ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಂಡದ್ದು, ಕಂಡೂ ಕಾಣದ್ದು ಮತ್ತು ಕಾಣದೆ ಹೋದದ್ದು…' – ಸಹ್ಯಾದ್ರಿ ನಾಗರಾಜ್

ಸಹ್ಯಾದ್ರಿ ನಾಗರಾಜ್

ಮಾಧ್ಯಮದ ಮಂದಿ ಸೇರಿದ್ದ ಕಾರ್ಯಕ್ರಮವೊಂದರಲ್ಲಿ ಕನ್ನಡದ ಪ್ರಮುಖ ದೈನಿಕವೊಂದರ ಸಂಪಾದಕರಿಗೆ ಯುವ ಪತ್ರಕರ್ತರೊಬ್ಬರು ಉತ್ಸಾಹದಿಂದ ಒಂದು ಕೇಳ್ವಿ ಒಗೆದರು, ”ಸರ್, ಭ್ರಷ್ಟಾಚಾರ ಎಲ್ಲೆಡೆ ತುಂಬಿ ತುಳುಕ್ತಾ ಇದೆ. ಅಪ್ರಾಮಾಣಿಕ ಅಧಿಕಾರಿಗಳು ಹೆಚ್ತಾ ಇದ್ದಾರೆ. ಅಂಥದ್ರಲ್ಲಿ ನೀವು ನಿಮ್ಮ ಪತ್ರಿಕೆಯಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿ ಡಿಕುನ್ನಾ ಅವರನ್ನು ದಕ್ಷ ಅಂತಲೂ, ಮೈಸೂರಿನಲ್ಲಿ ಐಎಎಸ್ ಅಧಿಕಾರಿ ವಿ ರಶ್ಮಿ ಅವರ ಮೇಲೆ ಹಲ್ಲೆ ನಡೆದ ಸುದ್ದಿ ಹಾಕುವಾಗ ಅವರನ್ನು ಪ್ರಾಮಾಣಿಕ ಅಧಿಕಾರಿ ಅಂತಲೂ ಬರೆದಿದ್ರಿ. ಅದ್ಹೇಗೆ ನೀವು ಅವ್ರಿಗೆ ಹಾಗೆ ಸರ್ಟಿಫಿಕೆಟ್ ಕೊಟ್ರಿ?”
ಹಾಲ್‌ನ ತುಂಬಾ ಒಮ್ಮೆಲೇ ನಿಶ್ಯಬ್ಧ ತುಂಬಿಕೊಳ್ಳತೊಡಗಿತು. ಅಲ್ಲೆಲ್ಲೋ ಕ್ಯಾಮೆರಾ ಕ್ಲಿಕ್ಕಿನ ಕ್ಷೀಣ ಸದ್ದು. ಹಿಂದಿನ ಸಾಲುಗಳಲ್ಲಿ ತಣ್ಣನೆಯ ಗುಸುಗುಸು. ಸಂಪಾದಕರ ಮೊಗದಲ್ಲಿ ಆ ಕೇಳ್ವಿಯ ಬಗೆಗೆ ಅಚ್ಚರಿಯ ಜೊತೆಗೆ ಸಣ್ಣದೊಂದು ನಗು ಮೂಡಿದ ಬೆನ್ನಲ್ಲೇ ಮಾತು ಶುರುವಾಯಿತು: ”ನೀವು ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟೊಂದು ಹತಾಶರಾಗಿರೋದಕ್ಕೆ ನನಗೆ ಬೇಸರ ಮತ್ತು ಆಶ್ಚರ್ಯವಾಗ್ತಿದೆ. ಸರಿ ಆಗಲಿ, ನ್ಯಾಯಮೂರ್ತಿ ಡಿಕುನ್ನಾ ಅವರು ಸೆಷನ್ಸ್ ನ್ಯಾಯಾಧೀಶರಾಗಿದ್ದಾಗ ಇಂಥ ಪ್ರಕರಣದಲ್ಲಿ ಇಷ್ಟು ಹಣ ತೆಗೆದುಕೊಂಡಿದ್ದರು, ಅಕ್ರಮವಾಗಿ ಇಂಥ ಕಡೆ ಸೈಟು ಗಿಟ್ಟಿಸಿದ್ದರು ಅನ್ನೋ ಮಾಹಿತಿ ನಿಮ್ಮಲ್ಲೇನಾದರೂ ಇದೆಯಾ? ಒಂದು ವೇಳೆ ಇದ್ರೆ ನೀವು ನಿಮ್ಮ ಪತ್ರಿಕೆಯಲ್ಲಿ ಧಾರಾಳವಾಗಿ ಪ್ರಕಟಿಸಿ-ವಿಷಯ ಹೀಗೆಲ್ಲ ಇದೆ, ಆದ್ರೂ ಇಂಥ ಪತ್ರಿಕೆಯವ್ರು ಇವರನ್ನು ದಕ್ಷ ಅಂತ ಸರ್ಟಿಫಿಕೆಟ್ ಕೊಟ್ಟಿದ್ದಾರೆ ಅಂತ ಬರೆದು ನಮಗೆ ಅವಮಾನ ಮಾಡಿ. ಇನ್ನು ರಶ್ಮಿಯವರು ಒಬ್ಬ ಅಧಿಕಾರಿಯಾಗಿ ಸಾರ್ವಜನಿಕ ವೃತ್ತಿಜೀವನದಲ್ಲಿ ನಮಗೆ ಗೊತ್ತಿದ್ದ ಹಾಗೆ ಯಾವತ್ತೂ ಯಾವುದೇ ಬಗೆಯ ಹಗರಣಗಳನ್ನೂ ಮಾಡಿಲ್ಲ. ಅವ್ರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಟ್ರಾನ್ಸ್‌ಫರ್ ಮಾಡಿಸೋಕೂ ಲಂಚದ ಹಣವನ್ನೇ ಬಳಸಲಾಗಿದೆ ಗೊತ್ತಾ? ಸರಿ, ರಶ್ಮಿ ಏನಾದ್ರೂ ಲಂಚ ತಗೊಂಡಿದ್ದಾರಾ, ನಿಮ್ಮಲ್ಲಿ ಆಧಾರ ಇದೆಯಾ? ನೀವು ನಿಮ್ಮ ಪತ್ರಿಕೆಯಲ್ಲಿ ಅದನ್ನೂ ಪ್ರಕಟಿಸಿ ಸ್ವಾಮಿ, ನಮಗೆ ಅವಮಾನವಾಗುತ್ತೆ. ನೋಡಿ, ಪ್ರಪಂಚ ಹಾಳಾಗಿದೆ, ಯಾರೂ ಸರಿಯಿಲ್ಲ, ಪ್ರಾಮಾಣಿಕರಿಲ್ಲ ಅಂತ ನೀವು ನೆಗೆಟಿವ್ ಆದ ನೂರು ನಿದರ್ಶನಗಳನ್ನು ಕೊಡಬಹುದು. ಆದರೆ ನನಗೆ ಪಾಸಿಟಿವ್ ಆದ ಮೂರೇ ಮೂರು ಘಟನೆ/ ವಿಷಯ ಸಾಕು, ನಾನು ಅದರ ಆಧಾರದಲ್ಲೇ ಚಂದದ ಬದುಕು ಕಟ್ಕೋತೇನೆ, ಪತ್ರಿಕೆ ನಡೆಸ್ತೇನೆ. ಹಾಗಾಗಿ ಪ್ರಾಮಾಣಿಕರು, ದಕ್ಷರು ಸಮಾಜದಲ್ಲಿ ಇಲ್ಲವೇ ಇಲ್ಲ ಅಂತ ನೀವು ಹೇಗೆ ತೀರ್ಮಾನ ಮಾಡ್ಕೊಂಡ್ರಿ ಅಂತ ನಂಗೆ ಅರ್ಥ ಆಗ್ತಿಲ್ಲ. ಹೀಗೆ ಹತಾಶರಾದ್ರೆ ಏನು ಮಾಡೋಕೂ ಸಾಧ್ಯವಿಲ್ಲ. ಆದ್ರೆ ಅಷ್ಟೊಂದು ಹತಾಶರಾಗೋ ಸ್ಥಿತಿಯಂತೂ ಖಂಡಿತ ಇಲ್ಲ.”

* * * * *

’ಮಾಧ್ಯಮ-ಪೂರ್ವಗ್ರಹ ಮತ್ತು ನೈತಿಕತೆ’ ಎಂಬುದರ ಕುರಿತು ಮಾತನಾಡುವಾಗ, ಆ ಪೂರ್ವಗ್ರಹ ಮತ್ತು ನೈತಿಕತೆಯ ಸಮಸ್ಯೆಗಳು ಉದ್ಭವಿಸುವ ನೆಲೆಗಳನ್ನು ಶೋಧಿಸಿಕೊಳ್ಳುವುದು ಅವಶ್ಯ. ಅಲ್ಲದೆ, ಆ ನೆಲೆಗಳು ಮಾಧ್ಯಮ ಜಗತ್ತಿನ ಆಚೆ ಇವೆ ಎಂಬುದಂತೂ ಖಂಡಿತ ನಿಜವಲ್ಲ. ಹಾಗಾಗಿಯೇ ಸದ್ಯ ಮಾಧ್ಯಮದಲ್ಲಿರುವ ಮಂದಿಯ ಎರಡು ಮುಖ್ಯ ಆಲೋಚನಾ ವಿಧಾನಗಳನ್ನು ಮನಃಶಾಸ್ತ್ರೀಯ ಆಯಾಮದಲ್ಲಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಮಾಧ್ಯಮಗಳಲ್ಲಿರುವ ಉದ್ಯೋಗಿಗಳಲ್ಲಿ ಎರಡು ತೆರನಾದ ಆಲೋಚನಾ ವಿಧಾನಗಳಿವೆ. ಒಂದು, ಪ್ರಪಂಚವೆಲ್ಲ ಕೆಟ್ಟಿದೆ, ದೇಶದ ಅಧಿಕಾರಿ ವರ್ಗ ಅಪ್ರಾಮಾಣಿಕತೆಯ ತುತ್ತತುದಿಗೇರಿದೆ, ಭ್ರಷ್ಟಾಚಾರ ಅನ್ನೋದು ಎಲ್ಲರ ಎದೆಯಲ್ಲೂ ಪೊಟರೆ ಮಾಡಿಕೊಂಡು ಕಾಯಂ ಸ್ಥಾನ ಗಿಟ್ಟಿಸಿಕೊಂಡಿದೆ ಇತ್ಯಾದಿ. ಮಾಧ್ಯಮ ಇರೋದೇ ಜಗತ್ತಿನ ಕೊಳೆ ತೊಳೆದು ಉದ್ಧಾರ ಮಾಡಲಿಕ್ಕೆ ಎಂದು ಗಟ್ಟಿಯಾಗಿ ನಂಬಿದ್ದ ಈ ವಿಧಾನದ ಆಲೋಚಕರು ಸದ್ಯ ವಿಚಿತ್ರ ಹತಾಶ ಸ್ಥಿತಿಗೆ ತಲುಪಿದ್ದಾರೆ. ಈ ಹತಾಶ ಮನಸ್ಥಿತಿಯೇ ಅವರನ್ನು ನೈಜ ಮತ್ತು ಅಸಲಿ ಸುದ್ದಿಗಳಿಂದ ಹಾಗೂ ಅವುಗಳನ್ನು ಅವಿದ್ದಂತೆಯೇ ಗ್ರಹಿಸುವಿಕೆಯಿಂದ ದೂರವಿಟ್ಟಿದೆ. ಜೊತೆಗೆ ಅವರು ಎಲ್ಲ ಬೆಳವಣಿಗೆಗಳನ್ನೂ ನ್ಯೂಟ್ರಲ್ ಎನ್ನಬಹುದಾದ ಕನ್ನಡಕದ ಮೂಲಕ ನೋಡುವ ಅಪಾಯಕಾರಿ ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ. ಪರಿಣಾಮವಾಗಿ ಆಡಳಿತದೊಂದಿಗೆ ಜನರ ನಂಬಿಕೆ ಬೆಸೆಯುವ, ಒಳ್ಳೆಯ ಅಧಿಕಾರಿಗಳು, ರಾಜಕಾರಣಿಗಳು ಇನ್ನೂ ಇದ್ದಾರೆ ಮತ್ತು ಇರಲಿಕ್ಕೆ ಸಾಧ್ಯ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬಹುದಾದ ಸಹಜತೆಯಿಂದ ಅವರು ದೂರ ಸರಿಯುತ್ತಿದ್ದಾರೆ. ಈ ಬಗೆಯ ಆಲೋಚನೆ ಮಾಡುವವರು, ಮಾಧ್ಯಮಗಳು ಸಮಾಜದ ಒಂದು ಭಾಗ ಎಂದು ನಂಬುವುದಿಲ್ಲ. ಬದಲಾಗಿ ಅದು ಪ್ರತ್ಯೇಕ ಹಾಗೂ ಸ್ವಾಯತ್ತ ಕ್ಷೇತ್ರ ಎಂಬಂತೆ ವರ್ತಿಸುತ್ತಾರೆ. ಅಲ್ಲದೆ, ಇದೇ ಕಾರಣಕ್ಕೆ ತಮಗೇ ಗೊತ್ತಿಲ್ಲದೆ ತಮ್ಮ ಓದುಗರು ಅಥವಾ ವೀಕ್ಷಕರಿಂದ ಒಂದು ಮಟ್ಟದ ಅಂತರವನ್ನು ಕಾಯ್ದುಕೊಂಡುಬರುವುದು ಅವರಿಗೆ ಸಾಧ್ಯವಾಗಿದೆ. ಈ ಸಾಧ್ಯತೆ ಅವರಲ್ಲಿ ಹೆಮ್ಮೆ ಮತ್ತು ಸುರಕ್ಷತಾ ಭಾವ ಮೂಡಿಸುತ್ತಿರುವುದು ವಿಪರ್ಯಾಸ. ಹಾಗಾಗಿಯೇ ಅವರು, ಪ್ರವಾಹದಲ್ಲಿ ಸೂರು ಕಳೆದುಕೊಂಡ ಕೂಲಿಕಾರ ಮತ್ತು ಆರ್ಥಿಕ ಸಂಕಷ್ಟದ ಕಾರಣಕ್ಕೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಐಟಿ ಉದ್ಯೋಗಿ ಈ ಇಬ್ಬರ ಬಗ್ಗೆಯೂ ಒಂದೇ ಧಾಟಿಯಲ್ಲಿ ಮಾತನಾಡಬಲ್ಲರು ಮತ್ತು ಬರೆಯಬಲ್ಲರು. ಹತ್ತು ಸಾವಿರ ರೂ. ಸಾಲ ಮಾಡಿ ಕೃಷಿಭೂಮಿಗೆ ಹಾಕಿ ಬೆಳೆ ಕೈಕೊಟ್ಟು ಆತ್ಮಹತ್ಯೆ ಮಾಡಿಕೊಂಡ ರೈತ ಮತ್ತು ಸಾವಿರಾರು ಕೋಟಿ ರೂ. ಸಾಲ ಪಡೆದರೂ ತನ್ನ ಮೋಜಿನಾಟದಿಂದಾಗಿ ಉದ್ಯಮವನ್ನು ನಷ್ಟಕ್ಕೆ ದೂಡಿ ಸಾವಿರಾರು ನೌಕರರ ಕುಟುಂಬಗಳನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ ಉದ್ಯಮಿ ಈ ಇಬ್ಬರ ಬಗ್ಗೆಯೂ ಸಮತೂಕದಲ್ಲಿ ಆಲೋಚಿಸಬಲ್ಲರು.
ಇನ್ನು ಎರಡನೆಯದು, ಮಾಧ್ಯಮಗಳು ಸಮಾಜದ ಒಂದು ಅವಿಭಾಜ್ಯ ಅಂಗ ಎಂದು ಆಲೋಚಿಸುವ ಗುಂಪು. ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳಲ್ಲಿ ಹಣದಾಹ ಅಧಿಕವಾಗಿದೆ, ಅಪ್ರಾಮಾಣಿಕ ಹಾಗೂ ದುಷ್ಟ ರಾಜಕಾರಣಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬೆಲ್ಲ ನೆಗೆಟಿವ್ ಸಂಗತಿಗಳನ್ನು ಒಪ್ಪಿಕೊಳ್ಳುವ ಈ ಬಗೆಯ ಆಲೋಚಕರು; ಇದೆಲ್ಲದರ ನಡುವೆಯೂ ಕನಸಲ್ಲೂ ಲಂಚದಿಂದ ದೂರವಿರುವಂಥ ಅಧಿಕಾರಿಗಳಿದ್ದಾರೆ, ತನ್ನ ಕ್ಷೇತ್ರದ ಅಭಿವೃದ್ಧಿ ಬಗೆಗೆ ಪ್ರಾಮಾಣಿಕವಾಗಿ ಚಿಂತಿಸುವ ರಾಜಕಾರಣಿಗಳಿದ್ದಾರೆ ಎಂದೂ ನಂಬಿರುತ್ತಾರೆ. ಈ ನಂಬಿಕೆಗೆ ಇಂಬು ಕೊಡುವಂಥ ಘಟನೆಗಳು ನಡೆದಾಗ, ಅಂತಹ ವ್ಯಕ್ತಿಗಳು ಸುದ್ದಿವ್ಯಾಪ್ತಿಗೆ ಸಿಕ್ಕಾಗ ಜನರ ಜೀವನಪ್ರೀತಿಯನ್ನು ಹೆಚ್ಚಿಸುವಂಥ, ಚಂದದ ಬದುಕಿನ ಭರವಸೆ ಮೂಡಿಸುವಂಥ ಉತ್ಸುಕತೆಯನ್ನು ಈ ಗುಂಪು ತೋರುತ್ತದೆ. ಆ ಮೂಲಕ ಜನರಲ್ಲಿ ಅವರ ಬದುಕಿನ ಬಗೆಗೆ ಹಾಗೂ ಆಡಳಿತದ ಬಗೆಗೆ ಏಕಕಾಲಕ್ಕೆ ನಂಬಿಕೆ ಸೃಜಿಸುವ ಅಥವಾ ಈಗಾಗಲೇ ಜನರಲ್ಲಿರುವ ನೆಗೆಟಿವ್ ನಂಬಿಕೆಗಳಿಗೆ ತಿದ್ದುಪಡಿ ಮಾಡುವ ಕೆಲಸ ಮಾಡುತ್ತದೆ.
ಇನ್ನು ಮಾಧ್ಯಮದಲ್ಲಿ ಎಂತೆಂಥ ಮಹಾನುಭಾವರು ಇರುತ್ತಾರೆಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಸಂಗತಿ ಕೂಡ ನೈತಿಕತೆಯ ಬಿಕ್ಕಟ್ಟಿನ ಜೊತೆಗೆ ನಂಟು ಹೊಂದಿದೆ. ಕ್ಷುಲ್ಲಕ ಅನಿಸಿದರೂ ಮೊದಲನೆಯದಾಗಿ ಮಾಧ್ಯಮದಲ್ಲಿ ಕೆಲಸ ಮಾಡುವ ಮಂದಿ ಎಲ್ಲರಂತೆ ಮನುಷ್ಯರೇ. ಅವರಿಗೂ ಎರಡು ಕೈ, ಎರಡು ಕಾಲು, ಎರಡು ಕಣ್ಣು ಇತ್ಯಾದಿ ಸಾಮಾನ್ಯ ಜನರ ಲಕ್ಷಣಗಳೇ ಇರುತ್ತವೆ. ಆದರೆ ಅವರು ಆಲೋಚಿಸುವ ವಿಧಾನಗಳಲ್ಲಿ, ಘಟನೆಗಳನ್ನು ಗ್ರಹಿಸುವ ರೀತಿಯಲ್ಲಿ, ಗ್ರಹಿಸಿದ್ದನ್ನು ಕಟ್ಟಿಕೊಡುವ ಶೈಲಿಯಲ್ಲಿ, ಆ ಶೈಲಿಗೆ ಬಳಸಿಕೊಳ್ಳುವ ಭಾಷೆ ಮತ್ತು ಮಾತು/ಬರಹದೊಳಗೆ ಬಳಸುವ ಉದಾಹರಣೆ, ನಿದರ್ಶನ, ಹೋಲಿಕೆ, ಪ್ರತಿಮೆ ಇತ್ಯಾದಿಗಳ ತಂತ್ರಗಳಲ್ಲಿ ಸಾಮಾನ್ಯ ಜನರಿಗೆ ಸಾಮಾನ್ಯವಾಗಿ ಗೊತ್ತಿಲ್ಲದಿರಬಹುದಾದ ಹೊಳಹುಗಳಿರುತ್ತವೆ. ಹಾಗೆ ಹೊಳಹುಗಳಿರಬೇಕಾದ್ದು ಅನಿವಾರ್ಯ ಕೂಡ. ಹಾಗಿಲ್ಲದಿದ್ದರೆ ಆತ ಪತ್ರಕರ್ತ ಎನಿಸಿಕೊಳ್ಳೋದಾದರೂ ಹೇಗೆ? ಆದರೆ ಇಲ್ಲಿವರೆಗೆ ಹೇಳಿದ ಒಂದೂ ಆಲೋಚನಾ ವಿಧಾನ ತಲೆಯೊಳಗಿಲ್ಲದ ಅನೇಕ ಮಂದಿ ಮಾಧ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿದ್ದಾರೆ. ಅಂಥವರ ನಿರ್ಧಾರಗಳು, ಫರ್ಮಾನುಗಳು, ಘೋರ ಮೌನ ಹಾಗೂ ಅನವಶ್ಯಕ ಮಾತುಗಳು ಮಾಧ್ಯಮಗಳನ್ನು ಆಗಾಗ ಇಕ್ಕಟ್ಟಿಗೆ ಸಿಲುಕಿಸುತ್ತಾ ಬಂದಿವೆ.
ಮಾಧ್ಯಮದಲ್ಲಿ ಕೆಲಸ ಮಾಡುವಾಗಲೂ ತಮ್ಮ ವೈಯಕ್ತಿಕ ಸಿದ್ಧಾಂತ ಮತ್ತು ಚಿಂತನೆಗಳನ್ನು ಪಕ್ಕಕ್ಕಿಡದ, ಸುದ್ದಿ/ಬರಹಗಳಲ್ಲೂ ಅದನ್ನೇ ತೂರಿಸಿ ಪರಿಣಾಮ ಅಳೆಯುವ, ಹಾಗೆ ಮಾಡುವ ಮೂಲಕ ಅದರಿಂದ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ತರಹೇವಾರಿ ಲಾಭ ಗಳಿಸುವ ಮಹಾನುಭಾವರಿಗಂತೂ ಬರವಿಲ್ಲ. ಇನ್ನು ಆಫೀಸುಗಳಲ್ಲಿ ಇವರು ಈ ಧರ್ಮ/ಜಾತಿ, ಅವರು ಆ ಧರ್ಮ/ಜಾತಿ, ಇವರು ಎಡಪಂಥೀಯರು, ಇವರು ಬಲಪಂಥೀಯರು, ಇವರು ಕರಾವಳಿ ಜನ, ಅವರು ಮಲೆನಾಡಿನವರು, ಇವರು ಉತ್ತರ ಕರ್ನಾಟಕದವರು, ಅವರ ಮಾತೃಭಾಷೆ ಕನ್ನಡ ಅಲ್ಲ ಎಂದೆಲ್ಲ ಭಯಂಕರ ಲೆಕ್ಕಾಚಾರ ಹಾಕಿ ಮಾತನಾಡುವ ಎಡಬಿಡಂಬಿಗಳೂ ಉಂಟು; ಇಂಥ ಜೋಕರ್‌ಗಳಿಗೆ ಕನಿಷ್ಠ ಒಂದು ಸುದ್ದಿಯನ್ನು ಚಂದ ಮಾಡುವ (ಎಡಿಟ್) ಕೌಶಲ್ಯವೂ ಇರುವುದಿಲ್ಲ ಎಂದರೆ ನೀವು ನಂಬಲೇಬೇಕು.
ಮತ್ತೆ ಕೆಲವರಿಗೆ ಎಲ್ಲ ಕ್ಷೇತ್ರಗಳಂತೆ ಇದೂ ಒಂದು ಉದ್ಯೋಗದ ಕ್ಷೇತ್ರವಷ್ಟೆ ಎಂಬ ಪರ್ವತದೆತ್ತರದ ನಿರ್ಲಿಪ್ತತೆ. ಆಫೀಸಿನೊಳಗೆ ಅಥವಾ ಆಫೀಸಿನಾಚೆಗೆ ಏನೇ ಆಗಲಿ, ಅದಕ್ಕೂ ತಮಗೂ ಸಂಬಂಧವಿಲ್ಲದವರಂತೆ ತಮಗೆ ಕೊಟ್ಟ ಕೆಲಸವನ್ನು ತಮ್ಮ ಪಾಡಿಗೆ ತಾವು ಯಾಂತ್ರಿಕವಾಗಿ ಮುಗಿಸಿ, ಕತ್ತಲಾಗುವ ಮುನ್ನ ಮನೆ ಸೇರಿಕೊಳ್ಳುವ ಮಹಾನ್ ಸಾಹಸಿಗಳಿವರು. ತಾವು ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರ ಬಿಕ್ಕಟ್ಟು ಎದುರಿಸಿದರೇನು, ಇಕ್ಕಟ್ಟಿನಲ್ಲಿದ್ದರೇನು, ನೈತಿಕ ಪ್ರಶ್ನೆಗಳು ಎದುರಾದರೇನು, ಟೀಕೆ-ಟಿಪ್ಪಣಿ ಸಿಕ್ಕರೇನು-ಸಿಗದಿದ್ದರೇನು, ತಮಗೆ ಸಿಗುವ ಸಂಬಳ, ಬೋನಸ್, ಪಿಎಫ್, ರಜೆ, ಹೈಕ್‌ಗಳಿಗೆ ಕುತ್ತು ಬಾರದಿದ್ದರೆ ಸಾಕು ಎಂಬ ಪಕ್ಕಾ ಲೆಕ್ಕಾಚಾರ ಇಂಥವರದ್ದು.
ಇನ್ನು ಯುನಿವರ್ಸಿಟಿಗಳಲ್ಲಿ, “ನೀವು ಮಾಧ್ಯಮ ಅಧ್ಯಯನ ಆರಿಸಿಕೊಂಡಿದ್ದೇಕೆ?” ಎಂದು ಕೇಳಿದರೆ, “ನಾ ಟೀವೀಲಿ ಬರ್‍ಬೇಕು ಸರ್,” ಎನ್ನುವ ಮಹಾನ್ ಶೋಕಿವಾಲಾಗಳಿದ್ದಾರೆ. ನಾಲ್ಕೈದು ವಿಭಾಗಗಳಿಗೆ ಅರ್ಜಿ ಹಾಕಿಕೊಂಡು, ಕಡೆಗೆ ಯಾವುದೂ ಸಿಗದಿದ್ದಾಗ ಮಾಧ್ಯಮ ವಿಭಾಗಗಳಿಗೆ ವಕ್ಕರಿಸಿದವರ ಸಂಖ್ಯೆಯೂ ಗಣನೀಯವಾಗಿಯೇ ಇದೆ. ಪ್ರಾಯೋಗಿಕವಾಗಿ ಯಾವುದರಲ್ಲೂ ತೊಡಗಿಸಿಕೊಳ್ಳದೆ, ಶಿಳ್ಳೆ ಹೊಡೆಯುತ್ತಾ ಕ್ಯಾಂಪಸ್ ಅಲೆದುಕೊಂಡೋ ಅಥವಾ ಜರ್ನಲಿಸಂ ಸ್ಟೂಡೆಂಟ್ ಎಂದು ಬೀಗುತ್ತಲೋ, ತಮ್ಮ ಸಂಶೋಧನೆಗಾಗಿ ಸೀನಿಯರ್‌ಗಳು ಮಾಡಿದ ಸಂಶೋಧನೆಗಳಿಂದಲೇ ಮಾಹಿತಿ ಕದಿಯುತ್ತಲೋ, ಹಳೆಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸ್ಪೆಷಲ್ ಸ್ಟೋರಿಗಳನ್ನು ಕದ್ದು ಲ್ಯಾಬ್ ಜರ್ನಲ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುತ್ತಲೋ ವರ್ಷಗಳನ್ನು ಕಳೆಯುವ ಮಂದಿ ಮಾಧ್ಯಮ ಕ್ಷೇತ್ರಕ್ಕೆ ಬಂದರೆ ಅವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಹಾಗಂತ ನಿರಾಶರಾಗಬೇಕಾದ್ದಿಲ್ಲ. ಎಲ್ಲ ಕ್ಷೇತ್ರ ಮತ್ತು ಕಾಲದಲ್ಲಿ ಸ್ವಲ್ಪ ವಿಭಿನ್ನ ಮತ್ತು ವಿಚಿತ್ರ ಬಂಡಾಯ ಮನಸ್ಸುಗಳಿದ್ದಂತೆ ಇಲ್ಲಿಯೂ ಈ ಎಲ್ಲ ಶೋಕಿಗಳಿಗೂ ನಿಲುಕದ, ಹೊಸತನಕ್ಕೆ ಹಾಗೂ ಪ್ರಯೋಗಗಳಿಗೆ ತುಡಿಯುವ ಯುವಜನರಂತೂ ಇದ್ದಾರೆ ಮತ್ತು ಇರುತ್ತಾರೆ. ಆದರೆ ಇವರ ಪ್ರಮಾಣ ಕಡಿಮೆ.
ಇಷ್ಟೆಲ್ಲ ಅಸಂಗತ ವ್ಯಕ್ತಿತ್ವ ಮತ್ತು ಸಂಗತಿಗಳ ನಡುವೆಯೂ ಮಾಧ್ಯಮ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ನಂಬಿಕೆ ಹೊಂದಿರುವ, ಇದು ಬೇರೆ ಕ್ಷೇತ್ರಗಳಂತಲ್ಲ ಎಂಬ ಸಾಮಾನ್ಯಜ್ಞಾನವಿರುವ, ಓದುಗರು/ವೀಕ್ಷಕರಲ್ಲಿ ಜೀವನಪ್ರೀತಿ, ಸಕಾರಾತ್ಮಕತೆ ತುಂಬಬೇಕೆಂಬ ತುಡಿತ ಹೊಂದಿರುವ, ಅದೇ ಹೊತ್ತಿಗೆ ಜನರಿಗೆ ವಾಸ್ತವಗಳನ್ನೂ ಅರ್ಥ ಮಾಡಿಸಬೇಕೆಂಬ ವೃತ್ತಿನಿಷ್ಠೆ ಮತ್ತು ಬದ್ಧತೆ ಇರುವ ವ್ಯಕ್ತಿತ್ವಗಳೂ ಮಾಧ್ಯಮ ಕ್ಷೇತ್ರದಲ್ಲಿವೆ. ಸಾಕಷ್ಟು ಮಂದಿ ಪತ್ರಕರ್ತರು ತಮಗೇ ಗೊತ್ತಿಲ್ಲದೆ ಈ ಬಗೆಯ ಆಲೋಚನೆಗಳಲ್ಲಿ ಸಾಗುತ್ತಿರುತ್ತಾರೆ, ಆ ಮೂಲಕ ಜನರಿಗೆ ಹತ್ತಿರಾಗುತ್ತಿರುತ್ತಾರೆ.
ಮಾಧ್ಯಮ ಮತ್ತು ಪೂರ್ವಗ್ರಹದ ವಿಷಯಕ್ಕೆ ಬರುವುದಾದರೆ, ಇಲ್ಲಿನ ಪೂರ್ವಗ್ರಹಕ್ಕೆ ಎರಡು ಮುಖಗಳಿವೆ, ಇವು ಒಂದನ್ನು ಬಿಟ್ಟು ಇನ್ನೊಂದಿಲ್ಲದ ಕಾರಣ ಎರಡೂ ಮುಖಗಳನ್ನೂ ಉಲ್ಲೇಖಿಸುವುದು ಒಳಿತು. ಒಂದು, ಮಾಧ್ಯಮಗಳಿಗೆ ಅರ್ಥಾತ್ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇರುವ ಪೂರ್ವಗ್ರಹ ಹಾಗೂ ಇನ್ನೊಂದು, ಮಾಧ್ಯಮಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಪೂರ್ವಗ್ರಹ.
ಜನರು ದಡ್ಡರು, ಅವರಿಗೆ ವಿವೇಚನಾ ಶಕ್ತಿ ಇಲ್ಲ, ಆ ಅಸಾಮಾನ್ಯ ಶಕ್ತಿ ಇರುವುದೆಲ್ಲ ಮಾಧ್ಯಮದ ಮಂದಿಗಷ್ಟೆ. ಹಾಗಾಗಿ ನಾವು ಏನೇ ಬರೆದರೂ ಜನ ಓದುತ್ತಾರೆ, ನಾವು ಏನೇ ಮಾತನಾಡಿದರೂ ಕೇಳಿಸಿಕೊಳ್ಳುತ್ತಾರೆ, ಎಂಥದ್ದೇ ಕಾರ್ಯಕ್ರಮ ಮಾಡಿದರೂ ನೋಡುತ್ತಾರೆ ಎಂಬ ಅಸಾಧಾರಣ ಉಡಾಫೆ ಬೆರೆತ ಪೂರ್ವಗ್ರಹ ಮಾಧ್ಯಮಗಳಿಗಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಸಾಕಷ್ಟು ಸಂದರ್ಭಗಳಲ್ಲಿ ಮಾಧ್ಯಮ ಮಂದಿಯೇ ಹೇಳುವಂತೆ, ಅವರು ಏನೇ ಬರೆದರೂ, ಮಾತನಾಡಿದರೂ, ಕಾರ್ಯಕ್ರಮ ಮಾಡಿದರೂ ಅದು ಜನರ ಬೇಡಿಕೆಗೆ ಅನುಗುಣವಾಗಿಯೇ ಅಂತೆ! ಆದರೆ ಅನೇಕ ಸಂದರ್ಭಗಳಲ್ಲಿ ಜನ ದಡ್ಡರಲ್ಲ, ನಮಗಿಂತ ಬುದ್ಧಿವಂತರು ಎಂಬುದು ಮಾಧ್ಯಮದ ಮಂದಿಗೆ ಚೆನ್ನಾಗಿ ಮನವರಿಕೆಯಾಗಿರುತ್ತದೆ. ಆದರೂ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುವುದುಂಟು. ಹಾಗೆ ಒಪ್ಪಿಕೊಂಡುಬಿಟ್ಟರೆ ಸಾರ್ವಜನಿಕವಾಗಿ ತಮ್ಮ ಕಿಮ್ಮತ್ತು ಕಡಿಮೆಯಾದೀತು ಎಂಬ ಆತಂಕ ಇದಕ್ಕೆ ಕಾರಣ.
ತರಹೇವಾರಿ ಜ್ಯೋತಿಷ್ಯ ಕಾರ್ಯಕ್ರಮಗಳ ಬಗೆಗೆ, ಅಪರಾಧ ಸುದ್ದಿಗಳ ವೈಭವೀಕರಣದ ಬಗೆಗೆ, ಕ್ರೀಡೆ ಅಂದ್ರೆ ಕ್ರಿಕೆಟ್ ಮಾತ್ರ ಎಂಬಷ್ಟು ವ್ಯಾಪಕ ಪ್ರಚಾರ ಕೊಡುವ ಬಗೆಗೆ, ಎಲ್ಲೋ ಎಂದೋ ಪರಿಹಾರವಾಗಬಹುದಾಗಿದ್ದ ಪಕ್ಕಾ ಕೌಟುಂಬಿಕ ಸಮಸ್ಯೆಗಳನ್ನು ತೆರೆಗೆ ತಂದು, ಅಲ್ಲಿ ಮತ್ತಷ್ಟು ವೈಮನಸ್ಯ ಮೂಡಿಸಿ, ಹೊಡೆದಾಟಕ್ಕೆ ವೇದಿಕೆ ಮಾಡಿಕೊಟ್ಟು ರಂಪ ಮಾಡಿಸಿ ಮತ್ತೆ ಯಾವತ್ತಿಗೂ ಆ ಕುಟುಂಬ ಒಂದಾಗದಂತೆ ಮಾಡುವ ಬಗೆಗೆ, ಧರ್ಮ-ಜಾತಿ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಪದೇಪದೆ ಸ್ವಯಂಪ್ರೇರಿತವಾಗಿ ಕೆಣಕಿ, ಒಂದು ಧರ್ಮ/ಜಾತಿ ವಿರುದ್ಧ ಇನ್ನೊಂದು ಧರ್ಮ/ಜಾತಿಯನ್ನು ಎತ್ತಿಕಟ್ಟಿ ರಣಾಂಗಣ ಸಿದ್ಧಪಡಿಸಿಕೊಡುವ ಬಗೆಗೆ, ಸೆಲೆಬ್ರೆಟಿಗಳ ತೀರಾ ವೈಯಕ್ತಿಕ ಸಂಗತಿಗಳನ್ನು ಮಸಾಲೆ ಬೆರೆಸಿ ರಸವತ್ತಾಗಿ ನೀಡುವ ಬಗೆಗೆ, ದಿನವಿಡೀ ಒಂದೇ ಸಂಗತಿಯನ್ನು ಬಿತ್ತರಿಸಿ ಅದರೊಳಗೆ ಸುಳ್ಳಿದ್ದರೂ ಸತ್ಯವೆಂದು ತಿಪ್ಪೆಸಾರಿಸಿಬಿಡುವುದರ ಬಗೆಗೆ, ಕೆಲವು ಸುದ್ದಿಗಳನ್ನು ಸುದ್ದಿಗಳನ್ನಾಗಿ ಮಾತ್ರ ಕೊಡದೆ ಆ ಕುರಿತು ತೀರ್ಪು ಕೊಡುವ ರೀತಿಯಲ್ಲಿ ಮಾತನಾಡುವ ಬಗೆಗೆ, ಕೆಲವೊಮ್ಮೆ ಜ್ಯೋತಿಷಿಗಳನ್ನೂ ಮೀರಿಸಿಬಿಡುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವ ಬಗೆಗೆ, ಆರೋಪಿಗಳನ್ನು ಅಪರಾಧಿಗಳಂತೆ ಬಿಂಬಿಸಿ ಅಮಾಯಕರ ಮನಸ್ಸಿನಲ್ಲಿ ಕ್ರೋಧ ತುಂಬುವ ಬಗೆಗೆ… ಇಂಥ ನೂರಾರು ನಡೆಗಳ ಬಗ್ಗೆ ಮಾಧ್ಯಮಗಳನ್ನು ನೀವು ಪ್ರಶ್ನೆ ಮಾಡಿದ್ದೇಯಾದರೆ, ಜನರು ಅದನ್ನು ಬಯಸುತ್ತಾರೆ, ಹಾಗಾಗಿ ನಾವು ಅಂಥದ್ದನ್ನು ಕೊಡುತ್ತಿದ್ದೇವಷ್ಟೆ, ಇದರಲ್ಲಿ ನಮ್ಮದೇನಿಲ್ಲಪ್ಪ ಎಂದು ಕೈತೊಳೆದುಕೊಳ್ಳುತ್ತವೆ. ಬದಲಿಗೆ ಹೌದು ಸ್ವಾಮಿ, ನಮಗೆ ಪ್ರಸಾರ ಸಂಖ್ಯೆ ಅಥವಾ ಟಿಆರ್‌ಪಿ ಹೆಚ್ಚಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ. ಆ ಹೆದರಿಕೆಯಿಂದ, ಕೇವಲ ನಮ್ಮ ಲಾಭಕ್ಕೋಸ್ಕರ ಇಷ್ಟೆಲ್ಲ ಸರ್ಕಸ್ ಮಾಡ್ತಿದ್ದೇವೆ ಎಂಬ ಪ್ರಾಮಾಣಿಕ ದನಿ ಮಾಧ್ಯಮಗಳ ಕಡೆಯಿಂದ ಬರುವುದು ವಿರಳಾತಿವಿರಳ. ಅದರಲ್ಲೂ ಅಂಥ ತಪ್ಪೊಪ್ಪಿಗೆ ಸಾರ್ವಜನಿಕವಾಗಿ ಸಿಗುವುದಂತೂ ಖಂಡಿತ ಕಷ್ಟಸಾಧ್ಯ.
ಸುದ್ದಿಗೆ ಮಸಾಲೆ ಬೆರೆಸದಿದ್ದರೆ, ಒಂದಕ್ಕೆರಡು ಜೋಡಿಸಿ ಕಾಗಕ್ಕ-ಗುಬ್ಬಕ್ಕನ ಕತೆ ಹೇಳದಿದ್ದರೆ, ಕೆರಳಿಸುವಂಥ ಸುದ್ದಿ ಹಾಕದಿದ್ದರೆ, ಸುದ್ದಿಯನ್ನು ಮನರಂಜನಾತ್ಮಕವಾಗಿ ಬರೆಯದಿದ್ದರೆ ಅಥವಾ ಹೇಳದಿದ್ದರೆ, ಸುದ್ದಿಯನ್ನು ಸೆನ್ಸೇಷನಲ್ ಮಾಡದಿದ್ದರೆ ಜನ ಓದುವುದಿಲ್ಲ ಅಥವಾ ನೋಡುವುದಿಲ್ಲ ಎಂಬ ಪೂರ್ವಗ್ರಹ ಮಾಧ್ಯಮದ ಮಂದಿಯಲ್ಲಿ ಬೇರೂರಿದೆ. ಜನರ ನಾಡಿಮಿಡಿತವನ್ನು ನಾವು ಅರೆದು ಕುಡಿದಿದ್ದೇವೆ ಎಂಬ ಮಾಧ್ಯಮಗಳ ಭ್ರಮೆಯೇ ಇದಕ್ಕೆ ಮೂಲ ಕಾರಣ. ಆದರೆ ಎಲ್ಲ ಮಾಧ್ಯಮಗಳೂ ಒಂದೇ ತೆರನಾಗಿಲ್ಲ, ಹೀಗೆಯೇ ವರ್ತಿಸುತ್ತವೆ ಎಂದು ಕಡ್ಡಿಮುರಿದಂತೆ ಹೇಳಲೂ ಬರುವುದಿಲ್ಲ. ಒತ್ತಡಗಳ ಸಂದರ್ಭದಲ್ಲಿ ಕೆಲವು ಸುದ್ದಿಗಳ ತಂಟೆಗೆ ಹೋಗದ ಕೆಲವು ಮಾಧ್ಯಮಗಳು ನಂತರ ಆ ಒತ್ತಡದ ಕೋಟೆ ಒಡೆದು ಆಚೆಬಂದು ಅಥವಾ ಆ ಒತ್ತಡದ ಶಕ್ತಿ ಕ್ಷೀಣಿಸಿದ ನಂತರ ಅದೇ ಸುದ್ದಿಯನ್ನು ಬೇರೆಲ್ಲ ಮಾಧ್ಯಮಗಳಿಗಿಂತ ಹಲವು ಪಟ್ಟು ಮಹತ್ವ ಕೊಟ್ಟು ಪ್ರಕಟಿಸಿಬಲ್ಲವು/ ಪ್ರಸಾರ ಮಾಡಬಲ್ಲವು.
ಇನ್ನು ಜನರಿಗೂ ಮಾಧ್ಯಮಗಳ ಬಗೆಗೆ ಕೆಲವು ಪೂರ್ವಗ್ರಹಗಳಿವೆ. ದೈನಿಕವೊಂದರಲ್ಲಿ ಲಂಚ ಪ್ರಕರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಚಾಲ್ತಿಯಲ್ಲಿರುವ ಪುಟ್ಟ ಅಂಕಣವೊಂದಕ್ಕೆ ಓದುಗರೊಬ್ಬರು ತಾವು ಲಂಚ ಕೊಡಬೇಕಾಗಿಬಂದ ಘಟನೆಯನ್ನು ಬರೆದು, ಆ ಬರಹದೊಟ್ಟಿಗೆ ದಯವಿಟ್ಟು ಪ್ರಕಟಿಸಿ ಎಂಬ ವಿನಂತಿಯೊಂದಿಗೆ ೫೦೦ ರೂ. ಹಣವನ್ನೂ ಕಳಿಸಿದ್ದರು! ನಂತರ ಆ ಹಣವನ್ನು ಅವರ ವಿಳಾಸಕ್ಕೇ ವಾಪಸು ಕಳಿಸಿದ್ದು ಬೇರೆ ಮಾತು. ಆದರೆ ಸಾರ್ವಜನಿಕರಲ್ಲಿ ಈಗಲೂ ಸುದ್ದಿ ಪ್ರಕಟವಾಗಬೇಕೆಂದರೆ ಹಣ ಕೊಡಬೇಕೆಂಬ ಆಲೋಚನೆ ಉಳಿದುಕೊಂಡುಬಿಟ್ಟಿದೆ. ಈ ಪೂರ್ವಗ್ರಹಕ್ಕೆ ಪರೋಕ್ಷವಾಗಿ ಮಾಧ್ಯಮಗಳ ಮಂದಿಯೇ ಕಾರಣ ಎಂಬುದು ಮಾತ್ರ ನಿಸ್ಸಂಶಯ.
ಇಲ್ಲಿಯವರೆಗೆ ಹೇಳಿದ್ದೆಲ್ಲವೂ ಮಾಧ್ಯಮಗಳ ನೈತಿಕತೆಗೆ ಇರುವ ಆಂತರಿಕ ಸವಾಲುಗಳೇ. ಏಕೆಂದರೆ, ನೈತಿಕತೆ ವಿಷಯದಲ್ಲಿ ಮಾಧ್ಯಮಗಳಿಗೆ ಬಾಹ್ಯ ಸವಾಲುಗಳೆಂಬುದು ಖಂಡಿತ ಇರುವುದಿಲ್ಲ. ಅಕಸ್ಮಾತ್ ಮಾಧ್ಯಮಗಳು ಸಮಚಿತ್ತದಿಂದಿರುವ ವಿಷಯದಲ್ಲಿ ಬಾಹ್ಯ ಸವಾಲುಗಳಿರುತ್ತವೆ ಎಂದು ಮಾಧ್ಯಮದ ಮಂದಿ ವಾದಿಸಿದರೆ, ಅದು ಅವರು ಆಂತರಿಕ ಸವಾಲುಗಳಿಗೆ ತೇಪೆ ಹಾಕಲು ಮಾಡುವ ಹುನ್ನಾರ ಎಂದೇ ಭಾವಿಸಬಹುದು. ಮುಖ್ಯವಾಗಿ ನೈತಿಕತೆ ಎಂಬುದು ಮಾಧ್ಯಮಗಳು ತೆಗೆದುಕೊಳ್ಳುವ ನಿಲುವುಗಳ ಮೂಲಕ ವ್ಯಕ್ತವಾಗುವಂಥದ್ದು. ಅಸಲಿಗೆ ನೈತಿಕತೆಯ ಪ್ರಶ್ನೆ ಉದ್ಭವಿಸುವುದೇ ಮಾಧ್ಯಮಗಳು ನ್ಯೂಟ್ರಲ್ ಆಗಿದ್ದು, ಯಾವುದೇ ನಿಲುವು ತೆಗೆದುಕೊಳ್ಳದಿದ್ದಾಗ. ಹಾಗಾಗಿ ಯಾವುದಾದರೊಂದು ನಿಲುವು ತೆಗೆದುಕೊಳ್ಳುವುದು ತೀರಾ ಅವಶ್ಯ. ಆದರೆ ಈ ನಿಲುವು ತೆಗೆದುಕೊಳ್ಳಲೇಬೇಕಿರುವ ಪ್ರಕ್ರಿಯೆಯ ಹಿಂದಿರುವ ಒತ್ತಡವು ಜಾರ್ಜ್ ಬುಷ್‌ರ “ನೀವು ನಮ್ಮ ಬಣದೊಂದಿಗೆ ಇಲ್ಲ ಎಂದರೆ ಶತ್ರುಬಣದಲ್ಲಿದ್ದೀರಿ ಎಂದರ್ಥ” ಎಂಬ ಯುದ್ಧನಿಲುವಿನ ಹಿಂದಿರುವ ಒತ್ತಡಕ್ಕೆ ಹೋಲಿಸುವಂಥದ್ದಲ್ಲ. ಇನ್ನು, ಮಾಧ್ಯಮಗಳು ನಿಲುವು ತೆಗೆದುಕೊಂಡ ನಂತರವೂ ಆ ನಿಲುವು ದಮನಿತರ, ಶೋಷಿತರ, ದನಿ ಇಲ್ಲದವರ ಪರವಾದ ನಿಲುವೋ ಅಥವಾ ಪರೋಕ್ಷವಾಗಿ ಅವರ ವಿರುದ್ಧದ ನಿಲುವೋ ಎಂಬುದೂ ಗಮನಾರ್ಹ.
ಕಾಸಿಗಾಗಿ ಸುದ್ದಿ ಎಂಬ ಹೊಸ ಟ್ರೆಂಡ್ ಶುರುವಾದ ಮೇಲಂತೂ ಮಾಧ್ಯಮಗಳನ್ನು, ಮಾಧ್ಯಮಗಳ ಅತಿರೇಕದ ವರ್ತನೆಗಳನ್ನು ಮೊದಲ ಹೆಜ್ಜೆಗೇ ನಂಬುವಷ್ಟು ಧಾರಾಳತನವನ್ನು ಸಾರ್ವಜನಿಕರು ಹೊಂದಿದಂತಿಲ್ಲ ಅಥವಾ ಇದನ್ನೇ ಮತ್ತೊಂದು ಬಗೆಯಲ್ಲಿ ಹೇಳುವುದಾದರೆ, ಅಂಥದ್ದೊಂದು ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಂಡಿಲ್ಲ. ಉಳಿಸಿಕೊಳ್ಳಲು ಬೇಕಾದಷ್ಟು ಸಂಯಮವನ್ನು ಮಾಧ್ಯಮಗಳು ಅದರಲ್ಲೂ ಸುದ್ದಿವಾಹಿನಿಗಳು ಕಳೆದುಕೊಂಡು ಭಾರಿ ಕಾಲವೇ ಆಗಿದೆ. ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಆಕಸ್ಮಿಕವಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮದಿಂದ ಜನರ ಭಾವನೆಗಳಿಗೆ ನೋವಾದಾಗ, ಇಲ್ಲವೇ ಆ ಸುದ್ದಿ ಅಥವಾ ಕಾರ್ಯಕ್ರಮದ ಸಾಚಾತನದ ಬಗ್ಗೆ, ಪೊಳ್ಳಿನ ಬಗ್ಗೆ ಅರಿವಾದ ನಂತರವಾದರೂ ಪಶ್ಚಾತ್ತಾಪದ ಒಂದೇ ಒಂದು ಸಾಲನ್ನೂ ಪ್ರಕಟಿಸದಷ್ಟು/ ಒಂದೇ ಒಂದು ಮಾತನ್ನೂ ಆಡದಷ್ಟು ದಾರ್ಷ್ಟ್ಯ ಮಾಧ್ಯಮಗಳನ್ನು ಅಮರಿಕೊಂಡಿದೆ. ಈ ಅಪರಾಧಕ್ಕೆ ಮುದ್ರಣ ಮಾಧ್ಯಮ ಹೊರತು ಎಂಬುದು ಸಮಾಧಾನದ ಸಂಗತಿ. ಲಂಕೇಶರು ಪ್ರತಿಪಾದಿಸುತ್ತಿದ್ದ ತರತಮ (ಯಾವುದು ಸರಿ, ಯಾವುದು ತಪ್ಪೆಂದು ವಿವೇಚಿಸುವ) ಗುಣ ಮಾಧ್ಯಮದವರಿಗೆ ಇದ್ದಾಗಲಷ್ಟೆ ಮಾರ್ಕ್ವೆಜ್ ಹೇಳಿದಂತೆ ಪತ್ರಿಕೋದ್ಯೋಗವು ಜಗತ್ತಿನ ಅತ್ಯಂತ ಶ್ರೇಷ್ಠ ಉದ್ಯೋಗ ಎನಿಸಿಕೊಳ್ಳಬಲ್ಲದು, ಜನರ ದೃಷ್ಟಿಯಲ್ಲಿ.
 

‍ಲೇಖಕರು G

5 March, 2015

10 Comments

  1. shashikala M

    Very good article informative and realistic, depicting what is happening on both sides media and people and what is healthy
    stand for both. Good and bad co-exsist percentage only varies.
    people and media should see the realities which are seen, un-seen and ‘not seen’
    Shashikala

  2. ಟಿ.ಎಸ್.ಗೊರವರ

    ನಿಜ, ನಾಗರಾಜ. ಮಾಧ್ಯಮ ಮಂದಿ ಕುರಿತು ಸರಿಯಾಗೇ ಗ್ರಹಿಸಿದಿರಿ. ನಿಮ್ಮ ಮಾತುಗಳು ಅಂಗೈ ಗೆರೆಗಳಷ್ಟೇ ಸತ್ಯ.

  3. ಅಕ್ಕಿಮಂಗಲ ಮಂಜುನಾಥ

    ಸತ್ಯವನ್ನೇ ಹೇಳಿದ್ದೀರಿ.

  4. Anonymous

    ಬಹಳವಾಗಿ ಹಿಡಿಸಿದ ಗ್ರಹಿಕೆ…ಎಷ್ಟೊಂದು ಸೂಕ್ಷ್ಮಗಳಿವೆ…ಥ್ಯಾಂಕ್ಸ್ ನಾಗರಾಜ್..

  5. Observer

    ನಾಗರಾಜ್‍ ನಿಮ್ಮ ಗ್ರಹಿಕೆಗೆ ಸಿಕ್ಕ ಮಾಧ್ಯಮಗಳ ಅಂತರಾಳವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೀರಿ. ಒಂದೇ ಏಟಿಗೆ ಅಷ್ಟೂ ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಂತೆಯೂ ಇದು ಕಾಣುತ್ತದೆ. ನೀವು ಪ್ರಸ್ತಾಪಿಸಿದ ಪ್ರತಿ ವಿಚಾರಕ್ಕೂ ಅದರದ್ದೇ ಆಗ ಆಯಾಮಗಳಿವೆ ಮತ್ತು ಅವು ಒಂದೊಂದು ಪ್ರತ್ಯೇಕ ವಿಚಾರಪೂರ್ಣ ಲೇಖನಗಳಾಗುತ್ತವೆ. ಮನವಿ ಏನೆಂದರೆ, ದಯವಿಟ್ಟು ಪ್ರತಿ ವಿಚಾರಗಳ ಕುರಿತು ಶ್ರದ್ಧೆಯಿಂದ ಓದಿ, ಹೊಸ ನೋಟಗಳನ್ನು ನೀಡಲು ಪ್ರಯತ್ನಿಸಿ ಮತ್ತು ಅಧ್ಯಯನ ಪೂರ್ಣ ಬರಹವನ್ನು ಬರೆಯಲು ಪ್ರಯತ್ನಿಸಿ. ಇಲ್ಲದಿದ್ದರೆ ಇಂತಹ ಸಾವಿರ ಬರಹಗಳು ಬಂದರೂ ಪರಿಸ್ಥಿತಿಯಲ್ಲಿ ಬದಲಾವಣೆ ಆಗುವುದಿಲ್ಲ. ನಿಮ್ಮ ಗಮನಕ್ಕಾಗಿ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ನೀವು ಟಿಆರ್‍ಪಿ ವಿಚಾರವನ್ನು ಪ್ರಸ್ತಾಪಿಸಿದ್ದೀರಿ. ಆದರೆ, ಟಿಆರ್ಪಿ ಎಂದರೆ ಏನು? ಅದನ್ನು ಲೆಕ್ಕಹಾಕುವ ಬಗೆ ಏನು? ವಿದೇಶಗಳಲ್ಲಿ ಅದರ ಸ್ವರೂಪ ಏನಿದೆ? ಕರ್ನಾಟಕದಲ್ಲಿ ಟಿಆರ್ಪಿ ಎಂಬುದು ಯಾವಾಗಿಂದ ಚಾಲ್ತಿಗೆ ಬಂತು? ಇದರಿಂದ ಟಿವಿ ಮಾಧ್ಯಮದಲ್ಲಿ ಆಗಿರುವ ಬದಲಾವಣೆಗಳಯ ಏನು? ಹೊರಬರುವ ದಾರಿಗಳು ಏನಿವೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುತ್ತವೆ. ಸುಮ್ಮನೆ ಕುಳಿತುಕೊಂಡು ಟಿಆರ್ಪಿ ಹಿಂದೆ ಟಿವಿ ಪತ್ರಕರ್ತರು ಓಡುತ್ತಿದ್ದಾರೆ ಎಂದು ಉಪದೇಶದ ಮಾದರಿಯಲ್ಲಿ ಹೇಳುವುದು ಸೂಕ್ತ ಅಲ್ಲ. ಹೇಗೂ ನೀವು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೀರಿ. ತಾಳ್ಮೆ ಮತ್ತು ಆಲೋಚನೆಗೆ ಅಲ್ಲಿನ್ನೂ ಜಾಗ ಇದೆ. ಇದನ್ನು ಬಳಸಿಕೊಂಡು ಉಪಯುಕ್ತವಾಗುವಂತಹದ್ದು ಬರೆಯಿರಿ. ಆಗ ನಿಮ್ಮ ಬರವಣಿಗೆಯನ್ನು ಗಂಭೀರವಾಗಿ ಸ್ವೀಕರಿಸುವವರೂ ಹೆಚ್ಚಾಗುತ್ತಾರೆ..ಪ್ರೀತಿಯಿಂದ, ನಿಮ್ಮ ಸಹ ಪಯಣಿಗ.

    • Anonymous

      NIMMA ANISIKEGE NANNA SHAMATAVIDE. U R SMART OBSERVER SIR.
      MALLIKARJUN TALWAR

  6. Uday Itagi

    ನಾಗರಾಜ್ ಅವರೇ,
    ಸರಿಯಾಗಿ ಹೇಳಿದ್ದ್ರಿ. ಮಾಧ್ಯಮಗಳು ಎಷ್ಟೊಂದು ಸುಳ್ಳಿನಿಂದ ಕೂಡಿರುತ್ತವೆ ಎನ್ನುವದು ನನ್ನ ಅನುಭವಕ್ಕೆ ಬಂದಿದ್ದು ಲಿಬಿಯಾದಲ್ಲಿ ಕ್ರಾಂತಿ ಎದ್ದ ಸಮಯದಲ್ಲಿ. ಆಗ BBC, CNN, Aljazeera ಮೊದಲಾದ ಟೀವಿ ಚಾನಲ್ಗಳು ಗಡಾಫಿ ಬಗ್ಗೆ ಎಷ್ಟು ಕೆಟ್ಟದಾಗಿ ಚಿತ್ರಿಸಲು ಸಾಧ್ಯವೋ ಅಷ್ಟು ಕೆಟ್ಟದಾಗಿ ಚಿತ್ರಿಸಿದ್ದವು. ಅವನೊಬ್ಬ ಹೆಣ್ಣುಬಾಕ, ಸಲಿಂಗಕಾಮಿ, ಅಧಿಕಾರಕ್ಕಾಗಿ ಅನೇಕ ಜನರನ್ನು ಕೊಂದವನು, ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ, ಲಿಬಿಯನ್ರ ರಕ್ತ ಹೀರಿದವ, ಆತ ಅವರಿಗಾಗಿ ಏನೂ ಮಾಡಲೇ ಇಲ್ಲ ಇತ್ಯಾದಿ ಇತ್ಯಾದಿ ಅಂತಾ ವಿದೇಶಿ ಟೀವಿ ಚಾನಲ್ಗಳಾದ ತೋರಿಸಿದ್ದವು. ಆದರೆ ವಾಸ್ತವದಲ್ಲಿ ಅವೆಲ್ಲಾ ಸುಳ್ಳಿನಿಂದ ಕೂಡಿದ್ದವು ಹಾಗೂ ಆಧಾರರಹಿತವಾಗಿದ್ದವು. ಅವೆಲ್ಲಾ ಅಮೆರಿಕಾ, ಯೂರೋಪ್, ಮತ್ತು ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದವು. ಈ ಮೂರು ದೇಶಗಳು ಲಿಬಿಯಾದಲ್ಲಿನ ತೈಲಸಂಪತ್ತನ್ನು ದೋಚುವದಕ್ಕಾಗಿ ಮುಂಚಿನಿಂದಲೂ ಮಾಡಿದ ಹುನ್ನಾರಗಳು ಇವೆಲ್ಲಾ. ನಾನು ಲಿಬಿಯಾದಲ್ಲಿದ್ದು ಗಮನಿಸಿದ್ದೇನೆಂದರೆ ಗಡಾಫಿ ಆ ತೆರದ ಮನುಷ್ಯ ಯಾವತ್ತೂ ಆಗಿರಲಿಲ್ಲ. ಆತ ಲಿಬಿಯನ್ರಿಗೆ ಎಷ್ಟೊಂದು ಸೌಲತ್ತುಗಳನ್ನು ಕೊಟ್ಟಿದ್ದನೆಂದು ನಾನು ಕಣ್ಣಾರೆ ನೋಡಿದ್ದೇನೆ. ಇಲ್ಲಿಯ ಜನ ಎಷ್ಟೊಂದು ಖುಷಿಯಾಗಿದ್ದರು ಎನ್ನುವದನ್ನು ಸಹ ಕಂಡಿದ್ದೇನೆ. ರಾತ್ರಿ ಹನ್ನೆರೆಡು ಘಂಟೆಯ ನಂತರವೂ ರಾಜಧಾನಿ ಟ್ರಿಪೋಲಿಯಲ್ಲಿ ಹೆಣ್ಣುಮಕ್ಕಳು ಒಬ್ಬೊಬ್ಬರೇ ಓಡಾಡುವದನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಅಂಥನನ್ನು ಖಳನಾಯಕನೆಂದು ಮಾಧ್ಯಮಗಳು ಗುರುತಿಸಿದವು. ಒಮ್ಮೆ ಇಲ್ಲಿಗೆ ಬಂದು ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸಿ ನೋಡಿ. ಅವರು ಮಾಧ್ಯಮಗಳ ಬಗ್ಗೆ ಹೇಳುವದೇ ಬೇರೆ. ಅವರ ಪ್ರಕಾರ ಈ ಮಾಧ್ಯಮಗಳು ಹೇಳುವದೆಲ್ಲಾ ಸುಳ್ಳು ಮತ್ತು ಶಕ್ತಿಯುತ ರಾಷ್ಟ್ರಗಳ ಪರವಾಗಿ ಕೆಲಸ ಮಾಡುವಂಥವು ಎಂದು ಅವುಗಳಿಗೆ ಹಿಡಿಹಿಡಿ ಶಾಪ ಹಾಕುತ್ತಾರೆ. ಇದೇ ಧಾಟಿಯಲ್ಲಿ ನಮ್ಮ ಕನ್ನಡದ ಪ್ರಸಿದ್ಧ ಲೇಖಕರೂ ಸೇರಿದಂತೆ ಪತ್ರಿಕೆಗಳು ಹಾಗೂ ಟೀವಿ ಚಾನೆಲ್ಗಳು ದೂರದಲ್ಲಿ ಕುಳಿತುಕೊಂಡೇ ಇಲ್ಲಿಯ ವಸ್ತು ಸ್ಥಿತಿಯೇನೆಂದು ಅರಿಯದೇ ಅವು ಹೇಳಿದ್ದನ್ನೇ ಇವರೂ ಭಟ್ಟಿ ಇಳಿಸಿ ಶಹಭಾಷ್ಗಿರಿ ಗಿಟ್ಟಿಸಿಕೊಳ್ಳುವಾಗ ನಾನು ಕೊತಕೊತನೆ ಕುದಿದ್ದೇನೆ. ಇದಕ್ಕೆ NDTV ಯ ಬರ್ಕಾ ದತ್ ಕೂಡಾ ಹೊರತಾಗಿರಲಿಲ್ಲ. ಆದರೆ ಗಡಾಫಿ ಎಂಥ ವ್ಯಕ್ತಿ ಎಂಬುದನ್ನು ಹತ್ತಿರದಿಂದ ಬಲ್ಲ ಕೆಲವೇ ಕೆಲವು ಆಫ್ರಿಕನ್ ಪತ್ರಿಕೆಗಳು ಮಾತ್ರ “ಗಡಾಫಿಯ ಅಂತ್ಯ ಲಿಬಿಯಾದ ಅಂತ್ಯ” ಎಂದು ಬರೆದವು. ಅವು ಹೇಳಿದಂತೆ ಇವತ್ತು ಲಿಬಿಯಾ ಅನೇಕರ ಹಿಡಿತದಲ್ಲಿ ಸಿಕ್ಕು ನರಳುತ್ತಿದೆ ಹಾಗೂ ಅವನತಿಯ ಅಂತಿಮ ಘಟ್ಟವನ್ನು ತಲುಪಿದೆ. ಲಿಬಿಯಾವನ್ನು ಆ ಸ್ಥಿತಿಗೆ ತಂದಿಟ್ಟ ಮಾಧ್ಯಮಗಳಿಗೆ ಹಾಗೂ ಶಕ್ತಿಯುತ ರಾಷ್ಟ್ರಗಳಿಗೆ ಧಿಕ್ಕಾರವಿರಲಿ. ಹೀಗಾಗಿ ನಾನು ಮಾಧ್ಯಮಗಳಲ್ಲಿ ಬರುವದನ್ನೆಲ್ಲಾ ನಂಬುವದಿಲ್ಲ ಮತ್ತು ಅವರನ್ನು ಸದಾ ಅನುಮಾನದಿಂದಲೇ ನೋಡುತ್ತೇನೆ.
    ಇನ್ನು ನಿಮ್ಮ ಲೇಖನ ಮಾಧ್ಯಮಗಳ ಬಗ್ಗೆ ತುಂಬಾ ಮಾರ್ಮಿಕವಾಗಿ ಬಂದಿದೆ. ಅಬಿನಂದನೆಗಳು.
    ಉದಯ್ ಇಟಗಿ
    ಘಾಟ್, ಲಿಬಿಯಾ

    • ಪ್ರಮೋದ್

      ನಮ್ಮ ಮಾಧ್ಯಮಗಳು ಪಶ್ಚಿಮವೆ೦ಬ ಶ೦ಖದಿ೦ದ ಬ೦ದದ್ದೇಲ್ಲಾ ತೀರ್ಥ ಅ೦ತಾ ಎಲ್ಲರಿಗೂ ಹ೦ಚುತ್ತಿದ್ದಾರೆ. ಗದ್ದಾಫಿ ಬಗ್ಗೆ ನಾನೂ ತು೦ಬಾ ಕೆಟ್ಟ ಅಭಿಪ್ರಾಯ ಹೊ೦ದಿದ್ದೇನೆ. ನಮಗೆ ತಿಳಿಯದ ಹೊಸತನ್ನು ಹೇಳಿದ್ದೀರಿ. ಧನ್ಯವಾದಗಳು.

  7. ಪ್ರಮೋದ್

    ಯಾವುದನ್ನೂ ಸ೦ಕ್ಷಿಪ್ತವಾಗಿ, ಸರಳೀಕರಿಸದೇ, ಜನರಲೈಸ್ ಮಾಡದೇ ಇದದ್ದದನ್ನು ಇದ್ದ ಹಾಗೆ ಹೇಳಿದ್ದೀರಾ. ಒಳ್ಳೆಯ, ಧನಾತ್ಮಾಕ ಬೆಳವಣಿಗೆಗಳನ್ನು ಜಾಸ್ತಿ ಪಸರಿಸಿದರೆ ಜನರಲ್ಲಿ ನ೦ಬಿಕೆ, ಭರವಸೆಯನ್ನು ಮತ್ತೆ ತರಹಬಹುದು. ಇಲ್ಲದಿದ್ದರೆ ಬರೀ ಸಿನಿಕತನ, ದ್ವೇಷವನ್ನು ಹರಡಿದ೦ತಾಗುತ್ತದೆ.

  8. sahyadri nagaraj

    ಎಲ್ಲರ ಟಿಪ್ಪಣಿಗಳಿಗೆ ಮತ್ತು ಮುಖ್ಯವಾಗಿ ಇಷ್ಟು ಉದ್ದದ ಬರಹವನ್ನು ಓದಿದ ನಿಮ್ಮ ತಾಳ್ಮೆಗೆ ನಾ ಆಭಾರಿ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading