
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
32
ಮಾಘಮಾಸಕ್ಕೆ ಲಗ್ನವಿದ್ದರೂ ಮಾಡುವ ಕೆಲಸಗಳು ಬೆಟ್ಟದಷ್ಟು. ದೊಡ್ಡಮನೆ ಲಗ್ನ, ಕೇಳಬೇಕೇ? ಕೆಲಸ ಕಾರ್ಯಗಳಿಗೆ ಹಲವಾರು ಮಂದಿಯ ಸಹಾಯಹಸ್ತ. ಸುಬ್ಬಪ್ಪಯ್ಯರಿಂದ ಉಪಕೃತರಾದವರು ನಿಮ್ಮ ಮಗಳ ಮದಿ ನಮ್ಮ ಮನೆ ಮದಿ ಇದ್ದಾಂಗೆ ಎಂದರು. ಹಪ್ಪಳ ಸಂಡಿಗೆ ತಯಾರಿಗೆ ಆಚೆ ಈಚೆಯ ಹೆಂಗಸರು ಕೈ ಜೋಡಿಸಿದರು. ಆರತಿ ಬತ್ತಿಯನ್ನು ನಾಲ್ಕು ಮಂದಿ ಕೆಲಸವಿಲ್ಲದ ಅಜ್ಜಮ್ಮಂದಿರು ಹಂಚಿಕೊಡರು.
ಬಳೆಗಾರ ಸಣ್ಣಪ್ಪ ಬಳೆಗಳ ಕಟ್ಟು ಹೊತ್ತು ಊರೂರು ತಿರುಗುವವ. ಅವನಿಗೆ ಲಗ್ನದ ಎರಡು ದಿನಗಳ ಮುಂಚೆ ಹತ್ತಾರು ಬಣ್ಣದ ವಿವಿಧ ಅಳತೆಯ ಬಳೆಗಳನ್ನು ತರಬೇಕೆಂದು, ಶಾರದೆ ಮತ್ತು ಲಗ್ನಕ್ಕೆ ಬಂದ ಎಲ್ಲ ಹೆಮ್ಮಕ್ಕಳಿಗೆ ಅವನೇ ಬಳೆ ತೊಡಿಸಬೇಕೆಂದು ಆಯಿ ಹೇಳಿ ಕಳುಹಿಸಿದಳು. ಗುಡಿಗಾರ ದೇವಣ್ಣನಿಗೆ ಕರೆ ಹೋಯಿತು. ಮದುಮಕ್ಕಳಿಗೆ ಬಾಸಿಂಗ ತಯಾರಿ, ಚಪ್ಪರ ಸಿಂಗಾರ, ಲಗ್ನ ಮಂಟಪದ ಅಲಂಕಾರ ಅವನದೇ. ದೇವಣ್ಣ ಸ್ವಲ್ಪ ನಿಧಾನಿ. ‘ಲಗ್ನದ ಎಂಟು ದಿನದ ಮೊದಲೇ ನಿನ್ನ ಕೆಲಸ ಮುಗಿಸಬೇಕು’ ತಾಕೀತು ಮಾಡಿದರು ಸುಬ್ಬಪ್ಪಯ್ಯ.
ಕಲಾಯಿ ಹಾಕುವ ಚಂದುವಿಗೆ ಸುಳಿವು ಸಿಕ್ಕಿ ತನ್ನ ಸರಂಜಾಮು ಹೊತ್ತು ಒಂದು ಬೆಳಿಗ್ಗೆ ಅಂಗಳದಲ್ಲಿ ಹಾಜರು. ಕಮಲಿ ಲಗ್ನದ ಸಂದರ್ಭದಲ್ಲಿ ದೊಡ್ಡ ದೊಡ್ಡ ಕೊಳಾಯಿ ತಪ್ಪಲೆಗಳಿಗೆ ಕಲಾಯಿ ಹಾಕಿದ್ದು. ಅವೆಲ್ಲ ಮತ್ತೊಮ್ಮೆ ಕಲಾಯಿಗಾಗಿ ಕೆಳಗಿಳಿದು ಬಂದು ಹಿಂದಿನ ಅಂಗಳದ ಮೂಲೆಗೆ ಕುಳಿತವು. ಚಂದುವಿನ ಉಮೇದು ನೋಡಬೇಕು.
ಎರಡು ದಿನಗಳಲ್ಲಿ ಮುಗಿಯುವ ಕೆಲಸ ನಾಲ್ಕು ದಿನ ಮಾಡಿ ಕೈತುಂಬ ಹಣ, ಹೊಸ ಬಟ್ಟೆ ಪಡೆದು, ಲಗ್ನದ ಊಟಕ್ಕೆ ಬರುತ್ತೇನೆಂದು ಹೊರಟುಹೋದ. ವಾಲಗದವರು ಮುಂಜಿಗೆ, ಲಗ್ನಕ್ಕೆ ಎರಡೂದಿನ ಇರಬೇಕೆಂದು ಅಪ್ಪಯ್ಯನೇ ವೀಳ್ಯಕೊಟ್ಟು ಬಂದ. ಶಾರದೆಯ ಹಾಳತದ ಬಳೆ, ಸರ ಮೊದಲೇ ಮಾಡಿಸಿಯಾಗಿತ್ತು. ಸೀರೆ, ಜವಳಿ ಸಾಮಾನುಗಳ ಉದ್ದದ ಪಟ್ಟಿ ಬರೆದು ಅವನ್ನೂ ತಂದಾಯಿತು. ಗೌರಿ ನಾಣಿಯ ಇಷ್ಟದ ಬಟ್ಟೆಗಳು ಬಂದು ಹೊಲಿಸಿದ್ದೂ ಆಯ್ತು. ಮರೆತು ಹೋದದ್ದು ನೆನಪಿಗೆ ಬಂದಂತೆ ಮಾಡಿದ್ದಾಯ್ತು.

ಶಾರದೆಗೆ ಎರಡು ದಿನಕ್ಕೊಮ್ಮೆ ಪತ್ರ ಬರುತ್ತಿತ್ತು. ಅಂಚೆಯವನು ಅಂಚೆಪೆಟ್ಟಿಗೆಯ ಬೀಗ ತೆಗೆವ ಹೊತ್ತಿಗೆ ನಾಣಿ ಗೌರಿ ಹಾಜರು. ಹುಬ್ಬಳ್ಳಿ ಪತ್ರ ನೋಡಿದರೇ ತಿಳಿಯುತ್ತದೆ ಅದು ಶಾರದೆಗೇ ಬಂದದ್ದು ಎಂದು. ಇಬ್ಬರೂ ರೇಸಿನ ಕುದುರೆಯಂತೆ ಓಡಿಯೇ ತರುತ್ತಾರೆ. ಶಾರದೆ ಅವರ ಕಣ್ತಪ್ಪಿಸಿ ಪತ್ರಕ್ಕೆ ಮುತ್ತು ಕೊಟ್ಟು ಓದುವಾಗ ಗೌರಿ, ನಾಣಿಗೆ ಕುತೂಹಲ. ‘ತಮ್ಮಾ, ಪತ್ರದಲ್ಲಿ ಹುಬ್ಬಳ್ಳಿಮಾವ ಎಂತ ಬರೀತಾ? ಒಂದ್ಸಲ ನಾವೇ ಪತ್ರ ಹರಿದು ಓದ್ವನಾ?’ ಪತ್ರ ಓದಲಿಲ್ಲ. ಆದರೆ ಪ್ರತಿಸಲ ಅದನ್ನು ಅಂಚೆಯವನಿಂದ ತಂದು ಶಾರದತ್ತೆ ಕೈಗೆ ಕೊಡುವಾಗ ಆ ಮುಗ್ಧ ಬಾಲೆಯ ಮನಸ್ಸು, ದೇಹದಲ್ಲಿ ಮೃದು ಕಂಪನ. ಮರವನ್ನು ತಳಿರು ಬಳ್ಳಿ ಅಪ್ಪಿ ಹಿಡಿದಂತೆ. ಲಗ್ನಕ್ಕೆ ನಾಲ್ಕು ದಿನ ಮೊದಲೇ ಸೀತು ದೊಡ್ಡಪ್ಪ, ರಘುದೊಡ್ಡಪ್ಪನ ಸಂಸಾರ ಪೂರಾ ಬಂದದ್ದು ಎಲ್ಲರಿಗೂ ಸಮಾಧಾನ.
ಈ ತಲೆಮಾರಿನ ಕೊನೆಯ ಲಗ್ನ. ಹಳೆ ಸಿಟ್ಟು, ದ್ವೇಷ ಮರೆತು ಅವರೆಲ್ಲ ಒಂದೇ ಮನೆಯಂತೆ ಪ್ರೀತಿಯಲ್ಲಿ ಒಂದಾಗಿದ್ದರು. ಸುಬ್ಬಪ್ಪಯ್ಯ ಕೇಳದಿದ್ದರೂ ತಂಗಿಯ ಮದುವೆಗೆ ಧನ ಸಹಾಯ ಕೊಟ್ಟರು ತಮ್ಮ ಹಳೆ ಋಣಕ್ಕೆ ಸಂದಾಯ ಎನ್ನುವಂತೆ! ಸುಬ್ಬಪ್ಪಯ್ಯ ತೆಗೆದುಕೊಳ್ಳಲಿಲ್ಲ. ತಮ್ಮ ಕೊನೆ ಮಗಳ ಮದುವೆ. ತಾವೇ ಮಾಡಬೇಕಾದ್ದು ಧರ್ಮ ಎಂದರು. ಅಪ್ಪನ ಅಂತಃಕರಣದ ಮುಂದೆ ಚಿಕ್ಕವರಾದರು ರಘು ದೊಡ್ಡಪ್ಪ, ಸೀತೂ ದೊಡ್ಡಪ್ಪ.
ಸುನಂದೆ ಗೌರಿಗಾಗಿ ಮೂರು ನಿರಿಗೆಗಳ ಅಂಗಿ, ಬೂಟು, ಚಪ್ಪಲಿ, ಕೈಗೊಂದು ಹೊಸ ವಾಚು ತಂದಿದ್ದಳು. ನಾಣಿಗೂ ವಾಚು ಉಡುಗೊರೆ ಮಾಡಿದ್ದ ಸೀತೂದೊಡ್ಡಪ್ಪ. ಆಯಿ ಗೌರಿ ಕಿವಿಯಲ್ಲಿ ಪಿಸುಗುಟ್ಟಿದಳು, ‘ಇದೇ ಮನೆಯಲ್ಲಿ ಆವತ್ತು ಪಾತ್ರೆ ಪಗಡಿಗಳು ಬಡಿದಾಡಿ ಸದ್ದು ಮಾಡಿ. ಆಸ್ತಿ ಪಾಸ್ತಿ, ಹಣ, ಚಿನ್ನಕ್ಕೆ ಕಾಲು ಕೆದರಿ ಜಗಳ ತೆಗೆದ ನಿನ್ನ ದೊಡ್ಡಪ್ಪಂದಿರು, ದೊಡ್ಡಮ್ಮರು ಇವರೇನಾ? ಹೇಂಗೆ ಬದಲಾವಣೆ! ಸಂಬಂಧ ಮುರಿಯೂದ ಬ್ಯಾಡಾ ಅಂದ್ಕಂಡ ನಿನ್ನ ಅಪ್ಪಯ್ಯನೇ ಅವರಲ್ಲಿ ಹೋಕ್ ಬರ್ಕ್ ಇಟ್ಕಂಡಿದ್ದರು. ಈಗ ಹೇಗೆ ಬದಲಾಗಿದ್ದಾರೆ! ನಂಬೂದು ಕಷ್ಟ!’
ಹೆಚ್ಚಿನ ನೆಂಟರಿಷ್ಟರು ಬಂದದ್ದು ನಾಣಿಯ ಮುಂಜಿ ದಿನ ಮಧ್ಯಾಹ್ನದ ಹೊತ್ತಿಗೆ. ಚಕ್ರೀಅಮ್ಮಮ್ಮ ಅಜ್ಜಯ್ಯ ಉಳಿದವರೆಲ್ಲ ಮುಂಜಿ ಹಿಂದಿನ ದಿನ ದೊಡ್ಡ ದೋಣಿಯಲ್ಲಿ ಬಂದಿಳಿದರು. ಅಮ್ಮನನ್ನು ಕಂಡದ್ದೆ ಗೌರಿ ನಾಣಿಗೆ ರೆಕ್ಕೆ ಬಂದಂತೆ. ಆ ವೇಳೆಗೆ ಗುಡಿಗಾರು ದೇವಣ್ಣ ಲಗ್ನಮಂಟಪದ ಕೊನೆ ತಯಾರಿಯಲ್ಲಿದ್ದ. ‘ಅಮ್ಮಮ್ಮ, ಮಂಟಪಕ್ಕೆ ಕಾಗದದ ಹೂ ಅಂಟಿಸಿದ್ದು ನಾನು’ ನಾಣಿ ಹೇಳುವಾಗ, ‘ಎಲ್ಲೋ ನಾಲ್ಕು ಹೂ ಅಂಟಿಸಿದ್ದ. ಅವು ಕಿತ್ತು ದೇವಣ್ಣ ಬೇರೆ ಅಂಟಿಸಿದ್ದು ಇವಂಗೆ ತಿಳಿಲೇ ಇಲ್ಲೆ.’
ಗೌರಿ ಅಮ್ಮಮ್ಮನಿಗೆ ದೂರು ಕೊಟ್ಟಳು. ರಾಶಿ ಹಪ್ಪಳ ಸಂಡಿಗೆ ಮಾಡುವಾಗ ಎಲ್ಲರೂ ಅಮ್ಮಮ್ಮನನ್ನು ನೆನಪಿಸಿದ್ದು, ದೀಪಗಳನ್ನು ಉರಿಸಿ ಇಡಲು ಅಕ್ಕಿಹಿಟ್ಟಿನಿಂದ ತರೆವಾರು ಮುಕುಟಗಳನ್ನು ತಾನೇ ಮಾಡಿದ್ದು, ಹಸೆ ಹಾಡು, ಆರತಿ ಹಾಡು, ಬಾಗಿಲು ತಡೆವ ಹಾಡು ಒಂದೆರಡಲ್ಲ ಆಯಿ ಜೊತೆ ಕಲಿತದ್ದು ಹೇಳಿ ಜಂಭ ಪಟ್ಟಳು. ಮುಂಜಿಯಲ್ಲಿ ನಾಣಿ ಹೊಸ ಬಟ್ಟೆ ಉಡುವುದಕ್ಕೆ ಅಭ್ಯಾಸ ಮಾಡುವಾಗ ಅದು ಜಾರಿ ಥ್ಸೂ ನಾಚಿಕೆ, ನಕ್ಕಳು. ಹಾಗೆ ನಗುವಾಗ ಶಾರದತ್ತೆ ಕೈಗೆ ಹುಬ್ಬಳ್ಳಿಯವ ಮುತ್ತು ಕೊಟ್ಟದ್ದು ಅಮ್ಮಮ್ಮನ ಬಳಿ ಚಾಡಿ ಹೇಳಿ, ಅವಳಿಗೂ ನಗು ಬಂದು, ‘ನೀ ದೊಡ್ಡ ಆಗು! ಎಲ್ಲ ಗುಟ್ಟು ತೆಳಿಗು’ ಎಂದಳು ಪ್ರೀತಿಯಲ್ಲಿ. ಹುಡುಗ ಬುದ್ಧಿ, ಸಣ್ಣ ಸಣ್ಣ ಸಂಗತಿಯೂ ಏನು ಸಂಭ್ರಮ!

ಲಗ್ನಕ್ಕೆ ಬಾರದವಳು ಸುಶೀಲ ಚಿಕ್ಕಿ ಒಬ್ಬಳೇ. ನಾಲ್ಕಾರು ದಿನ ರಜೆ ತೆಗೆಯಲು ಕಷ್ಟ, ಹುಬ್ಬಳ್ಳಿಗೆ ಗೃಹಪ್ರವೇಶಕ್ಕೆ ಬರುತ್ತೇನೆಂದು ಪತ್ರ ಬಂದಿತ್ತು. ಅದೇ ಪತ್ರದಲ್ಲಿ ಹೊಸ ಸುದ್ದಿಯಿತ್ತು. ಅದು ಗೌರಿಯ ಕಲಿಕೆಯ ಬಗ್ಗೆ. ಸುಶೀಲಚಿಕ್ಕಿ ಸಿರ್ಸಿ ಸರಕಾರಿ ಶಾಲೆಯಲ್ಲಿ ವಿಚಾರಿಸಿದ್ದಾಳೆ. ಒಂದು ಸಾಮಾನ್ಯ ಪರೀಕ್ಷೆ ಕಟ್ಟಿ ಪಾಸಾದರೆ ಅರ್ಹತೆ ಆಧಾರದಲ್ಲಿ ಗೌರಿಗೆ ಆರನೇ ಕ್ಲಾಸಿಗೆ ಸೇರಬಹುದಂತೆ. ಎರಡು ವರ್ಷ ತಾನು ಈ ಮನೆ ಉಪ್ಪು ತಿಂದವಳು. ಮೊದಲು ಆರನೇ ಕ್ಲಾಸಿಗೆ ಸೇರಿ ಮೆಟ್ರಿಕ್ ಮುಗಿಸಲಿ. ಆಮೇಲೆ ಮುಂದಿನ ಯೋಚನೆ. ಅದಕ್ಕೆ ಬೇಕಾದ ನಿಯಮಗಳ ಅರ್ಜಿ ಕಾಗದ ರಘು ದೊಡ್ಡಪ್ಪನ ಕೈಲಿ ಕಳಿಸಿದ್ದಾಳೆ.
‘ಗೌರಿ, ಅವಕಾಶ ಬಂದಾಗ ಬಿಡೂಕಾಗ. ಕಳೆದ ಕಾಲ ಮತ್ತೆ ಬೇಕೂ ಅಂದ್ರೂ ಬತ್ತಿಲ್ಲೆ. ಆಯಿ ಅಪ್ಪಯ್ಯನನ್ನು ನಾ ಒಪ್ಪಿಸ್ತೆ’ ಹುರಿದುಂಬಿಸಿದ್ದಳು ತನ್ನ ಪತ್ರದಲ್ಲಿ. ‘ಹುಬ್ಬಳ್ಳಿಗೆ ದಿಬ್ಬಣ ಹೊರಡುವಾಗ ನಿನ್ನ ಬಟ್ಟೆಬರೆ, ಬೇಕಾದ ಸಾಮಾನು ಕಟ್ಟಿ ಬೇರೆ ಚೀಲದಲ್ಲಿ ತಕ್ಕೊಂಡು ಬಾ. ನಾವು ಅಲ್ಲಿಂದಲೇ ಸಿರ್ಸಿಗೆ. ಶಾಲೆ ಬ್ಯಾಡ, ಬೇಜಾರು ಅಂದ್ರೆ ನಾನೇ ಹೊಳೆಬಾಗಿಲಿಗೆ ಹೊತ್ತು ಹಾಕ್ತೆ. ಮದಿ ಮಾಡ್ಕಂಡು ಮಕ್ಕಳು ಮರಿ ಹೆತ್ತು, ಅಲ್ಲವೇ ಇರು. ನಂಗೆಂತ ಲಾಭ ಇಲ್ಲೆ. ನೆನಪಿಟ್ಕಾ, ಕಳೆದ ಕಾಲ ಮತ್ತೆ ಬತ್ತಿಲ್ಲೆ. ನೀನು ಓದಿ ಎಂತಾದರೂ ಸಾಧನೆ ಮಾಡೆಕ್ಕು’ ಉತ್ಸಾಹ ತುಂಬುವ ಬರಹ. ಗೌರಿಗೂ ಸರಿ ಎನಿಸಿದೆ. ಸುನಂದೆಯನ್ನು ಕಂಡ ನಂತರ ಅವಳ ಮನಸ್ಸು ವಾಲಿದೆ. ತಾನೂ ಅವಳಂತೆ ಆಗಬೇಕು. ಗೌರಿ ಆಯಿಗೆ ಸುಶೀಲ ಚಿಕ್ಕಿ ಪತ್ರ ತೋರಿಸಿ, ‘ನಾ ಹೋಗಲಾ ಸಿರ್ಸಿಗೆ?’ ಕೇಳಿದಳು.
ಲಗ್ನದ ತಯಾರಿಯಲ್ಲಿ ಆಯಿಗೆ ತಲೆ ಬಾಚಲು ಸಮಯವಿಲ್ಲ. ಮಾತು ಹಾರಿಸಿಬಿಟ್ಟಳು. ಚಕ್ರಿ ಅಮ್ಮಮ್ಮನಿಗೆ ವಿಷಯ ತಿಳಿದು, ‘ನಿನ್ನ ಆಯಿಯನ್ನು ನಾ ಒಪ್ಪಿಸ್ತೆ. ಸುಶೀಲಚಿಕ್ಕಿ ಸಂಗಡ ಹೋಗು. ಅವಳಿದ್ದ ಜಾಗ ಗಾಂಧೀಜಿಯ ಸೇವಾಶ್ರಮ. ಹೆಣ್ಣುಮಕ್ಕೊಗೆ ಲಾಯಕ್ಕಾದ ತರಬೇತಿ ಸಿಕ್ತು. ಹೊಸನೀರು ಕುಡ್ದ ನೋಡು!’
ವ್ಯವಹಾರಸ್ಥೆ ಚಕ್ರಿ ಅಮ್ಮಮ್ಮ ಸರಿಯಾಗೇ ಹೇಳಿದ್ದು. ಗೌರಿ ಆ ಕ್ಷಣವೇ ತನ್ನ ಹಳೆ ಹೊಸ ಬಟ್ಟೆಗಳನ್ನು, ಪಿಳಿಪಿಳಿ ಗೊಂಬೆಯಿದ್ದ ಪೆಟ್ಟಿಗೆಯನ್ನು ಜೋಡಿಸಿಟ್ಟಳು. ಅಟ್ಟದಲ್ಲಿ ತಾನೇ ಬಿಡಿಸಿಟ್ಟ ಚಿತ್ರಗಳನ್ನೂ ತೆಗೆದು ಚೀಲಕ್ಕೆ ತುರುಕಿದಳು. ಇಷ್ಟು ತಯಾರಿ ಸಾಕು. ಆ ಉತ್ಸಾಹದಲ್ಲಿ ಆಯಿ ಬೇಡವೇ ಅಂದ್ರೆ? ನಾಣಿ ಹಠ ಮಾಡಿದರೆ? ತಲೆ ಕೆದರಿತು.
ಬಹಳ ಗೌಜಿನಲ್ಲಿ ನಡೆಯಿತು ನಾಣಿಯ ಮುಂಜಿ, ಶಾರದತ್ತೆಯ ಲಗ್ನ. ಆ ನಿಮಿತ್ತ ನಾಲ್ಕು ದಿನಗಳ ಗೌಜಿನ ಕಾರ್ಯಕಲಾಪ. ವಾರದ ನಂತರ ಹುಬ್ಬಳ್ಳಿಯಲ್ಲಿ ಗೃಹಪ್ರವೇಶ. ನೂಲುಸರ ಕೊಟ್ಟರೂ ಸಾಕು ಎಂದಿದ್ದರು ವಿನಾಯಕ ಶರ್ಮರು. ಅಜ್ಜಮ್ಮ ಮಗಳಿಗೆ ಎರಡೆಳೆ ಸರ, ಕೈಗೆ ನಾಲ್ಕು ಬಳೆ, ತೋಳುಬಂದಿ, ಉಂಗುರ ಹಾಕಿದ್ದಳು. ಅಳಿಯನಿಗೆ ಎರಡೆಳೆ ಚೈನು, ಪಂಚಹರಳಿನ ಉಂಗುರ. ಬಳುವಳಿಯಾಗಿ ಎಲ್ಲವೂ ಬೆಳ್ಳಿಸಾಮಾನುಗಳೇ. ‘ನಿಮ್ಮ ಸರಳತನಕ್ಕೆ ನಾವು ಕೊಟ್ಟದ್ದು ಕಡಿಮೆಯೇ’ ವಿನೀತನಾಗಿದ್ದರು ಸುಬ್ಬಪ್ಪಯ್ಯ. ವಿನಾಯಕ ಶರ್ಮರು ಸೊಸೆಗೆ ಕೊಟ್ಟದ್ದು ಕನಿಷ್ಟ ಹತ್ತು ತೊಲ ತೂಕದ ಆಭರಣಗಳನ್ನು. ಆಯಿ, ಅಜ್ಜಮ್ಮ ಮನದಲ್ಲೇ ಗುಣುಗಿದರು ‘ನಮ್ಮಮ್ಮ ಶಾರದೆ! ಉಮಾಮಹೇಶ್ವರಿ!’ ಮದುವೆ ಸಂಭ್ರಮದ ಉಳಿದ ಕಲಾಪಗಳು ಚೆನ್ನಾಗಿ ನಡೆದು ಭೋಜನವೂ ಕುಂದು ಕೊರತೆಯಿಲ್ಲದೆ ನೆರವೇರಿತು.
ಮದುಮಗ ಒಬ್ಬನನ್ನು ಇಲ್ಲಿ ಬಿಟ್ಟು ಉಳಿದ ದಿಬ್ಬಣದವರು, ಮದುವೆಗೆ ಬಂದ ಹೆಚ್ಚಿನ ಬಂಧು ಬಳಗ ಸಂತೃಪ್ತರಾಗಿ ಎರಡನೇ ದಿನ ಬೆಳಿಗ್ಗೆ ‘ಇನ್ನು ನಾವೆಲ್ಲರೂ ಹೊಳೆಬಾಗಿಲಿಗೆ ಗೌರಿ ಮದುವೆಗೆ ಸೇರೋಣ, ಬೇಗ ಆ ಪಾಯಸದ ಊಟ ಹಾಕ್ಸಿ’ ಎಂದು ಹೊರಟು ಹೋದರು. ಆದರೂ ನಾಲ್ಕು ದಿನದ ಲಗ್ನದ ಉಳಿದ ಕಾರ್ಯಗಳು ಲೋಪವಿಲ್ಲದೆ ಆಗಬೇಕು. ಇನ್ನುಳಿದ ಗೌಜು, ಕೆಲಸ ಕಾರ್ಯದ ಹೊರೆ, ಹುಬ್ಬಳ್ಳಿ ಗೃಹಪ್ರವೇಶಕ್ಕೆ ಹೊರಡುವ ತಯಾರಿ, ಎಲ್ಲರೂ ಹೋದರೆ ಮನೆ ಪಾರಕ್ಕೆ ವ್ಯವಸ್ಥೆ ಆಗಬೇಕು, ಗುಡಿಗಾರ ದೇವಣ್ಣ ಮನೆ ಪಾರಕ್ಕೆ ಬರುವೆ, ದನ ಕರುಗಳನ್ನು ನೋಡಿಕೊಳ್ಳುವೆ ಎಂದಿದ್ದ. ಹೀಗೆಲ್ಲ ಆಯಿ ಅಪ್ಪಯ್ಯನಿಗೆ ಮಾತಿಗೆ ಪುರುಸೊತ್ತಿಲ್ಲ.
ಸ್ವಲ್ಪ ಬಿಡುವಾದಾಗ ಸುಶೀಲಚಿಕ್ಕಿ ಬರೆದ ಪತ್ರದ ವಿಷಯ ನೆನಪಾಯಿತು. ಗೌರಿ ತೋರಿಸಿದ ಆ ಪತ್ರದಲ್ಲಿ, ‘ನಾ ಬೇಡದ್ದು ಹೇಳ್ತಿಲ್ಲೆ ಅಣ್ಣಯ್ಯ, ಈಗೆಲ್ಲ ಭಾಳ ಹೆಮ್ಮಕ್ಕೋಗೆ ಕಲಿವದೇ ಒಂದು ಗಿರ. ಅವಳು ಕಲಿಯಲಿ. ಅವಳು ಬರೆದ ನಾಯಿಮರಿ ಹಾಡನ್ನು ನಮ್ಮ ಹುಡುಗೀರು ದಿನಾ ಹಾಡುತ್ತಾವೆ. ಕುಣಿತಾವೆ. ಅವಳು ಕಳಿಸಿದ ಚಿತ್ರ ನೋಡಿ ಚಿತ್ರ ಗೀಚ್ತಾವೆ. ಸೈ, ಅಂತಾ ಪ್ರತಿಭೆ ಧೂಳು ಹಿಡಕಟೆ ಆಗೂಕಾಗ.’ ಎಂದು ಬರೆದದ್ದು ಆಯಿ ಅಪ್ಪಯ್ಯ ಯೋಚಿಸುವಂತೆ ಆದದ್ದು ನಿಜ..

ಸುಶೀಲ ಚಿಕ್ಕಿ ಪ್ರತಿ ಹೆಜ್ಜೆ ನೋಡಿ ಇಡುವವಳು. ಅವಳು ಪಟ್ಟು ಹಿಡಿದರೆ ಉಡದಂತೆ. ಸುಮ್ಮನೆ ಬಿಡುವವಳಲ್ಲ. ಅವಳೇ ಗೌರಿಗೆ ಓದಿನ ರುಚಿ ಹತ್ತಿಸಿದವಳು? ಶಾಲೆಗೆ ಹೋಗುವ ಕಲ್ಪನೆ ಚಿಗುರಿಸಿದ್ದು? ಅಜ್ಜಯ್ಯನ ಕೆಲವು ಹಳೆ ಪುಸ್ತಕಗಳು ಅಟ್ಟದಲ್ಲಿವೆ ಧೂಳು ತಿನ್ನುತ್ತ. ಅದರಿಂದ ‘ಇಗ್ಗುತಪ್ಪನ ವಿವಾಹ ಪ್ರಸಂಗ’ ಓದಿ ಖುಶಿ ಪಟ್ಟ ಗೌರಿ ಶರಶ್ಚಂದ್ರರ ‘ವಿನೋದಿನಿ’ ಓದಿ ಕಣ್ಣೀರು ಹಾಕಿದ್ದಳಲ್ಲ. ಆ ಕಥೆ ಆಯಿಗೂ ಹೇಳಿದ್ದಳು. ಅವರ ಬೇರೆ ಕಥೆಗಾಗಿ ಅಪ್ಪಯ್ಯನನ್ನು ದಂಬಾಲು ಬಿದ್ದಿದ್ದು ಸುಳ್ಳಲ್ಲ. ‘ಓದು ಅವಳ ತಲೆ ಕೆಡಸ್ತು’ ಅಜ್ಜಮ್ಮ ಎಷ್ಟು ಬಾರಿಹೇಳಿದ್ದಾಳೋ. ಆಯ್ತು, ಸುಶೀಲ ಹೇಳಿದಂತೆ ಅವಳನ್ನು ಕಳುಹಿಸಿದರೆ ನಾಣಿ ಚಂಡಿ ಹಿಡಿಯುತ್ತಾನೆ. ಅವನನ್ನು ಬಿಟ್ಟು ಇದೂ ಒಬ್ಬಳೇ ಇರ್ತದಾ? ಸಂಶಯವೇ.
ಒಂದೇ ಹೊಕ್ಕಳು ಬಳ್ಳಿಗಳು ಅವು. ಸಧ್ಯ ನಾಲ್ಕು ದಿನಕ್ಕೆ ಸಿರ್ಸಿಯಲ್ಲಿ ಇದ್ದು ಬರಲಿ. ಆಯಿ ಅಪ್ಪಯ್ಯ ಈ ತೀರ್ಮಾನಕ್ಕೆ ಬಂದಮೇಲೆ ಹೊರಡುವ ತಯಾರಿ ಮೊದಲೇ ಮಾಡಿಟ್ಟು ಅರೆ ಬರೆ ಮನದಲ್ಲಿದ್ದ ಗೌರಿಯ ಕಲ್ಪನೆಗೆ ಮೂಡಿದವು ನೂರಾರು ಗರಿಗಳು. ನಾಣಿಗೂ ತಿಳಿಯಿತು ಅಕ್ಕ ಸಿರ್ಸಿಗೆ ಹೋಗುವ ಸಂಗತಿ. ಕೂಡಲೆ ತನ್ನ ಭೂಪಟ ಬಿಡಿಸಿ ಅದರಲ್ಲಿ ಸಿರ್ಸಿ ಎಲ್ಲಿದೆ, ಹುಬ್ಬಳ್ಳಿ ಎಲ್ಲಿದೆ ನೋಡಿದ. ಆ ಊರುಗಳ ಹೆಸರಿನ ಮುಂದೆ ಕೆಂಪು ಗುರುತು! ದೊಡ್ಡ ಊರುಗಳೆಂದು ತಿಳಿವ ಗುರುತು.
ಹೊಳೆಬಾಗಿಲಿನಿಂದ ಎಷ್ಟೋ ದೂರ. ಅಕ್ಕನ ಜೊತೆ ತಾನೂ ಹೋಗಬೇಕು, ಶಾಲೆಗೆ ಸೇರಬೇಕು. ಚಿಕ್ಕಿ ಗುಣ ತನಗೆ ಗೊತ್ತು, ಹೂಂ ಅಂದಾಳು. ಆದರೆ ಅಪ್ಪಯ್ಯ, ಆಯಿ, ಅಜ್ಜಯ್ಯ ಊಹೂಂ. ‘ಚಕ್ರಿ ಅಮ್ಮಮ್ಮನ ಮನೆಯಿಂದ ಶಾಲೆ ಬಿಟ್ಟು ನೀ ಒಬ್ನೇ ಓಡಿ ಬಂದದ್ದು ಸಾಕು. ಇವಳೂ ಸಿರ್ಸಿ ಶಾಲೆಗೆ ಕಲ್ಲು ಹೊತ್ತಾಕಿ ಬರ್ಲಿ. ಸುಮ್ನೆ ಕೂತ್ಕೋ’ ಆದರೆ ಅಕ್ಕನಿಲ್ಲದೆ ನಾ ಹ್ಯಾಗೆ ಇಲ್ಲಿರಲಿ? ಗಂಟಲು ಕಟ್ಟಿ ಕಣ್ಣಿಂದ ದೊಡ್ಡ ಹನಿ ಬೀಳುತ್ತ, ಪಾಪ, ಗೌರಿ ತಬ್ಬಿದಳು ನಾಣಿಯನ್ನು, ‘ಚಿಕ್ಕಿಗೆ ಬೇಜಾರು ಆಗದಾಂಗೆ ನಾಲ್ಕು ದಿನಕ್ಕೆ ಹೋಗಿ ಬತ್ತೆ ಪುಟ್ಟಾ. ನೀ ಇಲ್ಲದಿದ್ದರೆ ನಾಎಲ್ಲಿ ಅಲ್ಲಿರ್ತೆ? ಶಾಲೆಗೆ ಹೋಗ್ತಿಲ್ಲೆ. ಅಳ್ಬೇಡವೋ, ನೀ ಅತ್ತರೆ ನಂಗೂ ಅಳು ಬತ್ತು’
| ಇನ್ನು ನಾಳೆಗೆ |
0 Comments