ಎಸ್ ಜಯಶ್ರೀನಿವಾಸ ರಾವ್ ಅನುವಾದಿಸಿದ ಪೋಲಿಷ್‌ ಕವಿತೆಗಳು

ಮೂಲ : ಜೂಲಿಯಾ ಹಾರ್ಟ್‌ವಿಗ್‌

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಜೂಲಿಯಾ ಹಾರ್ಟ್‌ವಿಗ್‌ (1921-2017) ರವರು ಪೋಲಿಷ್ ಸಾಹಿತ್ಯದ ಆಧುನಿಕ ಕಾಲದ ಮಹಾನ್ ಕವಿಗಳಾದ ಚೆಸ್‌ಲಾಫ಼್ ಮೀಲೋಷ್ (Czesław Miłosz), ವೀಸ್ವಾವ ಶಿಂಬೋರ್ಸ್ಕ (Wisława Szymborska), ಹಾಗೂ ಜ಼್ಬಿಗ್ನಿಎಫ಼್ ಹೆರ್ಬೆರ್ತ್ (Zbigniew Herbert) ರ ತಲೆಮಾರಿಗೆ ಸೇರಿದ ಪ್ರಮುಖ ಕವಿ. ಕವಿಯಾಗಿ ಪೋಲಂಡಿನಲ್ಲಿ ಬಹಳ ಪ್ರಸಿದ್ಧಿ ದೊರಕಿದರೂ, ಪೋಲಂಡಿನ ಹೊರಗೆ ಆಂಗ್ಲ ಸಾಹಿತ್ಯ ವಲಯಗಳಲ್ಲಿ ಜೂಲಿಯಾ ಹಾರ್ಟ್‌ವಿಗ್‌‌ರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. 2008 ರಲ್ಲಿ ಅವರ ಆಯ್ದ ಕವನಗಳ ಇಂಗ್ಲಿಷ್ ಅನುವಾದ ‘In Praise of the Unfinished’ ಎಂಬ ಪುಸ್ತಕ ಪ್ರಕಟವಾದಾಗ ಅವರ ಕಾವ್ಯ ಇಂಗ್ಲಿಷ್ ಓದುಗರನ್ನು ತಲುಪಿತು.

ಜೀವನದ ಹಾಗೂ ಜೀವಿಕೆಯ ಮೂಲಭೂತ ಅಂಶಗಳನ್ನು ಜೂಲಿಯಾ ಹಾರ್ಟ್‌ವಿಗ್‌ರು ಶಾಂತ, ಸರಳ, ಸಂಕ್ಷಿಪ್ತ ಭಾಷೆಯಲ್ಲಿ ವಿವರಿಸುತ್ತಾರೆ ತಮ್ಮ ಕವನಗಳಲ್ಲಿ. ಇವರು ತಾತ್ವಿಕ ಆಳವುಳ್ಳ ಕವಿ; ಹಾಗೇಯೇ ಲೌಕಿಕ ವಾಸ್ತವಗಳ ಬಗ್ಗೆಯೂ ಎಚ್ಚರವಿರುವಂತಹ ಕವಿ. ಅವರ ಕವನಗಳನ್ನು ‘ಪದಗಳಿಂದ ಬಿಡಿಸಿದ, ಬಣ್ಣಗಳಿಂದ ತೊಯಿಸಿದ, ಬೆಳಕಿನಿಂದ ವಿಸ್ತಾರದಿಂದ ತುಂಬಿದ ಚಿತ್ರಗಳು,’ ಎಂದು ವರ್ಣಿಸಲಾಗಿದೆ. ಸಂಕೇತ-ರೂಪಕಗಳನ್ನು ಬಳಸದೇನೇ ಭಾವನಾತ್ಮಕ ಸ್ಥಿತಿಗಳನ್ನು ಬಿಂಬಿಸುವ ಸಾಮರ್ಥ್ಯವುಳ್ಳ ಕವಿಯಾಗಿದ್ದರು ಜೂಲಿಯಾ ಹಾರ್ಟ್‌ವಿಗ್‌.

ಜೂಲಿಯಾ ಹಾರ್ಟ್‌ವಿಗ್‌‌ರ ಸುಮಾರು ಇಪ್ಪತ್ತು ಕವನ ಸಂಕಲನಗಳು ಹಾಗೂ ಆರು ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಫ಼್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿತಿದ್ದ ಜೂಲಿಯಾ ಹಾರ್ಟ್‌ವಿಗ್‌‌ರು ಬಹಳಷ್ಟು ಫ಼್ರೆಂಚ್ ಹಾಗೂ ಅಮೇರಿಕನ್ ಕವಿಗಳ ಕವನಗಳನ್ನು ಪೋಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಪೋಲಂಡ್ ಅಲ್ಲದೇ, ಫ಼್ರಾನ್ಸ್ ಹಾಗೂ ಅಮೇರಿಕದಲ್ಲಿ ಕೂಡ ಜೂಲಿಯಾ ಹಾರ್ಟ್‌ವಿಗ್‌‌ ಹಲವಾರು ಸಾಹಿತ್ಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಪೋಲೆಂಡಿನ ನೊಬೆಲ್ ಕವಿ ಚೆಸ್‌ವಾಫ಼್ ಮಿವಾಶ್ (Czesław Miłosz) ರು ಜೂಲಿಯಾ ಹಾರ್ಟ್‌ವಿಗ್‌ ರನ್ನು ‘ಪೋಲಿಷ್ ಕಾವ್ಯದ ಘನತೆವೆತ್ತ ಮಹಿಳೆ’ (Grand Dame of Polish Poetry) ಎಂದು ಕರೆದಿದ್ದರು.

  1. ಒಂಟಿತನದ ಕೂಗು
    ಮೂಲ: Cry of Loneliness

ಅದು ಅಲೆಗಳ ಗುಂಪಿನಲಿ ಹರಿಯುತಿದ್ದರಾದರೂ ಸಹ
ಪ್ರತಿ ಅಲೆಯೂ ಬೊಬ್ಬಿಡುತ್ತಿತ್ತು ಅದರ ಬಗ್ಗೆ
ಅದು ಹಕ್ಕಿಗಳ ಮಹಾ ಹಿಂಡಿನಲಿ ಹಾರುತಿದ್ದರಾದರೂ ಸಹ
ಪ್ರತಿ ಹಕ್ಕಿಯೂ ಬೊಬ್ಬಿಡುತ್ತಿತ್ತು ಅದರ ಬಗ್ಗೆ
ಹುಲ್ಲು, ಮರಗಳಿಗೆ ಒರೆಸಿಕೊಳ್ಳುತ್ತಾ
ಗಾಳಿ ಬೊಬ್ಬಿಡುತ್ತಿತ್ತು ಅದರ ಬಗ್ಗೆ
ಮನುಷ್ಯ ಮಾತ್ರ ಮೌನವಾಗಿದ್ದಾನೆ ಅದರ ಬಗ್ಗೆ
ಕಲ್ಲು ಮಾತ್ರ ಮೌನವಾಗಿದೆ ಅದರ ಬಗ್ಗೆ

2. ಸುರಿದವು ನಕ್ಷತ್ರಗಳು
ಮೂಲ: It Poured Stars

ಆ ಆಗಸ್ಟ್ ತಿಂಗಳಲಿ ಗಾಜಿನ ಚೂರುಗಳಂತೆ ಸುರಿದವು ನಕ್ಷತ್ರಗಳು
ನಾವು ಏನನ್ನೂ ಕೋರಲಿಲ್ಲ
ಆದರೆ ಪ್ರತಿ ನಕ್ಷತ್ರವೂ ನೆನಪುಗಳನು ಹೊತ್ತಿಸಿತು
ಛಾಯಾಚಿತ್ರಕ್ಕೆ ಪ್ರಕಾಶವೀಯ್ಯುವ
ಮೆಗ್ನೀಸಿಯಂನ ಸ್ಫೋಟದಂತೆ

ಕತ್ತಲಲಿ ಅವಿತುಕೊಂಡು ತಲೆಯೆತ್ತಿ ನೋಡಿದಾಗ
ಅವನ ಆಕಾಶಗಳಲಿ ಮನೆ ಕಂಡ
ನಿಸರ್ಗಚಿತ್ರಗಳನು ಗುರುತಿಸುತ್ತಾನೆ ಮನುಷ್ಯ
ಅವನ ಕಣ್ಣುಗಳು ಮಾತ್ರ ಸಂವಾದಿಸುತ್ತವೆ
ತುಲಾರಾಶಿಯ ಬೆಳಕ ಚುಕ್ಕೆಗಳ ಜತೆ
ದೊಡ್ಡ ಚಿಕ್ಕ ಸಪ್ತರ್ಷಿ ಮಂಡಲಗಳ ಜತೆ
ಸ್ವಾತಿ ನಕ್ಷತ್ರ ಗುಲಾಬಿ ಬೆಳಕ ಹೊಳಪಿಸುತ್ತಿದೆ
ಧ್ರುವತಾರೆ – ನಮ್ಮ ಪಥದರ್ಶಿ –
ಅದನ್ನು ಗಂಭೀರ ನೋಟದಿಂದ ಅಳೆಯುತ್ತದೆ

ತಲೆಮಾರುಗಳು ಅನುಭವಿಸಿದ ಮೌನದಲಿ
ಚಿಂತನೆ ಮೂಕವಾಗುತ್ತದೆ
ಅನಂತದ ನಾಕ್ಷತ್ರಿಕ ಜಾಲದಲ್ಲಿ ಅಚಾನಕ್ಕಾಗಿ ಸಿಕ್ಕಿಬಿದ್ದ ಹಾಗೆ
ನಿಸ್ಸಹಾಯಕ, ಕರುಣಾಜನಕ
ಏಕಕಾಲಕ್ಕೆ

3. ಗಾಳಿ
ಮೂಲ: Winds

ಗಾಳಿ! ನಿನ್ನನ್ನು ಹೇಗೆ ನಾನರಿಯುವೆ?
ನಿನ್ನ ದೂತರು ಮಾತ್ರ ನಿನ್ನ ಬಗ್ಗೆ ಹೇಳುವರು
ಮರಗಳ ರೆಂಬೆಗಳು, ನಿನ್ನ ಅಂಗೈಯಡಿಯಲ್ಲಿ ಬಾಗುವ ಹುಲ್ಲುಗಳು
ತೋರಿಸುತ್ತವೆ ಇಲ್ಲಿ! ಇಲ್ಲಿ! ಅವು ತೋರಿಸಿ ಮುಗಿಸಲಿಕ್ಕಿಲ್ಲ
ನೀನು ಮಾಯ

ಅದೃಶ್ಯವಾಗಿದ್ದು ನೀನಾಳುವೆ ದೃಶ್ಯಲೋಕವನ್ನು
ಹಠಾತ್ತಾಗಿ ಬಡಿದ ಜನ್ನಲ ಬಾಗಿಲು
ಅಟ್ಟಿಹೋದ ಮೋಡಗಳ ಮಂದೆಗಳು
ಗಾಳಿಯೊಂದು ಮಾತ್ರವೇ ಮತ್ತೊಂದು ಗಾಳಿಯನು ನೋಯಿಸದೇ ಬೆನ್ನಟ್ಟುತ್ತದೆ
ಮೃದುವಾಗಿ ತಬ್ಬುತ್ತಾ ಅವು ಪ್ರೇಮ, ಸಾವು, ವಿನಾಶವನ್ನು ಬಿತ್ತುತ್ತವೆ
ಓ ಗಾಳಿಯ ಕಂದಗಳಿರಾ – ದಕ್ಷಿಣದ ಹೊಳೆಯುವ ಮೊಗದ ಮೇಲೆ
ನಲಿದಾಡುವ ಕೊಂಕುಕುರುಳಿನ ಮಲೆಗಾಳಿಗಳಿರಾ,
ಬಡಗಣ ಚಳಿಗಾಳಿ, ವಾಣಿಜ್ಯಗಾಳಿ, ವಾಯವ್ಯ ಚಳಿಗಾಳಿ
ಈಗೆಲ್ಲ ಬರೀ ಶರತ್ಕಾಲದ ಹಿಮಬಿರುಗಾಳಿಗಳಷ್ಟೇ
ಮಳೆಯೊಂದಿಗೆ ಬೆರೆತು ಜೋರಾಗಿ ಬೀಸುವ ಚಂಡಮಾರುತಗಳು
ಮತ್ತೆ ತದೇಕವಾಗಿ ನೋಡುವೆವು ಫೋ‌ಟೋ ಆಲ್ಬಮ್‌ಗಳಲ್ಲಿ
ಇಟಾಲಿಯನ್ ನಿಸರ್ಗಚಿತ್ರಗಳನ್ನು

4. ಪದಗಳನ್ನ ಕಟ್ಕೊಂಡು ಏನ ಮಾಡೋದು
ಮೂಲ: What to do with Words

ಆಧಾರಕ್ಕಾಗಿ ಬೆನ್ನಹಿಂದೆ ವಸ್ತುವಿಲ್ಲದ
ಪದಗಳನ್ನ ಕಟ್ಕೊಂಡು ಏನ ಮಾಡೋದು
ಸ್ಪರ್ಶಕ್ಕಿಲ್ಲ ಸ್ವಾದಕ್ಕಿಲ್ಲ
ದೃಷ್ಟಿ ನೆಲೆಸಲು ಏನೂ ಇಲ್ಲ
ಮಾನವ ಪ್ರಕೃತಿಗೆ ಸಂಬಂಧವಿಲ್ಲ

ಉದಾಹರಣೆಗೆ, ‘ಅನಂತತೆ’ ಎಂಬ ಪದ
ಬರಡಾದ, ಶುದ್ದವಾದ, ತಾರೆಗಳ ಹೊಳಪಿನಂತೆ ತಣ್ಣನೆಯ ಪದ
ಅಂತರ್‌ಗೃಹಗಳ ಆಕಾಶದ ಮರುಭೂಮಿಗೆ ನಮ್ಮನ್ನು ಕೊಂಡೊಯ್ಯುತ್ತೆ
ಗಾಳಿ ಅಳ್ಳಕನಾದ ಕತ್ತಲ ಮರಣಕೂಪಕ್ಕೆ ಕೊಂಡೊಯ್ಯುತ್ತೆ
ನಿರಾಮಿಷ ನಿರ್ಗಂಧ ನಿರ್ವರ್ಣ ಪದ
ಸಾಕುಪ್ರಾಣಿಯೂ ನಿರ್ಲಕ್ಷಿಸುವಂತಹ ಧ್ವನಿಯ ಪದ
ಅನಂತತೆಗಿಂತ ಗಾಳಿಯೇ ಹೆಚ್ಚು ಗ್ರಾಹ್ಯ
ದೊಡ್ಡ ಸಂಖ್ಯೆಯೊಂದು ಕಡೇಪಕ್ಷ ಎಣಿಸಲು ಬರುವಂತಿರುತ್ತೆ
ಆದರೆ ‘ಅನಂತತೆ’?
ಅದು ತಲೆಬುರುಡೆಯೊಳು ಲಟಲಟ ಸುತ್ತುತ್ತೆ ಒಮ್ಮೆ ಕರೆಸಿದ ಮೇಲೆ
ಅದನ್ನು ನಿಘಂಟಿನಿಂದ ಅಳಿಸಲಾಗದು ಒಮ್ಮೆ ಸೃಷ್ಟಿಸಿದ ಮೇಲೆ
ಅನಾಥ ಸ್ವಚ್ಛಂದ ಅಗಾಧ
ನಮ್ಮ ಮರುಳಿಗೆ ಮತ್ತೊಂದು ಪುರಾವೆಯಂತೆ

5. ಧೈರ್ಯದಿಂದ ಹಕ್ಕಿನಿಂದ ಕೇಳು
ಮೂಲ: Demand it Courageously

ಮನುಷ್ಯ ಪ್ರಾಣಿಯೇ, ನಿನಗಾಗಿ ಸ್ವಲ್ಪ ಜಾಗ ಮಾಡಿಕೋ.
ಒಂದು ನಾಯಿ ಕೂಡ ತನ್ನ ಒಡೆಯನ ಮಡಿಯಲ್ಲಿ
ಸರಿಯಾಗಿ ಒಗ್ಗಿಸಿಕೊಳ್ಳಲು ಕೊಸರಾಡುತ್ತೆ.
ಅದಕ್ಕೆ ಜಾಗ ಬೇಕಿದ್ದಾಗ ಎದ್ದು ಓಡುತ್ತೆ,
ಯಾವ ಕರೆಗೂ, ಆದೇಶಕ್ಕೂ ಕಿವಿಗೊಡದೇ.
ನೀನು ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ಪಡೆಯಲಿಕ್ಕಾಗಲಿಲ್ಲವಾದರೆ,
ಧೈರ್ಯದಿಂದ ಹಕ್ಕಿನಿಂದ ಕೇಳು, ರೊಟ್ಟಿ ಪಲ್ಯ ಕೇಳುವಂತೆ.
ಮಾನವ ಘನತೆಗಾಗಿ, ಪ್ರತಿಷ್ಠೆಗಾಗಿ, ನಿನಗಾಗಿ ಸ್ವಲ್ಪ ಜಾಗ ಮಾಡಿಕೋ.
ಚೆಕ್ ಲೇಖಕ ಹ್ರಬಾಲ್ ಹೇಳಿದ್ದ:
‘ನಾನು ಕಸಿದುಕೊಳ್ಳುವಷ್ಟು ಸ್ವಾತಂತ್ರ್ಯ ನನಗೆ ದೊರೆಯುತ್ತೆ’

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: