ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದನ್ನು ಶ್ರೇಷ್ಠ ಎಂದು ಹೇಳಲು ಇನ್ನೊಂದನ್ನು ಶ್ರೇಷ್ಠವಲ್ಲ ಎನ್ನಲೇ ಬೇಕೇ?

 

 

 

 

ಈಕ್ಷಿತಾ ಸತ್ಯನಾರಾಯಣ

 

 

 

 

 

ಇದು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಕುರಿತಾದ ಗೋಷ್ಠಿ/ಸಂವಾದದಲ್ಲಿ ಭಾಷಣಕಾರರು ತಮ್ಮ ದೃಷ್ಟಿಕೋನದಿಂದ ಕೃತಿಯನ್ನು ಅವಲೋಕಿಸಿದ್ದಾರೆ. ಈ ಕುರಿತು ಈಕ್ಷಿತ ಸತ್ಯನಾರಾಯಣ ಅವರು ಕೆಲವು ಪ್ರಶ್ನೆಗಳನ್ನೆತ್ತಿ ಪೂರ್ಣದೃಷ್ಟಿಯ ವಿಮರ್ಶೆ ಬೇಕು ಎನ್ನುತ್ತಾರೆ. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವನ್ನು ಬರೆದು ಕಳುಹಿಸಿ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಕುರಿತಾದ ಗೋಷ್ಠಿ/ಸಂವಾದವನ್ನು ಯೂ ಟ್ಯೂಬಿನಲ್ಲಿ ನೋಡಿದೆ. ಎಲ್ಲರೂ ಬಹಳ ಚೆನ್ನಾಗಿ ವಿಷಯವನ್ನು ತಮ್ಮ ತಮ್ಮ ಓದಿನ ಅರಿವಿನ ಹಿನ್ನೆಲೆಯಲ್ಲಿ ಮಂಡಿಸಿದರು.

ಆದರೆ, ಗ್ರಹಿಕೆಯ ಮಿತಿಗಳ ಬಗ್ಗೆ ಒಂದು ವಿಷಯವನ್ನು, ಯಾರೂ ಗಮನಿಸಿದಂತೆ ಕಾಣಲಿಲ್ಲ!

1. ದಲಿತ ಚಳುವಳಿಯ ಹಿನ್ನೆಲೆಯಲ್ಲಿ, ಬಿ. ಕೃಷ್ಣಪ್ಪನವರು ಮಲೆಗಳಲ್ಲಿ ಮದುಮಗಳನ್ನು ಗ್ರಹಿಸಿದರು

2. ಮುಸ್ಲಿಂ ಸಂವೇದನೆಯ ಹಿನ್ನೆಲೆಯಲ್ಲಿ ರಹಮತ್ ತರೀಕೆರೆ/ಳುವಾರರು ಮಲೆಗಳಲ್ಲಿ ಮದುಮಗಳನ್ನು ಗ್ರಹಿಸಿದರು

3. ದಲಿತ ವಿಮರ್ಶಕರು, ಅವರ ದೃಷ್ಟಿಕೋನದಿಂದ ಅನುಮಾನಗಳನ್ನು ವ್ಯಕ್ತಪಡಿಸಿದರು.

ಅದರ ಹಿನ್ನೆಲೆಯಲ್ಲಿ ಬಸವರಾಜ ಕಲ್ಗುಡಿ, ಶಿವಾರೆಡ್ಡಿ ಮತ್ತು ಟಿಪಿ ಅಶೋಕ್ ವಿಷಯ ಮಂಡಿಸಿದರು.

ಎಲ್ಲವೂ ಸರಿ!

ಆದರೆ, ಓದುಗ, ತನ್ನ ಜಾತಿ, ಧರ್ಮ, ರಾಜಕೀಯ ಸಿದ್ಧಾಂತ, ಪಕ್ಷಗಳ ಸಿದ್ಧಾಂತ ಇವುಗಳ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಗ್ರಹಿಸುತ್ತಾ ಹೋದರೆ, ಅದರ ಕಥೆಯೇನು? ಕೊನೆಗೆ ಉಳಿಯುವುದೇನು?

ಖಂಡದೃಷ್ಟಿಯ ವಿಮರ್ಶೆಗಳು ಸಾಮಾನ್ಯ ಓದುಗರಿಗೆ ಏನನ್ನು ಹೇಳಲು ಹೊರಟಿವೆ?

ಅಲ್ಲಿಗೆ ಕುವೆಂಪು ಪ್ರತಿಪಾದಿಸಿದ ಸಾಹಿತ್ಯದಲ್ಲಿ ಪೂರ್ಣದೃಷ್ಟಿಯ ಕಥೆಯೇನು?

ಶಿವಾರೆಡ್ಡಿಯವರ ಟಿಪ್ಪಣಿಗಳು ಮಹತ್ವಪೂರ್ಣವಾದವುಗಳು ಅನ್ನಿಸಿತು.

ಮಲೆಗಳಲ್ಲಿ ಮದುಮಗಳು ಬಗ್ಗೆ ನವ್ಯರು ಬರೆದ ವಿಮರ್ಶೆಗಳನ್ನು ನಂತರದವರು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ ಎಂದು ಬಸವರಾಜ ಕಲ್ಗುಡಿಯವರ ಹೇಳಿದಂತೆ ನೆನಪು. ಅದು ಮಾತ್ರ ನೂರಕ್ಕೆ ನೂರು ಸತ್ಯ. ನವ್ಯ ವಿಮರ್ಶೆಯದ್ದು ಆಂತರಿಕ ತೊಳಲಾಟದ ಸೀಮಿತ ದೃಷ್ಟಿಕೋನ. ಅದರ ಆಯಸ್ಸೂ ಅಷ್ಟೆ!

ಕುವೆಂಪು ಸಾಹಿತ್ಯದ ಮಹತ್ವವನ್ನ, ನವೋದಯದವರ ನಂತರ ಮನಗಾಣಿಸಿದವರೆಂದರೆ ದಲಿತ ಬಂಡಾಯದ ವಿಮರ್ಶಕರು. ಅದಕ್ಕಿಂತ ಹೆಚ್ಚಾಗಿ, ಹವ್ಯಾಸಿ ಬರಹಗಾರರಾದ ಸಾಮಾನ್ಯ ಓದುಗರು!

ಆದರೆ, ಕಲ್ಗುಡಿಯವರು, ಕುವೆಂಪು ಕಾದಂಬರಿಳಿಗಿಂತ ಕವಿತೆಗಳ ವೈಶಾಲ್ಯತೆಯ ಬಗ್ಗೆ ಮಾತನಾಡಿದ್ದು ಸರಿಕಾಣಲಿಲ್ಲ.

(ಒಂದನ್ನು ಶ್ರೇಷ್ಠ ಎಂದು ಹೇಳಲು ಇನ್ನೊಂದನ್ನು ಶ್ರೇಷ್ಠವಲ್ಲ ಎಂದು ಹೇಳುವ ಮನಸ್ಥಿತಿಯೇ ನನಗೆ ಅರ್ಥವಾಗುವುದಿಲ್ಲ!)

ಹೊಸ ತಲೇಮಾರುಗಳು -ವಿಶ್ವ ಸಾಹಿತ್ಯದ ಅರಿವಿನ ಯುವ ತಲೆಮಾರು- ಕುವೆಂಪು ಸಾಹಿತ್ಯವನ್ನು ಓದಿಗೆ ಕೈಗೆತ್ತಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಅವರ ಕವಿತೆ, ನಾಟಕ ಮೇಲು; ಕಾದಂಬರಿಗಳಲ್ಲ, ಮಹಾಕಾವ್ಯ ಮೇಲು, ಗದ್ಯ ಅಲ್ಲ ಎಂಬ ಖಂಡದೃಷ್ಟಿಯ ವಿಮರ್ಶೆ ಬೇಕೆ?

ಒಟ್ಟಾರೆ ಕುವೆಂಪು ಸಾಹಿತ್ಯದ ಬಗ್ಗೆ ಪೂರ್ಣದೃಷ್ಟಿಯ ವಿಮರ್ಶೆ ಬೇಕು ಅಷ್ಟೆ!

‍ಲೇಖಕರು Avadhi GK

23 January, 2018

1 Comment

  1. ಡಾ ಎ ಪಿ ಭಟ್

    ಇದು ನಿಮ್ಮ ಪ್ರಶ್ನೆಗೆ ಉತ್ತರ ಅಲ್ಲ.ಆದರೆ ಈ ವಿಚಾರ ನನ್ನನ್ನೂ ಕಾಡಿದೆ.ಮೊನ್ನೆ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಹೋಗುವ ಮೊದಲು ಮಲೆಯಲ್ಲಿ ಮದುಮಗಳು ಕಾದಂಬರಿಯ ಮರು ಓದು ಮಾಡುವಾಗ ದಕ್ಷಿಣ ಜಿಲ್ಲೆಯವನಾದ ನನಗೆ ಪ್ರಸ್ತುತ ಇಲ್ಲಿಯ ಸನ್ನಿವೇಶದಲ್ಲಿ ಈ ಕಾದಂಬರಿಯು ಈಗ ಪ್ರಕಟವಾಗಿದ್ದರೆ ಇಲ್ಲಿಯ ಬೇರೆ ಬೇರೆ ಸಂಘಟನೆ ಗಳು ಇದರ ಬಗ್ಗೆ ಪ್ರತಿಕ್ರಿಯೆಯ ಸಾಧ್ಯತೆಗಳ ಬಗ್ಗೆ ಯೋಚಿಸಿ ಒಳಗೊಳಗೇ ನಡುಗಿದೆನು .ಈ ಓದಿನಲ್ಲಿ ನನಗೆ ಎದ್ದು ಕಂಡ ವಿಚಾರ ದಕ್ಷಿಣ ಕನ್ನಡ ದ ವಲಸೆ ಕಾರ್ಮಿಕರು ತಮ್ಮೊಡನೆ ಘಟ್ಟದ ಮೇಲೆ ಒಯ್ದ ಸಂಸ್ಕೃತಿ ,ಮತ್ತು ಅದು ಅಲ್ಲಿಯ ಸ್ಥಳೀಯ ಜೀವನ ಶೈಲಿಯ ಮೇಲೆ ಬೀರಿದ ಪರಿಣಾಮ .ಭಾರತದ ವಲಸೆ ಕಾರ್ಮಿಕರು ವೆಸ್ಟ್ ಇಂಡಿಸ್ ,ಫಿಜಿ , ಮಾರಿಷಿಯಸ್ ನಂತಹ ದೇಶಗಳಲ್ಲಿ ತಮ್ಮ ಸಂಸ್ಕೃತಿಯನ್ನು ಒಯ್ದಂತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading