
ಮಲಯಾಳಂ ಮೂಲ : ಕೆ_ಸಚ್ಚಿದಾನಂದನ್

ಅನುವಾದ : ತೇರಳಿ_ಎನ್_ಶೇಖರ್
ಚೆಗೆವಾರ ನಿನಗೇನಾಯಿತು?
ಟೀ ಶರ್ಟುಗಳಿಂದ ಚಹಾದ ಬಟ್ಟಲುಗಳಿಂದ
ಫ್ಯಾಷನ್ ಉಡುಪುಗಳ ಪೋಸ್ಟರುಗಳಿಂದ
ಅಧಿಕಾರಿಗಳ ಕಾರುಗಳಿಂದ
ಭ್ರಷ್ಟಾಚಾರಿಗಳ ಬಂಗ್ಲೆಗಳಿಂದ
ಇಣುಕಿ ನೋಡುವ ನಿನ್ನ ಮುಖ
ನಮ್ಮನ್ನು ಚಕಿತಗೊಳಿಸುತ್ತಿದೆ.
ನಮಗೆ ನೆನಪಿದೆ,
ಉಕ್ಕಿನ ಶಪಥದಂತೆ
ಜ್ವಲಿಸುತ್ತ ಹೊಳೆಯುವ ನಿನ್ನ
ಆರ್ದ್ರತೆಯ ಗಂಭೀರ ಮುಖ.
ಫಿಡೆಲ್ ಕ್ಯಾಸ್ಟ್ರೊನ ಜೊತೆಗೆ-
ಸೂರ್ಯನನ್ನು ನೇರವಾಗಿ ನೋಡುವ
ನೀಲ ಅಲೆಗಳನ್ನೆಬ್ಬಿಸುವ ಕಡಲ ಕಣ್ಣುಗಳು;
ಪೆಟ್ಲುಪ್ಪಿನ ವಾಸನೆ ಹೊಡೆಯುವ
ಬಿಸಿಲ ಜೊತೆಗೆ ಅಲುಗಾಡುವ
ನಿನ್ನ ಹೋರಾಟಗಾರನ ತುಟಿಗಳು;
ಲವಣ ನೆಲಗಳಿಂದ
ಅಗ್ನಿಪರ್ವತಗಳೆಡೆಗೆ ಚಾಚಿಕೊಳ್ಳುವ
ನಿನ್ನ ಅಳಿಸಲಾಗದ ಗೆರಿಲ್ಲಾ ಹೆಜ್ಜೆಗಳು.
ನಿನ್ನ ಸೈನಿಕನ ಕಡು ಹಸಿರು ಸಮವಸ್ತ್ರಗಳನ್ನು
ನೀನು ಎಸೆದು ಕೊಟ್ಟಿದ್ದು ಯಾರಿಗೆ, ಚೆಗೆವಾರ,
ಕಬ್ಬಿನ ಗದ್ದೆಗಳಿಗೋ ಹೊಗೆಸೊಪ್ಪಿನ ಬಳ್ಳಿಗಳಿಗೋ?
ಏನಾಗಿದ್ದರೂ ಈಗ ನಿನ್ನನ್ನು ಎತ್ತಿಕೊಂಡು ಧರಿಸುವ
ಈ ಶವಕುಟೀರಗಳಿಗಲ್ಲ
ನಿನ್ನ ‘ಪಟ’ವಿರುವ ಪದಕಗಳನ್ನು ಧರಿಸಿದ
ಸುಖದಾಹಿಗಳಾದ ಉಲ್ಲಾಸ ಯಾತ್ರಿಕರಿಗಲ್ಲ
ಇಲ್ಲಿ ಈಗಲೂ ನಿನಗಾಗಿ ಹಾಡುವ
ಗಿಟಾರುಗಳ ಒಂದು ಕಗ್ಗಾಡಿದೆ.
ನಿನ್ನನ್ನು ಹಿಂತಿರುಗಿ ಕರೆಯುತ್ತಿರುವ
ತರುಣ ಹೃದಯಗಳ ಕಣಿವೆಯಿದೆ.
ಸಂಕೋಲೆಗಳ್ಯಾವುದೂ ಕಿತ್ತುಹೋಗಿಲ್ಲ, ಚೆಗೆವಾರ,
ಕೆಲವೊಮ್ಮೆ ಅವು ಸ್ವರ್ಣದಿಂದ ಕೂಡಿರುತ್ತವೆ ಎಂದು ಮಾತ್ರ
ಕೆಲವೊಮ್ಮೆ ವಾಕ್ಕುಗಳಿಂದಲೂ ವಸ್ತುಗಳಿಂದಲೂ ಕೂಡಿರುತ್ತವೆ.
ಅಡುಗೆಮನೆಯಿಂದ ಅತಿಥಿ ಕೊಠಡಿಯವರೆಗೆ
ಅವು ಅದೃಶ್ಯವಾಗಿ ಚಾಚಿಕೊಳ್ಳುತ್ತವೆ
ಹೆಗಲುಗಳಲ್ಲೂ ಹೆಜ್ಜೆಗಳಲ್ಲೂ ಅಲ್ಲ ಅವು ಘನವಾಗುತ್ತಿರುವುದು,
ತಲೆಮಿದುಳಿನಲ್ಲೂ ಹೃದಯಗಳಲ್ಲೂ ಆಗಿವೆ ಈಗ.
ಕಾಲೋನಿಗಳು ವಿಚಾರಗಳಲ್ಲಾಗಿವೆ :
ತಮ್ಮನ್ನೇ ಮಾರಲಾಗುತ್ತಿದೆಯೆಂದು
ಮಾರಾಟಗಾರರು ಸಹ ಅರಿಯದ ಮಾರುಕಟ್ಟೆಗಳಲ್ಲಿ
ವ್ಯಕ್ತಿಗಳನ್ನೂ, ಊರುಗಳನ್ನೂ ಆತ್ಮಹತ್ಯೆಗೆ ವಿಧಿಸುವ
ಸಾಲಗಳ, ಸಹಾಯಗಳ ಹರಿತವಾದ

ಕಾರುಣ್ಯದಲ್ಲಿ
ಸ್ವಯಂ ಸಾಮ್ರಾಜ್ಯದ
ನಿರ್ವಾಹಕರಾಗಿ ಬದಲಾಗುತ್ತಿರುವುದನ್ನರಿಯದೆ
ಕ್ರಾಂತಿಯ ಪತಾಕೆಯನ್ನು ಎತ್ತುತ್ತಿರುವವರ
ನೋವನ್ನುಂಟು ಮಾಡುವ ನಿಷ್ಕಳಂಕತೆಯಲ್ಲಿ
ಸೌಹಾರ್ದದ ಶೈಲಿಗಳಲ್ಲೂ
ಪ್ರಣಯದ ಚೇಷ್ಟೆಗಳಲ್ಲೂ ಸಹ.
ಈಗ ಯುದ್ಧಗಳು ಕೆಂಪಗಿನ ಗಡ್ಡವನ್ನು ಕಳಚಿಟ್ಟು
ಶಾಂತಿಯ ಹಸಿರುವೇಷವನ್ನು ಧರಿಸಿ ಬರುತ್ತಿವೆ,
ಒಪ್ಪಂದದ, ಗುತ್ತಿಗೆಯ ಸಾಲದ ವಿನಿಮಯದೊಂದಿಗೆ.
ಹಲ್ಲಿಗೆ ಹಲ್ಲು ಎಂದಲ್ಲ ಹೊನ್ನಿಗೆ ಹೊನ್ನು
ಎನ್ನುವುದು ಹೊಸ ಯುದ್ಧನೀತಿ
ನಾಟಕ ನೋಡುಗರ ಮುಂದೆಯಲ್ಲ ಹಿಂದೆಯಾಗಿದೆ.
ಕಳೆದ ದೃಶ್ಯದ ಪ್ರತಿನಾಯಕನೇ
ಈ ದೃಶ್ಯದ ನಾಯಕ
ಎಲ್ಲಾ ಕಥಾಪಾತ್ರಗಳಿಗೂ ಉಂಟು ಮುಖವಾಡ :
ಬಿಳಿ, ಹಸಿರು, ಹಳದಿ, ಕೆಂಪು ಸಹ.
ಚಾವಟಿಗೆ ಬದಲಾಗಿ ಚರಸ್ಸು
ನೇಣುಹಗ್ಗಕ್ಕೆ ಬದಲಾಗಿ ಮರಕತಹಾರ.
ಚೆಗೆವಾರ ನಿನಗಿದು ಗೊತ್ತಾಗುತ್ತಿದೆಯೇ?
“ನೀರಿನೊಳಗಿನ ಮೀನಿನ ಹಾಗೆ” ಎಂತಲೋ?
ನೀರಿನಲ್ಲಿ ಪೂರ್ತಿ ವಿಷ ಬೆರೆಯುವಾಗಲೋ?
ನೀನೇ ನಿನ್ನ ವಿಶ್ವಾಸಘಾತುಕನಾಗುವಾಗಲೋ?
ಹೌದು, ನಿನಗೆ ಮನವರಿಕೆಯಾಗುತ್ತಿದೆಯೆಂದು
ನಿನ್ನ ನೊಸಲು ಕರೆದು ತಿಳಿಸುತ್ತಿದೆ
ಮುನ್ನಡೆಸು ಮತ್ತೊಂದು ಯುದ್ಧ :
ಕಾಡಿನಲ್ಲೂ ಮೇಡಿನಲ್ಲೂ ಅಲ್ಲ,
ಹೊತ್ತಿಗೆಯಲ್ಲಿ, ಮನೆಯಲ್ಲಿ, ರಸ್ತೆಯಲ್ಲಿ
ವೇದಿಕೆಯಲ್ಲಿ, ಪೇಟೆಯಲ್ಲಿ, ಅಪ್ರಜ್ಞೆಯಲ್ಲಿ.
ತನ್ನನ್ನು ತಾನೇ ಬದಲಾಯಿಸುವವನಿಗೇ
ಜಗತ್ತನ್ನು ಬದಲಿಸಲು ಸಾಧ್ಯ.
ನಾವು ಕಾಯುತ್ತಿದ್ದೇವೆ
ನಮ್ಮಲ್ಲೊಬ್ಬನಾದ ನಿನ್ನನ್ನು,
ನೀನಾಗಿ ಬದಲಾಗುವ ನಮ್ಮನ್ನು.






0 Comments