ಅಂಗನವಾಡಿ ಅಮ್ಮಂದಿರು ಈಗ ಮನೆಗೆ ತೆರಳಿದ್ದಾರೆ.
ಆದರೆ ಅವರು ಬೀದಿಗಳಲ್ಲಿ ಮಲಗಿದ ಆ ತಾಯಂದಿರನ್ನು ಕಂಡು ಮರುಗಿದ ಒಂದು ಪೋಸ್ಟ್ ಇಲ್ಲಿದೆ-

ರಾಘವೇಂದ್ರ ಜೋಷಿ
ನಿಮ್ಮ ಒಂದೆರೆಡು ನಿಮಿಷಗಳ ಸಮಯವನ್ನು ಈ ಪೋಸ್ಟಿಗಾಗಿ ಕೇಳುತ್ತಿದ್ದೇನೆ. ಕಳೆದೆರಡು ದಿನಗಳಿಂದ ನೀವು ದಿನಪತ್ರಿಕೆಗಳನ್ನು ಫಾಲೋ ಮಾಡುವವರಾಗಿದ್ದರೆ ಈ ಸುದ್ದಿಯನ್ನು ಗಮನಿಸಿರುತ್ತೀರಿ. ಅಥವಾ ಯಥಾಪ್ರಕಾರ ಸ್ಟ್ರೈಕಿನ ಸುದ್ದಿಯೆಂದು ಪುಟ ತಿರುಗಿಸಿರುತ್ತೀರಿ. ಯಾಕೆಂದರೆ ನಾನೂ ಹೀಗೇ ಮಾಡಿದ್ದೆ.
ಆದರೆ ಇವತ್ತಿನ ಬಹುತೇಕ ದಿನಪತ್ರಿಕೆಗಳಲ್ಲಿ ಈ ಅಂಗನವಾಡಿ ಕಾರ್ಯಕರ್ತೆಯರ ಸ್ಟ್ರೈಕಿನ ಬಗ್ಗೆ ಓದಿದಾಗ ಪಿಚ್ಛೆನಿಸಿತು. ಎಂಟತ್ತು ಸಾವಿರದಷ್ಟು ಹೆಣ್ಣುಮಕ್ಕಳು ಕಳೆದ ಎರಡು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನ ಎದುರಿನ ರಸ್ತೆಯಲ್ಲಿ ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಘೋಷಣೆ, ಭಾಷಣ. ರಾತ್ರಿ ಅದೇ ರಸ್ತೆಯಲ್ಲಿ ನಿದ್ರೆ. ಇವರಲ್ಲಿ ಅನೇಕರು ಚಿಕ್ಕಮಕ್ಕಳನ್ನು ಹೊತ್ತುಕೊಂಡು ಬಂದಿದ್ದಾರೆ. ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ. ರಾತ್ರಿ ಸೊಳ್ಳೆಗಳ ಕಾಟ.
ಇವರೆಲ್ಲ ಕರ್ನಾಟಕದ ಎಲ್ಲೆಡೆಗಳಿಂದ ಬಂದಿದ್ದಾರೆ. ನಿಜ, ಫ್ರೀಡಂ ಪಾರ್ಕಿನೆದುರು ಟ್ರಾಫಿಕ್ಕೆನ್ನುವದು ಆಮೆಯಂತೆ ಚಲಿಸುತ್ತಿದೆ. ಸಾಮಾನ್ಯ ಜನತೆಗೆ ಇವರ ಸಮಸ್ಯೆ ಏನೆಂಬುದೂ ಗೊತ್ತಿಲ್ಲ. ಯಾಕೆಂದರೆ ನಮ್ಮೆಲ್ಲರಿಗೂ ನಮ್ಮದೇ ಆದ ದಿನನಿತ್ಯದ ಜಂಜಾಟಗಳಿವೆ. ಈ ಹೆಣ್ಣುಮಕ್ಕಳು ಈ ಉರಿಬಿಸಿಲಲ್ಲಿ ಸೀರೆಯ ಸೆರಗನ್ನೇ ಹೊದ್ದುಕೊಂಡು ಬಿಸಿಲ ರಸ್ತೆಯಲ್ಲಿ ಕೂತಿದ್ದಾರೆ. ಯಾಕೆ ಇಲ್ಲಿ ಕುಳಿತಿದ್ದೀರಿ ಅಂತ ಟ್ರಾಫಿಕ್ಕಿನ ಒಬ್ಬನಾದರೂ ಬಂದು ಕೇಳುತ್ತಿಲ್ಲವಲ್ಲ ಅಂತನ್ನುವ ಕಳೆ ಇವರೆಲ್ಲರ ಮುಖದಲ್ಲಿದೆ.
ಇವರದ್ದು ನ್ಯಾಯಯುತ ಬೇಡಿಕೆಯಾ? ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಬಲ್ಲದಾ? ಇವ್ಯಾವವೂ ನನಗೆ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಈ ಹೆಣ್ಣುಮಕ್ಕಳು ರಸ್ತೆಯಲ್ಲೇ ಮಲಗಿದ್ದು, ಚಿಕ್ಕಮಕ್ಕಳನ್ನು ಆಟವಾಡಿಸುತ್ತಿರುವದು, ಮಲಗಿಕೊಂಡೇ ಸೊಳ್ಳೆಗಳನ್ನು ಓಡಿಸುತ್ತಿರುವದು, ಶೌಚಕ್ಕಾಗಿ ಪರದಾಡುತ್ತಿರುವ ಸುದ್ದಿ/ಚಿತ್ರಗಳನ್ನು ನೋಡಿ ಬೇಸರವಾಯಿತು. ಬೆಳಿಗ್ಗೆ
ಸುಮಾರು ಐವತೈವತ್ತು ಬಿಸ್ಕೆಟ್ ಪೊಟ್ಟಣ, ಜ್ಯೂಸ್ ಪ್ಯಾಕೆಟ್ಟು ಮತ್ತು ಸೊಳ್ಳೆ ಓಡಿಸುವ ಮೂರು ಓಡಮಸ್ ಕ್ರೀಮು ಒಂದು ಚೀಲದಲ್ಲಿ ಹಾಕಿಕೊಂಡು ಅಲ್ಲಿದ್ದ ಒಂದು ಗುಂಪಿನ ಸದಸ್ಯೆಯರಿಗೆ ಕೊಟ್ಟು ಬಂದೆ. ಅಲ್ಲಿದ್ದ ಪಿರಿಯಾಪಟ್ಟಣದ ಕಾವೇರಮ್ಮ ಗದ್ಗದಿತರಾಗಿ ಕಣ್ಣೀರು ತುಂಬಿಕೊಂಡರು. ನೋಡಿ, ನಿಮ್ಮಲ್ಲಿ ವಯಸ್ಸಾದ ಅಥವಾ ಚಿಕ್ಕಮಗು ಹೊಂದಿರುವ ಹೆಣ್ಣುಮಕ್ಕಳು ರಾತ್ರಿ ಮಲಗಲು ತೊಂದರೆಯಾದರೆ ನನ್ನ ಮನೆಗೆ ಬನ್ನಿ, ಈ ಪ್ರೀಡಂ ಪಾರ್ಕಿನಿಂದ ನನ್ನ ಮನೆಗೆ ಮತ್ತು ಬೆಳಿಗ್ಗೆ ನನ್ನ ಮನೆಯಿಂದ ಮತ್ತೆ ಈ ಪಾರ್ಕಿಗೆ ಮರಳಿಬಿಡುವ ವ್ಯವಸ್ಥೆ ನಾನೇ ಮಾಡುವೆ ಅಂತ ವಿನಂತಿಸಿದೆ.
ಆದರೆ ಅಪರಿಚಿತ ಭಯವೋ ಅಥವಾ ಅವರೆಲ್ಲರ ಸ್ವಾಭಿಮಾನವೋ- ಅಲ್ಲಿದ್ದ ಗುಂಪಿನ ಹೆಣ್ಣುಮಕ್ಕಳು, ‘ಬ್ಯಾಡ ಸಾರ್, ಇಲ್ಲೇ ಇರ್ತೀವಿ’ ಅಂತಂದರು. ಯಾವುದಕ್ಕೂ ನಿಮ್ಮ ಬಳಿ ನನ್ನ ಫೋನ್ ನಂಬರ್ ಇರಲಿ ಅಂತ ಆ ಕಾವೇರಮ್ಮನಿಗೆ ನಂಬರ್ ಕೊಟ್ಟು ಬಂದಿದ್ದೇನೆ. ಇದಕ್ಕಾಗಿ ನಾನು ವ್ಯಯ್ಸಿದ್ದು ಒಂದು ಗಂಟೆ ಹದಿನೈದು ನಿಮಿಷ. ಅಲ್ಲಿನ ಬಿಸಿಲಿಗೆ ಹದಿನೈದು ನಿಮಿಷಕ್ಕಿಂತ ಜಾಸ್ತಿ ಇರಲಾಗಲಿಲ್ಲ.
ಸ್ನೇಹಿತರೇ, ಇವರ ಹೋರಾಟ ಇನ್ನೂ ಎಷ್ಟು ದಿನ ನಡೆಯಬಹುದು ಅಂತ ಈ ಕ್ಷಣಕ್ಕೆ ಗೊತ್ತಿಲ್ಲ. ನಿಮ್ಮಲ್ಲಿ ಕೆಲವರಾದರೂ ಸಂಜೆ ನಿಮ್ಮ ಆಫೀಸಿನಿಂದ ಮರಳುವಾಗ ಇದೇ ಫ್ರೀಡಂ ಪಾರ್ಕ್ ದಾರಿಯಲ್ಲಿ ಬರುವ ಹಾಗಿದ್ದರೆ ಈ ಹೆಣ್ಣುಮಕ್ಕಳಿಗಾಗಿ ಒಂದಿಷ್ಟು ಹಣ್ಣು, ಬಿಸ್ಕೆಟ್, ಜ್ಯೂಸ್ ಪ್ಯಾಕೆಟ್ ತೆಗೆದುಕೊಂಡು ಹೋಗಿ. ರಾತ್ರಿ ನಮ್ಮಲ್ಲಿಗೆ ಬನ್ನಿ ಅಂತ ಅಂತಃಕರಣದಿಂದ ಆಹ್ವಾನಿಸಿ. ಅವರು ಬರುತ್ತಾರೋ ಇಲ್ಲವೋ, ಆದರೆ ಬೆಂಗಳೂರೆಂಬ ಅಪರಿಚಿತ ಊರಿನಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಅಂತನ್ನುವ ನಿಮ್ಮ ಒಂದು ಭಾವ ಅವರಲ್ಲಿ ಉತ್ಸಾಹ ತುಂಬುತ್ತದೆ. ನಿರಾಳವಾಗಿಸುತ್ತದೆ.
ನಾಗರಿಕ ಸಮಾಜದಲ್ಲಿರುವ ನಾವು ಮಾಡಬಹುದಾದುದು ಇಷ್ಟೇ. ಬಹುಶಃ ಅವರು ಬಯಸುವದೂ ಇಷ್ಟೇ. 🙁






0 Comments