ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
35
ವಾಸ್ತವ್ಯಕ್ಕೆ ಸುಶೀಲ ಚಿಕ್ಕಿಯ ಕೋಣೆಯಲ್ಲಿ ಏರ್ಪಾಟಾಗಿತ್ತು. ‘ಗೌರಿ ನಮ್ಮ ಮನೆಯಲ್ಲಿರಲಿ. ಪ್ರತಿದಿನ ಸೇವಾಶ್ರಮಕ್ಕೆ ಹೋಗಿ ಬರಲು ಬಸ್ಸುಗಳಿವೆ’ ಎಂದಿದ್ದ ರಘು ದೊಡ್ಡಪ್ಪ.
ಸುಶೀಲ ಚಿಕ್ಕಿ ಒಪ್ಪಲಿಲ್ಲ. ಸಣ್ಣ ಹುಡುಗಿ. ಇನ್ನೊಂದು ವರ್ಷಕ್ಕೆ ಹರಯ ಕಾಲಿಡುತ್ತದೆ. ಅವಳ ಜವಾಬ್ದಾರಿ ತನ್ನದು. ಅನಂತಯ್ಯನಂತೆ ಆ ಜವಾಬ್ದಾರಿಯನ್ನು ರಘುವಿನ ಹೆಗಲಿಗೇರಿಸಿದರೆ ಅದು ತನ್ನ ತತ್ವಕ್ಕೆ ವಿರೋಧ. ತನ್ನಲ್ಲಿದ್ದು ಆರನೇ ಇಯತ್ತೆಯ ಪಾಠ ಓದಿ ಪರೀಕ್ಷೆಗೆ ಬರೆಯಲಿ. ಕಡಿಮೆ ಅಂಕ ಬಂದರೆ ಐದನೇ ಇಯತ್ತೆಗೆ ದಾಖಲಾತಿ ಮಾಡಿಕೊಳ್ಳುವ ಸಮ್ಮತಿ ಸಿಕ್ಕಿದೆ ಶಾಲೆಯಿಂದ. ಹುಬ್ಬಳ್ಳಿಯಿಂದ ಹೊರಟಾಗ ಚಕ್ರಿ ಅಮ್ಮಮ್ಮ, ‘ನೀನು ಎಲ್ಲಿರ್ತಿಯೋ ಅಲ್ಲಿ ನಿನ್ನತನ ಬಿಡಬಾರ್ದು ಗೌರಿ’ ಎಂದಿದ್ದಳು.
ನಿನ್ನತನ ಎಂದರೇನು ತಿಳಿಯದು ಗೌರಿಗೆ. ಸುಶೀಲ ಚಿಕ್ಕಿಯ ವಾತ್ಸಲ್ಯ, ಪ್ರೀತಿಯ ಹೊದಿಕೆಯಲ್ಲಿ ಚಕ್ರಿ ಅಮ್ಮಮ್ಮನ ಸೀರೆಯ ನವಿರಾದ ಕಂಪಿತ್ತು. ಅವಳು ಹೇಳಿದ್ದನ್ನು ತಪ್ಪದೆ ಪಾಲಿಸುವ ಅಂತಃಕರಣದ ಹೃದಯವಿತ್ತು. ಅವಳಷ್ಟೇ ವಯಸ್ಸಿನ ಪ್ರಕಾಶ ಗುರುತಿಸಿದ್ದೂ ಅದನ್ನೇ. ಹುಬ್ಬಳ್ಳಿಯಲ್ಲಿ ತಾವು ಹೊಡೆದು ಚಚ್ಚಿದರೂ ಆಮೇಲೆ ಸ್ನೇಹದ ನಗು ಬೀರಿದ ಗೌರಿ, ಅವಳ ಸಮಾಧಾನಚಿತ್ತದಿಂದ ಆಕರ್ಶಿತನಾಗಿ ಆದಿನ ಸಂಜೆ ಕುದುರೆಗಾಡಿಯಲ್ಲಿ ತಾನೂ ಅವರೊಡನೆ ಹೊರಡಲು ಸಿದ್ಧನಾಗಿದ್ದ. ಆಗ ವಿಷ್ಣು, ‘ಅವರ ಜೊತೆ ಹೋಗಿ ಇನ್ನೇನಾರ ಬಾನಗಡಿ ಮಾಡಾಕ ಹತ್ತಿದರ ನಿನ್ನ ಕಂಟ್ರೋಲ್ ಮಾಡಾಕ ಕಷ್ಟ ಅದ. ಸುಮ್ಮನಿರು’ ಹೇಳಿದ್ದು ಲಜ್ಜಿತನನ್ನಾಗಿ ಮಾಡಿತ್ತು. ಈ ಕಾರಣದಿಂದಲೇ ಮರುದಿನ ನಸುಕಿನಲ್ಲೇ ಗೌರಿಗೆ ವಿದಾಯ ಹೇಳಲು ಬಂದವನು ಧಾರವಾಡದ ಪೇಡಾ ಮತ್ತು ಒಂದು ಪುಸ್ತಕದ ಕಟ್ಟು ಕೊಟ್ಟಿದ್ದ, ‘ವಿಷ್ಣು ಮಾವ ನಿನಗೆ ಓದೂ ಹುಚ್ಚು ಅದ ಅಂದಿದ್ದ, ಮಕ್ಕಳ ಇಂಗ್ಲಿಷ್ ಕಥಿ ಪುಸ್ತಕಾ ಅದಾವ ಇದರೊಳಗ. ಓದಾಕ ಬರದಿದ್ರ ನನ್ನ ಬೈ ಬೇಡ.’
‘ನಾ ಬರೀಲಿಕ್ಕೆ, ಓದಲಿಕ್ಕೆ ಇಂಗ್ಲಿಷ್ ಕಲೀಬೇಕು. ಕಲ್ತ ಮೇಲೆ ಖಂಡಿತ ಓದ್ತೆ.’ ಹೇಳುತ್ತ ಸ್ನೇಹ ಹಸ್ತ ಚಾಚಿದ್ದಳು, ‘ನಾ ಇನ್ನೊಂದಷ್ಟು ಸಮಯ ಸಿರ್ಸಿನಲ್ಲಿ ಇರ್ತೆ. ಅಲ್ಲಿ ಟಪ್ಪಾಲು ಇತ್ತು. ಇಂಗ್ಲಿಷ್ ಲ್ಲೇ ಕಾಗ್ದ ಬರಿ. ಅಕ್ಷರ ಕೂಡ್ಸಿ ಚಿಕ್ಕಿ ಹತ್ರ ಕೇಳಿ ಓದ್ತೆ. ಮತ್ತೆ ನಿಂಗೆ ಎಂತ ಆಯೆಕ್ಕು ಆ ಕಣ್ಣಿಲ್ಲದ ಹುಡುಗ?’
‘ದೂರದ ಸಂಬಂಧಿ, ಅವನ ಅಪ್ಪ ಅಮ್ಮ ಬಡವರು. ಆದರೂ ಕುರುಡರ ಸಾಲೀಗ ಸೇರಸ್ಯಾರ. ಬ್ರೈಲ್ ಲಿಪಿಯಲ್ಲಿ ಕಲೀಲಿಕ್ಕ ಹತ್ಯಾನ. ಅವ್ನ ನೆನ್ಪು ತಗದರ ನಿನ್ನಿದು ನೆನ್ಪಾಗಿ ಬೇಸ್ರ ಬರ್ತದ. ಬಿಡು. ನನ್ನ ತಂದಿ ಹತ್ರ ಹೇಳೀನಿ, ಅವ್ನಿಗೆ ಬ್ಯಾರೆಯವರು ಕಣ್ಣು ದಾನ ಮಾಡ್ತಾರಂದ್ರ ನಾವೇ ಖರ್ಚು ಹಾಕೋಣ ಅಂದೀನಿ. ಹೂಂ ಅಂದಾರ. ಅಷ್ಟೇ ಅಲ್ಲ, ಅವನ ಶಿಕ್ಷಣದ ಖರ್ಚ ಕೂಡಾ ನಾವೇ ಬರಸೋಣ ಅಂದೆ. ಅದಕ್ಕೂ ಒಪ್ಪಿ ಕೊಂಡಾರ. ನಿಂಗೆ ಸಮಾಧಾನ ಆತಲ್ಲ? ನಂಗೂ ನಾ ಮಾಡಿದ ಹುಡುಗಾಟಕ್ಕೆ ಪ್ರಾಯಶ್ಚಿತವೂ ಆತು. ಏನಂತಿ?ʼ
ಇಲ್ಲಿಗೆ ಬಂದ ನಂತರ ಹಲವು ದಿನ ಪ್ರಕಾಶನ ಮಾತುಗಳು, ಹುಡುಗರ ಕೈಯ್ಯಿಂದ ಪೆಟ್ಟು ತಿಂದದ್ದು, ಅನಂತರ ನಡೆದದ್ದು ಇದೇ ನೆನಪುಗಳು. ಹೊಳೆಯ ನೀರಿನಲೆ ರಭಸದಿಂದ ಮೇಲೆ ತೇಲಿ ಬಂದಂತೆ. ರಾತ್ರೆ ಸುಶೀಲ ಚಿಕ್ಕಿ ಆಶ್ರಮದ ವಹಿವಾಟು ಮುಗಿಸಿ ಕೋಣೆಗೆ ಬರುವಾಗ ಅವಳು ಲಾಟೀನು ಬೆಳಕಿನಲ್ಲಿ ಪಾಠ ಓದಿಕೊಳ್ಳುತ್ತಾಳೆ, ಪಾಟಿಯಲ್ಲಿ ಬರೆದು ಉರು ಹೊಡೆಯುತ್ತಾಳೆ. ಇಲ್ಲಿ ಹುಬ್ಬಳ್ಳಿಯಂತೆ ವಿದ್ಯುತ್ ದೀಪದ ಬೆಳಕಿಲ್ಲ. ಲಾಟೀನು, ಬುರುಡೆ ಬತ್ತಿ ದೀಪಗಳು. ಚಿಕ್ಕಿ ಹತ್ತಿರ ಬಂದು ತಮ್ಮಿಬ್ಬರ ಹಾಸಿಗೆ ಹಾಕಿ ಪಾಠಗಳ ಪ್ರಶ್ನೆ ಕೇಳುವ ಮೊದಲೇ ಗೌರಿಗೆ ನಿದ್ದೆ. ಅಲ್ಲಲ್ಲ, ನಿದ್ದೆ ಬಂದಂತೆ ನಟನೆ! ಚಿಕ್ಕಿಯ ಓದಿಸುವ ಕಾಯಕಕ್ಕೆ ವಿರಾಮ!
ಆಶ್ರಮದಲ್ಲಿ ಸುಶೀಲ ಚಿಕ್ಕಿಗೆ ಅರ್ವತ್ತು ಮೀರಿದ ಇಬ್ಬರು ಸಹಾಯಕಿಯರಿದ್ದಾರೆ. ಒಟ್ಟು ಅಲ್ಲಿ ನೆಲೆ ನಿಂತವರು ಸಿರ್ಸಿ ಅಲ್ಲದೆ ಬೇರೆ ಭಾಗಗಳಿಂದ ಬಂದ ನಲ್ವತೈದು ಹೆಂಗಸರು, ನಾಲ್ಕು ಹುಡುಗಿಯರು, ಎಂಟು ಮಂದಿ ಗಂಡಸರು. ಕೇಸರಿ ಬಣ್ಣದ ಬಿಳಿ ಸೀರೆ ಹೆಂಗಸರಿಗೆ, ಬಿಳಿ ಪಂಚೆ, ಅಂಗಿ, ಕೇಸರಿಶಾಲು ಗಂಡಸರಿಗೆ. ಎಲ್ಲರಿಗೂ ಸಮವಸ್ತ್ರದ ನಿಯಮ. ಹಾಲು ಮಜ್ಜಿಗೆ ಊಟ ತಿಂಡಿ ಯಥೇಷ್ಟ. ಹಾಲು ಕರೆಯುವ ಮೂರು ದನಗಳಿವೆ. ನಾಲ್ಕಾರು ಜನಕ್ಕೆ ಹಾಲು ಕರೆಯುವುದು ಗೊತ್ತು. ಉಳಿದಂತೆ ಅಡಿಗೆ ತಿಂಡಿ ಸಿದ್ಧತೆ, ಪಾತ್ರೆ ತಿಕ್ಕು, ಗುಡಿಸು, ಒರಸು ಇತ್ಯಾದಿ ಕೆಲಸಗಳು.
ಸಮೂಹದಲ್ಲಿ ಹಂಚಿಕೊಂಡು ಮಾಡುತ್ತಾರೆ. ಗೌರಿ ಸುಮ್ಮನೆ ಇರುವವಳಲ್ಲ. ಕೈ ಜೋಡಿಸಲು ಹೋಗುತ್ತಾಳೆ. ಓದಲು ಬಂದ ಹುಡುಗಿ, ತಮ್ಮ ಮೇಲ್ವಿಚಾರಕಿಗೆ ಬೇಕಾದವಳು. ಎಲ್ಲರೂ ಅವಳನ್ನು ತಲೆ ಮೇಲೆ ಹೊತ್ತು ಕೆಲಸ ಕೊಡುವುದಿಲ್ಲ. ಆಗೆಲ್ಲ ಗೌರಿ ಅಂಗಳದಲ್ಲಿ, ಕಾಡಿಗೆ ಹೋಗುವ ಕಿರು ದಾರಿಯಲ್ಲಿ ಸ್ವಲ್ಪ ದೂರ ನಡಿಗೆ. ಕಾಡಿನಲ್ಲಿ ತುಂಬ ಒಳಗೆ ಒಬ್ಬಳೇ ಹೋಗಬಾರದೆಂದು ಎಚ್ಚರಿಸಿದ್ದಾಳೆ ಚಿಕ್ಕಿ. ಹಾಗಂತ ಅಲ್ಲಿ ಚಿರತೆ, ಹುಲಿ ಇಲ್ಲ. ಹಾವು ಹರಣೆಗೆ ಬರಗಾಲವಿಲ್ಲ. ತೋಳಗಳು ಇವೆ ಅಂತ ಸುದ್ದಿ. ಯಾರೂ ಈ ತನಕ ಕಂಡಿಲ್ಲ. ನವಿಲು ಬೇಕಷ್ಟಿವೆ.
ಒಂದು ದಿನ ಗೌರಿ ಯಾರಿಗೂ ಹೇಳದೆ ಒಬ್ಬಳೇ ಕಾಡಿನಲ್ಲಿ ತನ್ನಪಾಡಿಗೆ ಗುನುಗುತ್ತ ಬಹಳ ದೂರ ಹೋಗಿ ಚಿಕ್ಕಿಗೆ ಗೊತ್ತಾಗಿ ಅವಳಿಂದ ಬೈಸಿಕೊಂಡು ನಂತರ, ‘ನಾ ಎಂತ ಮಗು ಅಂದುಕೊಂಡ್ಯಾ ಚಿಕ್ಕಿ? ಹೊಳೆಬಾಗಿಲಲ್ಲಿ ನಾನು ನಾಣಿ ದಿನವೆಲ್ಲ ತಿರುಗಾಡಿ ಅಭ್ಯಾಸ ಇದ್ದವರು.’ ಭುಜ ಕುಣಿಸಿದ್ದಳು. ಹೊಳೆಬಾಗಿಲಿನಂತೆ ಇದು ಕುರುಚಲು ಕಾಡಲ್ಲವೆಂದು ಗೊತ್ತಾದ ನಂತರ ದೂರ ಹೋಗದಿದ್ದರೂ ಕಾಡಿನ ತಂಪು ನೆರಳಲ್ಲಿ ಪ್ರತಿ ಬೆಳಿಗ್ಗೆ ಅವಳ ತಿರುಗಾಟ. ಮಂದಾರ, ಪಾರಿಜಾತ, ಬಕುಳ, ಹೊನ್ನೆ ಹೂವುಗಳ ಮಧುರ ಕಂಪಿನಲ್ಲಿ ಸುಯ್ಲಿಡುವ ಗಾಳಿ ಗಂಧ ತೀಡಿದಂತೆ ಇಡೀ ಪೃಥ್ವಿಯನ್ನೇ ಹೊದ್ದು ಮಲಗಿರುತ್ತದೆ.
ಮಂಜಿನಲ್ಲಿ ತೊಯ್ದು ಅರಳುವ ಪುಷ್ಪಗಳ ಮಕರಂದ ಹೀರಲು ಬರುವ ಜೇನ್ನೊಣ, ದುಂಬಿಗಳ ಸಂಭ್ರಮದ ಹಾಡು ಅಷ್ಟ ದಿಕ್ಕುಗಳಲ್ಲಿ ಝೇಂಕರಿಸುವಾಗ ಅದೋ ಅಲ್ಲಲ್ಲಿ ಹಾರುವ ಚಿಟ್ಟೆ, ಬಣ್ಣ ಬಣ್ಣದ ಪಾತರಗಿತ್ತಿ, ಓಡುವ ಅಳಿಲುಗಳು ಅರೆರೆ! ‘ಎಲ್ಲಿದ್ದಿಯೋ ನಾಣಿ, ಬಾ, ಕಾಡಿನ ಸುತ್ತ ನಾವಿಬ್ಬರೇ ಕೈಯ್ಯಲ್ಲಿ ಕೈ ಹಿಡಿದು ಸುತ್ತು ಹಾಕಿ ಬರೋಣ’ ಕರೆಯುತ್ತಾ ಓಡುತ್ತಾಳೆ. ಒಂದೆರಡು ಪಾತರಗಿತ್ತಿಗಳು ಅವಳ ಅಂಗೈಗೆ ಬಂದು ಸುಮ್ಮನೆ ಪಟ ಪಟ ರೆಕ್ಕೆ ಬಡಿದರೆ, ‘ನಾಣಿ, ನೋಡಿಲ್ಲಿ, ನಾ ಹಿಡಿದೇ ಬಿಟ್ಟೆ.’ ಎನ್ನುತ್ತಾಳೆ. ನಾಣಿ ನೋಡಿದನೇ? ಗೌರಿಯ ಮಾತು ಕೇಳಿಸಿತೇ ಅವನಿಗೆ? ಇಲ್ಲವಲ್ಲ!
ಆಶ್ರಮದ ಕಿರಿಯರಿಗೆ, ಹಿರಿಯರಿಗೆ ತೂಗಿಕೊಳ್ಳಲು ಜೋಕಾಲಿ ಇತ್ತು. ಗೌರಿ ಅದರಲ್ಲಿ ಕುಳಿತು ತೂಗುತ್ತಿದ್ದರೆ ಎದುರಿಗೆ ಕಾಣಿಸುತ್ತಾಳೆ ಚಕ್ರಿ ಅಮ್ಮಮ್ಮ. ಹೊಳೆಬಾಗಿಲು ಮನೆ ಎದುರು ಅಂಗಳದ ಬದಿಗೆ ಹೀಗೇ ಜೋಕಾಲಿ ಹಾಕಿಸಿದವಳು ಚಕ್ರಿ ಅಮ್ಮಮ್ಮನೇ. ತನ್ನ ಮದುವೆಗೆ ಅಪ್ಪಯ್ಯ ಬೇಡ ಅಂದನಲ್ಲ, ಆಗ ಆಯಿ ಚಕ್ರಿ ಅಮ್ಮಮ್ಮನನ್ನು ಕೇಳಿ ಬರಬೇಕು ಎನ್ನುವಾಗ ಧಿಡೀರನೆ ಅವಳೇ ಹೊಳೆಬಾಗಿಲಿಗೆ ಬಂದಿದ್ದಳಲ್ಲ. ಆ ಸಂಜೆ ಮನೆ ಸಮೀಪವೇ ಗೋವೆ ಮರದ ಹೆಚ್ಚು ಎತ್ತರವಿಲ್ಲದ ಬಾಗಿದ ಗೆಲ್ಲು ಕಾಣುವಾಗ ಅದೇನು ನೆನಪಾಯಿತೋ, ತಮ್ಮ ಮೊಮ್ಮಕ್ಕಳಿಗೆ ತೂಗುವುದಕ್ಕೆ ಇಲ್ಲಿ ಜೋಕಾಲಿ ಕಟ್ಟಿದರೆ ಹೇಗೆ? ಎಂದು ಅಮ್ಮಮ್ಮನ ಮನಸ್ಸಿಗೆ ಬಂದದ್ದೇ ತಡ, ಗೌರಿ, ನಾಣಿ ಮಂಗಗಳಂತೆ ಕುಣಿದದ್ದು ಖರೆಯೇ. ಸುದ್ದಿ ಅಜ್ಜಯ್ಯನ ಕಿವಿಗೆ ತಲುಪಿತು.
ಅಜ್ಜಯ್ಯ ಯಾವಾಗಲೂ ಮೊಮ್ಮಕ್ಕಳ ಪರ. ಹೇಳಿದ್ದನ್ನು, ಬಯಸಿದ್ದನ್ನು ತಲೆಯಲ್ಲಿ ಹೊತ್ತು ಮಾಡುವವರು. ಸಪುರದ ಬಾವಿ ಹಗ್ಗ ತಂದದ್ದೇ ಇತ್ತು ಕೊಟ್ಟಿಗೆಯಲ್ಲಿ. ಲಿಂಗಪ್ಪನನ್ನು ಕರೆದರು. ಹೊರಗೆ ಗೋವೆ ಮರದ ಬದಲು ಅಂಗಳದ ಬದಿಗೆ ನೆರಳಿನ ಜಾಗದಲ್ಲಿ ಗಟ್ಟಿ ಎರಡು ಕಂಭಗಳನ್ನು ಹುಗಿದು ಮೇಲೆ ಅಡ್ಡಕ್ಕೆ ಇನ್ನೊಂದು ಕಂಭ ಕಟ್ಟಿ ಹಗ್ಗ ಇಳಿ ಬಿಟ್ಟು ಜೋಕಾಲಿ ಅರ್ಧ ಗಂಟೆಯಲ್ಲಿ ಸಿದ್ಧ. ಅಮ್ಮಮ್ಮ ಗೌರಿ ನಾಣಿಯನ್ನು ಕುಳ್ಳಿರಿಸಿ ‘ತೂಗಿರೇ ರಂಗನ, ತೂಗಿರೆ ಕೃಷ್ಣನ್ನ’ ಹಾಡುತ್ತ ತಾನೇ ತೂಗಿದಾಗ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತು. ಎಷ್ಟು ಒಳ್ಳೆಯವಳು ಚಕ್ರಿ ಅಮ್ಮಮ್ಮ. ದಿನಾ ಜೋಕಾಲಿ ತೂಗ್ತಾ ಮರದೆತ್ತರಕ್ಕೆ ಹೋಪಾಗ ಎಂತ ಖುಷಿ, ಎಂತ ಖುಷಿ! ಕಾಲು ಬೆರಳಿಂದ ನೆಲ ನೂಕಿ ನೂಕಿ ಮೇಲೇರಬೇಕು.
‘ಆಯಿ, ನೀನೂ ಬಾ. ನೀನೂ ಜೋಕಾಲಿ ತೂಗು.’ ಗೌರಿ ಕೇಕೆ ಹಾಕಿದಳು, ‘ಅಕಾ, ಕೃಷ್ಣ ರಾಧೆ ತೂಗಿದಾಂಗೆ ನಾನೂ ನಾಣಿ ಜೋಕಾಲಿ ತೂಗ್ತೋ’ ‘ಸುಶೀಲ ಚಿಕ್ಕಿ ಎಲ್ಲಿ? ಶಾರದತ್ತೆ, ಕಮಲತ್ತೆ ಬನ್ನಿ ಬನ್ನಿ. ಜೋಕಾಲಿ ತೂಗ್ತೋ’ ನಾಣಿ ಕೇಕೆ ಹಾಕಿದ.
ಆಯಿ ಬಿಟ್ಟ ಕಣ್ಣುಗಳಿಂದ ತನ್ನ ತಾಯಿಯನ್ನು, ಮಕ್ಕಳನ್ನೂ ನೋಡಿದ್ದೇ ನೋಡಿದ್ದು! ತನ್ನ ಅಮ್ಮನ ಉತ್ಸಾಹ ಮಕ್ಕಳಿಗಿಂತ ಹೆಚ್ಚು. ಅದಕ್ಕೇ ಇವೆರಡೂ ಅವಳನ್ನು ಹಚ್ಚಿಕೊಂಡಿವೆ. ಅದೇನು ಅಮ್ಮನ ಜೀವನೋತ್ಸಾಹ! ಜೋಕಾಲಿ ತೂಗುತ್ತ ನೆನಪಿಸಿಕೊಳ್ಳುತ್ತಾಳೆ ಗೌರಿ, ತನ್ನಲ್ಲೂ ಇರಬೇಕು ಅಮ್ಮಮ್ಮನ ಜೀವನೋತ್ಸಾಹ. ತಾನೂ ಅವಳಂತೆ ಆಗಬೇಕು. ಎಲ್ಲಿದ್ದಿ ನಾಣಿ? ನನಗೊಬ್ಬಳಿಗೆ ಜೋಕಾಲಿ ತೂಗೂಕೆ ಬೇಜಾರು. ನೀನು ಇದ್ದರೆ ರಾಧೆ, ಶ್ರೀಕೃಷ್ಣನ ಹಾಂಗೆ ದಿನಾ ತೂಗಲಕ್ಕು. ಅಲ್ಲೂ ನೀ ಒಬ್ಬನೇ ಜೋಕಾಲಿ ತೂಗ್ತೆ. ನಿಂಗೂ ಬೇಜಾರು ಅಲ್ದ? ಹೋ, ಎಲ್ಲಿದ್ದಿ ನಾಣಿ?’ ಪಾಪ, ನಾಣಿಗೆ ಕೇಳಿತೇ ಅವಳ ಮಾತು? ಇಲ್ಲವಲ್ಲ.
| ಇನ್ನು ನಾಳೆಗೆ |
0 ಪ್ರತಿಕ್ರಿಯೆಗಳು