ಓಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ..

ಶರಣು ಹುಲ್ಲೂರ್

ನಿಮಗೆ ನೆನಪಿರಬಹುದು, ಕನ್ನಡ ಕಿರುತೆರೆ ಲೋಕದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಬೇರೆ ಭಾಷೆಯ ಧಾರಾವಾಹಿಗಳಿಗಿಂತ ಭಿನ್ನವಾಗಿರುತ್ತಿದ್ದವು.. ಸಾಧನೆ, ಮಾಯಾಮೃಗ, ಗೃಹಭಂಗ, ಮುಕ್ತ, ಮನ್ವಂತರ, ಮನೆತನ, ದಂಡಪಿಂಡಗಳು, ಇತ್ಯಾದಿ., ಇಂದಿನ ಧಾರಾವಾಹಿಗಳೇಕೆ ಬಹುತೇಕ ಎಲ್ಲಾ ಒಂದೇ ರೀತಿಯಲ್ಲಿವೆ? ಮತ್ತು ಏಕೆ ಉತ್ತರಭಾರತದ ಕಿರುತೆರೆ ಮಾಧ್ಯಮಗಳಲ್ಲಿ ಮೂಡಿಬರುವ ಧಾರವಾಹಿಗಳ ನಕಲಾಗಿವೆ? ನಮ್ಮ ಮಣ್ಣಿನ ಗಂಧ ಇರುವ ಧಾರವಾಹಿಗಳು ಏಕೆ ಮರೆಯಾದವು?

ಇದು ಏಕಾಏಕಿ ಆಗಿದ್ದಲ್ಲ.. ಕಿರುತೆರೆ ಮಾಧ್ಯಮದಲ್ಲಿ ನಮ್ಮತನವಿದ್ದ ಮಾಧ್ಯಮ ಮುಖ್ಯಸ್ಥರನ್ನು ತೆಗೆದುಹಾಕಿ, ಅಲ್ಲಿನ ಸಂಸ್ಕೃತಿ ಮತ್ತು ಕಥೆಗಳನ್ನು ಇಲ್ಲಿಗೆ ತರುವುದಕ್ಕೆ ಒಪ್ಪುವಂತಹವರನ್ನು ಮಾಧ್ಯಮಗಳ ಮುಖ್ಯಸ್ಥರನ್ನಾಗಿ ಮಾಡಿ, ನಿಧಾನಕ್ಕೆ ಕನ್ನಡತನ ಮತ್ತು ಪ್ರಾದೇಶಿಕತೆಯನ್ನು ಅಳಿಸುತ್ತಾ ಬಂದರು. ಇಂದು ಕನ್ನಡತನ ಮತ್ತು ಪ್ರಾದೇಶಿಕತೆ ಕಿರುತೆರೆ ಮಾಧ್ಯಮದಲ್ಲಿ ಬಹುತೇಕ ಕಾಣೆಯಾಗಿದೆ.. ಇದು ಒಳಗಿನ ನುಂಗುವಿಕೆ.. ಹೊರಗಿನ ನುಂಗುವಿಕೆ ಇನ್ನೂ ಘೋರ..

ನಮ್ಮ ಭಾರತ ದೇಶದ ತಂಪು ಪಾನೀಯಗಳನ್ನು ವಿದೇಶಿ ಕಾರ್ಪೋರೇಟ್ ಕಂಪನಿಗಳು ಕುಡಿದುಬಿಟ್ಟವು, ನಮ್ಮ ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಹುಳುಗಳನ್ನು ಚೈನಾದ ಕಾರ್ಪೋರೇಟ್ ರೇಷ್ಮೆಹುಳು ನುಂಗಿಹಾಕಿದವು. ಮೊದಲೆಲ್ಲಾ ನಮ್ಮ ರೈತರು ಹಣ್ಣು ಹುಳುಗಳಿಂದ ತಾವೇ ರೇಷ್ಮೆ ಮೊಟ್ಟೆಗಳನ್ನು ಮಾಡಿಕೊಳ್ಳುತ್ತಿದ್ದರು, ಈಗ ಮೊಟ್ಟೆಗಳನ್ನು ಕಂಪನಿಗಳಿಂದ ಕೊಳ್ಳಲೇಬೇಕು.. ನಮ್ಮ ರೈತರು ತಾವು ಬೆಳೆದದ್ದನ್ನು ತಮ್ಮ ಹೊಟ್ಟೆಗಿಷ್ಟು, ಮುಂದಿನ ಬೇಸಾಯದ ಬಿತ್ತನೆಗಿಷ್ಟು ಎಂದು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರಾಟ ಮಾಡುತ್ತಿದ್ದರು.. ಆಧುನಿಕತೆ ಮತ್ತು ಸುಲಭ ಕೃಷಿ ಹೆಸರಿನ ಸೋಗಿನಲ್ಲಿ ಕಾರ್ಪೋರೇಟ್ ಕೈಗಳು ರೈತನನ್ನು ತಮ್ಮ ಉರುಳಿನೊಳಗೆ ಹಾಕಿಕೊಂಡವು..

ಈಗ ರೈತರು ಬಿತ್ತನೆ ಬೀಜಗಳನ್ನು ಕಂಪನಿಗಳಿಂದ ಪಡೆದೇ ತೀರಬೇಕು. ಅದರ ತೆನೆಯಲ್ಲಿ ಬರುವ ಬೀಜಗಳು ಬಿತ್ತನೆಗೆ ಯೋಗ್ಯವಾಗಿರುವುದಿಲ್ಲ..  ದೇಶದ ಬಹುಪಾಲು ವಾಣಿಜ್ಯ ರಂಗಗಳು,  ನಮ್ಮ ನೆಲ, ಸಂಸ್ಕೃತಿ ಮತ್ತು ಪ್ರಾದೇಶಿಕತೆಯ ಮೇಲೆ ಈಗಾಗಲೇ ವಿದೇಶಿ ಕಾರ್ಪೋರೇಟ್ ಕಂಪನಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಿಡಿತ ಸಾಧಿಸಿಯಾಗಿದೆ..

ಆ ಸಾಲಿಗೆ ಮುಂದಿನ ಸೇರ್ಪಡೆ ಮನರಂಜನಾ ಕ್ಷೇತ್ರ.. ವಿದೇಶಿ ಓ.ಟಿ.ಟಿ. ಪ್ಲಾಟ್-ಫಾರ್ಮ್ (OTT PLATFORM).. ಕಳೆದ ಎಂಟು ತಿಂಗಳುಗಳಲ್ಲಿ ಅಮೇಜಾನ್ ಪ್ರೈಮ್, ನೆಟ್-ಫ್ಲಿಕ್ಸ್, ಹಾಟ್ ಸ್ಟಾರ್ ಥರದ ಅತಿದೊಡ್ಡ ವಿದೇಶಿ ಓಟಿಟಿ ಮಾಧ್ಯಮಗಳಲ್ಲಿ ನೇರವಾಗಿ ಬಂದಿರುವ ಭಾರತೀಯ ಸಿನಿಮಾಗಳು ಹೆಚ್ಚಾಗಿ ದೊಡ್ಡ ಸ್ಟಾರ್ ನಟರ ಅಥವ ದೊಡ್ಡ ಪ್ರೊಡಕ್ಷನ್ ಹೌಸ್ ಸಿನಿಮಗಳು ಮಾತ್ರ. ಅವೆರಡೂ ಅಲ್ಲದಿದ್ದು ಓಟಿಟಿಯಲ್ಲಿ ಸಿನಿಮಾ ಬಂದಿದ್ದರೆ ಅದು ಥಿಯೇಟರುಗಳಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿದ್ದು ಮಾತ್ರ..

ಎಂಟು ತಿಂಗಳಲ್ಲಿ ಡೈರೆಕ್ಟ್ ಓಟಿಟಿ ಬಿಡುಗಡೆ ಕಂಡ ಬಹುತೇಕ ಭಾರತೀಯ ಸಿನಿಮಾಗಳು ಪೇಕ್ಷಕರಿಗೆ ಸಮಾಧಾನ ನೀಡಿಲ್ಲ. ಕಳೆದ ಏಳೆಂಟು ತಿಂಗಳಲ್ಲಿ ನೆಟ್-ಫ್ಲಿಕ್ಸ್ ನಂತಹ ದೈತ್ಯ ಕಂಪನಿ ನಿರ್ಮಿಸಿದ ಬಹುತೇಕ ಒರಿಜಿನಲ್ ಸಿನಿಮಾಗಳೂ ಸಹ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗಿವೆ.. ಅದಕ್ಕೆ ಕಾರಣ ಓಟಿಟಿಯವರ “ಮುಖ ನೋಡಿ ಮಣೆ ಹಾಕುವ ಸಂಪ್ರದಾಯ..” ಅವರು ಸಿನಿಮಾಗಳನ್ನು ಕೊಂಡುಕೊಳ್ಳುವುದು “ಫೇಸ್-ವ್ಯಾಲ್ಯೂ” ನೋಡಿ, ಸಿನಿಮಾದ ಕ್ವಾಲಿಟಿ ನೋಡಿ ಅಲ್ಲ..!

ಓಟಿಟಿ ಸಿನಿಮಾ ವ್ಯವಹಾರಕ್ಕೆಂದೇ ನೇಮಿಸಲ್ಪಟ್ಟ ಸ್ಥಳೀಯ ಸಂಸ್ಥೆಗಳು ಅಥವ ಮಾರ್ಕೆಟಿಂಗ್ ಹೆಡ್ ಗಳು ಬ್ರಾಂಡ್ ನೋಡಿ ಸಿನೆಮಾಗಳನ್ನು ಕೊಂಡುಕೊಳ್ಳುತ್ತಾರೆ, ಸಿನೆಮಾ ಗುಣಮಟ್ಟ ನೋಡಿ ಕೊಂಡುಕೊಳ್ಳುವುದಿಲ್ಲ. ಉಳಿದಂತೆ ಹೊರಗುತ್ತಿಗೆ ಪಡೆದ ಏಜೆನ್ಸಿಗಳು ಅಥವ ಮಧ್ಯವರ್ತಿಗಳು ತಮಗೆ ಸಿಗುವ ಕಮಿಷನ್ ಮೊತ್ತದ ಆಧಾರದ ಮೇಲೆ ಸಿನಿಮಾಗಳನ್ನು ಕೊಂಡುಕೊಳ್ಳುತ್ತಾರೆ.  

ಕಳೆದೆರಡು ವರ್ಷಗಳಿಂದ ಓಟಿಟಿಯಲ್ಲಿ ನೇರ ಬಿಡುಗಡೆ ಕಂಡ ಸಿನಿಮಾಗಳು ಮತ್ತು ವೆಬ್-ಸರಣಿಗಳ ಕಥಾವಸ್ತು, ಪಾತ್ರಪೋಷಣೆ ಅಥವಾ ದೃಶ್ಯಗಳಲ್ಲಿ ಭಾರತೀಯತೆ, ಹಿಂದೂಧರ್ಮ, ಭಾರತದ ಅಸ್ಮಿತೆ ಮತ್ತು ಭಾರತೀಯರ ಭಾವನೆಗಳಿಗೆ ಧಕ್ಕೆಯಾಗುವ ವಿಷಯಗಳು ಇರುವುದರ ಬಗ್ಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓಟಿಟಿ ಎಂಬುದು ಮಡಿವಂತಿಕೆಯನ್ನು ಮೀರಿದ ಸೃಷ್ಟಿಶೀಲತೆಗೆ ಸ್ವಾತಂತ್ರ ನೀಡುವ ವೇದಿಕೆಯಾಗಬಹುದಾಗಿತ್ತು, ಆದರೆ ಅದು ವಿಕೃತಿಗೆ, ಸ್ವೇಚ್ಛೆಗೆ ವೇದಿಕೆಯಾಗುತ್ತಿದೆ. ವಿದೇಶಿ ಕಾರ್ಪೋರೇಟ್ ಕಂಪನಿ ತನ್ನ ನಿರ್ಮಾಣದ, ತನ್ನ ಹಕ್ಕಿನಲ್ಲಿರುವ ಕೃತಿ ಅಥವ ತನ್ನ ವ್ಯವಹಾರಕ್ಕೆ ಅತಿಹೆಚ್ಚು ಮೈಲೇಜ್ ದೊರಕಿಸಿಕೊಳ್ಳುವುದಕ್ಕೆ ಆ ರೀತಿಯ ಗಿಮಿಕ್ ಮಾಡುತ್ತದೆ. ಅನವಶ್ಯಕವಾಗಿ ಹಿಂಸಾಚಾರ, ಸೆಕ್ಸ್-ಬೆತ್ತಲೆ, ಅತ್ಯಾಚಾರದ ದೃಶ್ಯಗಳನ್ನು ಸೇರಿಸಲು ಕೇಳುತ್ತದೆ..!

ಕಾಂಟ್ರೋವರ್ಸಿ ಆದಷ್ಟೂ ಅವರಿಗೆ “ಸಾಗರೊತ್ತರ (overseas) – ಗ್ಲೋಬಲ್ ಮಾರುಕಟ್ಟೆಯಲ್ಲಿ ಹೆಚ್ಚು ಬಿಕರಿಯಾಗುತ್ತದೆ..” ಗ್ಲೋಬಲ್ ಮಾರುಕಟ್ಟೆಯ ಹೆಸರಿನಲ್ಲಿ ಅದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ಪ್ರಾದೇಶಿಕ ಉದ್ಯಮಗಳನ್ನು ಕೊಲ್ಲುತ್ತದೆ..!! ಪ್ರಾದೇಶಿಕತೆ ಮತ್ತು ಪ್ರಾದೇಶಿಕ ಮಾರುಕಟ್ಟೆಯನ್ನು ಅಳಿಸಿಹಾಕಿ ಮನರಂಜನ ಮಾಧ್ಯಮದ ಮೇಲೂ ತನ್ನ ಹಿಡಿತವನ್ನು ಸಾಧಿಸಲು ಓಟಿ.ಟ ಬಹಳ ದೊಡ್ಡ ಷಡ್ಯಂತ್ರ ಹೂಡಿರುವುದು ಮೇಲ್ನೋಟಕ್ಕೆ ಕಾಣುವುದಿಲ್ಲ.. ಅದರ ಆಳಕ್ಕೆ ಹೊಕ್ಕಿ ನೋಡಬೇಕು..  

ಅಮೇಜಾನ್, ನೆಟ್’ಪ್ಲಿಕ್ಸ್ ಥರದ ಓಟಿಟಿಗಳು ತಮ್ಮ ಚಂದಾದಾರರಿಗೆ ಇಂದು ಕಡಿಮೆ ಶುಲ್ಕದಲ್ಲಿ ಮನರಂಜನೆ ಕೊಡುತ್ತಿರಬಹುದು. ಜನರನ್ನು ತಮ್ಮ ಫೋನುಗಳಿಗೆ ಅಂಟಿಸಿ ಥಿಯೇಟರುಗಳ ಬಾಗಿಲು ಮುಚ್ಚಿಸಿ, ಜನರಿಗೆ ಬೇರೆ ಮಾರ್ಗವಿಲ್ಲದಂತೆ ಮಾಡಿದ ನಂತರ ತನ್ನ ಶುಲ್ಕ ಹೆಚ್ಚಿಸುತ್ತದೆ.. ಆ ಕಾರಣಕ್ಕೆ ಇಂದಿಗೆ ಓಟಿಟಿ ಮಾಧ್ಯಮಗಳು “ಪೈರಸಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ” ತಮ್ಮ ಹಕ್ಕಿನಲ್ಲಿರುವ ಸಿನಿಮಾ ಅಥವ ವೆಬ್ ಸೀರೀಸ್ ಬಿಡುಗಡೆಯಾಗಿ ಅರ್ಧ ಗಂಟೆಗೇ ಪೈರಸಿಯಾಗಿ ಬಂದು ಜನ ಅನಧಿಕೃತ ಮಾರ್ಗಗಳಲ್ಲಿ ಪುಗ್ಸಟ್ಟೆ ನೋಡಿದರೂ ಅವರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.

ಏಕೆಂದರೆ ಓಟಿಟಿಯಲ್ಲಿ ಬರುವ ಎಲ್ಲ ಸಿನಿಮಾಗಳಿಗೂ ಅವರು ಕೋಟಿಗಟ್ಟಲೆ ಹಣ ಕೊಟ್ಟು ಕೊಂಡುಕೊಂಡಿರುವುದಿಲ್ಲ.. ಬಹುತೇಕ ಸಣ್ಣ ಸಿನೆಮಾಗಳಿಗೆ, ಅದರಲ್ಲೂ ಕನ್ನಡ ಸಿನೆಮಾಗಳಿಗೆ ಓಟಿಟಿ ಅವರು ಕೊಡುವ ಮೊತ್ತ “ಒಬ್ಬ ವ್ಯಕ್ತಿ ಓಟಿಟಿಯಲ್ಲಿ ಸಿನೆಮಾ ನೋಡಿದರೆ ನಿರ್ಮಾಪಕನಿಗೆ ಕೇವಲ ಮೂರರಿಂದ ಏಳು ರೂಪಾಯಿಗಳು..!” ಅದನ್ನು “ಪೇ-ಪರ್-ವೀವ್” ಎಂದು ಕರೆಯಲಾಗುತ್ತದೆ. ಆರ್ಧ ಕಾಫಿಯ ಬೆಲೆಗಿಂತ ಕಡಿಮೆ ಅದು.. ಆ ಅಲ್ಪ ಮೊತ್ತದಲ್ಲಿ ಏಜೆಂಟ್ ಅಥವ ಮಧ್ಯವರ್ತಿ ಸಂಸ್ಥೆಯ ಕಮಿಷನ್ ಸಹ ಹಿಡಿದುಕೊಳ್ಳಲಾಗುತ್ತದೆ..! ಆ ಒಟ್ಟು ಮೊತ್ತ ಮೂರು ತಿಂಗಳಿಗೊಮ್ಮೆ ಕಂತುಗಳಲ್ಲಿ ಕೊಡಲಾಗುತ್ತದೆ.. ಸಿನಿಮಾ ಪೈರಸಿಯಾಗಿ ಜನರಿಗೆ ಪುಗ್ಸಟ್ಟೆ ಸಿಕ್ಕಾಗ ಈ ಪ್ರಕಾರದ ವ್ಯವಹಾರದಿಂದ ಬರುವ ಚಿಲ್ಲರೆ ಕಾಸೂ ಸಹ ನಿರ್ಮಾಪಕರಿಗೆ ಬರುವುದಿಲ್ಲ..

ಓಟಿಟಿಯಲ್ಲಿ ಬಿಡುಗಡೆ ಆಗುವ ಸಿನೆಮಾದ ಪ್ರಚಾರದ ವೆಚ್ಚವನ್ನು ನಿರ್ಮಾಪಕರೇ ಭರಿಸಬೇಕು, ತಾವು ಪ್ರಚಾರಕ್ಕೆ ಖರ್ಚು ಮಾಡಿರುವ ದಾಖಲೆಗಳನ್ನು ತೋರಿಸಬೇಕು, ಹಾಗದಿದ್ದರೆ ಓಟಿಟಿಯವರಿಂದ ಬರುವ ಮೊತ್ತ ಇನ್ನೂ ಕಡಿಮೆ ಆಗುತ್ತದೆ. ಪೈರಸಿ ಮೂಲಗಳಿಂದ ಸಿನೆಮಾ ಅಳಿಸಿಹಾಕಲು ನಿರ್ಮಾಪಕರೇ ಖರ್ಚು ಮಾಡಬೇಕು.. ಪೈರಸಿ ತಡೆಯು ಪ್ರಯತ್ನ ಓಟಿಟಿ ಅವರಿಂದ ಆಗುವುದಿಲ್ಲ, ಅವರು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.. ಜನರನ್ನು ಸಂಪೂರ್ಣವಾಗಿ ಮೊಬೈಲ್ ಫೋನಿಗೆ ಅಂಟಿಸುವ ತನಕ ಅವರು ಆ ಬಗ್ಗೆ ಯೋಚಿಸುವುದಿಲ್ಲ.

ಅತಿ ಸಾಮಾನ್ಯ ಜನ ಕೂಡ ಮನರಂಜನೆಗೆ ಸಂಪೂರ್ಣವಾಗಿ ಮೊಬೈಲ್ ಮೇಲೆ ಅವಲಂಬಿತರಾದಾಗ, ಸಿನಿಮಾ ನೋಡಲು ಬೇರೆ ಆಯ್ಕೆಗಳಿಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಓಟಿಟಿಯವರು ಪೈರಸಿಯನ್ನು ತಡೆಗಟ್ಟುವತ್ತ ಯೋಚಿಸುತ್ತಾರೆ ಮತ್ತು ತಮ್ಮ ಚಂದಾದಾರರ ಮಾಸಿಕ ಮತ್ತು ವಾರ್ಷಿಕ ಶುಲ್ಕ ಹೆಚ್ಚು ಮಾಡುತ್ತಾರೆ. ಧೀರ್ಘಾವದಿಯಲ್ಲಿ ಏಕಸ್ವಾಮ್ಯ ಮತ್ತು ಪೂರ್ಣಾಧಿಕಾರದ ವ್ಯಾಪಾರಕ್ಕೆ ಇಂದಿನ ಬಂಡವಾಳ ಹೂಡಿಕೆ ಅದು..!

ಅರವತ್ತರ ದಶಕದಿಂದ ಎಂಬತ್ತರ ದಶಕದ ಅಂತ್ಯದವರಗೆ ನಿರ್ಮಾಪಕರು ತಮಗೆ ಸಿಕ್ಕಷ್ಟು ಅಲ್ಪಮೊತ್ತಕ್ಕೆ ಸಿನೆಮಾ ಹಾಡುಗಳನ್ನು ಆಡಿಯೋ ಕಂಪನಿಗಳಿಗೆ ಮತ್ತು ಸಿನೆಮಾ ಹಕ್ಕನ್ನು ಟಿವಿ ಚಾನೆಲ್ಲುಗಳಿಗೆ ಮಾರಾಟ ಮಾಡಿಕೊಂಡರು. ಅದರಿಂದೇನು ಲಾಭ ಎಂದು ಯಾರಿಗೂ ಸುಳಿವಿರಲಿಲ್ಲ..! ಅದೊಂದು ರೀತಿಯಲ್ಲಿ ಹಾಲು ಕೊಡುವ ಹಸುವನ್ನು ಮಾರಿಕೊಂಡಂತೆ, ಅದನ್ನು ಕಟ್ಟಿಕೊಂಡು ಬೇರೆ ಯಾರೋ ನೂರಾರು ವರ್ಷಗಳ ಕಾಲ ಹಾಲು ಕರೆದುಕೊಳ್ತಿರ್ತಾರೆ.. ಹಾಗಿದ್ದರೂ ಅದು ನಮ್ಮ ದೇಶದೊಳಗೆ ನಡೆಯುವ ಆರ್ಥಿಕ ಚಟುವಟಿಕೆ.

ಮನರಂಜನಾ ಕ್ಷೇತ್ರ ದೇಶದ ಆರ್ಥಿಕತೆಗೆ ಒಂದು ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ.. ಓಟಿಟಿಯವರ ಕೈಗೆ ಮನರಂಜನ ಕ್ಷೇತ್ರ ಸಂಪೂರ್ಣವಾಗಿ ದಕ್ಕಿಬಿಟ್ಟರೆ ಮನರಂಜನಾ ಕ್ಷೇತ್ರದ ಅರ್ಧ ಹಣ ದೇಶದಿಂದಾಚೆಗೆ ಹೋಗುತ್ತದೆ..! ಸ್ವಂತಂತ್ರ ಮತ್ತು ಸಂಗ್ರಹ ಕಲೆಯಾದ ಸಿನಿಮಾ ಹಾಗೂ ದೃಶ್ಯಮಾಧ್ಯಮದ ಮೇಲೆ ವಿದೇಶಿ ಕಾರ್ಪೋರೇಟ್ ಸಂಪೂರ್ಣ ಹಿಡಿತ ಸಾಧಿಸುತ್ತದೆ. ಅವರಿಗೊಪ್ಪುವ ಕಥಾವಸ್ತುಗಳೇ ಸಿನಿಮಾ ಮತ್ತು ವೆಬ್-ಸೀರೀಸ್ ಆಗುತ್ತವೆ.. ಅದು ಪ್ರಾದೇಶಿಕತೆ ಮತ್ತು ಸೃಷ್ಟಿಶೀಲತೆಗೆ ಉರುಳಾಗುತ್ತದೆ.. ಸೃಷ್ಟಿಶೀಲತೆಗೆ ಓಟಿಟಿ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ ಎಂಬುದು ಮೂಢನಂಬಿಕೆ, ನಿಜವಾಗಿ ಅದು ಸೃಷ್ಟಿಶೀಲತೆಗೆ ಮತ್ತು ಸ್ವಾತಂತ್ರಕ್ಕೆ ಬಾಗಿಲು ಮುಚ್ಚುತ್ತದೆ..! ಬಾಗಿಲು ಮುಚ್ಚಿ, ಸ್ವೇಚ್ಛೆಗೆ ವೇದಿಕೆಯಾಗಿ ವಿದೇಶಿ ಕಾರ್ಪೋರೇಟ್ ಏಕಸ್ವಾಮ್ಯತೆಯಲ್ಲಿ ಆಳುತ್ತದೆ. ಮತ್ತೊಂದು ಪರ್ಯಾಯ ಶಕ್ತಿ ಬರುವತನಕ..!!

‍ಲೇಖಕರು Avadhi

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mahantesh Soppimath

    ನೀವು ಹೇಳಿದ ಹಾಗೆ ಇತ್ತೀಚೆಗೆ ನೇರವಾಗಿ ಓ.ಟಿ.ಟಿ. ವೇದಿಕೆಗಳಲ್ಲಿ ಬಿಡುಗಡೆಗೊಂಡ ಬಹುಪಾಲು ಸಿನೆಮಾಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: