ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಸುದೀರ್ಘವಾದ ಸ್ಟೇಟಸ್ ಹಾಕಬೇಕಾಯಿತು..

‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ  ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು.

ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಜಯಶ್ರೀ ಕಾಸರವಳ್ಳಿ 

ಕೆಲವೊಮ್ಮೆ ನಮ್ಮನ್ನು ನಾವೇ ಸ್ಪಷ್ಟೀಕರಿಸಿಕೊಳ್ಳುವಂತಹದ್ದೋ, ಸಮರ್ಥಿಸಿಕೊಳ್ಳುವಂತಹದ್ದೋ ಕಾರ್ಯದಲ್ಲಿ ಅನಿವಾರ್ಯವಾಗಿ ನಾವೂ ದನಿ ಎತ್ತಬೇಕಾಗುತ್ತೆ. ಇದರ ಅರ್ಥ ದನಿ ಎತ್ತುವುದು ತಪ್ಪು ಎನ್ನುವುದಲ್ಲ. ಆದರೆ ಕಾರಣವೇ ಇಲ್ಲದೇ ಅನಾವಶ್ಯಕ ಇಂತಹ ಕಾರ್ಯದಲ್ಲಿ ತೊಡಗಬೇಕಾಗಿರುವುದು ಬೇಸರದ ಸಂಗತಿ.

Avadhi Magನಲ್ಲಿ ನವೀನ್ ಮಧುಗಿರಿ ಅವರು, ಜಗತ್ತಿನ ಅತೀ ಸಣ್ಣ ಕತೆಗಳ ಬಗ್ಗೆ ಲೇಖನವನ್ನು ಬರೆಯುತ್ತಾ, ದಿವಾಕರ್ ಅವರ ’ಹಾರಿಕೊಂಡು ಹೋದವನು’ ಸಂಕಲನದ ಅನುಬಂಧದಲ್ಲಿ ಅವರು ಬರೆದಿರುವ ನುಡಿಗಳನ್ನು ಯಥಾವತ್ತಾಗಿ ತಮ್ಮ ಲೇಖನದಲ್ಲಿ ಬಳಸಿಕೊಂಡವರು, ಆರ್ನೆಸ್ಟ್ ಹೆಮಿಂಗ್ ವೇ ಕತೆ: ’For sale: baby shoes, never worn’ ಎಂಬ ಕತೆಯನ್ನು ದಿವಾಕರ್ ಅವರು,’ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ.’ ಎಂದು ತರ್ಜುಮೆ ಮಾಡಿದ್ದಾಗಿ ಬರೆದಿದ್ದಾರೆ.

ಕೇವಲ ಆ ಒಂದು ಕತೆಯ ತರ್ಜುಮೆಯನ್ನು ಇಟ್ಟುಕೊಂಡು Ra Jo ಅವರು, ಈ ತರ್ಜುಮೆ ಯಾಕೆ ತಮ್ಮ ಗಮನ ಸೆಳೆಯಿತೆಂದು ಬರೆಯುತ್ತಾ, ತಾವದನ್ನು ಇಂಗ್ಲೀಷ್ ನಲ್ಲಿ ಓದಿದಾಗ ಹಲವು ಪ್ರಶ್ನೆಗಳನ್ನು ಅದು ಎತ್ತಿದ್ದರಿಂದ ಕನ್ನಡಕ್ಕೆ ಅದನ್ನು ಅನುವಾದಿಸಲು ಭಯವಾಗಿ ಮೂಲದಲ್ಲಿದ್ದಂತೇ ತಮ್ಮ ಒಂದು ಲೇಖನದಲ್ಲಿ ಬಳಸಿಕೊಂಡೆಯೆಂದು ಹೇಳುತ್ತಾ, ತರ್ಜುಮೆ ಮಾಡಲು ಹೋದ ನನ್ನನ್ನು ಅಧೀರನನ್ನಾಗಿಸಿದ್ದು ಭಯವಲ್ಲ, ಧೈರ್ಯ ಎಂದು ಬರೆದುಕೊಂಡಿದ್ದಾರೆ.

ಇಲ್ಲಿ ಒಂದನ್ನು ನಾನು ಸ್ವಷ್ಟಪಡಿಸಬೇಕು: ದಿವಾಕರ್ ಮಾಡಿದ ಹೆಮಿಂಗ್ ವೇ ಕತೆಯೆಂಬ ಅನುವಾದ ಇವರಿಗೆ ಎಲ್ಲಿ ಸಿಕ್ಕಿತೋ ನಾನರಿಯೆ. ’ಹಾರಿಕೊಂಡು ಹೋದವನು’ ಎಂಬ ಜಗತ್ತಿನ ಅತಿ ಸಣ್ಣ ಕಥಾಸಂಕಲನದ ಅನುಬಂಧದಲ್ಲಿ ಜಗತ್ತಿನ ಅತಿ ಸಣ್ಣ ಕತೆಯೆಂದು, ಗ್ವಾಟೇಮಾಲಾದ ಕತೆಗಾರ ಅಗೂಸ್ತೋ ಮೊಂತೆರ್ರೋಸೊನ ಡೈನೊಸಾರ್ ಕತೆ ಬಗ್ಗೆ ಉಲ್ಲೇಕಿಸುತ್ತಾ, ಹೆಮಿಂಗ್ ವೇ ಕತೆಯನ್ನು ಮೂಲದಲ್ಲಿದ್ದಂತೇ, ಆದರೆ ಕನ್ನಡ ಲಿಪಿಯಲ್ಲಿ ’ಫಾರ್ ಸೇಲ್: ಬೇಬಿ ಶೂಸ್, ನೆವರ್ ಯೂಸ್ಡ್’. ಅಂತ ಕೇವಲ ನಿದರ್ಶನಕ್ಕಷ್ಟೇ ತೆಗೆದುಕೊಂಡಿದ್ದಾರೆ.

ಇಲ್ಲಿ ಅನುವಾದಕರ ಭಯ ಮತ್ತು ಧೈರ್ಯದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ, ಈ ಕತೆಯನ್ನು ದಿವಾಕರ್ ಅನುವಾದಿಸಿದ್ದಾರೆಯೇ ಅನ್ನುವುದನ್ನು ಯಾರೂ ಪರೀಕ್ಷಿಸಿಲ್ಲ.

ನವೀನ್ ಮಧುಗಿರಿಯವರು ’ಈ ಹೊತ್ತಿಗೆ’ ಯೆಂಬ ಸಾಹಿತ್ಯಾಸಕ್ತರ ಗುಂಪಿನಲ್ಲಿ ಚರ್ಚಾ ಸಂದರ್ಭದಲ್ಲಿ ದಿವಾಕರ್ ಈ ಕತೆಯನ್ನು ಹೀಗೆ ಅನುವಾದಿಸಿದ್ದಾರೆಯೆಂದು ಹೇಳುತ್ತಾ, Jayalaxmi Patil ಅವರು ಹುಟ್ಟು ಹಾಕಿದ ಹೃಸ್ವಕತೆ ಎಂಬ ಪೇಜ್ ನಲ್ಲಿ, ಈ ಕತೆಗಳನ್ನು ಬಳಸಿಕೊಂಡಿದ್ದರ ಲಿಂಕ್ ನ್ನು ಅಟ್ಯಾಚ್ ಮಾಡಿದ್ದಾರೆ. ಸದುದ್ದೇಶದಿಂದ ಕೈಗೊಂಡ ಇವ್ಯಾವುದನ್ನೂ ನಾನು ಪ್ರಶ್ನಿಸುತ್ತಿಲ್ಲ. ’ಈ ಹೊತ್ತಿಗೆ’ಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತಿರುವಾಗ ಜಗತ್ತಿನ ಅನೇಕ ಕತೆಗಳನ್ನು ದಿವಾಕರ್ ಉದ್ಧರಿಸಿರುವಂತಹ ಉದಾಹರಣೆಗಳಿವೆ.

ಆದರೆ ನನ್ನ ಪ್ರಶ್ನೆ Ra Jo ಅವರು ಎತ್ತಿದ, ’ಬಹುಶಃ ತರ್ಜುಮೆ ಮಾಡಲು ಹೋದ ನನ್ನನ್ನು ಅಧೀರನನ್ನಾಗಿಸಿದ್ದು ಭಯವಲ್ಲ, ಧೈರ್ಯ!’ ಇದು ಏನನ್ನು ಹೇಳಲು ಹೊರಟಿದೆ ಅನ್ನುವುದು ನನಗೆ ಅರ್ಥವಾಗಲಿಲ್ಲ.

ಇವತ್ತು ಅನುವಾದ ಕ್ಷೇತ್ರದಲ್ಲಿ ಅನೇಕರು ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದನ್ನು ನಾವು ನೋಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಸಾಗುತ್ತಿರುವ ಪ್ರತಿ ಅನುವಾದಕನೂ ಮೂಲದೊಡನೆ ಎಷ್ಟೇ ಪರಾಕಾಯ ಪ್ರವೇಶ ಪಡೆಯಲು ಪ್ರಯತ್ನಿಸಿದರೂ, ತಾನು ಮೂಲ ಲೇಖಕನಾಗಲು ಸಾಧ್ಯವಿಲ್ಲವೆಂಬ ಅನುವಾದದ ಮಿತಿಯ ಅರಿವಿನಿಂದಲೇ ಆ ಕ್ಷೇತ್ರಕ್ಕೆ ಕಾಲಿಟ್ಟಿರುತ್ತಾನೆ.

’ಅನುವಾದಯೆನ್ನುವುದು ಮೂಲ ಕತೆಯ ಮತ್ತೊಂದು ವರ್ಷನ್ ಯಷ್ಟೇ ಹೊರತು ಅದೇ ಮೂಲವಲ್ಲ’ ಎಂಬ ಜಿ.ಎಸ್. ಅಮೂರ್ ಮಾತನ್ನು ದಿವಾಕರ್ ಯಾವಾಗಲೂ ಹೇಳುತ್ತಿರುತ್ತಾರೆ. ಒಬ್ಬ ಅನುವಾದಕನಾದವನು ಸಾಧ್ಯವಾದಷ್ಟು ಮೂಲಕ್ಕೆ ಹತ್ತಿರವಾಗುವ ಪ್ರಯತ್ನವನಷ್ಟೇ ಮಾಡುತ್ತಿರುತ್ತಾನಷ್ಟೇ ಹೊರತು ಯಥಾವತ್ತಾಗಿ ಮೂಲವನ್ನು ಹಿಡಿಯಲು ಯಾರಿಂದಲೂ ಸಾಧ್ಯವಿರುವುದಿಲ್ಲ.

ಮಾರ್ ಕೇಸ್ ನ ಅನೇಕ ಕೃತಿಯನ್ನು ಇಂಗ್ಲೀಷ್ ಗೆ ತಂದ ಗ್ರಿಗರಿ ರಬಾಸ ತೀರಿಕೊಂಡಾಗ Narendra Pai ಅವರು ಅನುವಾದದ ಸಾಧಕ ಭಾದಕಗಳನ್ನು ಕುರಿತು ’ಪ್ರಜಾವಾಣಿ’ಯಲ್ಲಿ ಒಂದು ಉತ್ಕೃಷ್ಟ ಲೇಖನವನ್ನು ಬರಿದಿದ್ದಾರೆ. ಕನ್ನಡದಲ್ಲಿ
ಮಾರ್ ಕೇಸ್ ನ ’One Hundred Years Of Solitude’ ಕೃತಿಯ ಎರಡೆರಡು ಅನುವಾದಗಳು ಬಂದೂ, ಅಸಮರ್ಪಕವೆನ್ನಿಸುವುದಕ್ಕೆ ಅನೇಕ ಉದಾಹರಣೆಯ ಮೂಲಕ ವಿಶ್ಲೇಷಿಸುತ್ತಾ ಹೋಗುತ್ತಾರೆ.. ಮತ್ತು ಅನುವಾದದ ಅವಶ್ಯಕತೆಯನ್ನೂ ಅವರು ಗುರುತಿಸುತ್ತಾರೆ. ಇವತ್ತು ಜಗತ್ತಿನ ಸಾಹಿತ್ಯಗಳೆಲ್ಲವೂ ಇಂಗ್ಲೀಷ್ ಭಾಷೆಯಲ್ಲಿ ನಮಗೆ ದೊರೆಯದೇಯಿದ್ದಿದ್ದರೆ ಹೇಗಿರುತ್ತಿತ್ತು?

ಹಾಗೇ ಇಂಗ್ಲೀಷ ಬಾರದ ಅನೇಕರಿಗೆ ಜಗತ್ತಿನ ಸಾಹಿತ್ಯವನ್ನು ಕನ್ನಡದಲ್ಲಿ ಓದುವ ಅವಕಾಶವನ್ನು ದಿವಾಕರ್ ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಪ್ರಾಯಶಃ ದಿವಾಕರ್ ಅವರ ಸಾಹಿತ್ಯ ಪ್ರೀತಿ ಎಂತಹದ್ದು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.

ದಿವಾಕರ್ ಅನುವಾದ ಕ್ಷೇತ್ರಕ್ಕೆ ಬಂದಿದ್ದು ಇವತ್ತಿನ ಕಂಪ್ಯೂಟರ್ ಯುಗದಲ್ಲಲ್ಲ. ಜಗತ್ತಿನ ಯಾವ ಯಾವುದೋ ಮೂಲೆಯ ಸಾಹಿತ್ಯವನ್ನು ಎಲ್ಲೆಲ್ಲಿಂದಲೋ ಹುಡುಕಿ, ತರಿಸಿಕೊಂಡು, ತಾನು ಓದಿದರೆ ಸಾಲದು ಕನ್ನಡದ ಜನತೆಗೂ ಅದು ದಕ್ಕುವಂತಾಗಬೇಕೆಂದು ಹಗಲೂ-ರಾತ್ರಿ ಕುಳಿತು ದೇಶ ಭಾಷೆ ಕಾಲಮಾನಗಳನ್ನು, ವಿಭಿನ್ನ ಸಂಸ್ಕೃತಿ ಮನೋಭಾವಗಳನ್ನು ಕನ್ನಡದಂತಹ ಒಂದು ಪ್ರಾದೇಶಿಕ ಭಾಷೆಯಲ್ಲಿ ಹಿಡಿಯುವುದು ಅದೆಷ್ಟು ಕಷ್ಟವೆಂದು ತಿಳಿದೂ ನೂರಾರು ಕತೆಗಳನ್ನು, ಜಗತ್ತಿನಲ್ಲಿ ಕೈಗೊಂಡ ಅನೇಕ ಸಾಹಿತ್ಯಿಕ ಪ್ರಯೋಗಗಳನ್ನು ಕಾಲದಿಂದ ಕಾಲಕ್ಕೆ ಯಾವ ಪ್ರಚಾರಕ್ಕಾಗಲೀ, ಹಮ್ಮು ಬಿಮ್ಮಿಗಾಗಲೀ ಬಳಸಿಕೊಳ್ಳದೇ, ತಮ್ಮಷ್ಟಕ್ಕೆ ತಾವೆಂದು ಅನುವಾದಿಸುತ್ತಾ ನಮ್ಮ ಸಾಹಿತ್ಯಕ್ಕೆ ನೀಡುತ್ತಲೇ ಬಂದಿದ್ದಾರೆ..

ಯಾರನ್ನೇ ಆಗಲಿ ಕುರಿತು ಬರೆಯುವಾಗ ಸರಿಯಾದ ಮಾಹಿತಿಯಿದ್ದಲ್ಲಿ ಸ್ವಲ್ಪ ಒಳ್ಳೆಯದೇನೋ ಅನ್ನಿಸಿದ್ದರಿಂದ ಒಂದು ಸುದೀರ್ಘವಾದ ಸ್ಟೇಟಸ್ ಹಾಕಬೇಕಾಯಿತು.. ಇಲ್ಲಿ ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ.

ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮದೇಯಾದ ಜವಾಬ್ದಾರಿಯಿರುವುದರಿಂದ ಬೇಜವಾಬ್ದಾರಿ ಹೇಳಿಕೆಗಳು ಯಾರಿಗಾದರೂ ಬೇಸರವನ್ನೇ ತರುತ್ತದೆ. ಯಾರೇ ಆಗಲಿ, ಬೇರೆಯವರ ಬಗ್ಗೆ ಬರೆಯುವಾಗ ಸ್ವಲ್ಪವಾದರೂ ಜವಾಬ್ದಾರಿಯುತವಾಗಿರಬೇಕೆನ್ನುವ ಕನಿಷ್ಠ ಅರಿವಾದರೂ ಇರಲಿಯೆನ್ನುವುದು ನನ್ನ ವಿನಮ್ರ ಕಳಕಳಿಯಷ್ಟೇ.

‍ಲೇಖಕರು sakshi

23 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading