
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
24
ಹೊಳೆಬಾಗಿಲು ಮನೆಯಿಂದ ಹಾದಿಯಲ್ಲಿ ಎರಡು ಫರ್ಲಾಗ್ ನಡೆದು ಬಲಕ್ಕೆ ತಿರುಗಿದರೆ ಗುಡಿಗಾರು ದೇವಣ್ಣನ ಮನೆ. ಸುಮಾರು ಅರವತ್ತರ ವಯಸ್ಸಿನ ದೇವಣ್ಣ ಎತ್ತರದ ಆಳು, ಹೆಂಡತಿ ಮಕ್ಕಳು ಮೊಮ್ಮಕ್ಕಳಿರುವ ಸುಖಿ ಸಂಸಾರ. ಅವನ ಹಿರಿಯರು ಹಸೆ ಮಣೆ ಏರಲಿರುವ ಹೊಸ ಮದುಮಕ್ಕಳಿಗೆ ಬೇಕಾದ ಬಾಸಿಂಗ ತಯಾರಿಕೆಯಲ್ಲಿ ನಿಷ್ಣಾತರು. ದೇವಣ್ಣನಿಗೂ ಈ ವೃತ್ತಿ ಹಿರಿಯರಿಂದ ಬಂದದ್ದು. ಬೆಂಡು, ಹೊಳೆಯುವ ಬಣ್ಣದ ಕಾಗದ, ಬಣ್ಣದ ಮಣಿಗಳು, ಮುತ್ತುಗಳು, ಟಿಕಳಿಗಳಿಂದ ಜನರ ಬೇಡಿಕೆ ತಕ್ಕಂತೆ ಯಾವ ನಮೂನೆ, ಎಷ್ಟು ಕ್ರಯದ್ದು? ತಯಾರಿಸುತ್ತಾನೆ.
ಈ ಊರಿನಲ್ಲಿ ಮಾತ್ರವಲ್ಲ ಪರ ಊರಿನಿಂದಲೂ ಬೇಡಿಕೆ ಇದೆ. ದೇವಣ್ಣನ ಬಾಸಿಂಗ ಕಟ್ಟದೆ ಯಾರ ಮದುವೆಯೂ ಆಗಲಾರದು! ಚಕ್ರಿ ಅಮ್ಮಮ್ಮನೂ ತನ್ನ ಇಬ್ಬರು ಮಕ್ಕಳ ಮದುವೆಗೆ ತರಿಸಿದ್ದು ಇಲ್ಲಿಯದೇ ಬಾಸಿಂಗಗಳು. ವಧೂ ವರರಿಗೆ ಕಟ್ಟಿದ ಬಾಸಿಂಗವನ್ನು ಕಸಕ್ಕೆ ಎಸೆಯದೆ ವರನ ಮನೆಯಲ್ಲಿ ಕಂಭಕ್ಕೆ ಕಟ್ಟಿ ಇಡುವುದು ಪದ್ಧತಿ.
ಹೊಳೆಬಾಗಿಲು ಮನೆಯ ಅಟ್ಟದ ಒಂದು ಭಾಗದಲ್ಲಿ ಸುಬ್ಬಪ್ಪಯ್ಯ ದಂಪತಿಗಳ, ಅದಕ್ಕೂ ಹಿಂದಿನವರ ಹಳೆ ಬಾಸಿಂಗಗಳು ಅಲ್ಲದೆ ಈಗಿನ ಆಯಿ, ಅಪ್ಪಯ್ಯ, ದೊಡ್ಡಪ್ಪ ದಂಪತಿಗಳ ಹೊಸ ಬಾಸಿಂಗಗಳಿವೆ. ಚಕ್ರೀ ಅಮ್ಮಮ್ಮನ ಅಟ್ಟದಲ್ಲೂ ನಾಲ್ಕಾರು ಕಂಭಗಳಲ್ಲಿ ಹಲವಾರು ಮದುಮಕ್ಕಳ ಬಾಸಿಂಗಗಳು. ಬಲೆ, ಕಸ ಮಸಿ ಹಿಡಿದರೂ ಇವೆಲ್ಲ ವೃದ್ಧಾಪ್ಯದಲ್ಲಿ ಜೀವನದ ಮಧುರ ಸೃತಿ ಆನಂದಿಸುವ ಹಿರಿಯ ಜೋಡಿಗಳಿಗೆ ತಮ್ಮ ಮದುವೆ ನೆನಪಿಸುವ ಸಾಕ್ಷಿಗಳು!

ಗುಡಿಗಾರ ದೇವಣ್ಣ ಯಕ್ಷಗಾನದ ಮುಖವರ್ಣಿಕೆ, ಕಿರೀಟ, ವೇಷಭೂಷಣ, ಆಭರಣ ತಯಾರಿಕೆಗೂ ಪಳಗಿದ ಹಸ್ತ. ನಾಣಿ ಗೌರಿಗೆ ಅವನ ಮನೆಯೆಂದರೆ ಯಕ್ಷಲೋಕ. ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಅವನ ಹೊರಕೋಣೆ ತುಂಬಾ ತಯಾರಿಕೆಯ ವಸ್ತುಗಳ ರಾಶಿ ರಾಶಿ. ಅವನ್ನು ತೆಗೆ ತೆಗೆದು ನೋಡುತ್ತಿದ್ದರು. ತಲೆಗಿಟ್ಟು ಮುಖಕ್ಕಿಟ್ಟು, ಮೈಗೆ ಇಟ್ಟು ಸಂಭ್ರಮಿಸುತ್ತಿದ್ದರು. ಮೈದಾ ಹಿಟ್ಟು ಬೇಯಿಸಿ ಮಾಡಿದ ಅಂಟಿನಲ್ಲಿ ಬಾಸಿಂಗಕ್ಕೆ ಟಿಕಳಿ ಜೋಡಿಸುವಾಗ ಗೌರಿ ತಾನೂ ಸಹಾಯ ಮಾಡುವ ನೆಪದಲ್ಲಿ ಅವನ ಕೆಲಸ ಕೆಡಿಸಿದ್ದೂ ಉಂಟು. ನಾಣಿ ಬಣ್ಣದ ಕಾಗದ, ಮಣಿಸರ, ಮುತ್ತಿನ ಮಾಲೆ ತೆಗೆಯುತ್ತಿದ್ದ. ಜೋಡಿಸಿ ಇಟ್ಟ ವಸ್ತುವಿನ ಹದಗೆಡಿಸಲು ಅವನು ಹುಷಾರು. ದೊಡ್ಡಮನೆಯ ಮಕ್ಕಳು! ದೇವಣ್ಣ ಸಹಿಸುತ್ತಿದ್ದ ಅವರ ಉಪಟಳ.
ಒಮ್ಮೆ ನಾಣಿ ಅವನಿಗೆ ತಿಳಿಯದಂತೆ ಒಂದು ಮುಷ್ಟಿ ಮುತ್ತು ಕಿಸೆಗೆ ಸೇರಿಸಿ ತಂದಿದ್ದ. ಅಕ್ಕ ಸರ ಮಾಡಿ ಕುತ್ತಿಗೆಗೆ ಹಾಕಿಕೊಂಡರೆ ಚೆಂದ ಕಾಣ್ತಾಳೆ. ಅವನ ಮುತ್ತಿನ ರಾಶಿಯಲ್ಲಿ ಒಂದು ಮುಷ್ಟಿ ಏನು ಮಹಾ? ಅವು ಒಳ್ಳೆ ಮುತ್ತಲ್ಲ, ಸಂತೆಯಲ್ಲಿ ಸಿಗುವ ನಾಲ್ಕು ದಿನ ಬಾಳುವ ಸಾಧಾರಣ ಮುತ್ತುಗಳು. ಸಾಧಾರಣವಿರಲಿ, ಊಂಚಿಯೇ ಆಗಿರಲಿ ಹೇಳದೆ ತೆಗೆಯುವುದು ಅಪರಾಧ.
ಆ ದಿನ ಆಯಿ ಬಾಳೆರೆಂಭೆಯಿಂದ ನಾಣಿಗೆ ಹೊಡೆದು, ‘ಗೌರಿ, ಇವನ್ನು ಈಗಲೇದೇವಣ್ಣನಿಗೆ ಕೊಟ್ಟು ತಪ್ಪಾಯ್ತು ಹೇಳಿ ಬನ್ನಿ. ಯಾರ ವಸ್ತು ತೆಗೀವದೂ, ಕದಿವದು ಪಾಪ ಅಂತ ಗೊತ್ತಿಲ್ಲೆಯಾ?’ ಎಂದಿದ್ದಳು. ಸಿಟ್ಟಿನಲ್ಲಿ ಆದರೆ ಇಬ್ಬರೂ ದೇವಣ್ಣನೆದುರು ತಾವು ಕಳ್ಳರಾಗದಂತೆ ಮುತ್ತುಗಳನ್ನು ಹೊಳೆಗೆ ಬಿಸಾಕಿ ಬಂದದ್ದು ಈಗಲೂ ಆಯಿಗೆ ತಿಳಿದಿಲ್ಲ. ಇನ್ನೊಮ್ಮೆ ಅಕ್ಕನ ಉಗುರಿಗೆ ಬಣ್ಣ ಹಚ್ಚುವ ಸಣ್ಣ ಬಾಟ್ಲಿ ದೇವಣ್ಣನ ಪೆಟ್ಟಿಗೆಯಿಂದ ಎಗರಿಸಿದ್ದ. ಆದರೆ ಅದನ್ನು ಹಚ್ಚಿಕೊಳ್ಳುವುದು ಹೇಗೆ? ಆಯಿ ಕೇಳಿದರೆ ಉತ್ತರ? ‘ಈಗ ಎಂತ ಮಾಡೆಕ್ಕು ಅಕ್ಕ?’ ಕೇಳಿದ್ದ.
‘ನಿಂಗ್ಯಾಕೆ ಕದಿವ ಬುದ್ಧಿ ಬಂತು ನಾಣಿ? ನಮಗೇನು ಕಮ್ಮಿ ಆಗಿದೆ ಕದಿವಲೆ? ಹೋಗು, ಇದನ್ನೂ ಹೊಳೆಗೆ ಬಿಸಾಕು. ಹೊಳೆ ಏನು ಕೊಟ್ಟರೂ ಸ್ವಾಹಾ ಮಾಡ್ತು.’ ಹೇಳಿದ ಗೌರಿ ತನ್ನ ತಲೆ ಮೇಲೆ ಅವನ ಕೈಯ್ಯಿರಿಸಿ, ‘ಇನ್ಮೇಲೆ ಯಾರ ವಸ್ತು ಕದೀತಿಲ್ಲೆ ಹೇಳಿ ಪ್ರಮಾಣ ಮಾಡು.’
‘ತಪ್ಪಾತು ಅಕ್ಕ, ಭಾಷೆ ಕೊಡ್ತೆ. ಅಪ್ಪಯ್ಯ, ಆಯಿ, ನಿನ್ನ ಮೇಲೆ ಆಣೆ, ಆಣೆ, ಆಣೆ. ನಾ ಕದೀತಿಲ್ಲೆ’

ದೇವಣ್ಣ ತನ್ನ ಕೆಲಸದಲ್ಲಿ ಇವರನ್ನು ಗಮನಿಸಿರಲಾರ. ಆದರೂ ದೇವಸ್ಥಾನದಲ್ಲಿ ತನ್ನ ಪ್ರವಚನದ ಮಧ್ಯೆ ಪರರ ಸೊತ್ತು ಅಪಹರಿಸುವ ವಿಷಯ ಹೇಳುತ್ತ ತಮ್ಮಿಬ್ಬರ ಮುಖ ನೋಡುವುದು ಯಾಕೋ. ಮುಗ್ಧ ಗೌರಿ ಜೀವಕ್ಕೂ ಪುಕು ಪುಕು. ಅವಳಿಗೊಂದು ಅನುಮಾನ. ಅಕ್ಕನಿಗೆ ಎಂದು ನಾಣಿ ಉಸುರುವ ಮಾತಿನಲ್ಲಿ ಅವನ ನವಿಲುಗರಿ ಪೆಟ್ಟಿಗೆಯಲ್ಲಿ ನಿಗೂಡ ವಸ್ತುಗಳು ಎಷ್ಟಿವೆಯೋ? ತಾನು ಇನ್ನೂ ನೋಡಿಲ್ಲ. ಅದೇ ದಿನ ಅವನಿಗೆ ತಿಳಿಯದಂತೆ ನವಿಲುಗರಿ ಪೆಟ್ಟಿಗೆ ತೆರೆದಳು. ಅದರಲ್ಲಿ ಗಿಡಿದು ತುಂಬಿದ ಅವನ ಅಮೂಲ್ಯ ವಸ್ತುಗಳನ್ನು ಹೊರಗೆಳೆದಾಗ ಸಿಕ್ಕಿದ್ದು ಬಾಲಕೃಷ್ಣನ ಸಣ್ಣ ಕಂಚಿನ ಮೂರ್ತಿ, ನವಿಲುಗರಿ, ಕೊಕ್ಕರೆಯ ಪುಕ್ಕಗಳು, ಹಸಿರು ಬಣ್ಣದ ಉದ್ದ ಬಾಲದಂತಿದ್ದ ಹಕ್ಕಿಯ ಗರಿಗಳು, ನಾಯಿಮರಿ ಗೊಂಬೆ, ಗಿರಿಗಿಟ್ಟಿ, ಬುಗರಿ, ಎರಡು ಖಾಲಿ ಸಿಗರೇಟು ಪ್ಯಾಕೆಟ್, (ರಘು ದೊಡ್ಡಪ್ಪ ಸೇದಿ ಬಿಸಾಡಿದ್ದು) ಹಳೆ ವಾಚು, ಇನ್ನೂ ಏನೇನೋ ಕಾಟಂಗೋಟಿ ನಿರುಪಯುಕ್ತ ವಸ್ತುಗಳೇ. ಅದೋ, ಒಂದು ಬಣ್ಣಗೆಟ್ಟ ತಗಡಿನ ಚಕ್ರಗಳು ಕಳಚಿದ ಮುರಿದ ಟಿನ್ನಿನ ಸಣ್ಣ ಮೋಟಾರ್ ಗಾಡಿ. ನೋಡಿದ್ದೆ ನೆನಪಾಯಿತು, ತನಗೆ ಕೆಲವು ವರ್ಷಗಳ ಹಿಂದೆ ಅಪ್ಪಯ್ಯ ಪಿಳಿ ಪಿಳಿ ಬೊಂಬೆ ತರುವಾಗ ನಾಣಿಗೆ ತಂದಿದ್ದ ಮೋಟಾರ್‌ಗಾಡಿ.
ಆ ದಿಗಳಲ್ಲಿ ಅವನಿಗೆ ಮೋಟಾರ್ ಗಾಡಿಯದೇ ಹುಚ್ಚು. ಕೀಲಿ ಕೊಟ್ಟಾಕ್ಷಣ ಸಪಾಟು ನೆಲದಲ್ಲಿ ಭರ್ ಓಡುತ್ತಿದ್ದರೆ ಅವನು ಕೇಕೆ ಹಾಕುತ್ತಿದ್ದ. ರೈಟೋ ರೈಟ್ ಹೊಳೆಬಾಗಿಲು, ಚಕ್ರೀ ಅಮ್ಮಮ್ಮನ ಮನೆ, ಸಾಸ್ತಾನ, ಉಡುಪಿ, ಮಂಗಳೂರು ಹೋ, ತನಗೆ ಗೊತ್ತಿದ್ದ ಊರ ಹೆಸರು ಹೇಳುತ್ತ ಅದರ ಹಿಂದೆ ಓಡುವ ಕೈಕರಣದ ನಟನೆ ಮಾಡುತ್ತ ತಾನೇ ಹೋಗುವ ಕಲ್ಪನೆಯಲ್ಲಿ, ಎಷ್ಟು ಮುಗ್ಧ ಚೆಂದ ಈ ನಾಣಿ. ಆಡಿ ಆಡಿ ದಣಿದು ಮೋಟಾರ್ ಗಾಡಿಯನ್ನು ಎಲ್ಲೋ ಇಟ್ಟು ಬಿಡುತ್ತಿದ್ದ. ಗೌರಿ ಬೇಕಿತ್ತು ಅದನ್ನು ಎತ್ತಿ ಇಡಲು. ಇವತ್ತು ಆ ಮೋಟಾರ್ ಗಾಡಿ ಅವಳ ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟ ಗೊಂಬೆಯನ್ನು ನೆನಪಿಸಿತು. ಆವತ್ತು ಚಕ್ತಿ ಮನೆಯಲ್ಲಿ ವಿನಾಯಕ ಕರ್ಪೂರದ ಗೊಂಬೆಯ ಕೈಕಾಲು ಮುರಿದು ಹಾಕಿದ್ದು ಒಳ್ಳೆಯದೇ ಆಯ್ತು.
ಅಪ್ಪಯ್ಯ ಹಣದ ಮುಖ ನೋಡದೆ ಅದಕ್ಕಿಂತ ಅಪೂರ್ವವಾದ ಗೊಂಬೆ ತಂದು ಕೊಟ್ಟಿದ್ದ. ಸ್ಯಾಟಿನ್ ಅಂಗಿ, ಕಾಲಿಗೆ ಬೂಟು, ತಲೆಗೆ ಹ್ಯಾಟು, ಕಾಲ ಮೇಲೆ ಮಲಗಿಸಿದರೆ ಕಣ್ಣು ಮುಚ್ಚುವ, ಎತ್ತಿದರೆ ಕಿಂಯ್ ಸ್ವರ ಹೊರಡಿಸಿ ಕಣ್ಣು ತೆರೆಯುವ ಗೊಂಬೆ. ಗೌರಿಗೆ ಪ್ರಪಂಚದ ಎಲ್ಲ ವಸ್ತುವಿಗಿಂತ ಶ್ರೇಷ್ಟ ಈ ಗೊಂಬೆ. ಎತ್ತಿ ಮಲಗಿಸಿ, ತೂಗಿ ಹಾಡಿ, ಗೌರಿಯ ದಿನವೆಲ್ಲ ಆ ಗೊಂಬೆ ಆಟಕ್ಕೆ ಮೀಸಲು. ನಿಜ, ಗೌರಿಯಂತಹ ಪುಟ್ಟ ಹೆಣ್ಣಿನಲ್ಲೂ ತಾಯ್ತನದ ಜಾಗ್ರತಿ ಪ್ರಕೃತಿಯೇ ಕೊಡುವ ಕೊಡುಗೆ. ಅವಳ ಆಟಕ್ಕೆ ನಾಣಿ ತಲೆ ಹಾಕಿದ್ದೇ ಇಲ್ಲ. ಆದರೂ ಗೌರಿಗೆ ಅನುಮಾನ. ನಾಣಿಗೆ ಮತ್ಸರ ಬಂದು ವಿನಾಯಕ ಮಾಡಿದಂತೆ ತನ್ನ ಗೊಂಬೆಯ ಕೈಕಾಲು ಮುರಿದರೆ? ಆಟದ ನಂತರ ಗೊಂಬೆ ಅವಳ ಸರಕಿನ ಪೆಟ್ಟಿಗೆಯಲ್ಲಿ ಭದ್ರ. ನಾಣಿಗೆ ಗೊತ್ತು. ಆದರೆ ಅಕ್ಕನ ವಸ್ತು ತೆಗೆದು ನೋಡಲಾರ.

ಪಾಪ, ದೇವಣ್ಣನ ವಸ್ತುಗಳ ತನಿಖೆಗೆ ಸುಮ್ಮನೆ ನಾಣಿಯಲ್ಲಿ ತನಗೆ ಅನುಮಾನ ಎನಿಸುವಾಗ ತೀರ ಅಡಿಯಲ್ಲಿ ಮುದ್ದೆಯಾದ ಬಣ್ಣ ಬಣ್ಣದ ಕಾಗದಗಳು, ಬಣ್ಣದ ಟಿಕಳಿಗಳು, ಕೃಷ್ಣನ ವೇಷಕ್ಕೆ ಹಾಕುವ ಸಣ್ಣ ಕಿರೀಟ? ಇದೆಲ್ಲ ಎಲ್ಲಿಯದು? ದೇವಣ್ಣನ ಮನೆಯಲ್ಲಿ ಇದ್ದಂತಹದೇ? ಕಳ್ಳ, ತನಗೂ ತೋರಿಸದೆ ತಂದು ತುರುಕಿದ್ದಾನೆ? ಎಲ್ಲಾ ಹಾಗೇ ಇರಲಿ, ನಾಣಿ ಸುಳ್ಳುಗಾರ, ಕಳ್ಳನಲ್ಲ ಎಂಬ ಆಯಿಯ ನಂಬಿಕೆ ಹುಸಿಯಾಗಿತ್ತು. ಇಂದು ತಾನೂ ಗುಡಿಗಾರ ದೇವಣ್ಣನಿಗೆ ಹಿಂದಿರುಗಿಸಲು ಕೊಟ್ಟದ್ದು ಹೊಳೆಗೆ ಎಸೆದು ಅವಳ ನಂಬಿಕೆ ಕೆಡಿಸಿಬಿಟ್ಟೆ.
ಇದನ್ನು ಹೇಳಲು ಗೌರಿ ಆಯಿಯ ಸುತ್ತಲೂ ಎಡತಾಕಿ ಹಲವು ಬಾರಿ ಬಾಯ್ತೆರೆದು ಸೋತಳು. ಆ ನೀರವ ರಾತ್ರೆಯಲ್ಲಿ ಮನೆಯಾಚೆ ಹಾಡಿಯಿಂದ ರಾತ್ರೆ ಹಕ್ಕಿಗಳ ಕಿಚಿಕಿಚಿ ಸದ್ದಿನಲ್ಲಿ ಯಾರೋ ಸಣ್ಣಗೆ ಬಿಕ್ಕಳಿಸುವ ಸದ್ದು. ಆಯಿಗೆ ಗಾಡನಿದ್ರೆ. ಅವಳ ಎಡಬದಿಯಲ್ಲಿ ಮಲಗಿದ್ದ ನಾಣಿಯೇ ಬಿಕ್ಕಳಿಸಿ ಅಳುತ್ತಿರುವುದು? ಹೌದು, ಗೌರಿ ಮೆಲ್ಲನೆ ಎದ್ದು ನಾಣಿಯ ಹಾಸಿಗೆಯಲ್ಲಿ ಮಲಗಿ ಅವನ ಕುತ್ತಿಗೆ ಸುತ್ತ ಕೈಬಳಸಿದಳು. ಕಟ್ಟೆ ಹರಿದಂತೆ ಅಳು ಅಳು. ‘ಎಂತಕ್ಕೆ ಅಳ್ತೆ ತಮ್ಮಾ? ನಿನ್ನ ಕೇಳದೆ ನವಿಲುಗರಿ ಪೆಟ್ಟಿಗೆ ತೆರೆದೆ ಅಂತಾ ಬೇಜಾರಾ? ಅದರಲ್ಲಿ ಎಂತ ಇದ್ದು ನಾ ಆಯಿಗೆ ಹೇಳ್ಲಿಲ್ಲೆ. ಅದು ನನ್ನ ನಿನ್ನಲ್ಲಿ ಗಪ್ ಚಿಪ್’
| ಇನ್ನು ನಾಳೆಗೆ |
ಎಪಿ ಮಾಲತಿಯವರು ಈ ಕಂತಿನಲ್ಲಿ ಅಕ್ಕ ತಮ್ಮನ ಪ್ರೀತಿ ಅಂದರೆ ಗೌರಿ ಹಾಗೂ ನಾಣಿ ಇವರಿಬ್ಬರು ಗುಡಿಗಾರ ದೇವಣ್ಣನ ಮನೆಗೆ ಹೋಗುವುದು ಅಲ್ಲಿ ಅವನು ಮಾಡುವ ಮದುವೆಗೆ ಬೇಕಾಗುವ ಬಾಸಿಂಗಗಳು ಮತ್ತು ಮುತ್ತು ಮಣಿಗಳ ಮಾಲೆಗಳು ಅದನ್ನು ಚೆಲುವ ಆರಿಸಿ ತಮ್ಮಲ್ಲಿ ಇಟ್ಟುಕೊಳ್ಳುವುದು ಆದರೆ ಏನು ತಪ್ಪು ಮಾಡಿದ್ದೇವೆ ಎಂದು ಅವರ ಅರಿವು ಚೆನ್ನಾಗಿ ಬರೆದಿದ್ದಾರೆ