿಗಳ ಕಾರ್ಯಸ್ಥಾನವಾದ ಫೇಸ್ಬುಕ್ಕಿನಲ್ಲೂ ಕಾಣಿಸುತ್ತಿದೆ. ಕನ್ನಡ ಚಿತ್ರರಂಗ, ಕರಾವಳಿ ಹಿನ್ನೆಲೆಯಿಂದ ಬಂದಿರುವ ಕೆಲ ಸಾಹಿತಿಗಳು, ಹೋರಾಟವೊಂದೇ ಗೊತ್ತಿರುವ ಕನ್ನಡ ಚಳುವಳಿಯ ವಾಟಾಳಣ್ಣ, ಮುಂತಾದವರು ಈಗಾಗಲೇ ಬೆಂಬಲವಿತ್ತಿದ್ದಾರೆ. ಕರಾವಳಿಯ ಜನತೆಯ ಜೊತೆ ನಾವಿದ್ದೇವೆ ಅಂದಿದ್ದಾರೆ.

ಇನ್ನೊಂದೆಡೆ ಪ್ರಾಣಿಹಿಂಸೆಯ ಕಾನ್ಸೆಪ್ಟನ್ನು ಮೂಲವಾಗಿರಿಸಿ ಹಲವಾರು ಮಂದಿ ಕಂಬಳ ನಿಷೇಧಿಸಿದ್ದು ಒಳ್ಳೇದಾಯ್ತು ಅನ್ನುತ್ತಿದ್ದಾರೆ. ಕೃಷಿಯಿರುವಾಗ ಕಂಬಳವಿತ್ತು ನಿಜ, ಈಗ ಅದು ಧನಿಕರ ಶ್ರೀಮಂತಿಕೆಯನ್ನು ತೋರ್ಪಡಿಸುವ ತೆವಲಾಗಿದೆ. ಕೃಷಿ ಬೇಡವೆನ್ನುವವರಿಗೆ ಕಂಬಳ ಯಾಕೆ ಎನ್ನುವ ವಾದವೂ ಕೇಳಿಬರುತ್ತಿದೆ. ಸತ್ಯದ ಅಂಶಗಳು ಕೆಲವು ಅಲ್ಲಿರುವದರಿಂದ ಅವರ ವಾದವನ್ನು ಸಾರಾಸಗಟಾಗಿ ನಾವು ತಿರಸ್ಕರಿಸುವಂತಿಲ್ಲ.

ಕಂಬಳ ಬೇಕೆನ್ನುವವರ ವಾದ ನೋಡಿ- ಕಂಬಳ ಬರೀ ಆಟವಲ್ಲ, ಅದಕ್ಕೆ ಒಂದು ಪಾರಂಪರಿಕ ಹಿನ್ನೆಲೆಯಿದೆ. ಕರಾವಳಿಯ ಎಷ್ಟೋ ಕಡೆಗಳಲ್ಲಿ ದೇವರ ಕಂಬಳ ಎಂಬುವುದು ನಡೆಯುತ್ತದೆ. ಒಂದು ದಿನ ಬಾರುಕೋಲಿನಿಂದ ಹೊಡೆದದ್ದು ಹಿಂಸೆಯೆಂದು ಕಾಣಿಸುವುದಾದರೆ ವರ್ಷದ ಉಳಿದ ಹನ್ನೊಂದು ತಿಂಗಳು ಅದೇ ಕಂಬಕ್ಕೆ ಕೋಣಗಳಿಗೆ ಸ್ವಿಮ್ಮಿಂಗ್ ಫೂಲ್ ಮಾಡಿ, ಕೊಟ್ಟಿಗೆಗೆ ಎ.ಸಿ., ಫ್ಯಾನ್ ಗಳನ್ನು ಹಾಕಿ ಮನೆ ಮಗುವಿನಂತೆ ನೋಡಿಕೊಳ್ಳುವ ಪ್ರೀತಿ ಯಾಕೆ ಕಾಣುವುದಿಲ್ಲ?

ಹೊಡೆಯುವುದು ತಪ್ಪಾದರೆ ಪ್ರಾಣಿ ಪಕ್ಷಿಗಳನ್ನು ತಿನ್ನುವುದು ಅದಕ್ಕಿಂತ ದೊಡ್ಡ ತಪ್ಪು. ಕಂಬಕ್ಕೆ ಗದ್ದೆಯಲ್ಲಿ ಕೋಟದ ಜೊತೆ ಓಡುವ ವ್ಯಕ್ತಿಗೇನಾದರೂ ಸ್ಪೀಡೋ ಮೀಟರ್ ಇಟ್ರೆ ಹತ್ತಾರು ಉಸೇನ್ ಬೋಲ್ಟರನ್ನು ಕರಾವಳಿಯಲ್ಲೇ ನೀವು ಕಾಣಬಹುದು… ವಾದ ಸರಣಿ ಹೀಗೆಯೇ ಮುಂದುವರಿಯುತ್ತದೆ. ಮತ್ತದು ಬರೀ ಉತ್ಪ್ರೇಕ್ಷೆಯ ಅಥವಾ ಭಾವನಾತ್ಮಕವಾದ ಪೊಳ್ಳುವಾದ ಅಲ್ಲ.

ಇಲ್ಲಿ ಮಧ್ಯಮ ಮಾರ್ಗವನ್ನು ಅನುಸರಿಸುವುದು ನಿಜಕ್ಕೂ ಕಷ್ಟ. ಇಬ್ಬರ ಮಾತಿನಲ್ಲಿ ಸತ್ಯವಿದೆ. ಆದರೆ ಇಲ್ಲಿ ಗಮನಿಸಬೇಕಾದದ್ದು ಒಂದು ಏನೆಂದರೆ ಜಲ್ಲಿಕಟ್ಟು ಆಟಕ್ಕೆ ಹೋಲಿಸಿದರೆ ಕಂಬಳ ಅಷ್ಟು ಅಪಾಯಕಾರಿ ಆಟವಲ್ಲ. ಸರಕಾರ ಜಲ್ಲಿಕಟ್ಟಿಗೆ ಅನುಮತಿ ಕೊಟ್ಟು ಕಂಬಳವನ್ನು ನಿಷೇಧಿಸುವುದಾದರೆ ಅದು ಕರಾವಳಿಗೆ ಕೇಂದ್ರ ಸರಕಾರ ಮಾಡುವ ಮಲತಾಯಿ ದ್ರೋಹ. ಕಂಬಳವೂ ಅಷ್ಟೇ, ಹಿಂಸೆಯ ಸ್ವರೂಪವನ್ನು ಕೊಂಚ ಬದಲಾಯಿಸಿ ಆಡುವುದಕ್ಕೆ ನಮ್ಮವರು ಮನಸ್ಸು ಮಾಡಿದರೆ ಇಷ್ಟೆಲ್ಲಾ ಗಲಾಟೆಯಾಗಲೀ, ನಮ್ಮ ಆಟವನ್ನು ಆಡುವುದಕ್ಕೆ ಅನುಮತಿಕೊಡಿ ಎಂದು ಇನ್ನೊಬ್ಬರ ಮುಂದೆ ಕೈಚಾಚುವ ಪ್ರಮೇಯವಾಗಲೀ ಬರಲಿಕ್ಕಿಲ್ಲ. ಕಾದು ನೋಡೋಣ..

 

‍ಲೇಖಕರು admin

25 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading