ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳ'ಶುಂಠಿ' ಕಥೆ ಕೇಳಿ ಇಲ್ಲಿ!

ಗೊರೂರು ಶಿವೇಶ್

ಚಿಕ್ಕವರಾಗಿದ್ದಾಗ ಬೆಳಿಗ್ಗೆ ಹೊರಟವರು ಹತ್ತಾರು ರೀತಿ ಆಟ ಆಡಿ, ನದಿಗೆ ಹೋಗಿ ಮನದಣಿಯ ಈಜಿ ಮಧ್ಯಾಹ್ನ ಊಟದ ಸಮಯಕ್ಕೆ ಮನೆಗೆ ಬರುವಷ್ಟರಲ್ಲಿ, ಅಕ್ಕ ಹೊಡೆಯಲೆಂದು ಕೋಲು ಹಿಡಿದು ತಯಾರಾಗಿರುತ್ತಿದ್ದರು. ಮಂಡಿಯ ಮೇಲೊಂದು, ಕುಂಡಿಯ ಮೇಲೊಂದು ಏಟು ಬಿದ್ದೊಡನೆ ‘ಹೋ’ ಎಂದು ನೆಲಮುಗಿಲು ಒಂದಾಗುವಂತೆ ಕಿರಚುತ್ತಿದ್ದ ನಮ್ಮನ್ನು ನೋಡಲೆಂದು ಅಕ್ಕಪಕ್ಕದ ಮನೆಯಿಂದ ಕುತೂಹಲದ ಕಣ್ಣುಗಳು ಒಳಗಿಣುಕುತ್ತಿದ್ದವು. ಆಗ ರಂಗಪ್ರವೇಶ ಮಾಡುತ್ತಿದ್ದ ಅಣ್ಣ ಹೇಳುತ್ತಿದ್ದ ಮಾತು ಕೋಲು ತಗೊಂಡು ಹೊಡ್ದು, ಹಾಗೆಲ್ಲ ಊರು ಜನ ಸೇರೋ ಹಾಗೇ ಮಾಡ್ಬೇಡ, ಒಂದು ‘ಒಳಶುಂಠಿ’ ಕೊಟ್ಟ ಅಂದ್ರೆ ಪ್ರಾಣ ಹೋಗ್ಬೇಕು, ಆದ್ರೆ ಉಸ್ರು ಆಚ್ಗೆ ಬರ್ಬಾದು ಅನ್ನುತ್ತಿದ್ದರು.
ಅವರ ಆಜ್ಞಾನುವರ್ತಿಯಾದ ಅಕ್ಕ ಹೆಬ್ಬೆರಳು, ತೋರು ಬೆರಳಿನ ನಡುವೆ ತೊಡೆಯ ಚರ್ಮ ಹಿಡಿದು ತಿರುಚಿದೊಡನೆ ಬಾಯ್ಬಿಡಲು ಆಗದೇ ಅತ್ತ ಕೂಗಲು ಆಗದೇ ‘ಲಬೋ-ಲಬೋ’ ಎನ್ನುವಂತೆ ಮೂಕಾಭಿನಯ ಮಾಡುತ್ತಿದ್ದ ಸ್ಥಿತಿ ನೆನಪಿಗೆ ಬಂದದ್ದು, ಮೊನ್ನೆ ಹೊನ್ನಾವರದ ಸ್ನೇಹಿತರೊಬ್ಬರ ‘ಹರಕೆ’ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ, ಹಲಸಿನಹಳ್ಳಿ ಹತ್ರದ ಶುಂಠಿ ಬೆಳೆ ಜಮೀನಿನಲ್ಲಿ ಸಿಕ್ಕ ಗೌಡರೊಬ್ಬರು ಹೇಳಿದ ತಮ್ಮ ಅನುಭವ.
ಲೋಕಾಭಿರಾಮವಾಗಿ ಮಾತಾಡುತ್ತ ವಿಷಯ ವ್ಯವಸಾಯದ ಕಡೆ ಹೊರಳಿತು. ಕಳೆದ 2 ವರ್ಷಗಳಿಂದ ತಮ್ಮ ಹೊಲ, ಜಮೀನನ್ನು ಶುಂಠಿ ಬೇಸಾಯಕ್ಕಾಗಿ ಎಕರೆಗೆ ನಲ್ವತ್ತು ಸಾವಿರದಂತೆ ಗುತ್ತಿಗೆ ನೀಡಿದ್ದ ಅವರು ಈ ವರ್ಷ ಅವರೇ ಶುಂಠಿ ಬೆಳೆಯಲು ಪ್ರಾರಂಭಿಸಿದ್ದರು.
ಏನು ಗೌಡ್ರೆ ನಾಲ್ಕೈದು ವರ್ಷದ ಒಂದು ಎಕರೆ ಹೊಲದ ಬೆಲೆ ನಲ್ವತ್ತು ಸಾವಿರ. ನೀವು ಬರೀ ಒಂದು ವರ್ಷಕ್ಕೆ ನಲ್ವತ್ತು ಸಾವಿರ ತಗೊಂಡಿದ್ದೀರಿಎಂದೆ.

ಅದಕ್ಕೆ ಅವರು ಎಲ್ಲಾ ಕೇರಳ ಎಫೆಕ್ಟ್, ಈ ವರ್ಷ ಐವತ್ತು ಸಾವಿರ ಅಂದ್ರು ಯಾರೂ ಕೊಡ್ತಾ ಇಲ್ಲ ಎಂದರು.
ಸರಿ ನೀವು ಈ ವರ್ಷ ಬೆಳೆ ಮಾಡ್ತಾ ಇದ್ದೀರಲ್ಲ, ನಿಮ್ಮ ಅನುಭವ ಹೇಗೆ? ಕೇಳಿದೆ.
ಕರಡಿ, ನರಿಗೆ ಮರ ಹತ್ತೋದನ್ನ ಮಾತ್ರ ಹೇಳ್ಕೊಟ್ಟು, ಇಳಿಯೋದನ್ನ ಹೇಳ್ಕೊಡ್ಲಿಲ್ವಲ್ಲ. ಆ ಕಥೆಯಾಯ್ತು ನಮ್ದು ಎಂದರು.
ಅಂದ್ರೆ ? ಅರ್ಥವಾಗದೆ ಪ್ರಶ್ನಿಸಿದೆ.
ಅಂದ್ರೆ ಅವ್ರು ನಮ್ಮ ಜನಾನೆ ಕೂಲಿಗೆ ತಗೊಂಡು ಶುಂಠಿ ಹಾಕೋದು ಹೇಳ್ಕೊಟ್ರು. . . ಆದ್ರೆ, ಔಷ್ದಿ ಹೊಡ್ಯೋ ಕೆಲ್ಸ ಅವ್ರೆ ಮಾಡ್ತಿದ್ರು, ಈಗ ನೋಡಿ ಶುಂಠಿ ಹಾಕಿದ್ದೀವಿ, ಆದ್ರೆ ಔಷ್ದಿ ಹೊಡ್ಯೋ ಹೂಟನೇ ಸಿಕ್ತಾ ಇಲ್ಲ. ನಾವು ಏನು ಮುಕ್ಕುರಿದ್ರೂ, ಅವ್ರ ಥರಾ ಬೆಳೆ ಬೆಳೆಯೋಕೆ ಆಗ್ತಾ ಇಲ್ಲ ವಿವರಿಸಿದರು.
ಹೋಗ್ಲಿ, ಬಿಡಿ, ಬರೀ ಆಲೂಗೆಡ್ಡೆ, ರಾಗಿ, ಭತ್ತ, ಅಂಥ ಇದ್ದೊರ್ಗೆ, ಹೊಸ ಬೆಳೆನಾರ ಹೇಳ್ಕೊಟ್ರಲ್ಲ ಎಂದೆ.
ಏನು ಹೇಳ್ಕೊಟ್ರೋ, ಏನೋ ? ಮೊದ್ಲು ನೂರು ರೂಪಾಯ್ಗೆ ಗಂಡಾಳು, ಅರವತ್ತು ರೂಪಾಯ್ಗೆ ಹೆಣ್ಣಾಳು ಸಿಕ್ಕೋರು. ಈಗ ಗಂಡಾಳ್ಗೆ ಇನ್ನೂರೈವತ್ತು, ಹೆಣ್ಣಾಳ್ಗೆ ನೂರೈವತ್ತು ಮಾಡವ್ರೆ, ಅಷ್ಟು ಕೊಡ್ತಿವಿ ಅಂದ್ರು ಸಿಕ್ತಾ ಇಲ್ಲ. ಬರ್ಬೇಕಾದ್ರೆ ಹತ್ತು ಗಂಟೆಗೆ ಬರ್ತಾರೆ. ಮಧ್ಯಾಹ್ನ ಊಟ ಕೊಡ್ಬೇಕು, ಇಲ್ಲಾಂದ್ರೆ, ಮಧ್ಯಾಹ್ನ ಎರಡು ಗಂಟೆ ಕಟ್. ಸಂಜೆ ಹೋಗ್ಬೇಕಾದ್ರೆ, ತೀರ್ಥಸೇವನೆಗೆ ವ್ಯವಸ್ಥೆ ಮಾಡಿದ್ರೆ ಮಾತ್ರ, ಮಾರ್ನೆ ದಿವ್ಸ ಬರೋದು ಎಂದರು
ಹೋಗ್ಲಿಬಿಡಿ, ಕೂಲಿ ಮಾಡೋರ್ಗಾದ್ರು, ಅನುಕೂಲ ಆಯ್ತಲ್ಲ ಎಂದೆ ನಾನು.
ಈಗ ಅವರ್ದೇ ಒಂಥರ ಪರ್ವಾಗಿಲ್ಲ. ಬಿ.ಪಿ.ಎಲ್. ಕಾರ್ಡಿನಲ್ಲಿ ರೂಪಾಯ್ಗೆ ಕೆ.ಜಿ. ಅಕ್ಕಿ, ಜೊತೆಗೆ ಕಡಿಮೆ ರೇಟಲ್ಲಿ ಸಕ್ಕರೆ, ಸೀಮೆಎಣ್ಣೆ ಸಿಗುತ್ತೆ. ವಯಸ್ಸಾದೊರ್ಗೆ ಮಾಶಾಸನ ಅಂಥ ನಾನೂರು ಸಿಗುತ್ತೆ, ನಮ್ಮಂತೋರ್ಗೆ ಈಗ ಕಣ್ ಕಣ್ ಬೀಡೋಂಗೆ ಆಗಿರೋದು. ಒಟ್ನಲ್ಲಿ ಕೇರಳ್ದೋರು ಶುಂಠಿ ಬೆಳ್ದು ದುಡ್ಡು ಮಾಡಿ, ನಮ್ಗೆ, ಒಳಶುಂಠಿ ಕೊಟ್ಟೊದ್ರು, ಎನ್ನುತ್ತಾ ಮಾತು ಮುಗಿಸಿದರು ಗೌಡರು.
(ಹೂಟ-ವಿಧಾನ)

‍ಲೇಖಕರು avadhi

26 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading