ಕಣ್ಮರೆಯಾದ ಗ್ರೀಟಿಂಗ್ಸ್ ಕಾರ್ಡುಗಳೂ…
ಪ್ರಸಾದನೆಂಬ ವಿರಹಿಯೂ…
ಡಾ. ಲೋಕೇಶ್ ಮೊಸಳೆ
**
ಯುಗಾದಿ ಬಂತೆಂದರೆ ಸಾಕು ಎಲ್ಲರೂ ಶುಭಾಶಯ ಪತ್ರಗಳ ಬೆನ್ನತ್ತಿ ಹೋಗುತ್ತಿದ್ದರು. ಒಂದೇ ರೀತಿಯ, ನೆಲದ ವಾಸನೆ ಇರದ ಗ್ರೀಟಿಂಗ್ಸ್ ಕಾರ್ಡ್ ಗಳು ಯಾವ ಭಾವನೆಯನ್ನೂ ಬಿಚ್ಚಿಡುತ್ತಿರಲಿಲ್ಲ
ಇಂತಹ ಸಂದರ್ಭದಲ್ಲಿ ಲೋಕೇಶ್ ಮೊಸಳೆ ರೂಪಿಸಿದ ಶುಭಾಶಯ ಪತ್ರಗಳು ಹೊಸ ಸಂಭ್ರಮ ಹೊತ್ತು ತಂದವು.
ಲೋಕೇಶ್ ಮೊಸಳೆ ತಾವು ನಡೆದು ಬಂದ ಹಾದಿಯ ಸುಂದರ ನೆನಪುಗಳನ್ನು ಇಲ್ಲಿ ನೀಡಿದ್ದಾರೆ-
**
ಅಂದು ಮೈಸೂರು ರಂಗಾಯಣದ ಲಂಕೇಶ್ ಗ್ಯಾಲರಿಯಲ್ಲಿ ನನ್ನ ಮೊದಲ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ಈಗಾಗಲೇ ಮೂರು ದಶಕ ಕಳೆಯುವ ಹೊತ್ತು. ಅಂದಿನ ರೈತಸಂಘದ ಫೈರ್‌ಬ್ರಾಂಡ್ ಹೋರಾಟಗಾರ ಅಮ್ಮನಪುರ ಮಲ್ಲೇಶ್ ಜೊತೆಗೆ ಶ್ರೀಕಾಂತ್ ಚಿತ್ರಪ್ರದರ್ಶನಕ್ಕೆ ಬಂದಿದ್ದರು. ಶ್ರೀಕಾಂತ್ ವಿದೇಶದಲ್ಲಿ ಓದಿ-ಅಲ್ಲಿಯೇ ಕೆಲಸ ಮಾಡಿ ನಮ್ಮ ದೇಶದಲ್ಲೇ ಏನಾದರೂ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತ ಜೀವನ ಸಾಗಿಸಬೇಕೆಂದು ಕನಸು ಹೊತ್ತುಕೊಂಡು ಬಂದಿದ್ದ ಶ್ರೀಕಾಂತ್ ‘ಹಾಸ್ಪಿಟಲ್ ವೇಸ್ಟ್ ಮ್ಯಾನೇಜ್‌ಮೆಂಟ್'ನಿರ್ವಹಣೆಯ ಸಂಸ್ಥೆಯನ್ನು ಕಟ್ಟಿದ್ದರು. ಹೀಗೆ ಹಲವು ಆಲೋಚನೆ-ಯೋಜನೆ-ಕನಸನ್ನೊಳಗೊಂಡಿದ್ದ ಶ್ರೀಕಾಂತ್ ನನ್ನ ವನ್ಯಜೀವಿ ಚಿತ್ರಗಳನ್ನು ಇದರ ಆಶಯಗಳನ್ನು ಹಲವರಿಗೆ ಮುಟ್ಟಿಸಬೇಕೆಂದು ಚಿಂತಿಸಿ ಆರು ಸಾವಿರ ಶುಭಾಶಯ ಪತ್ರಗಳನ್ನು ಮುದ್ರಿಸಲು ಎಷ್ಟು ವೆಚ್ಚ ತಗಲಬಹುದು ನೋಡಿ ಹೇಳಿ. ಮುದ್ರಣ ವೆಚ್ಚವೆಲ್ಲ ಕೊಡ್ತೇನೆ. ಒಂದು ವಾರದೊಳಗೆ ಮುದ್ರಿಸಿ ಬಿಡಿ ಎಂದರು.
ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟು ಹೋದವರಿಗೆ ಶುಭಾಶಯ ಪತ್ರಗಳ ವಿನ್ಯಾಸ ಕೆಲಸ ಮುಗಿಸಿ ಮುದ್ರಣಾಲಯದ ವೆಚ್ಚ ತಿಳಿಸಲು ಫೋನಾಯಿಸಿದೆ, `ಓಹ್ ಒಳ್ಳೆದಾಯಿತು. ಕಛೇರಿಗೆ ಬಂದು ಬಿಡಿ ಹಣ ಕೊಡುವೆ' ಎಂದು ಫೋನಿಟ್ಟರು ಇದು ತೊಂಭತ್ತರ ದಶಕದಲ್ಲಿ.
ಶುಭಾಶಯ ಪತ್ರಗಳ ಭರಾಟೆ ಪೂರ್ಣವಾಗಿ ನಿಂತಿರಲಿಲ್ಲ ದೀಪಾವಳಿ, ಸಂಕ್ರಾಂತಿ, ಹೊಸವರ್ಷ, ಹುಟ್ಟುಹಬ್ಬ, ಸ್ವಾಗತ-ಬೀಳ್ಕೊಡುಗೆ, ಸಂತಾಪ, ಪ್ರೇಮ-ನಿವೇದನೆ-ಗೆಳೆತನ-ಸಹೋದರತ್ವ ಹೀಗೆ ಎಲ್ಲವನ್ನು ಸಂಪರ್ಕ ಸೇತುವೆಯೋ, ನೆನಪಿನ ಸರಮಾಲೆಗೋ ಸಾಕ್ಷಿಯಾಗುತ್ತಿದ್ದ ಮಾಧ್ಯಮವೆಂದರೆ ಶುಭಾಶಯ ಪತ್ರಗಳೇ; ಇಂಥ ಅದ್ಭುತ ಸಂವಹನ ಕ್ರಿಯೆಯಾಗಿ ಬಳಕೆಯಾಗಿದ್ದ ಶುಭಾಶಯ ಪತ್ರಗಳನ್ನು ಇಂದಿನ ಯುವ ಜನಾಂಗದವರಿಗೆ ಪರಿಚಯಿಸಬೇಕಾದ ಅನಿವಾರ್ಯತೆ ಎದುರಾಗಿರುವುದೇ ಒಂದು ದುರಂತ.
ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿಯುತ್ತಿದ್ದ ೧೯೮೮-೮೯ ಆಸುಪಾಸಿನಲ್ಲಿ ಗೆಳೆಯ ಪ್ರಸಾದ್ ಕುಂದೂರು ಒಂಟಿಕೊಪ್ಪಲಿನ ಗ್ರೀಟಿಂಗ್ಸ್ ಕಾರ್ಡ್ ಅಂಗಡಿಯಲ್ಲಿ ಅರ್ಧ ದಿನ ಕಳೆದರೂ ಅವನ ಕನಸಿನ ಗ್ರೀಟಿಂಗ್ಸ್ ಕಾರ್ಡ್ ಸಿಗದೆ ದುರಂತ ಪ್ರೇಮಿಯ ಮುಖ ಮಾಡಿಕೊಂಡು ಪೆಚ್ಚು ಮೋರೆ ಹಾಕಿಕೊಂಡು ಹೊರಬಂದಿದ್ದ. ಅವನ ನಿರಾಶೆ ದುಗುಡದ ದುಮ್ಮಾನಗಳನ್ನು ಗ್ರಹಿಸಿದ ನಾನು ಬೈಟೂ ಕಾಫಿ ಕುಡಿಸಿ ಮತ್ತೆ ಇನ್ಯಾವುದೋ ನಾಲ್ಕಾರು ಅಂಗಡಿಗಳಿಗೆ ಬೀಟ್ ಹಾಕಿ ಅಂಗಡಿಗಳು ಮುಚ್ಚುವಾಗ ರಾತ್ರಿ ಒಂಭತ್ತರ ಹೊತ್ತಿಗೆ ಪ್ರೇಮ ನಿವೇದನೆಯ ಎಂಥದೋ ಇಂಗ್ಲೀಷ್ ಸಾಲುಗಳಿದ್ದ ಶುಭಾಶಯ ಪತ್ರವನ್ನು, ಅಂದಿನ ಕಾಲಕ್ಕೆ ಇಪ್ಪತ್ತೈದೋ ಮೂವತ್ತೂ ರೂಪಾಯಿಗಳ ದುಬಾರಿ ಕಾರ್ಡ್ ನ್ನು ತೆಗೆದುಕೊಂಡು ಬಂದು ಪಡುವಾರಹಳ್ಳಿಯ ನನ್ನ `ಪ್ರಸನ್ನ ಗಣಪತಿ ನಿಲಯ'ದ ಎಂಟನೇ ರೂಮ್‌ನಲ್ಲಿ ಹಲವು ಬಣ್ಣದ ಪೆನ್ನಿನಲ್ಲಿ ತನ್ನ ಕಲಾತ್ಮಕತೆಯ ಕೌಶಲ್ಯವನ್ನು ಮೆರೆದಿದ್ದ. ರಾತ್ರಿ ಹತ್ತಾದರೂ ಆ ಜೋಷ್‌ನಲ್ಲಿಯೇ ಇದ್ದ ಪ್ರಸಾದ್ ಕುಂದೂರು ನನ್ನನ್ನೂ ಕರೆದುಕೊಂಡು ಆಯ್ಕೆ ಮಾಡಿಕೊಂಡಿದ್ದ ಶುಭಾಶಯ ಪತ್ರವನ್ನೂ ಹಿಡಿದುಕೊಂಡು ಆ ಹುಡುಗಿಯ ಮನೆಮಂದೆ ಬೀಟ್ ಹಾಕಿ ಅವಳೇನಾದರೂ ಮನೆಯಿಂದ ಹೊರಬಂದರೆ.... ಅನ್ನುವ ಕಾತರ.... ಹಾಗೂ ಹೀಗೂ ಮೂರು-ನಾಲ್ಕು ಸಾರಿ ಅವಳ ಮನೆ ಮುಂದಿನ ರಸ್ತೆಯಲ್ಲಿ ಬೀಟ್ ಹೊಡೆದಿದ್ದೇ.... ಹೊಡೆದಿದ್ದು. ಅವಳು ಹೊರಬರಲಿಲ್ಲ, ಇವನು ಬೀಟ್ ನಿಲ್ಲಿಸುವ ಹಾಗಿಲ್ಲ. ಅವಳಿರುವ ರೂಮಿನ ಕಿಟಕಿಯ ದೀಪ ಆರಿಲ್ಲ. ಬಾರೋ ನಾಳೆ ಕಾಲೇಜಿನಲ್ಲಿ ಸಿಗುತ್ತಾಳೆ, ರಾತ್ರಿ ಹನ್ನೊಂದಾಯಿತು. ಹೊಟ್ಟೆ ಬೇರೆ ಹಸಿಯುತ್ತಿದೆ ಎಂದೆ ಗ್ರೀಟಿಂಗ್ಸ್ ಕಾರ್ಡ್ ಗಳ ನೋಡಿ ಓದಿ ಅಲ್ಲಿರುವ ಭಾವನೆಗಳೊಂದಿಗೆ ತನ್ನ ಭಾವನೆಗಳನ್ನು ದಿನವಿಡೀ ಅದ್ದಿ ಅದ್ದಿ ಸಂವಹಿಸಿಕೊಂಡಿದ್ದವನಿಗೆ ಎಂಥಾ ನಿರಾಶೆ!!!
ಆಕೆ ಕಿಟಕಿಯಾಚೆ ಒಮ್ಮೆ ನೋಡಬಾರದೆ ಎಂದು ಮನದಲ್ಲಿ ಮರುಗಿಕೊಂಡು ಪ್ರಸಾದನಿಗೆ ಒಂದು ಐಡಿಯಾ ಇದೆ ಗುರು ಎಂದೆ. ಏನ್ಲಾ ಅದು ಅಂಥಾ ಐಡಿಯಾ..! ಎಂದು ಆಸೆಗಣ್ಣಿನಲ್ಲಿ ಕಣ್ಣು ಪಿಳುಕಿಸಿದ. ನೋಡು ಅವಳು ಓದಿಕೊಳ್ತಾ ಇದ್ದಾಳೆ.... ಈ ರಸ್ತೆ ಕೂಡ ನಿರ್ಜನವಾಗಿದೆ. ಅವಳನ್ನು ಕೂಗಿದರೆ ಅವರಪ್ಪ ಹೊರ ಬರುವ ಸಾಧ್ಯತೆಯಿದೆ. ಏನಾದ್ರೂ ಆದ್ರೆ ಅಕ್ಕಪಕ್ಕದವರೆಲ್ಲ ಸೇರಿ ಬಡಿಗೆ ರುಚಿ ಉಣ್ಣಿಸುತ್ತಾರೆ. ಅದಕ್ಕೆ ಏನ್ಮಾಡು ಅಂದ್ರೆ ನಮ್ಮ ನಾಟಕದ ಒಂದು ರಾಗ ಬಿಡೋಣ. ಅದು ಅವಳಿಗೆ ಗೊತ್ತಾಗುತ್ತೆ. ಕಿಟಕಿಯಲ್ಲಿ ನೋಡ್ತಾಳೆ; ಬಂದ್ರೂ ಸಿಟ್‌ಔಟ್‌ಗೆ ಬರಬಹುದು ಎಂದೆ. ಓಹ್ ಒಳ್ಳೆ ಐಡಿಯಾ ಎಂದವನೇ 'ಸೂರ್ಯ ಶಿಖಾರಿ' ನಾಟಕದ
‘ಒಲವರಳಿದ ಆ ದಿನಗಳೆ ಹೂಗಳೆ; ಕಡಲ ತೀರಗಳೆ ಕಾಡದಿರಿ ….’ ಹೇಳುತ್ತೇನೆ ಎಂದ, ಲೋ ಅದು ಬೇಡವೋ. ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ... ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವೋ ಬೆಳ್ಳಿಕಿರಣ....
‘ ಚೆನ್ನಾಗಿರುತ್ತೆ ಎಂದೆ. ಇನ್ನೇನು ಅವಳ ಮನೆಗೆ ನಾಲ್ಕೈದು ಮನೆಗಳ ದೂರದಿಂದಲೇ ಹಾಡಿಕೊಂಡು ಬರುತ್ತಿದ್ದೆವು.... ಹಾಡ ಹಾಡುತ್ತ ಅವಳ ಮನೆಯ ಕಿಟಕಿ ಸಿಟ್‌ಔಟ್ ಗಮನಿಸುತ್ತಲೇ ಮೈಮರೆಯುತ್ತ ಸಾಗುತ್ತಿದ್ದೆವು. ನಾಯಿಗಳೂ ಕೂಡ ನಮ್ಮನ್ನೇ ಹಿಂಬಾಲಿಸಿದಂತೆ ಬೊಗಳುತ್ತಿದ್ದವು. ನಾಯಿಗಳ ಧ್ವನಿ ಎದುರು ನಮ್ಮ ಧ್ವನಿಯೂ ಎತ್ತರದ ಸ್ವರದಲ್ಲಿ ಹೊರಡುತ್ತಿತ್ತು. ಅವಳ ಮನೆ ಮುಂದೆ ಬಂದೇ ಬಿಟ್ಟೆವು. ಕಿಟಕಿಯಲ್ಲಿ ಬಾಬ್‌ಕಟ್ ಹುಡುಗಿ ಇಣಕಿ ಇಣುಕಿ ಮರೆಯಾದಳು. ಉರಿಯುತ್ತಿದ್ದ ರೂಮಿನ ದೀಪಗಳು ಕಣ್ಣು ಮಿಟುಕಿಸಿದಂತೆ ನಾಲ್ಕಾರು ಸಾರಿ ಸ್ವಿಚ್‌ಆನ್. ಸ್ವಿಚ್‌ಆಫ್ ಆದವು. ಬೆಳಕು ಕತ್ತಲೆಯ ಸಂವಹನ ಅವಳ ರೂಮ್‌ನಿಂದ ನಡೆದರೆ ರಸ್ತೆಯ ಮೊಬ್ಬಾದ ಟ್ಯೂಬ್‌ಲೈಟ್ ಬೆಳಕು-ನೆರಳು, ನಾಯಿ ಬೊಗಳು ಜೊತೆಗೆ ದಲಿತ ಕವಿ ಸಿದ್ದಲಿಂಗಯ್ಯನವರ
‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ…’ ಸಾಲುಗಳನ್ನ ಆ ಕಾಲದಲ್ಲಿ “ನೆಳಲು ಬೆಳಕು’ ನಾಟಕ ತಂಡದ ರಾಷ್ಟ್ರಗೀತೆಯಂತೆ ಹಾಡಿಕೊಳ್ಳುತ್ತಿದ್ದೆವು. ಬೆಳಕು ಕತ್ತಲೆಯಲ್ಲಿ ಸಂವಹಿಸಿದರೂ ಆ ಹುಡುಗಿ ಕೂಡ ‘ನೆಬೆ’ ಕಟ್ಟೆಯಲ್ಲಿ ಇದೇ ಹಾಡನ್ನು ಗುನುಗುತ್ತಿದ್ದಳು…. ಆದರೆ ಆ ನಡುರಾತ್ರಿಯ ಹೊತ್ತಿನಲ್ಲಿ ಅವಳ ರೂಮಿನಲ್ಲಿ ಧ್ವನಿ ಹೊರಡುತ್ತಿರಲಿಲ್ಲ…!
ಬೆಳಕು ಕತ್ತಲೆಯ ಸಂವಹನದ ಹೃದಯದ ಭಾಷೆ ಪ್ರಸಾದಿಗೆ ಅರ್ಥವಾಗಿತ್ತು.
ಇಂಥದ್ದೇ ಹೃದಯ ಭಾಷೆಯ ಕನ್ನಡ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ತಿಪಟೂರಿನ ಗೆಳೆಯ ಸತೀಶ್ ಅವರು ಅವರ ಸ್ನೇಹಿತರೊಂದಿಗೆ ‘ಚಿಟ್ಟೆ’ ಹೆಸರಿನಲ್ಲಿ ಹೊರತರುತ್ತಿದ್ದರು. ಖ್ಯಾತ ಬರಹಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಫೋಟೋಗ್ರಾಫಿ ಮಾಡಿದ ಪಕ್ಷಿ-ಪರಿಸರದ ಚಿತ್ರಗಳ ಕುವೆಂಪು ಅವರ ಕವಿತೆಗಳೊಂದಿಗೆ ಸಂಯೋಜಿಸಿ ಹೊರತರುತ್ತಿದ್ದರು. ಇವೆಲ್ಲವನ್ನೂ ಗಮನಿಸಿದ್ದ ನಾನು ಕನ್ನಡದ ಶುಭಾಶಯ ಪತ್ರಗಳಿಗೆ ಜೀವಕೊಟ್ಟಿದ್ದನ್ನು ನೋಡಿ ಪುಳಕಿತನಾಗಿದ್ದೆ. ತಿಪಟೂರಿನ ಚಿಟ್ಟೆಸತೀಶ್ ಹದಿಹರೆಯದ ಹುಡುಗ-ಹುಡುಗಿಯರನ್ನು ಗುರಿಯಾಗಿಸಿಕೊಂಡು ರೂಪಿಸುತ್ತಿದ್ದರೆ ತೇಜಸ್ವಿಯವರು ವನ್ಯಜೀವಿ ಪಕ್ಷಿಲೋಕವನ್ನು ಕುವೆಂಪು ಅವರ ಕಾವ್ಯದೊಂದಿಗೆ ಗಂಭೀರ ಸ್ವರೂಪದ ಶುಭಾಶಯ ಪತ್ರಗಳಾಗಿದ್ದವು.
ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಶುಭಾಶಯ ಕೋರಿದ ಪತ್ರವೊಂದು ಪತ್ರಿಕಾ ಕಛೇರಿಯೊಂದಕ್ಕೆ ಬಂದಿತ್ತು. ಅದು ತೇಜಸ್ವಿಯವರು ರೂಪಿಸಿದ ಶುಭಾಶಯ ಪತ್ರ.! ನೋಡಿದಾಕ್ಷಣ ನನ್ನ ಮನದೊಳಗೆ ಇಳಿದಿದ್ದರಿಂದ ಜೋಪಾನ ಮಾಡಿ ಇಡಲು ಎರಡು ಕಾರಣಗಳಿದ್ದವು. ಒಂದು ತೇಜಸ್ವಿಯವರು ರೂಪಿಸಿದ ಕಾರ್ಡ್. ಇನ್ನೊಂದು ರಾಜ್ಯದ ಮುಖ್ಯಮಂತ್ರಿಗಳು ಕಳುಹಿಸಿದ ಶುಭಾಶಯ ಪತ್ರ. ರಂಗಾಯಣದ ಕಾಫಿ ಕಟ್ಟೆಯಲ್ಲಿ ಶ್ರೀಕಾಂತ್ ಶುಭಾಶಯ ಪತ್ರಗಳ ಕನಸನ್ನು ತಲೆಗೆ ಹಾಕಿದ ದಿನ ಏನೆಲ್ಲ ನೆನಪಾದವು….!!! ಈ ಎಲ್ಲಾ ನೆನಪುಗಳು ಒತ್ತರಿಸಿಕೊಂಡು ಬಂದ ದಿನವದು.
ನನ್ನ ಚಿತ್ರಗಳೊಂದಿಗೆ ಒಂದೆರಡು ಚಿತ್ರಗಳನ್ನು ಗೆಳೆಯ ಮಹೇಶ್ ನಂಜಯ್ಯ ಅವರ ಚಿತ್ರಗಳೊಂದಿಗೆ ಶುಭಾಶಯ ಪತ್ರಗಳನ್ನು ಮಾರ್ಕೆಟಿಂಗ್ ಮಾಡಲು ಹೊರಟೆ. ಅದು ಹೇಗೋ ಒಟ್ಟು ಮೂರು ಸಾವಿರ ಗ್ರೀಟಿಂಗ್ ಕಾರ್ಡ್ ಗಳನ್ನು ಮಾರಾಟ ಮಾಡಿ ಯಶಸ್ವಿಯಾದೆ. ಹೀಗೆ ವನ್ಯಜೀವಿ ಛಾಯಾಗ್ರಾಹಕನೊಬ್ಬನನ್ನು ಗ್ರೀಟಿಂಗ್ಸ್ ವ್ಯವಹಾರಕ್ಕೆ ಹಚ್ಚಿದ ಕೀರ್ತಿ ಶ್ರೀ ಕನ್ಸ್ಲೆಟೆಂಟ್ ಮಾಲೀಕ ಶ್ರೀಕಾಂತ್ ಅವರದ್ದು.
ಆರು ಸಾವಿರ ಶುಭಾಶಯ ಪತ್ರಗಳಿಂದ ಶುರುವಾದ ಗ್ರೀಟಿಂಗ್ಸ್ ವ್ಯವಹಾರ ಶುಭಾಶಯ ಪತ್ರಗಳ ಕಾಲ ಮುಗಿದೇ ಹೋಗಿರುವ ಈ ಸಂದರ್ಭದಲ್ಲಿ ಸುಮಾರು ಹತ್ತು ಲಕ್ಷಗಳಿಗಿಂತ ಹೆಚ್ಚು ಕಾರ್ಡ್ ಗಳನ್ನು ಮುದ್ರಿಸಿ ಮಾರಾಟ ಮಾಡಿದ್ದು ನನ್ನ ಹೆಗ್ಗಳಿಕೆಯೋ! ಸಹಪಾಠಿ ಗೆಳೆಯರ ಕುಹಕದ ವ್ಯಂಗ್ಯದ ಮಾತುಗಳೋ…! ಏನೋ ಗೊತ್ತಾಗುತ್ತಿಲ್ಲ.
ಒಂದು ನಿರ್ದಿಷ್ಟ ವಿನ್ಯಾಸದ ಕಾರ್ಡ್ ಗಳನ್ನು ಮೂರು ರೂಪಾಯಿ ಐವತ್ತು ಪೈಸೆಯಿಂದ ಎಪ್ಪತ್ತು ರೂಪಾಯಿಗಳವರೆಗೆ ಬಿಲ್ ಮಾಡಿದ ಹೇಳಲಾರದ ಘಟನೆಗಳು ನನ್ನೊಳಗಿವೆ! ಜನಸಾಮಾನ್ಯರಿಂದ ಹಿಡಿದು ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳು. ಉಚ್ಚನ್ಯಾಯಾಲಯದ ನ್ಯಾಯಾಧೀಶರು, ಉನ್ನತ ಅಧಿಕಾರಿಗಳು ಎಲ್ಲರಿಗೂ ಭಿನ್ನ ಶೈಲಿಯಲ್ಲಿ ರೂಪಿಸಿ ಹುಚ್ಚೆಬ್ಬಿಸಿ ಕನ್ನಡ ನಾಡಿನ ಗಾದೆಗಳು, ಜಾನಪದ ಮಾತುಗಳು, ಲಾವಣಿ, ಶಿಶು ಕವಿತೆಗಳು, ಭಾವಗೀತೆ, ಹೋರಾಟದ ಹಾಡುಗಳು, ರಂಗ ಗೀತೆಗಳು, ಒಗಟು, ಕನ್ನಡ ನಾಡಿನ ಕವಿತೆ ಸಾಲುಗಳಿಂದ ರೂಪಿಸಿದ್ದ ಶುಭಾಶಯ ಪತ್ರಗಳು ನೋಡುಗರ ಮನಗೆದ್ದಿದ್ದವು. ಒಟ್ಟು ಮುನ್ನೂರಕ್ಕಿಂತ ಹೆಚ್ಚು ಶುಭಾಶಯ ಪತ್ರಗಳಲ್ಲಿ ಭಿನ್ನವಾದ ಪಕ್ಷಿ-ಪ್ರಾಣಿ, ಕನ್ನಡ ನಾಡಿನ ರೈತ ಬದುಕು. ಹೀಗೆ ಕನ್ನಡ ಶುಭಾಶಯ ಪತ್ರಗಳ ಲೋಕಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿ ಏನೆಲ್ಲ ಆಗಿಹೋದವು!
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹಾಸನದ ಡಾ. ಕೃಷ್ಣ ಅಧ್ಯಕ್ಷರಾಗಿದ್ದರು. ಆಯೋಗದ ಎಲ್ಲಾ ಸದಸ್ಯರಿಗೆ ನಾನು ರೂಪಿಸಿದ ಶುಭಾಶಯ ಪತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದರು. ಸದಸ್ಯರನ್ನು ಭೇಟಿಯಾಗಿ ಅವರು ಇಚ್ಛೆಪಟ್ಟ ಕಾರ್ಡ್ ಗಳನ್ನು ನೀಡುವುದಾಗಿತ್ತು. ಸದಸ್ಯರುಗಳು ಆಯ್ಕೆ ಮಾಡಿ ಅವರಿಚ್ಛೆಯ ಕಾರ್ಡ್ ಗಳನ್ನು ಸರಬರಾಜು ಮಾಡಲು ಅನುಮತಿ ನೀಡಿದ್ದರು.
ಹೊರಪುಟದಲ್ಲಿ ಚಿತ್ರ, ಬೆನ್ನುಪುಟದಲ್ಲಿ ಜಾನಪದ ಗಾದೆ, ಶಿಶುಗೀತೆಗಳು, ಕವಿತೆಗಳು, ಗಾದೆ ಮಾತುಗಳನ್ನು ಸಾರಾಸಗಟಾಗಿ ಮೊದಲೇ ಮುದ್ರಿಸಿ ಇಟ್ಟಿರುತ್ತಿದ್ದೆ. ಇಂಥಾ ಕಾರ್ಡ್ ಗಳನ್ನು ಆಯ್ಕೆ ಮಾಡಿಕೊಂಡ ಸದಸ್ಯರು ತಮ್ಮಿಷ್ಟದವರಿಗೆ ಶುಭ ಕೋರಲು ಕ್ರಿಸ್‌ಮಸ್, ಹೊಸವರ್ಷ, ಸಂಕ್ರಾಂತಿ ಹಬ್ಬಗಳಿಗೆ ಬಳಸುತ್ತಿದ್ದರು. ಅಂಥಾ ಒಂದು ಕಾರ್ಡಿನಲ್ಲಿ “ಆನೆ ಕದ್ದರೂ ಕಳ್ಳ; ಅಡಿಕೆ ಕದ್ದರೂ ಕಳ್ಳ” ಅನ್ನೋ ಗಾದೆ ಮಾತು ಮುದ್ರಣವಾಗಿತ್ತು. ಗಾದೆಯನ್ನು ಗಮನಿಸದೆ ಚಿತ್ರ ನೋಡಿ ಆಯ್ಕೆ ಮಾಡಿಕೊಂಡ ಆ ಸದಸ್ಯರು ತಮ್ಮ ಹುದ್ದೆ ಹೆಸರಿನೊಂದಿಗೆ ಈ ಗಾದೆ ನೋಡಿ ಹೌಹಾರಿ ಏನ್ರೀ ಇದು, ನಮ್ಮ ಕಛೇರಿಗೆ ಇಂಥ ಸಾಲು ಹಾಕಿದ್ದೀರಿ, ಎಂದು ಆ ಸದಸ್ಯರ ಹೆಸರಿನಲ್ಲಿ ಮುದ್ರಿತವಾಗಿದ್ದ ಕಾರ್ಡ್ ಗಳನ್ನು ಬೆಂಕಿಯಲ್ಲಿ ಹೋಮ ಮಾಡಿಸಿ, ಬೇರೆ ಕಾರ್ಡ್ ಗಳನ್ನು ಪಡೆದಿದ್ದರು. ಒಟ್ಟಿನಲ್ಲಿ ಯಾರು ಆನೆ ಕದ್ದಿದ್ದರೋ ಯಾರು ಅಡಿಕೆ ಕದ್ದಿದ್ದರೋ ಗೊತ್ತಿಲ್ಲ. ಈ ಘಟನೆಯಿಂದ “ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡರಂತೆ” ಎನ್ನೋ ಮತ್ತೊಂದು ಗಾದೆ ನೆನಪಾಗಿತ್ತು.
ಮಹಾರಾಜ ಕಾಲೇಜಿನ ಗೆಳೆಯ ರಾಜು ಅಡಕಳ್ಳಿ ಆವಾಗ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ನೆನಪು. ಅಡಕಳ್ಳಿ ಫೋನ್ ಮಾಡಿ ನಿನ್ನ ಕಾರ್ಡ್ ಗಳನ್ನು ತೆಗೆದುಕೊಂಡು ಬಾ ಗೆಳೆಯ…. ಸಾಹೇಬರಿಗೆ ತೋರಿಸೋಣ ಎಂದಿದ್ದರು. ನನ್ನ ಸ್ಟಾಕ್‌ನಲ್ಲಿದ್ದ ಕಾರ್ಡ್ ಗಳನ್ನು ಆಯ್ಕೆಗಾಗಿ ದೇಶಪಾಂಡೆಯವರು ನೋಡುತ್ತಿದ್ದರು. ಓಹ್ ಇದು … ಇದು ಚೆನ್ನಾಗಿದೆ ನೋಡಿ ರಾಜು. ಈ ಹಕ್ಕಿ ಕಮಲಕ್ಕೆ ಕುಕ್ಕುತ್ತಿದೆ. ನಮ್ಮ ಕಾಂಗ್ರೆಸ್‌ನವರು ಕುಕ್ಕಿದಂತೆ ಅರ್ಥ ಬರುತ್ತೆ. ಇದೇ ಇರಲಿ ಮಾಡಿಸಿಬಿಡಿ ಎಂದರು.
ಪಿನ್ ಟೈಲ್ (ಸೂಜಿ ಬಾಲದ) ಜಕಾನ ಪಕ್ಷಿ ಕೆರೆಯ ನೀರಿನಲ್ಲಿರುವ ಕಮಲದ ಎಲೆಗಳ ಮೇಲೆ ಓಡಾಡುತ್ತ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತಿರುತ್ತದೆ. ಕಮಲದ ಹೂವಿನಲ್ಲಿ ಮಕರಂದ ಹೀರುತ್ತಿದ್ದ ಕೀಟವೊಂದನ್ನು ಹಿಡಿಯಲು ಜಕಾನ ಪಕ್ಷಿ ಕಮಲದ ಹೂ ಮೇಲಿದ್ದ ಕೀಟಕ್ಕೆ ಬಾಯಿ ಹಾಕಿರುವ ಚಿತ್ರ ನೋಡಿಕೊಂಡು ಕಾಂಗ್ರೆಸ್ ಬಿಜೆಪಿಯನ್ನು ಕುಕ್ಕುತ್ತಿದೆ ಎಂದು ದೇಶಪಾಂಡೆಯವರು ಬಣ್ಣಿಸಿಬಿಟ್ಟಿದ್ದರು. ಆ ದಿನಗಳಲ್ಲಿ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದರೆಂಬ ನೆನಪು. ಆಗ ನನ್ನ ಚಿತ್ರಕ್ಕೊಂದು ನನಗೆ ಗೊತ್ತಿರದ ಹೊಸ ವ್ಯಾಖ್ಯಾನ ಸಿಕ್ಕಿದ್ದು ನನ್ನ ಪುಣ್ಯ.
ಅಂದು ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಇದ್ದರು. ಅವರ ಕಚೇರಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿ ಬೃಂಗೇಶ್ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದರು. ನನಗೆ ಫೋನ್ ಮಾಡಿ ಸಿ.ಎಂ.ಗೆ ಗ್ರೀಟಿಂಗ್ಸ್ ಕಾರ್ಡ್ ಮಾಡಬೇಕಿದೆ. ಸ್ಯಾಂಪಲ್ಸ್ ತನ್ನಿ ಎಂದಿದ್ದರು. ನಾಲ್ಕೈದು ಕಾರ್ಡ್ ಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆದು ನಾಳೆ ಇದೇ ಸಮಯಕ್ಕೆ ಇಷ್ಟು ಸಾವಿರ ಕಾರ್ಡ್ ಗಳು ಸರಬರಾಜು ಮಾಡಬೇಕು ….ಆಗುತ್ತ ಎಂದರು. ಹೊಸ ವಿನ್ಯಾಸ-ಮುದ್ರಣ ಇಪ್ಪತ್ನಾಲ್ಕು ಗಂಟೆಯೊಳಗೆ! ಮುಖ್ಯಮಂತ್ರಿಗಳ ಕಛೇರಿ ಎಂದರೆ ಬೆಂಕಿ ಕುಲುಮೆ. ಈ ಕುಲುಮೆಯಲ್ಲಿ ವ್ಯವಹರಿಸಿದ ನನಗೆ ಶುಭಾಶಯ ಪತ್ರವನ್ನು ಕೈಯಲ್ಲಿಡಿದುಕೊಂಡು ಸಂತಸಗೊಂಡ ಬೃಂಗೇಶ್ ಕಾರ್ಬೆಟ್ ಕಾಡಿನಲ್ಲಿ ಧೂಳೆಬ್ಬಿಸಿಕೊಂಡು ಸಿಟ್ಟಿನಲ್ಲಿ ಓಡಿಬರುತ್ತಿದ್ದ ಬರುತ್ತಿದ್ದ ಒಂಟಿಸಲಗದ ಚಿತ್ರವನ್ನು ನೋಡುತ್ತ ಅಚ್ಚರಿಗೊಂಡು “ಆನೆ ನಡೆದದ್ದೇ ಹಾದಿ” ಎಂದರು. ಮಧ್ಯಂತರ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಕಡೆಯ ಆಪರೇಷನ್ ಕಮಲದ ಶಾಸಕರು ಗೆದ್ದಿದ್ದರು. ನನ್ನ ಚಿತ್ರಕ್ಕೆ ಮತ್ತೊಂದು ಹೊಸ ವ್ಯಾಖ್ಯಾನ ಸಿಕ್ಕಿತ್ತು…!
ಬೀಜ ನಿಗಮದ ಹಿರಿಯ ಅಧಿಕಾರಿಯೊಬ್ಬರು ಏನ್ರೀ ಇದು ಸಚಿವರು ಅಂದಾಕ್ಷಣ ಇಷ್ಟು ಮೊತ್ತದ ಬಿಲ್ ಕೊಡುವುದೇನ್ರಿ…? ಇಂಥ ಕಾರ್ಡ್ ಗಳೆಲ್ಲ ಬೀದೀಲಿ ಒಂದೆರಡು ರೂಪಾಯಿಗೆ ಸಿಗುತ್ತೆ ಬಿಲ್ ಕೊಡಲಾಗುವುದಿಲ್ಲ ಅಂದರು. ಅದಕ್ಕೆ ನಾನು ಏನ್ ಸಾರ್ ನಿಮ್ಮ ಸಚಿವರಿಗೆ ಬುದ್ದಿ ಇಲ್ಲ ನನ್ನಿಂದ ಶುಭಾಶಯ ಪತ್ರಗಳನ್ನು ಮಾಡಿಸಿಕೊಂಡು ನಿಮ್ಮಂಥ ಅಧಿಕಾರಿಗಳಿಗೆ ಬಿಲ್ ಪಾವತಿಸಲು ಹೇಳಿದ್ದಾರೆ. ಅವರು ಬೀದಿಯಲ್ಲೇ ಖರೀದಿಸಬೇಕಿತ್ತು ಅಂದೆ.
ಏನ್ರೀ ಹಿಂಗಂತೀರ ….? ದಬಾಯಿಸುತ್ತಿದ್ದರು. ಏನ್ಮಾಡೋದು ಸಾರ್ ನಿಮ್ಮ ಮಿನಿಸ್ಟರಿಗೆ ಬುದ್ದಿ ಇಲ್ಲ. ನಮ್ಮ ರೈತರು ನೂರು ಎಕರೆ ಭೂಮಿ ಇಟ್ಟುಕೊಂಡವರೂ ಕೂಡ ನಿಮ್ಮ ಹಾಗೆ ಕೈತುಂಬಾ ಚಿನ್ನ ವಜ್ರದ ಉಂಗುರ, ಕೊರಳ ಸರಗಳನ್ನು ಹಾಕಿಕೊಂಡಿಲ್ಲ. ನೀವು ಮಾತ್ರ ಬಡ್ಡಿ ವ್ಯವಹಾರಸ್ಥರ ರೀತಿ ಕಾಣುತ್ತಿದ್ದೀರಿ …. ನಿಮ್ಮಂಥವರನ್ನು ಅವರು ಇಟ್ಟುಕೊಂಡಿದ್ದಾರೆ …. ಈಗ ನಾನು ಮಾಡಬೇಕಿರುವ ಕೆಲ್ಸ ರೈತರನ್ನು ಕರೆದುಕೊಂಡು ಬಂದು ನಿಮ್ಮನ್ನು ಜಪ್ತಿ ಮಾಡಿಸಬೇಕಿದೆ ಎಂದೆ. ಹೌಹಾರಿದರು ನಿಮ್ಮ ಜಾಗದಲ್ಲಿ ಕೂರುವಷ್ಟು ಯೋಗ್ಯತೆ ನನಗಿದೆ’ ಯಾವನಿಗೂ ಬಕೇಟ್ ಹಿಡಿಯದಿದ್ದಕ್ಕೆ ನಿಮ್ಮೆದುರಿಗಿದ್ದೇನೆ ಎನ್ನುವಾಗ ರೈತ ಸಂಘದ ಹೋರಾಟಗಾರ ಮಲ್ಲೇಶ್ ನನ್ನೊಳಗೆ ಆವಾಹಿಸಿಕೊಂಡಿದ್ದ.
ಒಂದು ವಾರದೊಳಗೆ ನನಗೆ ಬಿಲ್ ಬಂದಿತ್ತು. ಅವರ ಸಹಾಯಕನೊಬ್ಬ ಚೆಕ್ ಆಗುತ್ತಿರುವ ಬಗ್ಗೆ ಆಗಾಗ್ಗೆ ಮಾಹಿತಿ ನೀಡುತ್ತಿದ್ದರು. ಚೆಕ್ ಪಡೆಯಲು ಕಚೇರಿಗೆ ಹೋಗಿದ್ದಾಗ ಆ ಕಛೇರಿ ಸಹಾಯಕ ಚೆಕ್ ನೀಡಿ ಕಾಫಿ ಕುಡಿಯೋಣ ಬನ್ನಿ ಸಾರ್ ಎಂದರು. ಓಹ್ ಇದು ದುಡ್ಡಿನ ಗಿರಾಕಿ ಅಂದುಕೊಂಡೆ. ಅವರೊಂದಿಗೆ ಕಾಫಿ ಕುಡಿದು-ಹೊರಡುವಾಗ ಎಷ್ಟು ಕೊಡಲಿ ಸಾರ್ ಎಂದು ಜೀವನದಲ್ಲಿ ಮೊದಲ ಬಾರಿಗೆ ಕೇಳಿದ್ದೆ. ಏನೂ ಬೇಡ ಸಾರ್ ಹನ್ನೆರಡು ಮನೆಗಳ ಬಾಡಿಗೆ ಬರುತ್ತಿದೆ. ‘ಇಲ್ಲೂ ಕೈತುಂಬಾ ಸಂಬಳವಿದೆ, ಏನು ಮಾಡಲಿ ಸಾರ್? ನೀವು ಕೊಟ್ಟ ಹಣ ಪಡೆದು; ನನಗೇನೂ ಮಕ್ಕಳೂ ಇಲ್ಲ ಹೆಂಡತಿಗೂ ಸಂಬಳ ಬರುತ್ತಿದೆ ಎನ್ನುತ್ತ ಇತ್ತ ಬಂದಾಗ ಮಾತಾಡಿಸಿಕೊಂಡು ಹೋಗಿ ಸಾರ್ ಎಂದು ಬೀಳ್ಕೊಟ್ಟರು. ಅವರ ಕೈ ಹಿಡಿದುಕೊಂಡು ಸಾರ್ ನಾನು ಪತ್ರಕರ್ತನಾಗಿದ್ದೆ ಎಂದಿಗೂ ಬಾಜಿ ವಸೂಲಿ ಮಾಡಿದವನಲ್ಲ ಎನ್ನುತ್ತಿದೆ. ಆಗಲಿ ಸಾರ್ ಬರುತ್ತಿರಿ ಎಂದರು.
ದೇಶದ ರಾಷ್ಟ್ರಪತಿ ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ನ್ಯಾಯಾಧೀಶರು ಪತ್ರಕರ್ತರು ಇಂಥವರಿಗೆಲ್ಲ ಹರಿದಾಡುವ ಶುಭಾಶಯ ಪತ್ರಗಳನ್ನು ನನ್ನ ವನ್ಯಜೀವಿ ಚಿತ್ರದಿಂದ ನಾನೇ ರೂಪಿಸಿದ್ದರಿಂದ ನನ್ನೂರಿನ ಶ್ಯಾನುಬೋಗರು, ಶಾಲಾಮಾಸ್ತರು ನೆಂಟರು, ಗೆಳೆಯರಿಗೆಲ್ಲ ಮುಖ್ಯಮಂತ್ರಿ ಕಛೇರಿಯಿಂದಲೇ ಕಳುಹಿಸಲು ವ್ಯವಸ್ಥೆ ಮಾಡಿದ್ದೆ. ತೇಜಸ್ವಿಯವರ ಚಿತ್ರದ ಕಾರ್ಡ್ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಕಳುಹಿಸಿದ್ದ ಕಾರ್ಡ್ ನ ಅಂದಿನ ಪುಳಕ ನೆನಪಾಗಿತ್ತು. ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್, ಯಡಿಯೂರಪ್ಪ, ಸಿದ್ದರಾಮಯ್ಯನವರು, ನೂರಾರು ಸಚಿವರು ಹೀಗೆ ಹತ್ತಾರು ವರ್ಷ ಶಕ್ತಿ ಕೇಂದ್ರ ವಿಧಾನಸೌಧದಿಂದ ವನ್ಯಜೀವಿ ಗ್ರೀಟಿಂಗ್ ಕಾರ್ಡ್ ಗಳನ್ನು ರೂಪಿಸಿದ್ದು, ಸರ್ಕಾರಿ ಕ್ಯಾಲೆಂಡರುಗಳಲ್ಲಿ ವನ್ಯಜೀವಿ ಚಿತ್ರಗಳನ್ನು ಮುದ್ರಿಸಿದ್ದು ಈ ಮೂಲಕ ವನ್ಯಜೀವಿ ಚಿತ್ರಗಳು, ಕಾವ್ಯ, ಗಾದೆ, ಒಗಟು, ಜಾನಪದ ಮಕ್ಕಳ ಸಾಹಿತ್ಯ ಕನ್ನಡ ನೆಲದ ಕವಿಗಳು, ಜಾನಪದರು ಕನ್ನಡ ನೆಲದ ಕಂಪನ್ನು ಜನಸಾಮಾನ್ಯರಲ್ಲಿ ಅಭಿರುಚಿ ಬೆಳೆಸಲು ಪ್ರಯತ್ನಿಸಿದ್ದು ಈಗ ಒಂದು ಸುಂದರ ನೆನಪು….
ಇಂದು ಶುಭಾಶಯ ಪತ್ರಗಳ ಕೋಟ್ಯಾಂತರ ರೂಪಾಯಿಗಳ ವಹಿವಾಟು ಅಂಗಡಿಗಳು ಇಲ್ಲವಾಗಿವೆ. ಅಂಚೆ ಅಣ್ಣ ಮನೆಮನೆ ಎದುರು ಶುಭಾಶಯ ಪತ್ರಗಳನ್ನಿಡಿದು ಬರುತ್ತಿಲ್ಲ. ಅಪ್ಪ ಅಮ್ಮನ ಕಣ್ಮರೆಯಲ್ಲಿ ಅಂಚೆ ಅಣ್ಣನನ್ನು ಕಾಯುತ್ತಿದ್ದ ಹುಡುಗ-ಹುಡುಗಿಯರ ಹಸಿ ಹಸಿ ಕೌತುಕ ಕಾತುರದ ಮನಸ್ಥಿತಿಯ ಯೌವ್ವನಿಗರೂ ಕಾಣುತ್ತಿಲ್ಲ.
ಪ್ರಸಾದನೆಂಬ ವಿರಹಿಯ ಗ್ರೀಟಿಂಗ್ ಕಾರ್ಡ್ ಹುಡುಕುವ ಪುಳಕ ತಾಳ್ಮೆ ಪ್ರೀತಿ ಪ್ರಸರಣದ ಸಂವಹನವಾಗಿದ್ದ ಗ್ರೀಟಿಂಗ್ಸ್ ಕಾರ್ಡ್ ನ ಚಿತ್ರ ಹಾಗೂ ಅದರೊಳಗಿನ ಬರಹಗಳು ನಮ್ಮ ವಯೋಮಾನದವರಿಗೆ ಮರೆಯಲಾರದ ಸವಿಸವಿ ನೆನಪುಗಳಾಗಿವೆ.
0 Comments