ದಿನೇಶ್ ಹೆಗ್ಡೆ
೫೮ನೆ ಕನ್ನಡ ರಾಜ್ಯೋತ್ಸವವನ್ನು ಹೇಗಾದರೂ ಮಾಡಿ ಹೊಸ ರೀತಿಯಲ್ಲಿ ಆಚರಿಸಬೇಕೆಂದು ಅನ್ನಿಸುತ್ತಿತ್ತು . ಸಪ್ನಾ ಬುಕ್ಸ್ ಕಡೆಯಿಂದ ನಾಡು ಕಂಡ ೫೮ ಸಾಹಿತಿಗಳಿಗೆ ಸನ್ಮಾನವಿರುವುದು ಗೊತ್ತಿತ್ತು . ಯಾಕೆ ಇವರನ್ನೆಲ್ಲ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಬಾರದು ಎಂಬ ಯೋಚನೆ ಬಂದಿದ್ದೇ ತಕ್ಷಣ ನಿರ್ಧರಿಸಿಯೇಬಿಟ್ಟೆ . ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನ ಗೆಳೆಯ ಹಾಗು ಯುವ ಕವಿ ಬೇಲೂರು ರಘುನಂದನ್ ಅವರಿಗೂ ಸನ್ಮಾನವಿರುವುದು ಇನ್ನೂ ಒಂದು ಕಾರಣವಾಗಿತ್ತು . ಕೂಡಲೇ ಬೇಲೂರರಿಗು ತಿಳಿಸಿದೆ . ಅವರು ಸಾಧ್ಯವಾದಷ್ಟು ಸಾಹಿತಿಗಳಿಗೆ ನನ್ನ ಪರಿಚಯ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟರು.
ಇಂತಹ ಕಾರ್ಯಕ್ರಮಗಳಲ್ಲಿ ವ್ಯಕ್ತಿಚಿತ್ರಗಳನ್ನು ಮಾಡುವದು ಅಷ್ಟು ಸುಲಭವಲ್ಲ. ಸಿಗುವ ಸಮಯ ಕಡಿಮೆ ಮತ್ತು ಬೆಳಕು ಬಹಳ ಅನಿರೀಕ್ಷಿತವಾಗಿರುತ್ತದೆ . ಸರಿಯಾದ ಸಮಯ ನೋಡಿ , ಸರಿಯಾದ ಮುಖದ ಮುಖಭಾವನ್ನು ಗ್ರಹಿಸಿ ಚಿತ್ರಗಳನ್ನು ಮಾಡುವಾಗ ನನ್ನ ಗಮನ ಪೂರ್ತಿ ವಿಷಯದ ಕಡೆಗೆ ಹಾಕುವುದು ತುಂಬಾ ಅಗತ್ಯ . ಅಷ್ಟೇ ಅಲ್ಲದೇ ಗಣ್ಯ ವ್ಯಕ್ತಿಗಳಿಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸುತ್ತುವರೆದಿರುವರು, ಮಾತನಾಡಿಸುವವರು ಬಹಳ. ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸುತ್ತ , ಮುಖದ ಮೇಲೆ ಬೀಳುತ್ತಿರುವ ಬೆಳಕನ್ನು ಗಮನಿಸುತ್ತ, ಅವರ ಮುಖ ಭಾವನ್ನು ಗಮನಿಸುತ್ತ ನನ್ನ ಕ್ಯಾಮೆರಾವನ್ನು ಸಿದ್ಧಗೊಳಿಸಿ ಕ್ಲಿಕ್ಕ್ಕಿಸುವಾಗ ಬೆವರೇ ಹರಿದು ಬಿಡುತ್ತದೆ!
ಇಂತಹ ಸಮಯಗಳಲ್ಲಿ ಗೆಳೆಯರೊಬ್ಬರು ಇದ್ದು ಮಾತನಾಡಿಸುತ್ತ ವಾತಾವರಣವನ್ನು ತಿಳಿಗೊಳಿಸಿದರೆ ನನಗೂ ಸಹಾಯ, ಚಿತ್ರೀಕರಿಸಲ್ಪಡುವ ವ್ಯಕ್ತಿಗಳಿಗೂ ಇರಿಸು ಮುರುಸು ತಪ್ಪುತ್ತದೆ.
ನವೆಂಬರ್ ೧ ರಂದು ಸರಿಯಾಗಿ ಬೆಳಿಗ್ಗೆ ಶಿಕ್ಷಕರ ಸದನದಲ್ಲಿ ೧೦ ಗಂಟೆಗೆ ಸೇರಿದಾಗ ಕನ್ನಡ ಶ್ರೀ ಪಂಚಮ ಹಳಿಬಂಡಿಯವರ ತಂಡದಿಂದ ಸುಶ್ರಾವ್ಯ ಕನ್ನಡ ಗೀತೆಗಳು ಹೊಮ್ಮುತ್ತಿರುವಾಗಲೇ ನನ್ನ ಕರ್ನಾಟಕ ರಾಜ್ಯೋತ್ಸವ ದಿನ ಸಾರ್ಥಕವೆನಿಸಿಬಿಟ್ಟಿತು. ಬೇಲೂರರು ಬಂದು ಸೇರಿಕೊಂಡು ”ದಿನೇಶ್, ಇವರೆಲ್ಲರ ಮುಂದೆ ನಾನು ತುಂಬಾ ಸಣ್ಣವ, ನನಗೆ ಇದೆಲ್ಲ ತುಂಬಾ ಮುಜುಗರ ” ಅಂದಾಗ ಅವರ ನಮ್ರತೆಯನ್ನು ತುಂಬಾ ಮೆಚ್ಚಿಕೊಂಡೆ. ಸನ್ಮಾನಿಸಲ್ಪಡುವ ಸಾಹಿತಿಗಳು ಒಬ್ಬೊಬ್ಬರಾಗಿ ಆಗಮಿಸುತ್ತ, ಅವರ ಜೊತೆ ಮಾತನಾಡುತ್ತ ಅಲ್ಲಿ ಇಲ್ಲಿ ಒಂದೆರಡು ಚಿತ್ರಗಳನ್ನು ಕದಿಯುತ್ತಾ ಇದ್ದೆ. ಕಾರ್ಯಕ್ರಮವಂತು ತುಂಬಾ ಚೆನ್ನಾಗಿ ಮೂಡಿ ಬಂತು. ಕರ್ನಾಟಕ ರಾಜ್ಯದ ಹೆಮ್ಮೆಯ ೫೮ ಸಾಹಿತಿಗಳನ್ನು ಒಂದೇ ಸಭೆಯಲ್ಲಿ ಸೇರಿಸುವುದು ಸಾಮಾನ್ಯದ ಕೆಲಸವಲ್ಲ . ಈ ಕೆಲಸ ಮಾಡಿದ ಸಪ್ನಾಬುಕ್ ಹೌಸ್ ನವರಿಗೆ ಬಹು ದೊಡ್ಡ ಧನ್ಯವಾದಗಳು. ಒಟ್ಟಿನಲ್ಲಿ ಈ ದಿನ ರಾಜ್ಯೋತ್ಸವದ ದಿನದಂದೆ ಇಷ್ಟು ವಿಭಿನ್ನತೆಯ ಸಾಹಿತಿಗಳೆಲ್ಲ ಒಂದಾಗಿ ಸಭೆಯನ್ನು ಅಲಂಕರಿಸದ್ದನ್ನು ನೋಡುವ ಸದವಕಾಶ ಬಂದಿದ್ದು ನನ್ನ ಅವಿಸ್ಮರಣೀಯ ದಿನಗಳಲ್ಲೊಂದು.
ಇದೆಲ್ಲಾಕ್ಕು ಮಿಗಿಲಾಗಿ ಈ ೫೮ ಸಾಹಿತಿಗಳಲ್ಲಿ ಹಲವಾರು ಶ್ರೇಷ್ಠರನ್ನು ಮಾತನಾಡಿಸುವ ಹಾಗು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಅವಕಾಶ ಬಂದಿದ್ದು ನನ್ನ ಭಾಗ್ಯ . ಒಂದು ಛಾಯಾಚಿತ್ರಗ್ರಾಹಕನಿಗೆ ಇದಕ್ಕಿಂತ ಚೆನ್ನಾಗಿ ರಾಜ್ಯೋತ್ಸವ ಆಚರಿಸಲು ಸಾಧ್ಯವೇ ?







ದಿನೇಶ್ ಅವರು ಸಂವೇದನಾ ಶೀಲ ಫೋಟೋಗ್ರಾಫ಼ರ್… ಈ ಹಿಂದೆ ಕುಪ್ಪಳಿಯಲ್ಲಿ ಕಾವ್ಯ ಕಮ್ಮಟ ಆದಾಗ ಫೋಟೋಗಳ ಸೆರೆ ಹಿಡಿಯಲು ಕುಪ್ಪಳಿಗೆ ಬಂದಿದ್ದರು ಯಾವುದೇ ಆಹ್ವಾನ ಇಲ್ಲದೆ… ಮೊನ್ನೆ ರಾಜ್ಯೋತ್ಸವದ ದಿನದಂದು ಅವರ ಆಸಕ್ತಿಯನ್ನು ಕಂಡು ಖುಷಿ ಆಯಿತು. ಸುಮ್ಮನೆ ಕ್ಲಿಕ್ ಮಾಡಿದ್ದನ್ನು ನೋಡಿದೆ ಈ ಫೋಟೋಗಳನ್ನು ನೋಡಿದ್ರೆ ಅವರ ಧ್ಯಾನಸ್ಥ ಮನಸ್ಥಿತಿ ಗೊತ್ತಾಗುತ್ತದೆ….ನಿಜಕ್ಕೂ ಒಳ್ಳೆಯ ಕಲಾಕೃತಿಗಳಿವು.
ಪ್ರಕಟಿಸಿದ್ದಕ್ಕೆ ಅವಧಿ ಬಳಗಕ್ಕೆ ನನ್ನ ಅಭಿನಂದನೆಗಳು
ಮನ ತುಂಬಿ ಬಂತು,,,,, ಒಳ್ಳೆಯ ಪ್ರಯತ್ನ
ಛಾಯಾಗ್ರಾಹಕರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ನೈಜ ರಾಯಭಾರಿಗಳು.ದಿನೇಶ್ ರಘುನಂದನ್ ಥರದ ಸೃಜನಶೀಲ ಮನಸ್ಸಿನ ತರುಣರ ಕಾಳಜಿ ಅಭಿನಂದನಾರ್ಹ,