
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
14
ಈ ಊರಿನ ಆಸುಪಾಸು ಮನೆಗಳ ಗಂಡಸರ, ಗಂಡು ಮಕ್ಕಳ ತಲೆಗೂದಲ ಕುಚ್ಚು ತೆಗೆಯಲು ಇರುವವನು ಒಬ್ಬನೇ. ಹಿರಿಯರಿಂದ ಬಂದ ವೃತ್ತಿ. ಅವನದೇ ಪ್ರತ್ಯೇಕ ಅಂಗಡಿ ಇಲ್ಲ. ಪಂಚಾಯತ ಕಟ್ಟಡದ ಸಮೀಪ ಅರಳಿಮರದ ಕೆಳಗೆ ವಾರದಲ್ಲಿ ಎರಡು ದಿನ ತನ್ನ ಹಜಾಮತಿ ಸಾಮಾನು ಸಮೇತ ಕುಳಿತುಕೊಳ್ಳುತ್ತಾನೆ. ತನಗೊಂದು ಮಣೆ, ತನ್ನೆದುರು ಕುಳಿತುಕೊಳ್ಳುವವರಿಗೆ ಒಂದು ಮಣೆ. ಗಂಡಸರು ಹೆಚ್ಚು ಇದ್ದ ದಿನ ಅರಳಿಕಟ್ಟೆ ಹರಟೆ ಕಟ್ಟೆ. ಹಣುಮನಿಗೂ ಉಮೇದು. ಕಟ್ಟೆ ಬಳಿ ಬಾರದವರಿಗೆ, ದೂರದವರಿಗೆ, ಕೆಲವೊಮ್ಮೆ ದೋಣಿ ನಡೆಸುವವರಿಗೆ ಅವರಿದ್ದಲ್ಲಿಗೇ ಹೋಗುತ್ತಾನೆ.
ಎರಡು ಕಾಸು ಹೆಚ್ಚು ಸಂಪಾದನೆ. ಸುಬ್ಬಪ್ಪಯ್ಯರ ಮನೆಯಿಂದ ಕರೆ ಬಂದರೆ ಸಾಕು, ಅವ ಹಾಜರು. ಬೆಳಿಗ್ಗೆ ಬಂದು ಅಂಗಳದ ಎದುರಿನ ನೇರಳೆಮರದ ಕೆಳಗೆ ತಂದೆ, ಮಗ, ಮೊಮ್ಮಗನ ಕೂದಲು ತೆಗೆದ ಮೇಲೆ ಅಲ್ಲೇ ಮಧ್ಯಾಹ್ನ ಉಂಡು ಹಣ ತಕ್ಕೊಂಡು ಹೋಗುವ. ಸುಶೀಲಚಿಕ್ಕಿ ಬಂದ ಎರಡು ತಿಂಗಳಿಗೆ ಹಣುಮನಿಗೆ ಕರೆ ಹೋಗಿತ್ತು. ಆ ದಿನವನ್ನು ನೆನಪಿಸಿಕೊಳ್ಳುತ್ತಾಳೆ ಗೌರಿ. ಅದೊಂದು ಮರೆಯದ ದಿನ.
ಎಂದಿನಂತೆ ಬಂದವನು ಮೊದಲು ಆಯಿಯನ್ನು ಮಾತನಾಡಿಸಿ, ಒಂದು ಸೇರು ಹುರಿದ ಗೋವೆ ಬೀಜ ಕೊಟ್ಟು ತನ್ನ ಹಿರಿಮಗಳಿಗೆ ನಿನ್ನೆ ಕೂಡಿಕೆ ಸಂಬಂಧ ಬಂದು ಮದುವೆಯಾದ ಸುದ್ದಿ ಹೇಳುತ್ತ ಹುಡುಗ ಮರವಂತೆಯಲ್ಲಿ ಸೋಡಾ ಅಂಗಡಿ ಇಟ್ಟುಕೊಂಡದ್ದನ್ನೂ ವರದಿ ಮಾಡಿ, ‘ನಿಮ್ಮ ಮನೆ ತಲೆ ಕೆಲ್ಸ ಮುಗಿಸಿ ಇವತ್ತು ಬೈಸಾರಿಗೆ ನಾ ಹೋಯ್ಕು ಅಲ್ಲಿಗೆ.’ ಎಂದ ಖುಷಿಯಲ್ಲಿ.

ದೊಡ್ಡಮಗಳ ಗಂಡ ಕಳೆದ ವರ್ಷ ಅವಘಡಕ್ಕೆ ತುತ್ತಾಗಿ ಸತ್ತು ಅವಳು ತವರು ಮನೆಗೆ ಬಂದಿದ್ದಳು. ಇನ್ನೂ ವರ್ಷ ಕಳೆದಿತ್ತು, ಆಗಲೇ ಮದುವೆಯೂ ಆಯಿತು! ಪುಣ್ಯಾತ್ಮ ಹಣುಮ. ಆಯಿ ಅವನಿಗೆ ಆಸರು ನೀಡಿ, ‘ಒಂದು ಹೊಸ ಸೀರೆ ಇತ್ತು. ಹೋಪಾಗ ಕೊಡ್ತೆ. ಮಗಳಿಗೆ ಕೊಡು. ಹಾಂಗೆ ಗೌರಿ ಅಪ್ಪಯ್ಯ ಹೆಚ್ಚು ಕಾಸು ಗೀಸು ಕೊಡ್ಗು. ಅದೂ ಮಗಳಿಗೆ ಕೊಡು.’ ಎಂದಳು.
ಹಣುಮ ನೇರಳೆ ಮರದಡಿ ಸರದಿಯಂತೆ ಸುಬ್ಬಪ್ಪಯ್ಯ, ರಾಮಪ್ಪಯ್ಯ, ನಾಣಿಯ ತಲೆಕೂದಲು ತೆಗೆದ ಮೇಲೆ ಇನ್ನೇನು ಕೂದಲು ಕಸ ಗುಡಿಸಬೇಕು, ಸುಬ್ಬಪ್ಪಯ್ಯ ಸುಶೀಲಚಿಕ್ಕಿಯನ್ನು ಕರೆ ತಂದು ಕಣ್ಸನ್ನೆಯಲ್ಲಿ ಇವಳಿಗೂ ಎಂದರು. ಮೌನವಾಗಿ ಮಣೆ ಏರಿ ತಲೆತಗ್ಗಿಸಿ ಕುಳಿತ ಹೆಣ್ಣುಮಗಳನ್ನು, ಅವಳ ಕುರುಚಲು ಕೂದಲಿನ ಮಂಡೆಯನ್ನೂ ಕಂಡ ಹಣುಮ ಎರಡು ಹೆಜ್ಜೆ ಹಿಂದೆ ಸರಿದ. ವಿಷಯ ಏನೆಂದು ಸ್ಪಷ್ಟವಾದಂತೆ ಕಣ್ಣುಗಳು ಹನಿಗೂಡಿದ್ದವು.
ಸುಬ್ಬಪ್ಪಯ್ಯನವರ ಮನೆತನ, ರೀತಿ ರಿವಾಜು, ಸಂಪ್ರದಾಯ, ಮಡಿಮೈಲಿಗೆ ಸ್ವಲ್ಪ ಮಟ್ಟಿಗೆ ತಿಳಿದವ ಈ ಹೆಣ್ಣುಮಗಳ ತಲೆಗೆ ಬಾಳು ಮುಟ್ಟಿಸಲು ಥಟ್ಟನೆ ಹಿಂಜರಿದ. ಈವರೆಗೂ ಅವನೆಂದೂ ಹೆಣ್ಣುಮಕ್ಕಳ ಕೂದಲು ತೆಗೆದವನಲ್ಲ. ಅವನ ವೃತ್ತಿಯಲ್ಲಿ ಒಮ್ಮೆಯೂ ಈ ಪ್ರಸಂಗ ಬಂದಿಲ್ಲ. ಹೆಣ್ಣುಮಕ್ಕಳೆಂದರೆ ಅಪಾರ ಗೌರವ. ತನ್ನ ಈ ಇಳಿವಯಸ್ಸಿನಲ್ಲಿ ಇದೊಂದು ಅನ್ಯಾಯ ಮಾಡಲಾರೆ ಎನ್ನುವಂತೆ ದೇಹ ಹಿಡಿ ಮಾಡಿ, ‘ಒಡೆಯಾ! ನನ್ನ ಕೈಲಿ ಈ ಕೆಲಸ ಸಾಧ್ಯ ಇಲ್ಲೆ. ಧರ್ಮ ಸಂಕಟ ನನ್ನ ಎದೆ ಸೀಳುತ್ತು. ಬ್ಯಾಡ ಒಡೆಯಾ’ ಬೇಡಿಕೊಂಡ. ‘ಇದು ನಮ್ಮ ರೀತಿ ರಿವಾಜು. ಅವಳಿಗೆ ನಿನ್ನ ಕೆಲ್ಸ ಹೊಸತಲ್ಲ. ಮೂವತ್ತು ವರ್ಷ ಆತು ಇದೇ ಹಣೆಬರಹ.’ ಸುಬ್ಬಪ್ಪಯ್ಯನವರ ಸ್ವರ ಭಾರವಾಗಿತ್ತು.
‘ಇಲ್ಲ ಒಡೆಯಾ, ನನ್ನ ಕೈಲಿ ಬಾಳು ಎತ್ತ್ಕೆ ಆತಿಲ್ಲೆ. ಹಾಂಗೆ ಇದ್ಕಳ್ಲಿ. ನಾ ಬತ್ತೆ.’ ಹೇಳುತ್ತ ಕೂದಲ ಕಸ ತೆಗೆದು ತೆಂಗಿನ ಮರದ ಕೆಳಗೆ ಚೆಲ್ಲಿ ಅವರ ಉತ್ತರಕ್ಕೆ ಕಾಯದೆ ಹೊರಟೇಹೋದ. ಕಾಸು, ಊಟ ಭಕ್ಷೀಸು ಊಹೂಂ ಬೇಡವೇ ಬೇಡ. ಸುಶೀಲಚಿಕ್ಕಿ ನಿರ್ಲಿಪ್ತಳಂತೆ ಎದ್ದು ಒಳಬಂದಳು. ಹಣುಮ ಹೋದನೆಂದು ಒಳಗೆ ಅವಳದೇ ಮಾತುಗಳು. ತಮಗೆ ಬೇಕಿಲ್ಲ ಅವಳ ಸುದ್ದಿ. ಆದರೆ ಮಾನವೀಯತೆ, ಕರುಣೆ ಎಲ್ಲಕಿಂತ ದೊಡ್ಡದು. ಅದು ಸಂಪ್ರದಾಯ ವಿಧಿಗಳನ್ನೂ ಧಿಕ್ಕರಿಸುತ್ತದೆ.

ಸುಬ್ಬಪ್ಪಯ್ಯ ಕಮಲಿಯನ್ನು ನೆನಪಿಸುತ್ತ ಚಿಕ್ಕಿಗೆ ತಿಳಿ ಹೇಳಿದ್ದರು, ‘ಇದೆಲ್ಲ ಸಂಪ್ರದಾಯ ಪಾಲಿಸಲು, ಅಧಿಕಾರ, ದರ್ಪ ಹೇರಲು ಇಲ್ಲಿ ಯಾರೂ ಇಲ್ಲ. ಕಮಲಿಗೆ ಮದಿ ಆದದ್ದು ಹದಿನೈದರ ವಯಸ್ಸಿಗೆ. ಶೋಭನ, ಪ್ರಸ್ತ ಆಗೋ ಮುಂಚೆನೇ ಗಂಡ ಹೋಗ್ಬಿಟ್ಟ. ಅವನ ಹನ್ನೆರಡನೇ ದಿನಕ್ಕೆ ಅವಳ ತಲೆಕೂದಲು ತೆಗೀಬೇಕು ಅಂದ್ರು ಗಂಡನ ಕಡೆಯವರು. ನಾನು, ರಾಮಪ್ಪಯ್ಯ ಇಬ್ಬರೂ ಖಡಾಖಂಡಿತ ವಿರೋಧಿಸಿದೆವು. ಇದೊಂದು ಕ್ರಮ ಬ್ಯಾಡಾ ಅಂತ ಇನ್ನಿಲ್ಲಂತೆ ಬೇಡ್ಕಂಡರೂ ಕೇಳಲಿಲ್ಲ ಯಾರೂ. ಎಲ್ಲಿಂದ ಧೈರ್ಯ ಬಂತೋ, ಸೀದಾ ಕಮಲಿಯ ಕೈ ಹಿಡಿದು ಎಳೆದುಕೊಂಡು ಬಂದ್ಬಿಟ್ಟೆವು ಹೊಳೆಬಾಗಿಲಿಗೆ. ನಮ್ಮ ಗುರುಗಳಿಗೆ ದೂರು ಕೊಡ್ತೇವೆ ಅಂದ್ರು. ಗುರುಗಳ ಕಡೆಯಿಂದ ಇಬ್ಬರು ಬಂದ್ರು. ಅವರಿಗೆ ತಿಳಿ ಹೇಳಿಕಳ್ಸಿಯಾಯ್ತು. ಮನೆಗೆ ಬಹಿಷ್ಕಾರ ಹಾಕ್ತೋ ಅಂತ ಹೆದರಿಸಿದ್ವೋ. ಹಾಕಲಿ ಅಂದೆವು.
‘ಒಂದಷ್ಟು ಕಾಲ ವಿಷಯ ಹೊಗೆ ಆಡ್ತಾ ಆಮೇಲೆ ತಣ್ಣಗಾತು.ಹೊಳೆಬಾಗಿಲು ಸಣ್ಣ ಊರು. ಬಂದು ಹೋಪವು ಕಮ್ಮಿ. ಇದೂ ಒಳ್ಳೇದಾತು. ನಿಂಗೂ ಹೇಳ್ತೆ, ನೀ ಇಲ್ಲಿ ಇಪ್ಪಷ್ಟು ದಿನ ಖುಷಿಯಾಗಿರು. ಜೀವನ ಅಂದ್ರೆ ಇದೇ ಅಲ್ಲದ, ಹೋಪವು ಹೋದವು, ಇಪ್ಪವು ಸರಿಯಾಗಿ ಇರೆಕ್ಕು. ಸಂತೋಷದಲ್ಲಿ ಇರೆಕ್ಕು.ʼ
ಸುಬ್ಬಪ್ಪಯರದು ಸರಿಯಾದ ಮಾತು ನಿಜವೇ. ಆದರೆ ತನ್ನಿಂದ ಎಷ್ಟೋ ಕಾಲದ ನಂತರ ಹುಟ್ಟಿದ ಹುಡುಗಿ ಕಮಲಿ. ಜನ ಈಗ ಕಟು ಸತ್ಯವನ್ನು ಒಪ್ಪಿಕೊಂಡಿದೆ. ಧರ್ಮವೂ ವಿರೋಧಿಸುತ್ತಿಲ್ಲ. ಆದರೂ ಒಮ್ಮೆ ಒಪ್ಪಿಕೊಂಡು ಪಾಲಿಸಿದ ಸಂಪ್ರದಾಯ.ತಾನು ಉಲ್ಲಂಘಿಸಿಸುಮ್ಮನೆ ಬಿಡುವುದುಂಟಾ? ಬಲವಂತದಿಂದ ತಲೆ ಕೊಟ್ಟಾಗಿದೆ. ಮನಸ್ಸು ಹೋಳಾಗಿದೆ. ಹೃದಯದ ಮೃದು ಕೋಮಲ ಭಾವನೆಗಳು ಮರಗಟ್ಟಿವೆ. ಇನ್ನು ಕೂದಲು ತೆಗೆದರೇನು, ಬಿಟ್ಟರೇನು? ಸುಶೀಲ ಚಿಕ್ಕಿ ಸ್ನಾನ ಮುಗಿಸಿ ಅಟ್ಟ ಏರಿದ್ದಳು.
ಅವಳ ಕುರುಚಲು ತಲೆಗೂದಲನ್ನು ತೆಗೆವ ಸಂಭ್ರಮ ನೋಡಲು ಕುಕ್ಕುರುಗಾಲಲ್ಲಿ ಕುಳಿತ ಗೌರಿಯೂ ಎದ್ದು ಒಳ ನಡೆದಳು. ಎಂತದೋ ಪ್ರಶ್ನೆ, ಗಂಟಲು ಕಟ್ಟಿದಂತೆ, ಪಾಪ ಚಿಕ್ಕಿ, ನಿನ್ನೆಯಿಂದ ಅತ್ತು ಕೆಂಪಾಗಿವೆ ಕಣ್ಣುಗಳು. ಪ್ರತಿಬಾರಿ ಕೂದಲು ತೆಗೆಯುವಾಗ ಸಂಕಟವಂತೆ. ಯಾರು ಮಾಡಿದರೋ ಈ ಅನಿಷ್ಟ ಪದ್ಧತಿಯನ್ನು? ಕಮಲತ್ತೆಯಂತೆ ಇವಳೂ ಇರಬಾರದೇ? ಗೌರಿ ಮನದಲ್ಲಿ ನೂರೆಂಟು ಪ್ರಶ್ನೆಗಳು. ಗಂಡ ಸತ್ತ ಹೆಣ್ಣುಮಕ್ಕಳ ಪ್ರಾಯ ನೋಡದೆ ಅವರ ತಲೆ ಕೂದಲು ತೆಗೆಸಬೇಕು.
ಧುತ್ತೆಂದು ಎದುರಾಯಿತು ಇನ್ನೊಂದು ಅನುಮಾನ. ಚಿಕ್ಕಿಯ ತಲೆಗೆ ಹಚ್ಚಲು ಅರಸಿನಕದಡಿದ ಎಣ್ಣೆ ಮಿಳ್ಳೆ ಹಿಡಿದಿದ್ದ ಅವಳು ‘ಆಯೀ, ನನಗೂ ಮದುವೆಯಾಗಿ ಗಂಡ ಸತ್ತರೆ ಹೀಗೆ ತಲೆ ಬೋಳಿಸಬೇಕಾ? ಕಮಲತ್ತೆಯಂತೆ ಬೋಳು ಹಣೇಲಿ ಇರಬೇಕಾ?’ ಕೇಳಿದಳು. ‘ಎಂತ ಅಪದ್ದ ಮಾತಾಡ್ತಿಯೇ. ಇರೂದು ಚೋಟುದ್ದ, ದೊಡ್ಡಮಾತು!’ ಹಿಂದಿನಿಂದ ಅಜ್ಜಮ್ಮ ಗೊಣಗಿದಳು ‘ಹಾಂಗೆ ಹೇಳಲಾಗ. ಮೇಲೆ ಅಶ್ವಿನಿ ದೇವತೆಗಳು ನಮ್ಮ ಮಾತು ಕೇಳಿ ಅಸ್ತು ಅಸ್ತು ಅಂತಾರೆ. ಬಿಟ್ತು ಅನ್ನು!’

ಎಳೆ ಚಿಗುರು ಪ್ರಬುದ್ಧವಾಗಿ ಬೆಳೆಯುತ್ತಿದೆ. ಅದರ ಮುಂದೆ ಇಂತದ್ದು ನಾವು ದೊಡ್ಡವರು ಆಡಬಾರ್ದು. ಆಯಿ ಮಗಳ ತಲೆ ಸವರಿ ಸಮಾಧಾನ ಹೇಳಿದಳು. ಈ ಆಯಿಗೆ ವಿಧವೆಯರ ಮೇಲೆ ಕನಿಕರ ಜಾಸ್ತಿ. ಚಕ್ರಿ ಊರಲ್ಲಿ ಗತಿಯಿಲ್ಲದ ಅರವತ್ತು ವರ್ಷ ಮೀರಿದ ಕೆಂಪು ಸೀರೆಯ ಇಬ್ಬರು ದಿಕ್ಕಿಲ್ಲದ ಪರದೇಸಿ ವಿಧವೆಯರಿದ್ದಾರೆ. ತಮ್ಮದೇ ಕುಟುಂಬದಿಂದ ತಿರಸ್ಕೃತರಾದ ಮಕ್ಕಳಿಲ್ಲದವರು. ಒಬ್ಬಳು ತೀರಾ ಬಡವಳು. ಇನ್ನಿಬ್ಬರಿಗೆ ಕುಟುಂಬದ ಅಶನಾರ್ಥ ಬರಬೇಕಿದ್ದರೂ ಕೊಡದೆ ಹೊರಗೆ ದಬ್ಬಿಸಿಕೊಂಡವರು. ಅಡಿಗೆಗೆ, ಬಾಣಂತಿ ಮಗುವಿನ ಕೆಲಸಕ್ಕೆ, ಮದುವೆ ಮುಂಜಿಯಾದರೆ ಸಹಾಯಕ್ಕೆ ಕರೆದವರ ಊರುಗಳಿಗೆ, ಮನೆಗಳಿಗೆ ಹೋಗುತ್ತಾರೆ.
ಮಡಿ ಹುಡಿಯ ಕೆಲಸಗಳು. ನಾಲ್ಕು ಕಾಸು ಸಂಪಾದನೆ. ಕೆಲಸ ಇಲ್ಲದ ದಿನಗಳಲ್ಲಿ ಪ್ರತಿ ಸಂಜೆ ತಮ್ಮ ಸಣ್ಣ ಮನೆ ಮುಂದೆ ಕುಳಿತು ಆಕಾಶ ದಿಟ್ಟಿಸಿ ನೋಡುತ್ತಾ ಇರುತ್ತಾರಂತೆ ಎಂದು ಹೇಳುವ ಆಯಿಚಕ್ರಿ ಊರಿಗೆ ಹೋಗುವಾಗ ಅವರಿಗೆ ಬಟ್ಟೆ, ಕೆಂಪು ಸೀರೆ, ತಿಂಡಿ ತಿನಿಸು ಒಯ್ದು ಕೊಟ್ಟು ಅವರ ಸುಖದುಃಖ ವಿಚಾರಿಸುತ್ತಾಳೆ. ಅವರುಗಳ ಬೋಳು ಮಂಡೆ, ಇರುವಿಕೆಯ ಕ್ರಮ ಅರಿಯದ ಗೌರಿಗೆ ಕಮಲತ್ತೆಯ ಸ್ಥಿತಿ ಕಾಣುವಾಗ ಇನ್ನೂ ಸಣ್ಣವಳಿದ್ದಳು. ಆದರೆ ಯಾವಾಗ ಸುಶೀಲಚಿಕ್ಕಿ ಈ ಮನೆಗೆ ಬಂದಳೋ ಆಗಿನಿಂದ ವಿಧವೆಯರ ಸತ್ಯದರ್ಶನ ಆದಂತೆ ತನಗೂ ಹೀಗಾದರೆ? ಹೆದರಿಕೆ ಆದದ್ದು ಸಹಜವೇ.
ಆ ಅನುಮಾನದಲ್ಲಿ ಥಟ್ಟನೆ ಪ್ರಶ್ನೆ ಕೇಳಿದ್ದು ಸಹಜವಾಗಿತ್ತು. ಅಷ್ಟಕ್ಕೆ ಅಜ್ಜಮ್ಮನಿಂದ ಬೈಸಿಕೊಂಡ ಮುಖ ಊದಿಸಿ ಎಣ್ಣೆಮಿಳ್ಳೆಯೊಂದಿಗೆ ತಾನೂ ಅಟ್ಟ ಏರಿದಳು. ಕೂದಲು ತೆಗೆಯದಿದ್ದರೂ ಚಿಕ್ಕಿ ತಲೆ ತಂಪಿಗೆ ಎಣ್ಣೆ ಹಚ್ಚಬೇಕು. ತಲೆ ಉರಿ ಆದಾಗಲೆಲ್ಲ ಅರಸಿನ ಕದಡಿದ ಎಣ್ಣೆ ಹಚ್ಚುತ್ತಿದ್ದಳು ಗೌರಿ. ಅದರಿಂದ ಕಣ್ಣುಗಳೂ ತಂಪಾಗುತ್ತವಂತೆ.
| ಇನ್ನು ನಾಳೆಗೆ |
“ಸುಶೀಲ ಚಿಕ್ಕಿಯ ಕುರುಚಲು ಕೂದಲು ತೆಗೆಯುವ ಸಂಭ್ರಮ ನೋಡಲು ಕುಕ್ಕುರು ಕಾಲಿನಲ್ಲಿ ಕುಳಿತ ಗೌರಿ”
ಕಣ್ಣಿಗೆ ಕಟ್ಟುವಂತಹ ವಿವರಣೆ.
ಮುಗ್ಧ ಗೌರಿ, ಅರ್ಥವಾಗದ ವಿಷಯಗಳನ್ನು ತಿಳಿಯಲು ಮುಗ್ಧ ಕುತೂಹಲ, ಉತ್ಸಾಹ, ನಗು… ಓಹ್! ಈ ಪುಟ್ಟ ಗೌರಿ ಮನಸ್ಸನ್ನು ಕದ್ದು ಬಿಟ್ಟಿದ್ದಾಳೆ.
ಎ ಪಿ ಮಾಲತಿ ಅವರ “ಹೊಳೆಬಾಗಿಲು” ಚೆನ್ನಾಗಿಯೇ ಮೂಡಿಬರುತ್ತಿದೆ. ಪ್ರತೀ ಪಾತ್ರವನ್ನು ಮನದಟ್ಟುವ ಹಾಗೆ ವಿವರಿಸಿದ್ದಾರೆ. ಆಯಿ ಯ ಸಹಾನುಭೂತಿ ಮೆಚ್ಚುವಂತಹದ್ದು. ಗೌರಿಯ ಮಾತು, ನನ್ನ ಬಾಲ್ಯವನ್ನು ನೆನಪಿಗೆ ತಂದಿತು.
ಅತಿಯಾಗಿ ಇಷ್ಟಪಟ್ಟದ್ದು
“ಮಾನವೀಯತೆ, ಕರುಣೆ ಎಲ್ಲಕಿಂತ ದೊಡ್ಡದು. ಅದು ಸಂಪ್ರದಾಯ ವಿಧಿಗಳನ್ನೂ ಧಿಕ್ಕರಿಸುತ್ತದೆ.” ವಾವ್!
ಗೌರಿಯ ಮುಗ್ಧಪ್ರಶ್ನೆ ಮಾರ್ಮಿಕವಾಗಿತ್ತು,ಸುಬ್ಬಪ್ಪಯ್ಯನವರು ಕಮಲಿಯನ್ನು ಸಕೇಶಿ ಯಾಗಿಯೇ ಇರಿಸಿದ್ದು ಮೆಚ್ಚುವಂಥದ್ದು.