ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
19
‘ಚಾನೂ, ಬಲೆ ಹಾಕ್ತಿಲ್ಲೆಯಾ? ಅಲ್ಲಿ ಕಾಣು ಎಷ್ಟು ಮೀನುಗಳು! ಒಂದು ಬುಟ್ಟಿ ಸಿಕ್ಕಗು’ ನಾಣಿ ಚಪ್ಪಾಳೆ ತಟ್ಟಿದ, ‘ನೀ ಬಲೆ ಕೊಟ್ಟರೆ ನಾನೇ ಹಿಡಿತೆ’ ಪಾಪ, ಅವನಿಗೆ ತನ್ನ ಇರಿವು ಮರೆತು ಸಂತೋಷದಲ್ಲಿ ಕೇಕೆ ಹಾಕಿದ. ಕುಳಿತಲ್ಲೆ ತಾನೂ ಮಿಸುಕಿದ ಮೀನಿನಂತೆ. ಮೋತಿಯೂ ವವ್ ವವ್ ಎಂದಿತು. ತೆಪ್ಪ ಸ್ವಲ್ಪ ಕುಲುಕಾಡಿತು.
‘ಸರಿ ಕೂಕಣಿ ಸಣ್ಣ ಒಡೆಯಾ.’ ಚಾನು ಸ್ವಲ್ಪ ಅಂಜಿದಂತೆ ಕಂಡ. ನಾಣಿಯ ಕುಲುಕಾಟದಲ್ಲಿ ತೆಪ್ಪದ ಒಂದು ಭಾಗ ನೀರೊಳಗೆ ಇಳಿದು ಮೇಲೆ ಬಂದಿತು. ಮತ್ತೊಮ್ಮೆ ಕೆಳಗೆ ವಾಲಿ ಮೇಲೆದ್ದಿತು. ತೆಪ್ಪದ ಒಂದು ಭಾಗ ನೀರಿಗಿಳಿದರೂ ಸಾಕು, ಸರಿಯಾಗಿ ಹುಟ್ಟು ಹಾಕದಿದ್ದರೆ ಆಯ ತಪ್ಪುತ್ತು ಎಂದು ಅವನಪ್ಪ ಹೇಳಿಕೊಟ್ಟ ಮೊದಲಪಾಠ. ಆಗಲೇ ದಡದಿಂದ ದೂರ ಬಂದಾಗಿದೆ. ನಾಯಿ ಅಂಡು ಸುಟ್ಟಂತೆ ಮೈ ಮೈ ನೀರನ್ನು ಕೊಡವಿಕೊಳ್ಳುತ್ತಿದೆ. ಅದರ ಚಾಷ್ಟಿ, ಸಣ್ಣ ಒಡೆಯರ ಅಲುಗಾಟದಲ್ಲಿ ತನಗೂ ಹುಟ್ಟು ಹಾಕಲು ಕಷ್ಟ. ಚಾನು ಕೂಗಿ ಗದರಿಸಿದ ನಾಣಿಯನ್ನು. ತೆಪ್ಪ ಮುಳುಗಿದರೆ ತನಗೆ ಈಜು ಬತ್ತು. ಆದರೆ ಸಣ್ಣ ಒಡತಿ, ಸಣ್ಣ ಒಡೆಯಂಗೆ? ಇಬ್ಬರಿಗೂ ಈಜು ಬತ್ತಿಲ್ಲೆ.
‘ಹ್ವಾಯ್, ಸಣ್ಣ ಒಡತಿ, ಸ್ವಲ್ಪ ಜೋರಾಗಿ ಹುಟ್ಟು ಹಾಕಿ. ಸಣ್ಣ ಒಡೆಯಾ, ಹಿಂದೆ ಜರಗಿ ಕೂಕಳ್ಳಿ. ನಾಯಿನ ಗಟ್ಟಿ ಹಿಡ್ಕಳಿ. ನಮ್ಮ ಭಾರಕ್ಕೆ ತೆಪ್ಪ ಬದಿಗೆ ವಾಲ್ತಾ ಇದ್ದು. ಹಿಂತಿರುಗಿ ದಡಕ್ಕೆ ಹೋಪಾ. ಸಣ್ಣ ಒಡತಿ, ಈ ಬದಿಗೆ ಕೈ ತಂದು ಬಗ್ಗಿ ಹುಟ್ಟನ್ನೂ ನೀರಲ್ಲಿ ದೂಡಿ. ಬೇಗ, ಬೇಗ’ ಅವಸರಿಸುತ್ತ ಸ್ವರ ಏರಿಸಿದ ಚಾನು ತೆಪ್ಪವನ್ನು ಅಡ್ಡಕ್ಕೆ ತಿರುಗಿಸಿದ. ತೆಪ್ಪ ಈಗ ಬಲಭಾಗಕ್ಕೆ ವಾಲಿತು, ಮತ್ತೆ ಸರಿಯಾಗಿ ಮುಂದೆ ಹೋಗುವ ಮೊದಲೇ ಆಯ ತಪ್ಪಿ ತೆಪ್ಪ ಬುಡಮೇಲಾಯಿತು. ಮುಂದಿನ ಕಥೆ ಕೇಳುವುದೇ ಬೇಡ.
ಗೌರಿ ನಿಂತಲ್ಲೇ ತಮ್ಮನನ್ನು, ತೆಪ್ಪ, ಹೊಳೆಯನ್ನೂ ನೋಡಿದಳು. ಅಂದು ತೆಪ್ಪ ದಡ ಸೇರಲು ಒಂದೆರಡು ಮಾರು ದೂರ ಇರುವಾಗಲೇ ಮಗುಚಿ ಮೋತಿ ಸಮೇತ ಉಳಿದ ಮೂವರೂ ನೀರುಪಾಲು. ಕಾಲಿಗೆ ನೆಲ ಸಿಕ್ಕದು, ತಲೆ ಎತ್ತಲಾಗದು. ಉಸಿರು ಕಟ್ಟುತ್ತಿತ್ತು. ಈ ಸ್ಥಿತಿಯಲ್ಲಿ ಚಾನು ತಾನು ಈಜುತ್ತ ಮೊದಲು ನಾಣಿಯನ್ನು ಹಿಡಿದು ದಡಕ್ಕೆ ತಂದು ಹಾಕಿದ್ದ. ಮೋತಿ ನೀರಲ್ಲಿ ಮುಳುಗಿ ಏಳುತ್ತ ಮುಂದೆ ಹೋದದ್ದು ಗೌರಿಯನ್ನು ಕಂಡು ಗುರ್‌ಗುರ್ ಮಾಡಿ ತಾನೇ ಹಿಂದೆ ಹೊರಳಿತು. ಅವಳ ಬಟ್ಟೆಯನ್ನು ತನ್ನ ಹಲ್ಲಿನಲ್ಲಿ ಕಚ್ಚಿ ಎಳೆದು ಎಳೆದು ದಡ ಮುಟ್ಟಿದಾಗ ಚಕ್ರಿ ಮನೆಯ ಬಾವಿಗೆ ಬಿದ್ದಂತೆ ಗೌರಿಗೆ ಎಚ್ಚರವಿಲ್ಲದ ಸ್ಥಿತಿ.
ಮೋತಿ ಸ್ವಲ್ಪ ನಿಧಾನಿಸಿದ್ದರೂ ಅಂದೇ ಮುಗಿಯುತ್ತಿತ್ತು ಅವಳ ಕಥೆ. ಮನೆಯಲ್ಲಿ ಈ ರಂಪಾಟ ತಿಳಿದು ತೆಪ್ಪದ ಸಾಹಸದಲ್ಲಿ ಬದುಕುಳಿದ ಮಕ್ಕಳನ್ನು ಹಿರಿಯರು ಅಪ್ಪಿ ಮುದ್ದಾಡಿ ಕಣ್ಣೀರು ಹಾಕಿದ್ದರು. ಆದರೂ ಅಪ್ಪಯ್ಯ ಹುಣಿಸೇ ಅಡರಿನಿಂದ ಗೌರಿ ಒಬ್ಬಳಿಗೆ ಕುಂಡೆಗೆ ಬರೆ ಬರುವಂತೆ ಬಾರಿಸಿದ್ದ, ‘ಕುದುರೆ ಹಾಗೆ ಬೆಳೆದಿದ್ದಿ ಕೂಸೂ. ತಲೆ ಎಲ್ಲಿಟ್ಕಂಡಿದ್ದಿ? ಇನ್ಮೇಲೆ ಹೇಳದೆ ತೆಪ್ಪದ ಸುದ್ದಿಗೆ ಹ್ವಾದರೆ ಕಾಲು ಮುರ್ದು ಕೈಗೆ ಕೊಡ್ತೆ. ಹೊಳೆಬದಿಗೂ ಹುಷಾರು!’
ಕುಂಡೆಗೆ ಸಿಕ್ಕಿದ ಪೆಟ್ಟಿನ ನೋವು ಎರಡೇ ದಿನಕ್ಕೆ. ಆದರೆ ಅಪ್ಪಯ್ಯನ ಕರುಣೆ ತುಂಬಿದ ಆ ಏಟುಗಳು ಜೀವನಕ್ಕೆ ಕಲಿಸಿತ್ತು ದೊಡ್ಡ ಪಾಠ. ಇನ್ನು ಮೇಲೆ ಹೊಳೆಬಳಿ ಹೋದರೂ ನೀರಿಗಿಳಿಯದಂತೆ ಆಯಿಯೇ ದೇವರ ಮುಂದೆ ಪ್ರಮಾಣ ಮಾಡಿಸಿದ್ದಳು. ತಾನು ತುಂಬ ದೊಡ್ಡವಳಂತೆ. ಪೆಟ್ಟು ತನಗೆ ಮಾತ್ರ, ನಾಣಿಗೆ ಇಲ್ಲ!ಅವಳು ತಮ್ಮನನ್ನು ನೋಡಿದಳು. ಅಪ್ಪಿ ಹಿಡಿದು ಹೊಳೆಗೆ ಕೈ ಮುಗಿದು, ಬಿದಿರು ತೆಪ್ಪ ನಡೆಸುವ ಚೆಂದದ ಕಲ್ಪನೆಯಲ್ಲಿ ನಗುತ್ತ, ‘ತೆಪ್ಪ ಬಿದ್ಕಳ್ಲಿ. ಅದರ ಉಸಾಬರಿ ಬ್ಯಾಡ. ಬಾ, ನಾವು ಚಕ್ರಿ ಅಮ್ಮಮ್ಮನಿಂದ ಈಜು ಕಲ್ತ ಮೇಲೆ ತೆಪ್ಪ ನೋಡ್ವ. ನಡಿ, ಖಾರೆ ಹಣ್ಣು ಕುಯ್ಕಂಡು ಅತ್ತ ಹೋಪಾ’ ದೊಡ್ಡಕ್ಕೆ ಸಿಳ್ಳು ಹಾಕಿದಳು.
ಇಬ್ಬರ ನಗು ಪ್ರತಿಧ್ವನಿಸಿತು ಹೊಳೆಯ ನೀರಿನಲ್ಲಿ. ಅದೇ ವೇಳೆ ಮೋತಿ ತನ್ನದೇ ಭಾಷೆಯಲ್ಲಿ ಊ ಊ ಎನ್ನುವಾಗ ನಾಣಿ ಅಕ್ಕನ ಕೈ ಹಿಡಿದು ಸಣ್ಣ ಚೀತ್ಕಾರದಲ್ಲಿ ಅಷ್ಟೆತ್ತರ ಹಾರಿ ಮಾರು ದೂರ ಹಿಂದೆ ಸರಿದಾಗಿತ್ತು. ಆಗ ದೃಷ್ಟಿಗೆ ಗೋಚರಿಸಿದ್ದು ಹತ್ತಾರು ಮಾರು ದೂರದಲ್ಲಿ ಎರಡು ಹಾವುಗಳು ಒಂದಕ್ಕೊಂದು ಹೆಣೆದುಕೊಂಡು ಎತ್ತರಕ್ಕೇರಿ ನಿಂತುಬಿಟ್ಟಿವೆ!
ಬಿಸಿಲು ಕೋಲಿನಲ್ಲಿ ಫಳ ಫಳ ಹೊಳೆಯುವ ಅವುಗಳ ಮೈ ಹಿಂದೆ ಮುಂದೆ ಓಲಾಡುತ್ತಿವೆ. ನೋಡಿದಷ್ಟೂ ಸಾಲದು ಅವುಗಳ ನರ್ತನ. ನಾಣಿ ಅವುಗಳನ್ನು ಓಡಿಸಲು ಕಲ್ಲು ಎತ್ತಿಕೊಂಡ. ತಡೆದಳು ಗೌರಿ, ‘ಬಿಡೋ, ಅವುಗಳ ಪಾಡಿಗೆ ಹಾಗೇ ಇರಲಿ. ನಮಗೆ ಉಸಾಬರಿ ಬ್ಯಾಡ. ಆಯಿಯನ್ನು ಕೇಳು, ಜೋಡಿಯಾದ ಹಾವುಗಳನ್ನು ನಾವು ಮನುಷ್ಯರು ಕಾಂಬಕಾಗ ಅಂತೆ. ಹೊಡೆದು ಓಡ್ಸೂಕೂ ಆಗದಂತೆ. ಒಬ್ಬಾತ ಹೀಂಗೆ ಜೋಡಿ ನಿಂತ ಹಾವುಗಳನ್ನು ಹೊಡ್ದು ಆ ರಾತ್ರೆ ಅವೆರಡೂ ಅವನ ಮನೆ ಮುಂದೆ ಬಂದಿದ್ವಂತೆ. ಮತ್ತೆನೂ ಎರಡು ದಿನ ಅವ ಹೋಪಲ್ಲಿ ಹಿಂದೆ ಬತ್ತಿದ್ವಂತೆ. ಖರೆ (ನಿಜ) ನೋ ಸುಳ್ಳೋ’ ನಾಣಿ ಕಲ್ಲನ್ನು ಕೆಳಗೆಸೆದ.
ಮೋತಿ ತಾನೂ ವಿಶೇಷ ಕಂಡಂತೆ ಬಾಯಿ ನೋಯುವಷ್ಟು ಬೊಗಳಿ ಹಿಂದೆ ಸರಿದು ಇವರನ್ನು ಮೂರು ಸುತ್ತು ಬಂದಿತು. ಆ ದಿನವೆಲ್ಲ ಮನೆಯಲ್ಲಿ ಹಾವುಗಳದೇ ಸುದ್ದಿ. ಈ ಕಾಲದಲ್ಲಿ ಹಾವುಗಳು ಜೋಡಿಯಾಗುವುದು ಕಡಿಮೆ. ಸಾಮಾನ್ಯವಾಗಿ ಮೊಟ್ಟೆ, ಮರಿ ಇಡುವ ಸಮಯ. ಇವಕ್ಕೆ ಅಕಸ್ಮಾತ್ ಕಾಣಲು ಸಿಕ್ಕಿದೆ. ಸಧ್ಯ ತಂಟೆ ಮಾಡದೆ ಬಂದರಲ್ಲ. ‘ಇನ್ಮೇಲೆ ಮಳೆ ತಗ್ಗು ತನಕ ಹೊಳೆ ತೋಟ ಗದ್ದೆಗೆ ಹ್ವಾಪಾಗ ಚೂರು ಜಾಗ್ರತೆ ಮಾಡ್ಕಳಿ.’ ಅಜ್ಜಮ್ಮ ಗದರಿದಳು.
ಅಕ್ಕನತ್ತ ಕಣ್ಣು ಹೊಡೆದನಾಣಿ, ‘ಹೆಬ್ಬಾವು ಬಂದರೆ?’
ಅಜ್ಜಮ್ಮ ತಲೆಗೆ ಮೊಟಕಿದಳು, ‘ನಿನ್ನನ್ನೇ ನುಂಗಿ ಬಿಡುಗು ಮೂರ್ಕಾಸಿನ ಹುಡುಗಾ!’
ಹೆಬ್ಬಾವು ಎನ್ನುವಾಗ ಕೆಲವು ಸಮಯದ ಹಿಂದೆ ತಮ್ಮ ಬಚ್ಚಲುಮನೆಯ ಸವುದೆ ರಾಶಿಯಲ್ಲಿ ದೊಡ್ಡ ಗಾತ್ರದ ಮೊಟ್ಟೆಗಳು ಕಾಣಸಿಕ್ಕಿದ್ದು ನೆನಪಿಗೆ ಬಂತು. ಒಂದೆರಡಲ್ಲ, ರಾಶಿ ಮೊಟ್ಟೆಗಳು. ಮೊಟ್ಟೆ ಇದ್ದಲ್ಲಿ ಹಾವು ಇರಬೇಕಲ್ಲ? ಸುಬ್ಬಪ್ಪಯ್ಯ ಉಪ್ಪುಂದದ ಒಬ್ಬ ಹಾವು ಹಿಡಿಯುವವನ್ನು ಕರೆಯಿಸಿದ್ದರು. ಅವು ಹೆಬ್ಬಾವಿನ ಮೊಟ್ಟೆಗಳೆಂದು ಗುರುತಿಸಿದ ಅವನು ಬಹಳ ಹೊತ್ತು ಸವುದೆ ರಾಶಿ, ಬಚ್ಚಲಿನ ಹಿಂದೆ ಮುಂದೆ ಹುಡುಕಿದರೂ ಹೆಬ್ಬಾವನ್ನು ಕಾಣದೆ ಕೊನೆಗೆ ಎಲ್ಲಾ ಮೊಟ್ಟೆಗಳನ್ನು ತೆಕ್ಕೊಂಡು ಹೋಗಿದ್ದ. ಹೆಬ್ಬಾವು ಇಲ್ಲೇ ಹತ್ರ ನಮ್ಗೆ ಕಾಣದಾಂಗೆ ಚುರುಟಿ ಮಲಗಿಕ್ಕು.
ಅನುಮಾನ ಬಂದ ಅಜ್ಜಮ್ಮ ಅದೇ ದಿನ ಬಚ್ಚಲು ಮನೆಯಲ್ಲಿ ಪೇರಿಸಿಟ್ಟ ಸವುದೆ ರಾಶಿಯನ್ನು ಬೇರೆ ಕಡೆ ಒತ್ತರಿಸಿಟ್ಟಿದ್ದಳು. ಅವು ಪೂರಾ ಮರಿಯಾಗಿ ಹೊರ ಬಂದಿದ್ದರೆ? ಈಗ ನೆನಪಿಸಿದರೆ ಅಕ್ಕ ತಮ್ಮನಿಗೆ ಭಯದಿಂದ ಮೈಯ್ಯಲ್ಲಿ ಚಳಿಯ ನಡುಕ. ಸುಮ್ಮನೆ ಹೇಳ್ಲಿಲ್ಲ ಅಜ್ಜಮ್ಮ, ಯಾರದೋ ಮನೆಯ ಅಂಗಳಕ್ಕೆ ಬಂದ ಹೆಬ್ಬಾವು ಆಡಿನ ಮರಿಯನ್ನೇ ನುಂಗಿದ ಕಥೆಯನ್ನು. ‘ಹೆಬ್ಬಾವು, ಹಾವುಗಳನ್ನು, ಸರ್ಪಗಳನ್ನು ನಾವು ಕೆಣಕದಿದ್ದರೆ ಅವು ಎಂತ ಮಾಡೂದು ಇಲ್ಲೆ. ಪ್ರಕೃತಿಯಲ್ಲಿ ಬದುಕುವ ಹಕ್ಕು ನಮ್ಮಂತೆ ಅವಕ್ಕೂ ಇವೆ’ ಎನ್ನುವ ಆಯಿ ಕೊಂಬೆಚೇಳು, ಜರಿಚೇಳು, ಹಲ್ಲಿ ಕಂಡಲ್ಲಿ ಕೊಲ್ಲದೆ ಹೊರಗೆ ಬಿಟ್ಟುಬಿಡ್ತಾಳೆ. ಹೊಳೆಬದಿಯ ಬದುಕಲ್ಲಿ ಇವೆಲ್ಲ ಮಾಮೂಲು. ಇದೇ ಅಲ್ಲವೆ ಜೀವನ ಪ್ರೀತಿ!
| ಇನ್ನು ನಾಳೆಗೆ |
ಎಂಥಾ ಚಂದದ ಸಂಚಿಕೆ!
ಎರಡೆರಡು ಸಲ ಓದಿ ಖುಷಿ ಪಟ್ಟೆ.
ಜಾಣ ಮೋತಿ.
ಎ ಪಿ ಮಾಲತಿಯವರು ಮಕ್ಕಳು ಮಳೆಯಲ್ಲಿ ದೋಣಿಯಲ್ಲಿ ಪ್ರಯಾಣ ಜೋರಾಗಿ ಗಾಳಿ ಹಾಗೂ ಮಳೆ ಒಟ್ಟಿಗೆ ಸಾಕಿದ ನಾಯಿ ಇವರೊಡನೆ ದೋಣಿ ಮುಳುಗುವದು ಚಾಣಿ ಎಲ್ಲರನ್ನು ಉಳಿಸುವದು ಮನೆಯಲ್ಲಿ ರಂಪಾಟ ಅಪ್ಪನಿಂದ ಕೋಲಿನಿಂದ ಹೊಡೆತ ಇನ್ನು ಇಂತ ಉಸಾಬರಿ ನಮಗೆ ಬೇಡ ಅನ್ನುವದು ಹಾವು ಮೊಟ್ಟೆ ಹಾಕುವದು ಇರಡು ಹಾವಿನ ಸಲ್ಲಾಪ ಮಕ್ಕಳ ನೋಟ ದೊಡ್ಡವರಿಂದ ಅದನ್ನು ನೋಡಬೇಡವೆಂಬ ತಾಕೀತು ಅದರ ನೆನಪು ಎಲ್ಲ ತುಂಬಾ ಚೆನ್ನಾಗಿ ಬರೆದಿದ್ದಾರೆ ತಮ್ಮ ಪ್ರಿಯ ಕೃಷ್ಣ ವಸಂತಿ
ಎ ಪಿ ಮಾಲತಿಯವರ ಹೊಳೆಬಾಗಿಲು, ಚೆನ್ನಾಗಿ ಮೂಡಿ ಬರ್ತದೆ.
ತೆಪ್ಪ ಮಗುಚಿ… ಮೂವರೂ ನೀರುಪಾಲಾಗಿ… ಕಾಲಿಗೆ ನೆಲ ಸಿಕ್ಕದೆ… ತಲೆ ಎತ್ತಲಾಗಾದೆ… ಉಸಿರು ಕಟ್ಟಿದ…ಅನುಭವ ಓದುವಾಗ, ನಂಗೇ ಉಸಿರು ಕಟ್ಟಿದ ಹಾಗಾಯ್ತು.
ಮುದ್ದು ಮೋತಿ.. ತಾನೂ ವಿಶೇಷ ಕಂಡಂತೆ ಬಾಯಿ ನೋಯುವಷ್ಟು ಬೊಗಳಿ ಹಿಂದೆ ಸರಿದು ಇವರನ್ನು ಮೂರು ಸುತ್ತು ಬಂದಿದ್ದು – ತುಂಬಾ ಚೆನ್ನಾಗಿತ್ತು.
ಕುಂಡೆಗೆ ಬಾರಿಸುವುದು ಸರ್ವೇ ಸಾಮಾನ್ಯ – ನನ್ನ ಬಾಲ್ಯದ ನೆನಪಿನಿಂದ, ನಗು ಬಂತು
ನಾಳೆಗೆ ಕಾಯ್ತಾ ಇರ್ತೇನೆ.