ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕಾಂತದಲಿ ಆಯ್ದ ನೆನಪಿನ ಕುಸುಮದ ಮಳೆ

ಹಾಗೆ ಸುಮ್ಮನೆ ಕಾಡುವ ಗಳಿಗೆ..

akshata krishnamurti

ಅಕ್ಷತಾ ಕೃಷ್ಣಮೂರ್ತಿ 

ಹೀಗೊಂದು ಕಾಡಲಿ ಒಬ್ಬ ಯುವರಾಜ ಬಂದಿದ್ದ
ಹೊಸತೊಂದು ಹಕ್ಕಿಯ ಹಾಡು ಮೈಮರೆತು ಕೇಳಿದ್ದ
– (ಜಯಂತ ಕಾಯ್ಕಿಣಿ)

ಎಂಬ ರಣಧೀರ ಚಿತ್ರದ ಈ ಹಾಡು ನೆನಪಾಗಲು ಕಾರಣವೆನೆಂದರೆ ಅಚಾನಕ ನನ್ನ ಕೈಗೆ ಸಿಕ್ಕ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಎಂಬ ಅಂಕಣ ಬರಹದ ಪುಸ್ತಕ. ಇದನ್ನು ಓದಿದ ಮೇಲೆ ಹೊಸದೊಂದು ಹಕ್ಕಿಯ ಹಾಡು ಮೈಮರೆತು ಕೇಳಿದಂತಾಯಿತು. ಈ ಅಂಕಣ ಬರಹದ ಪುಸ್ತಕದ ಲೇಖಕಿ ಎನ್. ಸಂಧ್ಯಾರಾಣಿಯವರು.

sandhyaraniಅವರ ಹೆಸರಿನಷ್ಟೆ ಸೊಗಸಾಗಿ ಅವರ ಈ ಪುಸ್ತಕ ರಾಣಿ ಲಾಸ್ಯದ, ರಾಜ ಗಾಂಭೀರ್ಯದ, ಒಂಚೂರು ಜೋಕಿನ, ರಾಶಿ ಪ್ರೀತಿಯ, ಅಲ್ಲಲ್ಲಿ ವೈಚಾರಿಕತೆಯ, ಕೆಲವೊಮ್ಮೆ ಹುಬ್ಬೇರಿಸುವ, ಮಗುದೊಮ್ಮೆ ಏನೋ ಒಂಥರಾ ನಾಚಿಕೆಯಲಿ ಕಣ್ಣಗಲಿಸಿ ನುಲಿಯುವ, ಕಚಗುಳಿಯಿಡುವ, ಕಣ್ಣುಮುಚ್ಚಾಲೆಯಾಡುವ ಒಟ್ಟಂದದಲಿ ಎಲ್ಲ ಭಾವಗಳು ಸೇರಿರುವ ಒಗ್ಗರಣೆ ಡಬ್ಬಿ. ಇದೊಂದು ಏಕಾಂತದಲಿ ಕೂತು ಚಂದವಾಗಿ ಆಯುವಂತ ನೆನಪಿನ ಕುಸುಮದ ಮಳೆ ಎನ್ನಬಹುದು. ಲೇಖನ ಓದುತ್ತ ಹೋದರೆ ಪುಟಾಣಿ ದೋಣಿಯ ಮೇಲೆ ಕೂತು ಪಯಣಗೈದಷ್ಟೇ ಖುಷಿ.

ಸಾಮಾನ್ಯವಾಗಿ ಅಂಕಣ ಬರಹ ಬಹುತೇಕ ಸಂದರ್ಭದಲ್ಲಿ ಗಡಿಬಿಡಿಯ ದಿಢೀರ್ ಸಾರು ಆಗುವುದೆ ಹೆಚ್ಚು. (ಅಡುಗೆ ಮಾಡುವುದನ್ನು ಕಲಿಯುವಾಗ ಕೊಂಡ ಅಡುಗೆ ಪುಸ್ತಕದಲ್ಲಿ ಗಡಿಬಿಡಿ ಸಾರು ಎನ್ನುವ ವ್ಯಂಜನವೂ ಕೂಡ ಇದ್ದದ್ದು ನೆನಪಿದೆ.) ಒಪ್ಪಿಕೊಂಡ ಕೆಲಸ ಹೇಗಪ್ಪ ಬರೆಯೋದು ಅನ್ನುತ್ತಲೇ ಬರೆಸಿಕೊಳ್ಳುವುದು ಅನೇಕ ಸಲ. ಅಂಕಣ ಬರಹದಲ್ಲಿ ಬುದ್ಧಿವಂತಿಕೆ ಕಮ್ಮಿ. ಪ್ರಾಮಾಣಿಕತೆ ಹೆಚ್ಚು. ಯಾಕೆಂದರೆ ಅಲ್ಲಿ ಜಾಣತನಕ್ಕೆ ಪುರುಸೊತ್ತು ಸಿಗುವುದಿಲ್ಲ  ಇಲ್ಲಿ ಕೆಲವಂತೂ ಮಾಹಿತಿ ನಿಷ್ಠ. ವಾದ ನಿಷ್ಠ. ಕೆಲವು ಎಡ ಬಲ ಪಂಥಗಳಲ್ಲಿ ರೂಪುಗೊಂಡರೆ ಇನ್ನು ಹಲವುದರಲ್ಲಿ ಸ್ವರತಿ ಎದ್ದು ತೋರುತ್ತದೆ ಎಂದು ಎಲ್ಲೋ ಒಂದು ಕಡೆ ಬೊಳುವಾರು ಮೊಹಮ್ಮದ್ ಕುಂಯಿಯವರು ಅಭಿಪ್ರಾಯ ಪಟ್ಟಿದ್ದು ಓದಿದ್ದೆ.

ಇದೆಲ್ಲವನು ಮೀರಿ ಜಗತ್ತಿನ ಬಣ್ಣಗಳ ಪೆಟ್ಟಿಗೆಯನ್ನು ಬಳಿ ಇಟ್ಟುಕೊಂಡ ಸಂಧ್ಯಾರಾಣಿಯವರು ತಕ್ಕಡಿಯಲ್ಲಿ ಮುಗ್ಧತೆಯನ್ನು ತೂಗಿ ಪರಾಮರ್ಶಿಸುವ, ಅವರವರ ಕಣ್ಣುಗಳಲ್ಲಿ ಕನಸುಗಳು ನೆಲೆಗೊಳ್ಳಲಿ ಎಂದು ಹಾರೈಸುವ ಮನವುಳ್ಳವರಾಗಿದ್ದಾರೆ. ‘ಕನ್ನಡಿ ಸದಾ ಖುಷಿ ಹಂಚುತ್ತದೆ ಆದರೆ ಒಂಟಿಯಾಗಿ ಬಿಡುತ್ತದೆ’ ಎಂದು ಈ ಲೇಖನದಲ್ಲಿ ಹೇಳುತ್ತಿದ್ದಾಗ ಯಾಕೋ ಗೆಳತಿ ಕಳಿಸಿದ ವಾಟ್ಸೆಪ್ ಇಮೇಜ್ ಯಾವಾಗಲೂ ಕನ್ನಡಿಯಂಥ ಗೆಳೆಯರನ್ನೆ ಆರಿಸಿಕೊಳ್ಳಿ.. ಯಾಕೆಂದರೆ ಒಂದು ವೇಳೆ ನಾವು ಅದರ ಮುಂದೆ ಅತ್ತರೂ.. ಅದು ನಗುವುದಿಲ್ಲ ಎಂಬುದು ನೆನಪಾಯಿತು.

‘ಇಲ್ಲೆ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು’ ಎಂದ ಸಂಗಾತಿ ಜೊತೆಯಾದಂತೆ, ‘ಅವಳೆ ಇವಳು ನೆನಪಾಗೊ ಹುಡುಗಿ’ ಎಂದು ಕಳೆದ ಯಾವುದೋ ಒಂದು ದಿನದಲ್ಲಿ ಹೂ ನಗು ಚಲ್ಲಿದವಳು ಸಿಕ್ಕಿದವಳಂತೆ ಸೂಕ್ಷ್ಮವನ್ನು ಆಳವಾಗಿ ಗುರ್ತಿಸಿ ಪದ್ಯವಾಗಿಸಿದ ಇಲ್ಲಿನ ಬರಹಗಳನ್ನು ಅಸ್ವಾದಿಸಿದ್ದೆ ಹೆಚ್ಚು. ಲಹರಿಯಂತೆ ಸಾಗುವ ಈ ಲೇಖನಗಳು ಹಲವು ಬಾರಿ ಓದಿಕೊಂಡಾಗಲು ಮೊಗ್ಗು ಈಗಷ್ಟೆ ಅರಳಿ ಹೂವಾದ ಭಾವ. ‘ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ’ ಎಂದು ಕಣ್ಣುಗಳ ಮಾತು ವಿಸ್ತರಿಸಿದ ವಿಚಾರಗಳಿವೆ. ಇಲ್ಲಿ ಹರ್ ಏಕ ಶಕ್ಸ್ ರಿಹಾಯಿ ಮಾಂಗ ತಾ ಹೈ ಮತ್ತು ಇಂತಹ ರಿಹಾಯಿ (ಬಿಡುಗಡೆ) ಲೇಖಕಿಯನ್ನು ಶುದ್ಧೀಕರಿಸುತ್ತ ಹೋಗುತ್ತದೆ.

ಇವರ ಲೇಖನಗಳನ್ನು ಓದುತ್ತಿದ್ದರೆ ಒಂದು ರೀತಿಯ ಜೀವನಪ್ರೀತಿ ಎದ್ದು ತೋರುತ್ತದೆ. ಮಲ್ಲಿಗೆ ಪರಿಮಳದಂತಹ ಸುಗಂಧ ಮೈ ಮನ ಅಂಟಿಕೊಂಡು ಹೊಸ ಫ್ರೆಶ್ ನೆಸ್ ಅನುಭವವಾಗುತ್ತಿದೆ. ತುಂಬು ಜೀವನ ನಡೆಸುತ್ತಿರುವ ಸಜ್ಜನಿಕೆಯ ಹೆಣ್ಣು ಮಗಳೊಬ್ಬಳ ಸಾನಿಧ್ಯ ಲಭಿಸಿದಂತಾಗುತ್ತದೆ. ಬೆಂಕಿಯನ್ನು ಮೀರಿದ ಬೆಳಕು, ಕತ್ತಲೆಯನ್ನು ಮೀರಿದ ನಸುಕಿದೆ ಇಲ್ಲಿ. ಮೌನವೂ ಮನಬಿಚ್ಚಿ ಇಲ್ಲಿ (ಮಾತು ಮಾತು ಮಥಿಸಿ ಬಂದ ಮೌನದ ನವನೀತ) ಮಾತಾಡುತ್ತದೆ. ಬಂಧವೊಂದಿದ್ದರೆ ಸಾಲದು ಬಂಧನವೂ ಬೇಕೆನ್ನುತ್ತದೆ. ಅನಂತನಾಗ ಹಾಗೂ ಶಂಕರನಾಗ ನಡುವಿನ ಬಾಂಧವ್ಯದ ಕೆಮಿಷ್ಟ್ರಿ ಬಿಚ್ಚಿಡುತ್ತದೆ.

‘ಹೆಣ್ತನಕ್ಕೆ ಎಷ್ಟೇಲ್ಲಾ ಆಯಾಮಗಳು’ ಎಂದು ಪಿಸುಗುಡುತ್ತದೆ, ಈ ಬಂಧನ ಜನ್ಮ ಜನ್ಮದ ಅನುಬಂಧನ ಎಂದು ಕಾನನದ ದಟ್ಟ ಹಾದಿಯಲ್ಲಿ ಹಾಡಿಕೊಂಡು ಸಂಪೂರ್ಣ ಮೈಮರೆತು ಹೃದಯರಾಗ ಕೇಳುವಷ್ಟು ಮನಸ್ಸಾಗುತ್ತದೆ. ಆ ಮೂಲಕವಾಗಿ ಮತ್ತೆ ಹಾಡಿತು ಕೋಗಿಲೆ ಎಂದೆನುತ ಪದೇ ಪದೇ ಮೌನದತ್ತ ಮನಸು ಹೊರಳಿ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಎಂಬ ಕೋಗಿಲೆಯ ಈ ದನಿ ಕೇಳಿದಷ್ಟು ಓದಿದಷ್ಟು ಹೊಸತಾಗಿ ಇಡಿಯಾಗಿ ನಿಲುಕುತ್ತದೆ.

yake kaadutide1ಖಂಡಿತ ಇಲ್ಲಿನ ಲೇಖನಗಳು ಸಹೃದಯನ ಬುದ್ಧಿಗೆ ನಿಲುಕುವ ನಕ್ಷತ್ರವಾಗಿಯೇ ಇವೆ ಎಂಬುದು ಸಂತೋಷ. ‘ಹೇಳಬೇಕು ಅನ್ನಿಸಿದರೆ ಹೇಳಿಬಿಡಿ’ ಎನ್ನುತ್ತಾ ‘ಎಲ್ಲರ ಪಾಲಿಗೂ ಒಂದೊಂದು ಹಾಡು’ ಕಟ್ಟಿಕೊಡುತ್ತಾರೆ. ಇವರ ಬರವಣಿಗೆ ಓದುವುದು ಒಬ್ಬ ಪ್ರಜ್ಞಾವಂತ ತುಂಟಿಯ ಸಂಪರ್ಕ ಬೆಳೆಸಿದಂತೆ ಇದರ ಸಹವಾಸದಲ್ಲಿಯೇ ನಾವು
‘ಗುನ್ ಗುನಾತೆ ರಹೋ.
ಮುಸ್ಕುರಾತೆ ರಹೋ.
ಹಮ್ ಕೋ ತುಮಸೆ ಪ್ಯಾರ ಹೈ’ ಎಂದು ಪುಸ್ತಕದ ಪ್ಯಾರನ್ನು (ಪ್ರೀತಿಯನ್ನು) ಉಳಿಸಿಕೊಳ್ಳಬಹುದು.

ಈ ಸಂತಸದಲ್ಲಿ ಸುಮ್ಮನೆ ಕಾಡುವ, ಕಾಡಿಸಿಕೊಳ್ಳುತ್ತಲೇ ಹತ್ತಿರವಾಗುವ, ಹತ್ತಿರವಾಗುತ್ತಲೇ ಪ್ರಶ್ನೆಯನು ಮುಂದಿಡುವ, ಪ್ರಶ್ನೆಗೆ ಉತ್ತರ ಹುಡುಕುವ ಯೋಚನೆ ಮತ್ತು ಆಲೋಚನೆಗಳು ಬೆನ್ನಟ್ಟಿ ಕಾಡುವ, ತಾರ್ಕಿಕತೆ, ಸಂಪ್ರದಾಯಗಳು ಹಲವಾರು ರೀತಿ ಕಾಡುವ ವಿಷಯಗಳೆಲ್ಲವನ್ನು ಬಹಳಷ್ಟು ಸಾರಿ ಒಂದು ಕವನದ ಸಾಲು ಹೇಳುವುದರ ಮೂಲಕ ಮನಸ್ಸೆಂಬ ಬಾಟಲಿಗೆ ಆರಾಮವಾಗಿ ತುಂಬಿಬಿಡುತ್ತಾರೆ ಪಾನೀಯದಂತೆ. ಸಾಂಪ್ರದಾಯಿಕ ವ್ಯವಸ್ಥೆಯೊಳಗೆ ಅರಳುವ ಹೊಸ ಹಾಡೆಂಬ ಬಣ್ಣದ ಪರೆಪರೆಯ ರೀತಿ ಶೋಧಿಸುವ, ತನ್ನ ಬೇರುಗಳನ್ನು ಕಳೆದುಕೊಳ್ಳದೆ ಉದಾರವಾದಿ ಮನಸ್ಸೊಂದು ಕಾಂಬುವುದು ಇಲ್ಲಿ. ಜೀವನದ ಎಲ್ಲ ಸೌಂದರ್ಯವನು ಸವಿಯಬೇಕೆನ್ನುವ ರಸಿಕತೆಯ ಪ್ರಜ್ಞೆ ಇಲ್ಲಿದೆ. ಹೀಗಾಗಿ ಈಗ ಕೇಳುವುದಕ್ಕೆ ಹೇಳುವುದಕ್ಕೆ ಸಮಯವಿಲ್ಲ. ಬರಿ ಓದುವುದಕ್ಕೆ ಮಾತ್ರ. ಅದಕ್ಕೆ

ಇನ್ನು ನನಗೀಗ ಬರಿಯ ಮಾತಿನಿಂದ ತೃಪ್ತಿಯಿಲ್ಲ
ಎಲ್ಲಿಂದ ಎಲ್ಲ ಮಾತುಗಳು ಹುಟ್ಟಿತ್ತವೆಯೋ
ಎಲ್ಲಿಗೆ ಹೋಗುತ್ತವೆಯೋ(ಸುಭಾಸ ಮುಖ್ಯೋಪಾಧ್ಯಾಯರವರ ಬಂಗಾಳಿ ಕವಿತೆ ರೇಡಿಯೋದಲ್ಲಿ ಪ್ರಸಾರವಾದದ್ದು)

ಆ ಕಾರಣ ಹೆಚ್ಚು ಮಾತಾಡದೆ ಮೌನವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಅದೇಕೋ ಕಾಣೆ ಯಾಕೆ ಸುಮ್ಮನೆ ಕಾಡುತಿದೆ ನನ್ನನು. ನೀನು… ಎಲ್ಲವೂ…

‘ಕರಾವಳಿ ಮುಂಜಾವು’ ಪತ್ರಿಕೆಯಿಂದ

ಚಿತ್ರಗಳು: ರೋಹಿತ್ 

‍ಲೇಖಕರು admin

11 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading