
ಎಸ್ ಸಾಯಿಲಕ್ಷ್ಮಿ
ಮಕ್ಕಳ ರೇಡಿಯೋ ಕಾರ್ಯಕ್ರಮಕ್ಕೆ ಪ್ರವೇಶ
ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ.
ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ ಕಾದಂಬರಿ.
ಆಕಾಶವಾಣಿಯೆಂಬ ಸಾಂಸ್ಕೃತಿಕ ವೃಕ್ಷ ದಲ್ಲಿ ತರತರದ ಗಿಳಿಕೋಗಿಲೆಗಳ ಮಧುರ ಕಲರವ. ಎಪ್ಪತ್ತೈದು ವರುಷಕ್ಕೂ ಮೀರಿದ ಶ್ರೀಮಂತ ಇತಿಹಾಸ ಈ ಭವ್ಯ ಸಂಸ್ಥೆಗೆ. ಅದರಲ್ಲಿ ಇಪ್ಪತೈದು ವರುಷಕ್ಕೂ ಜಾಸ್ತಿ ಸಮಯ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆಕಾಶವಾಣಿಯು ಎಲ್ಲ ವರ್ಗದ ಶ್ರೋತೃಗಳನ್ನು ಒಳಗೊಂಡಿದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಅದರ ವ್ಯಾಪ್ತಿ.
ನನ್ನ ವೃತ್ತಿ ಪಯಣ ಕಾರ್ಯಕ್ರಮ ನಿರ್ವಾಹಕಿಯಾಗಿ ಮಂಗಳೂರಿನಿಂದ ಆರಂಭಗೊಂಡರೂ ಅದು ಕಲಿಕೆಯ ದಿನಗಳು. ಕೇಂದ್ರ ಲೋಕ ಸೇವಾ ಆಯೋಗದಿಂದ ಆಯ್ಕೆಯಾದ ನನ್ನಂತವರಿಗೆ ಆಕಾಶವಾಣಿಯ ವಾತಾವರಣ ಬಲು ಹೊಸದು. ಟೆಲಿಪೋನ್ ಆಪರೇಟರ್ ಆಗಿ ಹತ್ತು ವರುಷ ಹೆಚ್ಚು ಶ್ರಮ, ಬುದ್ಧಿವಂತಿಕೆ ಬೇಡದ ಕೆಲಸ ಬೆಂಗಳೂರಲ್ಲೇ ನಿಭಾಯಿಸಿದ ಹಿನ್ನೆಲೆಯಲ್ಲಿ ಹೊಸ ಕೆಲಸದಲ್ಲಿ ಸಂಕೋಚ ಕಾಡಿದ್ದು ಸಹಜ.
ಊರ್ವ ಸ್ಟೋರ್ಸ್ ಕ್ವಾರ್ಟರ್ಸ್ ನಲ್ಲಿದ್ದ ಕಾರಣ ಆಫೀಸಿಗೆ ಹೊರಟು ವಾಪಸ್ ಆಗುವವರೆಗೆ ನಮಸ್ಕಾರದ ಸುರಿಮಳೆ. ಕ್ರಮೇಣ ಅದು ಹುದ್ದೆಯ ಗೌರವ ಎಂದು ಅಭ್ಯಾಸವಾಯಿತು.
ದೂರವಾಣಿಯಿಂದ ಆಕಾಶವಾಣಿ. ಎಲ್ಲ ವಾಣಿಯ ಕೃಪೆ. ಎರಡು ವರುಷದೊಳಗೆ ನಾನು ಕೆಲಸಕಾರ್ಯದಲ್ಲಿ ಸಾಕಷ್ಟು ಪಳಗಿ ಬೆಂಗಳೂರಿನ ನಿಲಯಕ್ಕೆ ವರ್ಗ ಪಡೆದುಬಂದೆ. ಇಲ್ಲಿ ನನ್ನ ಉದ್ಯೋಗಪರ್ವ ಆರಂಭವಾಯಿತು.

ಸಾಮಾನ್ಯವಾಗಿ ನನಗೆ ಮಕ್ಕಳ ಕಾರ್ಯಕ್ರಮ ವಿಭಾಗದ ಜವಾಬ್ದಾರಿ ವಹಿಸುತ್ತಿದ್ದರು. ಇಲ್ಲೂ ಹಾಗೆಯೇ. ವಾರಕ್ಕೆ ನಾಲ್ಕು ಕಾರ್ಯಕ್ರಮ. ಹಕ್ಕಿಯ ಬಳಗ, ಬಾಲ ಜಗತ್, ಚಿಲಿಮಿಲಿ ಹಾಗು ಬಾಲಗೋಪಾಲ. ಚಿಲಿಮಿಲಿಯ ಭಾಗವಹಿಸುವಿಕೆಯ ಪುಟಾಣಿಗಳ ವಯೋಮಾನ ಮೂರರಿಂದ ಆರು ವರ್ಷವಾದರೆ ಬಾಲ ಗೋಪಾಲ ಪ್ರಬುದ್ಧ ಮಕ್ಕಳಿಗಾಗಿ ಹದಿನಾಲ್ಕರ ಪ್ರಾಯದವರೆಗೆ. ಇನ್ನು ಉಳಿದೆರಡು 8ರಿಂದ 12 ವರುಷ ಪ್ರಾಯದ ಮಕ್ಕಳಿಗೆ. ವಯೋಮಾನದ ಆಧಾರದ ಮೇಲೆ ಕಾರ್ಯಕ್ರಮದ ವಸ್ತು ಅಥವಾ content ವಿನ್ಯಾಸಗೊಳಿಸಲಾಗುತ್ತಿತ್ತು.
ಈಗ ನಾನು ಪ್ರಸ್ತಾಪ ಮಾಡುತ್ತಿರುವುದು ಎರಡು ದಶಕಗಳ ಹಿಂದಿನ ಮಕ್ಕಳ ಕಾರ್ಯಕ್ರಮಗಳ ನನ್ನ ನಿರ್ವಹಣೆಯ ಕಾಲಘಟ್ಟಕ್ಕೆ ಸಂಬಂಧಿಸಿದ್ದು. ಸಣ್ಣಪುಟ್ಟ ಬದಲಾವಣೆಯನ್ನು ಹೊರತುಪಡಿಸಿದರೆ ಈಗಲೂ ಮಕ್ಕಳ ಕಾರ್ಯಕ್ರಮ ಹಾಗೆಯೇ ನಡೆದುಕೊಂಡು ಬರುತ್ತಿದೆ. ಮಕ್ಕಳ ವಿಭಾಗ ಯಾವಾಗಲೂ ಚಟುವಟಿಕೆಯಿಂದಿದ್ದು ಅಲ್ಲಿ ಉತ್ಸಾಹ ಚಿಮ್ಮಿಸುತ್ತ ಪಾದರಸದಷ್ಟು ಚೈತನ್ಯಮಯವಾಗಿ ಆ ಬಂಗಾರಿಗಳೊಡನೆ ವ್ಯವಹರಿಸಬೇಕು.
ನಾವು ಸದಾ ಗೆಲುವಿಂದ ವರ್ತಿಸಬೇಕು. ನಾನೆಂದೂ ಆಯಾಸ ಅರಿಯಲೇ ಇಲ್ಲ. ಗುಂಪುಗುಂಪಾಗಿ ಮಕ್ಕಳು ಶಾಲೆ, ಕೇಳುಗ ಬಳಗಗಳಿಂದ ಬಂದು ವೈವಿಧ್ಯಮಯ ಕಾರ್ಯಕ್ರಮ ಅರ್ಪಿಸುವರು. ಮಗುವಿನ ಪ್ರತಿಭೆಯ ಆಧಾರದ ಮೇಲೆ ಕೆಲವೊಮ್ಮೆ ಒಂದೊಂದೇ ಮಗುವನ್ನು ಕರೆಸಿಕೊಳ್ಳುತ್ತಿದ್ದು ಉಂಟು. ಆಕಾಶವಾಣಿಯದೇ ವಿಶೇಷ ಸಂದರ್ಭದ ಕಾರ್ಯಕ್ರಮ ನಿರ್ಮಾಣವಿದ್ದಲ್ಲಿ ನಾವೇ ಮಕ್ಕಳಿಗೆ ತಯಾರಿ ಕೊಟ್ಟು ಅವರ ಬೇಕು ಬೇಡ ಗಮನಿಸಿ ಕಾರ್ಯಕ್ರಮ ರೂಪಿಸುತ್ತಿದ್ದೆವು.
ನಮಗೆ ಒಬ್ಬರನ್ನು ಮಕ್ಕಳ ಕಾರ್ಯಕ್ರಮದ ಸಹಾಯಕರಾಗಿ ಕೊಡಲಾಗುತ್ತಿತ್ತು ಆ ದಿನಗಳಲ್ಲಿ. ಅಷ್ಟು ಸುಲಭವಾಗಿ ರಜೆಯ ಮೇಲೆ ಹೋಗಲಾಗುತ್ತಿರಲಿಲ್ಲ. ಒಟ್ಟಿನಲ್ಲಿ ಎಲ್ಲ ದಿನವೂ ಎಲ್ಲ ಹೊತ್ತು ಜೇನುಗೂಡಿನ ಕ್ರಿಯಾಶೀಲತೆ ಬಯಸುವ ಸೆಕ್ಷನ್. ಕಾಯಾ ವಾಚಾ ಮನಸಾ ಕಾಯಕನಿಷ್ಠೆ ಬಯಸುವ ಚಿಣ್ಣರ ಮೋಹಕ ಲೋಕವದು. ಇಷ್ಟೇ ಅಲ್ಲದೆ ವರುಷಕ್ಕೊಮ್ಮೆ ಮಕ್ಕಳ ಗುಂಪು ಗಾಯನ ಸ್ಪರ್ಧೆ, ತಿಂಗಳಿಗೊಂದು ಝೇಂಕಾರ ಮಕ್ಕಳ ಗೀತ ಗಾಯನ ಕಲಿಕೆ ಕಾರ್ಯಕ್ರಮ, ಆಗೀಗ ದೆಹಲಿ ಕಳಿಸುವ ಬೇರೆ ಬೇರೆ ಭಾಷೆಯ ಸಮುದಾಯ ಗೀತೆಯ ಸಂಗೀತಪಾಠದ ಕನ್ನಡ ರೂಪಾಂತರ.

ಮತ್ತೆ ವರುಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ಮಕ್ಕಳ ದಿನಾಚರಣೆಯ ಪ್ರತಿಷ್ಠಿತ ವೇದಿಕೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರ ಇಂತಹ ಅದ್ದೂರಿ ರಂಗಮಂದಿರದಲ್ಲಿ. ನೂರಾರು ಮಕ್ಕಳ ಪ್ರತಿಭೆ ಒಳಗೊಂಡ ಈ ಕಾರ್ಯಕ್ರಮಕ್ಕೆ ಆರು ತಿಂಗಳು ಮುಂಚಿತವಾಗಿ ತಯಾರಿ. ಈ ಕಾರ್ಯಕ್ರಮದ ಅವತರಣಿಕೆ ಮಕ್ಕಳ ದಿನಾಚರಣೆಯಂದು ಪ್ರಸಾರಕ್ಕೆ ಅಣಿಮಾಡಿ ಕೊಡಬೇಕು.
ಸದಾ ಮದುವೆಮನೆಯ ಗುಜುಗುಜು ಸಡಗರ. ಇದಲ್ಲದೆ ಮಕ್ಕಳಿಗಾಗಿ ಸಂಗೀತ, ನಾಟಕ, ನಿರೂಪಣೆಗಾಗಿ ಆಯ್ಕೆ ಸಮಿತಿಯ ಮೂಲಕ ಧ್ವನಿ ಪರೀಕ್ಷೆ ಆಯೋಜಿಸುವುದು ಮತ್ತೊಂದು ಪ್ರಮುಖ ಚಟುವಟಿಕೆ. ಹೀಗೆ ನಮ್ಮ ಪ್ರತಿಭಾ ಭಂಡಾರ ತುಂಬುತ್ತ ಅಕ್ಷಯವಾಗುವುದು. ಮಕ್ಕಳು ನಮ್ಮ ಸ್ಟುಡಿಯೋಗೆ ಬಂದಾಗ ನನಗೆ ಒಂದೊಂದು ಮಗುವನ್ನು ಕಂಡಾಗಲೂ
“ನನ್ಬೆ ಮುನ್ನೆ ಬಚ್ಚೆ ತೇರೆ ಮುಟ್ಟಿಮೆ ಕ್ಯಾ ಹೆ” ಈ ಹಾಡಿನ ಸಾಲು ನೆನಪಾಗಿ ನಾಳೆ ಈ ಮಗು ಹೇಗೆ ವಿಕಾಸ ಹೊಂದಬಹುದು ಎಂಬ ಕಲ್ಪನೆಯ ಕನಸು ಜಾಗೃತವಾಗುವುದು.
ಈ ಮಕ್ಕಳು ಈಗ ಮಾತ್ರ ನನ್ನ ವಶದಲ್ಲಿದ್ದಾರೆ. ಅವರ ಗ್ರಹಿಕೆಗೆ ಎಟುಕುವ ಜೀವನಮೌಲ್ಯಗಳ ಬಗ್ಗೆ ಉಪದೇಶದಂತೆ ತೋರದ ಹಾಗೆ ಹೇಳಿಬಿಡಬೇಕು ಎನ್ನುವ ಉತ್ಕಟ ತವಕ.
ಮಕ್ಕಳು ಮೊದಲು ಸ್ಟುಡಿಯೋಗೆ ಬರುತ್ತಿದ್ದಂತೆ ಮೈಕಿನೊಡನೆ ಅವರ ತುಂಟಾಟ ಶುರು. ನಾನು ಮೊದಲಿಗೆ ಅವರನ್ನೆಲ್ಲ ನಗುನಗುತ್ತ ಬರಮಾಡಿಕೊಂಡು ನಂತರ ಅವರನ್ನೆಲ್ಲ ಅಲ್ಲಿ ಕಾರ್ಪೆಟ್ ಮೇಲೆ ಕುಳಿತುಕೊಳ್ಳಲು ಹೇಳಿ ನಾನು ಆ ಗುಂಪಿನ ಎದುರು ಕೂತು ಅವರಿಗೆ ಹೇಳುತ್ತಿದ್ದೆ.
ಟೀಚರ್ಸ ಕೆಲವೊಮ್ನೆ ಪೋಷಕರು ಸಹ ಜೊತೆಗಿರುತ್ತಿದ್ದರು. “ಮಕ್ಕಳೇ ನಿಮ್ಮನ್ನೆಲ್ಲ ನೋಡಿ ಖುಷಿಯಾಯ್ತು. ಒಳಗೆ ಬರತಿದ್ದ ಹಾಗೆ ಮೈಕ್ ಎಳೆದಾಡಿದರಲ್ಲ. ಅದು ಕೆಟ್ಟು ಹೋದರೆ ರೆಕಾರ್ಡಿಂಗ್ ಅಗೊದೇ ಇಲ್ಲ. ನೀವೆಲ್ಲ ನಿಮ್ಮ ದನಿ ರೇಡಿಯೋದಲ್ಲಿ ಕೇಳೋಕೆ ಎಷ್ಟು ಅಸೆಯಿಂದ ಬಂದಿದೀರಿ. ಮೈಕ್ ಇದು ಕೇಂದ್ರ ಸರ್ಕಾರದ ಆಸ್ತಿ. ನಮ್ಮ ಪಾಲಿನ ದೇವರು. ನಿಮ್ಮೆಲ್ಲರ ಹಾಡು ಮಾತು ಎಲ್ಲ ರೆಕಾರ್ಡ್ ಮಾಡಿ ಪ್ರಸಾರ ಮಾಡೋದೇ ನಮ್ಮಪೂಜೆ.

ಮೈಕ್ ನಿಮ್ಮ ಆಟದ ವಸ್ತು ಅಲ್ಲ. ತಿಳೀತಾ. ಹೀಗೆ ಕಂಡಿದ್ದೆಲ್ಲ ರಿಪೇರಿ ಮಾಡೋದು ಅಭ್ಯಾಸವಾದರೆ ನಾಳೆ ಯಾರ ಮನೆಗೆ ಹೋದರೂ ನಿಮ್ಮಕೈ ಸುಮ್ಮನಿರೋಲ್ಲ. ಅಲ್ಲಿ ಯಾವುದಾದರೂ ಪದಾರ್ಥ ಹಾಳಾದರೆ ಅಪ್ಪ ಅಮ್ಮ ಹೇಗೆ ಬೆಳೆಸಿದಾರೆ ನೋಡು ಅಂತ ಅವರನ್ನ ಬೈಕೋತಾರೆ. ನಿಮಗೆ ಇವೆಲ್ಲ ಬೇಕಾ? ಒಳ್ಳೆಯ ಮಕ್ಕಳು ಅಂತಾ ಹೆಸರು ತೆಗೊಂಡರೆ ನಿಮ್ಮ ಮನೆ ಶಾಲೆ ದೇಶಕ್ಕೆ ದೊಡ್ಡ ಗೌರವ ಗೊತ್ತಾ”. ಕೆಲವೊಮ್ಮೆ ತಡೆಯದಾದಾಗ ಬೈದು ಹೇಳಿದ್ದಿದೆ.
ಮಕ್ಕಳು ನಯವಾಗಿ ಹೇಳಿದರೆ ಕೇಳುತ್ತಾರೆ. ನಮಗೆ ತಾಳ್ಮೆ ಪ್ರೀತಿ ಇದ್ದರೆ ಅವರ ಹೃದಯ ಗೆಲ್ಲುವುದು ಸುಲಭ. ನನ್ನೀ ಕಾರ್ಯಕ್ಷೇತ್ರದಲ್ಲಿ ಬಹಳ ಮಕ್ಕಳು ಹತ್ತಿರವಾದರು. ಒಮ್ಮೆಮೈಕ್.ಮುಂದೆ ಮಾತಾಡಿ ತಮ್ಮ ವಿಚಾರಗಲನ್ನು ಹಂಚಿಕೊಂಡರೆ ಆ ಮಗುವಿನ ಆತ್ಮವಿಶ್ವಾಸಕ್ಕೆ ಅಣೆಕಟ್ಟಿಲ್ಲ. ಕ್ರಮೇಣ ಅವರ ವ್ಯಕ್ತಿತ್ವಕ್ಕೊಂದು ಪ್ರಖರತೆ ನೀಡುವುದು ನಿಜ. ಅವರು ಹತ್ತರಲ್ಲಿ ಹನ್ನೊಂದನೆಯವರಂತೂ ಆಗಲು ಸಾಧ್ಯವಿಲ್ಲ. ಇಂತಹ ಮಕ್ಕಳು ಆಕಾಶವಾಣಿಯನ್ನು ಅವರ ಜೀವನದ ಪ್ರಗತಿಯೊಂದಿಗೆ ಗುರುತಿಸುತ್ತ ಬೆಳೆದರು. ಆಗ ಅದೇ ಸಶಕ್ತ ಮಾಧ್ಯಮ.
ಅದೇ ನಂಟು ನನಗೆ ಇಂದಿಗೂ ಅವರಲ್ಲಿ ಅನೇಕರೊಂದಿಗೆ ಮುಂದುವರೆದಿದೆ. ಅವರ ಯಶಸ್ಸು, ಏಳಿಗೆ ಕಂಡು ಹೆಮ್ಮೆಯಾಗುತ್ತದೆ. ಪ್ರಪಂಚದ ಮೂಲೆಮೂಲೆಯಲ್ಲೂ ಆ ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಬೆಳಗುತ್ತಿದ್ದಾರೆ. ಅಂದು ಅವರು ಸಂದರ್ಶನದಲ್ಲಿ ಹೇಳಿಕೊಂಡ ಅವರ ಆಸೆ ಕನಸು ನನಸಾದ ಸಾರ್ಥಕ ದಿನಗಳನ್ನು ಅನುಭವಿಸಿ ಹಿಗ್ಗಿದ್ದೇನೆ. ಆ ಮಕ್ಕಳು ಅವರ ಪೋಷಕರು, ಶಾಲೆಯವರು ತೋರಿರುವ ಅಭಿಮಾನ, ಪ್ರೀತಿಗೆ ನಾ ಋಣಿ.
|ಮುಂದಿನ ಸಂಚಿಕೆಯಲ್ಲಿ|






ತುಂಬಾ ಸಂತೋಷದ ವಿಚಾರ. ನಾನು ವಯಸ್ಕನಾಗಿದ್ದಾಗ ಕೂಡಾ ಮಕ್ಕಳ ಕಾರ್ಯಕ್ರಮ ಕೇಳುತ್ತಿದ್ದೆ