ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
36
ದಿನ ಸರಿದಂತೆ ಗೌರಿ ಆಶ್ರಮದ ವಿವಿಧ ಚಟುವಟಿಕೆಯಲ್ಲಿ ಮಗ್ನಳು. ಆಶ್ರಮದಲ್ಲಿ ಕೆಲವು ಪಾಲಿಸಬೇಕಾದ ನಿಯಮಗಳಿವೆ. ಪ್ರತಿದಿನ ಪ್ರಾರ್ಥನೆ, ವ್ಯಾಯಾಮ, ಎಳೆ ಬಿಸಿಲಿನಲ್ಲಿ ಕವಾಯತು. ಆಗಾಗ ಜ್ಞಾನಕ್ಕಾಗಿ ಬೌದ್ಧಿಕ ಉಪನ್ಯಾಸಗಳು, ಬೇರೆ ಭಾಗದಿಂದ ಆಗಮಿಸುವ ಗಣ್ಯರಿಂದ ಭಾಷಣಗಳು. ದೇಶ ಪ್ರೇಮ, ದೇಶ ಭಕ್ತಿ ಹೆಚ್ಚಿಸುವ ಆವೇಶದ ಮಾತುಗಳು, ಪದ್ಯಗಳು ಜಡಚೇತನವನ್ನು ಬಡಿದೆಬ್ಬಿಸಿ ಉತ್ಸಾಹ, ನವ ಚೈತನ್ಯ ತುಂಬಿಸುವ ಕಾರಂಜಿಗಳು.
ಗಾಂಧೀಜಿ ಇಂದಿನ ಸ್ತ್ರೀಯರಿಗೆ ಅವರ ಧರ್ಮ, ಶೀಲ, ಮಾತೃತ್ವದ ಮಹಾನತೆ ವಿವರಿಸಿ, ‘ಭಾರತಮಾತೆ ದಾಸ್ಯ ಶೃಂಕಲೆಯಲ್ಲಿದ್ದಾಳೆ. ನಿಮ್ಮ ತನು ಮನ, ಧನ ಅರ್ಪಿಸಿ ಅವಳನ್ನು ಕಾಪಾಡಿ. ನಿಮ್ಮ ಚಿನ್ನಾಭರಣದ ಸಹಾಯ ಮಾಡಿ. ಸರಳತೆಯೇ ನಮ್ಮ ಆದರ್ಶವಾಗಲಿ. ನಿಮ್ಮ ಮಕ್ಕಳನ್ನು ವೀರ ಯೋಧರನ್ನಾಗಿ ಮಾಡಿ’ ಹೇಳಿದ ಉಪದೇಶಗಳು. ಗೌರಿಗೆ ಇದೆಲ್ಲ ಹೊಸದು, ಆಸಕ್ತಿದಾಯಕ.
ಒಬ್ಬರ ಉಪನ್ಯಾಸದಲ್ಲಿ ಜಲಿಯನ್ ವಾಲಾಭಾಗನಲ್ಲಿ ಬ್ರಿಟಿಷರು ನಡೆಸಿದ ಭಾರತೀಯರ ದಾರುಣ ಹತ್ಯಾಕಾಂಡವನ್ನು ವಿವರಿಸಿದ್ದರು. ಈ ಮೊದಲೇ ಹೊಳೆಬಾಗಿಲಿನ ಅಟ್ಟದಲ್ಲಿ ಕುಳಿತು ಸುಶೀಲ ಚಿಕ್ಕಿ ಈ ಘಟನೆ ಹೇಳಿದ್ದಳಲ್ಲ. ಆದರೆ ಇಲ್ಲಿ ಕೇಳಿದ ಉಪನ್ಯಾಸ ಬಹಳ ಭಾವಪೂರ್ಣವಾಗಿದ್ದು ಆ ರಾತ್ರೆ ನಿದ್ದೆಯಲ್ಲೂ ಬೆಚ್ಚಿ ಬಿದ್ದಿದ್ದಳು. ಎರಡು ದಿನವೆಲ್ಲಾ ಆಶ್ರಮದಲ್ಲಿ ಇದೇ ಚರ್ಚೆ. ಅವರ ನರಮೇಧ ಯಜ್ಞವನ್ನು ಪ್ರತಿಭಟಿಸಿ ಮೆರವಣಿಗೆ ಮಾಡೋಣವೆಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
‘ಕಳೆದು ಹೋದ ವಿಷಯಕ್ಕೆ ಪ್ರತಿಭಟನೆಯೇ? ಸರಿಯಲ್ಲ. ನಾವೀಗ ಮಾಡಬೇಕಾದ್ದು ಸ್ವದೇಶಿ ವಸ್ತುಗಳ ಪುರಸ್ಕಾರ, ವಿದೇಶಿ ವಸ್ತುಗಳ ತಿರಸ್ಕಾರ. ಇಡೀ ದೇಶದಲ್ಲಿ ಈ ಭಾವನೆ ಕಾಳ್ಗಿಚ್ಚಿನಂತೆ ಹಬ್ತಿದೆ.’ ಸುಶೀಲಚಿಕ್ಕಿ ಸ್ವರ ಏರಿಸಿದ್ದಳು, ‘ಜೊತೆಗೆ ನಮ್ಮ ಮಹಿಳೆಯರ ಅಜ್ಞಾನ, ಮೂಢನಂಬಿಕೆ, ಅನಕ್ಷರತೆ ತೊಲಗಿಸುವ ವಿಷಯದಲ್ಲೂ ಹೆಚ್ಚು ಕ್ರಿಯಾಶೀಲರಾಗಬೇಕು’ ಗೌರಿಗೆ ಅಚ್ಚರಿಯಾಗಿತ್ತು ಈ ಮಾತು ಕೇಳಿ.
ಆವತ್ತು ಹೊಳೆಬಾಗಿಲಿನ ಅಂಗಳದಲ್ಲಿ ಹನುಮನ ಎದುರು ತಲೆ ಬಗ್ಗಿಸಿ ಕುಳಿತ ಚಿಕ್ಕಿ ಇವಳೆಯೇ? ಆಗ ಎಷ್ಟು ಮುಗ್ಧಳು, ಹಿರಿಯರ ಸಂಪ್ರದಾಯ ದಿಕ್ಕರಿಸಲಾಗದೆ ಮೌನವಾಗಿ ಕುಳಿತವಳು ಯಾವಾಗ ಹನುಮ ಹಿಂದೆ ಸರಿದನೋ ಇವಳೂ ಸೆಟೆದು ಒಳ ನಡೆದಿದ್ದಳು. ಗೌರಿ ಇನ್ನೂ ಮರೆತಿಲ್ಲ. ಇಂತಹ ಹಲವು ಹತ್ತು ಸಂಗತಿ ಸುಶೀಲ ಚಿಕ್ಕಿಯ ದಟ್ಟ ಕೂದಲಿನಲ್ಲಿ ಮುಚ್ಚಿ ಹೋಗಿದೆ. ಚಿಕ್ಕಿ ಆಶ್ರಮ ಸೇರುವಾಗ ಇಲ್ಲಿ ಮಧ್ಯವಯಸ್ಸಿನ ಇಬ್ಬರು ಬೋಳು ತಲೆ, ಕೆಂಪು ಸೀರೆಯಲ್ಲಿ ಒಪ್ಪತ್ತು ಉಪವಾಸ ಮಾಡುತ್ತ ಇದ್ದರಂತೆ. ಮಕ್ಕಳು ಸಂಸಾರವಿಲ್ಲದ ಅನಾಥೆಯರು. ಚಿಕ್ಕಿ ಮಾಡಿದ ಮೊದಲ ಕೆಲಸವೆಂದರೆ ಅವರ ಕಣ್ಣೀರು ಒರೆಸಿ, ಅಜ್ಞಾನದ ಪರೆ ಕಿತ್ತು ತೆಗೆದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದು. ಇದೀಗ ಅವರೂ ಹಜಾಮನ ಕೈಗೆ ತಮ್ಮ ತಲೆ ಕೊಡದೆ ತಲೆ ಬಾಚಿ ಹೂ ಮುಡಿಯುವ ಸ್ಥಿತಿಗೆ ಬಂದದ್ದು ನೋಡಿ ದಂಗಾಗಿದ್ದಾಳೆ ಗೌರಿ.
ಆಶ್ರಮದ ಬಹಳಷ್ಟು ಮಹಿಳೆಯರು ಅನಕ್ಷರಸ್ಥರು. ಅವರಿಗೂ ನಡೆದಿದೆ ಅಕ್ಷರಾಭ್ಯಾಸ. ಮಹಿಳೆಯರು ಅಕ್ಷರಸ್ಥರಾಗಬೇಕು ಎನ್ನುವ ಗಾಂಧೀಜಿಯ ಮಾತು ಒಪ್ಪಿದೆ ಚಿಕ್ಕಿ ಮನಸ್ಸು. ಗೌರಿಗೆ ಚಡಪಡಿಕೆ. ಹೊಳೆಬಾಗಿಲಿನ ಕುದ್ರುವಿನಲ್ಲಿ ಕಣ್ಗಳಿಗೆ ಪಟ್ಟಿ ಕಟ್ಟಿದ ಕತ್ತೆಯೇ ಆದ ತಾನು ಜಾಣ ಕುದುರೆ ಆಗುವುದು ಎಂದು? ನಿಧಾನವಾಗಿ ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಗೌರಿಯಲ್ಲಿ ಕಲಿಯುವ ಸ್ಪೂರ್ತಿ, ಸ್ವಾತಂತ್ರ್ಯದ ಕಿಚ್ಚು ಹೆಚ್ಚುತ್ತಿದೆ. ಸ್ವಾತಂತ್ರ್ಯದ ಮೇಲೆ ಬರೆದಳು ಒಂದು ಕವನ,
ಏರಲಿ ಹಾರಲಿ ಭಾರತದ ಬಾವುಟ, ಕೆಂಪು, ಬಿಳಿ, ಹಸಿರು ಬಣ್ಣದ ಬಾವುಟ.
ಆರದಿರಲಿ ನಮ್ಮ ಕಿಚ್ಚು, ಹಾರದಿರಲಿ ನಮ್ಮ ಹುರುಪು
ಸೋಲದಿರಲಿ, ಎದೆಗುಂದದಿರಲಿ ನಮ್ಮ ಚೇತನ, ನಮ್ಮ ದಿವ್ಯ ಚೇತನ.
ಗೌರಿಯ ವಯಸ್ಸಿಗೆ ಇದು ಬಾಲಿಷ ಕವಿತೆ. ಆದರೆ ಏನೋ ಮಹಾನ್ ಕವಿತೆ ಎಂದು ಸುಶೀಲ ಚಿಕ್ಕಿ ಆಶ್ರಮದ ಸಂಜೆ ಪ್ರಾರ್ಥನೆಯ ಮೊದಲು ಗೌರಿಯಿಂದಲೇ ಓದಿಸಿದಳು. ಅಷ್ಟು ಸಾಲದೆ ಸಿರ್ಸಿಯಲ್ಲಿ ಪ್ರಕಟವಾಗುವ ಪತ್ರಿಕೆಗೆ ಕಳುಹಿಸಿದಳು. ಏನಾಶ್ಚರ್ಯ! ಎರಡೇ ದಿನದಲ್ಲಿ ಕವಿತೆ ಪ್ರಕಟವಾಗಿ ಗೌರಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಅದನ್ನೇ ಗೌರಿ ವಯಸ್ಸಿನ ಮಕ್ಕಳು ಹಾಡುತ್ತ ಕುಣಿದದ್ದು ಇನ್ನೂ
ದೊಡ್ಡ ಸಂಗತಿ.
ಬಾವುಟದ ಚಿತ್ರ ಬರೆದು ಕೇಸರಿ, ಬಿಳಿ, ಹಸಿರು ಬಣ್ಣ ತುಂಬಿದಾಗ ಎಲ್ಲರ ಮನದಲ್ಲೂ ದೇಶ ಪ್ರೇಮದ ನಗಾರಿ. ಹಾಗೆಂದು ಅದರಲ್ಲಿ ಹೊಸತನವಿತ್ತೇ? ಅದೇ ದೇಶದ ಧ್ವಜ, ಅದೇ ದೇಶದ ಸ್ವತಂತ್ರ ಕಲ್ಪನೆಯ ಕವಿತೆ. ಆದರೆ ಅಭಿಮಾನದ ಕಿಚ್ಚಿಗೆ ಪ್ರತಿಯೊಂದು ರೂಪರೇಷೆಯೂ ಹೊಸದು. ಒಂದು ದಿನ ಗೌರಿ ಬಿಡಿಸಿದ ಧ್ವಜವನ್ನು ಉದ್ದ ಕೋಲಿಗೆ ಕಟ್ಟಿ ಅನೇಕರು ಸೇವಾಶ್ರಮದ ಹೊರಗಿನ ರಸ್ತೆಯಲ್ಲಿ ಒಂದಷ್ಟು ದೂರ ‘ಭಾರತ ಮಾತಾಕೀ ಜೈ’ ಹೇಳುತ್ತ ಮೆರವಣಿಗೆ ಹೊರಟರು.
ಮೆರವಣಿಗೆಯಲ್ಲಿ ಧ್ವಜ ಹಿಡಿದ ಗೌರಿ ಮುಂದೆ. ಹಿಂದಿನಿಂದ ಉಳಿದವರು. ಮುಗಿಲು ಮುಟ್ಟಿದ ಉತ್ಸಾಹ. ಅರೆ! ಮತ್ತೆ ಮರುದಿನ ಸಿರ್ಸಿ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿ, ಎಲ್ಲರ ಶ್ಲಾಘನೆ ತಾರಕಕ್ಕೇರಿ ಸುಶೀಲ ಚಿಕ್ಕಿಯೂ ಹೊಗಳಿ ಗೌರಿಗೆ ಕೋಡು ಬರುವುದೊಂದೇ ಬಾಕಿ. ತನ್ನೊಳಗೆ ನಗುತ್ತಾಳೆ. ಇನ್ನು ಹದಿನೈದು ದಿನಕ್ಕೆ ಪರೀಕ್ಷೆ. ಚಿಕ್ಕಿ ಎಚ್ಚರಿಸುತ್ತಾಳೆ, ‘ಚೆನ್ನಾಗಿ ಓದಿಕೋ. ಆರನೇ ಕ್ಲಾಸಿಗೆ ದಾಖಲಾತಿ ಸಿಕ್ಕಿದರೆ ನಿನ್ನ ಭವಿಷ್ಯವೇ ಬೇರೆ.’
ಪ್ರತಿ ಸಂಜೆ ‘ವೈಷ್ಣವ ಜನತೋ ತೇನೆ ಕಹಿಯೇ’ ಗಾಂಧೀಜಿಯ ಇಷ್ಟದ ಹಾಡು ಗೌರಿಯೇ ಪ್ರಾರಂಭಿಸಬೇಕು. ಉಳಿದವರು ಧ್ವನಿ ಕೂಡಿಸಬೇಕು. ಆಗೆಲ್ಲ ಈ ಹೊತ್ತಿನಲ್ಲಿ ತನ್ನೊಡನೆ ನಾಣಿ ಇರಬೇಕಿತ್ತು ಚಡಪಡಿಸುತ್ತಾಳೆ. ಆಯಿಗೆ ಪತ್ರ ಬರೆಯುತ್ತಾಳೆ, ‘ನನಗೆ ಆಶ್ರಮ ಖುಷಿ ಆಗ್ತಿದೆ ಆಯಿ. ಹೊಳೆಬಾಗಿಲಿಗಿಂತ ಎಲ್ಲಾ ಬೇರೆಯೇ. ಕಲೀವ ಉತ್ಸಾಹ ಇದೆ. ಹಾಂಗೆ ನಿನ್ನ ಬಿಟ್ಟಿರೂದು ಕಷ್ಟ. ಪರೀಕ್ಷೆಗೆ ಓದಿ ಪಾಸಾದರೆ ಇಲ್ಲೇ ಶಾಲೆಗೆ. ಅದರ ಮೊದಲು ಹೊಳೆಬಾಗಿಲಿಗೆ ಬರ್ತೇ. ನನ್ನ ನಾಣಿ, ಮೋತಿ, ಸಿಂಧೂ ಕರು ಎಂತ ಮಾಡ್ತೋ? ಎಲ್ಲಾ ಮರ್ತು ಹೋಗ್ಲಿಲ್ಲೆ’
ಬೆಳಗು ಮೂಡಿ ಹಗಲು ಕಳೆದು ಸಂಜೆ ಸೂರ್ಯ ಆಯಾಸದಲ್ಲಿ ವಿಶ್ರಮಿಸುವ ಹೊತ್ತಿಗೆ ಗೌರಿಗೆ ಹೊಳೆಬಾಗಿಲು ಇನ್ನೂ ಕಾಡುತ್ತದೆ.
ಸುಶೀಲ ಚಿಕ್ಕಿಯ ಮಡಿಲಿನಲ್ಲಿ ತಲೆ ಇಟ್ಟು ಕಣ್ಣು ಮುಚ್ಚಿದರೆ ಸಾಕು, ತೆರೆಯುತ್ತದೆ ಹೊಳೆಬಾಗಿಲು. ಇನ್ನಿಲ್ಲದಂತೆ ಕಾಡುತ್ತಾನೆ ನಾಣಿ. ಅವನಿಗೆ ಪತ್ರ ಬರೆಯುತ್ತಾಳೆ. ‘ನಾಣಿ, ಇಲ್ಲಿ ಕಾಣು! ನಿನ್ನನ್ನು ಬಿಟ್ಟು ನಾ ಇಲ್ಲಿ ಒಬ್ಬಳೇ ಇದ್ದೇ. ನೋಡು. ನೋಡುವುದಿಲ್ಲವೇ?’ ಎನ್ನುತ್ತಾಳೆ. ಹೊಳೆಬಾಗಿಲಲ್ಲಿ ಪ್ರತಿದಿನವೂ ಒಂದಲ್ಲ ಒಂದು ವಿಧದಲ್ಲಿ ನಾಣಿಯ ಸ್ಪರ್ಷದ ಅನುಭೂತಿಯಲ್ಲಿ ಮಿಂದವಳು.
ಎಷ್ಟೋ ಮುಸ್ಸಂಜೆಗಳು, ಅದೆಷ್ಟೋ ರಾತ್ರೆಗಳು, ‘ಅಕ್ಕ, ಕಥೆ ಹೇಳೇ. ಅಕ್ಕ, ನಿದ್ದೆ ಬಂದಿತಾ? ಆವತ್ತು ಕಮಲತ್ತೆ ಹಾರ್ಮೋನಿಯಂನಲ್ಲಿ, ‘ಅದೋ ನೋಡೆ ರಂಗನಾಥನ ಪುಟ್ಟ ಪಾದವ ಬಾರಿಸಿದ್ದಳಲ್ಲ, ಅದನ್ನು ಹಾಡುತ್ತಿಯಾ? ನಾ ಕುಣಿವೆ ಅಕ್ಕ’ ನೀರಿನಿಂದ ಎದ್ದು ಬಂದ ಗುಳು ಗುಳು ಸದ್ದಿನಂತೆ ಅವನ ಬಾಲ ಭಾಷೆಯ ಧ್ವನಿ ಕೇಳಿದಂತೆ ಪಾಪ, ಈಗೇನು ಮಾಡುವನೋ. ಅದರ ನೇವರಿಕೆಯ ಪ್ರೇಮ ವಿರಹದಲ್ಲಿ ನೊಂದಂತೆ ಇಡೀ ಮನಸ್ಸು ಹಿಂಡಿ ಹಿಪ್ಪೆ ಮಾಡಿ ಚಿಕ್ಕಿಯ ಚಾದರದಲ್ಲಿ ಸುಮ್ಮನೆ ಕಣ್ಣೀರು ಸೋರಿ ಸೋರಿ ಅಳುತ್ತಾಳೆ ಗೌರಿ. ಚಿಕ್ಕಿಯ ಬೆರಳುಗಳು ಮಗುವಿನಂತೆ ಸಾಂತ್ವನದಲ್ಲಿ ಬೆನ್ನು ತಟ್ಟುತ್ತವೆ. ನಾಣಿ ಅವಳನ್ನು ನೋಡುವನೇ? ಅವಳ ಮಾತು ಕೇಳಿಸುವುದೇ ಅವನಿಗೆ? ಇಲ್ಲವಲ್ಲ!
ಇಲ್ಲವಲ್ಲ.! ಈಗೆಲ್ಲ ನಾಣಿ ಒಬ್ಬನೇ ಹೊಳೆಬಾಗಿಲಿನಿಂದ ಹೊರಗೆ ಹೋಗುವುದೇ ಇಲ್ಲ. ದನಕರು ಮೇಯಲು ಬಿಡುತ್ತಾನೆ ನಿತ್ಯ ಅಭ್ಯಾಸದಲ್ಲಿ. ಅವುಗಳ ಗಂಗೆದೊಗಲು ಸವರಿ ಹಣೆ ಮುದ್ದಿಸಿ ಬೆನ್ನ ಮೇಲೆ ಕೈಯ್ಯಾಡಿಸಿ, ಬೇಡ, ಯಾವುದೂ ಬೇಡ.ಅವು ಬಾಲ ಎತ್ತಿ ಓಡುವುದನ್ನು ನೋಡುತ್ತಾನೆ ಇನ್ನೆಲ್ಲೋ ಗಮನ ಇಟ್ಟವನಂತೆ. ಮೋತಿ ಜೊತೆ ಹಾಡಿ ಆಚೆ ಗುಡ್ಡೆಗೆ, ಆವತ್ತು ಧ್ರುವನಂತೆ ತಪಸ್ಸಿಗೆ ಹೋದ ಜಾಗ, ಆ ತೆರೆದ ಹೊಂಡ, ಗಂಗೊಳ್ಳಿ ಹೊಳೆ ತೀರಕ್ಕೆ ಹೋಗಲು ಬೇಸರ. ಜೋಕಾಲಿ ತೂಗಿಕೊಳ್ಳುತ್ತಾನೆ.
ಕಾಲಿನಿಂದ ನೂಕಿ ಮೇಲೇರುವಾಗ ಅವನನ್ನು ಹಿಡಿಯುವ ಅಕ್ಕ ಎಲ್ಲಿದ್ದಾಳೆ? ತನ್ನನ್ನು ಗಟ್ಟಿಯಾಗಿ ಅಪ್ಪಿ ಮುತ್ತು ಕೊಟ್ಟು ಕಿಲಕಿಲ ನಗುವ ಹಾಡು ಹೇಳುತ್ತ ಜೋಕಾಲಿ ಏರಿಸುವ ಅಕ್ಕ ಎಲ್ಲಿದ್ದಾಳೆ? ಹೊಳೆ ಬದಿಯ ಮಾವಿನ ಮರದತ್ತ ಓಡುತ್ತಾನೆ. ಅಷ್ಟೇಕೆ, ಪ್ರತಿ ಶನಿವಾರ ಅಪ್ಪಯ್ಯ ಬರುವ ಸಮಯ ಹೊಳೆ ಅಂಚಿಗೆ ಬಂದು ಮರ ಏರಿ ಹರಿವ ಹೊಳೆಯಾಚೆ ದೋಣಿ ಬಂತಾ? ಕಾತರದಲ್ಲಿ ಕಾದು, ‘ಅಕ್ಕ ದೋಣಿ ಕಾಣ್ತಾ ಇತ್ತಾ?’ ಕೇಳುವ ಉತ್ಸಾಹ? ಊಹೂಂ. ಈಗವನು ಕಷ್ಟದಲ್ಲಿ ಅಕ್ಕ ಹತ್ತಿದ ಮರ ಹತ್ತಬಲ್ಲ. ಹೊಳೆಯಾಚೆ ದೃಷ್ಟಿ ಹಾಯಿಸಬಲ್ಲ. ಅಯ್ಯೋ, ಆ ಉಮೇದು ಇಲ್ಲವಲ್ಲ.
ಅಪ್ಪಯ್ಯ ಬಂದಾಗ ಮುದ್ದು ಮಾಡುತ್ತಾನೆ, ಏನೇನೋ ತರುತ್ತಾನೆ ಸಾಸ್ತಾನದಿಂದ. ಅವನಿಗೆ ಬೇಸರ ಆಗದಂತೆ ಅಜ್ಜಯ್ಯ ತಮ್ಮ ಬೆನ್ನ ಮೇಲೆ ಹೊತ್ತು, ‘ಉಪ್ಪಿನ ಮೂಟೆ ಯಾರಿಗೆ ಬೇಕು?’ ಕೇಳುವಾಗ, ಅಂಬೆಗಾಲಿಟ್ಟು ಬೆನ್ನ ಮೇಲೆ ಕುಳ್ಳಿರಿಸಿ ಕುದುರೆ ಸವಾರಿ ಮಾಡಿಸುವಾಗ, ‘ನನ್ನ ಕುದುರೆ, ಹಚ್ ಹಚಾ,’ ಎನ್ನುವುದಿಲ್ಲ. ತಾನೀಗ ದೊಡ್ಡವನು, ತನ್ನನ್ನು ಹೊತ್ತರೆ ಅಜ್ಜಯ್ಯನ ಬೆನ್ನು ಮುರಿದು, ‘ನೋಡೇ ಅಕ್ಕ, ನಿನ್ನ ಅಜ್ಜಯ್ಯನಿಗೆ ಬುದ್ಧಿ ಹೇಳು’ ಎನ್ನುವ ಚಪ್ಪಾಳೆ ತಟ್ಟಿ. ಅಕ್ಕ ನೋಡಿದಳೇ ಅವನನ್ನು? ತಮ್ಮನ ಮಾತು ಕೇಳಿಸಿಕೊಂಡಳೇ? ಇಲ್ಲವಲ್ಲ. ಪ್ರತಿದಿನ ಅವಳ ಹಿತವಾದ ಸ್ಪರ್ಶ, ಅಖಂಡ ಪ್ರೀತಿಯಲ್ಲಿ ಎರಡು ದೇಹ ಒಂದೇ ಜೀವ ಎಂಬಂತೆ ಇದ್ದವ ಈಗ ಹೇಗೆ ತಾನೇ ಒಬ್ಬನೇ ಸೈರಿಸಬಲ್ಲ. ಅಕ್ಕ ಬರೆಯುತ್ತಾಳೆ ಪತ್ರವನ್ನು ಮುದ್ದಾದ ದೊಡ್ಡ ಅಕ್ಷರಗಳಲ್ಲಿ.
ಅಕ್ಷರ ಕೂಡಿಸಿ ಓದಬಲ್ಲ. ಆದರೆ ಆ ಕಷ್ಟ ಯಾರಿಗೆ ಬೇಕು? ಪತ್ರ ನೋಡಿದರೇ ಸಿಟ್ಟು ಬರುತ್ತದೆ. ಆದರೆ ಮೊಮ್ಮಗಳ ಪತ್ರ ಓದಿ ಅಜ್ಜಯ್ಯ ಅಪ್ಪಯ್ಯ ಓದಿ ಹೇಳಿ ಅವನನ್ನು ನಗಿಸುತ್ತಾರೆ. ತ್ಸೂ, ಯಾರಿಗೆ ಬೇಕು ಹಾಳು ಹರಟೆಯ ಆ ಪತ್ರ?. ‘ನೀ ಬರೀಬೇಡ ಅಕ್ಕ. ನೀನಿಲ್ಲದೆ ಪತ್ರ ಬಂದರೆ ದೋಣಿ ಮಾಡಿ ಹೊಳೆಗೆ ಬಿಡ್ತೆ’ ಎನ್ನುವ ಸಿಟ್ಟಿನಲ್ಲಿ. ಚಕ್ರಿ ಅಮ್ಮಮ್ಮನ ಮನೆಯಷ್ಟೇ ಹತ್ರ ನೀನಿದ್ದರೆ ಯಾವಾಗಲೋ ಓಡಿಬರುತ್ತಿದ್ದೆ. ನೀನೆಲ್ಲೋ ಇದ್ದಿ ಕಾಣದ ಊರಲ್ಲಿ. ಅವನು ಭೂಪಟ ತೆರೆದು ಸಿರ್ಸಿ ಊರನ್ನು ಕಣ್ಣರಳಿಸಿ ನೋಡುತ್ತಾನೆ. ಅಕ್ಕ ಎಲ್ಲಿದ್ದಾಳೆ? ಹಾಗೇ ಸುಮ್ಮನೆ ಕಣ್ಣೀರು ಸೋರಿ ಸೋರಿ, ಎಲ್ಲೋ ಅಜ್ಜಮ್ಮ, ಆಯಿ ನೋಡಿ ಹತ್ತಿರ ಬಂದು, ‘ಯಾಕಳುವೆ ನನ ಕಂದ ಬೇಕಾದ್ದು ನಿನಗಿರಲು’ ಮುದ್ದಿಸುವಾಗ ತಥ್, ಎದ್ದು ಧೀರ ಹೆಜ್ಜೆ ಇಟ್ಟು ಹೊರ ನಡೆದು ಕಣ್ಣೊರಸಿ, ಯಾರೂ ನೋಡಬಾರದಲ್ಲ! ತಾನೀಗ ದೊಡ್ಡ ಆಗಿದ್ದೇನೆ, ಇಷ್ಟೆತ್ತರ?
ಒಂದು ರಾತ್ರೆ ಆಯಿ ಅಪ್ಪಯ್ಯ ಮಾತನಾಡುವುದು ಕೇಳುತ್ತದೆ, ‘ಮಗು ತುಂಬ ಮನಸ್ಸಿಗೆ ಹಚ್ಚಿಕಂಡಿದೆ. ಹಿಂಡು ಅಗಲಿದ ಕರುವಿನಂತೆ ಗೌರಿ ಇಲ್ಲದೆ ಬೇಜಾರು ಅವನಿಗೆ.’ ‘ಸ್ವಲ್ಪ ಸಮಯ ಹೀಗೆ ಶರಾವತಿ, ಸಮಾ ಆಗ್ತಾನೆ ಬಿಡು’ ‘ನಿನ್ನೆ ಅವನಿಗಾಗಿ ಹಿಟ್ಟಿನುಂಡೆ, ಚಕ್ಕಲಿ ಮಾಡಿದ್ದೆ.ಒಂದು ಮುರುಕೂ ಬಾಯಿಗಿಡಲಿಲ್ಲೆ. ಗೌರಿ ಇದ್ದಾಗ ಇಡೀ ಡಬ್ಬಿ ಖಾಲಿ ಮಾಡ್ತಿದ್ದ ಒಂದೇ ದಿನದಲ್ಲಿ’ ಹೇಳ್ದೆ ಅಲ್ಲದೇ, ಸ್ವಲ್ಪ ಸಮಯ ಬೇಕು.
ಗೌರಿಯ ಪ್ರತಿಭೆಗೆ, ಕಲಿಯೂದಕ್ಕೆ ಸಾಸ್ತಾನಕ್ಕಿಂತ ಸಿರ್ಸಿ ಶಾಲೆನೇ ಒಳ್ಳೆಯದು. ಹೋಗಿ ನಾಲ್ಕು ತಿಂಗಳು ಆಗ್ಲಿಲ್ಲೆ, ಅವಳ ನಸೀಬು ಖುಲಾಯ್ಸಿದೆ. ಆಟದಲ್ಲಿ, ಪಾಠದಲ್ಲಿ ಅವಳೇ ಎಲ್ಲರಿಗೂ ಹೀರೋ! ಅವಳನ್ನು ಸಿರ್ಸಿಯಿಂದ ಮತ್ತೆ ಇಲ್ಲಿಗೆ ಕರೆ ತರೂದು ಬ್ಯಾಡ. ಅಲ್ಲೇ ಇರಲಿ. ಇನ್ನು ನಾಣಿ ನಮ್ಮ ಸಮೀಪ ಇರೆಕ್ಕಲ್ಲದ? ಅವನಿಗಾಗಿ ಸಾಸ್ತಾನದ ಶಾಲೆ ಹೆಡ್‌ಮಾಸ್ತರರ ಕಂಡು ಬಂದೆ. ಮಳೆಗಾಲದಲ್ಲಿ ಮಕ್ಕಳ ದಾಖಲಾತಿ ಶುರುವಾದಾಗ ನಾಣಿಯನ್ನು ಕರ್ಕೊಂಡು ಬನ್ನಿ ಅಂದ್ರು. ನೀನಿನ್ನು ನನ್ನ ತಡಿಬ್ಯಾಡ ಶರಾವತಿ’ ‘ನಾನಾದರೂ ಎಂತ ಮಾಡಲಿ? ಈ ಮಳೆಗಾಲದಲ್ಲಿ ಮಾವ ಪೂರಾ ಹಾಸಿಗೆ ಹಿಡಿವ ಅಂದಾಜು. ಅತ್ತೆಗೂ ಏನೂ ಕೂಡ್ತಾ ಇಲ್ಲ. ಅವರನ್ನು ಕಮಲಿ ಮೇಲೆ ಬಿಟ್ಟು ನಾವು ಮಾತ್ರ ಸಾಸ್ತಾನದಲ್ಲಿ ಮನೆ ಮಾಡೂದುಂಟಾ?’
ಕಿವಿಯಾರೆ ಕೇಳಿದ ನಾಣಿ. ಅಕ್ಕನಿಲ್ಲದೆ ಸಾಸ್ತಾನ ಒಂದೇ ಅಲ್ಲ, ಕರ್ನಾಟಕದ ಭೂಪಟ ತೋರಿಸುವ ಯಾವ ಊರಿನ ಶಾಲೆಯೂ ತನಗೆ ಬೇಡ.ಇತ್ತ ಆಯಿ ಇನ್ನೂ ಹೇಳುತ್ತಿದ್ದಾಳೆ, ‘ನಾಣಿಯನ್ನೂ ಸಿರ್ಸಿಗೆ ಕಳುಹಿಸುವ. ಗೌರಿ ಜೊತೆ ಅಲ್ಲೇ ಶಾಲೆಗೆ ಹೋಗಲಿ. ಸುಶೀಲ ಚಿಕ್ಕಿಗೆ ಹೇಳಿ
ಬಾಡಿಗೆ ಮನೆ ಮಾಡಿದ್ರೆ ಮೂರು ಮಂದಿ ಒಟ್ಟಿಗೆ ಇರ್ತಾವೆ. ಮತ್ತೆ ಖರ್ಚು ಪರ್ಚು ನಾವು ನೋಡ್ಕಂಡ್ರಾತು. ಎಂತ ಹೇಳ್ತರಿ?ʼ
‘ನೀ ಹೇಳಿದ್ದು ವಿಚಾರ ಮಾಡುವ ವಿಷಯ. ನೋಡ್ವ.’
ಆಯಿ ಅಪ್ಪಯ್ಯನ ಕೊನೆ ಮಾತುಗಳು ನಾಣಿಗೆ ಕೇಳಲೇ ಇಲ್ಲ. ಅಕ್ಕ ಯಾವಾಗ ಮನೆಗೆ ಬರುತ್ತಾಳೆ? ಇದೊಂದೇ ಧ್ಯಾನ. ಅನುದಿನ ಕಾಯುತ್ತಾನೆ ಅವಳಿಗಾಗಿ. ಅಪ್ಪಯ್ಯ ಸಾಸ್ತಾನದಿಂದ ಪ್ರತಿ ಶನಿವಾರ ಬರುತ್ತಾನೆ ದೋಣಿಯಲ್ಲಿ. ಆ ದೋಣಿ ಅವನೊಬ್ಬನನ್ನೇ ಕರೆತರುತ್ತದೆ ಹೊಳೆತೀರಕ್ಕೆ. ‘ಅಕ್ಕ, ನೀನ್ಯಾವಾಗ ಇನ್ನೊಂದು ದೋಣಿಯಲ್ಲಿ ಹೊಳೆಬಾಗಿಲಿಗೆ ಬರುತ್ತಿ?’ ನಾಣಿ ಕಾಯುತ್ತಾನೆ ಹೊಳೆಬದಿಯ ಮರವೇರಿ ದೂರ ದೂರಕ್ಕೆ ಹೊಳೆನೀರಿನ ಅಲೆಯ ಮೇಲೇರಿ ಬರುವ ದೋಣಿಗಾಗಿ. ಆ ನಿರೀಕ್ಷೆಯ ಕಂಗಳಲ್ಲಿ ನಿರಾಸೆಯೋ, ವೇದನೆಯೋ, ಸಂತೋಷದ ಭಾವವೋ, ಹೀಗೆ ನಿರೀಕ್ಷಿಸುತ್ತಾನೆ, ನಿರೀಕ್ಷಿಸುತ್ತಲೇ…
| ಮುಕ್ತಾಯ |
Ap ಮಾಲತಿ ಅವರು ಬರೆದ ಕಾದಂಬರಿ ಮುಕ್ತಾಯವಾಯಿತು ಆದರೆ ಅದನ್ನು ಓದುವಾಗ ಆಗುವ ಕುಶಿ ನಾನು ಏಲ್ಲಿ ಹುಡುಖಲಿ ಈ ಕಾದಂಬರಿಯ ಮುಂದಿನ ಬಾಗ ಬರೆಯಬಹುದು ಅದರಲ್ಲಿ ಗೌರಿ ದೊಡ್ಡವಳಾಗುವದು ನಾಣಿ ಹಾಗೂ ಅವಳ ಪ್ರೀತಿಯ ಆಕ್ಜ ತಮ್ಮನ ಸುಮಾಗಮ ಅವರು ಇಬ್ಬರು ಕಲಿತು ಜೀವನದ ದೋಣಿಯಲ್ಲಿ ಮೇಲೆ ಬಂದಿರುವದು ಎಲ್ಲ ಇರಲಿ ಇದು ನನ್ನ ಕಲ್ಪನೆ ಆದರೆ ಸೂತ್ರದಾರ್ A P Malathi ಅವರು ಅವರಿಗೆ ನನ್ನ ಮನಪೂರ್ವಕ ಧನ್ಯವಾದಗಳು ತಮ್ಮ ಪ್ರಿಯ ಕೃಷ್ಣ ವಸಂತಿ
ಗೌರಿ, ನಾಣಿಯರ ಆಟದಲ್ಲಿ ಕಂಡ ಹಳ್ಳಿ ಬದುಕು ಸುಂದರವಾಗಿತ್ತು. ಮುಗ್ಧತೆಯ ಜೊತೆಗೇ ಬೆಳೆದ ತಿಳಿಯುವ ಉತ್ಸಾಹ, ಕಲಿಯುವ ಬಯಕೆ , ಸ್ವತಂತ್ರ ವಿಚಾರ ಮೆಚ್ಚುಗೆ ಯಾಯ್ತು. ಹೆಣ್ಣುಮಕ್ಕಳು ಮುದುಡಿ ಕೂರದೆ ಬದುಕು ಎದುರಿಸುವ ಪ್ರಯತ್ನ ಚೆನ್ನಾಗಿದೆ. ನಾಣಿಯೂ ಅಕ್ಕನ ಪ್ರೀತಿಯ ನೆನೆಯುತ್ತಾ ಬೆಳೆಯುತ್ತಾನೆ. ಹಳೆಯ ಕಾಲದ ಚಿತ್ರಣದಲ್ಲಿ ಕಾದಂಬರಿ ಸುಂದರವಾಯ್ತು.
ಗೌರಿಯೇ ಮಾಲತಿ ಎಂಬ ಭಾವ ಬರುತ್ತಿತ್ತು. ಗೌರಿ, ನಾಯಿಯೊಂದು ಪ್ರೌಢಾವಸ್ಥೆಗೆ ಬಂದ ಮೇಲಿನ ಕಥೆಯೂ ಇರಬಹುದೆಂದು ನಿರೀಕ್ಷೆ ಇತ್ತು. ಹೊಳೆಬಾಗಿಲನ್ನೂ, ಗಾಂಧಿಯುಗವನ್ನೂ, ಸೇವಾಶ್ರಮವನ್ನೂ ಸ್ತ್ರೀಶಕ್ತಿಯನ್ನೂ ತೋರಿದ ಮಾಲತಿ ಲೇಖನಿಗೆ ಹೃತ್ಪೂರ್ವಕ ಅಭಿನಂದನೆ.