
ಮ ಶ್ರೀ ಮುರಳಿ ಕೃಷ್ಣ
‘ಬ್ಯಾಟಲ್ಶಿಪ್ ಪೊಟೆಮ್ಕಿನ್’ ಸರ್ಗೈ ಐಸೆನ್ಸ್ಟೈನ್ರ ಐಕಾನಿಕ್ ಮೂಕಿ ಚಲನಚಿತ್ರ
‘ಬ್ಯಾಟಲ್ಶಿಪ್ ಪೊಟೆಮ್ಕಿನ್’ 1925ರಲ್ಲಿ ತೆರೆಕಂಡ ಈ ಚಲನಚಿತ್ರ ರಷ್ಯಾದಲ್ಲಿ 1917ರಲ್ಲಿ ಜರುಗಿದ ಮಹಾಕ್ರಾಂತಿಯಿಂದ ಪ್ರೇರೇಪಿತಗೊಂಡಿದ್ದು ಎಂದು ವಿಮರ್ಶಕರು ಗುರುತಿಸುತ್ತ ಬಂದಿದ್ದಾರೆ.
ಆದರೆ ಇದರ ಕಥಾವಸ್ತು 1905ರಲ್ಲಿ ವಿಫಲಗೊಂಡ ಕ್ರಾಂತಿಯ ಒಂದು ಘಟನೆಯ ಸುತ್ತ ಹೆಣೆಯಲ್ಪಟ್ಟಿದೆ. ಹಲವು ವರ್ಷಗಳ ನಂತರ ಪುನಃ ಈ ಚಲನಚಿತ್ರವನ್ನು ವೀಕ್ಷಿಸುವ ಸಂದರ್ಭ ಒದಗಿಬಂದಿತು.
ಇಷ್ಟು ವರ್ಷಗಳಾದರೂ ಚರ್ಚೆ, ವಿಚಾರ ವಿನಿಮಯಗಳು ಜರುಗುತ್ತಿರುವುದು ಈ ಚಲನಚಿತ್ರ ಗಳಿಸಿರುವ ಐಕಾನಿಕ್ ಸ್ಥಾನದ ದ್ಯೋತಕ. ಪೊಟೆಮ್ಕಿನ್ ಎಂಬ ಯುದ್ಧನೌಕೆ ಟೆಂಡ್ರ ಎಂಬ ದ್ವೀಪದಲ್ಲಿ ನಿಲ್ಲುತ್ತದೆ. ಒಬ್ಬ ಅಧಿಕಾರಿ ಮಲಗಿದ್ದ ನಾವಿಕನ ಮೇಲೆ ಗತ್ತಿನಿಂದ ತನ್ನ ಅಧಿಕಾರವನ್ನು ಚಲಾಯಿಸುತ್ತಾನೆ. ಮಾತಿನ ಚಕಮಕಿಯಾಗುತ್ತದೆ. ವಕುಲಿನ್ಚಕ್ ಎಂಬ ನಾವಿಕ “ ರಷ್ಯಾ ಜಾಗೃತವಾಗಿದೆ. ನಾವೂ ಆಗಬೇಕು….” ಎಂದು ನಾವಿಕರನ್ನು ಹುರಿದುಂಬಿಸುತ್ತಾನೆ. ನಂತರ ಹುಳುತುಂಬಿದ ಮಾಂಸದ ಬಗೆಗೆ ತಕರಾರುಗಳು ಏಳುತ್ತವೆ. ಹಡಗಿನ ವೈದ್ಯ, ಅಧಿಕಾರಿಗಳು ಅದು ಚೆನ್ನಾಗಿಯೇ ಇದೆ ಎಂದು ಸಮರ್ಥಿಸುತ್ತಾರೆ.
ಆದರೆ ಬಾಣಸಿಗ ನಾವಿಕರ ಅಭಿಪ್ರಾಯವನ್ನು ಎತ್ತಿಹಿಡಿಯುತ್ತಾನೆ. ಬದಲಿ ಖಾದ್ಯವನ್ನು ನಾವಿಕರು ನಿರಾಕರಿಸುತ್ತಾರೆ. ಇದಕ್ಕಾಗಿ ಅವರನ್ನು ಶೂಟ್ ಮಾಡುವ ಆಜ್ಞೆ ಬರುತ್ತದೆ. ವಕುಲಿನ್ಚಕ್ ಸೈನಿಕರಿಗೆ ಬಂದೂಕುಗಳನ್ನು ಬಳಸದಂತೆ ಮನವಿ ಮಾಡುತ್ತಾನೆ. ಸಕಾರಾತ್ಮಕವಾದ ಸ್ಪಂದನ ದೊರೆಯುತ್ತದೆ. ನಾವಿಕರು ಅಧಿಕಾರಿಗಳೊಡನೆ ಘರ್ಷಿಸಿ ಹಡಗನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ವೈದ್ಯನನ್ನು ಸಾಗರಕ್ಕೆ ಎಸೆಯಲಾಗುತ್ತದೆ. ಬಂಡಾಯಕ್ಕೆ ಯಶಸ್ಸು ಲಭಿಸುತ್ತದೆ. ಆದರೆ ವಕುಲಿನ್ಚಕ್ ಹತನಾಗುತ್ತಾನೆ. ಪೊಟೆಮ್ಕಿನ್ ಒಡೆಸ್ಸಾ ಬಂದರನ್ನು ತಲುಪುತ್ತದೆ. ನಾವಿಕರು ಆತನ ದೇಹವನ್ನು ಟೆಂಟೊಂದರಲ್ಲಿ ಇರಿಸುತ್ತಾರೆ. ಆತನ ಎದೆಯ ಮೇಲೆ “ಒಂದು ಸ್ಪೂನಿನ ಸೂಪಿಗಾಗಿ” ಎಂದು ಬರೆದಿರುವ ಪಟ್ಟಿಯನ್ನು ಕಟ್ಟುತ್ತಾರೆ.
ಒಡೆಸ್ಸಾದ ಜನರು ಬಂಡುಕೋರರನ್ನು ಸ್ವಾಗತಿಸುತ್ತಾರೆ. ಅಲ್ಲಿನ ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಾರೆ .ಒಡೆಸ್ಸಾ ಮೆಟ್ಟಿಲುಗಳ ಮೇಲೆ ತ್ಸಾರ್ಶಾಹಿ ಪಡೆ ನಿರಾಯುಧ ಪ್ರಜೆಗಳ ಮೇಲೆ ಗುಂಡು ಹಾರಿಸುತ್ತಾರೆ. ಮರಣಮೃದಂಗದ ಸದ್ದು ಜೋರಾಗಿ ಕೇಳಿಬರುತ್ತದೆ. ನಂತರ ತ್ಸಾರ್ನ ನೌಕಾಪಡೆಯವರು ನಾವಿಕರ ಮೇಲೆ ಮುಗಿಬೀಳಲು ತಯಾರಾಗುತ್ತಾರೆ.
ಆದರೆ ಮೇಲಾಧಿಕಾರಿಗಳ ಆಜ್ಞೆಯನ್ನು ಉಲ್ಲಂಘಿಸುತ್ತಾರೆ. ಅವರು ಬಂಡಾಯ ಹೂಡಿದ ನಾವಿಕರ ಜೊತೆ ಸೇರುತ್ತಾರೆ. ಕೆಂಪು ವರ್ಣದ ಧ್ವಜ ಹಾರಾಡುತ್ತದೆ. ಇಡೀ ಚಲನಚಿತ್ರದ ಪ್ರಧಾನ ದೃಶ್ಯವೆಂದರೆ ಒಡೆಸ್ಸಾ ಮೆಟ್ಟಿಲುಗಳ ಮೇಲೆ ಆಗುವ ಮಾರಣಹೋಮ. ಸುಮಾರು ಆರೂವರೆ ನಿಮಿಷಗಳಿರುವ ಈ ದೃಶ್ಯ ನೋಡುಗರನ್ನು ವಿಷಣ್ಣರನ್ನಾಗಿಸಿಬಿಡುತ್ತದೆ.
ಸೈನಿಕರು ಮೆಟ್ಟಿಲುಗಳನ್ನು ಇಳಿಯುತ್ತ ಪ್ರಜೆಗಳ ಮೇಲೆ ಗುಂಡು ಹಾರಿಸುತ್ತಾರೆ. ಆದರೆ ಅವರ ಮುಖಗಳನ್ನು ಕ್ಲೋಸಪ್ನಲ್ಲಿ ತೋರಿಸುವುದಿಲ್ಲ. ಅಂದರೆ ಅವರು ಅಮಾನುಷ ಆಜ್ಞೆಯನ್ನು ಪಾಲಿಸುವ ಊಳಿಗದ ಮಂದಿ ಎಂಬುದನ್ನು ಸೂಚ್ಯವಾಗಿ ತಿಳಿಸಲಾಗಿದೆ. ಒಂದು ಕೂಸಿರುವ ತಳ್ಳುಗಾಡಿ ವೇಗವಾಗಿ ಮೆಟ್ಟಿಲುಗಳ ಮೂಲಕ ಜಾರುವುದು, ಬಂದೂಕಿನ ಗುರಿಗೆ ಬಲಿಯಾಗುವ ಒಬ್ಬ ಮಹಿಳೆಯ ಕನ್ನಡಕ ಛಿದ್ರಗೊಳ್ಳುವುದು, ಸೈನಿಕರ ಎತ್ತರ ಬೂಟುಗಳ ಕಾಲುಗಳ ಚಲನೆಗಳು, ಇಡೀ ವಾತಾವರಣದಲ್ಲಿ ಸಾವು ಅಡರುವ ಪರಿ ಇತ್ಯಾದಿ ಅಂಶಗಳನ್ನು ದೃಶ್ಯದಲ್ಲಿ ಕಟ್ಟಿಕೊಟ್ಟಿರುವ ರೀತಿ ವೀಕ್ಷಕರು ನಿಟ್ಟುಸಿರನ್ನು ಬಿಡುವಂತೆ ಮಾಡುತ್ತವೆ; ತಲ್ಲಣಗೊಳಿಸುತ್ತವೆ. ಈ ಚಲನಚಿತ್ರದಲ್ಲಿ ಬೇರೆಯಾಗಿ ತೆಗೆದ ಶಾಟ್ಗಳನ್ನು ಆಯ್ಕೆ ಮಾಡಿ, ಕತ್ತರಿಸಿ ಒಂದು ಪೂರ್ಣ ಕಲ್ಪನೆ ಉಂಟಾಗುವಂತೆ ಜೋಡಿಸುವ ರೀತಿಯ ‘ಮಾಂಟಾಷ್’(Montage) ತಂತ್ರವನ್ನು ಬಳಸಲಾಗಿದೆ.
ಒಡೆಸ್ಸಾ ಮೆಟ್ಟಿಲುಗಳ ದೃಶ್ಯದಲ್ಲಿ ಇದರ ಪ್ರಯೋಗ ತುಂಬ ಪರಿಣಾಮಕಾರಿಯಾಗಿದೆ. ಇದು ವೀಕ್ಷಕರ ಭಾವನವಲಯಕ್ಕೆ ನೇರವಾಗಿ ಲಗ್ಗೆಹಾಕಿ ಪ್ರಹಾರವನ್ನು ನೀಡುತ್ತದೆ. ಭಿನ್ನ ಶಾಟುಗಳು ಒಂದಕ್ಕೊಂದು ಘರ್ಷಿಸುವ ಕ್ರಿಯೆಯನ್ನು ಐಸೆನ್ಸ್ಟೈನ್ Thesis ಮತ್ತು Anti-thesis ಎಂದು ಕರೆಯುತ್ತಾನೆ. ಇದು ಮಾರ್ಕ್ಸ್ ವಾದದ ಡೈಲಿಕ್ಟಿಕಲ್ ಪರಿಕಲ್ಪನೆಯಿಂದ ಪ್ರಭಾವಗೊಂಡಿದೆ ಎಂಬುದು ಆತನ ಅಂಬೋಣ. ಆ ಕಾಲದ ಇನ್ನಿತರ ಕೆಲವು ಸೋವಿಯತ್ ಚಲನಚಿತ್ರಗಳ ನಿರ್ದೇಶಕರು ಈ ತಂತ್ರವನ್ನು ಯಶಸ್ವಿಯಾಗಿ ಬಳಸಿದರು.
ಈ ಕಾಲಮಾನದ ವೀಕ್ಷಕರಿಗೆ ಮೂಕಿ ಚಲನಚಿತ್ರಗಳು ಅಷ್ಟಾಗಿ ರುಚಿಸದೇ ಇರಬಹುದು. ಆದರೆ ಇತ್ತೀಚೆಗೆ ಚಾರ್ಲಿ ಚಾಪ್ಲಿನ್ನ ‘ಮಾಡ್ರನ್ ಟೈಮ್ಸ್’ ಚಲನಚಿತ್ರವನ್ನು ಕಾರ್ಮಿಕರ ಒಂದು ಕಾರ್ಯಾಗಾರದಲ್ಲಿ ಪ್ರದರ್ಶಿಸಲಾಯಿತು. ಅದರಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿದ್ದರು. ಅದರಲ್ಲಿ ಬಹುತೇಕರಿಗೆ ಈ ಚಲನಚಿತ್ರದ ವೀಕ್ಷಣೆ ಪ್ರಥಮ ಬಾರಿಯಾಗಿತ್ತು. ನಂತರ ನಡೆದ ಸಂವಾದದಲ್ಲಿ ಚರ್ಚೆಗೊಂಡ ಇತ್ಯಾತ್ಮಕ ವಿಷಯಗಳು ಈ ಸಿನಿಮಾ ಅವರನ್ನು ತಲುಪಿದ ರೀತಿಯನ್ನು ಸೂಚಿಸಿದವು.






0 Comments