ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಸೆರಗಿನಲ್ಲಿ ಮಕ್ಕಳ ಕಣ್ಣು ಒರಸಿ ನಕ್ಕಳು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

15

ಆವತ್ತು ಒಂದು ದಿನ ಗೌರಿ ಜೊತೆ ಅಟ್ಟದ ಕಿಟಕಿಯಿಂದ ದೂರದಲ್ಲಿ ಕಾಣುವ ಗಂಗೊಳ್ಳಿ ಹೊಳೆ ನೋಡುತ್ತ ನೆನಪು ಬಿಚ್ಚಿದ್ದಳು ಸುಶೀಲಚಿಕ್ಕಿ, ‘ಅವರು ಹೋಗುವಾಗ ನನಗಿನ್ನೂ ಇಪ್ಪತ್ತು. ಕೆಂಪು ಸೀರೆ ಉಡ್ಸಿ ಅಂದರು ಹಿರಿಯರೆಲ್ಲ ಸೇರಿ. ನನಗೆ ಕೆಂಪು ಕಂಡರಾಗದು ಗೌರಿ, ಅದೊಂದು ಬ್ಯಾಡ. ಅತ್ತೆ ಮಾವನ ಕಾಲಿಗೆ ಬಿದ್ದಿದ್ದೆ, ಮಗಳಂತೆ ಕಾಂಬ ಅತ್ತೆ ತಾವೂ ಅಳುತ್ತ ಬಿಳಿಸೀರೆ ಸುತ್ತಿಸಿದ್ರು. ಬಿಳಿ ಬಿಳಿ ಸೀರೆ. ಹಾಲು ಬಿಳಿ ಸೀರೆ. ಅದರೊಳಗೆ ಪ್ರೀತಿ, ವಿರಹ, ಪ್ರೇಮ ಕಾಮ ತುಂಬಿ ಯಾರ ಕಣ್ಣಿಗೆ ಬೀಳದೆ ಜೀವನದ ಬಣ್ಣ ಬಣ್ಣದ ಕಾರಂಜಿಗಳು ಆವಿಯಾಗಿ…’
ಅವಳ ಮಾತು ನೆನಪಿಸುತ್ತ ಮಹಡಿ ಹತ್ತಿ ಬರುವಾಗ ಕನ್ನಡಿಯಲ್ಲಿ ಮುಖ ನೋಡುತ್ತ ಚಿಕ್ಕಿ ಮುಖ ಓರೆ ಮಾಡುವುದು ಕಂಡಿತು.

ಇತ್ತ ನಾಣಿ ಕಳ್ಳ ಹೆಜ್ಜೆಯಿಟ್ಟು ಆಗಲೇ ಮೇಲೆ ಬಂದಿದ್ದ. ಯಾವಾಗಲೂ ದೂರದಲ್ಲಿ ನಿಂತು, ‘ಬೋಳು ಮಂಡೆ ಚಿಕ್ಕಿ ಡುಂ ಡುಂ’ ಎನ್ನುವವ ಇಂದು ಕೆನ್ನೆಗೆ ಕೈಯ್ಯಿಟ್ಟು ಬಿರುಗಣ್ಣು ಬಿಟ್ಟು ಅವಳನ್ನೇ ನೋಡುತ್ತ ಕುಳಿತಿದ್ದ. ಗೌರಿ ಚಿಕ್ಕಿ ತಲೆಗೆ ಮೆತ್ತಗೆ ಎಣ್ಣೆ ಸವರಿದಳು. ಆ ಬಾಲಹಸ್ತದ ಸ್ಪರ್ಷಕ್ಕೆ ಎದೆಯಾಳದಿಂದ ಅಳು ಒತ್ತರಿಸಿ ಬಿಕ್ಕಳಿಕೆ ಬಂದು ಚಿಕ್ಕಿ ಅವಳನ್ನು ಬಾಚಿ ತಬ್ಬಿಕೊಂಡಳು, ನಾಣಿಯೂ ಅವಳ ಮೊಟ್ಟೆಯಲ್ಲಿ ತಲೆ ಇಟ್ಟ, ‘ಚಿಕ್ಕಿ, ಚಿಕ್ಕಿ’ ಮುಂದೆ ಸ್ವರ ಹೊರಡಲಿಲ್ಲ.

ರಭಸದಲ್ಲಿ ಹರಿಯುವ ಗಂಗೊಳ್ಳಿ ಹೊಳೆ ನಿಧಾನಕ್ಕೆ ಶಾಂತ ಆಗುವಂತೆ ಸುಶೀಲ ಚಿಕ್ಕಿ ಸೆರಗಿನಲ್ಲಿ ಮಕ್ಕಳ ಕಣ್ಣು ಒರಸಿ ನಕ್ಕಳು, ‘ನಿಮಗೆಂತ ಆತು? ಈ ತಲೆಕೂದಲಿಗಾಗಿ ಈ ಪಾಟಿ ಅಳು? ಹುಚ್ಚು. ಎಂತದೂ ಗೊತ್ತಿಲ್ಲದ ಗುಗ್ಗುಗಳಲ್ಲ ನೀವು? ಕೂದಲು ತೆಗೆಸಲು ನೂರಾರು ಕಾರಣ ಇತ್ತಲ್ದ. ತಿರುಪತಿಗೆ ಹೋದ್ರೆ ದೇವರಿಗಾಗಿ ಗಂಡಸರು ಹೆಂಗಸರು ಮುಡಿ ಕೊಡ್ತೋ. ಅದು ದೇವರಲ್ಲಿ ನಾವಿಡುವ ಭಕ್ತಿ ಶ್ರದ್ಧೆಗಾಗಿ. ನಾವೂ ಗಂಡನಿಗಾಗಿ ಮುಡಿಕೊಟ್ಟದ್ದು ಅಂತ ನೆನಸಿಕಂಡ್ರೆ ಬ್ಯಾಸರ, ದುಃಖ ಎಲ್ಲಿದ್ದು? ಅದು ಸಂಪ್ರದಾಯ.’ ಮಾಗಿ ಹಣ್ಣಾದ ಅನುಭವಿ ಚಿಕ್ಕಿ ಸಮಾಧಾನ ಹೇಳುತ್ತ ಕೆಲವು ವರ್ಷಗಳ ಹಿಂದೆ ತಾನು ಮಥುರೆಗೆ ಹೋಗಿ ಬಂದದ್ದು ನೆನಪಿಸಿದ್ದಳು.

ಮನೆ ಮಂದಿ ಜೊತೆ ಉತ್ತರಭಾರತ ಪ್ರವಾಸ ಹೋದ ಸಂದರ್ಭ, ಮಥುರಾಕ್ಕೂ ಹೋಗಿದ್ದಳು. ಮಥುರಾ ದೇವಾಲಯ ನೋಡಲು ಆಕರ್ಶಕ, ಭಕ್ತಿ ಭಾವ ತುಂಬುವ ಪುಣ್ಯ ಸ್ಥಳ. ರಾಧಾ ಮಾಧವನ ಲೀಲಾವಿನೋದದ ಹಲವು ಚಿತ್ರಣ, ಕೃಷ್ಣನ ಅವತಾರದ ಉದ್ದೇಶ ಕಾಣಸಿಗುತ್ತದೆ. ಒಂದುತರಹದ ಧನ್ಯತಾಭಾವ. ‘ಎಲ್ಲವೂ ಚೆಂದ, ಕಣ್ಗಳಿನ್ಯಾತಕೋ ಕಾವೇರಿ ರಂಗನ ನೋಡದಾ? ಕಸ್ತೂರಿ ರಂಗನ ಕಾಣದಾ’ ದಾಸರ ಹಾಡನ್ನು ರಾಗವಾಗಿ ಹೇಳಿ ಇಬ್ಬರನ್ನೂ ನಗಿಸಿ ಕೆನ್ನೆ ಹಿಂಡಿದಳು, ‘ಅಲ್ಲಿ ಇನ್ನೊಂದು ಸಂಗ್ತಿ ನೋಡೆಕ್ಕು. ಸಣ್ಣ ಪ್ರಾಯದ ಬೋಳುತಲೆ ಹೆಣ್ಣುಮಕ್ಕಳು, ಹೆಂಗಸರು, ಮುದುಕಿ ವಿಧವೆಯರದೇ ದೊಡ್ಡ ಗುಂಪು. ತಾಳ ಹಾಕ್ತಾ ಕೃಷ್ಣ ಭಜನೆ ಮಾಡ್ತಾ ಎಷ್ಟು ಖುಷ್ ಖುಷಿಯಾಗಿ ಇರ್ತೋ. ಅವರ ಭಜನೇಲಿ ಕರುಣಾರಸ ಜಾಸ್ತಿ, ಕೇಳುವಾಗ ನಮ್ಮ ಹೊಟ್ಟೆಲಿ ಒಂತರಹ ಸಂಕಟ. ನಂಗೆ ನೋಡೂಕೂ ಆಗ್ಲಿಲ್ಲೆ.’
‘ಅವೆಲ್ಲ ಯಾರು? ಯಾಕೆ ಅಲ್ಲಿರ್ತೋ?’ ಗೌರಿ ಮುಗ್ಧಳಾಗಿ ಕೇಳಿದಳು.

‘ಯಾಕೆಂದ್ರೆ ಗಂಡ ಸತ್ತ ಹೆಮ್ಮಕ್ಕಳು ಒಲೆಬೂದಿಗೂ ಬ್ಯಾಡ. ಕೆಲವರು ತಾವೇ ಮಥುರಾಕ್ಕೆ ಹೋಗ್ತೋ. ಇನ್ನು ಕೆಲವರನ್ನು ಮನೆ ಜನಗಳೇ ತಂದು ಬಿಡ್ತೋ. ನಿರ್ಗತಿಕ, ಅನಾಥ ಹೆಣ್ಣುಮಕ್ಕಳನ್ನು ದಾನಿಗಳು ನೋಡಿಕೊಳ್ತಾರಂತೆ.’
‘ನೀನು ಮಥುರಾದಲ್ಲಿ ಕೆಲವು ತಿಂಗಳು ಇದ್ದೆಯಂತೆ, ಕಮಲತ್ತೆ ಹೇಳ್ತಿದ್ದಳು.’
‘ಕಳ್ಳಿ! ಕಮಲತ್ತೆ, ಆಯಿ, ಅಜ್ಜಮ್ಮನ ಮಾತು ಕೇಳ್ಸಕಂಡ್ಯಾ? ನಿಂಗೆಲ್ಲ ಗೊತ್ತಿದ್ದು.?’

ಸುಶೀಲ ಚಿಕ್ಕಿಗೆ ಮಥುರಾ ಇಷ್ಟವೇ. ಅಲ್ಲಿ ಉಳಿಯುವುದು? ಛೀ! ಆ ವೈರಾಗ್ಯ ಬಂದದ್ದೇ ಇಲ್ಲ. ಸದಾನಂದ ಇದ್ದಿದ್ದರೆ ದೊಡ್ಡ ಕುಟುಂಬದ ರಾಣಿಯಪ್ಪ ಯೋಗವಿತ್ತು. ಅಪ್ಪ ಹರಿಕಥೆ ದಾಸ. ಹರಿಕಥೆ ಮಾಡುತ್ತ ಸಂಸಾರದ ಹೊಣೆ ಇಲ್ಲದೆ ಊರೂರು ಅಲೆತ. ಆದರೂ ಮಗಳಿಗೆ ಶಿವಮೊಗ್ಗ ಸಮೀಪದ ಶ್ರೀಮಂತ ಕುಟುಂಬಕ್ಕೆ ಎಂಟನೇ ವರ್ಷಕ್ಕೆ ಮದುವೆ ಮಾಡಿಕೊಟ್ಟು ಎಲ್ಲರಿಂದ ಸೈ ಅನ್ನಿಸಿಕೊಂಡ. ಸದಾನಂದನ ಬಾಳಸಂಗಾತಿಯಾಗಿ ಸುಶೀಲಚಿಕ್ಕಿ ಬಾಳ್ವೆ ನಡೆಸಿದ್ದು ತನ್ನ ಹದಿನಾಲ್ಕರ ಪ್ರಾಯದಲ್ಲಿ. ದೊಡ್ಡ ಕೂಡು ಕುಟುಂಬ.

ತಂದೆ, ದೊಡ್ಡಪ್ಪ, ಚಿಕ್ಕಪ್ಪ ಅವರ ಸಂಸಾರಗಳು, ಸದಾನಂದನ ಒಂಬತ್ತು ಅಣ್ಣ ತಮ್ಮಂದಿರು, ಅವರ ಹೆಂಡಿರು ಮಕ್ಕಳು, ಇಬ್ಬರು ಅಕ್ಕ ತಂಗಿಯರು ಮಕ್ಕಳು ಮರಿಗಳು ಚಿಳ್ಳೆ ಪಿಳ್ಳೆಗಳು ಬಂದು ಹೋಗುವ ನೆಂಟರಿಷ್ಟರು, ಆಳು ಕಾಳುಗಳು. ಅಂತೂ ಮನೆಯಲ್ಲಿ ಜನವೋ ಜನ. ಗಂಡಸರಿಗೆ ತೋಟ ಗದ್ದೆಗಳ ಉಸ್ತುವಾರಿ, ಅಡಿಕೆ ಮಂಡಿಯ ವಹಿವಾಟು, ವ್ಯಾಪಾರದ ಭರಾಟೆ, ಹೆಂಗಸರಿಗೆ ಮನೆ ಒಳಗೆ ಅಡಿಗೆ ಮಾಡು, ಬಡಿಸು, ಶುಚಿಗೊಳಿಸು, ದನಕರುಗಳ ಮೇಲ್ತನಿಕೆ ಎಲ್ಲರಿಗೂ ಕೈತುಂಬ ಕೆಲಸ. ಬಸಿರು ಬಾಣಂತನ ಇಲ್ಲಿ ಖಾಯಂ.

ಬಾಣಂತಿಗಳ ಆರೈಕೆ, ಒಂದಲ್ಲ ಒಂದು ಶಿಶು ತೊಟ್ಟಿಲಲ್ಲಿ ಇರುತ್ತಿತ್ತು. ಆಳು ಕಾಳುಗಳಿಗೂ ಬಿಡುವಿಲ್ಲದ ಕೆಲಸ. ಹಿರಿಯರಿಗೆ ತಂಬಾಕು ಕವಳ, ನಸ್ಯ ಸೇದುವ ಹವ್ಯಾಸ. ಹೊರಜಗಲಿಯಲ್ಲಿ ತಾಂಬೂಲ ಪೆಟ್ಟಿಗೆ ಖಾಲಿ ಆದದ್ದೇ ಇಲ್ಲ. ಹೊಸತಲೆ ಮಕ್ಕಳು ಕದ್ದು ಮುಚ್ಚಿ ಬೀಡಿ ಸೇದುವುದೂ ಇತ್ತು. ಇಸ್ಪೀಟಾಟ, ಪಗಡೆ ಆಟ ಮಾಮೂಲಿ. ಹಿರಿ ಕಿರಿಯರು ಸೇರಿ ತಾಳಮದ್ದಳೆ, ಯಕ್ಷಗಾನದ ಕುಣಿತ, ಭಾಗವತಿಕೆ ನಡೆಸುವ ಗೌಜು. ಮೂರು ನಾಲ್ಕು ತಾಸುಗಳ ತಾಳಮದ್ದಳೆ. ಹೊತ್ತಿನ ಪರಿವೆಯಿಲ್ಲ. ಎಲ್ಲರಿಗೂ ಆಗಾಗ ಕುಡಿಯಲು ಹಾಲಿನ ಕಷಾಯ.

ಕೆಲವೊಮ್ಮೆ ಮಾತಿನ ಭರಾಟೆಯಲ್ಲಿ ಪಾತ್ರಧಾರಿಗಳಲ್ಲೇ ವಾಗ್ಯುದ್ಧ, ಜಗಳ, ಹೊಯ್ ಕೈ ತಾರಕಕ್ಕೇರಿ ಹಿರಿಯರು ಮಧ್ಯ ಬಂದು, ಅದೆಲ್ಲ ಮಾಮೂಲಿ. ಸ್ವಲ್ಪ ವಿಲಾಸಿ ಜೀವನ. ಹೆಂಗಸರಿಗೆ ಸೀರೆ, ಚಿನ್ನಾಭರಣ, ಮಕ್ಕಳಿಗೆ ಬಟ್ಟೆ ತೆಗೆಯುವುದು ಮನೆ ಯಜಮಾನರು. ಹೆಚ್ಚು ಕಡಿಮೆ ಅಸಮಾಧಾನದ ಪ್ರಶ್ನೆ ಇಲ್ಲ. ‘ದೇವರ ರಾಜ್ಯದಲ್ಲಿ ಯಾರಿಗೂ ಅನ್ಯಾಯ ಆಗ್ಬಾರದು. ಇದು ನಮ್ಮ ಶಿಸ್ತಿನ ಜೀವನ ರೀತಿ, ಜೀವನ ತತ್ವ’ ಎಂಬ ಗರ್ವ ಬೇರೆ.

‘ಕಾಲ ಒಂದೇ ರೀತಿ ಇರ್ತಿಲ್ಲೆ ಗೌರಿ, ದೊಡ್ಡಮನೆ ಸಂಸಾರಗಳು ಬೆಳೀತಾ ಬಂದಾಂಗೆ ಆದಾಯಕ್ಕಿಂತ ಖರ್ಚು ಹೆಚ್ತು. ಸಾಲದ ಹೊರೆ ಸುರುವಾತು. ತೋಟ ಗದ್ದೆ ಒಂದೊಂದಾಗಿ ಕೈ ಬಿಟ್ಟವು. ಆಸ್ತಿ ಪಾಸ್ತಿದೂ ಪಾಲಾತು. ಈ ವೇಳೆಗೆ ಕಾಲ ಹ್ಯಾಂಗೆ ಸರೀತು ನೋಡು. ಸದಾನಂದನಿಲ್ಲದೆ ಇಪ್ಪತ್ತು ವರ್ಷಕಳೆದಿತ್ತು. ಎಲ್ಲ ಹಿರಿಯರು, ನನ್ನ ಮಾವನೂ ಮೇಲೆ ಹೋಗಾತು.

ಮುಂದೆ ಆರೇಳು ವರ್ಷದಲ್ಲಿ ದೊಡ್ಡ ಮನೆ, ಉಳಿದ ಜಾಗ ಅಬ್ಬಬ್ಬ, ಎಲ್ಲಾ ಸಾಲ ತಿಂದು ನೊಣೆಯಿತು. ಹಣೆಬರಹ. ನನಗೆ ಗಂಡ, ಮಕ್ಕಳಿಲ್ಲದ ನೆಪ, ಆಸ್ತಿ ಪಾಲು ಕೊಡಲಿಲ್ಲೆ. ಪಾಲು ಕೊಡದೆ ಸಾಲದ ಹೊರೆ ನನ್ನ ತಲೆ ಮೇಲೆ ಹಾಕೂಕಾಗ ಅಂತ ಅತ್ತೆ ಗಟ್ಟಿಗೆ ನಿಂತರು. ಬಚಾವು! ಅಶನಾಂಶವೂ ಸೊನ್ನೆ. ಅತ್ತೆಗೆ ಶಿವಮೊಗ್ಗದ ಹೊರಗೆ ಗುಲುಗುಂಜಿಯಷ್ಟು ಜಾಗ ಇತ್ತು. ಅವರಪ್ಪ ಕೊಟ್ಟದ್ದು. ಅದೊಂದೇ ಉಳಿದದ್ದು. ಅಲ್ಲಿಗೇ ಬಾ. ಇಬ್ಬರೂ ಒಟ್ಟಿಗೆ ಗಂಜಿಯೋ ತೆಳಿಯೋ ಕುಡ್ದು ಇರೋಣ ಅಂದ್ರು. ನಾ ತವರುಮನೆಗೆ ಬಂದೆ. ಅದು ಅಮ್ಮ ಇಲ್ಲದ ಮನೆ. ಹರಿದಾಸ ಅಪ್ಪ ಹಾಸಿಗೆ ಹಿಡಿದಿದ್ದ.

ಒಂದು ವರ್ಷ ಸೇವೆ ಮಾಡಿ ಅವರ ಋಣ ಕಳ್ಚಕಂಡೆ. ಅಣ್ಣ ತಮ್ಮಂದಿರ ಸಂಸಾರವಿತ್ತು. ಇಲ್ಲೆ ಇರು ಅಂದ್ರು, ಕರುಳಕುಡಿಯ ಪ್ರೀತಿ ತೋರ್ಸಿದ್ರು. ಆದರೂ ಗೌರಿ, ತಾಯಿಯಿಲ್ಲದ ಮನೇಲಿ ತಬ್ಬಲಿ ಭಾವ. ಮರಳಿ ಶಿವಮೊಗ್ಗಕ್ಕೆ ಬಂದೆ. ಅತ್ತೆಯ ಒಂಟಿ ಜೀವಕ್ಕೆ ನನ್ನ ಜೊತೆ ಆತು. ಗಂಜಿ ತೆಳಿಯ ಬದಲು ಹಾಲು ಮೊಸರು ಸಿಕ್ತು. ಅತ್ತೆಯ ಪ್ರೀತಿ ಬಟ್ಟಲಲ್ಲಿ ತಾಯ ಮಮತೆಯಿತ್ತು. ಕೆಲವು ವರ್ಷದ ಬದುಕು.

ಒಂದು ದಿನ ರಾತ್ರೆ ಅತ್ತೆ ನಿದ್ದೆಯಲ್ಲೇ ಹೋಗಿಬಿಟ್ಟರು. ಮತ್ತೆ ನೆಲೆ ತಪ್ಪಿದ ಬದುಕು, ಅನಿಶ್ಚಯದ ಭವಿಷ್ಯ. ಅನಂತಯ್ಯ ‘ಉಡುಪಿಗೆ ಬಾ, ದೊಡ್ಡ ಊರು. ನಿಂಗೆ ಕೆಲ್ಸ ಸಿಕ್ಕಿಗು.’ ಅಂದ. ಅವನ ಹಿಂದೆ ಹೋದೆ. ಎಂತದೋ ನಾ ಕಾಣೆ. ಅವನ ಹೆಂಡತಿ ಸಂಶಯದ ಹುಳ. ಅವನಲ್ಲಿ ಹೋದ ಆರೇ ತಿಂಗಳಲ್ಲಿ ಸವಾರಿ ಇಲ್ಲಿಗೆ ಬರುವಂತೆ ಆತು. ಇಲ್ಲಿಂದ ಇನ್ನೆಲ್ಲಿಗೋ ನಾ ಕಾಣೆ’ ಸುಶೀಲ ಚಿಕ್ಕಿಯ ನೆನಪು ಅಲ್ಲಿಗೇ ನಿಂತಿತ್ತು.
‘ನೀ ಎಲ್ಲಿಗೂ ಹೋಗ್ಬೇಡ ಸುಶೀಲಚಿಕ್ಕಿ.’ ಮೃದುವಾಗಿ ತಬ್ಬಿದ್ದರು ಆ ಎಳೆಯರು.

| ಇನ್ನು ನಾಳೆಗೆ |

‍ಲೇಖಕರು Admin

July 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Krishna Bhat

  ಶ್ರೀಮತಿ ಎಪಿ ಮಾಲತಿ ಅವರು ಬರೆದ ಕಾದಂಬರಿ ಹೊಳೆಬಾಗಿಲು 15ನೇ ಕಂತು ಬಹಳ ಚೆನ್ನಾಗಿದೆ ಅಲ್ಲಿ ಸಣ್ಣ ವಯಸ್ಸಿನಲ್ಲಿ ಹೆಣ್ಣುಮಕ್ಕಳ ಮದುವೆಯಾಗುವುದು ಅದು ವಯಸ್ಸಾದವರ ಒಡನೆ ಕಡೆಗೆ ಅವರ ಪಾಡು ಆದರೆ ಸಣ್ಣ ವಯಸ್ಸಿನಲ್ಲಿ ವಿಧವೆಯಾಗಿ ಅವರನ್ನು ವಿರೂಪಗೊಳಿಸಿ ಅವರು ಪಡುವ ಕಷ್ಟ ಬಹಳ ಚೆನ್ನಾಗಿ ವಿವರಿಸಿದ್ದಾರೆ ತಮ್ಮನ್ನು ತಾವೇ ಬದುಕಿಗೆ ಹೊಂದಿಕೊಂಡು ಹೋಗುವುದು ಮುಂದೆ ಸೇವಾಭಾವದಿಂದ ಮನೆಯಲ್ಲಿ ದುಡಿಯುತ್ತಾ ಜೀವನವನ್ನು ಕಳೆಯುವುದು ಬಹಳ ಚೆನ್ನಾಗಿ ಬಿತ್ತರಿಸಿದ್ದಾರೆ ನಾನು ಒಂದು ಸಲ ನನ್ನ ನೆನಪಿನ ಅಂಗಳದಲ್ಲಿ ಬರೆದಿದ್ದು ನನ್ನ ಮಾವನ ಮನೆಯಲ್ಲಿ ವಿಧವೆಯರು ಅಂದರೆ ಕೆಂಪು ಸೀರೆ ಹಾಕಿಕೊಂಡು ತಲೆ ಬೋಳಿಸಿ ಬಾರಿ ಚಾಪೆ ಮೇಲೆ ಮಲಗಿ ಲೋಡು ಇಲ್ಲದೆ ಮಲಗುವದು ಒಂದು ಹೊತ್ತು ಊಟ ರಾತ್ರಿ ಉಪವಾಸ ಅವಲಕ್ಕಿ ಮೊಸರು ತಿನ್ನುತ್ತಾ ಇದ್ದರೆಂಬುದು ನನಗೆ ನೆನಪಿಲ್ಲ ಅದೆಲ್ಲ ನೆನಪಾಯಿತು ತಮ್ಮ ಪ್ರಿಯ ಕೃಷ್ಣ ವಸಂತಿ

  ಪ್ರತಿಕ್ರಿಯೆ
  • ಜಯಲಕ್ಷ್ಮಿ

   ವಿಧವೆಯರ ಪಾಡು ಓದಿ ಸಂಕಟವಾಗುತ್ತದೆ.ಸದ್ಯ,ಈಗ ಹಾಗಿಲ್ಲವಲ್ಲ ಎಂದು ಸಮಾಧಾನ.

   ಪ್ರತಿಕ್ರಿಯೆ
 2. ಲಲಿತ ಎ.ಪಿ.

  ಸುಶೀಲ ಚಿಕ್ಕಿ ಮತ್ತು ಅತ್ತೆಯ ಬಾಂಧವ್ಯ ಹೃದಯ ಕಲಕಿತು.
  “ಗಂಜಿ ತೆಳಿಯ ಬದಲು ಹಾಲು ಮೊಸರು ಸಿಕ್ತು. ಅತ್ತೆಯ ಪ್ರೀತಿ ಬಟ್ಟಲಲ್ಲಿ ತಾಯ ಮಮತೆಯಿತ್ತು. ಕೆಲವು ವರ್ಷದ ಬದುಕು.”
  ಓದಿ ಕಣ್ಣಾಲಿಗಳು ತುಂಬಿ ಬಂದವು.
  ಭಾವನಾತ್ಮಕ ಕಂತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: