ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends ಓ ಮೈ ಗಾಡ್

ಓ ಮೈ ಗಾಡ್!!!

 

– ಮುಸಾಫಿರ್

ವಾರ್ತಾ ಭಾರತಿ

‘ಓ ಮೈ ಗಾಡ್’ ಚಿತ್ರ ಸಂಪೂರ್ಣ ಪರೇಶ್ ರಾವೆಲ್ ಚಿತ್ರ. ಇದು ಒಬ್ಬ ನಾಸ್ತಿಕ ಮತ್ತು ಆಸ್ತಿಕರ ನಡುವಿನ ತಿಕ್ಕಾಟ ಆಗಬಹುದು. ಅಥವಾ ದೇವರ ಹೆಸರಿನಲ್ಲಿ ಗೊಡ್ಡು ನಂಬಿಕೆಗಳನ್ನು ಬಿತ್ತುವವರ ಮಧ್ಯೆ ನಿಜವಾದ ದೇವರನ್ನು ಹುಡುಕುವ ಒಂದು ಪ್ರಯತ್ನವೂ ಆಗಬಹುದು. ಕಟ್ಟಾ ನಾಸ್ತಿಕನೂ, ಗುಜರಾತಿ ವ್ಯಾಪಾರಿಯೂ ಆಗಿರುವ ಕಾಂಜಿಲಾಲ್ ಮೆಹ್ತಾ ಇಡೀ ಚಿತ್ರದ ಮುಖ್ಯ ಪಾತ್ರ. ಸದಾ ದೇವರನ್ನು ವ್ಯಂಗ್ಯ ಮಾಡುತ್ತಾ ಓಡಾಡುವ ಈತನ ಅಂಗಡಿ ಸಣ್ಣದೊಂದು ಭೂಕಂಪಕ್ಕೆ ಈಡಾಗುತ್ತದೆ. ಇನ್ಶೂರೆನ್ಸ್ ಅಧಿಕಾರಿಗಳು ವಿಮೆ ನೀಡಲು ಹಿಂದೇಟು ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ತನ್ನ ಅಂಗಡಿಯನ್ನು ಬೀಳಿಸಿದ ದೇವರ ವಿರುದ್ಧವೇ ಕಾಂಜಿಲಾಲ್ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾನೆ. ವಿವಿಧ ಢೋಂಗಿ ಸ್ವಾಮೀಜಿಗಳೆಲ್ಲರೂ ನ್ಯಾಯಾಲಯದ ಮೆಟ್ಟಿಲನ್ನು ಏರಬೇಕಾಗುತ್ತದೆ. ಕಾಂಜಿಲಾಲ್‌ನ ಪಂಚಿಂಗ್ ಹೇಳಿಕೆಗಳು ಜನರನ್ನು ನಕ್ಕು ನಗಿಸುತ್ತದೆ. ದೇವರ ಹೆಸರಿನಲ್ಲಿ ನಡೆಯುವ ಎಲ್ಲ ಬೂಟಾಟಿಕೆಗಳನ್ನು ಈ ಚಿತ್ರದಲ್ಲಿ ಕಾಂಜಿಲಾಲ್ ಬಟಾ ಬಯಲುಗೊಳಿಸುತ್ತಾನೆ. ಮತ್ತು ಈ ಸ್ವಾಮೀಜಿಗಳು ತನಗೆ ದಂಡನೀಡಬೇಕು ಎಂದು ವಾದಿಸುತ್ತಾನೆ.

ಇಂತಹ ಸಂದರ್ಭದಲ್ಲಿ ದೇವರ ಪರವಾಗಿ ಅಕ್ಷಯ್‌ಕುಮಾರ್‌ನ ಪ್ರವೇಶವಾಗುತ್ತದೆ. ದೇವರು ಮತ್ತು ಕಾಂಜಿಲಾಲ್‌ನ ನಡುವಿನ ನಿಜವಾದ ತಿಕ್ಕಾಟ ಆರಂಭವಾಗುವುದು ಇಲ್ಲಿ. ಕಾಂಜಿಲಾಲ್‌ನ ವ್ಯಂಗ್ಯ ತಮಾಷೆಗಳನ್ನು ದೇವರ ಪಾತ್ರ ನಿರ್ವಹಿಸಿದ ಅಕ್ಷಯ್ ಹಾಗೆಯೇ ಮರಳಿಸುತ್ತಾನೆ. ಅಂತಿಮವಾಗಿ ಕಾಂಜಿಲಾಲ್‌ನ ಮುಚ್ಚಿದ ಕಣ್ಣನ್ನು ತೆರೆಸುತ್ತಾನೆ. ಅಷ್ಟೇ ಅಲ್ಲ, ನಿಜವಾದ ದೇವನು ಮಾನವೀಯ ಕೆಲಸಗಳಲ್ಲಿ ಅಡಗಿರುತ್ತಾನೆ ಎನ್ನುವುದನ್ನು ಎಲ್ಲರಿಗೂ ನಿರೂಪಿಸುತ್ತಾನೆ. ದೇವರು, ಹಬ್ಬಗಳು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಹಾಸ್ಯದ ಮೂಲಕವೇ ಒಂದು ಹೃದಯಸ್ಪರ್ಶಿ ಸಂದೇಶದ ಮೂಲಕ ಚಿತ್ರ ಮುಕ್ತಾಯವಾಗುತ್ತದೆ. ನಿಜಕ್ಕೂ ಪರೇಶ್ ರಾವಲ್‌ಗಾಗಿಯೂ, ಸಂದೇಶಕ್ಕಾಗಿಯೂ ಒಮ್ಮೆ ನೋಡಲೇಬೇಕಾದ ಚಿತ್ರ.

ಚಿತ್ರ ಮೂಲತಃ ಗುಜರಾತಿ ನಾಟಕದಿಂದ ಆಧರಿಸಿದ್ದರೂ, ಸಿನಿಮಾವಾಗಿ ಎಲ್ಲ ರೀತಿಯಲ್ಲೂ ಗೆಲ್ಲುತ್ತದೆ. ಕೊನೆಯವರೆಗೂ ತನ್ನ ಕುತೂಹಲವನ್ನು ಚಿತ್ರ ಉಳಿಸಿಕೊಳ್ಳುತ್ತದೆ. ಸಣ್ಣ ಪಾತ್ರವಾದರೂ ಅದಕ್ಕೆ ಅಕ್ಷಯ್ ಕುಮಾರ್ ನ್ಯಾಯ ನೀಡಿದ್ದಾರೆ. ಪರೇಶ್-ಅಕ್ಷಯ್ ನಡುವಿನ ವಾದವಿವಾದದಲ್ಲಿ ಅಂತಿಮವಾಗಿ ಅಕ್ಷಯ್‌ಕುಮಾರ್ ಗೆದ್ದರೂ, ಪಾತ್ರ ನಿರ್ವಹಣೆಯಲ್ಲಿ ಪರೇಶ್‌ಗೆ ಹೆಚ್ಚು ಅವಕಾಶವಿದೆ. ಮಿಥುನ್ ಚಕ್ರವರ್ತಿ, ಗೋವಿಂದ್ ನಾಮ್‌ದೇವ್, ಮಹೇಶ್ ಮಂಜ್ರೇಕರ್ ತಮ್ಮ ತಮ್ಮ ಪಾತ್ರದಲ್ಲಿ ತನ್ಮಯವಾಗಿ ನಟಿಸಿದ್ದಾರೆ. ಉಪೇಶ್ ಶುಕ್ಲಾ ಅವರ ನಿರ್ದೇಶನ ಅಚ್ಚುಕಟ್ಟಾಗಿದೆ.

ನಿರ್ದೇಶಕರು ಕತೆಯ ಕುರಿತಂತೆ ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ, ಚಿತ್ರದ ಮೌಲ್ಯವನ್ನು ಹೆಚ್ಚಿಸುವ ಅವಕಾಶವಿತ್ತು. ಅಕ್ಷಯ್ ಕುಮಾರ್ ಅವರ ಹಾಸ್ಯ ಚಿತ್ರಗಳು ಸಾಲು ಸಾಲಾಗಿ ನೆಲಕಚ್ಚುತ್ತಿರುವ ಈ ದಿನಗಳಲ್ಲಿ ಓ ಮೈ ಗಾಡ್ ಅವರಿಗೆ ಒಂದಿಷ್ಟು ಚೈತನ್ಯವನ್ನು ನೀಡಬಹುದು. ದುರದೃಷ್ಟವಶಾತ್ ಅವರಿಗೆ ಇಲ್ಲಿ ಮುಖ್ಯಪಾತ್ರವಿಲ್ಲ. ದೇವರ ಸೇಲ್ಸ್‌ಮ್ಯಾನ್‌ಗಳಿಗೆ, ದಲ್ಲಾಳಿಗೆ ಈ ಚಿತ್ರದಲ್ಲಿ ಸಾಕಷ್ಟು ವ್ಯಂಗ್ಯಗಳಿವೆ. ಚಿತ್ರ ಕತೆಯ ಮೂಲ, ನಾಟಕವಾದುದರಿಂದ ತೀಕ್ಷ್ಣ ಸಂಭಾಷಣೆಗಳೇ ಚಿತ್ರದ ಹೈಲೈಟ್.

‍ಲೇಖಕರು G

8 October, 2012

1 Comment

  1. Pramod

    ಇದಕ್ಕಿ೦ತ ಜಾಸ್ತಿ ‘ದೇವರ’ನ್ನು ಅಟ್ಯಾಕ್ ಮಾಡಿದ್ದರೆ ರಕ್ತದ ಕೋಡಿ ಹರಿಯುತ್ತಿತು. ಧರ್ಮದ ಹೆಸರಲ್ಲಿ ಕೊ೦ದಷ್ಟು ಜನ ಬೇರೆ ಯಾವುದರಲ್ಲೂ ಸತ್ತಿಲ್ಲ. ಕೆಲವು ವಾರಗಳಿ೦ದ ಪ್ರಪ೦ಚ ಹೊತ್ತಿ ಉರಿಯುತ್ತಿರುವುದು ಇದಕ್ಕೆ ಇನ್ನೊ೦ದು ಸಾಕ್ಷಿ.

    ಹಳಸಲು ಕೊಳೆತ ಬಾಲಿವುಡ್ ನಲ್ಲಿ ಹೊಸ ಚಿತ್ರಗಳು ಬರುವುದು ಅಪರೂಪ. ಅದೂ ದೇವರನ್ನೆ ಪ್ರಶ್ನಿಸುವ ಚಿತ್ರ ಮಾಡೋದಿಕ್ಕೆ ಮೀಟರ್ ಬೇಕು. ದೇವರ ಬಗೆಗಿನ “ಭಕ್ತಿ” ಬಗ್ಗೆ ಚಿ೦ತನೆಗೀಡು ಮಾಡುವ ಈ ಚಿತ್ರಕ್ಕೆ ಫುಲ್ ಮಾರ್ಕ್ಸ್. ಶ್ಲಾಘನೀಯ ಪ್ರಯತ್ನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading